ಅಲ್ಲೊಂದು ಪುಟ್ಟಶಾಲೆ. ಅದರ ಸುತ್ತಲೂ ಮಕ್ಕಳೇ ನಿರ್‍ಮಿಸಿದ ಸುಂದರ ಹೂದೋಟ. ಅದಕ್ಕೆ ಹೊಂದಿಕೊಂಡಂತೆ ವಿಸ್ತಾರವಾದ ಆಟದ ಮೈದಾನ. ಅದರ ಸುತ್ತಲೂ ನೆರಳಿಗಾಗಿ ಅನೇಕ ದೊಡ್ಡ ದೊಡ್ಡ ಮರ ಗಿಡಗಳಿವೆ. ಅದೊಂದು ಮಾದರಿ ಶಾಲೆಯಾಗಿತ್ತು.

ಸಂಜೆ ನಾಲ್ಕರ ಸಮಯ, ಶಾಲಾ ಘಂಟೆ ಭಾರಿಸಿತು. ಘಂಟೆ ಭಾರಿಸಿದ್ದೇ ತಡ ಮಕ್ಕಳೆಲ್ಲ ಆಟದ ಮೈದಾನಕ್ಕೆ ಜಿಗಿದರು. ಮೈದಾನದಲ್ಲಿ ಮಕ್ಕಳು ಆಟವಾಡುತ್ತಿರುವುದು ನೋಡಲು ಅದೆಷ್ಟು ಚೆನ್ನ.

ಮಕ್ಕಳು ಆಟವಾಡುತ್ತಿರುವಾಗಲೇ ಹುಡುಗರ ಗುಂಪೊಂದು ಸೇರಿತ್ತು. ಅದರ ನಡುವೆ ಮೇಷ್ಟ್ರು ಒಬ್ಬ ಹುಡುಗನನ್ನು ಹೊಡೆಯುತ್ತಾ ಇದ್ದಾರೆ; ಅದನ್ನು ಕಂಡು “ಹೊಡೀ ಬೇಡಿ ಸಾರ್, ಹೊಡೀ ಬೇಡಿ ಸಾರ್, ಹೊಡಿ ಬೇಡಿ” ಎಂದು ಹೇಳುತ್ತಿದ್ದ ಮಾದ. ಅದಕ್ಕೆ ಮೇಷ್ಟ್ರು

“ಅಲ್ಲೋ ನಿನ್ನ ತಲೆಯಿಂದ ಅಷ್ಟೊಂದು ರಕ್ತಾ ಸುರೀತಾ ಇದ್ರೂ ನೀನು ಅವನನ್ನು ಹೊಡಿಬೇಡಿ ಎಂದು ಹೇಳುತ್ತಿದ್ದೀಯಲ್ಲ” ಎಂದರು. ಬಲವಾಗಿ ಏಟು ಬಿದ್ದ ತನ್ನ ತಲೆ ಕಡೆ ಲಕ್ಷ್ಯ ಕೊಡದೇ

“ಅವನನ್ನು ಹೊಡೀಬೇಡೀ ಸಾರ್, ಅವನು ನನ್ನ ಸ್ನೇಹಿತ. ಅವನೇನು ಬೇಕು ಅಂತ ಹೊಡೀಲಿಲ್ಲ. ಆಟ ಆಡುವಾಗ ಆಕಸ್ಮಿಕವಾಗಿ ಏಟು ಬಿದ್ದಿದೆ. ಅಷ್ಟೆ” ಎಂದ ಮಾದ. ರವಿಗೆ ಮೇಷ್ಟ್ರು ಹೊಡೆಯುವುದನ್ನು ಬಿಡಿಸಿದ.

ಅದಕ್ಕೆ ಖುಷಿಗೊಂಡ ಮೇಷ್ಟ್ರು ಅವರಿಬ್ಬರನ್ನೂ ತಬ್ಬಿಕೊಂಡು

“ನೋಡ್ರೋ, ಸ್ನೇಹಿತರು ಅಂದ್ರೆ ರವಿ, ಮಾದ ಇದ್ದಂತೆ ಇರಬೇಕು” ಎಂದು ಎಲ್ಲಾ ಮಕ್ಕಳಿಗೂ ಹೇಳಿ, “ಕೊನೆವರೆಗೂ ಹೀಗೆ ಇರಿ” ಎಂದು ಅವರನ್ನು ಹರಸಿದರು.

ಸೋರುತ್ತಿದ್ದ ರಕ್ತವನ್ನು ಒರೆಸಿಕೊಂಡ ಮಾದ ಮನೆ ಸೇರಿದ, ಸಂಜೆ ರವಿ. ಮಾದನ ಮನೆ ಕಡೆ ನಡೆದ, ಮಾದ ಅವನ ಮನೆ ಮುಂದಿರುವ ಕಟ್ಟೆಯ ಮೇಲೆ ಒಬ್ಬನೇ ಕುಳಿತಿದ್ದ. ಹತ್ತಿರ ಹೋಗಿ-

“ಮಾದ”, ಎಂದು ರವಿ ನಿಧಾನವಾಗಿ ಕರೆದ.

ತಟ್ಟನೆ ಎಚ್ಚೆತ್ತು ವಾಸ್ತವಕ್ಕೆ ಬಂದು “ಇಲ್ಲಿಗೇಕೆ ಬಂದೆ ರವಿ?”

ಅವನ ಗಲ್ಲ ಎರಡೂ ಕೈಯಿಂದ ಹಿಡಿದು “ಮಾದ, ನಿನಗೆ ತುಂಬಾ ನೋವಾಯ್ತನೋ” ಎಂದು ಮಾದನ ತೊಡೆಯ ಮೇಲೆ ತಲೆ ಇಟ್ಟು ಬಿಕ್ಕಿಸತೊಡಗಿದ.

“ನಾನು ತಪ್ಪು ಮಾಡ್ಬಿಟ್ಟೆ ಕಣೋ, ನನ್ನನ್ನು ಕ್ಷಮಿಸಿಬಿಡು” ಎಂದ ದೈನ್ಯತೆಯಿಂದ.

“ಯಾಕೋ ಹಾಗಾಡ್ತೀಯ. ನಾವಿಬ್ರೂ ಸ್ನೇಹಿತರಲ್ವೇನೋ. ಮೇಷ್ಟ್ರು ನಿನ್ನನ್ನು ಹೊಡೆಯುವುದನ್ನು ನಂಗೆ ನೋಡ್ಲಿಕ್ಕೆ ಆಗ್ಲಿಲ್ಲ ಕಣೋ. ಅದಕ್ಕೆ ಬಿಡಿಸಿಕೊಂಡೆ.

ನಿನ್ನನ್ನು ಮರೀಲಿಕ್ಕೆ ಸಾಧ್ಯವಿಲ್ಲ ಕಣೋ. ನಿನ್ನಂತಹ ಸ್ನೇಹಿತ ನನ್ನ ಜೀವನದಲ್ಲಿ ಸಿಗುವುದಿಲ್ಲ. ನೋಡು ನಮ್ಮಪ್ಪ ಡಾಕ್ಟ್ರು, ಅವರಿಂದ ಗಾಯಕ್ಕೆ ಔಷಧಿ ಹಚ್ಚಿಸಿ, ಬ್ಯಾಂಡೇಜನ್ನು ಹಾಕಿಸ್ತೀನಿ ಬಾರೋ”

“ಬ್ಯಾಡ ಕಣೋ ರವಿ, ಔಷಧಿ, ಬ್ಯಾಂಡೇಜು ಅಂದ್ರೆ ಎಲ್ಲರಿಗೂ ಗೊತ್ತಾಗುತ್ತೆ. ಆಗ ಇಬ್ಬರಿಗೂ ತೊಂದ್ರೆ ಕಣೋ. ಸ್ವಲ್ಪ ದಿವಸ ಕಳೆದಮೇಲೆ ಆ ಗಾಯ ವಾಸಿಯಾಗುತ್ತೆ. ನೀನೇನೂ ಯೋಚನೆ ಮಾಡಬೇಡ, ಈಗ ಮನೆಗೆ ಹೋಗು” ಎಂದು ಕಳಿಸಿದ. “ನಾಳೆ ಬೆಳಿಗ್ಗೆ ಮರೆಯದೇ ಶಾಲೆಗೆ ಬಾ” ಎಂದು ಕೂಗಿ ಹೇಳಿದ ಮಾದ.

ರವಿ, ಮಾದ ಬಹಳ ಚೂಟಿಯಾದ ಮಕ್ಕಳು. ಆರನೇ ಇಯತ್ತೆಯಲ್ಲಿ ಓದುತ್ತಿದ್ದರು. ಅವರು ಒಬ್ಬರನ್ನೊಬ್ಬರು ಬಿಟ್ಟಿರದ ಸ್ನೇಹಿತರಾಗಿದ್ದರು. ಮಾದ ಯಾವಾಗಲೂ ತಮ್ಮ ಹೊಲದ ಕಡೆಗೆ ರವಿಯನ್ನು ಕರೆದುಕೊಂಡು ಹೋಗುತ್ತಿದ್ದ. ಹೊಲದ ಸುತ್ತಲೂ ಓಡಾಡಿಕೊಂಡು ಬರುತ್ತಿದ್ದರು. ಅವರೂ ಕೂಡ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಬ್ಬರು ಆಟವಾಡುವುದನ್ನು ಮಾದನ ತಂದೆ ತಾಯಿ ನೋಡಿ ಸಂತೋಷಪಡುತ್ತಿದ್ದರು. ಅವರಿಬ್ಬರೂ ಒಂದೇ ತಟ್ಟೆಯಲ್ಲಿಯೇ ಉಣ್ಣುತ್ತಿದ್ದರು. ಅವರ ಸ್ನೇಹವನ್ನು ಕಂಡವರು ಹೊಟ್ಟೆಕಿಚ್ಚು ಪಡುತ್ತಿದ್ದರು. ಅವರ ಮನೆ ಮನದಲ್ಲಿ ಯಾವುದೇ ತಾರತಮ್ಯವಾಗಲಿ, ವೈಮನಸ್ಸಾಗಲೀ, ಬೇಧವಾಗಲೀ ಕಾಣುತ್ತಿರಲಿಲ್ಲ. ಅವಳಿ ಜವಳಿ ತರಹ ಇರುವುದನ್ನು ಕಂಡು ಮೇಷ್ಟ್ರು ಮನದಲ್ಲಿಯೇ ಸಂತೋಷ ಪಡುತಿದ್ದರು.

ಅವರಿಬ್ಬರೂ ಜಾಣರಾಗಿದ್ದರು. ಎಲ್ಲೂ ನಪಾಸಾಗದೇ ಹೈಸ್ಕೂಲು ಮೆಟ್ಟಿಲೇರಿದ್ದರು. ಅಲ್ಲಿಯೂ ಕೂಡ ಅಕ್ಕ-ಪಕ್ಕದಲ್ಲಿಯೇ ಕೂರುತ್ತಿದ್ದರು. ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು. ಒಟ್ಟಿಗೆ ಮನೆಗೆ ಬರುತ್ತಿದ್ದರು. ಆಗಲೇ ಒಂದು ವರ್‍ಷ ಕಳೆದದ್ದು ಗೊತ್ತಾಗಲೇ ಇಲ್ಲ.

ದೈವವೊಂದು ಬಗೆದರೆ ವಿಧಿಯೊಂದು ಬಗೆದಿತ್ತು. ಆದರೇನೂ ಮಾಡುವುದು. ವಯಸ್ಸಾದ ಮಾದನ ತಂದೆ ಹೃದಯಾಘಾತದಿಂದ ತೀರಿಕೊಂಡ. ಮನೆಯ ಜವಾಬ್ದಾರಿ ಆ ಚಿಕ್ಕ ಬಾಲಕ ಮಾದನಿಗೆ ಬಂದಿತು. ಮನೆಯ ಕೆಲಸ, ಹೊಲದ ಕೆಲಸ ಎಲ್ಲಾ ನಿಭಾಯಿಸಿಕೊಂಡು ಶಾಲೆಗೆ ಬರುತ್ತಿದ್ದ. ತಂದೆ ತೀರಿದ ಬಳಿಕ ತನ್ನ ನೋವನ್ನು ರವಿಯ ಬಳಿ ಹೇಳಿಕೊಳ್ಳುತ್ತಿದ್ದ. ರವಿ ಅವನಿಗೆ ಸಮಾಧಾನ ಪಡಿಸುತ್ತಿದ್ದ. ಮಾದ ಸಂಸಾರದ ಹೊಣೆಗಾರಿಕೆಯನ್ನರಿತು ಕೆಲಸ ಮಾಡತೊಡಗಿದ್ದ. ಒಂದು ದಿನ ಇಬ್ಬರೂ ಶಾಲೆಗೆ ಬರುತ್ತಿದ್ದಾಗ ರವಿ

“ಲೋ ಮಾದ, ನಮ್ಮಪ್ಪಂಗೆ ವರ್‍ಗವಾಗಿದೆ ಕಣೋ!”

“ಯಾವ ಊರಿಗೆ?”

“ಬೆಂಗಳೂರಿಗೆ ಕಣೋ”

“ಹಾಗಾದ್ರೆ ನನ್ನ ಬಿಟ್ಟು ಹೋಗ್ತಿಯೇನೊ” ಎಂದು ಹೇಳುವಾಗ ಮಾದನಿಗೆ ತುಂಬಾ ದುಃಖ ಉಮ್ಮಳಿಸಿ ಬಂದಿತು. ಇಬ್ಬರೂ ತಬ್ಬಿಕೊಂಡು ಅತ್ತರು. ಒಂದು ಕ್ಷಣ ಬಿಟ್ಟು “ಸರ್‍ಕಾರಿ ಕೆಲಸ ಅಂದ ಮೇಲೆ ಹೋಗಲೇಬೇಕಲ್ಲ. ನನ್ನ ಜೊತೆಗೆ ನೀನೂ ಬಂದು ಬಿಡು. ಒಟ್ಟಿಗೆ ಇರೋಣ, ಒಟ್ಟಿಗೆ ಓದೋಣ. ನಮ್ಮ ತಂದೆಗೆ ಹೇಳೀನಿ” ಎಂದ ರವಿ, ಅದಕ್ಕೆ-

“ಅಪ್ಪ ತೀರಿದ ಮೇಲೆ ಮನೆಯ ಜವಾಬ್ದಾರಿ ನನ್ನ ಮೇಲಿದೆ. ಹೇಗೋ ಬರಲಿ. ಮನೆಯಲ್ಲಿ ಅವ್ವ, ತಂಗಿ ಇಬ್ಬರನ್ನೂ ನೋಡಿಕೊಳ್ಳುವವರು ಯಾರು?” ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ.

ಇರುವಷ್ಟು ದಿನ ಬಿಡದೆ ಒಟ್ಟಿಗೆ ಇರುತ್ತಿದ್ದರು. ಹೊರಡುವ ದಿನ ಬಂದೇ ಬಿಟ್ಟಿತು. ಏನು ಮಾಡುವುದು, ಒಲ್ಲದ ಮನಸ್ಸಿನಿಂದ ಭಾರವಾದ ಹೃದಯದಿಂದ ರವಿ ತನ್ನ ಸ್ನೇಹಿತ ಮಾದನನ್ನು ಬಿಟ್ಟು ಹೊರಟಿದ್ದ.

ಮಾದನಿಗೆ ಶಾಲೆಯಲ್ಲಿ ಒಬ್ಬನೇ ಕುಳಿತು ಕೊಳ್ಳುವುದು, ಸಮಯ ಕಳೆಯುವುದು ಕಷ್ಟವಾಯಿತು. ಅವನಿಗೆ ಒಂಟಿತನ ಬಾಧಿಸುತ್ತಿತ್ತು. ಇತ್ತ ಮನೆಕೆಲಸವೂ ಹೆಚ್ಚಾಗಿತ್ತು. ದಿನದ ಹೆಚ್ಚಿನ ಸಮಯದಲ್ಲಿ ಹೊಲದ ಕೆಲಸದಲ್ಲಿಯೇ ನಿರತನಾಗಿರುತ್ತಿದ್ದ. ಮಾದನ ಆರೋಗ್ಯವೂ ಹದಗೆಡುತ್ತಿತ್ತು. ಕೊನೆ ಕೊನೆಗೆ ಶಾಲೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟ. ಈಗ ಅವನು ಹೊಲದ ಕಡೆಗೆ ಹೆಚ್ಚು ಲಕ್ಷ್ಯ ಕೊಟ್ಟಿದ್ದ.

ಮಾದ ತನ್ನ ಹೊಲದಲ್ಲಿ ಬತ್ತ ಬಡಿಯುವುದು, ಕಳೆ ಕೀಳುವುದು, ರಂಟೆ ಹೊಡೆಯುವುದು ಮಾಡುತ್ತಿದ್ದ. ಊರಿನ ಜನ ಮಾದನ ಕೆಲಸ ಕಂಡು ಮೆಚ್ಚಿಕೊಂಡಿದ್ದರು. ಇನ್ನೂ ಮಳೆ ಆರಂಭವಾಗಿರಲಿಲ್ಲ. ಬಿತ್ತನೆಗೆ ಹೊಲ ಅಣಿಗೊಳಿಸುತ್ತಿದ್ದ. ಹಿಂದಿನ ವರ್ಷ ಮಳೆ ಕೈ ಕೊಟ್ಟಿತ್ತು. ಆದರೂ ಬಂದಷ್ಟು ಮಳೆಯಲ್ಲಿಯೇ ಅಚ್ಚುಕಟ್ಟಾಗಿ ಮನೆಗೆ ಸಾಕಾಗುವಷ್ಟು ಜೋಳ ಹಾಗೂ ಅಕ್ಕಡಿ ಕಾಳುಗಳನ್ನು ಬೆಳೆದು ಕೊಂಡಿದ್ದ. ದನಕರುಗಳಿಗೆ ಒಂದಿಷ್ಟು ಮೇವು ಬೆಳೆದಿದ್ದ. ದನಕರುಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತಿದ್ದ.

ಈ ಸಾರಿ ಬೇಗ ಆರಂಭವಾಗಬೇಕಿದ್ದ ಮಳೆ ಇನ್ನೂ ಆರಂಭವೇ ಆಗಿರಲಿಲ್ಲ. ಆಕಾಶದಲ್ಲಿ ಮಳೆ ಮೋಡಗಳಾಗುತ್ತಿದ್ದವು, ಆದರೆ ಅವು ಅದೆಲ್ಲೋ ಬೇರೆ ಕಡೆಗೆ ಮಳೆ ಸುರಿಸುತ್ತಿದ್ದವು. ಅಲ್ಲಿ ಮಾತ್ರ ಮಳೆ ಬೀಳುತ್ತಿರಲಿಲ್ಲ. ಇಂದು ಬರಬಹುದು, ನಾಳೆ ಬರಬಹುದು ಎಂದು ಅಲ್ಲಿನ ರೈತರು ಆಕಾಶದ ಕಡೆಗೆ ಕತ್ತೆತ್ತಿ ನೋಡುವುದೇ ಆಯಿತು. ಈ ಬಾರಿಯಾದರೂ ಮಳೆ ಸರಿಯಾಗಿ ಬಾರದೇ ಹೋದರೆ ಮಾದನ ಕುಟುಂಬಕ್ಕೆ ಕಷ್ಟವಾಗುತ್ತಿತ್ತು. ಏಕೆಂದರೆ ಸಾಮಾನ್ಯವಾಗಿ ಮುಂದಿನ ಮಳೆಗಾಲ ಮುಗಿದು ಹೊಸ ಪೀಕು ಬರುವ ತನಕ ದವಸ ಧಾನ್ಯ ಕಾಳು ಕಡಿಗಳು ಬರುತ್ತಿದ್ದವು. ಮಳೆ ಇಲ್ಲದಿದ್ದರಿಂದ ಮುಂದಿನ ಒಕ್ಕಲಾಟ ಆರಂಭವಾಗುವುದರೊಳಗೆ ಕಾಳು ಕಡಿ ಬರಿದಾಗುವುದು. ಮುಂದೇನು ಮಾಡುವುದೆಂದು ಚಿಂತಿತನಾಗಿದ್ದ. ಆದರೂ ಬಿಡದೇ ದೇವರ ಮೇಲೆ ಭಾರ ಹಾಕಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ದೇವರ ಕೃಪೆಯೋ ಏನೋ ಅಂತು ಕೊನೆಗೆ ತಡವಾಗಿಯಾದರೂ ಮಳೆ ಆರಂಭವಾಯಿತೆಂದು ನಿಟ್ಟುಸಿರು ಬಿಟ್ಟ ಮಾದ.

ಒಳ್ಳೆಯ ಹದ ಮಳೆ ಬಿದ್ದು ಊರಿನ ಕೆರೆಕಟ್ಟೆಗಳು ತುಂಬಿದ್ದವು. ಹೊಲದಲ್ಲಿ ರೈತರು ಸಂತೋಷದಿಂದ ಕೆಲಸ ಆರಂಭಿಸಿದ್ದರು.

ಮಾದನು ಪಟ್ಟಣಕ್ಕೆ ಹೋಗಿ ಒಳ್ಳೆಯ ಬಿತ್ತನೆ ಬೀಜ ಪ್ಯಾಕೆಟ್ಗಳನ್ನು ಕೊಂಡು ತಂದ. ಬೀಜದ ಕಾಳುಗಳಿಗೆ ಗಂದಕ ಬೆರೆಸಿ ಎರಡು ದೊಡ್ಡ ಗಂಟು ಮಾಡಿಟ್ಟ. ಮೊದಲೆ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಹದ ಮಾಡಿದ ಹೊಲವನ್ನು ಪುನಃ ಉತ್ತು ಬಿತ್ತನೆಗೆ ಸಜ್ಜುಗೊಳಿಸಿದ. ಬಿತ್ತನೆಗೆ ಬೇಕಾದ ಕೂರಿಗೆ, ಈಸು, ನೊಗ, ಕುಂಟೆ ಮುಂತಾದವುಗಳನ್ನು ಒಟ್ಟು ಮಾಡಿದ.

ಮಾದ ಕೂರಿಗೆ, ಈಸುಗಳನ್ನು ಕುಂಟೆಗೆ ಜೋಡಿಸಿದ, ನೊಗದ ಎರಡು ಕಡೆಗೆ ಎತ್ತುಗಳನ್ನು ಕಟ್ಟಿದ. ಕೂರಿಗೆ ಕುಂಟೆಗಳಿದ್ದ ಭಾಗದ ಈಸನ್ನು ನೊಗದ ಮಧ್ಯದಲ್ಲಿರಿಸಿದ. ಈಸಿನ ಮತ್ತೊಂದು ತುದಿ ನೆಲಕ್ಕೆ ತಾಗುತ್ತಿತ್ತು. ಇಷ್ಟೆಲ್ಲ ಸಿದ್ಧವಾದಮೇಲೆ ಎತ್ತುಗಳು ಹೊಲದ ಹಾದಿ ಹಿಡಿದವು. ಮಗ ತಾಯಿ ಇಬ್ಬರು ಬಿತ್ತನೆ ಬೀಜದ ಗಂಟುಗಳನ್ನು ಹೊತ್ತುಕೊಂಡು ತಂಗಿ ಜೊತೆಗೆ ಎತ್ತುಗಳ ಹಿಂದೆ ನಡೆದರು.

ಅವರ ಹೊಲ ಊರಿನಿಂದ ಸುಮಾರು ಎರಡು, ಎರಡೂವರೆ ಕಿ.ಮಿ. ದೂರದಲ್ಲಿತ್ತು. ಕೆಂಪನೆ ಮಣ್ಣಿನ ಸಣ್ಣ, ಸಣ್ಣ ನುರುಜುಗಲ್ಲಿನ ಹೊಲ ಅದು. ಬಿತ್ತನೆ ಆದ ಮೇಲೆ ಸಸಿ ಬೆಳೆದು ದೊಡ್ಡದಾಗುತ್ತವೆ. ಆಗ ಬೆಳೆದ ಕಳೆ ತೆಗೆದ ಮೇಲೆ ಸ್ವಲ್ಪ ಮಳೆ ಬಂದರೆ ಸಾಕು. ಮುಂದೆ ತೆನೆ ಬರುವ ಕಾಲಕ್ಕೆ ಮಳೆ ಬಂದರಾಯ್ತು. ಒಳ್ಳೆಯ ಫಸಲು ಬರುತ್ತದೆ. ಅಂಥ ಒಳ್ಳೆಯ ಭೂಮಿ, ಹೊಲದ ಹತ್ತಿರ ಎತ್ತುಗಳು ಬಂದು ನಿಂತವು. ಎತ್ತುಗಳನ್ನು ಹೊಲದ ಮಧ್ಯಕ್ಕೆ ಹೊಡಕೊಂಡು ಬಂದ. ತಾವು ಹೊತ್ತಿದ್ದ ಬೀಜದ ಗಂಟುಗಳನ್ನು ಅಲ್ಲಿಯೇ ಕೆಳಗಿಳಿಸಿದರು. ಎತ್ತಿನ ನೊಗದ ಮೇಲಿದ್ದ ಕುಂಟೆಯನ್ನು ನೆಲದ ಮೇಲೆ ಬರುವಂತೆ ಮಾಡಿ, ನೆಲದ ಮೇಲಿದ್ದ ಈಸಿನ ತುದಿಯನ್ನು ನೊಗದ ಮೇಲೆ ಮದ್ಯಭಾಗದಲ್ಲಿರಿಸಿ ಹಗ್ಗದಿಂದ(ಮಿಣಿ) ಬಿಗಿಯಾಗಿ ಬಿಗಿದ ಕೂರಿಗೆ, ಕುಂಟೆಗೆ, ಭೂತಾಯಿಗೆ ಮನೆಯಿಂದ ತಂದಿದ್ದ ಹೂವನ್ನು ಏರಿಸಿದರು. ಅರಿಶಿಣ ಕುಂಕುಮ ಹಚ್ಚಿ ಕಾಯಿ ಒಡೆದು ಊದುಬತ್ತಿಯಿಂದ ಬೆಳಗಿ ಪೂಜೆ ಮಾಡಿದರು. “ಒಳ್ಳೆ ಫಸಲನ್ನು ಕೊಡು ತಾಯೇ” ಎಂದು ಮೂವರು ಭಕ್ತಿಯಿಂದ ಬೇಡಿಕೊಂಡರು.

ಕೂರಿಗೆಗೆ ಮೂರು ರಂದ್ರಗಳಿರುತ್ತವೆ. ಒಂದು ದೊಡ್ಡದು, ಉಳಿದೆರಡು ಚಿಕ್ಕದಾಗಿದ್ದು ಅವು ತ್ರಿಕೋನಾಕಾರದಲ್ಲಿರುತ್ತವೆ. ಈ ರಂದ್ರಗಳಿಗೆ ನೇರವಾಗಿ ಕೆಳಭಾಗದಲ್ಲಿ ಮೂರು ಬಿದಿರಿನ ಹಲ್ಲು(ಕೊಳವೆ)ಗಳನ್ನು ಕುಂಟೆಯಲ್ಲಿ ಬೇರೆ ಬೇರೆ ಅಂತರದಲ್ಲಿರುವ ರಂದ್ರಗಳಿಗೆ ಜೋಡಿಸಿದ ಮಾದ. ನಂತರ ತನ್ನ ಸೊಂಟಕ್ಕೆ ಚಿಕ್ಕ ಬುಟ್ಟಿ ಕಟ್ಟಿಕೊಂಡು ಅದರಲ್ಲಿ ಗಂಧಕ ಬೆರೆಸಿದ ಬೀಜಗಳನ್ನು ಸುರಿದುಕೊಂಡು, ಜೋಳದ ಬೀಜಗಳನ್ನು ಕೂರಿಗೆಯ ತೂತಿನ ಮೂಲಕ ನಿಧಾನವಾಗಿ ಹಾಕುತ್ತಿದ್ದ ಒಂದು ರಂದ್ರದಲ್ಲಿ ಎರಡು ಮೂರು ಕಾಳುಗಳನ್ನು ತನ್ನ ಬೆರಳಿನ ಮೂಲಕ ಕೆಳಕ್ಕೆ ಬೀಳಿಸುತ್ತಿದ್ದ. ಸಾಮಾನ್ಯವಾಗಿ ಬೀಜಗಳ ಅಂತರ ನಾಲ್ಕೈದು ಇಂಚು ಇರುವಂತೆ ಜಾಣತನದಿಂದ ಬಿತ್ತುತ್ತಿದ್ದ.

ಎತ್ತಿಗೆ ಕಟ್ಟಿದ ಮಿಣಿಯನ್ನು ಕುಂಟೆಯಿಂದ ಹೊರ ಬಂದ ಈಸಿನ ಮತ್ತೊಂದ ತುದಿಗೆ ಗಂಟು ಹಾಕಿದ್ದ. ಎತ್ತಿನ ಚಲನೆಯ ವೇಗವನ್ನು ಆ ಮಿಣಿ ನಿಯಂತ್ರಿಸುತ್ತಿತ್ತು. ಒಂದು ವೇಳೆ ಎತ್ತಿನ ವೇಗ ಹೆಚ್ಚಿದರೆ ಇವನು ಬಿತ್ತುವ ಕೈ ಬೆರಳುಗಳು ಕೂಡ ಚುರುಕಾಗುತ್ತಿತ್ತು. ಹೀಗೆ ಎರಡು ಮೂರು ದಿವಸಗಳಲ್ಲಿ ಬಿತ್ತನೆ ಕಾರ್ಯವನ್ನು ಶ್ರದ್ಧೆಯಿಂದ, ಚಾಣಾಕ್ಷತನದಿಂದ ಮಾಡಿ ಮುಗಿಸಿದ.

ಬಿತ್ತಿದ ಬೀಜದ ನಡುವೆ ಒಂದೊಂದು ತೊಗರಿ ಬೀಜವನ್ನು ಹಿಂದಿನಿಂದ ತಂಗಿ, ತಾಯಿ ಇಬ್ಬರೂ ಉದುರಿಸುತ್ತಾ ಬಂದರು. ಜೊಳದ ನಂತರ ತೊಗರಿ ಫಲವನ್ನು ಪಡೆಯುತ್ತಾರೆ. ಈ ಕೆಲಸವನ್ನು ಮಾದ ಬಹಳ ಬುದ್ದಿವಂತಿಕೆಯಿಂದ ಮಾಡಿಸಿದ್ದ. ಬಿತ್ತನೆ ಕೆಲಸ ಮುಗಿದ ಮೇಲೆ ಬೀಜ ಸರಿಯಾಗಿ ನೆಲದಲ್ಲಿ ಮಣ್ಣಿನಿಂದ ಮುಚ್ಚಿಕೊಂಡಿರಲೆಂದು ಬೆಳೆಸಾಲನ್ನು ಹೊಡೆದ.

ಬಿತ್ತನೆ ಕಾರ್ಯ ಎಲ್ಲಾ ಮುಗಿದಿತ್ತು. ಬಿತ್ತಿದ ಎಲ್ಲಾ ಬೀಜಗಳು ಮೊಳೆತು ಮೂರ್‍ನಾಲ್ಕು ಇಂಚು ಎತ್ತರಕ್ಕೆ ಬೆಳೆದಿದ್ದವು. ಆಗಲೇ ಸಾಲುಗಳ ನಡುವೆ ಕಳೆ ಬೆಳೆದಿತ್ತು. ಎಡೆ ಹೊಡೆದು ಕಳೆ ಹುಲ್ಲು ಕಿತ್ತುಕೊಂಡು ಮೇಲಕ್ಕೆ ಬರುವಂತೆ ಮಾಡಿದ. ತಾಯಿ, ತಂಗಿ ಮಾದ ಮೂರು ಜನ ಸೇರಿ ಕಳೆ ಹುಲ್ಲು ತೆಗೆದರು.

ಬಿತ್ತುವ, ಕಳೆ ಕೀಳುವ, ಗೊಬ್ಬರ ಹಾಕುವ ಕೆಲಸವೆಲ್ಲ ಮುಗಿದು ನಾಲ್ಕು ತಿಂಗಳು ಕಳೆದಿದ್ದವು. ಮಾದನ ಹೊಲದ ಜೋಳದ ಗಿಡಗಳು ಎದೆ ಮಟ ಬೆಳೆದು ನಿಂತಿದ್ದವು. ಸಸಿಗಳು ಮೊದಲು ದೂರ ದೂರದಲ್ಲಿದ್ದಂತೆ ಕಂಡರೂ ಈಗ ಅವೆಲ್ಲ ಸುಪುಷ್ಟವಾಗಿ, ಸಮೃದ್ಧವಾಗಿ ಬೆಳೆದು ನಿಂತಿದ್ದವು.

ಹೊಲದ ಸಮೀಪಕ್ಕೆ ಬರುತ್ತಿದ್ದಂತೆ ತನ್ನ ಹೊಲದ ಸಮೃದ್ಧಿಯನ್ನು ಕಂಡು ಸಂತೋಷ ಪಟ್ಟಿದ್ದ. ಹೊಲದ ದಿಬ್ಬ ಹತ್ತಿ ನೋಡುತ್ತ ನಿಂತ. ಒಂದೊಂದು ಸಾಲಿನಲ್ಲಿನ ಗಿಡವನ್ನು ಗಮನಿಸುತ್ತಾ ಬಂದ. ಎಲ್ಲಾ ಗಿಡದ ಕಾಳುಗಳು ಬಲಿತು ತುಂಬಿ ತುಳುಕುತ್ತಿದ್ದವು. ಜೊಳ್ಳು ಯಾವ ತೆನೆಯಲ್ಲೂ ಕಂಡು ಬರಲಿಲ್ಲ. ಎಲ್ಲಾ ಗಟ್ಟಿ ಕಾಳುಗಳು, ತೆನೆಗಳು ದಪ್ಪ ದಪ್ಪಗೆ ಬೆಳೆದಿವೆ. ದಿಬ್ಬದಿಂದ ಇಳಿದು ಬಂದು ಭೂತಾಯಿಯನ್ನು ಮುಟ್ಟಿ ನಮಸ್ಕರಿಸಿದ. ನಂಬಿದವರನ್ನು ಈ ತಾಯಿ ಕೈ ಬಿಡುವುದಿಲ್ಲ ಎಂದು ತೆನೆಗಳಿಗೆ ಮುತ್ತಿಟ್ಟು ಕಣ್ಣಿಗೊತ್ತಿಕೊಂಡ.

ತೆನೆಗಳೆಲ್ಲ ಬಲಿತು. ಚೆನ್ನಾಗಿ ಬೆಳೆದಿದ್ದವು. ಕೊಯ್ಲು ಆರಂಭವಾಯಿತು ಅವುಗಳನ್ನೆಲ್ಲ ಚಕ್ಕಡಿಯಲ್ಲಿ ತುಂಬಿಸಿ ಕಣಕ್ಕೆ ಹಾಕಿಸಿ ರಾಶಿ ಮಾಡಿಸಿದ. ಇಳುವರಿ ಹೆಚ್ಚಾಗಿದ್ದನ್ನು ಕಂಡ ಮಾದ ಮನದಲ್ಲಿಯೇ ಹಿಗ್ಗಿದ.

ಆಗಲೇ ತಂಗಿ ದೊಡ್ಡವಳಾಗಿದ್ದಳು. ತಾಯಿಯಿಂದ ಬಳುವಳಿಯಾಗಿ ಬಂದ ಎಣ್ಣೆಗೆಂಪು ಬಣ್ಣ, ತುಸು ಉದ್ದನೆಯ ಮೂಗು, ಬೊಗಸೆ ಕಣ್ಣುಗಳು, ಇವುಗಳಿಂದ ಆಕೆಯು ಸೌಂದರ್‍ಯವತಿಯಾಗಿದ್ದಳು. ಮನೆ ಕೆಲಸ, ಹೊಲದ ಕೆಲಸ ಎಲ್ಲವನ್ನೂ ತನ್ನ ತಾಯಿಯೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ವಯಸ್ಸಿಗೆ ಬಂದ ಹುಡುಗಿ ಇದ್ದಾಳೆ ಎಂದರೆ ತೀರಿತು. ಆಕೆಯನ್ನು ನೋಡಲು ವರಗಳು ಮೇಲಿಂದ ಮೇಲೆ ಬಂದೇ ಬಂದವು. ತಂಗಿ ಒಪ್ಪಿದ ಹುಡುಗನನ್ನು ನೋಡಿ ಆಕೆಯ ಮನಸ್ಸಿನಂತೆ ಮದುವೆ ಮಾಡಿಕೊಟ್ಟಿದ್ದ. ರವಿಯ ವಿಳಾಸ ತಿಳಿಯದೇ ತನ್ನ ತಂಗಿಯ ಮದುವೆಗೆ ಕರೆಯಲಾಗಲಿಲ್ಲ. ಮದುವೆ ಮನೆಯಲ್ಲಿ ಮಾದನ ಮುಖದಲ್ಲಿ ರವಿ ಇಲ್ಲದ ಕೊರತೆ ಎದ್ದು ಕಾಣುತ್ತಿತ್ತು.

ತಂಗಿ ಗಂಡನ ಮನೆ ಸೇರಿದಳು. ಇತ್ತ ಮನೆಯಲ್ಲಿ ತಾಯಿ ಮಗ ಇಬ್ಬರೇ ಇರುವುದಾಯಿತು. ಎಷ್ಟು ದಿನ ಅಂತ ಮಗನನ್ನು ಒಂಟಿಯಾಗಿ ಬಿಡುವುದು. ಮನೆಯಲ್ಲಿ ಕೆಲಸ ಹೆಚ್ಚಾಗತೊಡಗಿತು. ಒಂದು ದಿವಸ ಮಗನನ್ನು ಕರೆದು “ಮಾದ, ನನಗೂ ವಯಸ್ಸಾಯಿತು. ಮನೆಕೆಲಸ ಬೇರೆ ಹೆಚ್ಚಾಗಿದೆ. ನಿನಗೂ ಮದುವೆ ವಯಸ್ಸು, ಹೊಲ್ದಾಗೆ ಕೆಲಸ ಮಾಡಲು ನಿನಗೂ ಜೊತೆ ಬೇಕು. ಅದಕ್ಕೆ ಪಕ್ಕದ ಹಟ್ಟಿಯಾಗೆ ಒಂದು ಹುಡುಗಿ ಐತೆ, ನಾನು ಹೋದ ಜಾತ್ರೆಲೆ ನೋಡಿದೀನಿ, ಬಹಳ ಪಸಂದಾಗವಳೆ, ನಿನಗೆ ಜೋಡಿ ಸಂದಾಗೈತೆ” ಎಂದಿದ್ದಳು. “ನೋಡವ್ವ, ನಿನಗೆ ಹೆಂಗಾಗ್ತೈತಿ ಅಂಗೆ ಮಾಡವ್ವ” ಎಂದ.

ಮಾದ ಮದುವೆಯಾಗಿ ನಾಲೈದು ವರ್‍ಷ ಕಳೆದಿದ್ದವು. ಎರಡು ಮಕ್ಕಳಾಗಿದ್ದವು. ನಂದ ಗೋಕುಲದಂತಿದ್ದ ಮನೆ ಮತ್ತೆ ದುಃಖದ ಮಡುವಿನಲ್ಲಿ ಮುಳುಗಿತು. ವಿಧಿಯ ಅಟ್ಟಹಾಸದಿಂದ ಮಾದನ ತಾಯಿ ತೀರಿಕೊಂಡಳು. ಊರಿನವರೆಲ್ಲಾ ಬಂದು ಸಮಾಧಾನಮಾಡಿದ್ದರು. ಅಪ್ಪ ತೀರಿಕೊಂಡಾಗ ರವಿ ನನ್ನನ್ನು ಸಮಾಧಾನ ಮಾಡಿದ್ದ. ಈಗ ಅವ್ವ ತೀರಿಕೊಂಡಾಗ ಸಮಾಧಾನ ಮಾಡಲು ರವಿ ಇರಲಿಲ್ಲ. ತಾಯಿಯ ನೆನಪಿನೊಂದಿಗೆ ರವಿಯ ನೆನಪು ಬರತೊಡಗಿತು. ಮಾದನ ಮುಖ ಬಾಡಿತು. “ರವಿ ಹೇಗೆ ಇರುವನೋ, ಎಲ್ಲಿದ್ದಾನೋ, ನಾನು ಬದುಕಿದ್ದಾಗಲೇ ಅವನು ಸಿಗುತ್ತಾನೋ ಇಲ್ಲವೋ” ಎಂದು ಯೋಚಿಸುತ್ತಿದ್ದ.

ಆತನ ಸುಂದರ ದಿನಗಳೆತ್ತ ಸಾಗಿದವೋ, ಹೊಲದಲ್ಲಿ ಮಾತ್ರ ಕೆಲಸ ಮಾಡುವುದು ಅವನ ನಿತ್ಯದ ಕೆಲಸವಾಯಿತು. ಹೆಂಡತಿ ಮಕ್ಕಳು ಅವನೊಂದಿಗೆ ದುಡಿಯುತ್ತಿದ್ದರು. ಒಂದು ದಿನ

“ಏನುರೀ……… ಈ ಪರಿ ಕೆಲಸ ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತಾ? ಇವತ್ತಾದರೂ ಬೇಗ ಮನೆಗೆ ಹೋಗೋಣ” ಎಂದಳು ಹೆಂಡತಿ. ಮಕ್ಕಳು ಬೆಳಗಿನಿಂದ ಹೊಲ್ದಾಗ ಕೆಲಸ ಮಾಡಿ ಬಳಲಿದ್ದವು. ಮಕ್ಕಳ ಮುಖವನ್ನೊಮ್ಮೆ ನೋಡಿ “ಆಯ್ತು ನಡಿ” ಎಂದು ಅಂದು ಮನೆಗೆ ಬೇಗ ಬಂದಿದ್ದರು.

ದಿನ ಕಳೆದಂತೆ ಮಾದನ ಕೆಲಸ ಹೆಚ್ಚಾಯಿತು. ಏನು ಮಾಡುವುದು. ಒಬ್ಬನೇ ಕೆಲಸ ಮಾಡಬೇಕು ಎಂದು ತನ್ನ ಕೆಲಸದಲ್ಲಿ ನಿರತನಾಗಿದ್ದ. ಆ ದಿನ ಅವನು ಬಹಳ ಕೆಲಸ ಮಾಡಿದ್ದರಿಂದ ಬಳಲಿ ಸುಸ್ತಾಗಿದ್ದನ್ನು ಕಂಡು

“ಯಾಕ್ರೀ ನಿಮ್ಮ ಮುಖ ಸಪ್ಪಗಿದೆಯ, ಬಹಳ ಸುಸ್ತಾಗಿದ್ದೀರಿ. ಸ್ವಲ್ಪ ಆರಾಮು ತೆಗೆದೆಕೊಳ್ಳಬಾರದೇ” ಎಂದಾಗ

“ಇಲ್ಲ ಕಣೇ! ಆವಾಗ ಎದಿಯಾಗ ಒಂದು ರೀತಿ ಛಳಕ್ ಅಂತು. ಆವಾಗಿನಿಂದ ಒಂದು ರೀತಿ ಆಗ್ತಿದೆ” ಎಂದ ಮಾದ.

ಆದ್ರೂನು ಅದು ಏನು ಮಾಡುತ್ತೆ ಎಂದು ಅವನು ಕೆಲಸ ಮಾಡುತ್ತಲೇ ಬಂದಿದ್ದ. ಎದೆಯಲ್ಲಿ ಕಾಣಿಸಿಕೊಂಡ ನೋವು ಹದಿನೈದು ದಿವಸಗಳಾದರೂ ಹೋಗಲೇ ಇಲ್ಲ. ಅದು ಕಡಿಮೆಯಾಗದೇ ಹೆಚ್ಚಾಗತೊಡಗಿತು. ಮನಸ್ಸು ನೋವಿನಿಂದ ನರಳತೊಡಗಿತು. ಇದರಿಂದ ಆತನ ದೇಹ ಸ್ಥಿತಿ ದಿನದಿನಕ್ಕೆ ದುರ್‍ಬಲವಾಗತೊಡಗಿತು. ಆದರೂ ಬಿಡದೇ ಹೊಲದಲ್ಲಿ ಕೆಲಸ ಮಾಡತೊಡಗಿದ. ಊರಿನ ಜನರೆಲ್ಲರೂ “ಏ ಮಾದ, ನಿನ್ನ ಮಕ್ಕಳು ಇನ್ನೂ ಚಿಕ್ಕವು, ನಿನ್ನ ದೇಹದ ಕಡೆ ಲಕ್ಷ್ಯ ಇರಲಿ, ನಿನ್ನ ಆರೋಗ್ಯ ನೋಡಿಕೋ. ಪಕ್ಕದ ಊರಿನಲ್ಲಿ ಖಾಸಗಿ ಆಸ್ಪತ್ರೆಯಾಗೆ ಒಳ್ಳೆಯ ಡಾಕ್ಟ್ರು ಇದ್ದಾರೆ. ಅವರ ಹತ್ತಿರ ಹೋಗಿ ತೋರಿಸಿಕೊಂಡು ಬಾರೋ” ಎಂದು ಹೇಳತೊಡಗಿದರು. ಹೆಂಡತಿಯೂ ಕೂಡ ಡಾಕ್ಟರಲ್ಲಿಗೆ ಹೋಗಲು ಒತ್ತಾಯಿಸತೊಡಗಿದಳು.

ಸರಿ, ಎಂದು ಇದ್ದ ಪುಡಿಗಾಸು ತೆಗೆದುಕೊಂಡು ಹೆಂಡತಿ, ತನ್ನೆರಡು ಮಕ್ಕಳೊಂದಿಗೆ ತಡಮಾಡದೇ ಮಾರನೇ ದಿವಸವೇ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ಮಾದ ಬಂದ. ಅಲ್ಲಿ ತನ್ನ ಹೆಸರು, ವಿಳಾಸ, ಎಲ್ಲಾ ಬರೆಸಿ “ನನಗೆ ಎದೆಯಾಗ ನೋವು ಕಣ್ರವ್ವ” ಎಂದು ವಿಳಾಸ ಬರ್‍ಕೊಂಡ ನರ್‍ಸ್ ಬಳಿ ಹೇಳಿದ. ಅದಕ್ಕೆ “ಹೃದಯ ರೋಗ ತಜ್ಞರು ಇದ್ದಾರೆ. ಅವರ ಹತ್ತಿರ ಹೋಗಿ ತೋರ್‍ಸು” ಎಂದಳು.

ಬ್ಯಾಗು, ಹೆಂಡ್ತಿ, ಮಕ್ಕಳೊಂದಿಗೆ ಒಳ ಬಂದ ಮಾದ, ರೂಮಿನ ಮೇಲೆ ಹಾಕಿದ್ದ ಒಂದೊಂದೇ ಬೋರ್‍ಡನ್ನು ಓದುತ್ತಾ ಬಂದ. ಹಲವಾರು ಬೋರ್ಡುಗಳಾದ ಮೇಲೆ ಒಂದು ಬೋರ್ಡು ಕಾಣಿಸ್ತು, ಅದನ್ನು ನೋಡಿದ ಕೂಡಲೇ ಒಂದು ಸಾರಿಗೆ ಅವಕ್ಕಾದ. ಬೆರಗಾದ. ಬೋರ್ಡನ್ನು ಮುಟ್ಟಿ ಮುಟ್ಟಿ ನೋಡಿದ. ಆ ಹೆಸರಿನ ಮೇಲೆ ಕೈಯಾಡಿಸಿದ. ಸಂತಸಪಟ್ಟ, ಅವನ ಹೃದಯ ತುಂಬಿ ಬಂದಿತ್ತು. ಹತ್ತಾರು ಬಾರಿ ಆ ಬೋರ್ಡನ್ನು ಓದಿದ. ಎಂ.ಎಸ್.ರವೀಂದ್ರ, ಎಂ.ಬಿ.ಬಿ.ಎಸ್. ಹೃದಯ ರೋಗ ತಜ್ಞರು, ಎಂದು ಅದರ ಮೇಲೆ ಬರೆದಿತ್ತು. ತನ್ನ ಕಣ್ಣನ್ನೇ ನಂಬದಾದ. ತಡೆಯಲಾಗದೇ ಸಂತಸದ ಕ್ಷಣದಲ್ಲಿ ಅವನ ಕಣ್ಣು ತನ್ನಿಂದ ತಾನೇ ತೇವವಾದವು. ತನ್ನ ಬಾಲ್ಯದ ನೆನಪುಗಳೆಲ್ಲವೂ ಕ್ಷಣ ಮಾತ್ರದಲ್ಲಿ ಕಣ್ಣಿನ ಮುಂದೆ ಬಂದವು.

ಈ ರವಿ ಅವನೇ ಅಲ್ಲವೇ, ಈ ರವಿ ಅವನೇ ಅಲ್ಲವೇ ಎಂದು ಅವನ ಮನಸ್ಸು ಸಾರಿ ಸಾರಿ ಹೇಳತೊಡಗಿತು. ಕೆಲಸದವ ಬಂದು “ಚೀಟಿ ಕೊಡಿ” ಎಂದಾಗ ವಾಸ್ತವಕ್ಕೆ ಬಂದ ಮಾದ ಅವನಿಗೆ ಚೀಟಿ ಕೊಟ್ಟ “ನೋಡಿ ಇಲ್ಲೇ ಬೆಂಚಿನ ಮೇಲೆ ಕೂತಿರಿ, ನಾನು ಹೆಸರು ಕರೀತೇನೆ. ಅವಾಗ ನೀವು ಒಳಗೆ ಬರಬಹುದು” ಎಂದನು.

“ಹೂ! ಸರಿಯಪ್ಪ ಇಲ್ಲೇ ಬೆಂಚಿನ ಮೇಲೆ ಕೂತಿದ್ದೀನಿ” ಎಂದು ಕುಳಿತುಕೊಂಡ. ತನ್ನ ಬಾಲ್ಯದ ಗೆಳಯ ಸಿಕ್ಕನೆಂದು ಸಂತಸದಲ್ಲಿ ಮಾದನಿಗೆ ತನ್ನ ಎದೆ ನೋವು ಮರೆತೇ ಹೋಗಿತ್ತು.

“ಮಾದಪ್ಪ, ಮಾದಪ್ಪ, ಏ ಮಾದಪ್ಪ” ಎಂದು ಕೆಲಸದವ ಕೂಗಿದ. ಮಾದ ಎದ್ದು ದಡಬಡಿಸಿ ಒಳಹೋದ. ಅವನೊಂದಿಗೆ ಹೆಂಡತಿ ಮಕ್ಕಳು ಒಳ ನಡೆದರು. ಮಾದ ಒಳಹೋಗಿ ನೋಡ್ತಾನೆ. ಅದೇ ಕಣ್ಣು, ಅದೇ ಮೂಗು, ಅದೇ ತುಟಿ. ಅದೇ ಬಾಯಿ, ಅದೇ ದನಿ ಅವನೇ ಇವನು. ಹೌದು ಇವನು ಅವನೇ ಸೈ ಎಂದು ಅವನ ಮನಸ್ಸು ಹೇಳತೊಡಗಿತು. ಅವನು ನನ್ನನ್ನು ಗುರ್‍ತಿಸುವನೆಂದು ಭಾವಿಸಿದ. ಆದರೆ ಹಾಗಾಗಲಿಲ್ಲ.

“ಮಾದಪ್ಪ ಅಂದ್ರೆ ನೀನೇನಾ?”
“ಹೌದು ಸ್ವಾಮಿ, ನಾನೆ”
“ಎದೆ ನೋಯ್ತಾ ಇದೆಯಾ”
“ಹೌದು ಸ್ವಾಮಿ”
“ಎಷ್ಟು ದಿವಸದಿಂದ?”
“ಸುಮಾರು ಹದಿನೈದಿಪ್ಪತ್ತು ದಿವಸಗಳಾದವು ಸ್ವಾಮಿ”
“ಹೊಲದ ಕೆಲಸ ಜೋರಾಗಿರಬಹುದಲ್ಲವೇ?”
“ಹೌದು ಡಾಕ್ಟ್ರೇ, ಏನು ಮಾಡುವುದು, ಮನೆತನ ನಡೀಬೇಕಲ್ಲ”
“ಸರಿ, ಒಳನಡೆ”

ಕೆಲಸದವ ಬಂದು ಎಕ್ಸರೇ ರೂಮಿಗೆ ಕರೆದುಕೊಂಡು ಹೋಗಿ ಮಾದನನ್ನು ಮಲಗಿಸಿದ. ಎಕ್ಸರೇ ತೆಗೆದ ಮೇಲೆ ಡಾಕ್ಟ್ರು ಮತ್ತು ಮಾದ ಇಬ್ಬರೂ ತಮ್ಮ ಸ್ಥಳಕ್ಕೆ ಬಂದು ಕೂತರು. ಮಾದ ಮಾತ್ರ ಡಾಕ್ಟರರ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ನನ್ನನ್ನು ಈಗಲಾದರೂ ಗುರ್‍ತಿಸಬಹುದೆಂದು ತಿಳಿದಿದ್ದ. ಆದರೆ ಮಾದನೇ ಮಾತನಾಡಿಸಲು ಮುಂದಾದ, ಅಷ್ಟರಲ್ಲಿಯೇ ಕೆಲಸದವ ಎಕ್ಸರೇ ಶೀಟನ್ನು ತಂದುಕೊಟ್ಟ. ಅವನ ಲಕ್ಷ್ಯ, ಅದರ ಮೇಲೆ ಹೋಯಿತು. ಡಾಕ್ಟ್ರು ಅದನ್ನು ಚೆನ್ನಾಗಿ ಪರೀಕ್ಷಿಸಿ “ನೋಡು ಮಾದಪ್ಪ, ನಿನ್ನ ಹೃದಯದಲ್ಲಿ ಒಂದು ಚಿಕ್ಕದಾದ ರಂಧ್ರ ಉಂಟಾಗಿದೆ. ಅದರಿಂದಾಗಿ ರಕ್ತ ಪಂಪು ಮಾಡಲು ಹೃದಯಕ್ಕೆ ತೊಂದರೆಯಾಗಿದೆ. ಅದನ್ನು ಆಪರೇಷನ್ ಮಾಡಿದರೆ ಸರಿಯಾಗುತ್ತೆ” ಎಂದು ಹೇಳಿದರು.

“ನನ್ನ ಫೀಸು ಎಷ್ಟು ಸ್ವಾಮಿ?”
“ಎಕ್ಸರೇ ಸೇರಿ ಮುನ್ನೂರು ರುಪಾಯಿ ಆಗುತ್ತದೆ”

ಹಣವನ್ನು ಎಣಿಸಿಕೊಡುತ್ತಾ, “ಅದೇನೋ ಆಪರೇಷನ್ ಅಂದ್ರಲ್ಲಾ ಡಾಕ್ಟ್ರೇ, ಅದಕ್ಕೆ ಎಷ್ಟು ಖರ್‍ಚಾಗುತ್ತೆ?” ಎಂದು ಕೇಳಿದ ಮಾದ.

“ಅದು ಹೃದಯದ ಶಸ್ತ್ರಚಿಕಿತ್ಸೆ ಅಂತ. ಅದಕ್ಕೆ ಹೆಚ್ಚೇನು ಇಲ್ಲ ಅಂದ್ರೂ ಒಂದು ಲಕ್ಷದ ಇಪ್ಪತ್ತೈದು ಸಾವಿರ ರುಪಾಯಿಗಳು ಬೇಕಾಗಬಹುದು.”

“ಹೌದಾ ಡಾಕ್ಟ್ರೇ”

“ಹೌದು ಕಣಪ್ಪ, ಅದನ್ನು ಜೋಡಿಸಿಕೊಂಡು ಬಾ. ನಿನ್ನ ಹೃದಯ ಆಪರೇಷನ್ ಮಾಡ್ತೇನೆ.” ಸಮಾಧಾನವಾಗದೇ ಮಾತಿನ ಮಧ್ಯದಲ್ಲಿಯೇ ತಡೆದು

“ಸಾರ್” ಎಂದ ನಿಧಾನವಾಗಿ.

ಮಾದ ತನ್ನ ಎಲ್ಲಾ ಹಳೆಯ ಬಾಲ್ಯದ ನೆನಪುಗಳನ್ನು ಎಳೆ‌ಎಳೆಯಾಗಿ ಹೇಳುತ್ತಾ ಬಂದ. “ಇಲ್ಲ. ನನಗೆ ಯಾವುದೂ ನೆನಪಿಗೆ ಬಾರ್‍ತಾ ಇಲ್ಲ. ನನಗೆ ಮಾದಪ್ಪ ಅಂತ ಸ್ನೇಹಿತನೇ ಇರಲಿಲ್ಲ.” ಎಂದಾಕ್ಷಣ “ನನ್ನ ಹೃದಯ ಒಡೆದು ಹೋಗಬಾರದೇ, ಇನ್ನೂ ಏಕೆ ಇಟ್ಟಿದ್ದಾನೋ ಆ ದೇವರು” ಎಂದು ಒಂದು ಕ್ಷಣ ಕಣ್ಣು ಮುಚ್ಚಿದ.

“ನೋಡು ಮಾದಪ್ಪಾ, ನನ್ನ ಹಾಗೆ ಮತ್ತೊಬ್ಬರು ಇದ್ದಾರು ಅಂದುಕೊಂಡೆಯಾ, ಹಾಗೆ ತಿಳಿದುಕೊಂಡು ಪರಿಚಯ ಹೇಳ್ಕೊಂಡು ಬಹಳ ಜನ ಬರ್‍ತಾರೆ. ಬಂದು ಹಣ ಸ್ವಲ್ಪ ಕಡಿಮೆಯಾಗಿದೆ. ನೂರು ರುಪಾಯಿ ಕೊಡಿ, ಇನ್ನೂರು ರುಪಾಯಿ ಕೊಡಿ ಎಂದು ಕೇಳ್ತಾರೆ. ಇಂತಹವರು ಒಬ್ಬರೋ ಇಬ್ಬರೋ” ಎಂದು ಹೇಳಿದಾಗ ಮೊದಲೇ ದಂಗಾಗಿದ್ದ, ಈಗ ತಬ್ಬಿಬ್ಬಾದ ಮಾದಪ್ಪನಿಗೆ ಮೈ ಬೆವರಿತು, ಬಾಯಿ ಒಣಗಿತು. ತನ್ನ ಬಾಲ್ಯದ ಸ್ನೇಹಿತ ಈ ರೀತಿ ಹೇಳ್ತಾನೆಂದರೆ ತಡೆಯಲಾಗಲಿಲ್ಲ. ಮನಸ್ಸು ಭಾರವಾಯ್ತು. ಕಣ್ಣೀರು ತಡೆಯದೇ ಒತ್ತರಿಸಿ ಬಂದವು. ತನ್ನ ಒದ್ದೆಯಾದ ಕಣ್ಣುಗಳನ್ನು ಒರೆಸಿಕೊಳ್ಳಲು ತಲೆಗೆ ಸುತ್ತಿದ್ದ ಟವಲನ್ನು ತೆಗೆದ. ಅಷ್ಟರಲ್ಲಿಯೇ ವಿದ್ಯುತ್ ದೀಪ ಆರಿಹೋದವು, ಸುತ್ತಲೂ ಕತ್ತಲೆ ಆವರಿಸಿಕೊಂಡಿತು. ಕೆಲಸದವನಿಗೆ ಮೇಣದ ಬತ್ತಿ ಹಚ್ಚಲು ಹೇಳಿದ. ಮೇಣದ ಬತ್ತಿಯ ದೀಪದ ಬೆಳಕಿನಲ್ಲಿ ನಿಧಾನವಾಗಿ ಡಾಕ್ಟ್ರು ತನ್ನ ತಲೆ ಎತ್ತಿ ಮಾದಪ್ಪನ ಮುಖವನ್ನು ನೋಡಿದಾಕ್ಷಣ ಅವನ ಕಣ್ಣುಗಳು ಮಾದಪ್ಪನ ಎಡ ಹಣೆಯ ಮೇಲಿನ ಗಾಯದ ಕಲೆಯ ಮೇಲೆ ಹೋದವು. ತನ್ನ ಬಲಗೈಯನ್ನು ಮೇಲಕ್ಕೆತ್ತಿ ಮಾದಪ್ಪನ ಆ ಕಲೆಯನ್ನು ಸವರುತ್ತಾ ಒಂದು ಕ್ಷಣ ಕಣ್ಣು ಮುಚ್ಚಿ ತೆರೆದಾಗ ಒದ್ದೆಯಾಗಿದ್ದವು.

“ಲೋ ಮಾದ”

“ಏ ರವಿ”

“ನಾನು ಎಂತಹ ತಪ್ಪು ಮಾಡ್ಬಿಟ್ಟೆ, ಮಾದು ನಿನ್ನ ಗುರ್‍ತಿಸಲಾಗಲಿಲ್ಲ” ಎಂದಾಗ ಆ ಕ್ಷಣ ಮರೆಯಲಾಗದ ಕ್ಷಣಗಳಾಗಿದ್ದವು. ಇಬ್ಬರೂ ತಮ್ಮ ಸ್ಥಳದಿಂದೆದ್ದು ಪರಸ್ಪರ ಆಲಂಗಿಸಿಕೊಂಡಾಗ ಇಬ್ಬರ ಕಣ್ಣಲ್ಲೂ ದಳ ದಳ ಕಣ್ಣೀರು ಸುರಿಯುತ್ತಿದ್ದವು. ಹೆಂಡತಿ, ಮಕ್ಕಳು ಮೂಕ ಪ್ರೇಕ್ಷಕರಾಗಿದ್ದರು. ಮಾದನ ಹೃದಯದ ನೋವು ಮಾಯವಾಗಿತ್ತು.
*****
ಜನವಾಹಿನಿ ಕನ್ನಡ ದೈನಂದಿಕ ಸಾಪ್ತಾಹಿಕ ವಾಹಿನಿಯಲ್ಲಿ