ಕನಕಪುರಕ್ಕೆ ಬಂದ ನಂತರ ಯೋಚಿಸುವುದೊಂದೇ ನನ್ನ ಕೆಲಸವಾಗಿತ್ತು. ಯಾವ ಕೆಲಸವೂ ಅವನಿಗಿರಲಿಲ್ಲ. ಅಪ್ಪನ ಆಸ್ತಿಯಿದೆ. ದೊಡ್ಡ ಮನೆ, ದೊಡ್ಡ ತೆಂಗಿನ ತೋಟ, ಹೊಲ-ಗದ್ದೆಗಳು ಇದ್ದರೂ ಮೈ ಮುರಿದು ಯಾರೂ ದುಡಿಯುತ್ತಿರಲಿಲ್ಲ. ಅವನ ಇಬ್ಬರ ಅಣ್ಣಂದಿರು ಸಿಟಿಗೇ ಬಂದುಬಿಟ್ಟಿದ್ದರು. ಇವನೂ ನಗರದ ಐಷಾರಾಮಿ ಜೀವನಕ್ಕೆ ಜೋತುಬಿದ್ದುಬಿಟ್ಟಿದ್ದ. ಮುಂದೇನು ಎಂದು ನಾನು ಯೋಚಿಸುವ ಅಗತ್ಯವಿರಲಿಲ್ಲ. ನೌಕರಿ ಮಾಡುತ್ತಿರುವ ‘ಆಕೆ…’ಯ ಸ್ನೇಹ ಬೆಳೆಸಿದ್ದ. ತುಂಬಾ ಜಾಣ ಎಂದುಕೊಂಡಿದ್ದೆ.
ಅವನು ಕುಡಿತ ಆರಂಭಿಸಿದ್ದು, ಅಸಭ್ಯ, ಅಸಹ್ಯ ವರ್ತನೆಗಳು ರಾತ್ರಿಯೇ ಕುಡಿತದ ಅಮಲಿನಲ್ಲಿ ಹೆಚ್ಚಾಗಿರುತ್ತಿದ್ದುದು, ಹಗಲಿಡೀ ಮೌನಿ, ಸಾಧು ಸ್ವಭಾವ, ಮನೆಗೆಲಸಕ್ಕೆ ಬರುವ ೧೦ ರಿಂದ ೫೦ ವರ್ಷದ ಹೆಣ್ಣು ಮಕ್ಕಳಿಗೆ ಅವನು ಕೊಡುತ್ತಿದ್ದ ಲೈಂಗಿಕ ಕಿರುಕುಳ, ಶೂಟಿಂಗ್‌ನಲ್ಲಿ ವಿಪರೀತ ಕುಡಿದು ಅವನು ನಡೆದುಕೊಳ್ಳುತ್ತಿದ್ದ ರೀತಿ, ಒಮ್ಮೊಮ್ಮೆ ನನ್ನ ಪುಟ್ಟ ಲೈಬ್ರರಿಯ ಪುಸ್ತಕಗಳ ಮೇಲೆ, ನಾನು ಬರೆಯುತ್ತಿದ್ದ Scriptಗಳ ಮೇಲೆ ಮೂತ್ರ ವಿಸರ್ಜಿಸುತ್ತಿದ್ದ ರೀತಿ ತಡೆದುಕೊಳ್ಳಲಾಗುತ್ತಿರಲಿಲ್ಲ. ಅವನು ಕುಡಿದಾಗ ಮಾಡುತ್ತಿದ್ದುದರಿಂದ ಕ್ಷಮಿಸುತ್ತಾರೆಂಬ ಭ್ರಮೆಯೇನೋ? ಎಲ್ಲವನ್ನೂ ನಾನು ಡಾಕ್ಟರ್ ಸಿ.ಆರ್. ಚಂದ್ರಶೇಖರ್ ಬಳಿ ಹೇಳಿ ಚಿಕಿತ್ಸೆ ಕೊಡಿಸಲೂ ಪ್ರಯತ್ನಿಸಿದ್ದೆ. ಒಬ್ಬರ ಬದುಕು ಹೀಗೆ ಮೂರಾಬಟ್ಟೆಯಾಗಲು ನಾನೇ ಕಾರಣನಾದೆನೆಂಬ ತಪ್ಪಿತಸ್ಥ ಭಾವನೆಯೂ ನನ್ನಲ್ಲಿ ಕಾಡತೊಡಗಿತ್ತೋ ಏನೋ? ಅವನು ಅವರ ಬಳಿಗೆ ಬರಲು ನಿರಾಕರಿಸಿದ್ದ.
“ನನಗೆ ಯಾವ ಹುಚ್ಚು ಹಿಡಿದಿಲ್ಲ…” ಎಂದಿದ್ದ ಸಿಟ್ಟಿನಿಂದ ಡಾಕ್ಟರ್ ಸಿ.ಆರ್. ಚಂದ್ರಶೇಖರ್ ಆಲೋಹಾಲಿನಿಂದಲೇ ಅವರು ಹೀಗಾಡುತ್ತಿದ್ದಾರೆಂದು ತಿಳಿಸಿ “Schisophrenia ಆದವರಂತೆಯೇ ಅವರು ವರ್ತಿಸುತ್ತಾರೆ… `ದ್ವಿಮುಖ’ ವ್ಯಕ್ತಿತ್ವದ ರೀತಿಯೇ ಇರಬೇಕೆಂದು ಕಾಣುತ್ತದೆ” ಎಂದೂ ಹೇಳಿದ್ದರು. ಕದ್ದುಮುಚ್ಚಿ ಮಾತ್ರೆಗಳನ್ನು ಕೊಡಲು ಸಾಧ್ಯವಿರಲಿಲ್ಲ. ಒಂದು ಬಾರಿ ‘Counselling’ ಬಂದರೆ ಸಾಕೆನ್ನಿಸಿತ್ತು. ಆದರೆ ಅವನು ನಿರಾಕರಿಸಿದ್ದ. ನನಗೆ ತುಂಬಾ ಕಷ್ಟವಾಗತೊಡಗಿತ್ತು. ಹಾಗೆಂದು ಈ ಸ್ಥಿತಿಯಲ್ಲಿ ಅವನನ್ನು ಬಿಟ್ಟುಬಿಡುವುದೂ ನನಗೆ ಸರಿಯೆನ್ನಿಸಿರಲಿಲ್ಲ. ಆದರೆ ‘ಆಕೆ’ಯ ಸ್ನೇಹದ ನಂತರ ಬದಲಾಗಿದ್ದಂತೆ ಕಂಡು ಬಂದಿತ್ತು. ಹೆಚ್ಚು ಕುಡಿಯುತ್ತಿರಲಿಲ್ಲ. ಆದರೂ ರಾತ್ರಿ ಕುಡಿದು ಮಲಗುವುದನ್ನು ಬಿಟ್ಟಿರಲಿಲ್ಲ. Addict ಆಗಿಬಿಟ್ಟಿದ್ದ. ಈಗವನು ತನ್ನ ಆಯ್ಕೆಯಲ್ಲೂ ಜಾಣನಂತೆ ವರ್ತಿಸುತ್ತಿರುವುದನ್ನು ಕಂಡಿದ್ದೆ. ದುಡಿದು ಹಾಕುವ ಹೆಣ್ಣನ್ನೇ, ವಯಸ್ಸಾದರೂ ಇನ್ನೂ ಮದುವೆಯಾಗದ ಆಕೆಯನ್ನೇ ಆಯ್ಕೆ ಮಾಡಿಕೊಂಡಿದ್ದ!
ಇನ್ನು ನಾನು ಅವನನ್ನು ಸರ್ವ ಸ್ವತಂತ್ರವಾಗಿರಲು ಯೋಚಿಸಿದ್ದೆ… ನನ್ನ ಭಯ, ಜಗಳಗಳಿಂದ ಅವನಿಗೆ ಮುಕ್ತಿ ನೀಡಿ, ಅವನಿಷ್ಟ ಪಟ್ಟ ‘ಆಕೆ’ಯೊಡನೇ ಇದ್ದುಬಿಡಲಿ ಎಂದೂ ಯೋಚಿಸಿದ್ದೆ. ಈ ಯೋಚನೆಗಳಲ್ಲಿ ಆರು ತಿಂಗಳುಗಳು ಮುಗಿದು ಹೋಗಿದ್ದವು. ಇವೆಲ್ಲವೂ ನಿನ್ನ ತಾಯಿಗೆ ತಿಳಿದಿತ್ತು. ಅವನ ಮೇಲೆ ಅಣ್ಣನೆಂಬ ಭಾವನೆ ಪ್ರೀತಿ, ಗೌರವವನ್ನಿಟ್ಟುಕೊಂಡಿದ್ದೆ. ನಿನ್ನ ತಾಯಿಗೆ ರಾತ್ರಿಯ ರೌದ್ರವತಾರಗಳ ಬಗ್ಗೆಯೂ ತಿಳಿಯತೊಡಗಿತ್ತು. ‘ಆಕೆ’ಯ ಅವನ ಸಂಬಂಧದ ಬಗ್ಗೆಯೂ ತಿಳಿಸಿದ್ದೆ.
“ಬಿಟ್ಟಾಕಿ ಅತ್ತಾಗೆ. ಆವಯ್ಯ ಸುಧಾರಿಸೋಲ್ಲ…” ಎಂದು ಸಿಟ್ಟಿನಿಂದ ಕಟುವಾಗಿ ಹೇಳಿದ್ದಳು. ಎಲ್ಲರೂ ಆ ಮಾತುಗಳನ್ನೇ ಹೇಳುತ್ತಿದ್ದರು. ನಾನ್ಯಾಕೆ ಆ ಬಗ್ಗೆ ಯೋಚಿಸಲೇ ಇಲ್ಲವೆಂದು ಯೋಚಿಸತೊಡಗಿದ್ದೆ. ಯಾವುದಕ್ಕೂ ಕಾಲ ಕೂಡಿ ಬರಬೇಕು ತಾನೆ?
ಆ ಕಾಲವೂ ಸಮೀಪದಲ್ಲೇ ಬಂದಿತ್ತು.
ಸಿಹಿ-ಕಹಿ ಚಂದ್ರು ಅವರ ಧಾರಾವಾಹಿಗೆಂದು ‘Script’ ಬರೆದು ಕೊಡುತ್ತಿದ್ದ ನಾನೂ ಅವರೊಂದಿಗೆ ಶೂಟಿಂಗಿಗೆಂದು ಬೌರಿಂಗ್ ಆಸ್ಪತ್ರೆಗೆ ಹೋಗಿದ್ದೆ. ರಜೆಯಿತ್ತು. ಅವನ ಹೊಸ ಗೆಳತಿ, ಊಹೂಂ… ಆಗಲೇ ಹಳೆಯ ಗೆಳತಿಯಾಗಿದ್ದವಳು ‘ಶೂಟಿಂಗ್’ ನೋಡಲೆಂದು ಬಂದಿದ್ದಳು. ನನ್ನನ್ನು ನೋಡಿದವಳೇ ನನ್ನನ್ನು ಮಾತನಾಡಿಸಲು ನನ್ನ ಬಳಿಗೆ ಬಂದಿದ್ದಳು.
“ಮೇಡಂ… ಚೆನ್ನಾಗಿದ್ದೀರಾ?” ಕೇಳಿದ್ದಳು.
“ಹೂಂ…”
“ನಿಮ್ಮ ಮನೆಯವರು ತುಂಬಾ ಒಳ್ಳೆಯವರು ಮೇಡಂ… ನೀವು ಅದೃಷ್ಟವಂತರು…” ಸಂತೋಷದಿಂದ ಮಾತನಾಡುತ್ತಿದ್ದಳು.
“ಹೌದಾ…?”
“ಹೌದು… ಮೇಡಂ… ನೋಡಿ. ನಾನೀಗ ದಪ್ಪ ಆಗಿಲ್ವಾ? ಅದಕ್ಕೆ ಅವರೇ ಕಾರಣ. ಅವರ ಊರ ಹತ್ತಿರಾನೇ ನಮ್ಮ ಊರು ಕೂಡಾ”.
“ಓ…”
“ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಾರೆ ಗೊತ್ತಾ?”
“ಹೌದಾ…?”
“ನೀವು ಕನಕಪುರದಲ್ಲೇ ಉಳಿದುಕೊಂಡಿದ್ದೀರಂತೆ?”
“ಹೌದು…”
“ನಿಮಗೆ ಆಸ್ಪತ್ರೆಯಿದ್ದರೆ ಬೇರೆ ಏನೂ ನೆನಪಾಗೋಲ್ಲ…”
“…….”
“ನಾನು ಈಗ ಕಾರಿನಲ್ಲಿಯೇ ಓಡಾಡೋದು ಗೊತ್ತಾ?”
“ನೀವೇಕೆ ಅವರನ್ನೇ ಮದುವೆ ಮಾಡಿಕೊಳ್ಳಬಾರದು? ಅಪಪ್ರಚಾರವೂ ತಪ್ಪುತ್ತದೆ. ನೀವು ಮದ್ವೆ ಮಾಡಿಕೊಂಡ ಹಾಗೂ ಆಗುತ್ತೆ…” ಅವಳ ಮುಖವನ್ನೇ ನೋಡುತ್ತಾ ಹೇಳಿದ್ದೆ.
“ಅದೇನೋ ಸರೀನೆ… ಆದರೆ ನೀವಿದ್ದೀರಲ್ಲ…”
“ನಾನಾ…? ಅಂದ್ರೆ…?”
ಮುಂದೆ ಹೇಳಲು ಸಾಧ್ಯವಾಗದವಳಂತೆ ಆಚೀಚೆ ನೋಡಿದಳು.
“ಏನು? ಹೇಳಿ? ಸಂಕೋಚಾನಾ?”
ಸಿಹಿ-ಕಹಿ ಗೀತಾ ಅವರು ನನ್ನ ಬಳಿಗೆ ಬರುತ್ತಿದ್ದರು. ಅದಕ್ಕಾಗಿಯೇ ಅವಳು ಮಾತು ನಿಲ್ಲಿಸಿದ್ದಳು.
“ಆಮೇಲೆ ಫೋನು ಮಾಡ್ತೀನಿ ಮೇಡಂ…” ಎನ್ನುತ್ತಾ ಅಲ್ಲಿಂದ ಹೊರಟು ಹೋಗಿದ್ದಳು.
ಗೀತಾ ಯಾವುದೋ ಅಕ್ಷರ ಅರ್ಥವಾಗಲಿಲ್ಲಾಂತ ನನ್ನ ಬಳಿ ಕೇಳಲು ಬಂದಿದ್ದರು.
“ಯಾರು ಆಕೆ?” – ಕುತೂಹಲದಿಂದ ಕೇಳಿದ್ದರು.
“ಇದೇ ಆಸ್ಪತ್ರೆಯ ನರ್ಸ್…” ಎಂದಿದ್ದೆ.
“ನಾನು ಬರೋದನ್ನು ನೋಡಿ ಆಕೆ ಹೋಗಿ ಬಿಟ್ರಲ್ಲಾ ಅದಕ್ಕೇ ಕೇಳಿದೆ. ಸ್ಸಾರಿ ಡಾಕ್ಟ್ರೇ…” ಎಂದಿದ್ದರು.
“ಅಂಥಾದ್ದೇನಿಲ್ಲ. ನನ್ನ ಗಂಡನನ್ನು ಮದ್ದೆಯಾಗ್ತಿನೀಂತೇನೋ ಹೇಳಲು ಬಂದಿದ್ದರೂಂತ ಕಾಣುತ್ತೆ. ಯಾಕೋ ಹೇಳೋಕೆ ಧೈರ್ಯ ಸಾಲಲಿಲ್ಲಾಂತ ಕಾನುತ್ತೆ…”
“ವ್ಹಾಟ್…!” ಗೀತಾಗೆ ಆಶ್ಚರ್ಯ.
“ಕೇಳಿದ್ದರೆ… ಒಪ್ಪಿಗೆ ಕೊಡುತ್ತಿದ್ದೆ…”
“…….”
“ಅವಳಿಗ್ಯಾಕೆ ನಿರಾಶೆ ಮಾಡಲಿ?”
ಗೀತಾ ಆಶ್ಚರ್ಯದಿಂದ ನನ್ನ ಮುಖ ನೋಡಿದ್ದರು. ಅವರಿಗೆ ಏನನ್ನಿಸಿತ್ತೋ ಗೊತ್ತಿಲ್ಲ. ಆ ರಾತ್ರಿ ಊಟಕ್ಕೆಂದು ಚಂದ್ರು ಮತ್ತು ಗೀತಾ ನನ್ನನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದರು. ನಾನು ಆಕೆಯ ಮತ್ತು ನನ್ನ ‘ಗಂಡ’ನ ಪ್ರೇಮದ ಬಗ್ಗೆ ತಿಳಿಸಿದ್ದೆ. ನನ್ನ ಅತ್ಯಂತ ಆಪ್ತರಾಗಿದ್ದ, ಎಲ್ಲಾ ವಿಷಯವೂ ಎಲ್ಲರಿಗೂ ತಿಳಿದುದ್ದರಿಂದ ನಾನು ಮುಚ್ಚಿಡುವ ಅಗತ್ಯವಿರಲಿಲ್ಲವೆಂದುಕೊಂಡಿದ್ದೆ. ಕ್ಷಣ ಹೊತ್ತು ಅವರಿಬ್ಬರೂ ಮಾತನಾಡಲಿಲ್ಲ. ನನ್ನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದರು ಗಂಭೀರವಾಗಿ.
ನಾನು ಜೋರಾಗಿ ನಕ್ಕುಬಿಟ್ಟಿದ್ದೆ.
“ನನ್ನ ಮೇಲಿನ ಭಾರವನ್ನು ಆಕೆ ಇಳಿಸಿಕೊಳ್ಳುತ್ತಾಳೆಂದು ಆಕೆಯೇ ಮುಂದೆ ಬಂದಾಗ ನನಗೆ ಸಂತೋಷವಾಗಿತ್ತು. ಆಗಲೇ ಹಗುರವಾಗಿ ಬಿಟ್ಟೆ ಎಂದುಕೊಂಡಿದ್ದೆ…” ನಾನು ಹೇಳಿದ್ದೆ.
ಅವರು ಮುಂದೇನು ಮಾತನಾಡಿರಲಿಲ್ಲ.
*****
ಮುಂದುವರೆಯುವುದು