ಪಾಯಸ ಪುರಾಣ!

ಪಾಯಸ ಪುರಾಣ!

ನನ್ನ ಮದುವೆ ಆದ ಮೊದಲ ವರ್ಷದ (೧೯೬೧) ದೀಪಾವಳಿಗೆ ಮಾವನವರಿಂದ ಆಮಂತ್ರಣ ಬಂದಿತ್ತು. ಮಾವನ ಮನೆ ತಲುಪಿದಾಗ ಅಲ್ಲಿ ಇನ್ನೂ ಇಬ್ಬರು ಅಳಿಯಂದಿರು ಆಗಲೇ ಬಂದು ಬೀಡುಬಿಟ್ಟಿದ್ದರು. ಅಳಿಯಂದಿರು ತಂದಿರುವ ಪಟಾಕಿ, ಮತಾಪು, ಸಿಹಿ ತಿಂಡಿಗಳ ಪ್ಯಾಕೆಟ್ಗಳನ್ನು ಮೊಮ್ಮಕ್ಕಳು ಅಜಮಾಯಿಶಿ ಮಾಡುತ್ತಿದ್ದರು. ನನ್ನ ಸರಕನ್ನು ಬಿಚ್ಚಿ ಎಲ್ಲರ ಮುಂದೆ ಹರಡಿದೆ. ಬರೀ ಸಿಹಿ ತಿಂಡಿಗಳ ಸಮ್ಮಿಶ್ರ ಸರ್ಕಾರವೋ ಎಂಬಂತೆ ಅವುಗಳೇ ರಾರಾಜಿಸುತ್ತಿದ್ದವು.

ಮಧ್ಯೆ ಮಧ್ಯೆ ಕಾಫಿ ಸಮಾರಾಧನೆ ನಡೆಯುತ್ತಿತ್ತು. ಅತ್ತೆಯವರಿಗೆ ಸಂಭ್ರಮವೋ ಸಂಭ್ರಮ. ಕಾಫಿ ವಿತರಿಸುವಾಗ ಕೊಟ್ಟವರಿಗೇ ಮತ್ತೆ ಮತ್ತೆ ಬಂದು ಕೊಡುವರು. ಕೊಂಚ ಮರೆವಿನ ಸ್ವಭಾವದವರು. “ಹಬ್ಬದ ಅಡುಗೆ ಸಿದ್ಧವಾಗುತ್ತಿದೆ. ಯಾವ ಸಿಹಿ ಭಕ್ಷ ನೀವುಗಳು ಇಷ್ಟಪಡುತ್ತೀರಾ? ಒಬ್ಬಟ್ಟು ಮಾಡಲೇ?” ಅತ್ತೆಯವರು ಕೇಳಿದರು. ಎಲ್ಲರೂ “ಏನೂ ಸಿಹಿ ತಿಂಡಿ ಮಾಡುವ ತೊಂದರೆ ತೆಗೆದುಕೊಳ್ಳಬೇಡಿ. ಅಷ್ಟೊಂದು ವೆರೈಟಿ ಸಿಹಿ ತಿಂಡಿಗಳು ಮೇಳೈಸಿವೆ. ಅವನ್ನೆಲ್ಲಾ ವಿಚಾರಿಸಿಕೊಳ್ಳಬೇಡವೆ?” ಎನ್ನುತ್ತ ಒಕ್ಕೊರಳಿನಿಂದ ಅತ್ತೆಯವರ ಹುಮ್ಮಸ್ಸಿಗೆ ತಣ್ಣೀರು ಎರಚಿದರು. “ಹೌದು, ಅವರುಗಳು ಹೇಳುತ್ತಿರುವುದು ಸರಿಯಾಗಿಯೇ ಇದೆ; ಈಗ ತಂದಿರುವ ಸಿಹಿಗಳನ್ನಲ್ಲಾ ಬೆರಸಿ ‘ಮಿಕ್ಸರ್’ ಮಾಡಿಬಿಟ್ಟು, ಅದೊಂದು ಮಾದರಿಯ ಸಿಹಿಯಾಗಿ ಬಿಡುತ್ತದೆ. ಬರೀ ಪಾಯಸವನ್ನು ಮಾಡು. ಪಾಯಸ ಮಾತ್ರ ತುಂಬಾ ಚೆನ್ನಾಗಿರಲಿ, ಹದವಾಗಿರಲಿ, ಈ ಊಟದಲ್ಲಿ ಹೊರಗಡೆಯಿಂದ ತಂದಿರುವ ಸ್ವೀಟ್ ಗಳು ಆಷ್ಟು ಹಿತವಾಗಿರುವುದಿಲ್ಲ’ ಏನಿದ್ದರೂ ಪಾಯಸದ ಸಮಾನ ಮತ್ತೊಂದು ಸಿಹಿ ಇರುವುದಿಲ್ಲ” ಎಂದರು ನಮ್ಮ ಮಾವನವರು. ಅವರು ಆಡುವ ಮಾತಿಗೆ ಮನೆಯಲ್ಲಿ ಎದುರಿಲ್ಲ.

ಪೂಜೆ ಮುಗಿದು ತೀರ್‍ಥ ಪ್ರಸಾದಗಳ ವಿನಿಯೋಗ ಆದನಂತರ ಊಟಕ್ಕೆ ಸಿದ್ಧತೆ ನಡೆಯಿತು. ಬಾಳೆ ಎಲೆಗಳಲ್ಲಿ ಸುತ್ತಲೂ ಬಿಸಿಬಿಸಿಯಾಗಿ ಮಾಡಿರುವ ಪಲ್ಯ, ಕೋಸಂಬರಿ, ಚಿತ್ರಾನ್ನ, ಗೊಜ್ಜು ಇತ್ಯಾದಿಗಳ ಮೇಳ. ಎಲ್ಲರೂ ಊಟಕ್ಕೆ ಕುಳಿತೆವು. ಮೊಮ್ಮಗ ಶ್ರೀಹರಿ ಕದ್ದು ಕದ್ದು ಪಾಯಸದ ರುಚಿ ನೋಡುತ್ತಿದ್ದ. ನಾವು ಊಟ ಮಾಡಲು ಸಿದ್ದರಾಗುವುದೇ ತಡ, ಶ್ರೀಹರಿ ‘ಅಜ್ಜೀ, ಅಜ್ಜೀ, ಪಾಯಸ ಸಪ್ಪೆ’ ಕೂಗಿಕೊಂಡ. ಮತ್ತೆ ಇನ್ನೆರಡು ಮಕ್ಕಳು ‘ಹೌದು ಅಜ್ಜೀ, ಪಾಯಸ ತುಂಬಾ ಸಪ್ಪೆ, ಬಾಯಿಗೆ ಇಡೋಕೆ ಆಗೊಲ್ಲ’ ಎಂದವು. ‘ಯಾಕಮ್ಮ ಪಾಯಸಕ್ಕೆ ಕಡಿಮೆ ಬೆಲ್ಲ ಹಾಕಿದ್ದೀಯಾ? ಎಲ್ಲರೂ ಸಪ್ಪೆ ಎನ್ನುತ್ತಿದ್ದಾರೆ. ‘ನನ್ನವಳು ಬಾಯಿ ಹಾಕಿದಳು. ಮರವೆಯ ಅತ್ತೆಯವರಿಗೆ ಜ್ಞಾನೋದಯವಾಯಿತು. ತಾವು ಬೆಲ್ಲದ ಪಾಕವನ್ನು ಇಟ್ಟಿದ್ದು ಪಾಯಸ ಕುದಿಯುತ್ತಿರುವಾಗ ಹಾಕೋಣವೆಂದು ಅಂದುಕೊಂಡಿದ್ದರು ಏನೋ ಗಡಿಬಿಡಿ, ಸಂಭ್ರಮದ ಭರಾಟೆಯಲ್ಲಿ ದೂರದಲ್ಲಿದ್ದ ಪಾಕದ ಪಾತ್ರೆ ಕಣ್ಣಿಗೆ ಬೀಳದೆ ಮಾಡಿದ ಪಾಯಸ ಬೆಲ್ಲದಿಂದ ವಂಚಿತವಾಯಿತು. ತುಂಬಾ ನೊಂದುಕೊಂಡರು ‘ಎಲ್ಲರೂ ನಿಧಾನವಾಗಿ ಊಟ ಮಾಡಿರಿ. ಇನ್ನು ಎರಡು ನಿಮಿಷಗಳಲ್ಲಿ ಪಾಯಸ ಸಿದ್ದವಾಗಿಬಿಡುತ್ತದೆ’ ಎಂದು ಹೇಳಿ ಸಂಭಾಳಿಸಿಕೊಂಡರು.

“ಈಗ ಇಲ್ಲಿ ಜಮಾಯಿಸಿರುವ ಸ್ವೀಟ್ಗಳ ಕೂಟವೇ ಮಜಭೂತಾಗಿದೆ; ಈಗ ನಿನ್ನ ಪಾಯಸ ಯಾರಿಗೆ ಬೇಕೇ?” ಮಾವನವರು ನುಡಿದರು. ಊಟದ ಮಧ್ಯೆ ‘ನಗೆ ಕೂಟ’ ಸಂಭ್ರಮ ತಂದಿತ್ತು. ಪ್ರತಿ ದೀಪಾಪಳಿಗೂ ಈ ಘಟನೆಯ ನೆನಪು ಹಸಿರಾಗುತ್ತದೆ. ಮಾಡಿಟ್ಟ ಪಾಯಸ ಹಾಗೆಯೇ ಉಳಿದಿತ್ತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿ ನೀನೇ ಸರ್ವ
Next post ನನ್ನ ಜನರು

ಸಣ್ಣ ಕತೆ

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಮೇಷ್ಟ್ರು ಮುನಿಸಾಮಿ

  ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…