ನೋರಾ

ನೋರಾ

ಜೊಸ್ಸಿ / ಪಿಕ್ಸಾಬೇ
ಜೊಸ್ಸಿ / ಪಿಕ್ಸಾಬೇ

ಲಂಡನ್ ಆರ್ಕಿಯಾಲಜಿ ಡಿಪಾರ್ಟಮೆಂಟದಲ್ಲಿ ಅ ಹುಡುಗ ತುಂಬಾ ಗಡಿಬಿಡಿಯಾಗಿಯೇ ಓಡಾಡುತ್ತಿದ್ದ. ಕೈಯಲ್ಲಿ ದೊಡ್ಡ ದೊಡ್ಡ ಫೈಲ್ಗಳು, ಕೊರಳಿಗೆ ಇಳಿಬಿಟ್ಟ ಟೈ ಕೆದರಿದ ಗುಂಗುರು ಕೂದಲು ಬಹುಶಃ ಒಂದು ವಾರದಿಂದ ದಾಡಿ ಮಾಡಿಕೊಂಡಿರಲಾರದಂತಹ ಮುಖ. ಆದರೂ ಅರೂವರೇ ಫೂಟ ಎತ್ತರವಾದ ಕಟ್ಟುಮಸ್ತಾದ ದೇಹದಿಂದ ಅಲ್ಲಿರುವ ಎಲ್ಲರೊಳಗೂ ಎದ್ದು ಕಾಣುತ್ತಿದ್ದ.

ನನಗೇನು ಅವನು ಬ್ರಿಟಿಷ್ ಅಥವಾ ಅಮೇರಿಕದವನಂತೆ ಕಾಣಲಿಲ್ಲ. ಆದರೆ ಅವನೊಟ್ಟಿಗೆ ಓಡಾಡುವ ನಗುಮೊಗದ ಗುಲಾಬಿ ಹುಡುಗಿ ಮಾತ್ರ ಇಲ್ಲಿಯವಳೇ ಅನಿಸಿತು.

`ನೋರಾ’ `ನೋರಾ’ ಎಂದು ನಾಲ್ಕೈದು ಸಲ ಆಗಾಗ ಅತ ಆ ಹುಡುಗಿಯನ್ನು ಕರೆದಾಗ ಅವಳ ಹೆಸರು ನೋರಾ ಎಂದು ತಿಳಿಯಿತು. ಅದರೆ ಅವಳು ಅವನನ್ನು ಯಾವುದೋ ಹೆಸರಿನಿಂದ ಕರೆಯುತ್ತಿದ್ದರೂ ನಾನಿದ್ದ ಒಂದು ಗಂಟೆಯವರೆಗೂ ಆ ಹೆಸರು ತಿಳಿದುಕೊಳ್ಳಲಿಕ್ಕಾಗಲಿಲ್ಲ.

ಈ ಬ್ರಿಟಿಷ್ ಮ್ಯೂಸಿಯಂದೊಳಗೆ ಇಜಿಪ್ತದ ಕಲಾಸಂಗ್ರಹಾಲಯ, ನೋಡಿ `ಮಮ್ಮಿ’ಗಳನ್ನು ನೋಡುತ್ತ ಕುತೂಹಲದಿಂದ ಆಗಲೇ ಸಾಕಷ್ಟು ಸಮಯ ಕಳೆದಿದ್ದೆ. ಈ ನಡುವೆಯೇ ಈ ಆರ್ಕಿಯಾಲಜಿ ಡಿಪಾರ್ಟಮೆಂಟದ ಹುಡುಗರು ಸಂಶೋಧನೆಯ ಒಂದು ಭಾಗವಾಗಿ ಇಲ್ಲೆಲ್ಲ ಅಡ್ಡಾಡುತ್ತಿದ್ದರು.

ಆ ಗುಂಪಿನಲ್ಲಿ ಆ ಕಟ್ಟುಮಸ್ತಾದ ಹುಡುಗ ತನಗೆಲ್ಲ ಗೊತ್ತಿದೆ ಅನ್ನುವ ತರಹ ವರ್ತಿಸುತ್ತಿದ್ದ. ಕೂತೂಹಲದಿಂದ ನಾನು ಅ ಗುಂಪಿನ ಕಡೆಗೆ ನಡೆದೆ.

ಕಾಫಿ ಕುಡಿಯುವ ಸಮಯವಾದುದರಿಂದ ಎಲ್ಲರೂ ಅಲ್ಲಲ್ಲೇ ನಿಂತು ಹರಟೆ ಹೊಡೆಯುತ್ತಿದ್ದರು.

“ನಾನೊಬ್ಬ ಪ್ರವಾಸಿ, ಮ್ಯೂಸಿಯಂ ನೋಡುತ್ತಿದ್ದೇನೆ, ನೀವುಗಳು ಅದೇನು ಮಾಡುತ್ತಿರುವಿರಿ” ಅವರ ಮುಖ್ಯಸ್ಥ ಮಿ. ಹ್ಯಾರಿ ಅವರನ್ನು ಮಾತಾಡಿಸಿದೆ.

“ಇಜಿಪ್ತಿನ ಪಿರಾಮಿಡ್ಡುಗಳ ಹಾಗೂ ಮಮ್ಮಿಗಳ ವಿಷಯವಾಗಿ ವಿದ್ಯಾರ್ಥಿಗಳು ಸಂಶೋಧನೆ ನಡೆಸಿದ್ದಾರೆ” ಎಂದರು.

“ಇದೆಲ್ಲಾ ಆಗಲೇ ಸಂಶೋಧಿಸಿ ದಾಖಲೆಗಳಾಗಿವೆಯಲ್ಲ?’

“ದಾಖಲೆಗಳಾದರೂ ಕೂಡಾ ಸಮಗ್ರವಾಗಿ ಆಗಿಲ್ಲ”

“ಹಾಗಾದರೆ ಈ ಮ್ಯೂಸಿಯಂದಲ್ಲೇಕೆ ಸಂಶೋಧನೆ ಮಾಡಬೇಕು, ಇಜಿಪ್ತದಲ್ಲಿಯೇ ಇದ್ದರೆ ಸವಿವರವಾಗಿ ಮಾಡಬಹುದಲ್ಲ”

“ಆಗಾಗ ನಾವು ನಮಗೆ ಬೇಕಾದ ವಿಷಯ ಸಂಗ್ರಹಕ್ಕೆ ಹೋಗಿ ಬರುತ್ತೇವೆ” ವಿಷಯ ಸಂಗ್ರಹ ಸಾಕಷ್ಟಾಗಿದ್ದರೂ ಇನ್ನೂ ಅನೇಕ ತಂತ್ರಜ್ಞಾನ,
ವಿಜ್ಞಾನ ಬಳಸಿಕೊಂಡು ಕೆಲಸ ಮಾಡಲೇಬೇಕಾಗುತ್ತದೆ” ಅವರು ಹೇಳುತಿದ್ದಂತೆಯೇ ನೋರಾ ಹತ್ತಿರ ಬಂದು ಮುಂದಿನ ಕೆಲಸದ ಕಡೆಗೆ
ಹೊರಡೋಣವೆ? ಎನ್ನುವಂತೆ ಮಿ. ಹ್ಯಾರಿ ಯವರಿಗೆ ಸೂಚಿಸಿದಳು.

ಮಿ. ಹ್ಯಾರಿ ಅವಳನ್ನು ನೋಡಿ ನನ್ನೆಡೆಗೆ ನೋಡುತ್ತ “ತುಂಬಾ ಚೂಟಿಯಾದ ಹುಡುಗಿ ನೋರಾ, ಸಮಯ ಸಮಯಕ್ಕೆಲ್ಲಾ ಕೆಲಸಗಳು ಆಗಿಬಿಡಬೇಕು, ಇಲ್ಲದೆ ಹೋದರೆ ಗುಂಪಿನಲ್ಲಿ ಎಲ್ಲರಿಗೂ ಕೂಗಾಡುತ್ತಾಳೆ, ಮತ್ತೆ ನೋಡೋಣ! ಸಾಧ್ಯವಾದರೆ ನಾಳೆ ಬನ್ನಿ ಈ ಗುಂಪಿನ ಕೆಲಸ ನೋಡಲಿಕ್ಕೆ” ಎಂದು ನಗುತ್ತ ಹೊರಟರು.

ಆಗಲೇ ನೋರಾ ಅ ಹುಡುಗನ ರಟ್ಟೆ ಹಿಡಿದು ಏನೋ ಸಿಟ್ಟಿಗೆದ್ದಂತೆ ಮಾಡಿ ಉಳಿದವರನ್ನೆಲ್ಲಾ ಮುಂದೆ ಹಾಕಿಕೊಂಡು ಹೊರಟೇ ಬಿಟ್ಟಳು.

ಒಂದೇ ದಿನ ನೋಡಿದರೆ ಮುಗಿಯದಂತಹ ಮೂಸಿಯಂ ನೋಡಲು ನಾಳೆ ಮತ್ತೊಮ್ಮೆ ಬಂದರಾಯ್ತೆಂದು ಅಷ್ಟಿಷ್ಟು ನೋಡಿ ಹೊರಗೆ ಹೊರಟೆ.

****

ಈ ದಿನ ಮತ್ತೆ ಅವರದು ಅದೇ ಓಡಾಟ ಇರಬೇಕೆಂದುಕೊಂಡಿದ್ದೆ. ಹಾಗೇನಿರಲಿಲ್ಲ. ಎಲ್ಲರೂ ಸೀರಿಯಸ್ ಆಗಿ ಕೆಲಸದಲ್ಲಿ ತೊಡಗಿದ್ದರು. ಸ್ಲೈಡ್ಸ್ ಗಳು, ವಿವಿಧ `ಮಮ್ಮಿ’ ಚಿತ್ರಗಳು ಹಾಕಿ ಅವುಗಳ ಮುಖಾಂತರ ಚರ್ಚೆ ಮಾತುಗಳು, ಟಿಪ್ಪಣಿ ಮಾಡಿಕೊಳ್ಳುವದು ನಡೆಸಿದ್ದರು. ಸತ್ತ ದೇಹದೊಳಗಿನ
ಮಾಂಸ-ನರಗಳು ತೆಗೆಯುವ, ಒಳಗಡೆ ದ್ರಾವಣಗಳನ್ನು ತುಂಬಿ ಹೊಲೆಯುವ ತರಗತಿ ನಡೆದಿತ್ತು.

ಕೂತೂಹಲದಿಂದ ನಾನು ನಿಧಾನವಾಗಿ ಕ್ಲಾಸಿನ ಹಿಂಬದಿಯ ಬಾಗಿಲಿನಿಂದ ಒಳಗೆ ಹೋಗಿ ಕುಳಿತು ನೋಡಿದೆ, ಕೇಳಿದೆ.

ಸಾವಿರ ಸಾವಿರ ವರ್ಷಗಳು ಉಳಿದು ಈಗ ಈ ಮ್ಯೂಸಿಯಂದಲ್ಲಿ ಮಲಗಿದ ನೂರಾರು ಮಮ್ಮಿಗಳನ್ನು ಮತ್ತೆ ಒಂದೆರಡು ಬಾರಿ ರೌಂಡು ಹೊಡೆದು ನೋಡಿದೆ.

ದಾಖಲೆಯ ಹಿನ್ನೆಲೆಯಲ್ಲಿರುವ ರಾಜ-ಮಹಾರಾಜರ ಅವರ ವಂಶಾವಳಿಯ ಮಮ್ಮಿಗಳು ಇಲ್ಲಿ ಅತ್ಯುತ್ತಮ ಹೈ ಟೆಕ್ ಸ್ಮಶಾನದಲ್ಲಿವೆ ಎಂದುಕೊಳ್ಳುತ್ತ
ಕುತೂಹಲದಿಂದ ಸಾಕಷ್ಟು ಸಮಯ ಕಳೆದೆ.

ಈ ಹುಡುಗರು ಅವರ ಮುಖ್ಯಸ್ಥರು ಹೊರಗೆ ಬರಲಿ ಮತ್ತೇನಾದರೂ ಕೇಳಿದರಾಯ್ತು ಎಂದುಕೊಳ್ಳುತ್ತಿದ್ದೆ.

ಬಹಳ ಹೊತ್ತಿನ ನಂತರ ಅವರೆಲ್ಲ ಹೊರಗೆ ಬಂದರು. ಮಿ. ಹ್ಯಾರಿ ಅವಸರವಸರದಿಂದ ಹಾಗೆಯೇ ಹೊರಟು ಬಿಟ್ಟರು.

ನೋರಾ ಹೊರಗೆ ಬರುತ್ತಿದ್ದಂತೆಯೇ ನಾನೇ ಮಾತನಾಡಿಸಿದೆ. ಸಂಶೋಧನೆಯ ವಿಷಯ ಕೇಳುತ್ತಿದ್ದೆ. ಆ ಎತ್ತರದ ಹುಡುಗ ಬಂದು ಅವಳ ಪಕ್ಕದಲ್ಲಿ ನಿಂತ.

“ಇವನೊಬ್ಬ ನನ್ನ ಒಳ್ಳೆಯ ಸ್ನೇಹಿತ” ಎನ್ನುತ್ತ ಅವನ ತೋಳಿಗೆ ತಿವಿದಳು.

“ಕಿಲಾಡಿತನ ಬಿಡು ಪ್ರವಾಸಿಗರ ಮುಂದೆ” ಅಂದ ಅತ.

“ಇದು ನಿಮ್ಮ ದೇಶ ಇಜಿಪ್ತ ಅಲ್ಲ, ಕಾಯ್ದೆ, ಕಟ್ಟಳೆಗಳು ಇಲ್ಲಿ ಇಲ್ಲ ಅದೆಷ್ಟು ಸಲ ನಿನಗೆ ಹೇಳಬೇಕು” ಎನ್ನುತ್ತಾಳೆ ಇನ್ನೂ ಅವನನ್ನು ತನ್ನ ತುಂಟು
ಮಾತುಗಳಿಂದ ತಿವಿಯುತ್ತ.

“ಹಾಗಾದರೆ ನೀನು ಇಜಿಪ್ತಿನವನೆ”?

“ಹೌದು”.

“ಅಲ್ಲಿಯೇ ಹುಟ್ಟಿ ಬೆಳೆದವನಾಗಿ ನಿಮ್ಮ ದೇಶದ ಮಮ್ಮಿಗಳನ್ನು ಪಿರ್‍ಯಾಮಿಡ್ಡುಗಳನ್ನು ಅಭ್ಯಸಿಸಲು ಇಲ್ಲಿಗೆ ಬರಬೇಕೆ?”

“ಹುಟ್ಟಿ ಬೆಳೆಯುವದು ಬೇರೆ, ಅಭ್ಯಸಿಸುವದು ಬೇರೆ” ಎಂದು ನನಗೇ ತಿರುಮಂತ್ರ ಹಾಕಿದವನಂತೆ ಮಾತನಾಡಿದ.

ಆದರೂ ಅವನ ಮಾತು ನನಗೆ ಹಿಡಿಸಿತು.

“ನಿನ್ನೆ ಹೆಸರೇನೆಂದೆ?”

“ಶೋಲೇಮ್”

“ನೀವು ಪ್ರವಾಸಿಯೇ ಆಗಿದ್ದರೆ ಬನ್ನಿ ನಮ್ಮ ದೇಶಕ್ಕೆ, ನನ್ನ ತಂದೆ ಅಲ್ಲಿ ನೈಲ್ ನದಿಯ ಮೇಲೆ ಓಡಾಡುವ ಕ್ರೂಜ್ ಮಾಲಿಕ. ನಿಮಗೆಲ್ಲ ಅನುಕೂಲವಾಗುವಂತೆ ಮಾಡುತ್ತೇನೆ ಬೇಕಿದ್ದರೆ” – ವ್ಯವಹಾರ ಕುದುರುವಂತೆ ಮಾತನಾಡಿದ.

ನನಗೂ ಆ ಕ್ಷಣ ಇಜಿಪ್ತಿಗೆ ಹೋಗಿ ಬರಬೇಕೆಂದೆನಿಸಿತು. ಸಾಯಂಕಾಲ ಬಿಡುವಾಗಿದ್ದರೆ ನೀವಿಬ್ಬರೂ ನನ್ನ ರೂಂ ಗೆ ಬನ್ನಿ ಎಂದು ವಿಳಾಸ ಕೊಟ್ಟೆ.

ಖಂಡಿತವಾಗಿಯೂ ಬರುತ್ತೇವೆ ಎನ್ನುತ್ತ ನನ್ನ ಕೈ ಕುಲುಕಿ ಹೊರಟರು. ಬರಲಿಕ್ಕಿಲ್ಲ ಅವರು, ಮಾತಾಡುವ ರೀತಿಯೇ ಹಾಗೆ ಎಂದು ನಾನು ತಿಳಿದುಕೊಂಡು
ಬಿಟ್ಟಿದ್ದೆ.

ಆದರೆ ಆಶ್ಚರ್ಯ ಅನ್ನುವಂತೆ ಫೋನ್ ಮಾಡಿ ಬಂದೇ ಬಿಟ್ಟರು.

ಶೋಲೇಮ್ ಕೈಯಲ್ಲಿ ಸ್ವೀಟ್ ಬಾಕ್ಸ್ ಹಿಡಿದುಕೊಂಡು ಬಂದಿದ್ದ.

“ಇದೇನು ಶೋಲೇಮ್, ಯಾಕೆ ತಂದೆ, ಎರಡು ದಿನಗಳಷ್ಟೇ ನಾವು ಪರಿಚಿತರು. ನಾನು, ನೀವು ಯಾರು ಯಾರು ಎಂದು ಒಬ್ಬರಿಗೊಬ್ಬರಿಗೂ ಪರಿಚಯವಿಲ್ಲ. ನಾನೊಬ್ಬ ಪ್ರವಾಸಿ, ನೀವು ಸಂಶೋಧನೆಯ ವಿದ್ಯಾರ್ಥಿಗಳು.
ಹೀಗಿರುವಾಗ ಇದೆಲ್ಲಾ ಯಾಕೆ?”

“ಪರಿಚಯವಿಲ್ಲದವರನ್ನು ಸ್ವೀಟ್ ಕೊಟ್ಟು ಪರಿಚಯಿಸಿಕೊಳ್ಳುವದರಲ್ಲಿ ಶೋಲೇಮ್ ನಿಸ್ಸೀಮ” ನೋರಾ ನಗುತ್ತಾಳೆ.

“ಹೌದು ಹೌದು” ತಾವು ಮದುವೆಯಾಗಲು ಒಂದು ವರ್ಷದಿಂದ ಒಪ್ಪಿಕೊಂಡು ಇಂದೇ ಉಂಗುರ ಬದಲಿಸಿಕೊಂಡದ್ದಾಗಿ ಹೇಳಿ ನೋರಾ ಉದ್ದಾಗಿ ಕೈಚಾಚಿ ಉಂಗುರ ತೋರಿಸಿ ನಕ್ಕಳು.

ಕಾಫಿ ಕುಡಿಯುತ್ತ ನಮ್ಮ ಪರಿಚಯ ಮಾಡಿಕೊಳ್ಳುವದರಲ್ಲಿ ಹೇಗೆ ಒಂದು ಗಂಟೆ ಕಳೆದುಹೋಯಿತೊ! ಗೊತ್ತೇ ಆಗಲಿಲ್ಲ. ರಿಸೆಪ್ಷನ್ ಕೌಂಟರ್‌ಗೆ ಫೋನ್ ಮಾಡಿ ಹೂಗುಚ್ಛ ಬೇಕೆಂದು ಹೇಳಿದ್ದರಿಂದ ರೂಮ್ ಬಾಯ್ ಬಂದು ಬೆಲ್ ಹಾಕಿದಾಗಲೇ ನಾವು ಮಾತಿಗೆ ಕಡಿವಾಣ ಹಾಕಿದ್ದು.

ಅವರ ಸಂತೋಷದ ಕ್ಷಣಗಳಿಗೆ ನಾನು ಹೂಗುಚ್ಛ ಕೊಟ್ಬಾಗ ಅವರಿಬ್ಬರೂ ನನ್ನನ್ನು ಬಲವಾಗಿ ತಬ್ಬಿ ಮುದ್ದಿಸಿದರು.

“ನೋರಾ ಇನ್ನೇನು ಇಜಿಪ್ತಿಗೆ ಹೊರಡುವವಳು” ಎಂದೆ.

`ಇಲ್ಲ ಇಲ್ಲ. ಅಲ್ಲೇನಿದೆ? ಆಗಲೇ ಸಾಕಷ್ಟು ಸಲ ವಿಷಯ ಸಂಗ್ರಹಣೆ ಸಮಯದಲ್ಲಿ ಅಡ್ಡಾಡಿ ಆಗಿದೆ. ಮತ್ತೆ ಅಲ್ಲೇ ಹೋಗಿ ನೆಲೆಸುವದೆಂದರೆ ನನಗೆ
ಆಗುವದಿಲ್ಲ. ತಿರು ತಿರುಗಿ ಅದೇ ಪಿರ್ಯಾಮಿಡ್ಡು ಗಳು, ಅದೇ ನೈಲ್‌ನದಿ’ ಮುಖ ಕಿವುಚಿಕೊಂಡಂತೆ ಮಾಡಿದಳು.

`ಅವಳು ಹಾಗೇ ಅನ್ನುತ್ತಿರುತ್ತಾಳೆ, ಹೊತ್ತುಕೊಂಡು ಒಯ್ಯುತ್ತೇನೆ ಅವಳನ್ನು’ ಶೋಲೇಮ್ ನಗೆಯಾಡಿದ.

ಅವರಿಬ್ಬರ ತುಂಟುತನ ನನಗೆ ಖುಷಿಕೊಟ್ಟಿತು.

ಮರೆಯದೇ ಅತ ಮತ್ತೊಮ್ಮೆ ಇಜಿಪ್ತಿಗೆ ಬರುವಂತೆ ಹೇಳಿ ವಿಳಾಸ ಕೊಟ್ಟು ಹೊರಟರು.

***

ಮೂರು ವರ್ಷಗಳ ನಂತರ ನಾನು ಇಜಿಪ್ತಿಗೆ ಹೊರಟಿದ್ದೇನೆ. ನೆನಪಿನಿಂದ ಶೋಲೇಮ್ ಕೊಟ್ಟ ವಿಳಾಸ ಇಟ್ಟುಕೊಂಡಿದ್ದೇನೆ. ಆಗಲೇ ಆತ ಮರೆತಿರುತ್ತಾನೆ
ಎಂದೂ ತಿಳಿದುಕೊಂಡು, ನಾನೂ ಹೆಚ್ಚು ಅ ಬಗೆಗೆ ತಲೆ ಕೆಡಿಸಿಕೊಳ್ಳದೇ ನನ್ನ ಪ್ರವಾಸದ ಹುಚ್ಚಿನ ಹಾದಿಯಲ್ಲಿ ಇದ್ದೇನೆ.

೩-೪ ದಿನಗಳಲ್ಲಿ ಇಜಿಪ್ತದ ಇತರ ಭಾಗಗಳನ್ನೆಲ್ಲಾ ನೋಡಿದ್ದಾಯ್ತು. ಅದೆಷ್ಟೋ ಸಲ ಶೋಲೇಮ್‌ನಿಗೆ ಫೋನ್ ಮಾಡಿದರೂ ಕೂಡಾ ಯಾರೂ ಸರಿಯಾಗಿ ಏನೂ ಹೇಳುತ್ತಲೇ ಇಲ್ಲ.

ನೈಲ್‌ನ ಕ್ರೂಜದಲ್ಲಿರುತ್ತಾನೆ ಎಂದು ಕೊನೆಗೆ ಸುಳಿವು ಸಿಕ್ಕಂತಾಯ್ತು. ನೈಲ್ ನದಿಗುಂಟ ಕ್ರೂಜದಲ್ಲಿ ನಾನು ಹೊರಟಿದ್ದೇನೆ. ಇಜಿಪ್ತಿನ ಆಕಾಶವೆಲ್ಲ
ಸ್ವಚ್ಛ ಶುಭ್ರ. ಕೆಲದಿನಗಳ ಹಿಂದಷ್ಟೇ ನೈಲ್ ನದಿ ಉಕ್ಕಿ ಹರಿದ ಕುರುಹು, ಎರಡೂ ಬದಿಯ ಇಕ್ಕೆಲಗಳಲ್ಲಿ ಸಮೃದ್ಧವಾಗಿ ಬೆಳೆದ ಹಸಿರು
ಹೂವುಗಳಿಂದಾಗಲೀ, ಅಥವಾ ಹೊಸದಾಗಿ ಹರವಿದ ರೇವಿನಿಂದಾಗಲೀ ಕಂಡುಕೊಳ್ಳಬಹುದಾಗಿತ್ತು.

ತಿಂಡಿ ಕಾಫಿ ಸರಬರಾಜು ಆಗುತ್ತಿದೆ. ಕ್ರೂಜ್‌ದೊಳಗಿನ ಈ ಗೈಡು ಭಾರೀ ಧಡೂತಿ ಮನುಷ್ಯ. ಶೋಲೇಮ್‌ನ ನೆನಪಾಯ್ತು, ಅದರೆ ಈತ ಅವನಲ್ಲ.

ನೈಲ್ ನದಿಯ ಹುಟ್ಟು, ಅದರೊಂದಿಗೆ ಬೆಳೆದುಕೊಂಡು ಬಂದಿರುವ ಒಂದು ಪುರಾತನ ಸಂಸ್ಕೃತಿ – ಸಿರಿವಂತಿಕೆಗಳ ಬಗೆಗೆ ಕಣ್ಣು ಕಟ್ಟುವಂತೆ ಗೈಡ್
ವರ್ಣಿಸುತ್ತಿದ್ದಾನೆ. ಎಡ ಬಲಬದಿಗಳ ದಡಗಳಲ್ಲಿ ಕಾಣುವ ಅಂದಿನ ಅರಮನೆಗಳು ಅಮ್ಮಾನ್ ದೇವಾಲಯ, ಇಸ್ತೇರ್ ದೇವಾಲಯಗಳ ಪರಿಚಯ
ಹೇಳತೊಡಗಿದ್ದಾನೆ.

ಅಧಿಕಾರಕ್ಕಾಗಿ ಹಣಾಹಣಿ ನಡೆಸಿದ ಅಂದಿನ ಬೆಬಲೋನಿ, ಹಿಟ್ಟಿಗಳು, ಅಸ್ಟೇರಿಯನ್ನರು, ಹೆಬ್ರುಗಳು, ಕೆಸೆಟ್ಟಿಗಳು, ಓಟ್ಟೋಮಾನ್ ರಾಜರುಗಳು ಇವರ
ಹೋರಾಟ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದಾನೆ.

ಸುಮಾರು ಎರಡು ಗಂಟೆಗಳ ಈ ಸಮಯದಲ್ಲಿ ಶೋಲೇಮ್ ಎಲ್ಲಿಯೂ ಕಾಣಲಿಲ್ಲ. ಅವನೇ ಕ್ರೂಜ್‌ನ ಮಾಲಿಕನಾಗಿದ್ದಾನೆ ಎಂದೂ ಈ ಗೈಡ್ ನಡುವೆ ಒಮ್ಮೆ ನಾನು ಮಾತನಾಡಿಸಿದಾಗ ಹೇಳಿದ್ದ. ಅದರೆ ಈ ವರೆಗೆ ಒಮ್ಮೆಯೂ ಎಲ್ಲಿಯೂ ಕಾಣಿಸಲೇ ಇಲ್ಲವಲ್ಲ. ಆಗಾಗ ಸುತ್ತೆಲ್ಲ ನಾನು ನೋಡುತ್ತಲೇ ಇದ್ದೆ.

ಕ್ರೂಜ್‌ದ ಮಧ್ಯಕ್ಕಿರುವ ಮೆಟ್ಟಲುಗಳ ಮೇಲಿಂದ ಸದೃಢ ಮೈಕಟ್ಟಿನ ಆರು ಹುಡುಗಿಯರು ಧಬಧಬನೆ ಇಳಿದು ನಾವು ಕುಳಿತಿರುವ ಕ್ರೂಜ್‌ದ ಅಂಗಳಕ್ಕೆ ಬಂದರು, ಅವರು ಸಾಮಾನ್ಯ ಹುಡುಗಿಯರಲ್ಲ. ಮಧ್ಯಪೂರ್ವದೇಶಗಳಲ್ಲಿ ಲೆಬನಾನ್, ಇಜಿಪ್ಷಿಯನ್ ಹುಡುಗಿಯರೆಂದರೆ ಸುರಸುಂದರಿಯರು. ಕಣ್ಣು
ಪಿಳುಕಿಸದೇ ನೋಡಬೇಕೆನ್ನುವ ಚಪಲ ಪ್ರಯಾಣಿಕರಿಗೆಲ್ಲ.

ತನ್ನನ್ನೆಲ್ಲಿ ಪ್ರವಾಸಿಗರು ಮರೆತೇ ಬಿಡುವರೋ ಎಂದುಕೊಂಡು ಈ ಗೈಡ್, ಹುಡುಗಿಯರಂತೆಯೇ ಎದೆ ಏರಿಸುತ್ತ ಅವರೊಳಗೆಯೇ ಹೊಕ್ಕು ಎಲ್ಲರ ಬೆನ್ನು
ಮುಖದ ಮೇಲೆ ಕೈಯಾಡಿಸಿ ಮುದ್ದಿಸಿ, ಏನೋ ಅವರ ಮುಖ ತುಟಿಗಳ ಹತ್ತಿರ ಹೇಳಿ ಖೊಳ್ಳನೆ ಅವರನ್ನು ನಗಿಸಿ ಹೊರಗೋಡಿ ಬಂದ.

ತಕ್ಷಣ ಅರ್ಕೆಸ್ಟ್ರಾ ಸುರುವಾಯಿತು. ತಾಳಕ್ಕೆ ಹೊಂದಿಕೊಳ್ಳುತ್ತ ಹುಡುಗಿಯರು ಬಳುಕಾಡತೊಡಗಿದರು. ವಾದ್ಯ ಸಂಗೀತಗಳ ಗಮ್ಮತ್ತು
ಏರುತ್ತಿದ್ದಂತೆಯೇ ಮೇಲುಡುಗೆಯ ಒಂದೆರಡು ಉದ್ದನೆಯ ಬಟ್ಟೆಗಳನ್ನು ಪ್ರವಾಸಿಗರೆಡೆಗೆ ತೆಗೆದೊಗೆದರು. ಒಬ್ಬಂಟಿ ಯುವ ಪ್ರವಾಸಿಗರಿಗೆ ಖುಷಿಯೋ
ಖುಷಿ ಅವನ್ನು ಮುಟ್ಟಲು ಮುದ್ದಿಸಲು.

ಸೊಂಟ ಬಳುಕಾಡಿಸುತ್ತ ಮಾಡುವ ಇಜಿಪ್ತದ ಬೆಲ್ಲಿ ಡಾನ್ಸ್‌ ತುಂಬಾ ಪ್ರಸಿದ್ಧವಾದುದು. ಪ್ರವಾಸಿಗರನ್ನು ಆಕರ್ಷಿಸಿತ್ತು. ಶಾಂಪೇನ್ ಗ್ಲಾಸ್‌ಗಳನ್ನು
ಅಲ್ಲಲ್ಲೇ ಸರಿಸಿ ಆಗಲೇ ಮತ್ತೇರಿದ ತಲೆಗೆ ಈ ಹುಡುಗಿಯರ ಉಬ್ಬು ತಗ್ಗುಗಳನ್ನೆಲ್ಲಾ ಕಣ್ಣಲ್ಲಿ ತುಂಬಿಕೊಂಡು ಕುಣಿಯಲು ಸುರುಮಾಡಿದ್ದರು.

ನೈಲ್ ನದಿಯ ತಣ್ಣನೆಯ ಗಾಳಿ ಮುದ ನೀಡುತ್ತಿದೆ. ವಾದ್ಯ ಸಂಗೀತಗಳಿಗೆ ಹೊಂದಿಕೊಂಡಂತೆಯೇ ನೀರಿನ ಅಲೆಗಳೇ ಉಂಗುರ ಉಂಗುರಗಳಾಗಿ
ಪುಟಿದಾಡುತ್ತಿವೆ. ಚಿಕ್ಕ ಪುಟ್ಟ ದೋಣಿ ವಿಹಾರಿಗಳು ನಮ್ಮ ಕಡೆಗೆ ಕೈಬೀಸುತ್ತಾ ಕೇಕೆ ಹಾಕುತ್ತ ದಾಟುತ್ತಿದ್ದಾರೆ.

ಮಧ್ಯಾಹ್ನದ ಊಟದ ತಟ್ಟೆಗಳೆಲ್ಲಾ ಬರಿದಾದವು.

ಶೋಲೇಮ್, ನೋರಾಳನ್ನು ನೋಡಬೇಕೆಂದು ನನ್ನ ಮನಸ್ಸು ಅದೇಕೋ ಒಂದೇ ಸವನೇ ಹಂಬಲಿಸುತ್ತಿತ್ತು. ಒಂದು ಸುತ್ತು ಅಡ್ಡಾಡಿ ಬರೋಣವೆಂದು ಎದ್ದೆ.

“ಕ್ರೂಜ್‌ದ ಮಾಲಕನ ಹೆಸರು ಶೋಲೇಮ್ ಎಂದಿರಬೇಕಲ್ಲವೆ” ಗೈಡ್‌ಗೆ ಕೇಳಿದೆ.

“ಹೌದು, ಅದ್ಹೇಗೆ ಗೊತ್ತು ನಿಮಗೇ”

ನಾನೆಲ್ಲ ಹೇಳಿದೆ, “ಅದಕ್ಕೆ ನೋಡಬೇಕಲ್ಲ ಅವರನ್ನು” ಎಂದೆ. ಇನ್ನೊಂದು ಅರ್ಧ ಗಂಟೆಗೆ ತಮ್ಮ ಕ್ಯಾಬಿನ್‌ದಿಂದ ಹೊರಗೆ ಬರುತ್ತಾರೆ. ಆವಾಗ ಅವರನ್ನು
ನೋಡಬಹುದು ಎಂದು ಹೇಳಿ ಮುಂದೆ ಹೋಗಿಬಿಟ್ಟ.

ಶೋಲೇಮ್ ಕೂತಲ್ಲೇ ಕೂಡಲಾರದ ವ್ಯಕ್ತಿ ಎಂದು ನೋರಾ ಹೇಳಿದ ಮಾತು ನೆನಪಾಗಿ ನಗುಬಂತು. ಆದರೆ ಇಲ್ಲಿ ಹಾಗಿಲ್ಲವಲ್ಲ. ಅವನು ಕಾಣಿಸಲೇ ಇಲ್ಲ. ಆವಾಗ ವಿದ್ಯಾರ್ಥಿ ಇದ್ದ, ಈಗ ಮಾಲಿಕ. ಗಂಭೀರವಾಗಿಯೇ ಇರಬೇಕಲ್ಲವೆ? – ಎಂದು ಕೊಂಡೆ.

ದೂರದಲ್ಲಿ ಪಿರ್‍ಯಾಮಿಡ್ಡುಗಳು ಕಾಣಿಸುತ್ತಿದ್ದಂತೆಯೇ ಗೈಡ್ ಮತ್ತೆ ಎಲ್ಲರನ್ನೂ ಕ್ಯಾಬಿನ್‌ದ ಅಂಚಿಗೆ ಕರೆಯುತ್ತಿದ್ದಾನೆ.

ವಿಚಿತ್ರ ವಿಚಿತ್ರ ಆಯ-ಅಳತೆ ಆಕಾರಗಳ, ಪಿರ್‍ಯಾಮಿಡ್ಡುಗಳನ್ನು ತೋರಿಸುತ್ತ, ಅಂದಿನ ಪ್ರಸಿದ್ದ ದೊರೆಗಳ ಸಮಾಧಿಗಳಡಿಯಲ್ಲಿ ಮಲಗಿರುವವರ, ಕಥೆಗಳನ್ನು ಹೇಳುತ್ತಿದ್ದ. ಅವರ ಪ್ರಿಯವಾದ ಬಟ್ಟೆ ಬರೆಗಳು, ಮುತ್ತು ರತ್ನ ವಜ್ರ ವೈಢೂರ್ಯಗಳ ಜೊತೆಗೆ ಪಾತ್ರೆ ಪಡಗಗಳಿಂದ ಹಿಡಿದು ಮಲಗುವ ಮಂಚದವರೆಗೆಲ್ಲ ಇಡುತ್ತಿದ್ದರಂತೆ.

ಶ್ರೀಮಂತರ ಪಿರ್‍ಯಾಮಿಡ್ಡುಗಳನ್ನು ಕಾಯುವದೇ ಒಂದು ತಲೆನೋವಿನ ಕೆಲಸವಾಗಿತ್ತಂತೆ ಕಾವಲುಗಾರರಿಗೆ. ನೆರೆ ಹೊರೆಯ ಚಿಕ್ಕ ಪುಟ್ಟ ರಾಜ್ಯಗಳ
ಬಡ ಜನರು ಬಂದು ರಾತ್ರಿ ಪಿರ್‍ಯಾಮಿಡ್ಡುಗಳಲ್ಲಿ ಇಟ್ಟಿದ್ದ ಬೆಲೆಯುಳ್ಳ ವಸ್ತುಗಳನ್ನು ಕಳ್ಳತನ ಮಾಡಿ ಹೇಗೆ ಶ್ರೀಮಂತರಾಗುತ್ತಿದ್ದರು ಎಂದು ಹೇಳಿದ.

ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ಕ್ರೂಜ್ ಒಂದೆಡೆಯ ದಂಡೆಗೆ ನಿಂತುಕೊಂಡಿತು. ಎಲ್ಲರೂ ಇಳಿದು ಬರುವಂತೆ ಹೇಳುತ್ತ-

ಈಗ ನಿಮಗೆ ಅತೀ ಮುಖ್ಯವಾದ ೨೧ನೆಯ ಶತಮಾನಕ್ಕೆ ಕಾಲಿಟ್ಟ ಹೊಸ ವಿಧದ ಪಿರ್ಯಾಮಿಡ್ಡು ತೋರಿಸುತ್ತೇನೆ ಬನ್ನಿ” ಎನ್ನುತ್ತ ಮುಂದಾದ.

ಹೊರನೋಟದಲ್ಲಿ ಅದೊಂದು ಅರಮನೆ. ಇತ್ತೀಚೆಗಷ್ಟೇ ಕಟ್ಟಿದ ಸುಂದರ ವಿನ್ಯಾಸಗಳನ್ನೊಳಗೊಂಡ ಪಿರ್‍ಯಾಮಿಡ್ಡು.. ವಿಜ್ಞಾನ ತಂತ್ರಜ್ಞಾನಗಳ ಆಧಾರದ
ಮೇಲೆ ನಿರ್ಮಾಣವಾದುದು.

ಇದನ್ನು ಕಟ್ಟಿದವರು ನಮ್ಮ ದೇಶದ ವಿಜ್ಞಾನಿ. ಮಿ.ಶೋಲೇಮ್. ಇಂಗ್ಲೇಂಡಿನಲ್ಲಿ ಉನ್ನತ ಸಂಶೋಧನೆ ಕೈಕೊಂಡ ಮಿ. ಶೋಲೇಮ್ ಹಾಗೂ ಅವರ ಶ್ರೀಮತಿ ನೋರಾ ಈ ಸ್ಥಳದಲ್ಲಿ ಇದ್ದುಕೊಂಡು ಇನ್ನೂ ಇನ್ನೂ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಕೊಂಡಂಥವರು. ಈ ಬಗೆಗೆ ಹೆಚ್ಚಿನ ವಿವರಣೆಯನ್ನು ನಮ್ಮ ಜೊತೆಯಲ್ಲಿ ಇಲ್ಲಿ ಬರುತ್ತಿರುವ ಮಿ. ಶೋಲೇಮ್ ಅವರಿಂದಲೇ ಕೇಳೋಣ-

ಗೈಡ್ ಹೇಳುತ್ತಿದ್ದಂತೆಯೇ ನನ್ನ ಕಣ್ಣು ಅವನಿಗಾಗಿ ಹುಡುಕಾಡ ತೊಡಗಿದವು. ನಮ್ಮ ಜೊತೆ ಜೊತೆಯೆಲ್ಲಿಯೇ ಕ್ರೂಜ್‌ನಿಂದ ಇಳಿದು ಬರುತ್ತಿದ್ದರೂ ಯಾರೆಂದು ಗುರುತು ಹಿಡಿಯಲಿಕ್ಕಾಗಲಿಲ್ಲ.

ಒಳಗಡೆ ವಿಶಾಲವಾದ ಅಂಗಳ, ನಾವೆಲ್ಲ ಸುತ್ತಲೂ ಹೋಗಿ ನಿಂತೆವು. “ಇವರು ಮಿ. ಶೋಲೇಮ್’ – ಗೈಡ್ ಪರಿಚಯಿಸಿದ.

`ಹಲೋ’ ಎಂದು ಎಲ್ಲರಿಗೂ ಕೈಬೀಸಿದ ಶೋಲೇಮ್.

ನನಗೆ ಅಶ್ಚರ್ಯ ಮೂರು ವರ್ಷಗಳ ಹಿಂದೆ ದಟ್ಟ ತಲೆಗೂದಲಿನ, ಹೊಳೆಯುವ ಕಣ್ಣು ಉದ್ದನೆಯ ಮೂಗಿನ ಪ್ಯಾಂಟುಧಾರಿ ಯುವಕ. ಈಗ ಉದ್ದನೆಯ ಗಡ್ಡ ಬೆಳೆಸಿಕೊಂಡು ಉದ್ದನೆಯ ದೇಶೀಯ ಶರ್ಟು ಹಾಕಿಕೊಂಡು ಅಲ್ಲಲ್ಲಿ ತಲೆ ಬೋಳಾದಂತೆ ಕಾಣುತ್ತಿರುವ, ಗಂಭೀರ ವ್ಯಕ್ತಿಯಂತೆ ಕಂಡ.

ಮಮ್ಮಿಗಳನ್ನು ಸಂಸ್ಕರಿಸಿ ಸಾವಿರಾರು ವರ್ಷಗಳ ವರೆಗೆ ಇಡುವ ವಿಧಾನಗಳ ಬಗೆಗೆ ಅಲ್ಲಲ್ಲಿ ತಾನೇ ಕಟ್ಟಿಸಿದ ಪ್ರಯೋಗ ಶಾಲೆಗಳನ್ನು ತೋರಿಸುತ್ತ ವಿವರಣೆ ಕೊಡುತ್ತಿದ್ದ. ಇತ್ತೀಚಿನ ವಿಜ್ಞಾನವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವಿಜ್ಞಾನದ ಬೆಳವಣಿಗೆಯಲ್ಲಿ ಮಮ್ಮಿಗಳಿಗೆ ಜೀವ ಕೊಡುವಂತಾದರೆ ಮತ್ತೆ ಮರಳಿ ಅವುಗಳು ಎದ್ದು ನಡೆದಾಡಬಹುದು. ಆ ಕಾಲ ಬಂದೇ ಬರುತ್ತದೆ. ಆ ನಿರೀಕ್ಷೆಯನ್ನು ನಾನು ಇಟ್ಟುಕೊಂಡವ. ಎನ್ನುತ್ತ ತನ್ನ ವಿಜ್ಞಾನದ ಇನ್ನೂ
ಅನೇಕ ಅನೇಕ ಪ್ರಯೋಗಗಳನ್ನೆಲ್ಲಾ ಹೇಳುತ್ತಿದ್ದ.

ವಿಶಾಲವಾದ ಅಂಗಳದ ಮಧ್ಯಕ್ಕೆ ಸುಂದರವಾದ ಪಿರ್‍ಯಾಮಿಡ್ಡು “ಎಲ್ಲರೂ ಬನ್ನಿ ಈ ಪಿರ್‍ಯಾಮಿಡ್ಡದ ನೆಲಮನೆಗೆ ಇಳಿಯೋಣ” ಗೈಡ್ ನಮ್ಮನ್ನೆಲ್ಲ
ಕರೆಯುತ್ತಿದ್ದ.

ಇಷ್ಟು, ವರ್ಷಗಳಲ್ಲಿ ಸಾವಿರಾರು ಸಾವಿರಾರು ಪ್ರವಾಸಿಗರು ಬಂದು ಹೋಗಿರುತ್ತಾರೆ, ಅವನಿಗೆಲ್ಲಿಯ ನನ್ನ ನೆನಪು ನಾನೇ ಜ್ಞಾಪಿಸಿದರಾಯ್ತು ಎಂದು
ಶೋಲೆಮ್‌ನ ಹತ್ತಿರ ಹೋದೆ.

`ಹಲೋ’ ಹೇಳಿದಾಗ

`ನಿಮ್ಮನ್ನೆಲ್ಲೋ ನೋಡಿದಂತಿದೆಯಲ್ಲ!’ ಅಂದ

ಅವನೇ ಕೊಟ್ಟ ಕಾರ್ಡ್ ತೋರಿಸಿ ಲಂಡನ್‌ದಲ್ಲಾದ ಪರಿಚಯ ಹೇಳಿದೆ. ಖುಷಿಯಾಯಿತು ಅವನಿಗೆ.

“ತುಂಬಾ ಬದಲಾಗಿದ್ದೀಯಾ ಶೋಲೇಮ್, ಗೈಡ್ ಹೇಳದೇ ಹೋಗಿದ್ದರೆ ನೀನು ನೀನೇ ಎಂದು ಗುರುತು ಹಿಡಿಯಲಿಕ್ಕಾಗುತ್ತಿರಲಿಲ್ಲ; ಮತ್ತೆ ಹೇಗಿದ್ದೀಯಾ,
ಎಲ್ಲಿ ನಿನ್ನೆ ಹುಡುಗಿ ನೋರಾ, ಹೊತ್ತು ತರುತ್ತೇನೆ ಅವಳನ್ನು ಇಲ್ಲಿಗೆ ಬರದೇ ಹೋದರೆ ಅಂದಿದ್ದಿಯಲ್ಲ?’

ತಕ್ಷಣ ಅವನ ಮುಖ ಕೆಂಪಾಗಿ ಕಣ್ಣೀರು ತುಂಬಿಕೊಂಡವು. ಬಲವಾಗಿ ನನ್ನ ಕೈಯೊತ್ತಿ “ನನ್ನ ಪ್ರಿಯ ನೋರಾ ನನ್ನ ಬಿಟ್ಟು ಈಗ ಅಲ್ಲಿ ಆರಾಮವಾಗಿ
ಮಲಗಿದ್ದಾಳೆ ನೋಡಿ” ಎಂದು ಗಂಟಲು ತುಂಬಿಬಂದು ಹೇಳುತ್ತ, ಈಗಷ್ಟೇ ಇಳಿದುಹೋಗಬೇಕಾಗಿದ್ದ ಅಂಗಳದ ಮಧ್ಯದ ಪಿರ್‍ಯಾಮಿಡ್ಡು ತೋರಿಸಿದ.

“ಅಂದರೆ… !”

“ಅದೇ ಅವಳು ತೀರಿ ಹೋಗಿ ಒಂದು ವರ್ಷವಾಯಿತು”.

ನೋರಾಳ ಅಂದಿನ ಮಾತುಗಳು, ತುಂಟುತನದ ನಗು ನಡಿಗೆ ಒಂದಕ್ಕೊಂದು ನನ್ನೊಳಗೆ ನುಗ್ಗಿ ಶಾಕ್ ಹೊಡೆದಂತಾಯ್ತು.

ಆಗಲೇ ಉಳಿದ ಪ್ರವಾಸಿಗರೆಲ್ಲ ನೆಲಮನೆಗೆ ಇಳಿದು ಹೋಗಿದ್ದರು.

“ಶೋಲೇಮ್ ಯಾಕೆ ಏನಾಯ್ತು ನೋರಾಳಿಗೆ?”

`ಅವಳು ಅದೆಷ್ಟು ತುಂಟು ಹುಡುಗಿಯೋ ಅಷ್ಟೇ ಹಟಮಾರಿ ಕೂಡಾ, ತನಗೆ ಏನು ಮಾಡಬೇಕೋ ಅದನ್ನೇ ಮಾಡುವ ಸ್ವಭಾವ’

“ಒಳ್ಳೆಯದೇ ಮತ್ತೆ…”

“ಆ ಒಳ್ಳೆಯತನವೇ ಅವಳನ್ನು ಆಹುತಿ ತೆಗೆದುಕೊಂಡದ್ದು”

`ಅದು ಹೇಗೆ ಸಾಧ್ಯ ಶೋಲೇಮ್?’

ಇಂಗ್ಲೆಂಡದಿಂದ ಬಂದಮೇಲೆ ಅವಳು ಇನ್ನೂ ಇನ್ನೂ ಸೀರಿಯಸ್ ಆಗಿ ಸಂಶೋಧನೆಯ ಕಾರ್ಯದಲ್ಲಿ ತೊಡಗಿಕೊಳ್ಳತೊಡಗಿದಳು. ಸತ್ತ ಹೆಣಗಳ
ಆಪರೇಷನ್ ಮಾಡುವದಾಗಲೀ, ಯಾವ ಅಂಗವೂ ಕೆಡದಂತೆ ಕೊಳೆಯದಂತೆ ತಿಂಗಳು ತಿಂಗಳುಗಳವರೆಗೆ ಬೇರೆ ಬೇರೆ ದ್ರಾವಣಗಳೊಂದಿಗೆ ಅಲ್ಲಿಯೇ ಇದ್ದು
ಪ್ರಯೋಗಿಸುವದಾಗಲೀ, ಅವುಗಳ ವಂಶವಾಹಿನಿಯನ್ನು ಕಾಯ್ದಿಡುವಲ್ಲಾಗಲೀ ಹಗಲಿರುಳೂ ಲ್ಯಾಬದಲ್ಲಿ ಕಳೆಯುತ್ತಿದ್ದಳು.

“ಆಮೇಲೆ?”

ಅದೇ ಅವಳು ಸಾಯುವದಕ್ಕಿಂತ ೮-೧೦ ದಿನಗಳ ಮೊದಲಷ್ಟೇ ಮೂರು ಸಾವಿರ ವರ್ಷಗಳಷ್ಟು ಹಿಂದಿನ ಮಮ್ಮಿಗಳ ಇನ್ನೂ ಅನೇಕ ವಿವರಗಳಿಗೆ ಆರು
ಅಂತಸ್ತುಗಳ ನೆಲಮಾಳಿಗೆಯೊಳಗೆ ಹೋಗಿದ್ದಳು. ನಾನದೆಷ್ಟೋ ಹೇಳಿದೆ. `ಸರಿಯಾದ ಗಾಳಿ ಬೆಳಕಿಲ್ಲ, ಉಸಿರುಗಟ್ಟುವ ವಾತಾವರಣ, ಯಾವುದೇ
ತೊಂದರೆಗಳುಂಟಾದರೂ ಬೇಗ ತಿರುಗಿಬರದಂತಹ ಚಿಕ್ಕಪುಟ್ಟ ಬಾಗಿಲುಗಳುಳ್ಳ ಇಳಿಜಾರು ರಸ್ತೆಗಳು, ಈಗ ಹೋಗುವದು ಬೇಡ’ ಎಂದೆ.

ಆದರೂ ಅವಳು ಮಾತು ಕೇಳದೆ ಧೈರ್ಯದಿಂದ ಹೆಡ್‍ಲೈಟ್ ಹಾಕಿಕೊಂಡು ೪ ಜನರ ತಂಡದೊಂದಿಗೆ ಪಿರ್‍ಯಾಮಿಡ್ಡು ಗಳ ಆಳಕ್ಕೆ ಇಳಿಯ
ತೊಡಗಿದಳು. ನಾನಷ್ಟೇ ನೋಡಿದ್ದು ಅವಳನ್ನು.

ಮುಂದಿನ ೪ ಗಂಟೆಗೆ ಅವಳ ಹೆಣ ಹೊತ್ತುಕೊಂಡು ಇಬ್ಬರು ಬಂದೇ ಬಿಟ್ಟರು. ಉಳಿದಿಬ್ಬರು, ನೋರಾ ಮಣ್ಣು ಕುಸಿತದ ಅಡಿಯಲ್ಲಿ ನೋಡು ನೋಡುತ್ತಿದ್ದಂತೆಯೇ ಸಿಕ್ಕು ಹಾಕಿಕೊಂಡು ಉಸಿರುಕಟ್ಟಿ ಸತ್ತಳೆಂದು ಹೇಳಿದರು.

ದೀರ್ಘವಾಗಿ ಉಸಿರು ಬಿಟ್ಟ ಶೋಲೇಮ್.

ಒಂದೆರಡು ನಿಮಿಷಗಳ ಮೌನದ ನಂತರ –

“ನೋರಾ ಳ ಅಸೆಯಂತೆ ಆಧುನಿಕ ವಿಜ್ಞಾನವನ್ನು ಬಳಸಿ `ಮಮ್ಮಿ’ ಮಾಡಿ ಮಲಗಿಸಿದ್ದೇನೆ. `ನಾನಿರುವಷ್ಟರಲ್ಲಿ ಅವಳು ಮತ್ತೆ ಜೀವಂತವಾದರೆ ನನ್ನ
ಅದೃಷ್ಟ’ ಎಂದು ಕಣ್ಣೊರೆಸಿಕೊಂಡ.

ನೋರಾ ಳ ಮಮ್ಮಿ ನೋಡಬಹುದೆ? ಎಂದೆ

“ಬನ್ನಿ ಬನ್ನಿ”

ನೆಲಮನೆಯಲ್ಲಿ ಏರ್ಕಂಡೀಶನ್ ಕೋಣೆ. ಅವಳಿಗೆ ಇಷ್ಟವಾದ ವಸ್ತುಗಳೆಲ್ಲ ಅಲ್ಲಿವೆ. ಅವಳು ಅಲ್ಲಿ ಜೀವಿಸಿದ್ದಾಳೇನೋ ಅನ್ನುವಷ್ಟು ವಿಶಾಲವಾದ ಸುಸಜ್ಜಿತ ಕೊಠಡಿ.

ಬಂಗಾರಲೇಪಿತ ಗ್ಲಾಸಿನಪೆಟ್ಟಿಗೆ. ನಿಧಾನವಾಗಿ ಶೋಲೇಮ್ ಅದರ ಮೇಲ್ಭಾಗದ ಮುಚ್ಚಳ ತೆಗೆದ.

ಮೆತ್ತನೆಯ ಗಾದಿಯ ಮೇಲೆ ಈಗಷ್ಟೇ ಮಲಗಿದಂತೆ ನೋರಾ ನಿದ್ರಿಸುತ್ತಿದ್ದಾಳೆ. ಒಂದು ವರ್ಷವಾದರೂ ಮುಖ ಸುಕ್ಕುಗಟ್ಟಿಲ್ಲ, ತುಟಿಗಳು ಬಿರುಕು ಬಿಟ್ಟಿಲ್ಲ. ಅದೇ ದುಂಡನೆಯೆ ಗುಲಾಬಿ ಮುಖ.

ಪೆಟ್ಟಿಗೆ ಹಾಕಿದ. ಗ್ಲಾಸಿನಪೆಟ್ಟಿಗೆಯ ಮೇಲ್ಭಾಗದಿಂದಲೇ ಕಾಣುವ ಅವಳನ್ನು ಮುತ್ತಿಸಿದ.

ನಮ್ಮ ನೈಲ್‌ಕ್ರೂಜ್ ಮರಳಿಹೊರಡಲು ಹಾರ್ನ್ ಹೊಡೆಯುತ್ತಿತ್ತು. ಮೇಲಿನ ವರೆಗೂ ಶೋಲೇಮ್ ಬಂದು, ತಾನು ಅಲ್ಲಿಯೇ ಇರುವದಾಗಿ ಹೇಳಿ ನನ್ನನ್ನು ಬೀಳ್ಕೊಟ್ಟ.

ಇಬ್ಬರಿಗೂ, ಬಹಳ ದಿವಸಗಳ ಅತ್ಮೀಯರಂತೆ ಕಣ್ಣುಗಳು ತುಂಬಿಕೊಂಡಿದ್ದವು.

ಕ್ರೂಜ್ ಏರುತ್ತಿದ್ದಂತೆಯೇ ನನ್ನ ಕಂಬನಿಗಳು ನೈಲ್‌ನದಿಯೊಳಗೆ ಜಾರಿದವು. ನೋರಾ ಬೈ ಹೇಳಿದಂತಾಯ್ತು.
*****

ಪುಸ್ತಕ: ಕಡಲಾಚೆಯ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೯೨
Next post ನೇಣು

ಸಣ್ಣ ಕತೆ

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…