ಮಧ್ಯಾಹ್ನ ಎರಡು ಘಂಟೆಗೆ ಐದು ನಿಮಿಷ ಬಾಕಿ ಇತ್ತು. ನ್ಯೂಸ್ ಕೇಳೋಣವೆಂದು ಟಿ.ವಿ. ತಿರುಗಿಸಿದೆ. ಕಾಲಿಂಗ್ ಬೆಲ್ ಬಾರಿಸಿತು. ಇದೊಂದು `ನ್ಯೂಸೆನ್ಸ್’ ಆಯಿತಲ್ಲಾ ಎಂದುಕೊಂಡು ಬಾಗಿಲು ತೆರೆದೆ. ಐದಾರು ಹುಡುಗರು ನಾಯಿ ನಮ್ಮ ಮನೆಯಲ್ಲಿ ಇಲ್ಲವೆಂಬುದನ್ನು ಖಾತ್ರಿ ಮಾಡಿಕೊಂಡು, “ಅಂಕಲ್, ನಾವು ಪ್ರತಿವರ್ಷದಂತೆ ಈ ಸಲವೂ ಗಣೇಶನನ್ನು ನಮ್ಮ ಬಡಾವಣೆಯ ಪಾರ್‍ಕಿನಲ್ಲಿ ಕೂರಿಸುತ್ತಿದ್ದೇವೆ. ನೀವು ಏನಾದರೂ ಸಹಾಯ ಮಾಡಬೇಕು” ಒಬ್ಬ ವಿನಂತಿಸಿಕೊಂಡ. ಮತ್ತೊಬ್ಬ ಪ್ಯಾಂಪ್ಲೆಟ್ ಕೈಗೆ ತುರುಕಿದ. ನಾನು ಪಟ್ಟಿಯನ್ನು ಹಾಗೆಯೇ ಗಮನಿಸುತಾ “ಇದೇನ್ರಯ್ಯಾ, ಗಣೇಶ ಸಂಘ (ಸಂ.ರಂ.)’ ಎಂದು ಪ್ರಿಂಟ್ ಮಾಡಿಸಿದ್ದೀರಿ. ಇದು ಯಾವ ಸಂಘ? ಮಾಮೂಲು ಇಡುತ್ತಿರುವವರು ನೀವೇ ತಾನೇ? ಏಕೆಂದರೆ ಈ ಹಬ್ಬದ ಸೀಸನ್‌ನಲ್ಲಿ ಮೂರು ನಾಲ್ಕು ಗುಂಪುಗಳು ಬಂದು ನಮಗೆ ಚಂದಾ ಕೊಡಿ ನಮಗೆ ಚಂದಾ ಕೊಡಿ ಎಂದು ಪೀಡಿಸುತ್ತಾರೆ. ಯಾರು ಸಾಚಾ, ಯಾರೂ ನೀಚಾ ಒಂದು ತಿಳಿಯುವುದಿಲ್ಲ. ಅದೂ ಅಲ್ಲದೆ ಗಣೇಶ ಸಂಘ (ಸಂ.ರಂ) ಎಂಬುದನ್ನು ಈಗಲೇ ನಾನು ಕೇಳುತ್ತಿರುವುದು”, ಎಂದೆ. ಗುಂಪಿನ ನಾಯಕ ಮಾತಿಗೆ ಶುರುಮಾಡಿದ: “ನಿಜ, ಅಂಕಲ್ ನೀವು ಹೇಳೋದು, ಬೀದಿ ಬೀದಿಗೂ ಒಂದೊಂದು ಗಣೇಶ ಸಂಘ ಪ್ರತಿ ಸಲವೂ ಇರುತ್ತಿದ್ದವು. ಈ ಸಲ ಎಲ್ಲಾ ಸೇರಿ ಸಂಯುಕ್ತ ರಂಗವನ್ನು ರಚಿಸಿಕೊಂಡಿದ್ದೇವೆ”. “ಅಂದರೆ ಕೇಂದ್ರ ಸರ್‍ಕಾರದಲ್ಲಿರುವಂತೆ ಹತ್ತಾರು ರಾಜಕೀಯ ಪಕ್ಷಗಳು ಒಗ್ಗೂಡಿ ಸಂಯುಕ್ತರಂಗವನ್ನು ರಚಿಸಿರುವ ಮಾದರಿಯಲ್ಲಿ ಮಾಡಿಕೊಂಡಿದ್ದೀರಿ ಅಲ್ಲವೇ?” ನಾನು ಕೇಳಿದೆ. ಎಲ್ಲರೂ ಒಟ್ಟಾಗಿ “ನೀವು ಹೇಳಿದ್ದು, ಸೆಂಟ್ ಪರ್‌ಸೆಂಟ್ ಕರೆಕ್ಟ್ ಅಂಕಲ್. ಈ ನಮ್ಮ ಬಡಾಣೆಯಲ್ಲಿ ಎರಡೇ ಸಂಘಗಳು ಗಣೇಶನನ್ನು ಕೂರಿಸಿವುದು. ಬೇರೆಯ ಸಂಘ ವಿರೋಧ ಪಕ್ಷದವರದು. ಅಂದರೆ ನಮ್ಮ ಸಂಘಕ್ಕೆ ಸೇರದೇ ಇರುವವರು. ಅವರೇ ಪ್ರತ್ಯೇಕವಾಗಿ ಇಟ್ಟುಕೊಳ್ಳುತ್ತಾರೆ. ಅವರೂ ಚಂದಾಕ್ಕೆ ನಿಮ್ಮಲ್ಲಿಗೆ ಬಂದರೂ ಬರಬಹುದು. ಆದರೆ ನಮಗೇ ಕೊಡಿ ಪ್ಲೀಸ್” ಎಂದ ಅವರಲ್ಲಿ ಒಬ್ಬ. ಕೇಂದ್ರ ಪರಿಸ್ಥಿತಿಯಂತೆಯೇ ಈ ಸಂಘಗಳು ಎಂದು ಅರಿವಾಯಿತು.

“ಅದೆಲ್ಲಾ ಸರಿ ಎರಡು ಸಂಘಗಳು ಇರುವ ಒಂದೇ ಪಾರ್‍ಕಿನಲ್ಲಿ ಹೇಗೆ ಗಣೇಶನನ್ನು ಇಡುತ್ತೀರಾ?” “ಅದು ಬಹಳ ಸಿಂಪಲ್ ಅಂಕಲ್”, ಒಬ್ಬ ನುಡಿದ. “ಪಾರ್‍ಕಿನಲ್ಲಿ ಅವರು ಪೂರ್ವಕ್ಕೆ ಎದುರಾಗಿ ಗಣೇಶನನ್ನು ಕೂರಿಸಿದರೆ ನಾವು ಪಶ್ಚಿಮಕ್ಕೆ ಎದುರಾಗಿ ಕೂರಿಸುತ್ತೇವೆ” ಮುಂದುವರಿದು ಹೇಳಿದ. “ಹೌದಪ್ಪಾ, ಇಬ್ಬಿಬ್ಬರು ಮೈಕ್ ಸೆಟ್‌ಗಳನ್ನು ಹಾಕಿದರೆ ನಮ್ಮ ಗತಿ?” ನಾನು ಕೇಳಿದೆ. “ಹಾಗೇನಿಲ್ಲ; ಅವರ ಮೈಕೇ ನಮಗೂ ಅಡ್ಜಸ್ಟ್ ಆಗಿ ಬಿಡುತ್ತೆ. `ಟು ಇನ್ ಒನ್’ ಅಷ್ಟೆ. ಒಂದೇ ಪೆಂಡಾಲ್, ಲೈಟು ವ್ಯವಸ್ಥೆ ಎಲ್ಲಾ ಕಾಮನ್” ಎಂದೆಲ್ಲಾ ಹೇಳುತ್ತಿದ್ದ.

ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನನ್ನವಳು ದಿಢೀರ್‍ ಎಂದು ಬಂದವಳೇ ನನ್ನ ಕೈಲಿದ್ದ ಪಾಂಪ್ಲೆಟ್ ಕಿತ್ತುಕೊಂಡು ಓದಲು ಶುರು ಮಾಡಿದಳು. “ಗಣೇಶ ಸಂಘ (ಸಂ.ರಂ) – ಏನ್ರೀ ಇದು ಸಂ.ರಂ.? ನಿಮಗೆ ಮಾಡಲು ಇನ್ನೇನು ಬದುಕಿಲ್ಲವೆ? ನಿಮಗೆ ಚಂದಾ ಕೊಡುವುದಿಲ್ಲ ಹೊರಟುಬಿಡಿ” ಎಂದು ಪಕ್ಷದ ಹೈಕಮಾಂಡ್‌ನಂತೆ ಗುಡುಗಿದಳು. ಕೊನೆಗೆ `ಸಂ.ರಂ’ ಅಂದರೆ ಏನು ಎಂದು ವಿವರಿಸಿ ನನ್ನವಳಿಗೆ ನಾನೇ ಹೇಳಬೇಕಾಯಿತು.
*****

 

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)