ಚಿತ್ರ: ಡೇನಿಯಲ್ ವಾಂಕೆ / ಪಿಕ್ಸಾಬೇ
ಚಿತ್ರ: ಡೇನಿಯಲ್ ವಾಂಕೆ / ಪಿಕ್ಸಾಬೇ

ಮರುಭೂಮಿ ಸೀಳಿಕೊಂಡೇ ನನ್ನ ಕಾರು ತಾಸಿಗೆ ೧೨೦ ಕಿ.ಮೀ. ಸ್ಪೀಡಿನಲ್ಲಿ ಓಡುತ್ತಿತ್ತು. ಬೇಗ ಮುಂದಿನ ಊರು ಸೇರಬೇಕೆನ್ನುವ ತವಕ ನನ್ನದೇನಲ್ಲ. ಈ ಹೈಟೆಕ್ ಹೈವೇ, ಕಂಪನಿಯ ಕಾರು, ಲೀಟರಿಗೆ ೫೦ ಪೈಸೆಯಂತೆ ಪೆಟ್ರೋಲ್, ನನ್ನನ್ನು ಆಗಾಗ ಈ ರೀತಿ ಹುಚ್ಚಾಪಟ್ಟೆ ಕಾರು ಓಡಿಸುವಂತೆ ತಲೆಕೆಡಿಸುತ್ತವೆ.

ಮಧ್ಯಾಹ್ನದ ರಣ ರಣ ಬಿಸಿಲು, ಬಿಸಿಲ್ಗುದುರೆಗಳ ರೇಸು ನನ್ನ ಕಾರನ್ನೂ ಹಿಂದೆ ಹಾಕಿಸುತ್ತಿದ್ದವು. ಆಗಾಗ ತೂರಿಬಂದು ಕಾರಿನ ಗ್ಲಾಸಿಗೆ ಮುತ್ತಿಸುವ ಮರಳು, ಇಡಿಯಾಗಿ ಬಿಸಿಲನ್ನೇ ನುಂಗಿ ಬಿಡುತ್ತೇನೆನ್ನುವ ಧಿಮಾಕಿನ ಒಂಟೆಗಳ ವಿಹಾರ, ಆಹಾ!

ನನ್ನ ಕಾರು ಓಡುತ್ತಿದೆ.

ದೂರದಲ್ಲಿ ಓಂದು ಕಪ್ಪು ಆಕೃತಿ ರಸ್ತೆಯ ಕಡೆಗೆ ಒಡಿ ಬರುತ್ತಿದೆ.

ವೇಗ ಕಡಿಮೆ ಮಾಡುತ್ತಿದ್ದರೂ ಅಸಾದ್ಯವಾಗುತ್ತಲೇ ಕಿರ್ ಕಿರ್ ಎನ್ನುತ್ತ ಕಾರು ನಿಲ್ಲಿಸಬೇಕಾಯಿತು.

ಆ ಕರಿ ಆಕೃತಿ, ಬುರ್ಕಾದ ಮಹಿಳೆ-

ಏದುಸಿರು ಬಿಡುತ್ತ ಮುಖದ ಮೇಲಿನ ಬುರ್ಕಾ ಹೊದಿಕೆ ತೆಗದು ಮುಖ ಕೆಳಗೆ ಹಾಕಿ ನಿಂತುಕೊಂಡಳು.

ನಾನೇನು ಮಾಡಬೇಕೋ ಒಂದೂ ತೋಚದೆ ನನ್ನ ತುಂಡು ತುಂಡಾದ ಅರೇಬಿಕ್‌ ಭಾಷೆಯಲ್ಲಿ-

“ಯಾರು ನೀನು” ಅಂದೆ

“ಲೈಲಾ ನನ್ನ ಹೆಸರು” ಅಂದಳು.

ಕಣ್ಣು, ಮೂಗು, ಆ ಗುಂಡು ಗುಲಾಬಿ ಮುಖಕ್ಕೆ ಕರೆಕ್ಟಾಗಿ ಸ್ಕೇಲ್‌ ಇಟ್ಟು ತೆಗೆದಂತಿದ್ದವು. ಹೆದರಿಕೊಂಡು ನಡಗುವ ತುಟಿಗಳು ಮಾತ್ರ ‘ಶೇಪ್’ ನಲ್ಲಿ ಕಾಣಲಿಲ್ಲ.

‘ಏನಾದರೂ ಸಹಾಯಬೇಕೆ’?  ಕೇಳಿದೆ.

ಅವಳ ಕಣ್ಣು ತುಂಬ ನೀರು ತುಂಬಿಕೊಂಡುಬಿಟ್ಟವು.

‘ಯಾಕೆ ಏನಾಯಿತು’?

“ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಅಪ್ಪ ಅಮ್ಮ ಸಂಬಂಧಿಗಳು ನಾನು ಮನೆಬಿಟ್ಟು ಹೊರಬೀಳದಂತೆ ಕಾಯುತ್ತಿದ್ದಾರೆ.”

‘ಮತ್ತೆ ಈಗ ಇಲ್ಲಿ ನಿಂತಿರುವಿ, ಅದ್ಹೇಗೆ ಸಾಧ್ಯ’

“ನಾನು ನನ್ನ ಗೆಳತಿ ಪಕ್ಕದ ವಾಡಿ (ಹಳ್ಳಿ)ಗೆ ಹೋಗಿ ಹೊಲಿದ ಬಟ್ಟೆ ತರಬೇಕಿತ್ತು. ಮಾರ್ಗ ಮಧ್ಯ ತಪ್ಪಿಸಿಕೊಂಡು ಓಡೋಡಿ ಇಲ್ಲಿಗೆ ಬಂದೆ.”

“ಕಾರಣ”?

“ಪ್ರೀತಿ-ಪ್ರೇಮ-ಸ್ವಾತಂತ್ರ್ಯ”, ಅವಳ ಧ್ವನಿ ಏರಿಳಿತಗೊಳ್ಳುತ್ತಿತ್ತು.

ಅಂದರೆ?

“”ಈ ಮರುಭೂಮಿಯಲ್ಲಿ ನನ್ನ ಪ್ರೀತಿ ಹೂತು ಹೋಗಲಿಕ್ಕೆ ಬಿಡುವದಿಲ್ಲ, ಅದು ಅಮೂಲ್ಯವಾದ ವಸ್ತು”

“ನನಗೊಂದೂ ಅರ್ಥವಾಗುತ್ತಿಲ್ಲ ಲೈಲಾ, ನಾನೂಬ್ಬ ಪ್ರಯಾಣಿಕ, ಮುಂದಿನ ಊರಿಗೆ ಹೋಗಿ ಬಿಡುವವ. ನಿನಗೂ ನಿನ್ನ ಸಮಸ್ಯೆಗಳಿಗೂ ನನಗೂ ಏನೂ ಸಂಬಂಧವಿಲ್ಲ”.

“ನನ್ನ ಯಾವ ಸಮಸ್ಯೆಯನ್ನೂ ನಿಮ್ಮ ಮೇಲೆ ಹೇರುವದಿಲ್ಲ. ಆದರೆ ನನ್ನ ಸಮಸ್ಯೆಗೆ ಪರಿಹಾರ ಏನು?”

“ಅದೇನು ಅಂತಹ ಸಮಸ್ಯೆ ಲೈಲಾ”? ಎ೦ದೆ.

ಅಲ್ಲಿಯೇ ಸುಳಿದಾಡುತ್ತಿರುವ ಕುರಿದಂಡಿನೊಳಗಿಂದ ಒಬ್ಬ ಯುವಕ ಬಿಳಿಯ ಉದ್ದನೆಯ ಅಂಗಿ ಹಾಕಿಕೊಂಡವನು ಓಡೋಡಿ ಈ ಕಡೆಯೇ ಬರುತ್ತಿದ್ದ.

ನಾನು ಗಲಿಬಿಲಿಗೊಂಡೆ, ಅವಳೇನಾದರೂ ಅವನ ಹೆಂಡತಿ ಇದ್ದು, ನಾನು ಕಾರು ನಿಲ್ಲಿಸಿ ಅವಳಿಗೆ ಚುಡಾಯಿಸುತ್ತಿದೇನೋ ಏನೋ ಎಂದು ತಪ್ಪು ತಿಳಿದುಕೊಂಡು ಜಗಳ ಸುರುಮಾಡಿದರೆ…

೨೦-೨೨ ವರ್ಷದ ಯುವಕನಿರಬೇಕಷ್ಟೇ. ಅವನಿಗೆ ತಕ್ಕಹಾಗೆಯೇ ಈ ಹುಡುಗಿ ೧೬-೧೭ ವರ್ಷದವಳಿರಬೇಕೆಂದುಕೊಂಡೆ, ಇಬ್ಬರ ಎಳಯೆ ಸದೃಢ ದೇಹದ ಹೈಟ್ ವೈಯಿಟ್‌ದಿಂದ.

“ಸಲಾಂ ಆಲೆಕು೦” ಎನ್ನುತ್ತ ಲೈಲಾಳ ಪಕ್ಕದಲ್ಲಿಯೇ ಬಂದು ನಿಂತ.

“ವಾಲೈಕುಂ ಸಲಾಂ” ಎಂದು ನಾನೂ ಪ್ರತಿ ಉತ್ತರಿಸಿದೆ.

ಎಂತಹ ಸು೦ದರವಾದ ಜೋಡಿ.

ಕುರಿಗಳು ಅವನ ಹಿಂದಯೇ ಓಡಿ ಬರುತ್ತಿರುವದು ನೋಡಿ, ಹೈವೇ ಟ್ರಾಫಿಕ್‌ಗೆ ತೊಂದರೆಯಾಗದಂತೆ ನಾನೇ ಕಾರು ಆದಷ್ಟು ‘ಸೈಡ್’ ತೆಗೆದುಕೊಂಡು ನಿಲ್ಲಿಸಿದೆ.

ಇಷ್ಟೊಂದು ಸುಂದರ ಸದೃಢ ಗಂಡ ಇರುವಾಗ ತನ್ನ ಪ್ರೀತಿ ಮರುಭೂಮಿಯಲ್ಲಿ ಹೂತುಹೋಗಲಿಕ್ಕೆ ಬಿಡುವದಿಲ್ಲ ಅನ್ನುವಳಲ್ಲಾ ಲೈಲಾ, ಎನ್ನುವ ಕೂತೂಹಲದಿಂದ ನಾನು ಕಾರು ನಿಲ್ಲಿಸಲೇಬೇಕಾಯ್ತು.

ಅವನಡೆಗೆ ತಿರುಗಿ ನಿನ್ನ ಹೆಸರೇನೆಂದೆ-

ಅವನಿಗಿಂತ ಅವಳೇ ಮುಂದಾಗಿ ‘ಮಜ್ನು’ ಎಂದು ಬಿಟ್ಟಳು. ನನಗೆ ಆಶ್ಚರ್ಯ ಈ ಊರಲ್ಲಿ ಲೈಲಾ ಮಜ್ನುರನ್ನು ನೋಡುತ್ತಿದ್ದೇನೆಯೆ?

ಅವರ ಬೆನ್ನ ಹಿಂದಯೇ ಅವರ ಊರಿನ ಜನ ಬಡಿಗೆ ಕಲ್ಲುಗಳು ಹಿಡಿದು ಇವರಿಗೆ ಹೊಡಯಲು ಬರುತ್ತಿದ್ದಾರೆಯೆ ಎಂದು ದೂರದವರೆಗೆ ನೋಡಿದೆ.

ಈಗಂತೂ ಯಾರೂ ಕಾಣಲಿಲ್ಲ – ಒಳ್ಳೆಯದಾಯ್ತು ಎಂದುಕೊಂಡೆ ಹಾಗಾದರೆ ಇವರು ಗಂಡ ಹೆಂಡತಿಯರಲ್ಲ ಪ್ರೇಮಿಗಳು ಎಂದಾಯ್ತು.

ಲೈಲಾ ಏನೋ ಹೇಳಲು ಹಾತೊರೆಯುತ್ತಿದ್ದಾಳೆ, ಅವಳ ಆತುರ ಅವನ ದುಗುಡ ನನಗೆಲ್ಲ ಅರ್ಥವಾಯ್ತು.

ನನ್ನ ಕಾರಿಗೆ ಲೈಲಾ ಅಡ್ಡಗಟ್ಟಿ

“ನಮ್ಮ ಸಮಸ್ಯೆ ನಿಮಗಿನ್ನೂ ಪೂರ್ತಿಯಾಗಿ ಅರ್ಥವಾಗಿಲ್ಲ, ನಮ್ಮ ಊರಲ್ಲಿ ಇದ್ದು ನಮ್ಮ ಸಂಕಟ ಅರ್ಥ ಮಾಡಿಕೊಂಡು ಪರಿಹರಿಸಿಹೋಗಬೇಕು” ಎಂದು ಅಂಗಲಾಚತೊಡಗಿದಳು.

‘ನಾನೇಕೆ ನಿಮ್ಮ ಊರಲ್ಲಿ ಇದ್ದು ನಿಮ್ಮ ಸಮಸ್ಯೆ ಪರಿಹರಿಸಬೇಕು. ನಿಮ್ಮ ನಿಮ್ಮ ಜನರೊಂದಿಗೆ, ನಿಮ್ಮ ಸಮಾಜದ ರೀತಿ ನೀತಿಯ೦ತೆ ಹಿರಿಯರ ಸಮ್ಮುಖದಲ್ಲಿ ಚರ್ಚಿಸಿಕೊಳ್ಳಿ’ ಎಂದೆ.

ನಾನೇನಾದರೂ ಇವರ ಪ್ರೀತಿ-ಪ್ರೇಮಕ್ಕೆ ಇವರ ಸಮಾಜ ಎದುರಿಸಿಕೊಂಡು ಕುಮ್ಮಕ್ಕು ಕೊಟ್ಟರೆ ನನ್ನನ್ನು ಒಂದೇ ಸಲ ತಲೆಹಾರಿಸುವರಲ್ಲ, ಕ್ಷಣ ಕ್ಷಣಕ್ಕೂ ತಮ್ಮ ಸೊಂಟದಲ್ಲಿ ಸಿಕ್ಕಿಸಿಕೊಂಡ ಚಾಕುವಿನಿಂದ ಇರಿದು ಇರಿದು ಸಾಯಿಸುತ್ತಾರೆ ಎಂದು ನೆನೆಪಿಸಿಕೊಂಡು,

ಹೆಂಡತಿ ಮಕ್ಕಳು ಇರುವವನು ನಾನು, ಇದೆಲ್ಲಿಯ ಇವರ ಸಹವಾಸ ಎಂದವನೇ ಕಾರು ಸುರುಮಾಡಿದೆ.

ಲೈಲಾ ಮಜ್ನು ಇಬ್ಬರೂ ನನ್ನ ಕಾರನ್ನು ಬಲವಾಗಿ ಹಿಡಿದು ನಿಲ್ಲಿಸಿದರು.  ಇದೇನು ಸಿಕುಕಿಹಾಕಿಕೊಂಡೆ ಎಂದು ಚಡಪಡಿಸಿದೆ.

ಮಧ್ಯಾಹ್ನದ ಪ್ರಖರತೆಯಷ್ಟೇ ಇವರಿಬ್ಬರ ಪ್ರೀತಿ-ಪ್ರೇಮಗಳೂ ಒಬ್ಬರನ್ನೊಬ್ಬರ ಹೃದಯಗಳನ್ನು ಸುಡುತ್ತಿದ್ದವು.

ಕೊನೆಗೆ ನಾನೊಂದು ನಿರ್ಧಾರಕ್ಕೆ ಬಂದು ಓಯೊಸಿಸ್ ದಂಡಗೆ ಕಟ್ಟಿದ ಸುಂದರವಾದ ಚಿಕ್ಕ ಹೋಟೆಲ್ ಒಂದರಲ್ಲಿ ಇರಬಯಸಿದೆ. ಮುಂದಿನ ಊರಿಗೆ ಸ್ನೇಹಿತನನ್ನು ಭೆಟ್ಟಿಯಾಗಲು ಹೋಗಲೇಬೇಕಾಗಿತ್ತು. ಫೋನ್ ಮುಖಾಂತರ ಈ ಸಮಸ್ಯೆ ತಿಳಿಸಿದೆ. ಹಾಗೆಯೇ ಹೆಂಡತಿ ಮಕ್ಕಳಿಗೂ ಹೇಳಿಬಿಟ್ಟೆ.

ಪ್ರೇಮಿಗಳಿಬ್ಬರಿಗೂ ಖುಷಿಯೋ ಖುಷಿ.

“ನಿಸರ್ಗದ ಋತುಮಾನಕ್ಕೆ ತಕ್ಕಹಾಗೆಯೇ ನೀವು ಪ್ರೀತಿಸಿದ್ದೀರಿ, ನಿಮ್ಮಿಂದ ಅಂತಹ ಅಪರಾಧ ಏನೂ ಆಗಿಲ್ಲ, ಪ್ರೀತಿಗೆ ಕಾಲ-ದೇಶ-ಭಾಷೆ ಯಾವುದೂ ಅಡ್ಡಿ ಬರುವದಿಲ್ಲ. ಅಡ್ಡ ಬರುವವರು ಹಿರಿಯರು, ಅವರು ಕಟ್ಟಿದ ಸಮಾಜ ಸಂಪ್ರದಾಯಗಳು ಮಾತ್ರ. ಶತ ಶತಮಾನಗಳು ಉರುಳಿವೆ, ರಾಜ-ರಾಣಿಯರು ಪ್ರೀತಿ ಪ್ರೇಮಕ್ಕಾಗಿ ರಾಜ್ಯವನ್ನೇ ಕಳೆದುಕೊಂಡು ಸಮಾಧಿಸಿದ್ದಾರೆ, ಆದರೆ ಶತಮಾನಗಳೊಂದಿಗಾಗಲೀ, ಸಮಾಧಿಗಳಿಗೊಂದಿಗಾಗಲೀ ಪ್ರೀತಿ-ಪ್ರೇಮ ಇನ್ನೂ ಸಮಾಧಿಕಾಣದೇ ವಿಚಿತ್ರ ವಿಚಿತ್ರವಾಗಿ ಜಿಗಿಯುತ್ತಲೇ ಇದೆ. ಹೆದರಿಕೊಳ್ಳಬೇಡಿ” ಸ್ವಲ್ಪ ಭಾಷಣಮಾಡಿ ಅವರನ್ನು ಸಮಾಧಾನಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಹೇಳಿ ಕಳಿಸಿದೆ.

ಸಂಜೆ ಆ ಹುಡುಗಿಯ ಊರು-ಜನರನ್ನೆಲ್ಲಾ, ಒ೦ದು ರೌಂಡ್ ನೋಡಿಕೊಂಡು ಬಂದೆ. ಖರ್ಜೂರು ಬದಾಮ್ ಮಾರಾಟದ ಅಂಗಡಿಗಳಂತೂ ಸಾಕಷ್ಟು. ಅ ಹುಡುಗಿಯ ಮನೆಯ ಮುಂದೆಯೂ ಅಡ್ಡಾಡಿದೆ. ಲೈಲಾ ಈ ದೊಡ್ಡಮನೆಯಲ್ಲಿ ಹುಟ್ಟಿದ್ದಾಳೆಂದೇ ಸಮಸ್ಯೆಗಳಿರಬೇಕೆಂದುಕೊಂಡೆ. ಪಂಜಿನ ಬೆಳಕಿರಲಿಲ್ಲ. ಮನೆಯ ಉದ್ದಗಲಕ್ಕೂ ನೂರಾರು ಲೈಟುಗಳು ಝಗಝಗಿಸುತ್ತಿವೆ. ಮನೆಯ ಕಂಪೌಂಡಿನಲ್ಲಿ ೩-೪ ದೊಡ್ಡಕಾರುಗಳು ನಿಂತಿವೆ.

ಮನೆಯ ಒಳಗಡೆ ಅವಳಪ್ಪ ಅವಳನ್ನು ಬಯ್ದರೂ, ಹೊಡೆದರೂ, ಕೊಂದುಹಾಕಿದರೂ ಗೊತ್ತಾಗುವದೇ ಇಲ್ಲ.

ಹಾಗಾದರೆ ಈ ಹುಡುಗಿ ಆ ಒಂಟೆಯೋ-ಕುರಿಯೋ ಕಾಯುವವನನ್ನು ಹೇಗೆ ಪ್ರೀತಿಸಿದಳು?

ಹೊಟೆಲ್ ಹುಡುಗ ಬೆಳಿಗ್ಗೆ ಒಂಟೆ ಹಾಲಿನ ಗಟ್ಟಿಯಾದ ಟೀ ತಂದು ಎಬ್ಬಿಸಿದಾಗಲೇ ಎಚ್ಚರ. ಚುಮು ಚುಮು ನಸುಕೇನಲ್ಲ. ೭ ಗಂಟೆಯಾಗಿತ್ತು. ಕರ್ಟನ್ ಸರಿಸಿದೆ.

ಓಯಾಸಿಸ್‌ಗುಂಟ ಅದೇ ಆ ಯುವಕನ ಕುರಿಗಳು ತುಂಬಿಕೊಂಡಿವೆ. ಅವನೂ ಅವುಗಳೊಳಗೆ ಒಂದಾದಂತೆ ಕಾಣುತ್ತಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಮರಳಿನ ದಿನ್ನೆಯ ಮೇಲೆ ಕುಳಿತು, ಏನೋ ಕೂಗಿಕೊಳ್ಳುವನು. ಮತ್ತೆ ಮತ್ತೆ ಏರಿಳಿತದ ಸ್ವರದಲ್ಲಿ ಹಾಡಿದಂತೆ ಮಾಡುವನು.

“ಕುರಿಗಳನ್ನು ಕರೆಯುತ್ತಿದ್ದಾನೋ, ಅಥವಾ ಆ ಹುಡುಗಿಯನ್ನೋ…” ನಾನು ಕೂತೂಹಲದಿಂದ ನೋಡತೊಡಗಿದೆ.

ಕೃಷ್ಣನಾ ಕೊಳಲಿನಾ ಕರೆ… ಅನ್ನುವಂತೆ ಕೆಲವೇ ನಿಮಿಷಗಳಲ್ಲಿ ಕುರಿಗಳು ಓಡೋಡಿಬಂದು ಅವನನ್ನು ಸುತ್ತುವರಿದವು.

ಹುಡುಗಿಯೂ ಬರಬಾರದೆ? ನಾನದೆಷ್ಟೋ ಹೊತ್ತು ನಿರೀಕ್ಷಿಸಿದೆ. ಮತ್ತೆ ಏರಿಳಿತಗಳ ಸ್ವರದಲ್ಲಿ ಕೂಗುವನು ಆತ.

ನೋಡು ನೋಡುತ್ತಿದಂತೆಯೇ ೪೦-೫೦ ಜನ ಬಡಿಗೆ ಹಿಡಿದುಕೊಂಡು ಅವನತ್ತಲೇ ಧಾವಿಸುತ್ತಿದ್ದಾರೆ.

ಕುರಿಗಳು ಚದುರಿದವು. ಆತ ಸಿಕ್ಕುಬಿದ್ದ. ಅವರುಗಳ ಏಟಿನಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಲೇ ಇಲ್ಲ. ಸ್ವಲ್ಪ ಸಮಯದಲ್ಲಿಯೇ ಆತನ ಕೈ ಕಾಲು ಮುಖಕ್ಕೆ ಬಲವಾದ ಪೆಟ್ಟುಗಳನ್ನು ಕೊಟ್ಟು ಏಳಲು ಬರದಂತೆ ನೂಕಿದರು.

ಆ ಹುಡುಗಿ ಬುರ್ಕಾ ಎಲ್ಲಾ ಒಂದುಗೂಡಿಸಿ ಕೈಯಲ್ಲಿ ಹಿಡಿದು ಆ ಕಡೆಯಿ೦ದ ಓಡಿಬರುತ್ತಿದ್ದಾಳೆ.

ಅಂತಹ ದೊಡ್ಡಮನೆಯಿಂದ ಇವಳು ಹೊರಬೀಳುವುದು ಯಾರೂ ನೋಡಲಿಲ್ಲವೆ? ನನಗಂತೂ ಕೂತೂಹಲದ ಮೇಲೆ ಕೂತೂಹಲ.

ಈ ಎಲ್ಲ ಕ್ರೂರ ಜನರ ಮುಂದೆ ನಿಂತು ಧೈರ್ಯವಾಗಿ ಮಾತನಾಡಬೇಕೆನ್ನುತ್ತಿದ್ದಾಳೆ. ಆ ಕಡೆಗೆ ಮಜ್ನುವಿನ ಹೃದಯ ವಿದ್ರಾವಕ ಪರಿಸ್ಥಿ‍ತಿಗೆ ಅವನೆಡೆಗೆ ಓಡಿ ತಬ್ಬಿ ಸಾಂತ್ವನ ಹೇಳಲು ಹಪಹಪಿಸುತ್ತಿದ್ದಾಳೆ.

“ದಿನಾಲೂ ಇದೇ ತರಹ ಮರಳದಿನ್ನೆಯ ಮೇಲೆ ಚಲ್ಲಾಟ ನಡೆಸಿದರೆ, ಇಲ್ಲಿಯೇ ಇಬ್ಬರನ್ನೂ ಕೊಂದು ಹೂತು ಹಾಕಿಬಿಡುತ್ತೇವೆ”. ಒಬ್ಬ ಧಡಿಯ ಅನ್ನುತ್ತಿದ್ದ. ಮತ್ತೊಬ್ಬ “ದೊಡ್ಡ ಮನೆಯ ಹುಡುಗಿ ಮರ್ಯಾದೆ ಉಳಿಸಿಕೊಂಡು ಮರ್ಯಾದೆಯಾಗಿ ಬಾಳುವದು ಕಲಿಯಬೇಕು” ಮಾತಿನಲ್ಲಿ ತಿವಿಯುತ್ತಿದ್ದ.

ಇವರ ಮಾತಿಗೆ ಏನನ್ನೂ ಎದುರು ಮಾತನಾಡದ ಲೈಲಾ ಒಯೆಸಿಸ್ ಹೊಂಡದಲ್ಲಿ ತನ್ನ ಬುರ್ಕಾದ ತುಂಡು ತೊಯ್ಸಿಕೊಂಡು ಓಡಿ ತನ್ನ ಹುಡುಗನಿಗೆ ನೀರು ಸಿಂಪಡಿಸಲು ಪ್ರಯತ್ನಿಸುತ್ತಿದ್ದಾಳೆ.

ಅದೆಲ್ಲೋ ದೂರದಿಂದ ಗುಂಡು ಹಾರಿದ ಶಬ್ದ ಕ್ಷಣದಲ್ಲೇ ಅಲ್ಲೊಂದು ಬುರ್ಕಾ ಹುಡುಗಿ ಜೋರಾಗಿ ಕಿರುಚಿಕೊಳ್ಳುತ್ತ ಉರುಳಿಬಿತ್ತು.

ಇಲ್ಲಿ ಇದೆಲ್ಲಾ ನಡೆಯುತ್ತಿದ್ದರೆ ಅಲ್ಲಿ ಅದೇನಾಯ್ತು? ನನಗೆ ತುಂಬಾ ಕನ್‌ಪ್ಯೂಜ್ ಆಗುತ್ತಿತ್ತು.

ಅದೇ ಆ ಹುಡುಗಿಯನ್ನು ಉರುಳಿಸಿದ ಗುಂಪು ಇಲ್ಲಿಗೆ ಧಾವಿಸುತ್ತಿದೆ. ಈಗ ಒಂದುವಾರದಿಂದ ಇವರಿಗೆ ಅದೆಷ್ಟು ಎಚ್ಚರಿಸಿದರೂ, ಕೊನೆಯ ದುರಂತ ನೆನಪಿಸಿಕೊಟ್ಟರೂ ದೂಡ್ಡವರ ಮಾತಿಗೆ ಬೆಲೆಕೊಡುತ್ತಿಲ್ಲ. ನನ್ನ ಮನೆ ಕುರಿಕಾಯುವ ಹುಡುಗ ನನಗೇ ಮೋಸಮಾಡುತ್ತೀಯಾ, ಹೂಂ, ಹೊಡಯಿರಿ ಅವರಿಬ್ಬರಿಗೂ ಕಲ್ಲು. ಇನ್ನು ಬದುಕುವ ಹಕ್ಕಿಲ್ಲ ಇವರಿಬ್ಬರಿಗೂ ಹೂಂ ಹೂಂ ಅನ್ನುತ್ತ ಧಾವಿಸಿ ಕಲ್ಲೆಸೆಯತೊಡಗಿದರು.

ಇವರಿಬ್ಬರೂ ತಪ್ಪಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲವೇ ಇಲ್ಲ. ಆಗಲೇ ಗು೦ಪು ಸುತ್ತುವರಿದು ತಲೆ ಮೈ ಕೈಗಳಿಗೆಲ್ಲಾ ಕಲ್ಲೇಟುಗಳಿಂದ ಪೆಟ್ಟುಕೊಟ್ಟು ರಕ್ತ ಹರಿಸಿತ್ತು.

ನಾನು ತಕ್ಷಣ ಹೊರಗೆ ಧಾವಿಸಿದೆ.

ಈ ಏರಿಯಾಕ್ಕೆ ಹೊಸಪ್ರಾಣಿ ಬಂದಿದೆಯೇನೋ ಅನ್ನುವಂತೆ ಎಲ್ಲರೂ ನನ್ನನ್ನು ದುರುಗುಟ್ಟಿದರು. ಬಹುಶಃ ೨೪ ತಾಸೂ ಉದ್ದನೆಯೆ ಅಂಗಿಯಲ್ಲಿ ಇರುವ ಅವರಿಗೆ ನನ್ನ ಬಣ್ಣದ ಬರ್ಮುಡಾ ಪ್ಯಾಂಟ್, ಮೊಂಡು ಶರ್ಟ್ ನೋಡಿ ಹಾಗನಿಸಿರಬೇಕೇನೋ!

ಅವರಿಬ್ಬರಿಗೂ ಹೊಡೆಯಬೇಡಿರೆಂದು ಅದೆಷ್ಟೋ ಸಲ ಹೇಳಿದೆ. ಅರಳುವ ಮೊಗ್ಗುಗಳನ್ನು ಹಿಸುಕಿಕೊಲ್ಲುವದು ಯಾವ ನ್ಯಾಯ, ಯಾವ ಧರ್ಮ, ಕೊನೆಯ ಪಕ್ಷ ಅವರನ್ನು ಅವರ ಪಾಡಿಗಾದರೂ ಬಿಟ್ಟುಬಿಡಿ ಅವರು ಎಲ್ಲಾದರೂ ಹೋಗಲಿ, ಜಗತ್ತು ಪ್ರೀತಿ-ಪ್ರೇಮಗಳ ಭದ್ರ ಬುನಾದಿಯ ಮೇಲೆಯೇ ನಿಂತಿದೆ. ನಿಸರ್ಗದ ನಿರಂತರ ಕ್ರಿಯೆ ಪ್ರೀತಿ-ವಾತ್ಸಲ್ಯ. ಅದನ್ನು ಎದುರುಹಾಕಿಕೊಂಡೋ, ತಿರಸ್ಕರಿಸಿಯೋ ಬದುಕುವದೆಂದರೆ ಬರಡು ಜೀವನ ನಡಸಿದಂತೆ. ಹೀಗೆ ನೆನಪಿಗೆ ಬಂದ ಉದಾಹರಣೆಗಳನ್ನೆಲ್ಲಾ ಕೊಡುತ್ತಲೇ ಇದ್ದೆ.

ಆದರೆ ಯಾರೊಬ್ಬರಿಗೂ ನನ್ನ ಮಾತಿನ ಕಡೆಗೆ ಗಮನವೇ ಇರಲಿಲ್ಲ. ಎಲ್ಲರೂ ಬಿರುಸಾಗಿ ಕಲ್ಲು ಹೊಡೆಯುವದರಲ್ಲಿ ನಿರತರಾಗಿದ್ದರು.

ಲೈಲಾ ಮಜ್ನು ಕಡೆಗೆ ನಾನು ಧಾವಿಸುತ್ತಿದ್ದೆ ನನಗೂ ಒಂದೆರಡು ಬಾರಿ ಕಲ್ಲಿನೇಟುಗಳು ಬಿದ್ದವು. ಅದಾರೋ ಬಲವಾಗಿ ನನ್ನ ರಟ್ಟೆ ಹಿಡಿದು ಬಲವಂತವಾಗಿ ಈಚೆಗೆ ಎಳೆದು ತಂದರು.

ನನ್ನ ಕಣ್ಣು ಮುಂದೆಯೇ ಎಳೆ ಜೀವಿಗಳ ನರಕಯಾತನೆ, ವಿಲಿ ವಿಲಿ ಒದ್ದಾಟ, ರಕ್ತ ಒಂದೇ ಸವನೇ ಸೋರುತ್ತಿದೆ.

ಯಾರೊಬ್ಬರಿಗೂ ಕರುಣೆಯೇ ಇಲ್ಲವೆ? ಲೈಲಾಳ ಅಪ್ಪನಿಗಾದರೂ.. ಅವನೇ ಮುಂದಾಗಿ ಹೂಡೆಯುತ್ತಿದ್ದಾನೆ.

ನಾನೇನೂ ಮಾಡದೇ ಅಸಹಾಯಕನಾಗಿ ಇಂತಹ ಅಮಾನುಷತೆಗೆ ದಿಗ್ಭ್ರಮೆ ಪಡುತ್ತಿದ್ದೆ.

ಮುಂದಿನ ಅರ್ಧಗಂಟೆಯಲ್ಲಿ ಅವರಿಬ್ಬರನ್ನೂ ಪೂರ್ತಿಯಾಗಿ ಸಾಯಿಸಿದ ನಂತರವೇ ಗುಂಪು ಚದುರಿಹೋಯಿತು.

ನಾನು ಹತ್ತಿರ ಹೋಗಿ ನೀರು ಸಿಂಪಡಿಸಿದೆ. ನೀರು ಸುರಿದೆ, ಅಲುಗಾಡಿಸಿದೆ, ಮಾತನಾಡಿಸಿದೆ-ಇಬ್ಬರೂ ಅಲುಗಾಡಲಿಲ್ಲ…. ಅನಾಥವಾಗಿ ಪ್ರೇಮಿಗಳಿಬ್ಬರೂ ಯಾರೊಬ್ಬರ ಕರುಣೆ-ವಾತ್ಸಲ್ಯಗಳಿಲ್ಲದೆ ಮರಳು ದಿನ್ನೆಯಮೇಲೆ ಬಿದ್ದಿದ್ದರು.

ನಿನ್ನೆಯಿಂದಲೇ ನನ್ನ ಕಣ್ಣುಮುಂದೆ ದೈನ್ಯವಾಗಿ ನಿಂತ ಅವರಿಬ್ಬರ ಜೀವಂತ ಚಿತ್ರ ನನ್ನನ್ನು ಅನಾಥ ಪ್ರಜ್ಞನನ್ನಾಗಿ ಮಾಡಿ ಬಿಕ್ಕಿ ಬಿಕ್ಕಿ ಅಳುವಂತೆ ಮಾಡಿತ್ತು. ನನ್ನ ಪಾಲಿಗೆ ಅದು ಬಿಟ್ಟರೆ ಮತ್ತೇನೂ ಇಲ್ಲಿ ಇರಲಿಲ್ಲ.

ಚದುರಿದ ಕುರಿಗಳು, ಮಜ್ನುವಿನ ಸ್ನೇಹಿತರು ನಿಧಾನವಾಗಿ ಸುತ್ತುವರಿಯತೊಡಗಿದರು.

ಲೈಲಾಳ ಒಬ್ಬಳೇ ಒಬ್ಬಳು ಆತ್ಮೀಯ ಗೆಳತಿ ಮನೆಯ ಕೆಲಸದಾಕೆ. ಆಗಾಗ ಲೈಲಾಳಿಗೆ ಮನೆಯಿಂದ ಹೊರಗೆ ಹೋಗಿ ಬರಲು ಸಹಾಯ ಮಾಡುತ್ತಿದ್ದು ಅವಳನ್ನೂ ಗುಂಡು ಹೊಡೆದು ಸಾಯಿಸಿದರು ಎಂದು ಹುಡುಗರು ಹೇಳಿದರು.

ನನ್ನ ಜೀವ ನೆತ್ತಿಗೆ ಬಂದಂತಾಯ್ತು.

ನಾನೂ ಕೂಡಾ ಇವರಿಬ್ಬರನ್ನೂ ಉಳಿಸಿಕೊಳ್ಳಲು ಹೋಗಿ ಅವರನ್ನೆಲ್ಲಾ ಎದುರು ಹಾಕಿಕೊಂಡು ಸಹಾಯಮಾಡಿದ್ದರೆ, ಬಹುಶಃ ನನ್ನದೂ ಒಂದು ಹೆಣ ಇಲ್ಲಿಯೇ ಉರುಳುತ್ತಿತ್ತೇನೋ ಎಂದು.

ಭಾರವಾದ ಹೆಜ್ಜೆಗಳನ್ನು ಹಾಕುತ್ತ ನಿಧಾನವಾಗಿ ಎದ್ದು ರೂಮ್ ಗೆ ಬಂದೆ.

ಹೊಟೆಲ್ ಹುಡುಗ “ಇದೆಲ್ಲಾ ಇಲ್ಲಿ ಹೀಗೇ ಸರ್” ಎಂದ.

ಬಹಳ ಹೊತ್ತಿನವರೆಗೂ ನನ್ನ ಮಾತಿಲ್ಲದ್ದು ನೋಡಿ-

“ಬೇಸರ ಪಟ್ಟುಕೊಳ್ಳಬೇಡಿ, ಏಳಿ ತಿಂಡಿ ತರುತ್ತೇನೆ. ಬಹಳಷ್ಟು,  ವರ್ಷಗಳು ನೀವು ಇಲ್ಲಿಯೇ ಇದ್ದರೆ ನಿಮಗಿದೆಲ್ಲಾ ಕೇಳಿ ನೋಡಿ ಅಭ್ಯಾಸವಾಗಿ ಬಿಡುತ್ತದೆ” ಎಂದ.

‘ಸಧ್ಯಕ್ಕೆ ನನಗೇನೂ ಬೇಡ’ ಎಂದೆ.

“ಟೀ ಆದರೂ ತರಲೆ?”

ಬೆಳಗಿನ ಒಂಟೆ ಹಾಲಿನ ಟೀ, ಈಗಷ್ಟೆ ಕಣ್ಣ ಮುಂದೆ ನಡೆದ ಅಮಾನುಷ ಹತ್ಯೆ ನೆನಪಿಸಿಕೊಂಡು ಹೊಟ್ಟೆಯಲ್ಲಿ ಏನೋ ಒಂದು ತರಹ ತೊಳಿಸಿದಂತಾಯ್ತು. ಏನೂ ಬೇಡಪ್ಪ ಎಂದವನೇ, ಪ್ಯಾಂಟ್ ಏರಿಸಿಕೊಂಡು ಬ್ಯಾಗು ಕಾರಿನಲ್ಲಿ ಒಗೆದು ಕಾರು ಸುರುಮಾಡಿದೆ.

ಆಗಲೇ ಬಿಸಿಲು ಸಾಕಷ್ಟು ಬಿಸಿ ಬಿಸಿಗಾಳಿಯನ್ನು ತೂರುತ್ತಲೇ ಇತ್ತು.  ನನ್ನ ತಲೆ ಮೈ ಜಡವಾದಂತಾಯಿತು. ಮೊದಲಿನ ಹುರುಪಿನಂತೆ ನನ್ನ ಕಾರು ೧೨೦ ಸ್ಪೀಡ್ ಗೆ ಏರದೇ ೬೦ ರಲ್ಲೇ ಹೊರಟಿತು.

ದೇಶ, ಕಾಲ, ಸಂಪ್ರದಾಯ ಬಿಗಿಯಾದ ಕಾಯ್ದೆ, ಕಾನೂನುಗಳ ಹೊಡತದಲ್ಲಿ ಸಿಕ್ಕು ಲೈಲಾ-ಮಜ್ನು ಸತ್ತು ಹೋಗಿದ್ದಾರೆ ಅಂದುಕೊಂಡಿದ್ದೆ. ಹಾಗಾದರೆ ಇನ್ನೂ ಸತ್ತಿರಲಿಲ್ಲವೆ? ಅವರು ಸತ್ತವರು ಮತ್ತೆ ಹುಟ್ಟಿಬರುತ್ತಾರೆಯೆ? ನಂಬಲೆ?

ಸಮಸ್ಯೆಗಳ ಪರಿಹಾರ ಸೂತ್ರ ಸಿಗುವವರೆಗೂ ಇವರಿಬ್ಬರೂ ಮತ್ತೆ ಮತ್ತೆ ಹುಟ್ಟಿ ಬರುತ್ತಿರಬೇಕೇನೋ ಅಂದುಕೊಂಡೆ. ಏ/ಸಿ ಕಾರಿನಲ್ಲೂ ನನ್ನ ತಲೆ ಬಿಸಿಯಾಗತೊಡಗಿತು.
*****
ಪುಸ್ತಕ: ಕಡಲಾಚೆಯ ಕಥೆಗಳು

ಲತಾ ಗುತ್ತಿ
Latest posts by ಲತಾ ಗುತ್ತಿ (see all)