ಸಾರುವೆ ಜನಾಃ ಸುಖಿನೋಭವಂತು!

ಸಾರುವೆ ಜನಾಃ ಸುಖಿನೋಭವಂತು!

ಪಕ್ಕದ ಬೀದಿ ಪುರಾಣಿಕರು ಜೋತಿಷ್ಯ ಶಾಸ್ತ್ರದಲ್ಲಿ ಭಾರಿ ಪ್ರವೀಣರು. ಯಜ್ಞ ಯಾಗಾದಿಗಳು, ಹೋಮ, ವ್ರತಾಚರಣೆ ಯಾವುದೇ ಇರಲಿ-ಯಾರ ಮನೆಯಲ್ಲೇ ಆಗಲಿ ಪುರಾಣಿಕರು ಅಲ್ಲಿ ಹಾಜರು. ಸುತ್ತಮುತ್ತಲ ಊರಿನವರೆಲ್ಲಾ ಪುರೋಹಿತ ಕಾರ್‍ಯಕ್ಕೆ ಪುರಾಣಿಕರನ್ನೇ ಅವಲಂಬಿಸಿದ್ದರು. ಪುರಾಣಿಕರಲ್ಲಿ ಒಂದು ಆಕರ್‍ಷಣೆ ಎಂದರೆ ಇವರ ಹಾಸ್ಯಪ್ರಜ್ಞೆ. ಯಾವುದೇ ಸಂದರ್ಭದಲ್ಲಿಯೂ ಇವರ ಬಳಿ ಕೋಪ, ಅಸಹನೆ ಸುಳಿಯುತ್ತಿರಲಿಲ್ಲ. ಮಂತ್ರೋಚ್ಚಾರಣೆ ಸಮಯದಲ್ಲೂ ಹಾಸ್ಯ ಚಟಾಕಿ ಹಾರಿಸುತ್ತ, ನೆರೆದಿದ್ದ ಜನರ‍ನ್ನೆಲ್ಲಾ ಸೂಜಿಗಲ್ಲಿನಂತೆ ಆಕರ್‍ಷಿಸುತ್ತಿದ್ದರು.

ಕಂಟ್ರಾಕ್ಟರ್ ಕಾಂತಯ್ಯನವರು ಮೂರು ಅಂತಸ್ತಿನ ಭಾರೀ ಮನೆಯನ್ನು ಕಟ್ಟಿಸುತ್ತಿದ್ದರು. ಕಟ್ಟಡದ ಎರಡನೆಯ ಮಹಡಿ ಎಬ್ಬಿಸಲು ಸಾರುವೆ ಕಟ್ಟಿ ಸಿದ್ದಗೊಳಿಸುತ್ತಿದ್ದರು. ನಲವತ್ತು-ಐವತ್ತು ಕೆಲಸದ ಆಳುಗಳು ಸಾರುವೆ ಮೇಲೆ ಸರ್ಕಸ್ ಮಾಡುವ ರೀತಿ ಸಿಮೆಂಟ್, ಗಾರೆ ಇತ್ಯಾದಿಗಳನ್ನು ಬಾಂಡ್ಲೆಗಳಲ್ಲಿ ಹೊತ್ತು ಹತ್ತುತ್ತ ಏದುಸಿರು ಬಿಡುತ್ತ ಕೆಲಸ ಮಾಡುತ್ತಿದ್ದರು. ಕೆಲವೇ ದಿನಗಳಲ್ಲಿ ಕಟ್ಟಡ ಮೇಲೆದ್ದಿತು.

‘ಗೃಹಪ್ರವೇಶ’ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಯೋಜಿಸಿದ್ದ ಕಂಟ್ರಾಕ್ಟರ್ ಕಾಂತಯ್ಯನವರು ಮುಹೂರ್ತ ಇರಿಸಲು ಪುರಾಣಿಕರ ಮನೆಗೆ ಎಡತಾಕಿದರು. “ಓಹ್, ಕಾಂತಯ್ಯನವರು…. ಬರೋಣ ವಾಗಲಿ, ತಮ್ಮ ದರ್ಶನವೇ ಇತ್ತೀಚಿಗೆ ಆಗಲಿಲ್ಲ. ಕಟ್ಟಡದ ಉಸ್ತುವಾರಿಯಲ್ಲಿ ಕೊಂಚ ‘ಬಿಜಿ’ ಆಗಿದ್ದಿರಬಹುದು. ಬನ್ನಿ, ಕೂತುಕೊಳ್ಳಿ ಕಾಫಿ ಅಥವಾ ಚಹ? ನೀವು ಯಾವುದನ್ನು ಅಪ್ಪಣೆ ಮಾಡಿದರೆ ಅದು ಸಿದ್ದವೆಂದು ತಿಳಿಯಿರಿ” -ಪುರಾಣಿಕರ ಅಂಬೋಣ. “ಪುರಾಣಿಕರೇ, ಕಾಫಿ-ಚಹಾ ಅದೆಲ್ಲಾ ಇರಲಿ; ಈಗ ನಾನು ಬಂದಿರುವ ಉದ್ದೇಶ ಇಷ್ಟೆ-ಗೃಹಪ್ರವೇಶಕ್ಕೆ ಸೂಕ್ತ ಮುಹೂರ್ತ ಇಟ್ಟು ಕೊಡಿ. ಇನ್ನು ಒಂದೆರಡು ವಾರಗಳಲ್ಲಿ ಆದರೆ ಸೂಕ್ತವಾಗುತ್ತೆ. ಕೊಂಚ ಪಂಚಾಂಗ ಅವಕೋಕಿಸೋಣವಾಗಲಿ” ಎಂದೆನ್ನುತ್ತ ಕಾಂತಯ್ಯನವರು ಕಾಫಿ ಬಟ್ಟಲನ್ನು ಕೈಗೆ ಹಿಡಿದುಕೊಂಡರು. “ಕಾಂತಯ್ಯನವರೇ ನಾನು ಒಂದು ಸಲ ನಿಮ್ಮ ಕಟ್ಟಡವನ್ನು ಸೂಕ್ಷ್ಮವಾಗಿ ಅವಲೋಕಿಸಿ ವಾಸ್ತು ಪರಿಶೀಲಿಸಿ ನಂತರ ಮುಹೂರ್ತ ಗುರುತು ಹಾಕಿಕೊಡುತ್ತೇನೆ” ಎಂದರು. ಕಾಂತಯ್ಯನವರ ಸಂಗಡ ಕಟ್ಟಡವನ್ನು ಪರಿಶೀಲಿಸಿ ಸೂಕ್ತ ದಿನವನ್ನು ಗೊತ್ತುಮಾಡಿಕೊಟ್ಟರು.

“ಇನ್ನೂಂದು ವಿಚಾರ: ಅನ್ನದಾನ ಯಥೇಚ್ಚವಾಗಿ ನಡೆಸಬೇಕು. ಕೆಲಸದ ಆಳುಗಳಿಗೆಲ್ಲಾ ಭರ್‍ಜರಿ ಔತಣ ಏರ್‍ಪಾಡಾಗಬೇಕು. ನೋಡಿ ಆ ಸಾರುವೆ ಮೇಲೆ ಹತ್ತಿ ಜೀವ ಭಯವನ್ನು ಲೆಕ್ಕಿಸದೆ ಹೇಗೆಲ್ಲಾ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂತೋಷಪಡಿಸಿದ್ದೇ ಆದರೆ ನಿಮಗೆ ಖಂಡಿತ ಏಳಿಗೆ.” “ಖಂಡಿತಾ ಆಗಬಹುದು” ಕಾಂತಯ್ಯನವರ ಅಂಬೋಣ.

ಗೃಹಪ್ರವೇಶದ ದಿನ ಹೋಮ-ಹವನ ಇತ್ಯಾದಿ ಸಾಂಗವಾಗಿ ನೆರೆವೇರಿತು. ಘಟಾನು ಘಟಿ ಪುತೋಹಿತ ವರ್ಗದವರೆಲ್ಲಾ ಆಹ್ವಾನಿತರಾಗಿದ್ದರು. ವೇದಮಂತ್ರ ಉದ್ಘೋಷದಿಂದ ಸಬೆ ಮುಳುಗಿತ್ತು. ಮಹಾಮಂಗಳಾರತಿ, ನಂತರದ ಅಶೀರ್ವಾದ ಮಂತ್ರಗಳೆಲ್ಲಾ ಮುಗಿದ ನಂತರ ಪುರಾಣಿಕರು “ಸಾರುವೆ ಜನಾಃ ಸುಖಿನೋ ಭವಂತು” ಎಂದು ಹೇಳುತ್ತಾ ತೀರ್‍ಥಪ್ರಸಾದ ಕೊಡಲು ಮುಂದಾದರು. ಬಂದಿದ್ದ ವಿದ್ವನ್ಮಣಿ ಗಳೆನಿಸಿದ ಪುರೋಹಿತ ವರ್‍ಗ ಪುರಾಣಿಕರ ನುಡಿಯನ್ನು ಕೇಳುತ್ತಾ ಆಶ್ಚರ್‍ಯ ವ್ಯಕ್ತಪಡಿಸುತ್ತ “ಏನು? ‘ಸಾರುವೆ ಜನಾಃ’ ಅನ್ನುತ್ತಿದ್ದಾರಲ್ಲ ‘ಸರ್ವೇ ಜನಾಃ’ ಅಂತ ಹೇಳಬೇಕಾಗಿರುವುದನ್ನು ತಪ್ಪು ತಪ್ಪಾಗಿ ಹೇಳುತ್ತಿದ್ದಾರಲ್ಲಾ? ಅದೂ ನಮ್ಮ‌ಎದುರಿಗೆ” ಎನ್ನುತ್ತಾ ಎಲ್ಲರೂ “ಪುರಾಣಿಕರೇ ನೀವು ತಪ್ಪಾಗಿ ಹೇಳುತ್ತಿದ್ದೀರಿ; ‘ಅದು ಸರ್ವೇ ಜನಾಃ…. ಎಂದಿರಬೇಕು” ಎಂದು ತಕರಾರು ಎತ್ತಿದರು. ಪುರಾಣಿಕರು ಎದ್ದು ನಿಂತು “ನೋಡಿ, ನಾನು ಸಾರುವೆ ಜನಾಃ ಎಂದೇ ಹೇಳಿರುವುದು; ಈ ಕಟ್ಟಡದ ಸಾರುವೆಯ ಮೇಲೆ ಜೀವ ಭಯ ಬಿಟ್ಟು ಶಕ್ತಿಗೂ ಮೀರಿದ ಭಾರವನ್ನು ಹೊತ್ತು ಮನೆ ಕಟ್ಟಲು ಸಹಕಾರ ಕೊಟ್ಟ ಈ ಕೆಲಸಗಾರರ ಭವಿಷ್ಯ ಚಿನ್ನಾಗಿರ ಬೇಕಲ್ಲವೆ? ಅವರಿಂದ ತಾನೆ ನಮ್ಮಮಹಡಿ ಮನೆಗಳು? ಕೊಂಚ ಯೋಚಿಸಿ ಸಾರುವೆ ಜನ ಸುಖವಾಗಿರಲಿ ಎಂದು ಬಯಸಿದ್ದು ನನ್ನ ತಪ್ಪೆ?” ಎಂದು ಪ್ರಶ್ನಿಸಿದರು. ಬಂದಿದ್ದ ಪುರೋಹಿತ ವರ್‍ಗದವರು ಪುರಾಣಿಕರು ಹೇಳಿದ್ದರಲ್ಲಿ ಸತ್ಯಾಂಶವಿದೆ ಎಂದು ತಿಳಿದು “ತಲೆದೂಗಿ ತಾವೂ ‘ಸಾರುವೇ ಜನಾಃ ಸುಖಿನೋಭವಂತು ಎಂದು ದನಿಗೂಡಿಸಿದರು.’
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕಾಗಲಿ ಬೆಳಕು
Next post ಬಾ ತಾಯೆ ಬಾ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…