ಚಿತ್ರ: ಬ್ರಿಗಿಟ್ ವೆರ್ನರ್‍
ಚಿತ್ರ: ಬ್ರಿಗಿಟ್ ವೆರ್ನರ್‍

ಯಾಕೋ ನನ್ನ ಮನಸ್ಸು ಇತ್ತೀಚೆಗೆ ಸ್ಥಿಮಿತವಾಗಿಯೇ ಉಳಿಯುತ್ತಿಲ್ಲ.  ನನಗೆ ಯಾವ ಕೊರತೆಯೂ ಇಲ್ಲ ಹಾಗೆ ನೋಡಿದರೆ. ದೇಶ ವಿದೇಶಿಗರು ಅಂದುಕೊಳ್ಳುವ ಹಾಗೆ ಅರಬ ನಾಡಿನ ಅರಬರಾಜನ ಹಾಗೆಯೇ ಇದ್ದೇನೆ. ನೂರಾರು ಒಂಟೆಗಳ ಸರದಾರ ಎಂದುಕೊಳ್ಳಿ, ಸಾವಿರಾರು ಎಕರೆ ಮರುಭೂಮಿಯ ಮಾಲಿಕ ಎಂದುಕೊಳ್ಳಿ, ಅಥವಾ ಈಗ ಅವೆಲ್ಲಾ ಬೇಡವೆಂದರೂ ಎಣ್ಣೆ ಬಾವಿಗಳ ಒಡೆಯ ಎಂದರೂ ಆಯಿತು.

ಎಂಟು ವರ್ಷಗಳ ಮೊದಲು ಅಮೇರಿಕದಿಂದ ಇಂಜಿನೀಯರಿಂಗ್ ಮುಗಿಸಿಕೊಂಡು ಬರುವಾಗ ಜೊತೆಗೆ ಅಲ್ಲಿಯವಳೇ ಅದ ಆಗಿನ್ನೂ ಓದುತ್ತಿರುವ ‘ಮಾರ್ತಾ’ಳನ್ನು, ಅಷ್ಟರಲ್ಲಿಯೇ ನಮಗೆ ಹುಟ್ಟಿದ ಮಗಳನ್ನೂ ಕರೆತಂದಿದ್ದೇನೆ.  ಮಗಳಿಗೆ ‘ಮರಿಯಾ’ ಎಂದು ಹೆಸರಿಟ್ಟು ನಾವಿಬ್ಬರೂ ಸಂತೋಷಪಟ್ಟದ್ದೇವೆ.

ಹೋದ ವರ್ಷ ನನ್ನ ಕಂಪನಿಗೆ, ನಾನೇ ಇಂಡಿಯಾಕ್ಕೆ ಹೋಗಿ ಡೆಲ್ಲಿಯಿಂದ ಒಬ್ಬ ಡಾಕ್ಟರ್ ಮೂರು ಜನ ಇಂಜಿನೀಯರ್‌ಗಳನ್ನು ಆಯ್ಕೆಮಾಡಿ ಕರೆದುಕೊಂಡು ಬಂದಿದ್ದೇನೆ. ಅವರೆಲ್ಲಾ ತುಂಬಾ ಒಳ್ಳೆಯವರು, ಕರ್ತವ್ಯ ಪ್ರಜ್ಞರು.

ಡಾ|| ಸತೀಶ್ ತುಂಬಾ ಹುರುಪಿನಿಂದ ಯಾವಾಗಲೂ ಓಡಾಡುವ ಸರಳ ಮನುಷ್ಯ. ಅವನಿಗೆ ಯಾವತ್ತೂ ಸ್ನೇಹಿತರು ಬೇಕೇ ಬೇಕು. ವಾರಕ್ಕೊಂದು ಸಲವಾದರೂ ಅವರ ಎಲ್ಲ ಕುಟುಂಬಗಳು ಕೂಡಿ ಮಕ್ಕಳೊಂದಿಗೆ ಬೀಚು, ಮರುಭೂಮಿ ಅಥವಾ ಶಾಪಿಂಗ್ ಎಂದು ಸಂತೋಷ ಪಡುತ್ತಾರೆ. ನಾನು ಅವರಿಗೆ ‘ಬಾಸ್’ ಆಗಿರುವುದರಿಂದ ನನ್ನನ್ನೂ ಮಾರ್ತಾಳನ್ನೂ ಅವರು ಕರೆದು ಡಾ|| ಸತೀಶನ ಮನೆಯಲ್ಲಿ ತಮ್ಮೆಲ್ಲರ ಕುಟುಂಬದ ಪರಿಚಯದೊಂದಿಗೆ ಔತಣ ಕೊಟ್ಟಿದ್ದರು.

ಪಾಪ! ಮಾರ್ತಾಳಿಗೆ ನಮ್ಮ ನಾಡು ಉಸಿರು ಕಟ್ಟಿದೆ ಎಂದೇ ಅಂದುಕೊಂಡಿದ್ದೇನೆ. ಆಗೀಗ ಅವಳು ತನ್ನ ತವರು ದೇಶಕ್ಕೆ ಹೋದರೂ ನನ್ನ ಮೇಲಿನ ಅತಿಯಾದ ಪ್ರೀತಿಯಿಂದ ಬೇಗ ಬಂದುಬಿಡುವಳು.

ಮರಿಯಾ ಶಾಲೆಗೆ ಹೋಗುತ್ತಿದ್ದಾಳೆ. ಮಹಿಳೆಯರು ಕಾರು ದ್ರೈವಿಂಗ್ ಮಾಡದ ನಾಡು ನಿಮ್ಮದೆಂದು ಮಾರ್ತಾ ಆಗೀಗ ಶಪಿಸುತ್ತ ಮಗಳನ್ನು ನನ್ನೊಂದಿಗೆ ಕಳಿಸಿಬಿಡುವಳು. ಅವಳೋದಿದ ಇಂಜನೀಯರಿಂಗ್ ಇಲ್ಲಿ ಉಪಯೋಗಕ್ಕೆ ಬರುತ್ತಿಲ್ಲ. ಆದರೂ ಅದರ ಬಗೆಗೆ ಯಾವ ಕಂಪ್ಲೇಂಟ್ ಇಲ್ಲದೆ ಇಲ್ಲಿಯ ಎಲ್ಲದಕ್ಕೂ ಹೊಂದಿಕೊಂಡಿದ್ದಾಳೆ. ಅಮೇರಿಕದ ಸ್ನೇಹಿತೆಯರೇ ಇರಲಿ ಭಾರತೀಯ ಸ್ನೇಹಿತರೇ ಇರಲಿ ಅವರೊಂದಿಗೆ ತಾಸು ತಾಸುಗಟ್ಟಲೆ ಮಾತಾಡುವ ಹುಚ್ಚುತನ ಅವಳದು. ಅಮ್ಮ ಎಷ್ಟು ಹೇಳಿದರೂ ಈ ವರೆಗೂ ಅವಳು ಬುರ್ಕಾದಿಂದ ದೂರವಿದ್ದು ಇತರ ಉಡುಪುಗಳಲ್ಲಿ ತುಂಬಾ ಸುಂದರಿಯಾಗಿ ಕಾಣುತ್ತಾಳೆ.

ಡಾ|| ಸತೀಶನ ಸ್ನೇಹಿತ ರಾಜೇಂದ್ರನ ಮಗಳು, ಮರಿಯಾ ಓದುವ ಶಾಲೆಯಲ್ಲಿಯೇ ಓದುತ್ತಿದ್ದಾಳೆ. ಶಾಲೆಯ ಹತ್ತಿರವೇ ಅವರ ಮನೆ. ನಡೆದುಕೊಂಡು ಹೋಗಿ ಬರಬಹುದಷ್ಟೆ.

ಮಕ್ಕಳಿಂದ ಬೆಳೆದ ಸ್ನೇಹ ನಮ್ಮನ್ನೆಲ್ಲಾ ಇನ್ನೂ ಇನ್ನೂ ಹತ್ತಿರಕ್ಕೆ ತರುತ್ತಿತ್ತು. ಹೋದ ತಿಂಗಳು ಸಂಜೆ ಬೀಚ್‌ಗೆ ನಾನು ಮಾರ್ತಾ, ಮರಿಯಾ ಹೋಗಿದ್ದೆವು. ಆಕಸ್ಮಿಕವಾಗಿ ಅಲ್ಲಿ ನನ್ನ ಕಂಪೆನಿಯ ಭಾರತೀಯ ತಂಡ ಕೂಡಾ ಬಂದಿತ್ತು. ಅವರೆಲ್ಲಾ ತುಂಬಾ ಮಜವಾಗಿ ಅಟವಾಡುವದು ಹರಟೆ ಹೊಡೆಯುವದರಲ್ಲಿ ಮಗ್ನರಾಗಿದ್ದರು. ನಮ್ಮನ್ನು ನೋಡಿ ಸಂತೋಷಪಟ್ಟು ಸ್ವಾಗತಿಸಿದರು.

ರಾಜೇಂದ್ರನ ಹೆಂಡತಿ ಸುಚರಿತಾ ಥರ್ಮಾಸಿನಿಂದ ತಂದ ಕಾಫಿ, ಒಂದಿಷ್ಟು ತಿಂಡಿ ಕೊಟ್ಟಳು. ನಾನು ಥ್ಯಾಂಕ್ಸ್ ಹೇಳಿದಾಗ ಅವಳು ನಕ್ಕ ಆ ಮುಗುಳ್ನಗೆ, ಗುಳಿಬಿದ್ದ ಕೆನ್ನೆ, ಸೂರ್ಯಾಸ್ತದ ಸಮಯಕ್ಕೆ ಎಷ್ಟೊಂದು ಹಿತವಾಗಿ ಕಂಡವು.

ಮಾರ್ತಾ ಅವರೊಂದಿಗೆ ಹರಟೆ ಹೊಡೆಯುವಾಗ ನಾನು ಮತ್ತೆ ಮತ್ತೆ ಸುಚರಿತಾಳನ್ನು ನೋಡಬೇಕನಿಸುತ್ತಿತ್ತು. ಮನದೊಳಗೆ ಸೂರ್ಯಾಸ್ತ ಆಗದಿರಲಿ ಎಂದು ಚಡಪಡಿಸಿದೆ. ಸೂರ್ಯ ಇನ್ನೂ ಕೆಂಪಾಗಿ ಕಾಣುತ್ತಿದ್ದಂತೆಯೇ ಅವಳು ಗುಲಾಬಿಯಾಗಿ ಕಾಣತೊಡಗಿದಳು.

ಬೆಂಚಿನ ಮೇಲೆ ಕುಳಿತ ಮಹಿಳೆಯರಲ್ಲಿ ಸುಚರಿತಾ ಎದ್ದು ಕಾಣುತ್ತಿದ್ದಾಳೆ, ಫಳ ಫಳ ಹೊಳೆಯುವ ನೀರಿನ ತೆರೆಗಳು ಅವಳ ಮುಖದ ಮೇಲೆ ಪ್ರತಿಫಲಿಸುತ್ತಿವೆ. ಎತ್ತಿ ಗಂಟು ಕಟ್ಟದ ಅವಳ ಕೂದಲುಗಳಲ್ಲಿ ಹೊಂಬಣ್ಣ ತುಂಬಿದೆ. ತುಳುಕಾಡುವ ಮೈಗೆ ನೀಟಾಗಿ ಸ್ಟಾರ್ಚ್ ಹಾಕಿದ ಬೆಂಗಾಲಿ ಸೀರೆ ಅಪ್ಪಿಕೊಂಡಿದೆ. ಮುದ್ದಾಗಿ ಮಾತಾಡುವ ಮಗಳೊಂದಿಗೆ ಮಾತನಾಡುವಾಗ ಆ ಮುದ್ಧತೆ ನನ್ನ ಮನಶ್ಶಾಂತಿಯನ್ನೇಕೋ ಕದಡುವಂತೆ ಮಾಡಿತು.

ಆ ಕೆಲವು ಕ್ಷಣಗಳಲ್ಲಿ ನಾನೇಕೆ ಆ ಆಕರ್ಷಣೆಗೆ ಒಳಪಟ್ಟೆನೋ ನನಗೊಂದೂ ಗೊತ್ತಾಗಲಿಲ್ಲ. ಸೂರ್ಯಾಸ್ತ ಆಗಿ ಕೆಲವೇ ನಿಮಿಷಗಳಲ್ಲಿ ಬೀಚ್ ದಂಡೆಗುಂಟ ಲೈಟ್ ಹತ್ತಿಕೊಳ್ಳಲು ಸುರುವಾಗುತ್ತಿದ್ದಂತೆಯೇ ಮಾರ್ತಾ ಹತ್ತಿರ ಬಂದು ಹೊರಡೋಣವೇ ಎಂದಳು. ಮಗಳು ಕೈ ಹಿಡಿದು ಎಬ್ಬಿಸಿದಾಗ ಒಬ್ಬರನ್ನೊಬ್ಬರು ಬೀಳ್ಕೊಂಡು ಮನೆಗೆ ಹೊರಟೆವು.

ಮನೆಗೆ ಬಂದ ನಂತರ ಒಂದರ ಹಿಂದೊಂದರಂತೆ ೮-೯ ಸಿಗರೇಟು ಸೇದಿದ್ದು ರೂಮ್ ತುಂಬೆಲ್ಲಾ ಹೊಗೆ ತುಂಬಿದ್ದು ನೋಡಿ, ಮಾರ್ತಾ “ಇದೇನು ಹೀಗೆ” ಎಂದು ಸಿಡಿಮಿಡಿಗೊಳ್ಳುತ್ತ  ಏ/ಸಿ ರೂಮ್ ಇದ್ದರೂ ಕಿಡಕಿ ತೆಗೆದೇ ಬಿಟ್ಟಳು. ಹೊಗೆ ಸುರುಳಿಗಳು ಹೊರಗೆ ಹೋದವೇನೋ ನಿಜ, ಅದರೆ ಸುಂದರಿ ಸುಚರಿತಾಳ ಮೋಹಕತೆ ನನ್ನನ್ನು ಅವರಿಸತೊಡಗಿತ್ತು.

***

ದಿನಗಳು ಉರುಳತೊಡಗಿವೆ, ನಾನು ಪ್ರತಿದಿನ ಸ್ಕೂಲ್‌ಗೆ ಮಾರಿಯಾಳನ್ನು ಕಳಿಸಲು ಹೋಗಲೇಬೇಕು. ರಾಜೇಂದ್ರ ಕೂಡಾ ಬಂದೇ ಬರುತ್ತಾನೆ ಮಗಳನ್ನು ಕಳಿಸಲು. ಈ ಮೊದಲು ಅಗಾಗ ಸುಚರಿತಾ ಕೂಡಾ ನಡೆದುಕೊಂಡು ಬಂದು ಮಗಳನ್ನು ಕಳಿಸಿಹೋಗುವದನ್ನು ನಾನದೆಷ್ಟೋ ಬಾರಿ ನೋಡಿದ್ದರೂ ನನಗೇನೂ ಅನಿಸಿಯೇ ಇರಲಿಲ್ಲ.

ಈಗ ನನ್ನ ಮನಸ್ಸು ಅವಳ ಬಗೆಗೆ ಯಾಕಿಷ್ಟೊಂದು ಹಾತೊರೆಯುತ್ತಿದೆ ಎಂದು ಕಿರಿಕಿರಿಯಾಗುತ್ತಿದೆ. ಯಾವುದರಲ್ಲಿಯೂ ನೆಮ್ಮದಿಯೇ ಇಲ್ಲ.

ಈ ಭಾರತೀಯರೆಲ್ಲ ಬಂದು ಒಂದು ವರ್ಷವಾಗಿರಬಹುದು. ಆಗಾಗ ಅವರು ಇಲ್ಲಿಯ ಸಾಂಸ್ಕೃತಿಕ-ರಾಜಕೀಯ-ಸಾಮಾಜಿಕ ವಿಷಯಗಳ ಬಗೆಗೆ ನನ್ನೂಂದಿಗೆ ಚರ್ಚಿಸುತ್ತಿದ್ದರು. ನಾನೂ ಕೂಡಾ ಅವರ ಮುಖಾಂತರ ಹಿಂದೂ ಸಂಸ್ಕೃತಿಯ ಬಗೆಗೆ ಅಲ್ಪಸ್ವಲ್ಬ ತಿಳಿದುಕೊಂಡಿದ್ದೆ. ವಿವಾಹ-ವಿವಾಹೇತರ ಸಂಬಂಧಗಳ ಬಗೆಗೆ ಇರುವ ಸಾಮಾಜಿಕ ನೋಟ, ಸೂಕ್ಷ್ಮತೆಗಳು; ಅದು ಗಂಡೇ ಆಗಿರಬಹುದು ಅಥವಾ ಹೆಣ್ಣೇ ಇರಬಹುದು ಅತೀ ಗೌರವದಿಂದ ಕಾಯ್ದುಕೊಳ್ಳುವ ವೈವಾಹಿಕ ಜೀವನದ ಜವಾಬ್ದಾರಿ, ಕುಟುಂಬದ ಮಾನಮರ್ಯಾದೆ ಎಲ್ಲ ಹೇಳುತ್ತಿದ್ದರು. ಭಾರತೀಯರು ಕೆಲವೇ ಕ್ಷಣಗಳ ದೈಹಿಕ ಖುಷಿಗಾಗಿ ಹೊರಗಡೆ ತಮ್ಮನ್ನು ತಾವು ಮರೆಯುವ ಜನರಲ್ಲ ಎಂದೂ ತಿಳಿದುಕೊಂಡಿದ್ದೇನೆ.

ಹೀಗಿರುವಾಗ ನನಗೆ ಇದೆಲ್ಲ ಗೊತ್ತಿದ್ದರೂ ನಾನು ಮನಸ್ಸನ್ನು ಯಾಕೆ ಹಿಡಿತದಲ್ಲಿಟ್ಟುಕೊಳ್ಳಲಿಕ್ಕಾಗುತ್ತಿಲ್ಲವೆಂದೇ ವ್ಯಥೆ ಪಡುತ್ತಿದ್ದೇನೆ. ಮನಸ್ಸು ಉಯ್ಯಾಲೆಯಂತಾಗಿದೆ.

ಮತ್ತೊಂದೆಡೆ ಮಾರ್ತಾ, ಅವಳ ದೇಶ-ಸಂಪ್ರದಾಯಗಳ ಕಟ್ಟಳೆಗಳಿಲ್ಲದೆ ಸ್ವತಂತ್ರವಾಗಿ ಏನಲ್ಲ ಮಾಡಬಹುದೆಂದೂ ಕಣ್ಣಾರೆಯಾಗಿ ನೋಡಿದ್ದೇನೆ. ಮಾರ್ತಾಳೇ ಇದ್ದಾಳಲ್ಲ ಉದಾಹರಣೆಗೆ-

ಅವಳ ಅಂದಿನ ಕಾಲೇಜು ವರ್ಷಗಳ ಹಾರಾಟ, ಡ್ಯಾನಿಯಲ್ ಜೊತೆಗಿನ ದೈಹಿಕ ಸಂಬಂಧ, ಬಿಗಿ ಉಡುಗೆ, ಪಾರ್ಟಿ ಕ್ಲಬ್‌ಗಳಲ್ಲಿ ಕುಡಿದು ತೂಗಾಡುತ್ತಿದ್ದವಳನ್ನು ಅಪ್ಪಿ ಮುತ್ತಿಕ್ಕಿ ಅವಳನ್ನು ಅಗಾಗ ಮನೆಗೆ ಬಿಡುತ್ತಿದ್ದ ಸ್ಯಾಮ್, ಮಾರ್ಕ್, ಟಿಮ್ ಸ್ನೇಹಿತರು. ಅವರ ಸ್ನೇಹ ಸಾಕಾಗಿ ಹಣವಂತನಾದ ನನ್ನನ್ನು ಮೋಹಿಸಿ ನಾಲ್ಕು ತಿಂಗಳ ಗರ್ಭಿಣಿ ಆದಾಗ ಉಂಗುರ ಬದಲಾಯಿಸಿಕೊಂಡಿದ್ದಳಲ್ಲ…

ಒಂದು ಕಡೆಗೆ ಪಾಶ್ಚಾತ್ಯರ ಸಂಪೂರ್ಣ ಸ್ವಾತಂತ್ರ್ಯ, ಮತ್ತೊಂದೆಡೆ ಪೌರಾತ್ಯರ ಸಂಪ್ರದಾಯದ ಸರಳುಗಳು ಎರಡನ್ನೂ ಹತ್ತಿರ ಹತ್ತಿರವಾಗಿಯೇ ನೋಡುತ್ತಿದ್ದೇನೆ. ಹಾಗೆಯೇ ನಮ್ಮ ದೇಶ ಸಂಪ್ರದಾಯಗಳನ್ನೂ ಹೋಲಿಸಿ ವಿಚಾರಿಸಿಕೊಳ್ಳುತ್ತಿದ್ದೇನೆ.

***

ನಾನೆಷ್ಟು ಓದಿಕೊಂಡವನೆಂದು ತಿಳಿದುಕೊಂಡರೂ, ಹಣವಂತ ಎಂದು ಅಂದುಕೊಂಡರೂ ನನ್ನೂಳಗಿನ ಮಾನಸಿಕ ತುಯ್ದಾಟ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸುಚರಿತಾಳ ಗಂಭೀರ ಸ್ವಭಾವವೇ ನನ್ನನ್ನು ಕಾಡುತ್ತಿದೆಯೋ ಏನೋ! ಪಾಪ ಅವಳಿಗೊಂದಿಷ್ಟೂ ಗೊತ್ತಿಲ್ಲ ನನ್ನ ಅನಿಸಿಕೆ. ಅದು ಸಹಜವೂ ಹೌದು. ಸ್ಕೂಲ್‌ನಲ್ಲಿ ಭೇಟಿಯಾದರೆ ನಾನು ಹಲೋ ಎಂದರೆ ನಮಸ್ಕಾರ ಎಂದು ಪ್ರತಿ ಉತ್ತರಿಸಿ ಹೋಗಿಬಿಡುವಳು. ರಾಜೇಂದ್ರ ಎಷ್ಟೊಂದು ಅದೃಷ್ಟವಂತ, ಅವನಿಗೆ ತಕ್ಕ ಹಾಗೆಯೇ ಅವಳು.

ನನ್ನ ಮನಸ್ಸು ಇತ್ತೀಚೆಗೇಕೋ ಕ್ರೂರವಾಗುತ್ತಿದೆ. ಮದುವೆಯಾದ, ಮುದ್ದು ಮಗಳಿರುವ ಹೆಣ್ಣನ್ನು ನಾನು ಒಳಗೊಳಗೇ ಪ್ರೀತಿಸಲು ಸುರುಮಾಡಿದ್ದೇನೆ. ಥೂ ಇದು ನನ್ನ ಗೌರವಕ್ಕೆ ಕುಂದು. ಮಾರ್ತಾಗೆ ಗೊತ್ತಾದರೆ ಏನನ್ನಬಹುದು ನಮ್ಮ ಎಂಟು ವರ್ಷಗಳ ಸಂಸಾರದಲ್ಲಿ ಒಡಕುಂಟಾಗಬಹುದು. ನನಗೆಲ್ಲ ಗೊತ್ತಾಗುತ್ತಿದೆ.

ಹಾಗೆ ನೋಡಿದರೆ ನಾನು ಬೇಕಿದ್ದರೆ ಇಲ್ಲಿ ಇನ್ನು ಒಂದೋ ಎರಡೋ ಹುಡುಗಿಯರನ್ನು ಮದುವೆಯಾಗಬಹುದು. ಅಮ್ಮ ಅಪ್ಪನ ಅಭ್ಯಂತರ ಕೂಡಾ ಇಲ್ಲ. ನನ್ನ ಸುತ್ತ ಮುತ್ತಲಿನವರಲ್ಲಾಗಲೀ ಸಂಬಂಧಿಗಳಲ್ಲಾಗಲೀ ಇದೆಲ್ಲ ಮಾಮೂಲು.

ಅದೇ ಮೊದಲೇ ಹೇಳಬೇಕೆಂದಿದ್ದೆ. ನನ್ನ ಅಮ್ಮ ನನ್ನ ಅಪ್ಪನ ಮೂರನೆಯ ಹೆಂಡತಿ ಎಂದು. ಅಪ್ಪ ಅಲ್ಲದೆ ನನ್ನ ವಯಸ್ಸಿನ ನಾಲ್ಕನೆಯ ಚಿಕ್ಕಮ್ಮ ಕೂಡಾ ಈಗ ಅಜ್ಜಿಯಾಗಿದ್ದಾಳೆ.

ನಾನೇನಾದರೂ ಮನಃಸ್ಥಿತಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳದೇ ಹೋದರೆ ನಾನೇ ಕರೆತಂದ ರಾಜೇಂದ್ರನಿಗೆ ದ್ರೋಹಬಗೆದಂತಾಗುತ್ತದೆ ಎಂದು ಯೋಚಿಸಿ ಯೋಚಿಸಿ ಸುಸ್ತಾಗಿದ್ದೇನೆ.

ಹೋದವಾರ ಮಾರ್ತಾ ತಾನು ಕ್ರಿಸ್‌ಮಸ್ ಅಚರಿಸುವದಾಗಿ ಹೇಳಿ ಈ ಭಾರತೀಯ ಕುಟುಂಬಗಳನ್ನೆಲ್ಲಾ ಕರೆದಿದ್ದಳು.

ಆಗ ನಾನು ಯಾಕೆ ಅಷ್ಟೊಂದು ಖುಷಿಪಟ್ಟೆ! ಸನಿಹದಿಂದ ಸುಚರಿತಾಳನ್ನು ನೋಡಬಹುದೆಂದೇ? ಏನಾದರೂ ಮಾತನಾಡಿಸಬೇಕೆಂದೇ, ಅಲ್ಲವೆ?

ನನಗೇಕೆ ಅಷ್ಟೊಂದು ಅತುರ…, ಅವರೆಲ್ಲಾ ಬಂದಾಗ ನಾನು ಬಾಸ್ ಅನ್ನುವದೂ ಮರೆತು ಅವರೊಂದಿಗೆ ಮಾತಾಡಿದ್ದೇ ಮಾತಾಡಿದ್ದು. ಅಮೇರಿಕದ ಹಳೆಯ ನೆನಪುಗಳನ್ನೆಲ್ಲಾ ತೆಗೆದು ನಾನೂ ಮಾರ್ತಾ ನಕ್ಕಿದ್ದೇ ನಕ್ಕಿದ್ದು, ನಗಿಸಿದ್ದೇ ನಗಿಸಿದ್ದು.. ಎಲ್ಲರ ನಗೆಯೊಳಗೆ ಸುಚರಿತಾಳ ನಗು ವಿಶೇಷವಾದುದು. ಮೋನಾಲಿಸಾ ತರಹ ನಗಲೋ ಬೇಡವೋ ಅನ್ನುವ ಹಾಗೆ!

ಆ ಮೋಡಿಯೇ ನನ್ನ ತಲೆ ತಿನ್ನುತ್ತಿದ್ದುದು.

ಅದೇನೇ ಆಗಲಿ ಸಂಪ್ರದಾಯ, ದೊಡ್ಡಸ್ತಿಕೆಗಳನ್ನೆಲಾ ದೂರ ಸರಿಸಿ ಒಮ್ಮೆ ಅವಳನ್ನು ತಬ್ಬುವ ಆಸೆ, ಮುತ್ತುವ ಆಸೆ ಬಲವಾಗತೊಡಗಿದೆ. ಆಸೆ ಚಿಗುರೊಡೆದು ರೆಂಬೆ ಕೊಂಬೆಗಳಂತೆ ದಿನ ದಿನಕ್ಕೂ ನೆನ್ನೆತ್ತೆರಕ್ಕೂ, ನನ್ನೊಳಗೇ ಹಬ್ಬುತ್ತಲೇ ಇದೆ. ಅದರೊಳಗೆಲ್ಲ ಬಣ್ಣ ಬಣ್ಣದ ಹೂವುಗಳು ತುಂಬಿಕೊಳ್ಳುತ್ತಿವೆ. ಹೊಯ್ಡಾಡುತ್ತಿದೆ.

***

ಛೇ, ನಾನು ತುಂಬಾ ವಿಕ್ಷಿಪ್ತ, ಮನುಷ್ಯನೇ ಅಲ್ಲ, ಮೃಗ ಮೃಗ… ನನ್ನ ಓದು ಉದ್ಯೋಗವೇ ಬೇರೆ. ನನ್ನ ಸ್ವಭಾವವೇ ಬೇರೆ, ಗುಣಗಳೇ ಬೇರೆ ಎಂದು ತಿಳಿದೇ ಹೋಯಿತು. ನಾನೇಕೆ ಹಾಗೆ ಮಾಡಿದೆ; ನಾನೇಕೆ ಅವಳಿಗೆ ಮೋಸ ಮಾಡಿದೆ.

ಸುಚರಿತಾ ಮಗಳನ್ನು ಶಾಲೆಗೆ ಕಳಿಸಲು ಬಂದದ್ದು ಸಹಜವಾದುದು. ನಾನೇಕೆ ಮಾತನಾಡಿಸಿದೆ- ಮನೆಯವರೆಗೂ ಡ್ರಾಪ್ ಕೊಡುತ್ತೇನೆ ಎಂದು ಏಕೆ ಹೇಳಿದೆ ಅವಳು ಬೇಡವೆಂದಾಗ.

ನಾನು ಅರ್ಜೆಂಟಾಗಿ ರಾಜೇಂದ್ರನನ್ನು ಭೆಟ್ಟೆಯಾಗಲೇಬೇಕು. ಹೇಗೂ ನಿಮ್ಮ ಮನೆಯ ಕಡೆಗೆ ಹೊರಟಿದ್ದೇನೆ ಬನ್ನಿ ಎಂದು ಕರೆದೆ,

ಪಾಪ! ಅವಳಿಗೇನೂ ಗೊತ್ತಾಗಲೇ ಇಲ್ಲ – ಹಿಂದಿನ ಸೀಟಿನಲ್ಲಿ ಕುಳಿತಳು. ಅವಳು ಬಂದು ಕುಳಿತ ತಕ್ಷಣ ನನ್ನ ಕಾರಿಗೂ ರೆಕ್ಕೆ ಪುಕ್ಕಗಳು ಮೂಡತೊಡಗಿದವೇನೋ-

ಮುಂದಿನ ರಸ್ತೆಯ ಎಡಗಡೆ ಹೊರಳಿ ಸ್ವಲ್ಪ ಮುಂದೆ ಬಲಗಡೆಗೆ ತಿರುಗಿ ಕೊಂಡರೆ ಅವಳ ಮನೆ ಬರುತ್ತದೆ. ಆದರೆ ನನ್ನ ಕೈ ಸ್ಟಿಯರಿಂಗ್‌ನ್ನು ಎಡಗಡೆಗೆ ತಿರುಗಿಸದೇ ಬಲಗಡೆಗೆ ತಿರುಗಿಸಿ ಊರ ಹೊರಗಿನ ರಸ್ತೆಯ ಕಡೆಗೆ ಹೊರಟಿತು. ಅವಳು ನಡುವೆ ಮಾತನಾಡಿಸಿ ‘ಹೀಗೆ’, ‘ಈ ಕಡೆಗೆ’ ಎಂದು ಹೇಳುತ್ತಲೇ ಇದ್ದಳು.

ನಾನು ಕೇಳಿಸಿಯೂ ಕೇಳಿಸದವನ ಹಾಗೆ ವೇಗವಾಗಿ ಕಾರು ಓಡಿಸುತ್ತ ೫-೬ ಕಿ.ಮೀ. ಅಂತರದ ಮರುಭೂಮಿಗೆ ಬಂದುಬಿಟ್ಟಿದ್ದೆ. ಅವಳಿಗೆ ದಿಗ್ಭ್ರಮೆ, “ಇದೇಕೆ ಇಲ್ಲಿ” ನಡಗುವ ಧ್ವನಿಯಲ್ಲಿ ಕೇಳತೊಡಗಿದಳು. ನಾನೇನೂ ಮಾತನಾಡದೇ ಹಿಂದಿನ ಸೀಟಿಗೆ ಬರುತ್ತಿದ್ದಂತೆಯೇ ಬಾಗಿಲು ತೆಗೆದು ಓಡತೊಡಗಿದಳು. ಮರಳಿನಲ್ಲಿ ಕಾಲು ಹೂತತೊಡಗಿದ್ದರೂ ಕಿತ್ತುಕೊಂಡು ಓಡುತ್ತಲೇ ಇದ್ದಳು.

ನನ್ನ ಅವೇಶದ ಮುಂದೆ ಅವಳದೆಷ್ಟು ಓಡುತ್ತಾಳೆ ಎಂದು ನಾನೂ ಬೆನ್ನು ಹತ್ತಿದೆ. ಸುಚರಿತಾ ನನ್ನ ಕೈಗೆ ಸಿಕ್ಕಿಬಿದ್ದಳು. ಅವಳ ಕೂಗು ಚೀರಾಟ ಯಾರಿಗೂ ಕೇಳಿಸಲೇ ಇಲ್ಲ. ನನ್ನ ಬಲಿಷ್ಟ ಬಾಹುವಿನಲ್ಲಿ ಕಾಮಾತುರತೆಯೆ ಅವಳನ್ನು ಅಟ್ಯಾಕ್‌ ಮಾಡಿದ್ದೆ. ಅವಳು ನಲುಗಿ ಹೋದಳು. ಅವಳ ಮರುಭೂಮಿಯ ಆಕ್ರಂದನ…

ಮರಳಿ ಕಾರಿನಲ್ಲಿ ಬಂದು ಕುಳಿತೆ, ಎಷ್ಟು ಹೊತ್ತಾದರೂ ಅವಳು ಅಲುಗಾಡಲೇ ಇಲ್ಲ. ಕೊನೆಗೆ ಹತ್ತಿರ ಹೋಗಿ ನೋಡಿದಾಗ ಉಸಿರು ನಿಂತೇ ಹೋಗಿತ್ತು. ನನಗೆ ಶಾಕ್ ಹೊಡೆದಂತಾಗಿ ಬೆವೆತುಹೋದೆ. ಆದರೆ ನಾನೇನೂ ಮಾಡದೇ ಆ ಹೆಣವನ್ನು ಅಲ್ಲಿಯೇ ಬಿಟ್ಟು ಮನೆ ಸೇರಿದೆ.

ನನ್ನ ವಿಚಿತ್ರ ವರ್ತನೆಯಿಂದ ಮಾರ್ತಾ ನನಗೆ ಹುಷಾರಿಲ್ಲವೆಂದುಕೊಂಡು ಏನೇನೋ ಟ್ರೀಟ್‌ಮೆಂಟ್ ಮಾಡಬೇಕೆನ್ನುತ್ತಿದ್ದಳು.

ಮಾರ್ತಾಳ ಮುಖದಲ್ಲಿ ಸುಚರಿತಾಳ ಹೆಣ ತೇಲಿ ಬಂದಿತು. ಮೃದು ಮಾತಿನಲ್ಲಿಯೂ ಸುಚರಿತಾಳ ಅಕ್ರಂದನ ಕೇಳಿಬರತೊಡಗಿತು.

ನನಗೆ ಈಗ ಏನೂ ಬೇಡ, ತಲೆ ಸಿಡಿತ ಆಫೀಸ್‍ಗೇ ಹೋಗುವದಿಲ್ಲ ಎಂದು ಹೇಳಿ ಅವಳನ್ನು ಹೊರಗೆ ಕಳಿಸಿದೆ.
***

ನಿನ್ನೆಯಿಂದ ರಾಜೇಂದ್ರ ಹೆಂಡತಿಗಾಗಿ ಎಷ್ಟೊಂದು ಹುಡುಕುತ್ತಿದ್ದಾನೆ.  ಪಾಪ! ಸ್ಕೂಲು, ಅವರ ಸ್ನೇಹಿತರ ಮನೆಗಳಲ್ಲಿ…

ನನಗೆ ಫೋನ್ ಮಾಡಿ – ನಡುಗುವ ಧ್ವನಿಯಲ್ಲಿ “ಹೆಂಡತಿ ಸ್ಕೂಲ್‌ಗೆ ಹೋದವಳು ಬಂದಿಲ್ಲ ಅಲ್ಲಲ್ಲಿ ಎನ್‍ಕ್ವಯರಿ ಮಾಡುತ್ತಿದ್ದೇನೆ. ಆಫೀಸ್‌ಗೆ ಬರಲಿಕ್ಕಾಗುವದಿಲ್ಲ’ ಎಂದು ಹೇಳಿದ್ದ.

ನನಗೆ ಜೀವ ಹೊಡೆದುಕೊಳ್ಳಲು ಸುರು ಅಗಿತ್ತು. ಆದರೂ ಏನೇನೊ ಆಗಿಲ್ಲ ಎನ್ನುವಂತೆಯೇ ಇದ್ದೆ.

ಭಾರತೀಯ ದೂತಾವಾಸದ ಸಹಾಯದಿಂದ ರಾಜೇಂದ್ರ ಅವನ ಸ್ನೇಹಿತರೆಲ್ಲ ಸುಚರಿತಾಳಿಗಾಗಿ ಹುಡುಕುತ್ತಿದ್ದುದಾಗಿ ತಿಳಿಯಿತು.

ನನ್ನ ಕ್ರೂರ ಕಾಮುಕತೆಗೆ ಬಲಿಯಾದ ಹೆಣ್ಣು ಸುಚರಿತಾ ಮರುಭೂಮಿಯಲ್ಲಿ ಹೆಣವಾಗಿ ಬಿದ್ದು ಬಿಸಿಲಿನ ಹೊಡೆತಕ್ಕೆ ಸುಟ್ಟುಹೋಗಿರಬೇಕು, ಹದ್ದುಗಳು ತಿಂದಿರಬೇಕು, ನನ್ನ ತಪ್ಪು ಮಾರ್ತಗೆ ಹೇಳಿಯೇ ಬಿಡಬೇಕೆಂದುಕೊಳ್ಳುತ್ತೇನೆ, ಧೈರ್ಯ ಸಾಲದು.

ಇಂದಿಗೆ ಮೂರನೆಯ ದಿನ. ನಾನು ಮಾಮೂಲಿಯಾಗಿ ಆಫೀಸಿಗೆ ಹೋಗುತ್ತಿದ್ದರೂ ತಪ್ಪಿತಸ್ಥ ಎಂದೆನಿಸುತ್ತಿದ್ದರೂ, ಇತರ ಭಾರತೀಯರಿಗೇ ಏನು? ಏನಾದರೂ ಸಮಾಚಾರ ಸಿಕ್ಕಿತಾ? ಎಂದೇ ನಟಿಸುತ್ತಿದ್ದೇನೆ.

ಮಧ್ಯಾಹ್ನ ಡಾ|| ಸತೀಶ್ ನನ್ನ ಕ್ಯಾಬಿನ್ ಹೊಕ್ಕವನೇ” ಬಾಸ್ ಎಲ್ಲಾ ಆಘಾತವಾಗಿ ಹೋಗಿದೆ. ರಾಜೇಂದ್ರನ ಹೆಂಡತಿಯನ್ನು ಅದಾರೋ ಅಪಹರಿಸಿ ಬಲಾತ್ಕರಿಸಿ ಸಾಯಿಸಿದ್ದಾರಂತೆ. ಮರುಭೂಮಿಯಲ್ಲಿ ಒಂಟೆ ಕಾಯುವ ಹುಡುಗರ ಸೂಚನೆಯ ಮೇರೆಗೆ ದೂತಾವಾಸದ ಹುಡುಕಾಟದವರಿಗೆ ಅಳಿದುಳಿದ ದೇಹ ಸಿಕ್ಕಿದೆಯಂತೆ…

ನಡುವೆ ಬಾಯಿ ಹಾಕಿದವನೇ ನಾನು “ಅದು ಅವಳದೇ ಎಂದು ಹೇಗೆ ಗೊತ್ತಾಯಿತಂತೆ” ಎಂದೆ. ಅವಳು ಅ ದಿನ ಗುಲಾಬಿ ಬಣ್ಣದ ಸೀರೆ, ರವಿಕೆ ಧರಿಸಿದ್ದಳಂತೆ. ಅದರಿಂದ ಗುರುತು ಸಿಕ್ಕಿರುವದಾಗಿ ಡಾ|| ಸತೀಶ್ ಹೇಳುತ್ತಿದ್ದಂತೆಯೇ-

ನನ್ನ ಉಸಿರು ನಿಂತತಾಯ್ತು, ಗುಲಾಬಿ ಸೀರೆ ಅಪ್ಪಿದ ಆ ಗುಲಾಬಿ ದೇಹ ನಾನು ಮುದ್ದಾಡಿದ್ದು, ಅವಳು ಸಾಯುವ ಮಟ್ಟಗೆ ಬಲಾತ್ಕರಿಸಿದ್ದು ಕಣ್ಣು ಮುಂದೆ ಬಂದಂತಾಗಿ ಬೆವರ ಹನಿ ಇಳಿಯತೊಡಗಿತು.

ಇದನ್ನು ನೋಡಿ ನನಗೆ (ಬಾಸ್ ಗೆ) ಕೆಡುಕೆನಿಸಿದೆಯೇನೋ ಎಂದೇ ತಿಳಿದುಕೊಂಡ ಸತೀಶ್, ಮಾತು ಮುಂದುವರೆಸುತ್ತಾ ಬಾಸ್ ರಾಜೇಂದ್ರ ಈ ದುರಂತ ನೋಡಿ ತಡೆದುಕೊಳ್ಳಲಾರದೆ ಏನೇನೋ ಬಡಬಡಿಸಿದ ಎಂದು ಹೇಳುತ್ತಿದ್ದ.

“ಭವಿಷ್ಯದಲ್ಲಿ ನೆಮ್ಮದಿಯಾಗಿರಬೇಕೆಂದು ಕನಸು ಕಟ್ಟಿ ಹಣ ಗಳಿಸಲು ಬಂದು ಇದೇನೆಲ್ಲಾ ಅಗಿಹೋಯ್ತಲ್ಲ, ಇನ್ನು ಊರಿಗೆ ಯಾವ ಮುಖ ಹೊತ್ತು ಸುಚರಿತಾಳ ಅಳಿದುಳಿದ ಹೆಣ ಒಯ್ಯುವದು? ಏನೆಂದು ಹೇಳುವದು? ದುರಂತದ ನೆನಪು ಮರೆತು ಬದುಕಲು ಸಾಧ್ಯವೇ ಇಲ್ಲ!” ಎನ್ನುತ್ತಿದ್ದ..

ನಾಳೆಯೋ ನಾಡಿದ್ದೋ ಹೆಣ ಇಂಡಿಯಾಕ್ಕೆ ಕಳಿಸುವ ಮುಂದಿನ ಏರ್ಪಾಡು ದೂತವಾಸದವರು ನಡೆಸಿದ್ದರು. ರಾಜೇಂದ್ರನನ್ನು ನಾವು ಅದೆಷ್ಟೋ ಸಮಾಧಾನಿಸಿದರೂ ಅವನ ದುಃಖ ಶಮನಗೊಂಡಿರಲೇ ಇಲ್ಲ.

“ಇಂದು ಬೆಳಿಗ್ಗೆ ೯ ಗಂಟೆಗೆ ಅವನಿಗೆ, ಅವನ ಮಗಳಿಗೆ ತಿಂಡಿ ಒಯ್ದಿದ್ದೆ, ಬಾಗಿಲು ಬಡಿದರೂ ಎಷ್ಟು ಹೊತ್ತಾದರೂ ತೆಗೆಯಲೇ ಇಲ್ಲ ಸತೀಶ್ ಅಂದ” “ಅತ್ತೂ ಅತ್ತೂ ಸುಸ್ತಾಗಿ ಮಲಗಿದ್ದಾನೋ ಏನೋ” ಎಂದೆ. ಕಾಳಜಿ ವಹಿಸಿದ ಹಾಗೆ.

“ಹಾಗೇನೊ ಇಲ್ಲ” ಎನ್ನುತ್ತ ಸತೀಶ್ ಕಣ್ಣಲ್ಲಿ ನೀರು ತುಂಬಿಕೊಂಡು ಗದ್ಗದಿತ ಧ್ವನಿಯಲ್ಲಿ “ಅಕ್ಕ ಪಕ್ಕದವರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದೆವು, ಅಲ್ಲಿ ನೋಡಿದ ದೃಶ್ಯ ಹೃದಯ ವಿದ್ರಾವಕ. ರಾಜೇಂದ್ರ ನೇಣು ಹಾಕಿಕೊಂಡಿದ್ದಾನೆ, ಮಗಳಿಗೆ ಜಿರಲೆಗಳನ್ನು ಕೊಲ್ಲುವ ವಿಷ ಕುಡಿಸಿ ಸಾಯಿಸಿದ್ದಾನೆ… ಇನ್ನೂ ಏನೇನೋ ಹೇಳುತ್ತಿದ್ದ. ಅ ಕ್ಷಣದಲ್ಲಿ ನನ್ನೆದೆಗೆ ಸುಚರಿತಾ ನೇರವಾಗಿ ಶೂಟ್ ಮಾಡುತ್ತಿದ್ದಾಳೆ ಎಂದೆನಿಸಿತು.

ನಾನು ನನ್ನ ಖುರ್ಚಿಯಿಂದ ಎದ್ದವನೇ ಸತೀಶ್‌ನ್ನು ಸಮಾಧಾನಿಸಿ ಮುಂದಿನ ಕೆಲಸಗಳ ಬಗೆಗೆ ಏನೇನೋ ಹೇಳಿ ಕಳಿಸಿದೆ.

ನನಗೀಗ ಒಂದಿಷ್ಟೂ ಸಮಾಧಾನವಿಲ್ಲ. ನಾನು ಸಂತೋಷದಿಂದಿರುವ ಒಂದು ಕುಟುಂಬವನ್ನೇ ನುಂಗಿಬಿಟ್ಟೆನಲ್ಲ ಎನ್ನುವ ಅಪರಾಧ ಪ್ರಜ್ಞೆ ಕ್ಷಣ ಕ್ಷಣವೂ ನನ್ನೆದೆಯಲ್ಲಿ ಚುಚ್ಚತೊಡಗಿತು, ಮಾನವೀಯತೆಯ ಮೌಲ್ಯಗಳನ್ನೆಲ್ಲ ಕಳಚಿಹಾಕಿಬಿಟ್ಟೆ ನಾನು.

ಅಷ್ಟು ಹೊತ್ತಿಗಾಗಲೇ ಬಲಾತ್ಕರಿಸಿ ಕೊಂದ ವ್ಯಕ್ತಿಯ ಹುಡುಕಾಟ ಕೂಡಾ ವ್ಯವಸ್ಥಿತವಾಗಿ ನಡೆಸಿದ್ದಾರೆ ಎಂದೂ ತಿಳಿಯಿತು.

ನಾನು ಇನ್ನು ಈ ಕೇಸಿನಲ್ಲಿ ಹೇಗಾದರೂ ಸಿಕ್ಕಿಬೀಳುವೆನೆಂದು ಗೊತ್ತಾಯಿತು. ಪಾಪದ ಪ್ರಾಯಶ್ಚಿತ, ಅಷ್ಟಿಷ್ಟಲ್ಲ ಇಲ್ಲಿ. ಮೌಲ್ಪಿ ಹೇಳಿದ್ದೇ ಕೊನೆ. ಆ ಪ್ರಕಾರ ನನಗೆ ಸಿಗುವ ಶಿಕ್ಷೆ ತಲೆ ಹಾರಿಸಿಕೊಳ್ಳುವದು.

ನಾನೆಷ್ಟೇ ಶ್ರೀಮಂತನಿರಬಹುದು, ಕಾಯ್ದೆಗಳ ಮುಂದೆ ಇವೆಲ್ಲ ಸಣ್ಣವು. ಕತ್ತು ಹಾರಿಸಿಕೊಳ್ಳುವ ಭಯಾನಕ ದೃಶ್ಯ ನೆನಪಾಗಿ ಮೈ ನಡುಕ ಹುಟ್ಟಿಕೊಂಡಿತು.

ಇನ್ನು ಇಲ್ಲಿಯೇ ಇದ್ದರೆ ಎಲ್ಲವೂ ತಿಳಿದಂತೆ ಆಗುವದರಲ್ಲಿ ಸಂದೇಹವೇ ಇಲ್ಲವೆಂದು ಗೊತ್ತಾಯಿತು. ನಾನು ಸ್ವಾರ್ಥಿ, ನಾನಿನ್ನು ಬದುಕಬೇಕೆಂದು ಕೊಂಡಿದ್ದೇನೆ.

“ಮನೆಗೆ ಬಂದವನೇ ಮಾರ್ತಾಳನ್ನು ಕರೆದು ಅರ್ಜೆಂಟಾಗಿ ಅಮೇರಿಕಾಗೆ ಹೊರಡಬೇಕಾಗಿದೆ. ನೀನೂ ಮಗಳೂ ರೆಡಿಯಾಗಬೇಕೆಂದು ಹೇಳಿ ಮಾರನೆಯ ದಿನಕ್ಕೆ ಟಿಕೆಟ್ಟು ಕೊಂಡೆ-

ಮಾರ್ತಾ, ಏನವಸರ? ಹೀಗೇಕೆ? ಎಂದು ನೂರು ಸಲ ಕೇಳಿರಬಹುದು. ನಾನು ಅಲ್ಲಿ ಹೋದಮೇಲೆ ಎಲ್ಲ ಹೇಳುತ್ತೇನೆ ಎಂದೆ. ಬಹುಶಃ ಒಂದೆರಡು ಸಲ ಬಯ್ದು ಬಾಯಿ ಮುಚ್ಚಿಸಿದೆನೋ ಏನೋ.

ಮರುದಿನ ಭಾರತೀಯ ತಂಡದವರಿಗೆ ಸಮಾಧಾನಿಸಿ ಅರ್ಜೆಂಟ ಕೆಲಸದ ಮೇಲೆ ಅಮೇರಿಕೆಕ್ಕೆ ಹೊರಟಿದ್ದೇನೆ. ಮುಂದಿನ ವಾರ ಬರುತ್ತೇನೆಂದು ಹೇಳಿ ಅವರಿಗೇನೂ ನನ್ನ ಮೇಲೆ ಸಂಶಯ ಬರದಂತೆ ಮಾತನಾಡಿ ಅವರಿಂದ ಬೀಳ್ಕೊಂಡು ಸಂಜೆ ೬ ಗಂಟೆಗೆ ಪನಾಮಾ ಏರ್‌ಲೈನ್ಸ್ ಮುಖಾಂತರ
ಹೊರಟೆ.

ವಿಮಾನ ಮೇಲೆರುತ್ತಿದ್ದಂತೆಯೇ ‘ಬದುಕಿದೆಯಾ ಬಡಜೀವವೇ’ ಎನ್ನುತ್ತ ಉಸ್ಸೆಂದು ಸೀಟಿಗೊರಗಿದೆ, ಆದರೆ ಒಳಗೊಳಗೆಯೇ “ಕೊಂದೆಯಾ ಕ್ರೂರ ಪ್ರಾಣಿಯೇ’ ಎಂದು ಸುಚರಿತಾ ಇನ್ನೂ ಇನ್ನೂ ನನ್ನ ಮನಸ್ಸನ್ನು ಬಲವಾಗಿ ಕೊರೆಯುತ್ತ ಇರಿಯುತ್ತಿದ್ದಳು. ನನ್ನ ವಿಚಿತ್ರ ತೊಳಲಾಟಕ್ಕೆ ಮಾರ್ತಾ ಆಶ್ಚರ್ಯಪಡುತ್ತಿದ್ದಾಳೆ.

೫೦೦೦ ಅಡಿ ಎತ್ತರದಲ್ಲಿ ಅಕಾಶದಲ್ಲಿ ತೇಲುತ್ತಿದ್ದೆ ನಮ್ಮ ವಿಮಾನದ ಕಿಡಕಿ ಒಡೆದು ಸುಚರಿತಾ ನನ್ನ ಕತ್ತಿಗೆ ಕೈ ಹಾಕಿ ಭೂಮಿಗೆ ಎಳೆದಂತಾಯ್ತು ಬಿಡಿಸಿಕೊಳ್ಳಲು ಹವಣಿಸುತ್ತಿದ್ದೇನೆ. ನನಗೆ ಯಾರೊಂದಿಗೂ ಮಾತನಾಡುವದು ಬೇಡವಾಗಿತ್ತು. ಸೀಟಿಗೊರಗಿ ಕಣ್ಣು ಮುಚ್ಚಲು ಪ್ರಯತ್ನಿಸಿದಷ್ಟು ಘಟನೆಗಳು ಮತ್ತೆ ಮತ್ತೆ ಕಿಡಿ ಎಬ್ಬಿಸುತ್ತಿವೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)