ಒಂದು ಹಳ್ಳಿಯ ಬಯಲು. ಕತ್ತಲಾಗಲು ಜನರ
ಸಂದಣಿಯು ನೆರೆದಿಹುದು ಗೊಂಬೆಯಾಟವ ನೋಡ
ಲೆಂದೆಣಿಸಿ ಇಂತಿಗೋ! ಸೂತ್ರಧಾರನು ಆಡ-
ಲಸಗುವನು. ಕುಣಿಯುವವು ಗೊಂಬೆಗಳು. ವಾನರರ
ನಾಯಕನು ಬಂದನಿದೊ! ಮಾರುತಿಯು ದಾನವರ
ಕೆಡವಿದನು, ವ್ಯಥೆಗೊಂಡು ಕಂಡು ಸೀತೆಯ ಪಾಡ!
ದಾಶರಥಿ ದಶಕಂಠನೊಡನೆ ಯುದ್ಧದಿ ಸೇಡ
ತೀರಿಸಿದ ಬರಿಬೊಂಬೆ ಇರಲೇನು? ಬಾನ್ನವರ
ಲೋಕಕೊಯ್ವವು ಮನವ ಸೂತ್ರಧಾರನ ಧ್ವನಿಯೆ
ಪಾತ್ರಗಳ ಮೂಲಧ್ವನಿ; ಕಿಷ್ಕಿಂಧ ಲಂಕೆಗಳು
ಒಂದೆ ಸ್ಥಲಕಿಹ ಭಿನ್ನನಾಮಗಳು ಇರಲೇನು?
ಜನರ ಕಲ್ಪನೆಯೆದುರು ತೆರೆದು ನಿಂತಿದೆ ಖಣಿಯೆ!
ಅವರ ಕಿವಿ ಹೊಗುತಿಹುದು ನವರಸದ ನುಡಿಜೇನು!
ಗೊಂಬೆಗಳು ಅವರ ಕಲ್ಪನೆಗಿರುವ ರೆಂಕೆಗಳು!
*****