೧ ಮಹಾಯಾನ

ತಾನು ತುಂಬಾ ಸಣ್ಣವನು
ಅಂದುಕೊಂಡವನು
ಬೃಹತ್ ಬುದ್ಧನನು ಕೆತ್ತಿದ
ಆಹಾ!
ಏನು, ಆಳ, ಅಗಲ, ವಿಸ್ಕಾರ-
ಆಕಾಶದೆತ್ತರ!
ಗುಲಾಬಿ ಮೃದು ಪಾದಗಳನ್ನು
ಕೆತ್ತುತ್ತಾ, ಕಿತ್ತುತ್ತಾ
ಕಣ್ಣು, ತುಟಿ, ಮೂಗು
ಮುಂಗುರುಳ ಅರಳಿಸುತ್ತಾ
ನೆಲದಲ್ಲಿದ್ದವ
ಮುಗಿಲು ಮುಟ್ಟಿದ

೨. ಆ ಬುದ್ಧ-ಈ ಬುದ್ಧ

ಆ ಬುದ್ಧನಿಗೆ
ಕಣ್ಣು ಕಿರಿದ, ಬಾಯಿ ಹಿರಿದು
ಈ ಬುದ್ಧನಿಗೆ
ಆನೆ ಕಿವಿ, ಗಿಣಿ ಮೂಗು
ಆ ಬುದ್ಧನಿಗೆ
ದೊಡ್ಡ ಹೊಟ್ಟೆ, ಚಿಕ್ಕ ರಟ್ಟೆ
ಈ ಬುದ್ಧನಿಗೆ
ಅಗಲ ಹಣೆ, ಚೂಪು ಗಲ್ಲ
ಆ ಬುದ್ಧ ತುಂಟ-ಪೋರ, ನಗೆಗಾರ
ಈ ಬುದ್ಧ ಘನ-ಘೋರ, ಗಂಭೀರ
ಅವರವರ ಕನಸು, ಕಲ್ಪನೆ, ನಿರೀಕ್ಷೆಗೆ
ತಕ್ಕಂತ ಬುದ್ಧ
‘ಭಾವ’ ಅನ್ನೋದೇ ಬುದ್ಧ

೩. ಬಮಿಯಾನಿನ ಬೆಟ್ಟ

ಆ ಬೆಟ್ಟದಲ್ಲಿ ಜಗತ್ತಿನ
ಅತಿ ಎತ್ತರದ ಬುದ್ಧ
ಸ್ವಲ್ಪ ದಿನಗಳ ಕಾಲ ತಂಗಿದ್ದ
ಈಗ ಬೆಟ್ಟ ಮಾತ್ರ ಇದೆ-
ಬುದ್ಧನಿಲ್ಲ

೪. ನಶ್ವರ

ಬಮಿಯಾನಿನ ಬುದ್ಧ
ನೋಡುಗರ ಕಂಗಳಿಗೆ
ಹಬ್ಬವಾಗಿದ್ದ
ಇದೀಗ ಕಡಿದ ತಲೆ
ಮುರಿದ ಕಾಲು,
ಕುರುಡುಗಣ್ಣು, ಹರಿದ ಮೂಗು
ನಿರಂತರ ಶೋಕ
ಉನ್ನತಿಯಲ್ಲಿದ್ದುದು
ಅಧೋಗತಿಗೆ ಬರುವುದು ನಿಶ್ಚಿತ
ಹಾಗಂದಿದ್ದನಲ್ಲವೆ ತಥಾಗತ?

೫. ಪಾಲು
ಬುದ್ಧನನ್ನು ಉಳಿಸಿ
ಎಂದು ಯಾಕೆ
ಮೊರೆಯಿಡುತ್ತೀರಿ?
ನೀವೇ ಇತ್ತ
ಮದ್ದು ಗುಂಡು, ಫಿರಂಗಿಗಳು
ನೀವೇ ಇತ್ತ
ಕ್ಷಿಪಣಿ, ರಾಕೆಟ್ಟು, ಟ್ಯಾಂಕರುಗಳು
ನಿಮ್ಮವೇ
ತಂತ್ರ-ಮಂತ್ರಗಳು

ಅವರ ಪಾಪದಲ್ಲಿ
ನೀವೂ ಪಾಲುದಾರರು

೬. ಬುದ್ಧ-ಎದ್ದ

ಬಮಿಯಾನಿನಲ್ಲಿ ಜಗತ್ತಿನ
ಅತಿ ಎತ್ತರದ ಬುದ್ಧ ಇದ್ದ
ಅನ್ನುವುದೇ ಗೊತ್ತಿರಲಿಲ್ಲ

ಇದೀಗ-
ರೇಡಿಯೋ, ಟೀವಿ, ಫೋನು
ಪೇಪರಿನ ತುಂಬಾ ಬುದ್ಧ!
ಇಂಟರ್‍ನೆಟ್ಟಿನಲ್ಲೂ ಬುದ್ಧ!

ಗಾಳಿ, ಬೆಳಕು, ನೀರು, ದೀಪ
ಇಲ್ದೇ ಇರೋ ಹಟ್ಟಿಯಿಂದ ಹಿಡಿದು
ಏರ್‌ಕಂಡೀಷನ್ ಹಾಲಿನ ತನಕ
ಬುದ್ಧನದೇ ಸುದ್ದಿ…

ಬುದ್ಧ ಬಿದ್ದ ಎಂದು
ದುಃಖಿಸುವವರು ನಿಜಕ್ಕೂ ಹುಚ್ಚರು
ಅವನು ಈಗ, ಇದೀಗ
ಎದ್ದು ಕುಳಿತಿದ್ದಾನೆ

೭. ಕ್ಷಣಿಕ

ಬಮಿಯಾನಿನ ಬೆಟ್ಟದಲ್ಲಿ
ಬೆಳದಿಂಗಳ ಬೆಳೆದವರೆ ಈಗಿಲ್ಲ…
ಬೆಳದಿಂಗಳ ಅಟ್ಟಾಡಿಸಿ, ಓಡಿಸಿ
ಕಾರಿರುಳ ಬಿತ್ತುತ್ತಿರುವವರು
ಎಷ್ಟು ದಿನ ಇದ್ದಾರು?
ತಿರುಗುತ್ತಿರಲು ನಿರಂತರ ಭವಚಕ್ರ
ಕಟ್ಟಿದವರೂ ಇಲ್ಲ
ಕೆಡವಿದವರೂ ಇಲ್ಲ

೮. ಆಗಕಗ

ಮೊದಲು ಬಮಿಯಾನಿನ
ಬೆಟ್ಟದಲ್ಲಿ ಬುದ್ಧ ನಿಂತಿದ್ದ
ನೆಲಕ್ಕುರುಳಿದ ಮೇಲೆ
ನೆಲ, ನೀರು, ಗಾಳಿ, ಆಕಾಶದ
ಕಣಕಣದಲ್ಲೂ
ಹಂಚಿಹೋಗಿದ್ದಾನೆ ಬುದ್ಧ

ಅಯ್ಯಾ… ಯೋಧ-
ನಿನ್ನ ಪೇಟ ಕೊಡವಿ ನೋಡು
ಲಕ್ಷಾಂತರ ಬುದ್ಧರಿದ್ದಾರೆ
ನಿನ್ನ ಬಟ್ಟೆ, ಮೆಟ್ಟು
ಎಲ್ಲದರಲ್ಲಿ ಅಡಗಿ ಕುಂತಿದ್ದಾರೆ

ನಾಳೆ ನೀನು, ನಿನ್ನ ಮಕ್ಕಳು
ಅವರ ಮಕ್ಕಳು
ಕುಡಿಯುವ ನೀರಿನಲ್ಲಿ
ಉಣ್ಣುವ ಅನ್ನದಲ್ಲಿ
ಉಸಿರಾಡುವ ಗಾಳಿಯಲ್ಲಿ
ಬುದ್ಧನಿರುತ್ತಾನೆ.

೯. ಅಲ್ಲೂ ಬುದ್ಧ-ಇಲ್ಲೂ ಬುದ್ಧ

ತಾಲಿಬಾನಿನ ಯೋಧನಿಗೆ ಅನಿಸಿದ್ದು:
ಮಂಡಿಯೂರಿ ಕೈ ಜೋಡಿಸಿ
ಕಣ್ಮುಚ್ಚಿ ಪ್ರಾರ್ಥಿಸಿದರೆ
ಕಣ್ಮುಂದೆ ಮೂಡುವನು ಬುದ್ಧ
ಒಡೆದ ತುಟಿ, ಹರಿದ ಮೂಗು
ಯಾ ಅಲ್ಲಾ!
ಬುದ್ಧ, ಬುದ್ಧ, ಬುದ್ಧ…

ಮಲಗಿದರೂ ಬುದ್ಧ, ಎದ್ದರೂ ಬುದ್ಧ
ಕನಸಲ್ಲಿ, ಮನಸಲ್ಲಿ
ನರನಾಡಿ ಮೂಳೆ ಮಾಂಸ ಮಜ್ಜೆಯಲಿ
ಬುದ್ದ, ಬುದ್ಧ, ಬುದ್ಧ…

೧೦. ಬುದ್ಧ

ಕಾಲ, ದೇಶ, ಭಾಷೆ
ಲಿಂಗ, ಜಾತಿ ಮೀರಿ
ನಿಂತವನೆ ಬುದ್ಧ.
(ಅಫ಼್ಘಾನಿಸ್ತಾನದ ಕೇಂದ್ರ ಭಾಗದ ಬಮಿಯಾನಿನಲ್ಲಿ ಬುದ್ಧ ವಿಗ್ರಹಗಳು ಇಸ್ಲಾಂ ಧರ್ಮಕ್ಕೆ ಅವಮಾನ ಮಾಡುತ್ತಿವೆ ಎಂಬ ಕಾರಣಕ್ಕೆ ತಾಲಿಬಾನ್ ಆಡಳಿತ, ದೇಶದಲ್ಲಿರುವ ಇಂತಹ ವಿಗ್ರಹಗಳ ನಾಶಕ್ಕೆ ಫೆಬ್ರವರಿ ೨೬, ೨೦೦೧ ರಂದು ಆದೇಶ ನೀಡಿತು. ಜಗತ್ತಿನ ಅತ್ಯಂತ ಎತ್ತರದ ಭಾಗದಲ್ಲಿರುವ ಬದ್ಧ ಈಗಿಲ್ಲ.)
*****