ಅರಳಲೋ ಬೇಡವೋ
ಎಂದನುಮಾನಿಸುತ್ತಲೇ
ಎಲೆದಳದಳಗಳ ಅರ್ಧವಷ್ಟೇ
ಮೆಲ್ಲಗೆ ವಿಕಸಿಸಿ
ಯಾರ ದಿಟ್ಟಿಗೂ ತಾಗದಿದ್ದರೆ
ಸಾಕೆನುತ
ಮೈಮನಗಳನೆಲ್ಲ ಮುದುರಿಸಿ
ದೇಹವೂ ನಾನೇ ಆತ್ಮವೂ ನಾನೇ
ಬಚ್ಚಿಡಲೆಂತು ಎರಡನೂ
ಪರಕೀಯ ದಾಳಿಯಿಂದ?
ಕಳವಳದಿಂದ
ಸಣ್ಣ ತಾಗುವಿಕೆಗೂ
ಮೈಮನಗಳ ಇಂಚಿಂಚೂ
ಒಳಗೊಳಗೇ ಮುದುರಿಕೊಳ್ಳುತಾ
ಬದುಕಿಡೀ ಚಡಪಡಿಸುತಾ
ಕಳೆವ ತುಡುಮುಡಿಕೆ ಜೀವ
ಈ ಮುಟ್ಟಿದರೆ ಮುನಿಯದು!

ಧ್ಯಾನಕ್ಕೆ ಕೂತು
ಆಳದಾಳದ ಮೌನದಲಿ ಹೂತು
ಬಿರುಬಿಸಿಲಿಗೆ ಹೊರ ಮೈ
ಒಣಗಿಸಿ
ಕಾವಿನಲಿ ಒಳಗು ಮಾಗಿಸಿ
ದೇಹ ನಾನಲ್ಲ. ಆತ್ಮ ನಾನು
ದೇಹಕ್ಕೂ ನನಗೂ
ಸಂಬಂಧವಿಲ್ಲೆನುತ
ಸಣ್ಣ ತಾಗುವಿಕೆಗೇ
ಪಟ್ಟನೆ ಒಡೆದು
ತಟ್ಟನೆ ಸಿಡಿದು
ಬಿರಿದುದುರಿದರೂ
ಒಳಗಿನದೆಲ್ಲಾ ಶುಭ್ರ
ಮಡಿಮಡಿ ಬಿಳುಪೆಂಬ
ಸಮಜಾಯಿಷಿಯಲಿ
ಮತ್ತೆ ಹಸಿಮಣ್ಣಲಿ ಹೂತು
ಧನ್ಯತೆಯ ಪಡೆವ ತವಕ
ಕಾದು ಕುಳಿತ
ಕನಕಾಂಬರ ಬೀಜದ್ದು!
*****