ಛೇ ಛೇ ಅಸ್ತವ್ಯಸ್ತ ಅಶ್ಲೀಲ
ಹಿಂಸೆ ಕ್ರೌರ್ಯದ ಖಂಡನೆ

ಉಪ್ಪುಂಡ ದೇಹದ
ಬಯಕೆಯ ನಾಗಾಲೋಟಕೆ
ತಡೆವುಂಟೆ?

ತರುಣ ತರುಣಿಯರ ಸುಪ್ತಬಯಕೆ
ಹೆಪ್ಪುಗಟ್ಟಿ ತಡೆಯದೇ
ಅಡ್ಡ ಹಿಡಿದ ಮನ
ಪಥ ಭ್ರಮಣೆಯಾಗಿ ರಸ್ತೆಗಿಳಿದು
ಹಾಕಿತು ಪ್ರೇಮದ ಸೋಗು

ಬಿಗಿ ಜಿನ್ ಮಿನಿಸ್ಕರ್ಟ್
ತೊನೆಯುವ ಮುಖ
ಕುಣಿಯುವ ಎದೆ ಕೆಂದುಟಿ
ಕೆದಕಿ, ಕುಣಿಸಿ ಒಳಗೊಳಗೆ
ಬೆಂಕಿ ಹೊತ್ತಿಸಿ
ಮನದಲಿ ಬಿರುಕು ಮೂಡಿಸಿ
ಅತ್ಯಾಚಾರ ಕೀಳು ಕಾಮದ
ಆಕ್ಟೋಪಸ್ ಹಿಡಿತದಲಿ
ತೀವ್ರ ಸಂವೇದನೆಯ
ಕುಡಿತ, ಬ್ಲೂಫಿಲಂ, ಡ್ರಗ್ಸ್
ವೇಶ್ಯಾವಾಟಿಕೆಗೆ ಬಲಿಯಾಗಿ
ಆದರ್ಶದ ಭದ್ರಕೋಟೆ
ಬಿರುಕು ಬಿಟ್ಟು
ದುರಂತಕ್ಕಪ್ಪುವುದು.

ಹೆಣ್ಣು ಹೊನ್ನು ಮಣ್ಣು
ಮಾಯೆಯೋ? ಅಲ್ಲ;
ಹಿಡಿತವಿಲ್ಲದಾ ಮನದ
ಆಸೆಯೇ ಮಾಯೆ.

ಕೀಳು ಕಾಮನೆಗಳ ಹತ್ತಿಕ್ಕಿದರೆ
ಆತ್ಮವಿಶ್ವಾಸದ ಹೊಸ ಬೆಳಕು
ಬಂದೀತು ಮೂಡಿ
ನಿರ್ಮಾಣವಾದೀತು
ಸಮಾಜದ ಸುಭದ್ರ ಕೋಟೆ
*****
೨೬-೧೦-೨೦೦೮ ರ ಕರ್‍ಮವೀರದಲ್ಲಿ