ನವಿಲುಗರಿ – ೯

ನವಿಲುಗರಿ – ೯

ಪದೆಪದೆ ಕೈ ಕೊಡುವ ಸ್ಕೂಟಿಯನ್ನು ಮಾರಿದ ಉಗ್ರಪ್ಪ ಮಗಳಿಗೆ ಹೊಸ ಕಂಪನಿಯ ಕೆಂಬಣ್ಣದ ಸ್ಕೂಟಿ ಕೊಡಿಸಿದ. ತನ್ನ ಮಗಳು ನಡೆದು ಬರುವುದರಿಂದ ತನಗಾಗುವ ಅಪಮಾನಕ್ಕಿಂತ ಅವಳಿಗಾಗುವ ನೋವೇ ಆತನನ್ನು ಕಂಗೆಡಿಸಿದ್ದರಿಂದ ಹೊಸ ಸ್ಕೂಟಿಯನ್ನೇ ಮನೆಯ ಮುಂದೆ ತಂದು ನಿಲ್ಲಿಸಿ ಮಗಳ ಮೋರೆ ಅರಳುವುದನ್ನೇ ನೋಡಲು ಕಾದ. ಮೋರೆ ಅರಳಲಿಲ್ಲ!

‘ನಾನೆಲ್ಲಿ ಹೊಸದು ತರೋಕೆ ಹೇಳಿದ್ದೆ. ನಿಮಗೆ ದುಡ್ಡು ಹೆಚ್ಚಾದಂಗೆ ಕಾಣ್ತದೆ’ ಎಂದು ಮುನಿದಳು ಚಿನ್ನು.

‘ನಿನಗಿಂತ ದುಡ್ಡು ಹೆಚ್ಚೇನುಬಿಡವ್ವ’ ಭರಮಪ್ಪ ಮೀಸೆ ತೀಡಿದ.

‘ನನಗೆ ಸ್ಕೂಟಿ ಬ್ಯಾಡ ಕಣ್ ತಾತ, ಸೈಕಲ್ ಕೊಡಿಸಿ ಅದೇ ಬೆಸ್ಟು’ ಅಂದಳು ಚಿನ್ನು, ಕ್ಷಣ ಮನೆಯವರಲ್ಲದೆ, ಹೆಣ್ಣಾಳು ಗಂಡಾಳುಗಳೂ ಗರಬಡಿದವರಂತಾದರು.

‘ಛೇ… ಛೇ ತೆಗೆಯವ್ವ, ನೀನು ಜುಜುಬಿ ಸೈಕಲ್ ಕೇಳೋದೆ. ಕಾರಲ್ಲಿ ಹೋಯ್ತಿಯಾ? ಕೇಳು. ಒಂದು ಹೊಸದ್ನೆ ತಂದ್ರಾತು… ಏನ್ಲಾ ಮೈಲಾರಿ?’ ತಾತ ಹುಬ್ಬು ಎಗರಿಸಿದ.

‘ನಾನೆ ದಿನಾ ಬೇಕಾರೆ ಕಾಲೇಜಿಗೆ ಬಿಟ್ಟು ಬರ್ತಿನಿ ಕರ್‍ಕೊಂಡೂ ಬರ್ತಿನಿ’ ಮೈಲಾರಿ ಇಷ್ಟಗಲ ನಕ್ಕ. ಹೆಚ್ಚು ಕ್ಯಾತೆ ಮಾಡಿದರೆ ಕಾರೆಂಬ ಪಂಜರ ತಂದುಬಿಟ್ಟಾರೆಂದು ಅಳುಕಿದ ಚಿನ್ನು,

‘ಕಾರು ಈಗ್ಲೆ ಬೇಡ… ಇದೆ ಇರ್‍ಲಿ ಬಿಡಿ’ ಅಂದು ರಾಜಿಯಾದಳು.

ಆವತ್ತು ಕಾಳಿಕಾಂಬ ಆಲಯದ ಮೆಟ್ಟಿಲಲ್ಲಿ ಕೂತು ಮನಬಿಚ್ಚಿ ಮಾತನಾಡಿದ ಮೇಲಂತೂ ಚಿನ್ನು ರಂಗನನ್ನು ಮತ್ತಷ್ಟು ಹಚ್ಚಿಕೊಂಡಳು. ಅವರಿಬ್ಬರೂ ಜೀವದ ಗೆಳೆಯರಂತೇ ಅಡ್ಡಾಡಿದರು. ಇದೆಲ್ಲಾ ನುಂಗಲಾರದ ತುತ್ತಾಗಿದ್ದು ಮಾತ್ರ ಸಂಗ್ರಾಮನೆಂಬ ಸಿಂಹನಿಗೆ. ತಾನೆಂತಹ ರಾಜಕೀಯ ಧುರೀಣನ ಮಗನಾದರೇನು ಕೋಟಿಗಟ್ಟಲೆ ಗಳಿಸಿದ್ದರೇನು ಎಲಕ್ಷನ್‌ನಲ್ಲಿ ಗೆದ್ದರೇನು? ಚಿನ್ನುವಿನ ಮುಂದೆ ಅವೆಲ್ಲಾ ತೃಣ ಸಮಾನವೆಂದು ಅನ್ನಿಸಿದ್ದೂ ಪ್ರೇಮದ ಮಹಿಮೆಯೆ. ಏಕಮುಖ ಪ್ರೀತಿ ಹಿಡಿಯಿಲ್ಲದ ಕತ್ತಿಯಂತೆ, ಹಾಲಿಲ್ಲದ ಕೆಚ್ಚಲಿನಂತೆ, ಜಲವಿಲ್ಲದ ಬಾವಿಯಂತೆ, ದೃಷ್ಟಿಯಿಲ್ಲದ ಕಂಗಳಂತೆ ಸುವಾಸನೆ ಬೀರದ ಹೂವಿನಂತೆ ವ್ಯರ್ಥ. ಇದ್ದೂ ಇಲ್ಲದಂತಹ ಮಾಯೆಯ ಬಲೆಗೆ ಬೀಳೋದೂ ದುರ್ಬಲತೆ ಎಂದು ಅವನ ಸ್ನೇಹಿತರು ಕೂರಿಸಿಕೊಂಡು ಬುದ್ದಿ ಹೇಳಿದರು. ಅವನ ಅಂದ ಚೆಂದ ಸಿರಿವಂತಿಕೆಗೆ ಮರುಳಾಗುವ ಹುಡುಗಿಯರೂ ಕಾಲೇಜಿನಲ್ಲಿ ಇಲ್ಲದಿರಲಿಲ್ಲ. ಆದರೆ ಸಂಗ್ರಾಮನಿಗೆ ಭವಾನಿಯೇ ಬೇಕು. ಚಿನ್ನು ಅಲಿಯಾಸ್ ಭವಾನಿ ರಂಗರ ಒಡನಾಟ ಹೆಚ್ಚಿದಂತೆಲ್ಲಾ ಸಂಗ್ರಾಮ ಮಂಕಾದ. ಪಾಠ ಪ್ರವಚನಗಳಲ್ಲಿ ಆಸಕ್ತಿ ಕಳೆದುಕೊಂಡ. ಜಾಲಿ ದಿನಗಳು ಖಾಲಿ ಖಾಲಿಯಾದಂತೆ ತೋರುವಾಗ ಅವನನ್ನೇ ತಮ್ಮ ಖರ್ಚಿಗೆಲ್ಲಾ ನಂಬಿಕೊಂಡಿದ್ದ ಚೇಲಾಗಳೂ ಚಿಂತಾಕ್ರಾಂತರಾದರು. ಸಿಗಲಿಲ್ಲವೆಂದು ಖಾತರಿಯಾದರೂ ಸಿಕ್ಕಲಾರದ್ದನ್ನು ದಕ್ಕಿಸಿಕೊಳ್ಳೋದೇ ಸಾಹಸವಲ್ಲವೆ ಎಂದಾಲೋಚಿಸಿ ಸಾವದಾನ ಭೇದ ದಂಡ ಯಾವ ಮಾರ್ಗವಾದರೂ ‘ಸೈ’ ಚಿನ್ನು ತನ್ನವಳಾಗಬೇಕೆಂದು ಪಣತೊಟ್ಟ ಸಂಗ್ರಾಮ.

ಹೊಸ ಸ್ಕೂಟಿಯೂ ಆಗೀಗ ಕೆಡುತ್ತಿತ್ತು. ರಸ್ತೆಯ ಮಧ್ಯೆಯೇ ನಿಲ್ಲಿಸಿ ಬರುವ ಚಿನ್ನು, ಬರುಬರುತ್ತಾ ಮನೆಯವರ ಪಾಲಿಗೆ ಸಮಸ್ಯೆಯಾದಳು. ರಂಗ ಯಾವುದೂ ಅತಿಯಾಗಬಾರದು ಎಂದು ಎಷ್ಟೇ ತಿಳಿ ಹೇಳಿದರೂ ಅವನೊಂದಿಗೆ ‘ಡಬ್ಬಲ್ ರೈಡ್’ ಬರಲೆಂದೇ ಸ್ಕೂಟಿ ರಿಪೇರಿಗೆ ಬಾರದಂತೆ ಕೆಡಿಸುವ ಅವಳ ತಂತ್ರ ದಿನಗಳೆದಂತೆ ತಲೆನೋವೆನಿಸಿದರೂ ಪೂರಾ ನಿರಾಕರಿಸುವ ದೃಢ ಮನಸ್ಸೂ ಅವನದಾಗಿರಲಿಲ್ಲ. ಹೀಗೆ ಮೈಮರೆತಿರುವಾಗಲೇ ಹಳ್ಳಿಯ ಅವರಿವರ ಕಣ್ಣಿಗೆ ಗ್ರಾಸವಾದರು. ಅಂತೆಯೇ ಪದೆಪದೆ ಕೈಕೊಡುವ ಸ್ಕೂಟಿಯ ಹಿಂದಿನ ರಹಸ್ಯದ ಬಗ್ಗೆ ಮೊದಲು ಅನುಮಾನಿಸಿದವನು ಮೈಲಾರಿ, ಅನುಮಾನ ಉಂಟಾದ ಮೇಲೆ ಸುಮ್ಮನೆ ಕೂರುವ ಜಾಯಮಾನ ಅವನದ್ದಲ್ಲ. ಅನುಮಾನ ನಿಜವಾದರೆ ಅದರ ಅಂತ್ಯ ಕಾಣಿಸುವವರೆಗೂ ನಿದ್ರೆ ಮಾಡದವನು. ಅನುಮಾನ ಒಂದು ಪಕ್ಷ ಹುಟ್ಟಡಗಿಸುವುದೇ ಅದಕ್ಕೆ ತಕ್ಕ ಪರಿಹಾರವೆಂದು ನಂಬಿದವನು. ಚಿಕ್ಕ ಮಕ್ಕಳಿಂದ ರಂಗ ಮತ್ತು ಚಿನ್ನುವಿನ ಡಬ್ಬಲ್‌ರೈಡ್ ಬಗ್ಗೆ ವರದಿ ತರಿಸಿಕೊಂಡ. ಮಕ್ಕಳಿಗೆ ತಾರತಿಗಡಿ ಮನಸ್ಸಿರೋದಿಲ್ಲ. ನೋಡಿದ್ದಕ್ಕೆ ಉಪ್ಪುಕಾರ ಹಚ್ಚಿ ಹೇಳುವಷ್ಟು ಕುತೂಹಲವಾಗಲಿ ಧೈರ್ಯವಾಗಲಿ ಅವಕ್ಕೆಲ್ಲಿಯದು? ಮಕ್ಕಳ ಮಾತೆಂದು ಕಡೆಗಾಣಿಸದಿರಲು ಅವನ ಮನ ಒಪ್ಪಲಿಲ್ಲ. ಈ ವಿಷಯ ದೊಡ್ಡವರಿಗೂ ತಿಳಿದಿರಲೇಬೇಕು. ಯಾಕೆ ತಮಗೆ ತಿಳಿಸದೆ ಹೋದರೆಂಬ ಅನುಮಾನ, ಅಸಹನೆಯನ್ನು ಅವನಲ್ಲಿ ಹುಟ್ಟಿಹಾಕಿತು. ತಮ್ಮ ಮನೆತನಕ್ಕೆ ಅಪಖ್ಯಾತಿ ಬರಲೆಂದೇ ಎಲ್ಲರೂ ಒಟ್ಟಾಗುತ್ತಿದ್ದಾರೆ ಎಂಬ ಆಲೋಚನೆಯೇ ಅವನನ್ನು ಮತ್ತಷ್ಟು ಕೆರಳಿಸಿತು. ಆದರೂ ಮನೆಮಂದಿಗೆಲ್ಲಾ ಡಂಗೂರ ಹೊಡೆಯುವಷ್ಟು ದೊಡ್ಡ ಸುದ್ದಿಯೇನಲ್ಲ. ಇದಕ್ಕೆ ತಾನು ಕೊಡುವ ತಿರುಗೇಟಿನಿಂದ ಇಡೀ ಹಳ್ಳಿಯೇ ಬುದ್ದಿ ಕಲಿಯಬೇಕು ಎಂಬ ನಿರ್ಧಾರಕ್ಕೆ ಬಂದ. ಚಿನ್ನು ಮತ್ತು ರಂಗನ ಮೇಲೆ ನಿಗಾಯಿಟ್ಟ. ಬಹಳ ದಿನವೇನು ತ್ರಾಸಪಡಲಿಲ್ಲ. ಎಂದಿನಂತೆ ಒಂದುದಿನ ಸ್ಕೂಟಿ ಅರ್ಧ ದಾರಿಯಲ್ಲಿ ಏದುಸಿರು ಬಿಡುತ್ತಾ ನಿಂತಿತ್ತು. ಹಿಂದೆಯೇ ಬಂದ ರಂಗ ಅವಳ ವರ್ತನೆಯ ಬಗ್ಗೆ ಮುನಿದ. ಅವಳೊಂದಿಗೆ ಸೈಕಲ್ ಏರಿದ. ‘ಇದೆಲ್ಲಾ ಸರಿಯಲ್ಲ ಭವಾನಿ’ ಅಂದ. ‘ಇದೇ ಸರಿ’ ಅಂದಳು, ಮುಂದೆ ಸಾಗಿತು ಸೈಕಲ್ಲು. ಜೀಪ್ ಬಂದು ರಸ್ತೆಗೆ ಅಡ್ಡಡ್ಡ ನಿಂತಿತ್ತು. ರಂಗ ಬೆಲ್ ಬಾರಿಸಿದ. ಮೈಲಾರಿ ಸಮೇತ ಐದಾರು ಧಾಂಡಿಗರು ಜೀಪ್‌ನಿಂದ ಧುಮುಕಿದರು. ಏನು ಎತ್ತ ಕೇಳಲೇಯಿಲ್ಲ ರಂಗನ ಮೇಲೆ ಹಲ್ಲೆಗಿಳಿದರು. ಅವರ ಲಾಂಗು ಮಚ್ಚುಗಳಿಂದ ತಪ್ಪಿಸಿಕೊಳ್ಳುತ್ತಾ ರಂಗ, ಹೊಡೆದಾಟಕ್ಕೆ ಪ್ರತಿ ಏಟು ನೀಡುತ್ತಾ ಮಧ್ಯೆಮಧ್ಯೆ ‘ಪ್ಲೀಸ್ ನನ್ನ ಮಾತು ಕೇಳಿ’ ಎಂದೂ ಅಂಗಲಾಚಿದ. ‘ಚಿಗಪ್ಪಾ, ಇದರಲ್ಲಿ ರಂಗನದೇನೂ ತಪ್ಪಿಲ್ಲ ನೀವು ದಂಡಿಸಬೇಕಾದ್ದು ನನ್ನನ್ನು ಆಗಾಗ ಅಡ್ಡ ಹಾಕಿದ ಚಿನ್ನು ಚೀರಾಡಿದಳಾದರೂ ಅವಳ ಚೀರಾಟಕ್ಕಾಗಲಿ ಅಳುವಿಗಾಗಲಿ ರಂಗನ ಮಾತಿಗಾಗಲಿ ಯಾರೂ ಕಿವಿಗೊಡಲಿಲ್ಲ. ಎದುರುಗಿದ್ದ ಕಾಳಿಕಾಂಬ ಆಲಯದತ್ತ ಕೈ ಮುಗಿದು ‘ನೀನೇ ಕಾಪಾಡವ್ವ ತಾಯಿ’ ಎಂದು ಚಿನ್ನು ದೀನಳಾದಳು. ರಂಗ ಮೊದಲು ರಕ್ಷಣಾತ್ಮಕ ಆಟವಾಡಿದರೂ ಅವರು ತನ್ನನ್ನು ಮುಗಿಸಲೆಂದೇ ಧಾಳಿಗಿಳಿದಿದ್ದಾರೆಂದು ಅರಿವಾಗುತ್ತಲೇ ನಿರ್ದಾಕ್ಷಿಣ್ಯವಾಗಿ ಹಿಡಿದಿಡಿದು ಒಬ್ಬೊಬ್ಬರ ಮೊರೆಮುಸುಡಿ ಬದಲಾಗುವಂತೆ ಮುಷ್ಟಿ ಕಟ್ಟಿ ಗುದ್ದಿದ. ಏರಿ ಬಂದವರ ಕೈಕಾಲುಗಳ ಕೀಲುಮುರಿದ. ಅನೇಕರು ನೆಲಕ್ಕುರುಳಿದರು. ಮೈಲಾರಿ ಸೇಡಿನ ಕಿಡಿಯಾಗಿದ್ದ ಉಸಿರು ತಿರುಗಿಸಿಕೊಳ್ಳಲೂ ಸಮಯ ನೀಡದೆ ರಂಗನನ್ನು ಈಡಾಡಿದ. ತನ್ನವರೆಲ್ಲಾ ಮೇಲೆ ಏಳಲಾರದಷ್ಟು ನೆಲಕಚ್ಚಿದ್ದು ಅವನ ಬಿಸಿ ಏರಿಸಿತ್ತು. ಚಿನ್ನು ಅಳುತ್ತಾ ‘ಪ್ಲೀಸ್ ನಿಲ್ಲಿಸಿ… ಸಾಕು, ನನ್ನ ಮಾತು ಕೇಳಿ’ ಎಂದು ಅವರ ಬಳಿ ಪರದಾಡಹತ್ತಿದಳು. ರಂಗ ಎತ್ತಿ ಮೈಲಾರಿಯನ್ನು ಎಸೆದ ರಭಸಕ್ಕೆ ಮೈಲಾರಿ ನೆಲಕ್ಕೆ ಬೀಳುವ ಕ್ಷಣದಲ್ಲಿ ದೇವಿ ಆಲಯದ ಬಯಲಲ್ಲಿ ಸಿಕ್ಕಿಸಿದ್ದ ತ್ರಿಶೂಲದ ಮೇಲೆ ದೊಪ್ಪನೆ ಬಿದ್ದ ತೋಳಿನಲ್ಲಿ ನೆಟ್ಟಿಕೊಂಡ ತ್ರಿಶೂಲ ಈಚೆ ಬಂತು. ಚಿಟನೆ ಚೀರಿದ ನೋವಿನಿಂದ ಮೈಲಾರಿ, ರಕ್ತ ಬುಳುಬುಳು ಹರಿಯಿತು. ತೋಳು ಬಿಡಿಸಿಕೊಳ್ಳಲಾಗದೆ ನರಳಾಡುತ್ತಿದ್ದ ಅವನ ಪರಿ ನೋಡಿ ರಂಗನಿಗೇ ಭಯವಾಯಿತು. ರಕ್ತ ಚಿಮ್ಮುವಾಗ ಕ್ಷಣ ಅವಕ್ಕಾಗಿ ನಿಂತುಬಿಟ್ಟ. ‘ಇದೇನ್ ಮಾಡಿದ್ಯೋ ರಂಗ’ ಎಂದು ಗಾಬರಿಗೊಂಡ ಚಿನ್ನು ಅವನನ್ನು ಜೋರಾಗಿ ಅಲುಗಾಡಿಸಿದಳು. ಇಂಥ ಸಮಯದಲ್ಲಿ ಎದೆಗುಂದಬಾರದೆಂದು ನಿರ್ಧರಿಸಿದ ಅವನು, ‘ಹೆದರೇಡ ಭವಾನಿ. ನಾನೀಗ್ಲೆ ಮೈಲಾರಿಯವರನ್ನ ಸಿಟಿ ಆಸ್ಪತ್ರೆಗೆ ಕರ್‍ಕೊಂಡು ಹೋಗ್ತೇನೆ’ ಅಂದವನೇ ಜೀಪ್ ಮೈಲಾರಿ ಬಳಿ ತರುವಷ್ಟರಲ್ಲಿ ಮೈಲಾರಿ ಪ್ರಜ್ಞಾಹೀನನಾಗಿದ್ದ. ರಂಗ ತನ್ನ ಜುಬ್ಬ ಹರಿದು ಹೆಚ್ಚು ರಕ್ತ ಹೋಗದಂತೆ ಮೈಲಾರಿ ತೋಳಿಗೆ ಬಿಗಿದು ಅವನನ್ನು ಎತ್ತಿ ಜೀಪ್‌ನಲ್ಲಿ ಹಾಕಿದ. ‘ನೀನು ಮನೆಯವರಿಗೆ ವಿಷಯ ತಿಳಿಸು… ಓಡು’ ಎಂದು ಜೀಪ್ ಅನ್ನು ಸಿಟಿಯತ್ತ ವೇಗವಾಗಿ ಓಡಿಸಿದ. ಚಿನ್ನು ದಿಕ್ಕೆಟ್ಟವಳಂತೆ ಓಡುವಾಗ ಏಟು ತಿಂದ ಧಾಂಡಿಗರೂ ಕುಂಟುತ್ತಾ ತೆವಳುತ್ತಾ ಹಿಂಬಾಲಿಸಿದರು.
ಮನೆಗೆ ಬಂದು ಅಳುತ್ತಳುತ್ತಲೇ ಚಿನ್ನು ವಿಷಯ ತಿಳಿಸಿದಾಗ ಉಗ್ರಪ್ಪ ಭರಮಪ್ಪ ಮನೆ ಹೆಣ್ಣು ಮಕ್ಕಳು ಕ್ಷಣ ದಿಗ್ಗಾಂತರಾದರು. ‘ಅವನು ಇವನು ಯಾಕೆ ಹೊಡೆದಾಡಿದರು ಮಗಳೆ?’ ಉಗ್ರಪ್ಪ ವ್ಯಗ್ರನಾದ. ಏನು ಹೇಳಿದರೆ ಏನೋ ಎಂಬ ಭಯದಲ್ಲೂ ಚಿನ್ನು ಸತ್ಯವನ್ನೇ ಹೇಳಿದಳು. ‘ಅಪ್ಪಾಜಿ, ನನ್ನ ಸ್ಕೂಟಿ ಕೆಟ್ಟಿತ್ತು. ನಡ್ಕೊಂಡು ಬರೋಕೆ ಅಸಾಧ್ಯವಾದ ಬಿಸಿಲು… ದೂರ. ಅದಕ್ಕೆ ರಂಗನ್ನ ‘ಲಿಫ್ಟ್’ ಕೊಡು ಪ್ಲೀಸ್ ಅಂತ ನಾನೇ ಕೇಳಿಕೊಂಡೆ. ಅವನು ಬೇಡ ನಿಮ್ಮ ಮನೆಯವರಿಗೆ ಗೊತ್ತಾದರೆ ನನಗೆ ತೊಂದ್ರೆ ಆಗುತ್ತೆ ಅಂದ. ನಾನೆಲ್ಲಾ ಹೇಳ್ತೀನಿ ಬಿಡೋ ಅಂದೆ. ಇಬ್ಬರೂ ಸೈಕಲ್ ಮೇಲೆ ಬರ್ತಿರೋದು ನೋಡಿ ಚಿಗಪ್ಪ ಅವರ ಕಡೆಯೋರು…’ ಮುಂದೆ ಹೇಳಲಾರದೆ ಬಿಕ್ಕುತ್ತಿರುವಾಗಲೆ ಹೊಡೆತ ತಿಂದು ಹಣ್ಣಾದ ಧಾಂಡಿಗರೂ ಬಂದರು. ಚಿನ್ನಮ್ಮ ಕೆಂಚಮ್ಮಗೆ ಕೈಕಾಲೇ ಆಡಲಿಲ್ಲ. ‘ಸರಿಸರಿ ನಡೀರಿ ಹೋಗೊಣ ಸಿಟಿಗೆ’ ಮನೆಮಂದಿಯೆಲ್ಲಾ ಹೊರಟರು. ಕಾರು ಹತ್ತಲು ಬಂದ ಮಗಳನ್ನು ಉಗ್ರಪ್ಪ, ‘ನೀಯಾಕೆ ಬರ್ತಿ ಮಗಾ… ಅಂತಂತಾವ್ಕೆಲ್ಲಾ ಬರಬಾರು ನಾವ್ ಹೋಗಿ ಬರ್ತಿವಿ’ ಅಂದು ತಡೆದ. ಅವಳಿಗೆ ಮಾತನಾಡಲೂ ಉಸಿರಿರಲಿಲ್ಲ. ಸುಮ್ಮನೆ ತಲೆಯಾಡಿಸಿದಳು. ಸ್ಕೂಟಿ ಪದೆಪದೆ ಕೆಡುತ್ತಿದ್ದು ಯಾಕೆಂಬ ಗುಟ್ಟು ರಟ್ಟಾಗಿತ್ತು. ರಂಗ ಮತ್ತು ಇವಳ ಡಬ್ಬಲ್ ರೈಡ್ ಈವತ್ತೇ ಮೊದಲಿನದಿರಲಿಕ್ಕಿಲ್ಲ. ಕಾರು ಓಡಿಸುತ್ತಲೇ ಉಗ್ರಪ್ಪ ಅಂದಾಜು ಮಾಡಿದ.

ಆಸ್ಪತ್ರೆಯ ಆಪರೇಷನ್ ಥಿಯೇಟರಿನಲ್ಲಿ ಆಪರೇಷನ್ ನಡೆಯುತ್ತಿರುವ ವಿಷಯವನ್ನು ಡಾಕ್ಟರ್‌, ಉಗ್ರಪ್ಪ ಮತ್ತು ಭರಮಪ್ಪನವರಿಗೆ ತಿಳಿಸಿದರು. ರಾಜಕೀಯವಾಗಿ ತುಂಬಾ ಪ್ರಭಾವಿಗಳಾದ ಅವರಿಗೆ ಡಾಕ್ಟರ್ ಹಾಗೂ ಆಸ್ಪತ್ರೆ ಸಿಬ್ಬಂದಿ ಹೆಚ್ಚೇ ಗೌರವ ತೋರಿದರು. ‘ನಮ್ಮ ಹುಡುಗನ್ನ ಕರ್‍ಕೊಂಡು ಬಂದು ಸೇರಿಸಿದ ಅವನೆಲ್ಲಿ?’ ಉಗ್ರಪ್ಪ ಅವುಡುಗಚ್ಚಿದ. ‘ಆತ ನಿಮ್ಮ ಊರಿನವನೇ ಸಾರ್‌. ರಂಗ ಅಂತ ಕಾಲೇಜ್ ಸ್ಟೂಡೆಂಟ್.
ಸರಿಯಾದ ಸಮಯಕ್ಕೆ ಆ ಹುಡುಗ ಕರ್‍ಕೊಂಡು ಬಂದು ಸೇರಿಸದೇ ಹೋಗಿದ್ದರೆ ಮೈಲಾರಿಯವರ ಪ್ರಾಣ ಉಳಿಸುವ ಸಲುವಾಗಿ ಅವರ ಬಲಗೈ ತೆಗೆಯಬೇಕಾಗುತ್ತಿತ್ತು’ ಡಾಕ್ಟರ್ ನಿಡುಸುಯ್ದರು.

‘ಈಗ ಅವರ ಕೈಗೆ ಅಪಾಯವೇನಿಲ್ಲ ತಾನೆ ಡಾಕ್ಟರ್?’ ಬಡಬಡಿಸಿದಳು ಕೆಂಚಮ್ಮ.

‘ಇಲ್ಲಮ್ಮ ಗಾಡ್ ಈಸ್ ಗ್ರೇಟ್’ ಡಾಕ್ಟರು ನಿರಾತಂಕ ನಗೆ ಚೆಲ್ಲಿದರು.

‘ಅದ್ದರಿ, ಅವನೆಲ್ಲಿ ಡಾಕ್ಟರ್… ಆ ರಂಗ?’ ಹಲ್ಲುಮಸೆದರು ಭರಮಪ್ಪ.

‘ಅವನು ಮೈಲಾರಿ ಅವರಿಗೆ ರಕ್ತ ಕೊಡ್ತಿದಾನೆ, ಏಟು ಬಿದ್ದು ತುಂಬಾ ರಕ್ತ ಹೋಗಿತ್ತು… ನೀವೇನು ಭಯಪಡಬೇಕಾದ್ದಿಲ್ಲ. ಬೇಗ ಮೊದಲಿನಂತಾಗ್ತಾರೆ’ ಡಾಕ್ಟರ್ ಮಾತಿನಿಂದ ಚಿನ್ನಮ್ಮ ಕೆಂಚಮ್ಮರ ಮುಖ ಅರಳಿತು.

‘ಎಲ್ಲಾ ನಿಮ್ಮ ದಯೆ ಸಾರ್?’ ಭರಮಪ್ಪ ಕೈ ಜೋಡಿಸಿ ಕಣ್ಣೀರಾದರು.

‘ಇದರಲ್ಲಿ ವೈದ್ಯನಾಗಿ ನನ್ನ ಕರ್ತವ್ಯ ಮಾಡಿದೀನಿ ಸಾರ್. ಆದರೆ ಆ ಹುಡುಗ ರಂಗ ತುಂಬಾ ಜಂಟ್ಲ್‌ಮೆನ್, ನೀವು ಅವನಿಗೆ ಥ್ಯಾಂಕ್ಸ್ ಹೇಳಬೇಕು… ಅವನ ಸಮಯಪ್ರಜ್ಞೆ ದಿಟ್ಟತನ ತಕ್ಷಣ ರಕ್ತ ಕೊಡಲು ಮುಂದಾದ ಔದಾರ್ಯ ಹುಡುಗರಿಗೆ ಖಂಡಿತ ಅವನು ಆದರ್ಶ…’ ಉಗ್ರಪ್ಪನಂತೂ ರಂಗನ ಹೆಸರು ಪದೆ ಪದೆ ಕಿವಿಗೆ ಬೀಳುವಾಗ ಕೊತಕೊತನೆ ಕುದಿದ.

‘ಎಂಎಲ್‌ಸಿ ಕೇಸ್ ಬುಕ್ ಮಾಡಿ ಸ್ವಾಮಿ’ ಉರಿದುಬಿದ್ದ ಉಗ್ರಪ್ಪ, ಭರಮಪ್ಪ ಕ್ಷಣ ಯೋಚಿಸಿ ಅಂದರು ‘ಅದೆಲ್ಲಾ ಏನೂ ಬ್ಯಾಡ ಡಾಕ್ಟರಪ್ಪ, ಸದ್ಯ ಜೀವಕ್ಕೇನು ಅಪಾಯವಿಲ್ಲ. ಕೈನೂ ಉಳಿದೇತೆ. ಇನ್ನು ಕೋರ್ಟು ಕೇಸು ಅಂತೆಲ್ಲಾ ಯಾಕೆ ಬಿಡಿ’ ಭರಮಪ್ಪ ಹೇಳಿ ಮುಗಿಸುವಾಗಲೇ ರಕ್ತಕೊಟ್ಟು ಈಚೆ ಬಂದ ರಂಗ ಇವರನ್ನು ಕಂಡು ಕ್ಷಣ ವಿಚಲಿತನಾದರೂ ಚೇತರಿಸಿಕೊಂಡ. ‘ಇವನೇ ಸಾರ್, ಆ ಹುಡುಗ, ಇವನಿಗೆ ನೀವು ಥ್ಯಾಂಕ್ಸ್ ಹೇಳಬೇಕು’ ಡಾಕ್ಟರ್ ಮಾತು ಮುಗಿಯುವ ಮೊದಲೇ ಉಗ್ರಪ್ಪ, ‘ಬೋಳಿಮಗನೆ… ನಿನ್ನಾ’ ಎಂದು ಮುನ್ನುಗ್ಗಿ ರಂಗನ ಕಾಲರ್ ಹಿಡಿದು ಬಾರಿಸಲು ಕೈ ಎತ್ತಿದ ಭರಮಪ್ಪನವರೇ ಅಡ್ಡ ಬಂದು ತಮ್ಮ ಮೈನ ಶಕ್ತಿಯನ್ನೆಲ್ಲಾ ಒಟ್ಟಾಗಿಸಿ ರಂಗನನ್ನು ಉಗ್ರನಿಂದ ಪಾರು ಮಾಡಿದರು. ‘ಏಯ್ ಉಗ್ರ, ಎಲ್ಲಿ ಹೆಂಗೆ ಇರ್ಬೇಕು ಅಂತ್ಲೆ ತಿಳಿವಳಿಕೆ ಇಲ್ಲಲ್ಲಲೆ? ಬರಿ ಬಡಿ ಕಡಿ ಹೊಡಿ ಇದೇ ಆಗೋತು’ ಬೇಸರಗೊಂಡರು. ‘ಇವನೆ… ಇವನೆ ಸಾರ್ ನಮ್ಮ ಮೈಲಾರಿಯ ಈ ಸ್ಥಿತಿಗೆ ಕಾರಣ… ಒಳಾಗ್ ಹಾಕ್ಸಿ ಸಾ ಇವನ್ನ’ ಉಗ್ರಪ್ಪ ನಿಂತಲ್ಲೇ ಎಗರಾಡಿದ.

‘ಯಾಕೆ…?’ ಡಾಕ್ಟರ್‌ಗೆ ದಿಗ್ಭ್ರಾಂತಿ.

‘ಇವನೇ ಹೊಡೆದು ಅನಾಹುತ ಮಾಡಿರೋ ಬೇಕೂಪ’

‘ಯಾಕೆ… ಯಾಕೆ ಹೊಡೆದಾಟವಾಯ್ತು?’ ಡಾಕ್ಟರ್ ಒಮ್ಮೆ ರಂಗನ್ನ ಮತ್ತೊಮ್ಮೆ ಉಗ್ರಪ್ಪನ ಮೋರೆಯತ್ತ ನೋಡಿದರು.

‘ಅದು ಬುಡಿ ಸಾರೂ… ಅದನ್ನ ನಾವ್ ನೋಡ್ಕೊಂತೀವಿ. ಎಂಎಲ್‌ಸಿ ಪಂಎಲ್‌ಸಿ ಏನೂ ಬೇಕಾಗಿಲ್ಲ’ ಎಂದು ಮತ್ತೊಮ್ಮೆ ಡಾಕ್ಟರಿಗೆ ತಾಕೀತು ಮಾಡಿದ ತಾತ,

‘ಅಲೆ ತಮ್ಮಾ ನೀನಿಲ್ಲಿಂದ ಹೊಂಟೋಗು’ ಸೀಳುದನಿ ಹೊರಡಿಸಿದರು.

‘ಇದರಲ್ಲಿ ನನ್ನ ತಪ್ಪೇನಿಲ್ಲ ಸಾರ್‌. ಹೊಡೆಯೋಕೆ ಬಂದ… ಹೊಡ್ದ. ನಾನೂ ಹೊಡ್ದೆ. ಅವನೇ ಹೋಗಿ ತ್ರಿಶೂಲದ ಮೇಲೆ ಬಿದ್ದ. ತೋಳಿಗೆ ಏಟು ಬಿತ್ತು’ ರಂಗ ಹೇಳುತ್ತಿದ್ದ.

‘ಸಾಕು ನಡೆಯಲೆ ಬದ್ಮಾಷ್, ಹೋಗು ಅಂದ್ರೆ ಸುಮ್ಮೆ ಹೊಂಟೋಗುತಿರ್‍ಬೇಕ್’ ಅಬ್ಬರಿಸಿದರು ಭರಮಪ್ಪ, ರಂಗ ವಿಷಾದದ ನಗೆ ಚೆಲ್ಲಿ ಹೊರಟುಹೋದ.

‘ನೀವು ರಿಲ್ಯಾಕ್ಸ್ ಮಾಡಿ ಸಾರ್. ಈಗ ಪೇಷಂಟ್ನ ವಾರ್ಡ್‌ಗೆ ಶಿಫ್ಟ್ ಮಾಡ್ತೀವಿ… ನೋಡುವಿರಂತೆ… ನಥಿಂಗ್ ಟು ವರಿ’ ಅಂದ ಡಾಕ್ಟರ್ ಓಟಿಯತ್ತ ನಡೆದರು. ಬೆಂಚಿನ ಮೇಲೆ ಎಲ್ಲಾ ಕೂತರೂ, ಉಗ್ರಪ್ಪ ಕೂರಲಾರ ನಿಲ್ಲಲಾರ. ಅವನಲ್ಲಿ ಹೆಪ್ಪುಗಟ್ಟಿದ್ದ ರೋಷವೆಲ್ಲಾ ಬೆವರಾಗಿ ಹರಿಯುತ್ತಿತ್ತು. ಅವನದನ್ನು ವರೆಸಿಕೊಳ್ಳುವ ಗೊಡವೆಗೂ ಹೋಗಲಿಲ್ಲ. ‘ಅಪ್ಪಾ… ಎಂಥ ಕೆಲ್ಸ ಮಾಡ್ದೆ ನೀನು… ರಂಗನ ಮೇಲೆ ಮರ್ಡರ್ ಅಟೆಂಪ್ಟ್ ಕೇಸ್ ಬುಕ್ ಮಾಡ್ಸಿ ಜೈಲಿಗೆ ಕಳಿಸೋಣ ಅಂದ್ರೆ ಕಲ್ಲು ಹಾಕಿ ಬಿಟ್ಯಲ್ಲ ನೀನು?’ ಅಂಗಾರಾದ.

‘ಹಿಂದು ಮುಂದು ಯೋಚ್ನೆ ಮಾಡ್ಬೇಕಲೆ ಬೇಕೂಬ್ರಾ, ಇವನು ಅವನು ಹೊಡೆದಾಡಿದ್ರೂ, ಯಾಕೆ ಅಂತ ಕೊಚ್ಚನ್ ಬರ್ತದೆ… ಏನ್ ಹೇಳಿಯಲೆ? ನಮ್ಮ ಹುದ್ಗಿ ಸೈಕಲ್ ಮೇಲೆ ಇವನ ಜೊತೆನಾಗೆ ಬರ್ತಿದ್ಲು ಅದಕ್ಕೆ ಬಡಿದ್ವಿ ಅಂತಿಯಾ? ಆವಾಗ ಹೋಗೋದು ಯಾರ ಮನೆತನದ ಮರ್ಯಾದೆ? ನಮ್ಮ ಹುಡ್ಗಿ ವಿಷಯ ಬೀದಿಗೆ ಬರಾಕಿಲ್ವೆ?’ ಗಟ್ಟಿಸಿ ಕೇಳಿದರು ಭರಮಪ್ಪ.

‘ಬೇರೆ ಏನೇನೋ ಸಬೂಬು ಹೇಳಿದ್ರಾಗೋದು. ನಮ್ಮನ್ನ ಕೇಳೊನ್ ಯಾವಾನು?’

‘ಈಗಾಗ್ಲೆ ಊರ್‍ಗೆಲ್ಲಾ ತಿಳಿದಿರೋ ವಿಷಯಾನಾ, ತಿರುಚಿ ಹೇಳ್ತಿಯೇನ್ಲಾ…? ಆ ಹುಡುಗನ ಅಣ್ಣ ಹೇಳಿಕೇಳಿ ಕ್ರಿಮಿನಲ್ ಲಾಯರಿ ಗೊತ್ತಾ?’

ಅವನೊಬ್ಬನೆಯಾ ಊರಾಗೆ ಲಾಯರ್‌ ಇರೋದು. ನಮ್ಮ ಮನೆಯವರ ಮೇಲೆ ಕೈ ಮಾಡ್ದೋನು ಜೀವಸಹಿತ ಉಳಿದ್ರೆ ಜನಕ್ಕೆ ಸದರ ಆಗೋದಿಲ್ವ ನಾವು?’

‘ಅದಕ್ಕೆಲ್ಲಾ ಟೈಂ ಅದೆ ಕಣಾ, ಏನಾರ ಮಾಡಿದ್ರೆ ಮೊರ ಮುಚ್ಚಿ ಕಲ್ಲು ಏರ್‍ದಂಗೆ ಆಗಬೇಕು… ದುಡುಕಬಾರ್‍ದು. ಸಮಾಧಾನ ತಂದ್ಕೋ. ನಾಯಿ ಹೊಡೆಯೋಕೆ ಬಂದೂಕ ಯಾಕ್ಲಾ’ ಮಗನಿಗೆ ಭರಮಪ್ಪ ಸಮಾಧಾನ ಹೇಳಿದರು. ಮೈಲಾರಿಯನ್ನು ಸ್ಪೆಷಲ್ ವಾರ್ಡ್‌ಗೆ ತಂದು ಮಲಗಿಸಿದರು. ಎಲ್ಲರೂ ಅವನನ್ನು ಮುತ್ತಿಕೊಂಡರು. ಹೆಣ್ಣುಮಕ್ಕಳಿಬ್ಬರೂ ಬುಳುಬುಳು ಅತ್ತರು. ಮೈಲಾರಿ ಕೊಂಚ ಬಳಲಿದ್ದರೂ ಧೃತಿಗೆಟ್ಟಿರಲಿಲ್ಲ. ‘ಅವಳೆಲ್ಲಿ ಚಿನ್ನು…?’ ಮುಗುಳ್ನಗುತ್ತಲೇ ಉಸುರಿದ.

‘ಅವಳಿಂದ್ಲೆ ಹಿಂಗಾದ್ದು. ಮನೆಮಾನ ತೆಗೆದುಬಿಟ್ಳು ಗಯ್ಯಾಳಿ’ ಚಿನ್ನಮ್ಮ ಸೆರಗು ಬಾಯಿಗೆ ಒತ್ತಿ ಹಿಡಿದು ಅತ್ತಳು. ಅಷ್ಟರಲ್ಲಿ ಡಾಕ್ಟರ್‌ ಒಳ ಬಂದರು. ಮೈಲಾರಿ ತೋಳಿಗೆ ಒಂದು ಇಂಜಕ್ಷನ್ ಮಾಡಿದರು. ಮೈಲಾರಿ ಅವರತ್ತ ಧಿಮಾಕಿನಿಂದ ನೋಡಿದ. ‘ನನ್ನ ಕೈ ತೆಗಿಬೇಕಾಗ್ತದೆ ಅಂತಿದ್ದರಲ್ಲ ಡಾಕ್ಟ್ರೆ… ನನ್ನ ಕೈ ತೆಗೆದಿದ್ದರೆ ಆಮೇಲೆ ನಾನು ನಿಮ್ಮ ತಲೆ ತೆಗಿತಿದ್ದೆ…’ ಗಹಗಹಿಸಿದ. ಡಾಕ್ಟರು ತಬ್ಬಿಬ್ಬಾದನ್ನು ಕಂಡು ನಗು ನಿಲ್ಲಿಸಿದ ಮೈಲಾರಿ, ‘ಏನಿವೇ… ಕೈನಾ ಉಳಿಸಿದಿರಿ. ಥ್ಯಾಂಕ್ಸ್’ ಅಂದ.

‘ನೀವು ಥ್ಯಾಂಕ್ಸ್ ಹೇಳಬೇಕಾದ್ದು ನನಗಲ್ಲ. ನನ್ನ ಡ್ಯೂಟಿ ನಾನ್ ಮಾಡಿದೀನಿ. ನಿಮ್ಮನ್ನು ಟೈಮಿಗೆ ಸರಿಯಾಗಿ ಆಸ್ಪತ್ರೆಗೆ ತಂದು ಸೇರಿಸದೆ ಹೋಗಿದ್ದರೆ, ರಕ್ತದ ಅವಶ್ಯಕತೆ ಕಂಡು ಬಂದ ತಕ್ಷಣ ಆ ಹುಡ್ಗ ಕೊಡ್ದೆ ಹೋಗಿದ್ದಿದ್ದರೆ ನಿಮ್ಮ ಪ್ರಾಣಕ್ಕೇ ಅಪಾಯವಿತ್ತು. ವಿವರಿಸಿದರು ಡಾಕ್ಟರ್.

‘ಅದ್ನೆ ಪುರಾಣ ಪದೆಪದೆ ಊದಬ್ಯಾಡ್ರಿ ಹೋಗ್ರತ್ತ’ ಡಾಕ್ಟರ್‌ಗೇ ಗದರಿದ ಉಗ್ರಪ್ಪ. ಆದರೂ ಕುತೂಹಲದಿಂದ ಮತ್ತದನ್ನೇ ಮೈಲಾರಿ ಕೇಳಿದಾಗ ಅಂಜಿದ ಡಾಕ್ಟರ್ ಅಲ್ಲಿಂದ ಕಾಲುಕಿತ್ತರು. ‘ಅವನು ಇನ್ನು ಯಾರೂ ಅಲ್ರಿ… ನೀವು ಯಾರನ್ನ ಕೊಲ್ಲೋಕೆ ಹೋಗಿದ್ರೋ ಅವನೇ… ಆ ರಂಗನೇ ನಿಮ್ಮ ಜೀವ ಉಳಿಸೋನು’ ದಾಕ್ಷಿಣ್ಯ ತೋರದೆ ಅಂದುಬಿಟ್ಟಳು ಕೆಂಚಮ್ಮ. ಒಮ್ಮೆಲೆ ಮೈಲಾರಿ ವ್ಯಗ್ರವಾದ, ಕಟಕಟನೆ ಹಲ್ಲು ಕಡಿದ. ಕಣ್ಣುಗಳು ಕೆಂಡದುಂಡೆಗಳಾದವು. ತನಗೆ ಹಾಕಿರುವ ಡ್ರಿಪ್‌ಸೆಟ್ ಕಿತ್ತು ಬೀಸಿ ಎಸೆದ. ದಿಗ್ಗನೆ ಎದ್ದು ಕುಳಿತ. ‘ನನಗೀ ಜೀವ ಬ್ಯಾಡ. ನನ್ನನ್ನು ಸಾಯಿಸ್ರಿ… ಸಾಯಿಸಿಬಿಡ್ರಿ, ನನ್ನ ಮೈನಲ್ಲಿರೋ ರಕ್ತನೆಲ್ಲಾ ಹೊರ ಹಾಕಿ ಡಾಕ್ಟರ್’ ಅಬ್ಬರಿಸುತ್ತಾ ಮೈಲಾರಿ ಹುಚ್ಚನಂತಾಡುವಾಗ ಮನೆಯವರೆಲ್ಲಾ ತರತರನೆ ನಡುಗಿಹೋದರು. ಅಕ್ಕಪಕ್ಕ ವಾರ್ಡ್‍ನವರು ಓಡಿಬಂದರು. ಮನೆಯವರೆಲ್ಲಾ ಬಿಗಿಯಾಗಿ ಹಿಡಿದರೂ ಅವನ ಅರಚಾಟ ನಿಲ್ಲಲಿಲ್ಲ. ಡಾಕ್ಟರು ನರ್ಸ್‌ಗಳೂ ಓಡಿ ಬಂದರು. ಅವನನ್ನು ಹಿಡಿದು ಇಂಜಕ್ಷನ್ ಕೊಟ್ಟರು. ಅರೆಕ್ಷಣದಲ್ಲೇ ಸ್ತಬ್ಧವಾಗಿ ಹಾಸಿಗೆಯಲ್ಲುರುಳಿದ. ಭರಮಪ್ಪ ಸೊಸೆಯತ್ತ ದುರುಗುಟ್ಟಿ ನೋಡುತ್ತಾ, ‘ಯಾವ ಸಮಯದಾಗೆ ಯಾವ ಮಾತು ಆಡಬೇಕಂತ ನಿನ್ಗೆ ಈಟು ವರ್ಸ ಸಂಸಾರ ಮಾಡಿದ್ರೂ ತಿಳಿಲಿಲ್ಲೇನವ್ವ?’ ಗದರಿಕೊಂಡರು.

‘ಇರೋ ವಿಷಯ ಹೇಳ್ದೆ’ ಗೊಣಗಿಕೊಂಡಳು ಕೆಂಚಮ್ಮ ಅಲಿಯಾಸ್ ಸುಮ.

ದಿನಗಳೆದಂತೆ ಮೈಲಾರಿ ಆಸ್ಪತ್ರೆಯಲ್ಲಿ ಚೇತರಿಸಿದನಾದರೂ ಅವನ ದೇಹದ ಬಗ್ಗೆ, ಜೀವದ ಬಗ್ಗೆ ಅವನಿಗೇ ರೇಸಿಗೆ ಹುಟ್ಟಿತ್ತು. ತಾನೇನೋ ಮಾಡಲು ಹೋಗಿ ತಲೆತಗ್ಗಿಸುವಂತಹ ಪ್ರಸಂಗ ತಂದುಕೊಂಡೆನಲ್ಲ. ಇದರಿಂದ ಪಾರಾಗುವ ಬಗೆ ಹೇಗೆ? ವಿಷಯ ಹಳ್ಳಿಗರಿಗೆ ರಸಕವಳವಾಗದೆ ಇದ್ದೀತೆ ಎಂದು ಕನಲಿದ, ರಂಗನ ಮನೆಯಲ್ಲೂ ಈ ಬಗ್ಗೆ ರಾದ್ದಾಂತವಾಯಿತು. ‘ದೊಡ್ಡ ಹಿರೋ ಇವು, ದೊಡ್ಡ ಮನುಷ್ಯರ ಮನೆ ಹುಡ್ಗೀನ ಲವ್ ಮಾಡೋಕೆ ಹೋಗಿದಾನೆ. ಡಬ್ಬಲ್ ರೈಡ್ ಶೋಕಿ ಬೇರೆ. ಫೈಟಿಂಗ್ ಬೇರೆ, ಆಸ್ಪತ್ರೇನಲ್ಲಿ ಇರೋನು ಈಚೆ ಬಂದ್ರೆ ನಿನ್ನ ಡೆತ್‌ಡೇಟ್ ಬರೀತಾನೆ ಗೊತ್ತಾ? ಅವರು ನಿನ್ನ ಮೇಲೆ ಕೇಸ್ ಹಾಕ್ದೆ ಇರೋದೇ ಹೆಚ್ಚು’ ಲಕ್ಟರರ್ ಒಂದು ಗಂಟೆ ಲೆಕ್ಟರ್‌ಕೊಟ್ಟ. ‘ನಾನೊಬ್ಬ ಮನೇಲಿ ಫೇಮಸ್ ಕ್ರಿಮಿನಲ್ ಲಾಯರ್ ಇದೀನಲ್ಲ… ಅದಕ್ಕೆ ಹೆದರ್‍ಕೊಂಡು ಸುಮ್ಮನಾಗಿದಾರೆ ಕಣಯ್ಯ. ಅಷ್ಟಕ್ಕೂ ಇದೆಲ್ಲಾ ಇವನಿಗೆ ಬೇಕಿತ್ತಾ?’ ಲಾಯರ್‌ ವೆಂಕಟ್ ಸಂಕಟ. ‘ಅಲ್ಲಣ್ಣಾ, ಇವನು ಮಾಡೋ ಕಿತಾಪತಿಗಳಿಗೆ ಪಾಳೇಗಾರರು ನಮ್ಮ ಮೇಲೆ ತಿರುಗಿಬಿದ್ದರೆ ನಾವ್ ಉಳಿದೇವಾ? ಬಡವನಾದೋನು ಹೆಂಗಿರಬೇಕೋ ಹಂಗಿರ್‍ಬೇಕು’ ಫ್ಯಾಕ್ಟರಿ ಸೈರನ್ನೂ ಕೂಗಿತು.

‘ಅಲ್ಲಾ ಲವ್ ಮಾಡೋದು ಅಂದ್ರೆ ಹುಡುಗಾಟವೆ! ಮೀಸೆ ಬಂದೋರೆಲ್ಲಾ ಲವ್ ಮಾಡೋಕೆ ಆಸೆ ಪಡೋದು ನಾಯಿ ದೇವಲೋಕದ ಕನಸು ಕಾಣೋದೂ ಎರಡೂ ಒಂದೆ’ ನಕ್ಕಳು ರಾಗಿಣಿ. ಅವಳ ನಗುವಿಗೆ ಮಾಧುರಿ ಪಾರ್ವತಿಯೂ ಸಾಥ್ ನೀಡುವ ಮೂಲಕ ಸಮ್ಮತಿ ವ್ಯಕ್ತಪಡಿಸಿದರು.

‘ಮೂರು ಕಾಸು ದುಡಿಯೋ ಯೋಗ್ಯತೆಯಿಲ್ಲ. ಮದುವೆ ಮಾಡೋ ತಂಗೀನ ಮನೇಲಿ ಇಟ್ಕೊಂಡು ಲವ್ ಮಾಡ್ತಾನಂತೆ ಲವ್ವು… ಶೇಮಲೆಸ್ ಫೆಲೋ’ ಮಾಧುರಿಯೂ ಹಂಗಿಸಿದಳು. ‘ಲವ್ ಮಾಡೋಕೆ ವಯಸ್ಸಿದ್ದರೆ ಆಯ್ತೆ! ಅರ್ಹತೆಬೇಕು. ಅಟ್ಟಕ್ಕೆ ಏಣಿ ಹಾಕಲಿಕ್ಕೆ ಆಗದವರು ಆಕಾಶಕ್ಕೆ ಏಣಿ ಹಾಕೋ ಆಶೆನಾ? ಮೈ ಗಟ್ಟಿಯಾಗೈತೆ ಅಂತ ಬಂಡೆ ಗುದ್ದಿದ್ದರೆ ಕಣ್ಣೀರು ಸುರಿಸೋದು ಬಂಡೆಯಲ್ಲ… ಗುದ್ದಿದೋರು. ನಾಳೆ ಇದೇ ಸಿಟ್ಟು ಇಟ್ಕೊಂಡು ಇವನ ತಂಗಿಗೋ ನಮಗೋ ಏನಾದ್ರೂ ಮಾಡಿದ್ರೆ ಏನ್‌ಗತಿ’ ಹೌಹಾರಿದ ಪಾರ್ವತಿ ಎಲ್ಲರಲ್ಲಿ ತಟ್ಟನೆ ಭೀತಿಯ ಬೀಜ ಬಿತ್ತಿದಳು. ಗಂಡಂದಿರಿಗೆಲ್ಲಾ ಅದೇಕೋ ಎದೆ ಡವಗುಟ್ಟಿತು. ಮುಂದೇನಾಗುವುದೋ ಎಂಬ ಆಲೋಚನೆಯಲ್ಲಿ ಸಿಕ್ಕಿಬಿದ್ದು ಮಾತುಗಳಿಗಾಗಿ ತಡಕಾಡಿದರು.

ಅಡಿಗೆ ಕೋಣೆಯಲ್ಲಿ ಕಮಲಮ್ಮ ರಂಗ ಮತ್ತು ಕಾವೇರಿಗೆ ಊಟ ಬಡಿಸುತ್ತಾ ತಾನೂ ಅವರೊಂದಿಗೆ ಊಟ ಮಾಡುತ್ತಾ ಮಗನನ್ನು ನೇರವಾಗಿ ಪ್ರಶ್ನಿಸಿದರು. ‘ರಂಗಾ, ನೀನು ಪಾಳೇಗಾರರ ಮನೆ ಹುಡ್ಗನಾ ಪ್ರೀತಿಸ್ತಿರೋದು ನಿಜವೇನಪ್ಪಾ?’

‘ಖಂಡಿತ ಇಲ್ಲಮ್ಮ, ಜಸ್ಟ್ ವಿ‌ಆರ್‌ಫ್ರೆಂಡ್ಸ್’ ರಂಗ ನಕ್ಕ.

‘ಮೈಲಾರಿ ಹೇಗಿದ್ದಾನಣ್ಣಾ?’ ಕಾವೇರಿ ಹೆಮ್ಮೆಯಿಂದ ಅಣ್ಣನತ್ತ ನೋಡಿದಳು.

‘ಫಸ್ಟ್ ಕ್ಲಾಸ್ ಆಗಿದಾನೆ ಕಣೆ’ ರಂಗ ನಡೆದ ಘಟನೆಯನ್ನೆಲ್ಲಾ ಬಣ್ಣಿಸಿದ.

‘ಇದೆಲ್ಲಾ ಕೇಳಿ ಬೇಜಾರಾಯ್ತೆನಮ್ಮ ನಿಂಗೆ?’ ತಾಯಿಯನ್ನೇ ನೋಡಿದ.

‘ಕೆಟ್ಟದ್ದನ್ನು ಖಂಡಿಸಬೇಕು ದಂಡಿಸಬೇಕು ನಿಜ. ನೀನು ಮಾಡಿದ್ದರಲ್ಲಿ ತಪ್ಪಿಲ್ಲದೆ ಇರಬಹುದು. ಈ ಬಡಿದಾಟ ಹೊಡೆದಾಟ ನಮ್ಮಂಥವರಿಗಲ್ಲಪ್ಪಾ, ಆಕಸ್ಮಾತ್ ನಿನಗೇ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ್ದರೆ ನಿನಗೆ ತೋರಿಸೋಕೆ ಎಲ್ಲಿದೆ ನಮ್ಮಲ್ಲಿ ದುಡ್ಡು. ತಲೆಗೊಂದು ಮಾತಾಡೋ ನಿನ್ನ ಅಣ್ಣಂದಿರೆಲ್ಲಾದ್ರೂ ದುಡ್ಡು ಕೊಟ್ಟಾರಾ? ಆಸ್ಪತ್ರೆವರೆಗೂ ಬಂದಾರಾ? ಮುದುಕಿಯಾದ ನಾನೇನ್ ಮಾಡಬೇಕಿತ್ತಪ್ಪಾ ಹೇಳು’ ಅತ್ತೇಬಿಟ್ಟಳು ಕಮಲಮ್ಮ.

‘ಈಗ ಅಂತದ್ದೇನು ಆಗಿಲ್ಲವಲ್ಲ ಬಿಡಮ್ಮ, ನ್ಯಾಯವಾಗಿ ನಡಕೊಳ್ಳೋ ಅಣ್ಣನಿಗೆ ದೇವರು ಯಾಕಮ್ಮಾ ಅನ್ಯಾಯ ಮಾಡ್ತಾನೆ?’ ಕಾವೇರಿ ಅಣ್ಣನ ವಕಾಲತ್ತು ವಹಿಸಿದಳು. ‘ಆದರೂ ನಿನ್ನ ಅಣ್ಣ ಅತ್ತಿಗೆ ಹೇಗೆ ಆಡಿಕೊಂಡ್ರು ನೋಡು. ಪುಟ್ಟಿ ಹೊರೋಕೇ ಆಗದೋರು ಬೆಟ್ಟ ಹೊರೋಕೆ ಹೋಗಬಾರಪ್ಪಾ. ಇನ್ನು ಮೇಲೆ ಆ ಹುಡ್ಗಿ ಸಹವಾಸ ನಿನಗೆ ಬ್ಯಾಡ ರಂಗ, ದೊಡ್ಡವರ ಮಕ್ಕಳು ಅವಕ್ಕೇನು ಹುಡುಗಾಟ, ಸಣ್ಣೋರ ಮಕ್ಕಳಿಗೆ ಪ್ರಾಣ ಸಂಕಟ. ಆಗಿದ್ದಾತು ಅವರ ತಂಟೆಗೆ ಹೋಗಬ್ಯಾಡ, ಅವರೇ ಒಂದು ಮಾತು ಅಂದ್ರೂ ಸೈರಣೆಗೆಡಬೇಡ ಕಂದಾ… ಹುಷಾರು’ ತುತ್ತು ಇಡುತ್ತಲೇ ತಿಳಿವಳಿಕೆ ಹೇಳಿದರು ಕಮಲಮ್ಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವಿಕರು
Next post ಬುದ್ಧ ಕವಿತೆ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…