ಯಾರು?

ಯಾರು?

‘ಮಹೇಶ,
ಬೆಳಗ್ಗೆ ‘ನಿನಗೆ ಮದುವೆಯಾಗಿದೆಯೋ?’ಎಂದು ಕೇಳಿದೆ. ನಿನಗೆ ನನ್ನ ಪ್ರಶ್ನೆ ಹಿಂದೆ ಆಶ್ಚರ್ಯವಾದಂತೆ ತೋರಿತು. ನೀನು ‘ಇಲ್ಲ’ ಎಂದೆ. ನಿನ್ನ ‘ಇಲ್ಲ’ ಕೇಳಿ ನನಗೆ ನಿನಗಿಂತಲೂ ಹೆಚ್ಚಿನ ಆಶ್ಚರ್ಯವಾಯಿತು. ಬಹುಶಃ ಆ ಸ್ತ್ರೀಯನ್ನು ನೀನು ಮದುವೆಯಾಗಿರಬಹುದು ಎಂದಿದ್ದೆ.

ಕಳೆದ ರಜೆಯಲ್ಲಿ ನಿನ್ನನ್ನು ನಮ್ಮನೆಗೆ ಆಮಂತ್ರಿಸಿದೆ. ಊರಿಗೆ ಹೋಗಬೇಕು ಎಂದು ನೆವನ ಹೇಳಿ ನಮ್ಮನೆಗೆ ಬರಲಿಲ್ಲ ನೀನು. ಆದರೆ ನೀನು ಊರಿಗೆ ಹೋಗಲಿಲ್ಲ. ಇದೇ ಊರಲ್ಲಿದ್ಡೆ; ಅದೂ ಚರಿತ್ರಹೀನಳಾದ ಸಿನಿಮಾ ನಟಿಯೊಬ್ಬಳೊಡನೆ.

ಮಹೇಶ, ಜನರ ಮುಖನೋಡಿ ಅವರ ಗುಣ ತಿಳಿದುಕೊಳ್ಳುವ ಶಕ್ತಿ ನನಗಿದೆ ಎಂದು ನನಗೆ ಹೆಮ್ಮೆಯಿತ್ತು. ಅದೇ ಎಂಟು ತಿಂಗಳ ಮೊದಲು ನಿನ್ನನ್ನು ಮೊಟ್ಟಮೊದಲು ನೋಡಿದಾಗ ನಿನ್ನ ವಿಷಯಗಳೊಂದೂ ತಿಳಿಯದಿದ್ದರೂ ನಿನ್ನನ್ನು ಜೀವದ ಗೆಳೆಯನನ್ನಾಗಿ ಮಾಡಿಕೊಂಡೆ. ಅಷ್ಟೊಂದು ನಂಬಿಕೆ ಹುಟ್ಟಿಸಿತು ನಿನ್ನ ಮುಖ. ನಿನ್ನ ಯಾತನಾ ಮಯವಾದ ಆ ದೊಡ್ಡ ದೊಡ್ಡ ಕಣ್ಣುಗಳನ್ನು ನೋಡಿ ‘ಪಾಪ, ನೊಂದ ಜೀವಿ; ಪೂರ್ವೋತ್ತರಗಳನ್ನು ಕೇಳಿ ನೋಯಿಸಬಾರದು’ ಎಂದು ಕೊಂಡಿದ್ದೆ. ಅಂದಿನ ಹೆಮ್ಮೆ ಎಲ್ಲಾ ಈಗ ಹುಡಿಯಾಗಿ ಹೋಯ್ತು, ಮಹೇಶ.

ನಮ್ಮದು ಬರೇ ಎಂಟು ತಿಂಗಳ ಗೆಳೆತನ-ಆದರೂ ನೀನು ನನಗೆ ಸ್ವಂತ ತಮ್ಮನಿಗಿಂತಲೂ ಹೆಚ್ಚಾಗಿ ಹೋಗಿದ್ದೆ. ನಾನು ಎಂದೂ ನಿನ್ನಲ್ಲಿ ಮುಚ್ಚು ಮರೆ ಮಾಡಿದವನಲ್ಲ. ನೀನೂ ನನ್ನಲ್ಲಿ ಅದೇ ತರದ ವಿಶ್ವಾಸವನ್ನಿಟ್ಟಿರುವೆ ಎಂಬ ಭಾವನೆ ಇತ್ತು ನನಗೆ.

ವಂಚನೆಯಿಂದ ನನ್ನ ಗೆಳೆತನ ಸಂಪಾದಿಸಬೇಕಾದ ಆವಶ್ಯಕತೆ ನಿನಗೇನಿತ್ತು, ಮಹೇಶ ? ಬಹುಶಃ ‘ನನ್ನ ಸ್ವಂತ ಜೀವನ ನನ್ನದು. ಅದಕ್ಕೂ ನಮ್ಮ ಸ್ನೇಹ ಸಂಬಂಧವೇನು?’ ಎಂದು ನೀನು ಕೇಳಬಹುದು. ಒಂದು ತರದಿಂದ ನೋಡಿದರೆ ಸಂಬಂಧವೇನೂ ಇಲ್ಲ, ನಿಜ. ಹಾಗೆಣಿಸುವ ಸ್ನೇಹಿತರೂ ನಿನಗೆ ಬೇಕಾದಷ್ಟು ಜನ ಸಿಕ್ಕಬಹುದು. ಆದರೆ ನಮ್ಮ ಮನೆಯವನೊಬ್ಬ ಎಂಬಂತೆ ನನ್ನ ತಾಯಿ, ಅಕ್ಕ, ತಂಗಿಯರೊಡನೆ ನಿನ್ನನ್ನು ಒಡನಾಡಿಸಿದ ನನಗೆ ಅದು ಒಪ್ಪುವುದಿಲ್ಲ. ಸ್ನೇಹಿತ ನಾದವನಲ್ಲಿ ಪ್ರೇಮ, ಆದರ, ವಿಶ್ವಾಸ, ಗೌರವ ಎಲ್ಲಾ ಇಡುವಂತಿರಬೇಕು. ಇಷ್ಟರ ತನಕ ನಿನ್ನನ್ನು ಅದೇ ಭಾವನೆಯಿಂದ ನೋಡುತ್ತಲೂ ಇದ್ದೆ. ಆದರೆ ಈಗ ನೀನು ಸಾಮಾನ್ಯಳಾದ ನಟಿಯೊಬ್ಬಳೊಡನೆ ಬೀದಿ ಬೀದಿ ಅಲೆಯುವುದನ್ನು, ಅವಳ ಸಹವಾಸದಲ್ಲಿ ನೀನಿರುವುದನ್ನು ನೋಡಿದ ಮೇಲೂ ಆ ಭಾವನೆಗಳಿರಬೇಕೆಂದರೆ ಹೇಗೆ ಸಾಧ್ಯ? ನಿನ್ನೊಡನೆ ನನ್ನ ವ್ಯವಹಾರದಲ್ಲಿ ವ್ಯತ್ಯಾಸವನ್ನು ಕಂಡು ಬೆಳಗ್ಗೆಯೇ ನೀನು ಕಾರಣವನ್ನು ಕೇಳಿದೆ. ನಿನ್ನ ಮುಖ ನೋಡುತ್ತ ನಿನ್ನ ಆ ವೇದನೆಯಿಂದ ತುಂಬಿದ ಕಣ್ಣುಗಳನ್ನು ನೋಡುತ್ತ ನಾನು ಕಾರಣವನ್ನು ಹೇಳಲಾರದೆ ಹೋದೆ. ಅದರ ಸಲುವಾಗಿಯೇ ಈಗ ಬರೆಯಬೇಕಾಯಿತು.

ಮಹೇಶ, ಇದೇ ಊರವನಾದರೂ ನಿನ್ನೊಡನಿರುವ ಸಲುವಾಗಿ ಹಾಸ್ಟೆಲ್ ಸೇರಿದೆ. ನಾವಿಬ್ಬರೂ ಒಂದೇ ರೂಮಿನಲ್ಲಿದ್ದೆವು. ಕೇವಲ ಭಾವನೆಯೇ ಆದರೂ, ನೀನೊಬ್ಬ ಆದರ್ಶಸ್ನೇಹಿತ ಎಂಬ ಭಾವನೆ ಇತ್ತು ನನಗೆ. ಆಗ ನಿನ್ನೊಡನೆ ಕಳೆದ ಒಂದೊಂದು ನಿಮಿಷವೂ ಅಮೂಲ್ಯ ವಾಗಿತ್ತು. ಆದರೆ ಈಗಲೂ ಅದೇ ರೀತಿಯಿಂದಿರುವುದು ನಿನ್ನ ನಡುವಳಿಕೆಯನ್ನು ತಿಳಿದ ನನಗೆ ಅಸಾಧ್ಯ, ನಾನು ಇಂದೇ ನಮ್ಮನೆಗೆ ಹೊರಟು ಹೋಗುತ್ತೇನೆ. ಬಹುಶಃ ಕಾಲೇಜಿನಲ್ಲಿ ಒಬ್ಬರನ್ನೊಬ್ಬರು ನೋಡಬಹುದು. ಆಗ ನನ್ನೊಡನೆ ಮಾತಾಡಲೆತ್ನಿಸಿ ನಮ್ಮ ಹಿಂದಿನ ಆದರ್ಶ ಸ್ನೇಹದ ನೆನಪನ್ನು ಕೆಡಿಸಬೇಡ, ಇದೊಂದೇ ನಿನ್ನಲ್ಲಿ ನನ್ನ ಆಗ್ರಹದ ಕೋರಿಕೆ.
– ವಸಂತ.

ಕಾಗದ ಬರೆದಿಟ್ಟು ವಸಂತ ಹೊರಟುಹೋದ. ತಾನು ಜೀವಕ್ಕಿಂತ ಮಿಗಿಲೆಂದು ತಿಳಿದ ಗೆಳೆಯ, ನಡತೆ ಇಲ್ಲದವ ಎಂದು ಬಹಳ ನೊಂದು ಕೊಂಡಿದ್ದ. ಹಾಗೆಯೇ ಹಿಂದುಮುಂದಾಲೋಚಿಸದೆ ಕಾಗದ ಬರೆದಿಟ್ಟು ಹೊರಟುಬಿಟ್ಟಿದ್ದ.

ಆ ಬೆಳೆದುಬಂದಿದ್ದ ಸ್ನೇಹವನ್ನು ಹೃದಯದಿಂದ ಕಿತ್ತೆಸೆಯವುದು ಮಾತ್ರ ಹೊರಟು ಬರುವಷ್ಟು ಸುಲಭವಾಗಿರಲಿಲ್ಲ. ತಾನು ಮಾಡಿದ್ದು ಸರಿ ಎಂದು ತನ್ನನ್ನು ತಾನೆ ಸಂತೈಸಿಕೊಂಡರೂ ಮನಸಿನ ‘ಒಳಗಿನ ಒಳಗಿನ ಒಳದನಿಯೊಂದೌ’ ‘ನಿನ್ನದು ತಪ್ಪು’ ಎಂದು ಚುಚ್ಚುತ್ತಿತ್ತು.

ಸಾಯಂಕಾಲ ಇತರ ಸ್ನೇಹಿತರೊಡನೆ ಸಿನಿಮಾಕ್ಕೆ ಹೋದ. ಆದರೆ ಅದು ಪೂರೈಸುವತನಕ ಕೂರಲಾರದೆ ಎದ್ದವನು ನೇರವಾಗಿ ಹಾಸ್ಟೆಲ್ ಕಡೆಗೆ ಹೋದ. ಹೊರಗಿನಿಂದ ಮಹೇಶನ ರೂಮಿನಲ್ಲುರಿಯುವ ದೀಪವನ್ನು ನೋಡಿದಾಗ ತಾನು ಹಾಸ್ಟೆಲ್ಲಿಗೆ ಬಂದಿರುವೆನೆಂದವನಿಗೆ ಬೋಧೆ ಯಾಯ್ತು. ಆಶಾಪೂರ್ಣದೃಷ್ಟಿಯಿಂದೊಮ್ಮೆ ಆ ರೂಮನ್ನು ನೋಡಿ ಹಿಂದಿರುಗಿದ. ಮತ್ತೆ ಎಲ್ಲೆಲ್ಲೋ ಸುತ್ತಾಡಿಕೊಂಡು ಮನೆಗೆ ಹೋಗುವಾಗ ಹತ್ತು ಹೊಡೆದುಹೋಗಿತ್ತು. ಒಳಗೆ ನುಗ್ಗುವಾಗ ಇನ್ನೂ ಎಚ್ಚತ್ತಿದ್ದ ಅವನ ಚಿಕ್ಕ ತಂಗಿ ನಲಿನಿ – ‘ಅಣ್ಣ, ಮಹೇಶ ನಿನಗೊಂದು ಕಾಗದ ಕೊಟ್ಟು ಹೋದ. ನಿನ್ನ ರೂಮಿನಲ್ಲಿಟ್ಟಿದ್ದೇನೆ’ ಎಂದಳು.

ಮಹೇಶನ ಕಾಗದ! ಊಟಕ್ಕೆ ಬಾರೆನ್ನುತಿದ್ದ ತನ್ನ ತಾಯನ್ನು ಸಹ ಲಕ್ಷಿಸದೆ ರೂಮಿನ ಬಾಗಿಲನ್ನು ಹಾಕಿಕೊಂಡು ಓದತೊಡಗಿದ –

‘ವಸಂತ,
ನಿನ್ನ ಬೆಳಗಿನ ಕಾಗದ ಬಂದಿದೆ. ನೀನೂ ಎಂದಾದರೊಮ್ಮೆ ಈ ಮಾತುಗಳನ್ನು ಹೇಳಬಹುದು ಎಂದು ನಾನೆಣಿಸಿರಲಿಲ್ಲ. ಆದುದರಿಂದಲೇ ನಿನ್ನ ಕಾಗದ ನೋಡಿ ಸ್ತಬ್ಬನಾಗಿ ಹೋದೆ. ಮತ್ತೆ ನೀನು ಸಾಮಾನು ಸಾಗಿಸುವುದನ್ನು ನೋಡುತ್ತಿದ್ದರೂ ಏನನ್ನೂ ಹೇಳಲಾರದೆ ಹೋದೆ. ನನ್ನ ಮೌನವನ್ನು ನೋಡಿ ನೀನೇನು ತಿಳಿದುಕೊಂಡೆಯೋ ತಿಳಿಯದು. ಬಹುಶಃ ನಿನ್ನ ಸಂಶಯವು ಇನ್ನಷ್ಟು ದೃಢವಾಗಿರಬಹುದು.

“ಅಷ್ಟು ಹೊತ್ತಿನಿಂದಲೂ ಯೋಚಿಸುತ್ತಿದ್ದೇನೆ. ನಿನ್ನಲ್ಲಿ ಹೇಳ ಬಾರದ ವಿಷಯ ಎಂದು ನನಗೀಗ ತೋರುವುದಿಲ್ಲ. ಹಾಗೆ ನೋಡುವುದಾದರೆ ಯಾರಲ್ಲೂ ಹೇಳಬಾರದಂತಹ ವಿಷಯವೇನೂ ಅಲ್ಲ ಅದು. ಆದರೂ ನೋಡು ವಸಂತ, ನಾನು ಯಾವುದನ್ನು ಹೆಚ್ಚಿನದೆಂದು ತಿಳಿದಿರುತೇನೋ ಅಂತಹುದನ್ನು ಬೇರೆಯವರು ‘ಇಷ್ಟೆ’ ಎಂದು ನಕ್ಕರೆ ನನಗೆ ಒಲು ದುಃಖವಾಗುವುದು. ಅದರಿಂದ ನಾನು ನನ್ನ ಭಾವವನ್ನು ತಿಳಿಯ ಲಾರದವರೆದುರು ಮನಬಿಚ್ಚಿ ಮಾತಾಡಲು ಹಿಂಜರಿಯುತ್ತೇನೆ. ಈ ಕೆಲವು ತಿಂಗಳುಗಳ ಸಹವಾಸದಿಂದ ಸ್ವಲ್ಪಮಟ್ಟಿಗಾದರೂ ನೀನು ನನ್ನನ್ನು ಬಲ್ಲೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ನಾನು ನಿನ್ನನ್ನು ಬಲ್ಲೆ. ನಿನ್ನ ಒಳ್ಳೆಯ ಅಭಿಪ್ರಾಯಕ್ಕೆ ನಾನೆಷ್ಟು ಬೆಲೆ ಕೊಡುವೆನೆಂಬುದಕ್ಕೆ ನಾನೀಗ ಯಾರಿಗೂ ಇಂದಿನವರೆಗೂ ಹೇಳದಿದ್ದ ವಿಷಯಗಳನ್ನು ನಿನಗೆ ಒರೆಯುತ್ತಿರುವುದೇ ಸಾಕ್ಷಿಯಾಗಿದೆ.

“ನನಗೊಬ್ಬಳು ತಂಗಿ ಇರುವಳು ವಸಂತ-ನನ್ನ ತಾಯಿ ಸಾಯುವ ದಿನ ಹುಟ್ಟಿದ ಮಗು. ಆಗ ನಾನು ಮರು ನಾಲ್ಕು ವರ್ಷ ದವನಾಗಿದ್ದರೂ ನನಗಿನ್ನೂ ಚನ್ನಾಗಿ ನೆನಪಿದೆ-ಮೃತ್ಯುವಿನ ಮಡಲಲ್ಲಿ ಮಲಗಿದ್ದ ನನ್ನ ಅಮ್ಮ-ಅವಳ ಹತ್ತಿರವೇ ಚೀರಿ ಚೀರಿ ಅಳುತ್ತ ಮಲಗಿದ್ದ ನನ್ನ ಪುಟ್ಟ ತಂಗಿ, ಮೌನವಾಗಿ ಕಣ್ಣೀರು ಸುರಿಸದಿದ್ದರೂ ಅಳುತಿದ್ದ ನನ್ನ ತಂದೆಯ ಮುಖ……

“ವಸಂತ, ಈಗ ಇದೆಲ್ಲಾ ಏಕೆ ಎಂದು ನೀವು ಕೇಳಬಹುದು. ನನ್ನ ಮತ್ತು ಪಾಪನ (ನನ್ನ ಆ ತಂಗಿಯ ಮುದ್ದಿನ ಹೆಸರು.) ಪ್ರೇಮದ ಆಳವನ್ನು ತಿಳಿದುಕೊಳ್ಳಬೇಕಾದರೆ, ನಾನವಳನ್ನು ನನ್ನ ಹಿರಿಯಕ್ಕ ಪ್ರಭೆಗಿಂತ ಹೆಚ್ಚೇಕೆ ಪ್ರೀತಿಸುವೆನೆಂಬುದನ್ನು ತಿಳಿದುಕೊಳ್ಳಬೇಕಾದರೆ ಅವಳು ಹುಟ್ಟಿದ ದಿನ ನಮ್ಮ ತಾಯಿಯು ಸತ್ತು ಹೋದುದನ್ನು ಹೇಳಿಯೇ ತಿರಬೇಕು.
(ಆಗ ಪಾಪ ಎಳೆಗೂಸಾದರೂ, ನನ್ನೊಡನೆ ಆಡದವಳಾದರೂ ನನಗೆ ಅವಳೆಂದರೆ ಪ್ರಾಣ. ನಾವು ಬೆಳೆಯುತ್ತ ಬಂದಂತೆ ನನ್ನ ಪ್ರೇಮವೂ ಬೆಳೆಯತೊಡಗಿತು. ನಾನು ಪ್ರಭಾ ಎಲ್ಲಾ ಜಗಳವಾಡಿಕೊಳ್ಳುತ್ತಿದ್ದೆವು. ಆದರೆ ನನಗೂ ಪಾಪನಿಗೂ ಒಂದೇ ಒಂದು ಸಾರಿಯಾದರೂ ಜಗಳವಾಗಿಲ್ಲ. ಪ್ರಭೆ ಈಗ ಗಂಡನ ಮನೆಯಲ್ಲಿ ಸಂಸಾರ ಮಾಡುತ್ತಿದ್ದಾಳೆ. ಅವಳಿಗೆ ಮದುವೆಯಾದ ವರ್ಷವೇ ನನ್ನ ತಂದೆಯೂ ಪುನಃ ಮದುವೆ ಮಾಡಿಕೊಂಡರು. ಪಾಪನಿಗೀಗ ಹತ್ತೊಂಬತ್ತೋ ಇಪ್ಪತ್ತೋ ವರ್ಷ ವಯಸ್ಸು. ಅವಳಿಗೆ ಇನ್ನೂ ಹನ್ನೊಂದು ವರ್ಷ ತುಂಬಿರಲಿಲ್ಲ. ಆಗಲೇ ತಂದೆ-ತಾಯಿಯರಿಲ್ಲದ ನನ್ನ ಸೋದರತ್ತೆಯ ಮಗನಿಗವಳನ್ನು ಕೊಟ್ಟು ಮದುವೆ ಆಗಿ ಹೋಗಿತ್ತು. ಅವಳ ಮದುವೆಯಾಗುವಾಗಿನ್ನೂ ಶಾರದಾ ಬಿಲ್ಲು ಪಾಸಾಗಿರಲಿಲ್ಲ. ಅದೇ ಅವಸರದಿಂದವಳಿಗೆ ಮದುವೆಯಾಯ್ತು. ಆಡುವ ಮಗು ಪಾಪನ್ನ ಅವನ ಕೊರಳಿಗೆ ಕಟ್ಟಿ ಅವನ ವಿಲಾಯತಿಯ ಶಿಕ್ಷಣಕ್ಕೆ ದುಡ್ಡು ತೆರಲು ನಮ್ಮ ತಂದೆ ಒಪ್ಪಿದರು. ಮದುವೆ ಆದ ವರ್ಷವೇ ಅವನು ಮೆಟ್ರಿಕ್ ಪಾಸಾದ. ಅವನ ಕಾಲೇಜು ಶಿಕ್ಷಣದ ಭಾರವನ್ನೂ ನಮ್ಮ ತಂದೆಯೇ ಹೊತ್ತರು. ಬಿ. ಎ. ಆದ ವರ್ಷವೇ ಎಮ್. ಎ. ಯನ್ನು ಗುರಿಯಾಗಿಟ್ಟುಕೊಂಡು ಅವನು ಆಕ್ಸಫರ್ಡಿಗೆ ಹೊರಟು ಹೋದ. ಅವನು ಹೋಗುವಾಗ ನನ್ನ ತಂಗಿಗೆ ಹದಿನೈದು ವರ್ಷ ಪ್ರಾಯ. ಅದು ಸತ್ಯಾಗ್ರಹವು ಜೋರಾದ ಕಾಲ. ಪ್ರತಿಯೊಂದು ವ್ಯಕ್ತಿಯೂ ದೇಶಕ್ಕಾಗಿ ಬೇರೆಲ್ಲವನ್ನೂ ತೊರೆಯಲು ಸಿದ್ದವಾದ ಸಮಯ ವದು. ಆಗ ನನ್ನ ತಂಗಿಗೆ ಆಗಿನ ರಾಜಕೀಯ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಶಕ್ತಿ ಇಲ್ಲದಿದ್ದರೂ ತನ್ನ ಗಂಡ ಪರದೇಶಕ್ಕೆ, ಅದರಲ್ಲೂ ಇಂಗ್ಲೆಂಡಿಗೆ ಹೋಗಬಾರದೆಂಬ ಬಯಕೆ. ಏಕೆ ಹೋಗಬಾರದೆಂದರೆ ಕಾರಣ ಹೇಳಲು ಅವಳಿಗೆ ತಿಳಿಯದು. ಆದರೂ ಅವನು ಇಂಗ್ಲೆಂಡಿಗೆ ಹೋಗಬಾರದು ಎಂದು ಅವಳಿಗೆ. ಅವನು ಹೊರಡುವ ಮೊದಲು ನಮ್ಮನೆಗೆ ಬಂದಿದ್ದ. ನನಗೆ ಸರಿಯಾಗಿ ಗೊತ್ತಿಲ್ಲ-ಅವಳೂ ನನ್ನೊಡನೆ ಹೇಳಿಲ್ಲ. ಅವಳು ಅವನನ್ನು ಹೊಗಬಾರದೆಂದು ಪ್ರಾರ್ಥಿಸಿಕೊಂಡಳು ಎಂಬುದು ಕೇವಲ ನನ್ನ ಊಹೆ ಅಷ್ಟೆ. ಹಾಗೆ ಊಹಿಸಲು ನನಗೊಂದು ಕಾರಣವೂ ಇತ್ತು. ಪಾಪ ಮದುವೆ ಆದಂದಿನಿಂದ ಅವನೊಡನೆ ಒಂದು ಮಾತೂ ಆಡಿರಲಿಲ್ಲ. ಮದುವೆಯ ಸಮಯದಲ್ಲಿ ಅವಳಿಗೆ ಹನ್ನೊಂದು ವರ್ಷ ಸಹ ತುಂಬರಲಿಲ್ಲವೆಂದು ಮೊದಲೇ ಬರೆದಿದ್ದೇನೆ. ಗಂಡ ಎಂದರೆ ನಾಚಿಕೆ ಮಾಡುವ ವಸ್ತು. ಅವನು ಬಂದರೆ ಓಡಿ ಹೋಗಿ ಅವಿತುಕೊಳ್ಳಬೇಕು ಎಂದವಳ ಭಾವನೆ ಆಗ. ಮತ್ತವನು ವರ್ಷಕ್ಕೊಮ್ಮೆ ಎಲ್ಲಾದರೂ ಒಂದೆರಡು ದಿನಗಳ ಮಟ್ಟಿಗೆ ಬಂದರೆ ಪಾಪ ಅವನಿದಿರು ಸಹ ಹೋಗುತ್ತಿರಲಿಲ್ಲ. ಅವನು ಇಂಗ್ಲೆಂಡಿಗೆ ಹೋಗುವ ಮೊದಲು ಬಂದಾಗ ಮಾತ್ರ ಅವಳಾಗಿಯೇ ಅವನ ರೂಮಿಗೆ ಹೋದುದನ್ನು ನೋಡಿ, ಅವಳ ಹೊರಗೆ ಬರುವಾಗ ಅತ್ತು ಕೆಂಪಾದ ಅವಳ ಕಣ್ಣುಗಳನ್ನು ನೋಡಿ, ಬಹುಶಃ ಅವಳು ವಿಲಾಯತಿಗೆ ಹೋಗಬಾರದೆಂದು ಅವನನ್ನು ಪ್ರಾರ್ಥಿಸಿರಬೇಕು ಎಂದು ನನ್ನ ಊಹನೆ. ಅವಳ ಮಾತಿಗೆ ಅವನು ಏನೆಂದನೋ ತಿಳೆಯದು. ಅಂತೂ ಅವನು ಹೊರಟುಹೋದ. ಅವನು ಹೋಗುವಾಗ ನಾವೆಲ್ಲರೆಣಿಸಿದಂತೆ ಅವಳು ಅವನಿದಿರು ಬರಲಿಲ್ಲ. ನಾನು ಅವಳನ್ನ ಕೂಗಲು ಹೋದೆ. ಅವಳ ರೂಮಿನ ಬಾಗಿಲು ಹಾಕಿತ್ತು. ಒಳಗಿನಿಂದ ಮೆಲ್ಲಮೆಲ್ಲನೆ ಅಳುವ ಶಬ್ಬವೂ ಕೇಳಿಸುತ್ತಿತ್ತು. ನನಗೂ ಅವಳನ್ನು ಆಗ ಕೂಗಲು ಮನಸ್ಸು ಬರಲಿಲ್ಲ. ಹಾಗೆಯೇ ಹೊರಗೆ ಬಂದೆ. ಅವಳ ಗಂಡ ಹೊರಟು ನಿಂತಿದ್ದ. ಪಾಪ ವಿನಾ ಮನೆಯವರೆಲ್ಲಾ ಇದ್ದರು. ಅವನೂ ಅವಳಿಲ್ಲದಿರುವುದನ್ನು ನೋಡಿದಂತೆ ತೋರಲಿಲ್ಲ, ಹೊರಟೇ ಹೋದೆ.

“ಆದಿನವೆಲ್ಲ ನಾನು ಪಾಸನ್ನ ನೋಡಲಿಲ್ಲ. ತಂದೆ ಒಂದೆರಡು ಸಾರಿ ‘ಎಲ್ಲಿ ಪಾಪ?’ ಎಂದರು. ಚಿಕ್ಕಮ್ಮ ‘ಅವಳ ರೂಮಿನಲ್ಲಿರಬಹುದು’ ಎಂದುಬಿಟ್ಟರು. ಆಯಿತು ಅಷ್ಟೆ-

“ವಸಂತ, ಇದು ನಾಲ್ಕು ವರ್ಷದ ಹಿಂದಿನ ಮಾತು. ಆಗ ಪಾಪ ಏನೂ ತಿಳಿಯದ ಹುಡುಗಿ, ತಾಯಿಯ ಸ್ನೇಹ ಮಮತೆಗಳನ್ನರಿಯದೆ ಹುಡುಗನಾದ ನನ್ನೊಡನೆ ಹುಡುಗತನದಲ್ಲಿ ಬೆಳೆದ ತುಂಟು ಹುಡುಗಿ. ಮಾಡಬೇಡ ಎಂಬುದನ್ನು ಮಾಡಿಯೇ ತೀರುವೆನೆಂದು ಹೇಳುವ ಹಠ ವಾದಿ, ಅಂದಿಗೂ ಇಂದಿಗೂ ಕೇವಲ ನಾಲ್ಕೈದು ವರ್ಷಗಳ ಅಂತರ ವಸಂತ; ಆದರೂ ಈ ನಾಲ್ಕೈದು ವರ್ಷಗಳಲ್ಲಿ ಎಷ್ಟೊಂದು ನಡೆದು ಹೋಗಿದೆ! ಬಾಲ್ಯದಿಂದಲೂ ನನ್ನೊಡನೆ ಬೆಳೆದ ಪಾಪ ಈಗಿಲ್ಲ-ಅವಳ ಗಂಡ ವಿಲಾಯತಿಗೆ ಹೋಗುವಾಗಲೇ ಅವಳನ್ನು ಕೊಂದು ಹಾಕಿದ್ದ.

“ಅವನು ಹೋಗಿ ಒಂದೆರಡು ತಿಂಗಳಾಗುವ ತನಕ ಪಾಪ ಇಂದಲ್ಲದಿದ್ದರೆ ನಾಳೆ ಸಮಾಧಾನ ಹೊಂದುವಳೆಂದಿದ್ದೆ. ಆದರೆ ನನ್ನೆಣಿಕೆ ತಪ್ಪಾಯ್ತು. ದಿನ ಕಳೆದಂತೆ ಪಾಪ, ನನ್ನ ತಾಯಿಯಿಲ್ಲದ ತಂಗಿ, ಪಾಪ ಒತ್ತಿ ಹೋದಳು. ತಂದೆ ಅವಳ ಸ್ಥಿತಿಯನ್ನು ನೋಡಿ – ಏನೋ ಕಾಯಿಲೆ; ಔಷಧಿ ಮಾಡಿಸಬೇಕು’ ಎಂದರು. ಚಿಕ್ಕಮ್ಮ (ಸುಮ್ಮನೆ ಕೂತಲ್ಲೇ ಕೂತು ಸದಾ ಓದುತ್ತಿದ್ದರೆ ಕಾಯಿಲೆ ಬರದೆ ಏನಾದೀತು?’ ಎಂದು ಗೊಣಗಿದರು. ನನಗೆ ಮಾತ್ರ ಪಾಪನಿಗೆ ಶಾರೀರಿಕ ಕಾಯಿಲೆ ಏನೂ ಇಲ್ಲವೆಂದು ಗೊತ್ತು. ಆದರೆ ಗಂಡ ಉಚ್ಚ ಶಿಕ್ಷಣಕ್ಕಾಗಿ ವಿಲಾಯತಿಗೆ ಹೋದರೆ ಇಷ್ಟೊಂದು ಕೊರಗುವದೇಕೆ ಎಂಬುದು ನನಗೊಂದು ದೊಡ್ಡ ಸಮಸ್ಯೆಯಾಗಿತ್ತು. ಅವಳನ್ನೆ ಆ ವಿಷಯದಲ್ಲಿ ಕೇಳಲೂ ನನಗೆ ಇಷ್ಟವಿರಲಿಲ್ಲ. ಏನಿದ್ದರೂ ನನ್ನೊಡನೆ ಮುಚ್ಚು ಮರೆ ಇಲ್ಲದೆ ಹೇಳುವುದು ಅವಳ ಸ್ವಭಾವ. ಅಂತವಳು ಇಷ್ಟೊಂದು ಕೊರಗುತ್ತಿದ್ದರೂ ನನ್ನೊಡನೆ ಹೇಳದಿರುವಾಗ ನಾನೇ ಹೇಳೆಂದು ಹೇಗೆ ಹೇಳಲಿ ಎಂದೆನಿಸುತಿತ್ತು ನನಗೆ. ಅವಳಾಗಿಯೇ ಹೇಳುವ ತನಕ ಕೇಳಲಾರೆ ಎಂದುಕೊಂಡೆ. ದಿನದಿನಕ್ಕೆ ನನ್ನ ಕಣ್ಣಿದಿರು ಅವಳು ಕುಗ್ಗುವುದನ್ನು ನೋಡುತ್ತಿದ್ದರೂ ನನ್ನ ನಿಶ್ಚಯವೂ ಬದಲಾಗಲಿಲ್ಲ.

“ಈ ಮಧ್ಯೆ ಪಾಪ ಅವನಿಗೆ ಒಂದೆರಡು ಕಾಗದ ಬರೆದಳು. ಒಂದಕ್ಕೂ ಪ್ರತ್ಯುತ್ತರವಿಲ್ಲ. ಅವನ ಈ ಔದಾಸೀನ್ಯವನ್ನು ನೋಡಿದ ಮೇಲಂತೂ ಪಾಪನ ಮನೋವ್ಯಥೆಗೆ ಅವನೇ ಕಾರಣನೆಂದು ನನಗೆ ನಂಬಿಕೆಯಾಗಿ ಹೋಯ್ತು. ಇಷ್ಟೆಲ್ಲಾ ಆದರೂ ಪಾಪ ಮಾತ್ರ ಏನೂ ಹೇಳುತ್ತಿರಲಿಲ್ಲ. ಯಾವಾಗಲೂ ಇಡೀ ಮನೆಯನ್ನು ಬೆಳಗುತ್ತಿದ್ದ ಅವಳ ನಗುವು ಎತ್ತಲೋ ಮಾಯವಾಗಿತ್ತು. ಅವಳ ರೂಮಾಯ್ತು-ಅವಳಾಯ್ತು, ಆ ದಿನಗಳಲ್ಲಿ ನನ್ನ ಎಳೆತನದ ಗೆಳತಿ, ನನ್ನ ಮುದ್ದಿನ ತಂಗಿ ಇದ್ದೂ ಇಲ್ಲದಂತಿತ್ತು. ನಗು, ಆನಂದ, ಉತ್ಸಾಹಗಳಿಂದ ತುಂಬಿ ತುಳುಕುತ್ತಿದ್ದ ಆ ನನ್ನ ಮೊದಲಿನ ಜೀವನ ಹೊರಟೇಹೋಯ್ತು.

“ಹೇಗೋ ಎರಡು ವರ್ಷಗಳು ಕಳೆದು ಹೋದುವು ವಸಂತ, ನನ್ನ ಪಾಲಿಗೆ ಆ ಎರಡು ವರ್ಷಗಳು ಎರಡು ಯುಗಗಳಿಗಿಂತ ಧೀರ್ಘವಾಗಿದ್ದವು. ಅಂತೂ ಎರಡು ವರ್ಷ ಮುಗಿಯುವಾಗ ಪಾಪನ ಗಂಡ ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಸ್ವದೇಶಕ್ಕೆ ಮರಳಿದ ಆ ದಿನ ನಮ್ಮನೆ ಯವರಿಗೆಲ್ಲಾ ಬಲು ಆನಂದ-ಉತ್ಸಾಹದ ದಿನ. ಪಾಪದ ಬತ್ತಿದ ಮುಖದಲ್ಲೂ ಎಳೆನಗು ಮಾಡಿತ್ತು. ಅಂದು ಬೆಳಗಿನ ರೈಲಿಗೆ ಅವನು ಬರುವುದೆಂದು ಗೊತ್ತಾಗಿತ್ತು. ನಾನು ನನ್ನ ತಂದೆಯೂ ಅವನನ್ನಿದಿರುಗೊಳ್ಳಲು ಸ್ಟೇಶನ್ನಿಗೆ ಹೋಗಿದ್ದೆ. ಆದರೆ ಆ ದಿನ ಅವನು ಬರಲಿಲ್ಲ. ನಿರಾಶರಾಗಿ ನಾವು ಹಿಂದಿರುಗುವಾಗ ಪಾಪ ಬಾಗಿಲಲ್ಲಿ ನಿಂತು ರಸ್ತೆಯನ್ನೇ ನಿಟ್ಟಿಸುತ್ತಿದ್ದಳು. ನಾವಿಬ್ಬರೇ ಹಿಂತಿರುಗಿದುದನ್ನು ನೋಡಿ ಅವಳ ಬಾಡಿದ ಮುಖವ ಇನ್ನಷ್ಟು ಬಾಡಿತು. ಮಳೆಗಾಲದ ಬಿಸಿಲಿ ನಂತೆ ಮೂಡಿದ್ದ ಅವಳ ನಗುವೂ ಮಾಯವಾಯ್ತು. ನಾನದನ್ನು ನೋಡಿದರೂ ನೋಡದವನಂತೆ ‘ಬಹುಶಃ ಟ್ರೇನ್ ಮಿಸ್ ಆಗಿರಬಹುದು; ನಾಳೆ ಬರುತ್ತಾನೆ’ ಎಂದವಳನ್ನು ಸಂತೈಸಿದೆ. ನಾಳೆ ಬಂತು; ಎಷ್ಟೋ ನಾಳೆಗಳಾಗಿ ಒಂದೆರಡು ವಾರಗಳೂ ಆದವು. ಅವನು ಬರಲಿಲ್ಲ-ಅವನ ಕಾಗದವೂ ಇಲ್ಲ.

“ಒಂದೆರಡು ವಾರಗಳ ತರುವಾಯ ಒಂದು ದಿನ ಪೇಪರ್ ತೆರೆಯುವಾಗ ಅವನ ಚಿತ್ರ! ಅದರ ಕೆಳಗಡೆ ‘ಆಕ್ಸ್‌ಫರ್‍ಡ್ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದು, ಉಚ್ಚಶ್ರೇಣಿಯಲ್ಲಿ ಉತ್ತೀರ್‍ಣರಾಗಿ ಇದೀಗ ಭಾರತಕ್ಕೆ ಮರಳಿದ ಶ್ರೀ. ರಾಮರಾಯರು ..
.. ವಿಶ್ವವಿದ್ಯಾಲಯದ ಪ್ರೊಫೆಸರಾಗಿ ನಿಯೋಜಿತರಾಗಿದ್ದಾರೆ. ಇವರಿಗೆ ನಮ್ಮ ಅಭಿನಂದನೆ..’ ಇನ್ನೂ ಏನೇನೋ ಅವನ ಯಶೋಗಾನವಿತ್ತು. ನನ್ನ ತಂಗಿಯ ಗಂಡನಿಗೆ ಉತ್ತಮವಾದ ಕೆಲಸ ದೊರೆಯಿತಲ್ಲಾ ಎಂದು ಆ ಚಿತ್ರವನ್ನು ನೋಡಿ ನಾನು ಆನಂದಪಡಬೇಕಾಗಿದ್ದುದು ಸಹಜ. ಆದರೆ ವಸಂತ, ಚಿತ್ರದಲ್ಲಿ ಚಿತ್ರಿತವಾದ ಅವನ ಮುಖವನ್ನು ನೋಡಿ ನನಗೇಕೊ ತಡೆಯಲಾರದಷ್ಟ ಕೋಪ ಬಂತು. ಅವನ ಯಶಸ್ಸಿಗೆ ಕಾರಣ ನಮ್ಮ ತಂದೆ. ಹಣಕೊಟ್ಟು ಓದಿಸಿ ಅವನನ್ನು ಮುಂದಕ್ಕೆ ತಂದವರು ಅವರು. ಇಷ್ಟೆಲ್ಲಾ ಮಾಡಿದ್ದರೂ ಸ್ವದೇಶಕ್ಕೆ ಮರಳಿದ ಮೇಲೆ ನನಗೊಂದು ಕಾಗದ ಸಹ ಇಲ್ಲ! ಪಾಪನಿಗಾದರೂ ಒಂದು ಗೆರೆ ಬರೆಯಬಹುದಿತ್ತು. ನಾಳೆ ನಾಳೆ ಎಂದು ಅವನ ಬರುವನ್ನು ಇವರು ನೋಡುತ್ತಿರುವ ಪಾಪನನ್ನು ನೋಡುವಾಗಲೆಲ್ಲಾ ನನಗವನ ಮೇಲೆ ಬಲು ಕೋಪ ಬರುತ್ತಿತ್ತು. ನಮ್ಮ ತಂದೆ ಒಳಗೊಳಗೇ ನೊಂದು ಕೊಂಡರೂ ಪಾಪನಿದಿರಿನಲ್ಲಿ ‘ಕೆಲಸದ ಗಲಾಟೆ ಬಹಳ ಇರಬಹುದು. ಅದೇ ಬರಲೂ ಬರೆಯಲೂ ಸಮಯವಾಗಿರಲಾರದು. ಇನ್ನೇನು-ಬಂದೇ ಬರುತ್ತಾನೆ’ ಎನ್ನುತ್ತಿದ್ದರು. ಹೀಗೆ ಇದಿರು ನೋಡುವುದರಲ್ಲಿ ಎರಡು ಮೂರು ತಿಂಗಳುಗಳು ಕಳೆದುಹೋದುವು. ಕೊನೆಗೆ ನಮ್ಮ ತಂದೆ ಅವನಿಗೊಂದು ಕಾಗದ ಬರೆದರು- ಇಷ್ಟು ದಿನ ನಿನ್ನ ಓದಿತ್ತು. ಈಗ ಅದೆಲ್ಲಾ ತೀರಿ ಕೆಲಸ ಸಂಪಾದಿಸಿರುವೆ. ಇನ್ನಾದರೂ ಆದಷ್ಟು ಬೇಗ ಬಂದು ಪಾಪನನ್ನು ಕರೆದುಕೊಂಡು ಹೋಗು’ ಎಂದು.

“ಒಂದೆರಡು ವಾರಗಳ ತರುವಾಯು ಅವನಿಂದ ಪ್ರತ್ಯುತ್ತರ ಬಂತು (ಈಗ ಬರಲು ನನಗೆ ಸಮಯವಿಲ್ಲ. ಮುಂದಿನ ರಜೆಯಲ್ಲಿ ಬರಲು ಯತ್ನಿಸುತ್ತೇನೆ.” ಕೇವಲ ಇಷ್ಟೇ, ತಂದೆ ಕಾಗದ ಓದಿ ನನಗೆ ಕೊಟ್ಟರು. ನಾನೂ ಓದಿದೆ. ಅದಕ್ಕಿಂತಲೂ ಹೆಚ್ಚೇನು ನಾನವನಿಂದ ಎಣಿಸಿರಲಿಲ್ಲ. ಆದರೆ ನಮ್ಮ ತಂದೆ-ಅವರ ಮೇಲೆ ಎಲೆಕ್ಟ್ರಿಕ್ ಶಾಕ್‌ನ ಕೆಲಸವನ್ನು ಆ ಕಾಗದ ಮಾಡಿತ್ತು. ನಮ್ಮ ತಾಯಿ ಸತ್ತಾಗ ಸಹ ಅವರ ಮುಖ ಹಾಗಾಗಿರಲಿಲ್ಲ. ತಂದೆ-ತಾಯಿಲ್ಲದ ತಬ್ಬಲಿಯನ್ನು ಸಾಕಿ ಮುಂದೆ ತಂದು ಮನುಷ್ಯನನ್ನಾಗಿ ಮಾಡಿದ್ದರು. ತಮ್ಮ ಪ್ರೀತಿಯ ಮಗಳನ್ನು ಕೊಟ್ಟು ಪುರಸ್ಕರಿಸಿದ್ದರು. ಅದರ ಪ್ರತಿಫಲ ಈ ರೀತಿಯಾಗಬಹುದೆಂದು
ಅವರು ಕನಸಿನಲ್ಲಿ ಸಹ ಚಿಂತಿಸದ ಮಾತಾಗಿತ್ತು. ಈಗ….?

“ಪಾಪನನ್ನು ನೆನಸಿಕೊಂಡು ಎಂದೂ ಅಳದಿದ್ದ ನಾನೂ ಆ ದಿನ ಚಿಕ್ಕಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತೆ. ತಲೆ ತಲೆ ಹೊಡೆದುಕೊಂಡೆ. ಅವಳ ಗಂಡನನ್ನು ಕೊಂದೇಬಿಡುತ್ತೇನೆ ಎಂದುಕೊಂಡೆ. ನೆನಸಿಕೊಂಡರೆ ಈಗಲೂ ಹಾಗೆಯೇ ಆಗುತ್ತೆ.

“ಪಾಪ ಕಾಗದ ನೋಡಿದಳು. ನಾನೆಣಿಸಿದಂತೆ ಅವಳು ಅತ್ತು, ಕರೆಯಲಿಲ್ಲ. ಬೇರೆ ಯಾವ ವಿಧದಲ್ಲಿ ತಾನು ನೆಂದಿರುವೆನೆಂದು ತೋರ ಗೊಡಲಿಲ್ಲ. ಅವಳ ಶಾಂತತೆಯನ್ನು ನೋಡಿ ನಾಚಿ ನನ್ನನ್ನು ನಾನೇ ಸಂತೈಸಿಕೊಂಡೆ. ಆದರೂ ಒಳಗೊಳಗೇ ಒಂದು ಭಯ; ಯಾರಿಗೂ ಹೇಳದೆ ಎಲ್ಲಾದರೂ ಪಾಪ ಆತ್ಮಹತ್ಯೆ ಮಾಡಿಕೊಂಡರೇನು ಗತಿ? ಈ ವಿಷಯದಲ್ಲಿ ಮಾತ್ರ ನನ್ನೂಹೆಯು ತಪ್ಪಾಯ್ತು. ನಾನವಳನ್ನು ಎಡೆಬಿಡದಿರುವದನ್ನು ನೋಡಿ ಅವಳು ‘ಏನಣ್ಣಾ, ಎಲ್ಲಾದರೂ ಬಾವಿಗೀವಿ ಬಿದ್ದು ಬಿಟ್ಟೇನು ಎಂತ ಭಯವೋ?’ ಎಂದು ಒಂದು ಒಣ ನಗು ನಕ್ಕಳು. “ಹಾಗೇನೂ ಇಲ್ಲ ಪಾಪ-ನೀನೊಬ್ಬಳೇ ಇದ್ದರೆ ಸುಮ್ಮನೆ ಚಿಂತಿಸಿ ಚಿಂತಿಸಿ ನೊಂದುಕೊಳ್ಳುತ್ತಿ’ ಎಂತ ಬಾಯಿ-ಹಾರಿಸಿದೆ. “ನೊಂದು ಕೊಂಡರೆ ತಾನೆ ಫಲ ಏನು? ಹಾಗೇನಾದರೂ ಫಲ ಇದ್ದಿದ್ದರೆ ಈ ಎರಡು ವರ್ಷಗಳಲ್ಲೇ ಅದೆಲ್ಲಾ ಬರುತ್ತಿತ್ತು’ ಎಂದಳು. ಊಹಿಸಿದ್ದರೂ ಗೊತ್ತಿಲ್ಲದವನಂತೆ ‘ಎರಡು ವರ್ಷಗಳ ಮೊದಲೇ ಹೀಗಾಗುವುದೆಂದು ನಿನಗೆ ಹೇಗೆ ಗೊತ್ತು, ಪಾಪ?’ ಎಂದು ಪ್ರಶ್ನಿಸಿದೆ. ಪಾಪ ಎರಡು ವರ್ಷ ಗಳಿಂದಲೂ ಹೇಳದಿದ್ದ ಆ ದಿನದ ಸುದ್ದಿಯನ್ನು ಆಗ ನನಗೆ ಹೇಳಿದಳು. ವಸಂತ, ನಾನು ಊಹಿಸಿದಂತೆ ಆ ದಿನ ಪಾಪ ಅವನನ್ನು ‘ಇಂಗ್ಲೆಂಡಿಗೆ ಹೋಗಬಾರದೆಂದು ಪ್ರಾರ್ಥಿಸಿದಳಂತೆ. ಎಷ್ಟಾದರೂ ಹುಡುಗತನ ಹೋಗಲೇಬೇಕು ಎಂದಿದ್ದರೆ ಅವಳೇನೂ ಅಷ್ಟು ನೊಂದು ಕೊಳ್ಳುತ್ತಿರಲಿಲ್ಲ. ಆದರೆ ಅವನು ಹೇಳಿದ ಮಾತುಗಳು ..! (ಇಂಗ್ಲೆಂಡಿಗೆ ಹೋಗುವ ಸಲುವಾಗಿಯೇ ನಿನ್ನನ್ನು ಮದುವೆ ಆದೆ ಇಲ್ಲದಿದ್ದರೆ ಯಾರು ಮದುವೆ ಆಗುತ್ತಿದ್ದರು ನಿನ್ನ ….’. ಪಾಪನ ಆನಂದವನ್ನು ಕೊಂದ ಮಾತುಗಳವು. ಎರಡು ವರ್ಷಗಳಿಂದಲೂ ಅವಳನ್ನು ಕೊರಗಿಸಿ ಕರಗಿಸಿದ ಮಾತುಗಳವು. ಆ ಮಾತುಗಳನ್ನವಳು ಮೊದಲೇ ಹೇಳಿದ್ದರೆ… ಅವಳು ಹೇಳಲಿಲ್ಲ. ಹಾಗೆಲ್ಲಾ ಹೇಳುವಂತಹ ಹುಡುಗಿಯೂ ಅಲ್ಲ ಅವಳು. ಆ ಮಾತುಗಳನ್ನು ನೆನೆದು ಕಳೆದ ಎರಡು ವರ್ಷಗಳಿಂದ ಪಾಪ ಮಾತ್ರ ಕೊರಗುತ್ತಿದ್ದಳು. ಈಗ ನಮ್ಮನೆಯವರಿಗೆಲ್ಲಾ ಕೊರಗು, ಸ್ವಲ್ಪ ಒರಟು ಸ್ವಭಾವದವರಾದರೂ ಚಿಕ್ಕಮ್ಮನಿಗೆ ಪಾಪ ಎಂದರೆ ಬಲು ಪ್ರೇಮ. ಅವರಂತೂ ಅವಳ ಗಂಡನ ವರ್ತನೆಯಿಂದ ಬಹಳ ಸಿಟ್ಟುಗೊಂಡಿದ್ದರು.

“ಪಾಪನ ಗಂಡ ಊರಿಗೆ ಬಂದುದೂ, ಅವನಿಗೆ ಕೆಲಸವಾದುದೂ ಊರಿಗೆಲ್ಲಾ ತಿಳಿದ ವಿಷಯ. ಇನ್ನೂ ಪಾಪ ಗಂಡನ ಮನೆಗೆ ಹೋಗಿ ಸಂಸಾರ ಮಾಡುತ್ತಿಲ್ಲವೇಕೆಂದು ನಮ್ಮ ನೆರೆಕರೆಯವರಿಗೆಲ್ಲಾ ಬಹಳ ಕುತೂಹಲ. ದಿನದಿನವೂ ಚಿಕ್ಕಮ್ಮನೊಡನೆ ಇದೇ ಪ್ರಶ್ನೆ ಕೇಳಿ ಚಿಕ್ಕಮ್ಮ ಉರಿದುಬೀಳುತ್ತಿದ್ದರು. ಪಾಪನ ಗೆಳತಿಯರೂ ಅವಳೊಡನೆ ಕೇಳುತ್ತಿದ್ದರೆಂದು ತೋರುತ್ತೆ. ಅವಳು ಗೆಳತಿಯರು ಬಂದರೆಂದರೆ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದಳು. ಕಾರಣವಿರಲಿ ಇಲ್ಲದಿರಲಿ-ನಮ್ಮ ಸಮಾಜದಲ್ಲಿ ಪತಿಯಿಂದ ತಿರಸ್ಕೃತೆಯಾದ ಪತ್ನಿ ಎಂದು ಎಲ್ಲರಿಗೂ ಸಂಶಯ-ಸಮಾಜದ ಕ್ರೂರ ನಾಲಿಗೆ ಪಾಪನನ್ನೂ ಟೀಕಿಸದಿರಲಿಲ್ಲ.

“ಅವನಿಗೆ ಕೆಲಸವಾಗಿ ಏಳೆಂಟು ತಿಂಗಳುಗಳಾಗಿತ್ತು. ಒಂದು ದಿನ ಸಾಯಂಕಾಲ ನಾನು ಮನೆಗೆ ಬರುವಾಗ ಪಾಪ ನನ್ನ ರೂಮಿನಲ್ಲಿ ಕೂತಿದ್ದಳು. ಸಾಯಂಕಾಲದ ಹೊತ್ತಿನಲ್ಲಿ ನನ್ನ ರೂಮಿಗವಳು ಬರುವುದು ಆಪರೂಪ. ಇಂದೇನು ಹೊಸತು ಎಂದು ‘ಏನು ಪಾಪ?’ ಎಂದೆ. ಆಗ ರೂಮಿನಲ್ಲಿ ದೀಪವಿನ್ನೂ ಹತ್ತಿಸಿರಲಿಲ್ಲ. ಸಂಪೂರ್ಣ ಕತ್ತಲೆಯಾಗದಿದ್ದರೂ
ಆ ಮಸಕು ಬೆಳಕಿನಲ್ಲವಳ ಮುಖವೂ ಸರಿಯಾಗಿ ಕಾಣಿಸುತ್ತಿರಲಿಲ್ಲ.
ಆದರೂ ಅವಳ ದನಿಯಿಂದ ತಿಳಿದುಕೊಂಡೆ, ಬಹಳ ಅತ್ತಿರುವಳೆಂದು. ಅದೇ ಅವಳ ಹತ್ತಿರ ಕೂತು ಕೈ ಹಿಡಿದು ಸುಮ್ಮನೆ ಅತ್ತರೇನು ಬಂದಂತಾಯಿತು ಪಾಪ? ನಿನ್ನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿ, ಅಷ್ಟೆ. ನಿನ್ನ ಕಣ್ಣೀರಿನ ಒಂದು ಹನಿಯಷ್ಟು ಯೋಗ್ಯತೆ ಸಹ ಇಲ್ಲ ಆ ಪ್ರಾಣಿಗೆ’ ಎಂದು ಏನೇನೋ ಹೇಳಿ ಸಮಾಧಾನ ಪಡಿಸಲೆತ್ನಿಸಿದೆ. ಸಮಾಧಾನ ಹೊಂದುವುದರ ಬದಲು ಅವಳ ಅಳು ಇನ್ನಷ್ಟು ಜೋರಾಯ್ತು. ಅಳಳುತ್ತಲೇ ಅಣ್ಣ, ನೀನೇ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟುಬಿಡು ನನ್ನ’ ಎಂದಳು.

“ಪಾಪನ್ನ ಒತ್ತಾಯದಿಂದ ಅವನೆಡೆಗೆ ನೂಕುವುದೇ! ಅವನಿಗವಳು ಬೇಡವಾಗಿದ್ದರೂ ನನಗೆ ಹೆಚ್ಚಾಗಿರಲಿಲ್ಲ. ಅವಳ ಮಾತುಗಳನ್ನು ಕೇಳಿ ನನಗೇನೋ ಊಹಿಸಲಾರದಷ್ಟು ಆಶ್ಚರ್ಯ, ಜೊತೆಯಲ್ಲೇ ಕೋಪ. ಎಲ್ಲಾದರೂ ಬೇಕುಬೇಕೆಂತಲೇ ನರಕಕ್ಕೆ ನೂಕುವುದಿದೆಯೆ ನನ್ನ ಪಾಪನ್ನ! ಆದರೆ ಪಾಪ ನನ್ನ ಯಾವ ಮಾತನ್ನೂ ಕೇಳಲಿಲ್ಲ. ಕಳುಹಿಸಿಯೇ ಬಿಡಬೇಕೆಂದು ಹಠಹಿಡಿದಳು. ತಂದೆ, ನಾನು ಅಲ್ಲದೆ ಚಿಕ್ಕಮ್ಮ ಸಹ ಇದನ್ನು ವಿರೋಧಿಸಿದರೂ ಕೊನೆಗೆ ಪಾಪನ ಹಠವೇ ಗೆದ್ದಿತು. ಅವಳನ್ನವನ ಮನೆಗೆ ಕರೆದುಕೊಂಡು ಹೋಗಿ ಬಿಡುವ ಭಾರವೂ ನನ್ನ ಮೇಲೆ ಬಿತ್ತು.
“ವಸಂತ, ಗಂಡ ಒಳ್ಳೆಯವನಾಗಿ, ಹೆಂಡತಿ ಅವನ ಪ್ರೇಮಕ್ಕೆ ರಾಣಿಯಾಗಿರುವಾಗ ಸಹ ಹೆಣ್ಣು ಮಕ್ಕಳನ್ನು ಅತ್ತೆಯ ಮನೆಗೆ ಕಳುಹಿಹಲು ಹೆತ್ತವರು ನೊಂದುಕೊಳ್ಳುವರು. ಇನ್ನು ನಮ್ಮ ಪಾಪನನ್ನು , “ನಮ್ಮ ಮನೆ ಬೆಳಕನ್ನು” ಬೇಡವಾದ ಆ ಗಂಡನ ಮನೆಗೆ ಬಲಾತ್ಕಾರ ದಿಂದ ಕಳುಹಲು ನಮಗೆಲ್ಲಾ ದುಃಖವಾಯಿತೆಂದು ಬೇರೆ ಹೇಳಬೇಕೆ ? ಸಾವನ್ನು ಹಿಂಬಾಲಿಸುವ ದುಃಖಿಗಳಂತೆ ಸ್ಟೇಶನ್ ತನಕ ಮನೆಯವರೆಲ್ಲಾ ನಮ್ಮೊಡನೆ ಬಂದರು. ಆ ದಿನವನ್ನು ಹೇಗೆ ಮರೆಯಲಿ ವಸಂತ? ಕಣ್ಣೀರು ತುಂಬಿ ಸುರಿಯುತ್ತಿದ್ದ ಕಣ್ಣುಗಳಿಂದ ನನ್ನ ಪುಟ್ಟ ತಂಗಿ ನಿಲ್ದಾಣದಲ್ಲಿ ನಿಂತಿದ್ದ ತಂದೆಯನ್ನು ಕಣ್ಮರೆಯಾಗುವ ತನಕ ನೋಡುತ್ತಿದ್ದಳು. ಕೊನೆಗವರು ಕಣ್ಮರೆಯಾದ ಮೇಲೆ ಒಂದು ಮೂಲೆಗೆ ಹೋಗಿ ಕೂತವಳು ಆ ಊರು ಬರುವ ತನಕ ಒಂದೇ ಒಂದು ಮಾತು ಸಹ ಆಡಲಿಲ್ಲ. ನಾನೂ ಮಾತಾಡಿಸುವ ಪ್ರಯತ್ನ ಮಾಡಲಿಲ್ಲ.

“ಆ ಊರು ಬಂತು ವಸಂತ, ನಾವು ರೈಲಿನಿಂದಿಳಿದು ಒಂದು ಕಾರು ಮಾಡಿಕೊಂಡು ಅವನ ಮನೆಗೆ ಹೊರಟೆವು. ನಾವು ಬರುವ ವಿಷವನ್ನವನಿಗೆ ತಿಳಿಸಿದ್ದರೂ ಅವನೇನೂ ಸ್ಟೇಶನ್ನಿಗೆ ಬಂದಿರಲಿಲ್ಲ. ಬರುವನು ಎಂದ, ನಾವು ಎಣಿಸಿಯೂ ಇರಲಿಲ್ಲ. ಅದೊಂದು ಆದಿತ್ಯವಾರ-ಅವನಿಗೆ ರಜವಿದ್ದ ದಿನ. ನಾವು ಅಲ್ಲಿಗೆ ಹೋಗುವಾಗ ಸುಮಾರು ಹತ್ತು ಗಂಟೆ ಇರಬಹುದು. ಅವನು ಇದಿರಿನ ಹಾಲಿನಲ್ಲಿ ಒಂದು ಈಸೀಚೇರಿನ ಮೇಲೆ ಬಿದ್ದುಕೊಂಡು ಹಿಂದಿನ ದಿನದ ಪೇಪರ್ ತಿರುವಿಹಾಕುತ್ತಿದ್ದ. `God is in his heaven & all is right with world’ ಎಂದು ಹೇಳುವಂತಿತ್ತು ಅವನ ರೀತಿ. ನೋಡಿದೊಡನೆಯೇ ಬಿದ್ದಲ್ಲಿಗೇ ಒದೆಯಲೇ ಎನ್ನುವಷ್ಟು ಕೋಪ ಬಂದರೂ ಪಾಪನ ಮುಖನೋಡಿ ನುಂಗಿಕೊಂಡೆ.

“ಬಾಗಿಲ ಹತ್ತಿರ ನಿಂತಿದ್ದ ಪಾಪನನ್ನು ನೋಡಿದರೂ ನೋಡದವನಂತೆ ‘ಏನು ಮಹೇಶ?’ ಎಂದು ಬಿದ್ದಲ್ಲಿಂದಲೇ ಕೇಳಿದ. ಉಕ್ಕುತಿದ್ದ ಕೋಪವನ್ನು ತಡೆದುಕೊಂಡು ‘ನಿನ್ನ ಹೆಂಡತಿಯನ್ನು ಕರೆದುಕೊಂಡು ಒಂದಿದ್ದೇನೆ’ ಎಂದು ಹೇಳಿದೆ. ‘ಅದಕ್ಕಿಷ್ಟೊಂದು ಅವಸರವೇನಿತ್ತು? ನಾನೇ ರಜೆಯಲ್ಲಿ ಬರುವೆನೆಂದು ಬರೆದಿದ್ದೆನಲ್ಲ’ ಎಂದು ಕೇಳಿದ. “ಎರಡು ಮೂರು ರಜೆಗಳು ಬಂದು ಹೋದರೂ ನೀನು ಬರಲಿಲ್ಲ. ಆದರೂ ಪಾಪ ನಮಗೇನೂ ಹೆಚ್ಚಾಗಿರಲಿಲ್ಲ. ಅವಳನ್ನು ಕಳುಹಿಸಲು ನನಗೆ ಅವಸರವೂ ಇರಲಿಲ್ಲ. ಅವಳ ಹಠ ತಡೆಯಲಾರದೆ ಕರೆದುಕೊಂಡು ಬಂದಿದ್ದೇನೆ. ಇನ್ನವಳನ್ನು ನೋಡಿಕೊಳ್ಳುವ ಭಾರ ನಿನ್ನದು-’ ಎಂದು ಅವಳನ್ನು ಆ ಪ್ರಾಣಿಗೆ ಒಪ್ಪಿಸಿದೆ.

“ನನ್ನ ಮಾತನ್ನು ಕೇಳಿ ಅವನು ಸ್ವಲ್ಪ ಹೊತ್ತು ಸಮ್ಮನಿದ್ದ. ಮತ್ತೆ ‘ಕೂತುಕೋ ಮಹೇಶ,
ನಿನ್ನೊಡನೆ ಸ್ವಲ್ಪ ಮಾತಾಡಬೇಕಾಗಿದೆ. ನೀವು ಇಷ್ಟೊಂದು ಅವಸರ ಮಾಡದಿದ್ದರೆ ನಾನೇ ಅಲ್ಲಿಗೆ ಬಂದು ಎಲ್ಲಾ ಹೇಳುತ್ತಿದ್ದೆ’ ಎಂದ. ಅಷ್ಟು ಹೊತ್ತೂ ನಾನೂ ಪಾಪನೂ ನಿಂತೇ ಇದ್ದೆವು. ಅವನು ಹಾಗೆಯೇ ಬಿದ್ದುಕೊಂಡಿದ್ದ. ನನ್ನನ್ನು ಕೂರಲು ಹೇಳಿದೊಡನೆ ನಾನು ಕೂತುಕೊಳ್ಳುತ್ತಾ ಬಾಗಿಲ ಹತ್ತಿರ ನೀರವವಾಗಿ ನಿಂತಿದ್ದ ಪಾಪನ್ನ ಕೂಗಿ ‘ಬಾ, ಇಲ್ಲಿ ಕೂತುಕೋ’ ಎಂದೆ. ಅವಳು ಬರಲಿಲ್ಲ; ಅಲ್ಲೇ ನಿಂತಿದ್ದಳು.

“ಅದನ್ನು ಲಕ್ಷಿಸದೆ ಅವನು ‘ನೋಡು ಮಹೇಶ, ನಿನ್ನ ತಂಗಿಯನ್ನು ಮದುವೆಯಾದಾಗ ನಾನಿನ್ನೂ ಚಿಕ್ಕವನು. ಸೋದರ ಮಾವನ ಮಾತನ್ನು ಮೀರಲಾರದೆ ಮದುವೆಯಾದೆ. ಆಗ ನನ್ನ ಮನಸ್ಸೇ ನನಗೆ ತಿಳಿದಿರಲಿಲ್ಲ. ಈಗ ನೋಡು, ನಾನೂ ಒಬ್ಬ ಮನುಷ್ಯನಾಗಿದ್ದೇನೆ; ನನಗೂ ಬುದ್ದಿಯಿದೆ, ಆತ್ಮವಿದೆ. ನನಗೆ ಬುದ್ದಿ ಬರುವ ಮೊದಲು ಆದ ಒಂದು ವಿಷಯಕ್ಕಾಗಿ ಇಡೀ ಜೀವನವನ್ನೆಲ್ಲಾ ನಾನೇಕೆ ಹಾಳುಮಾಡಿಕೊಳ್ಳ ಬೇಕು? ಒತ್ತಾಯದ ಮದುವೆ ಏನೋ ಎಂದೋ ನಡೆದುಹೋಯಿತು. ಈಗೇನು ಮಾಡುವಂತೆಯೂ ಇಲ್ಲ. ಈಗ ನಾನೊಂದು ನಿಶ್ಚಯಮಾಡಿದ್ದೇನೆ. ನಿನ್ನ ತಂಗಿ ನಿಮ್ಮನೆಯಲ್ಲೇ ಇರಲಿ, ನಾನವಳ ಖರ್ಚಿಗೆ ಬೇಕಾಗುವ ಹಣವನ್ನು ಕೊಡಲು ತಯಾರಾಗಿದ್ದೇನೆ. ಇದಕ್ಕೂ ಹೆಚ್ಚಾಗಿ ನಾನಿನ್ನೇನು ಹೇಳಲಿ?’ ಎಂದು ಹೇಳಿದ.

“ಅಷ್ಟು ಹೊತ್ತೂ ತಡೆದಿದ್ದ ಕೋಪ ಅವನ ಮಾತು ಕೇಳಿ ಉಕ್ಕಿ ಬಂತು. ‘ಪಾಸನ ಖರ್ಚನ್ನು ಪೂರೈಸಲಾರದೆ ಅವಳನ್ನಿಲ್ಲಿ ಬಿಡಲು ಕರೆತರಲಿಲ್ಲ. ನಿನಗೆ ಅವಳು ಬೇಡವಾದರೆ, ಅವಳ ಹಣದಿಂದ ವಿದ್ಯೆಗಳಿಸಿ ಸಂಸಾದಿಸಿದ ನಿನ್ನ ಹಣವೂ ಅವಳಿಗೆ ಬೇಡ’ ಎಂದು ಬಾ ಪಾಪ, ಇಲ್ಲಿ ನಮಗಿನ್ನೇನು ಕೆಲಸ’ ಎಂದು ಹೊರಟೆ. ಅವನೂ ತಡೆಯಲಿಲ್ಲ. ಬಹಳ ಸುಲಭವಾಗಿ ಗೆದ್ದೆ ಎಂದು ಹಿಗ್ಗುತ್ತಿದ್ದನೋ ಏನೋ! ಪಾಪ ಬಾಗಿಲ ಹತ್ತಿರದಿಂದ ಕದಲಲಿಲ್ಲ. ನಾನು ಹತ್ತಿರ ಹೋಗಿ ಕೈ ಹಿಡಿದು ಬಾ, ಪಾಪ, ನೀನು ನನಗೇನೂ ಹೆಚ್ಚಾಗಿಲ್ಲ. ಬಾ, ಹೋಗೋಣ’ ಎಂದೆ. ಪಾಪ ಕೈ ಕೊಸರಿಕೊಂಡು ಅವನೆಡೆಗೆ ಹೋಗಿ, ಅವನ ಕಾಲುಗಳನ್ನು ಕಣ್ಣೀರಿನಿಂದ ತೊಳೆಯುತ್ತಾ ‘ಹೆಂಡತಿಯಾಗಿ ನಾನು ನಿಮಗೆ ಬೇಡವಾಗಿದ್ದರೂ ಸೇವಕಿಯಂತೆ ಇರಲಾದರೂ ಒಂದಿಷ್ಟು ಸ್ಥಳ ಕೊಡಿ’ ಎಂದು ಪ್ರಾರ್ಥಿಸಿದಳು. ಅವಳ ಪ್ರಾರ್ಥನೆಗಾದರೂ ಅವನ ಕಲ್ಲುಹೃದಯ ಕರಗುತ್ತಿತ್ತೇನೋ! ಆದರೆ ಆಗಲೇ ನವೀನ ಉಡಿಗೆ ತೊಡಿಗೆಗಳಿಂದ ಅಲಂಕೃತಳಾದ ರಮಣಿಯೊಬ್ಬಳು ಕೈಯ್ಯಲ್ಲೊಂದು ಟೆನ್ನಿಸ್ ರಾಕೆಟ್ ಹಿಡಿದು ಸಹಜವಾದ ಸಲಿಗೆಯಿಂದ ಒಳಗೆ ಬಂದಳು. ಹೊರಗಿನ ಬಿಸಿಲಿನಿಂದ ಬಂದುದರಿಂದ ಒಳಗಿದ್ದ ನಮ್ಮಿಬ್ಬರನ್ನು ಅವಳು ನೋಡಿದಂತೆ ತೋರಲಿಲ್ಲ. ಬಿದ್ದು ಕೊಂಡಿದ್ದ ಅವನು ಅವಳನ್ನು ನೋಡಿ ಕಾಲು ಕೊಸರಿಕೊಂಡು ಎದ್ದು ನಿಂತ-ಪಾಪನೂ ಎದ್ದು ನಿಂತಳು. ಆಗ ಅವಳು ನನ್ನನ್ನೂ ಪಾಪನನ್ನೂ ನೋಡಿದಳು. ಆಶ್ಚರ್ಯದಿಂದ ಅವನ ಮುಖವನ್ನು ನೋಡಿದ ಅವಳ ನೋಟವು – ಯಾರಿವರು?’ ಎಂದು ಪ್ರಶ್ನಿಸುವಂತಿತ್ತು. ನನ್ನ ತಂಗಿಯನ್ನು ಅವಮಾನಿಸಿದ ಅವನು ನನ್ನ ಕಡೆ ತಿರುಗಿ, ಆ ಬಂದವಳ ಕೈ ಹಿಡಿದು ‘ಮಹೇಶ, ಇವಳು ನನ್ನ ಹೆಂಡತಿ ಮಾಲತಿ’ ಎಂದ. ಅವಳು ಒಳಗೆ ಬಂದಂದಿನಿಂದ ಭ್ರಾಂತಳಂತೆ ನಿಂತಿದ್ದ ಪಾಪ ಅವನ ಮಾತು ಕೇಳಿ, ಹಿಂದಿರಗಿ ಸಹ ನೋಡದೆ ಹೊರಗೆ ನಡೆದುಬಿಟ್ಟಳು. ನಾನೂ ಮರುಮಾತಾಡದೆ ಮಂತ್ರಮುಗ್ಧನಂತೆ ಅವಳನ್ನು ಹಿಂಬಾಲಿಸಿದೆ.

“ಇದೆಲ್ಲಾ ನಡೆದೀಗ ಎರಡು ಮೂರು ವರ್ಷಗಳಾಗಿ ಹೋದುವು. ಮೊದಮೊದಲು ನಾವೆಲ್ಲಾ ಪಾಪನ ಆಸೆಯನ್ನು ಬಿಟ್ಟು ಬಿಟ್ಟಿದ್ದೆವು. ವಸಂತ, ಡಾಕ್ಟರು ಸಹ ಅವಳು ಬದುಕಲಾರಳು ಎಂದಂದಿದ್ದರು. ಆದರೂ ಕೊನೆಗವಳು ಬದುಕಿಬಿಟ್ಟಳು. ಅವಳ ಆರೋಗ್ಯವೂ ಸುಧಾರಿಸಿತು. ಆದರೆ ಅವಳ ಮುಖದಲ್ಲಿ ಸದಾ ಮಿಂಚುತಿದ್ದ ನಗುಮಾತ್ರ ‘ಎಂದೆಂದಿಗೂ ಹಿಂದಿರುಗೆ’ ನೆಂದು ಹೊರಟೇ ಹೋಯ್ತು. ನನ್ನ ತಂಗಿ ಸುಂದರಿಯಲ್ಲ ವಸಂತ, ಏನೋ ಎಲ್ಲರಂತಿದ್ದಾಳೆ ಅಷ್ಟೆ. ಆದರೆ ಬುದ್ಧಿ, ಗುಣ, ನಡತೆಗಳಲ್ಲಿ ಅವಳನ್ನು ಸರಿಗಟ್ಟುವವರು ಅಪರೂಪ. ತನ್ನಿಂದಾಗಿ ನಾವೆಲ್ಲಾ ನೊಂದು ಕೊಳ್ಳಬಾರದೆಂದು ಅವಳು ತನ್ನ ದುಃಖವನ್ನು ನುಂಗಿಕೊಂಡು ಮನೆಯಲ್ಲಿ ಓಡಾಡುತ್ತಿದ್ದಳು. ಆ ದಿನದ ತರುವಾಯ ಎಂದೂ ಅವಳತ್ತುದನ್ನು ನಾನು ನೋಡಲಿಲ್ಲ. ಗಂಡನಿದ್ದರೂ ವಿಧವೆಯಂತೆ ಬಾಳುತ್ತಿದ್ದ ಪಾಪನ ಅವಸ್ಥೆಗೆ ಕೊರಗಿ ಕೊರಗಿ ಒಂದು ವರ್ಷ ತುಂಬುವ ಮೊದಲೇ ನಮ್ಮ ತಂದೆ ಅಮ್ಮನ ದಾರಿ ಹಿಡಿದರು. ಮತ್ತೊಂದು ತಿಂಗಳಾಗುವುದರೊಳಗೆ ಮೊದಲೇ ಹೃದ್ರೋಗವಿದ್ದ ಚಿಕ್ಕಮ್ಮನೂ ಅವರನ್ನು ಹಿಂಬಾಲಿಸಿದರು. ಉಳಿದವರು ನಾನು-ಪಾಪ ; ಪಾಪ-ನಾನು.

“ಇದೇ ಸಮಯದಲ್ಲಿ ನಮ್ಮ ಆರ್ಥಿಕ ಸ್ಥಿತಿಯ ಅನುಭವವೂ ಆಯ್ತು. ಪಾಪನ ಗಂಡನ ವಿಲಾಯತಿಯ ಓದಿಗಾಗಿ ಮಾಡಿಟ್ಟಿದ್ದ ಸಾಲಕ್ಕೆ ಮನೆ ಹೊಲ ಎಲ್ಲಾ ಮಾರಾಟವಾಯು. ಉಳಿದುದು ಅದೇ ವರ್ಷ ನನಗೆ ದೊರೆತ ಬಿ. ಎ. ಡಿಗ್ರಿ ಒಂದು. ನಮ್ಮ ತಂದೆ ಬದುಕಿದ್ದರೆ ನಾನು ಮೆಡಿಕಲ್ ಕಾಲೇಜು ಸೇರುತ್ತಿದ್ದೆ. ಅವರ ಮರಣದಿಂದ ಓದುವ ಹಂಬಲವೆಲ್ಲಾ ಮೂಲೆಪಾಲಾಗಿ ಹೊಟ್ಟೆಯ ಹಂಬಲ ಒಂದೇ ಉಳಿಯಿತು. ವಸಂತ, ನಮ್ಮ ಆ ಕಷ್ಟದ ದಿನಗಳಲ್ಲಿ ಪಾಪನ ಸಹನಶೀಲತೆ, ಶಾಂತತೆ, ತನ್ನನ್ನು ಮರೆತು ನನಗಾಗಿ ದುಡಿಯುವ ಅವಳ ಶಕ್ತಿ ಎಲ್ಲಾ ನೆನೆಸಿ ಕೊಂಡರೆ ನನ್ನ ಪುಟ್ಟ ತಂಗಿಯಲ್ಲಿ ಇಷ್ಟೊಂದು ಶಕ್ತಿ ಎಲ್ಲಿ ಅಡಗಿತ್ತು ಎಂದು ಈಗಲೂ ನನಗೆ ಆಶ್ಚರ್ಯವಾಗುತ್ತದೆ.

‘ಕೆಟ್ಟು ಪಟ್ಟಣ ಸೇರು’ ಎಂದು ಒಂದು ಗಾದೆಯಿದೆ ವಸಂತ. ನಾವೂ ಊರು ಬಿಡುವುದು ಎಂದು ನಿಶ್ಚಯಿಸಿದೆವು. ಆ ಊರಲ್ಲಿ ನಮ್ಮದೆನ್ನಲು ಏನೂ ಇರಲಿಲ್ಲ. ಮತ್ತೆ ಪಾಪನ ದುರವಸ್ಥೆಯನ್ನು ಕುರಿತು ಟೀಕಿಸುವವರ ಮುಂದೆ ಯಾವ ಆಸೆಗಾಗಿ ಇರಬೇಕು ಹೇಳು. ನಮ್ಮೂರನ್ನು ಬಿಡುವ ಹಿಂದಿನ ದಿವಸ ಒಂದು ಸಾರ್ವಜನಿಕ ಸಭೆ ಕೂಡಿತ್ತು. ಇದ್ದ ಸ್ವಲ್ಪ ಸಾಮಾನುಗಳನ್ನೆಲ್ಲಾ ಕಟ್ಟಿ ಮುಗಿಸಿದ್ದ ನಾವು ಬೇರೇನೂ ಕೆಲಸವಿಲ್ಲದುದರಿಂದ ಆ ಸಭೆಗೆ ಹೋದೆವು. ಸಭೆ ಸುರುವಾಗುವ ಮೊದಲು ‘ವಂದೇ ಮಾತರಮಮ್’ ಹಾಡಬೇಕಾದ ಹುಡುಗಿ ಅದೇಕೋ ಬಂದಿರಲಿಲ್ಲ. ನಮ್ಮ ಪಾಪನಿಗೆ ಬಹಳ ಚೆನ್ನಾಗಿ ಹಾಡಲು ಬರುತ್ತೆ. ಅವಳ ಸಂಗೀತದ ಸಲುವಾಗಿ ನಮ್ಮ ತಂದೆ ಬಹಳ ಮುತುವರ್ಜಿವಹಿಸಿದ್ದರು. ಅದು ಆ ಸಭೆಯ ಕಾರ್ಯದರ್ಶಿಗಳಿಗೆ ತಿಳಿದ ವಿಷಯ. ಪಾಪನೊಡನೆ ಆ ಹಾಡು ಹಾಡಬೇಕಾಗಿ ಕೇಳಿಕೊಂಡರು. ‘ಆಗದು’ ಎನ್ನುವಂತಿರಲಿಲ್ಲ. ಅಂದಿನ ಸಭೆಯಲ್ಲವಳು – ‘ವಂದೇ ಮಾತರಂ’ ಹಾಡು
ವಾಗ ಸಭೆಗೆಸಭೆಯೇ ಸ್ಥಬ್ಧವಾಗಿ ಹೋಗಿತ್ತು. ಅವಳ ಕಂಠ ಅಷ್ಟೊಂದು ಮಧುರ, ಹೇಳುವ ರೀತಿ ಅಷ್ಟೊಂದು ಮೋಹಕ-ಮತ್ತೆ ಹಾಡಿದ ಹಾಡು ವಂದೇ ಮಾತರಮ್.

ವಸಂತ, ಅಂದಿನ ‘ವಂದೇ ಮಾತರಮ್’ ನನ್ನ ತಂಗಿಯ ಜೀವನವನ್ನು ಸಂಪೂರ್ಣವಾಗಿ ಮಾರ್ಪಡಿಸಿಬಿಟ್ಟಿತು. ಎರಡು ಮೂರು ವರ್ಷಗಳ ಕೆಳಗವಳು ಪತಿಯಿಂದ ಪರಿತ್ಯಕ್ತೆಯಾದ ಪಾಪನಾಗಿದ್ದಳು. ಈಗ! ಈಗವಳು ಸುಪ್ರಸಿದ್ದ ಸಿನಿಮಾ ನಟಿ ಎಸ್. ಅರುಣಾ ದೇವಿ! ಇಡೀ ಭಾರತದ ಮೂಲೆ ಮೂಲೆಗಳಲ್ಲಿ ಸಹ ಅವಳ ಸ್ವರ್ಗಿಯ ಸಂಗೀತ ಕೇಳದ, ಅವಳ ಆ ಅಪೂರ್ವ ನಟನೆಯನ್ನು ನೋಡದ ಜನರಿಲ್ಲ. ಜಗತ್ತಿನ ದೃಷ್ಟಿಯಿಂದ ಅವಳೆಷ್ಟು ಸುಖಿ! ವಸಂತ, ಅವಳಿಗೆ ಸುಖವಾಗಲೀ, ಶಾಂತಿಯಾಗಲೀ ಇಲ್ಲವೆಂದು ತಿಳಿದ ಪ್ರಾಣಿ ನಾನೊಬ್ಬ. ಅವಳಿಗೀಗ ಸುಖವೆಂದರೆ ನನ್ನ ಶಿಕ್ಷಣ, ನನಗವಳ ಹಣದಿಂದ ಓದುವ ಇಚ್ಛೆ ಇಲ್ಲದಿದ್ದರೂ ಅವಳ ಹಠದ ಮುಂದೆ ನನ್ನದೇನೂ ನಡೆಯುವಂತಿಲ್ಲ.

“ವಸಂತ, ಜನರ ದೃಷ್ಟಿಯಲ್ಲಿ ಮೊದಲೇ ಪತಿಯಿಂದ ಪರಿತ್ಯಕ್ಕೆ ಯಾಗಿದ್ದ ಪಾಪ, ಈಗ ಸಿನಿಮಾ ನಟಿ! ಸಿನಿಮಾ ನಟಿ !! ನಮ್ಮವರಿಗೆ ಪತಿತರು, ಚರಿತ್ರಹೀನರು ಎನ್ನುವುದಕ್ಕೆ ಇದಕ್ಕಿಂತಲೂ ಹೆಚ್ಚಿಗಿನ್ನೇನು ಬೇಕ ವಸಂತ?

ವಸಂತ, ನೀನು ನನ್ನೊಡನೆ ನೋಡಿದ ಆ ಹುಡುಗಿ ನನ್ನ ತಂಗಿ ಪಾಪ, ಅವಳ ಅಥವಾ ನನ್ನ ವಿಷಯ ಜನರೇನಾದರೂ ಅಂದುಕೊಳ್ಳಲಿ ವಸಂತ, ಅದರಿಂದ ನಮಗೆ ಬಾಧಕವಿಲ್ಲ. ಆದರೆ ನೀನು-ನೀನು ಮಾತ್ರ ಜನರ ಕಣ್ಣುಗಳ ಮೂಲಕ ನಮ್ಮನ್ನು ನೋಡದಿದ್ದರೆ ಸರಿ. ಅದಕ್ಕಿಂತ ಹೆಚ್ಚು. ಇನ್ನೇನೂ ನಿನ್ನಿಂದ ಬಯಸುವುದಿಲ್ಲ ವಸಂತ ಪಾಪನ ವಿನಹ ನೀನಲ್ಲದೆ ಈ ಜಗತ್ತಿನಲ್ಲಿ ನನ್ನವರೆನ್ನಲು ನನಗಿನ್ನು ಯಾರೂ ಇಲ್ಲ. ನೀನು ನನ್ನ ವಿಷಯದಲ್ಲಿ ತಮ್ಮ ಅಭಿಪ್ರಾಯವಿಟ್ಟು ಕೊಳ್ಳುವುದನ್ನು ನಾನು ಸಹಿಸಲಾರೆ. ಅದರಿಂದಲೇ ಬೇರೆಯವರೊಡನೆ ಹೇಳಲು ಹಿಂಜರಿಯುವ ಈ ವಿಷಯಗಳನ್ನೆಲ್ಲಾ ನಿನಗೆ ಬರೆದಿರುವೆನು, ನೀನಿದನ್ನು ಓದಿದ ಮೇಲೂ ನನ್ನ ವಿಷಯದ ನಿನ್ನ ಭಾವನೆಯು ಬದಲಾಗದಿದ್ದರೆ ಇದೇ ನಿನಗೆ ನನ್ನ ಕೊನೆಯ ನಮಸ್ಕಾರ-
ಮಹೇಶ ”

ಮಧ್ಯರಾತ್ರಿಯಾಗಿದೆ ಎಂಬ ಅರಿವು ಸಹ ಇಲ್ಲದೆ ತನ್ನ ಕಣ್ಣೀರಿ ನಿಂದ ತೋಯ್ದ ಕಾಗದವನ್ನು ಕೈಯ್ಯಲ್ಲಿ ಹಿಡಿದುಕೊಂಡೇ ವಸಂತ ಮಹೇಶನ ರೂಮಿಗೆ ಓಡಿದ.
*****
ಎಪ್ರಿಲ್ ೧೯೩೮

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸಬೆಳಕು
Next post ಲೋಕದಲಿ ಪುಟ್ಟಿದ ಬಳಿಕ…..

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys