ಹಿಂದೂಮುಸಲ್ಮಾನರ ಐಕ್ಯ – ೨

ಹಿಂದೂಮುಸಲ್ಮಾನರ ಐಕ್ಯ – ೨

ಒಬ್ಬ ಹುಡುಗಿ ಒಂದು ತಾಂಬೂಲ ಕರಂಡಕದಲ್ಲಿ ಕೆಲವು ವೀಳ್ಯಗಳನ್ನಿಟ್ಟು ಕೊಂಡು ಶಿವದಾಸ-ಗುಲಾಮ ಆಲಿಯವರು ಕುಳಿತಲ್ಲಿಗೆ ಬಂದಳು. ಆ ಬಾಲಿಕೆ ಹನ್ನೊಂದು- ಹನ್ನೆರಡು ವರ್ಷದವಳಾಗಬಹುದು. ಅಪ್ಸರ ಕನ್ಯೆಯಂತೆ ಅವಳು ಅನುಪಮೇಯ ಸುಂದರಿಯಾಗಿದ್ದಳು. ಆ ಹುಡುಗೆ ಶಿವದಾಸನ ಮೊಮ್ಮಗಳು. ಅವಳ ಹೆಸರು ‘ಮಾಯಾ’ ಎಂದಿತ್ತು. ಅವಳ ಪಿತಾಮಹನ ಸೋದರತುಲ್ಯನಾದ ಗುಲಾಮ ಆಲಿಯು ಅವಳನ್ನು ಹೊಟ್ಟೆಯ ಮಗಳಂತೆ ಪ್ರೀತಿಸುತ್ತಿದ್ದನು. ಅವನು ಅವಳಿಗೆ ತಂಗಿಯೆಂದು ಕರೆಯುತ್ತಿದ್ದನು.

ಅಲ್ಲಿಗೆ ಬಂದ ಕೂಡಲೆ ಬಾಲಿಕೆ :- “ಓಹೋ! ಜಹಗೀರದಾರರು ಬಂದಿರುವರಲ್ಲ!! ಈಗೆಷ್ಟೋ ದಿನಗಳಿಂದ ತಮ್ಮ ದರ್ಶನವಾಗಿರಲಿಲ್ಲ. ಇದೆಯೋ ತಾವು ನನ್ನನ್ನು ಪ್ರೀತಿಸುತ್ತಿರುವ ಲಕ್ಷಣ? ಹೀಗೆ ಮಾಡದೆ ಆಗಾಗ್ಗೆ ಬಂದು ಭೇಟ್ಟಿ ಕೊಡುವದಕ್ಕಾಗಿಯೇ ನಾನು ನಿಮಗೆ ಈ ವಿಳ್ಯವನ್ನು ಕೊಡುತ್ತೇನೆ”ಂದು ನುಡಿದು, ಮಾಯೆಯು ಕರಂಡಕದೊಳಗಿನ ಒಂದೆರಡು ವಿಳ್ಯಗಳನ್ನು ತೆಗೆದು ಗುಲಾಮ ಆಲಿಯ ಕೈಗಿತ್ತಳು.

“ತಂಗೀ, ಈ ಸಾರೆ ನಿನಗೆ ಭೇಟಿ ಯಾಗಲಿಕ್ಕೆ ತುಸ ವಿಲಂಬವಾದ್ದೇನೊ ನಿಜ; ಆದರೆ ಮಹತ್ವದ ರಾಜಕಾರಣದ ಮೂಲಕ ಇಷ್ಟು ದಿನಗಳವರೆಗೆ ಬರಲಿಕ್ಕಾಗಿರಲಿಲ್ಲ. ಸಮಯ ದೊರೆತಾಗೆಲ್ಲ ಸಾವಿರ ಕೆಲಸ ಬಿಟ್ಟು ಬಂದು ನಿನಗೆ ಭೆಟ್ಟಿ ಯಾಗುತ್ತಿರುವದಿಲ್ಲವೆ?” ಎಂದು ಮುಗುಳು ನಗೆಯುಕ್ತವಾಗಿ ನುಡಿದು, ಗುಲಾಮ ಆಲಿಯು ತಾಂಬೂಲ ಭಕ್ಷಿಸಲುದ್ಯುಕ್ತನಾದನು.

“ಇಲ್ಲಿಗೆ ಬರದಿರಲಿಕ್ಕೆ ರಾಜಕಾರಣದೊಂದೇ ನವವೋ, ಗೃಹ ಕಾರಣದ ಬೇರೆ ನೆನವುಂಟಾಗಿತ್ತೋ ಯಾರು ಬಲ್ಲರು? ಬೀಬೀಸಾಹೇಬರ ಅಪ್ಪಣೆ ದೊರೆತಿರಕ್ಕಿಲ್ಲೆಂದು ತೋರುತ್ತದೆ. ಜಹಗೀರದಾರರೇ, ನನ್ನ ಅನುಮಾನ ಸತ್ಯವಷ್ಟೇ ?”

“ನಾನು ಬೀಬೀಸಾಹೇಬರ ಅಂಥ ಹೊಲ್ಲದ ವಿಚಾರಗಳಿಗೆ ತಲೆಹಾಕುವವನೇ? ತಂಗಿ, ಮಿಥ್ಯಾರೋಪಮಾಡಿ ನನಗೇಕೆ ದೋಷ ಕೊಡುತ್ತೀ?

“ಜಹಗೀರದಾರರೇ, ಬೀಬೀಸಾಹೇಬರು ಸೌಖ್ಯವಾಗಿರುವರೇ? ಎಷ್ಟೋ ದಿನಗಳಿಂದ ನಾನವರಿಗೆ ಭೇಟಿಯಾಗಿರುವದಿಲ್ಲ.”

“ಕ್ಷೇಮವಾಗಿರುತ್ತಾರೆ; ನಾಳೆ ಬೆಳಿಗ್ಗೆ ಮೇಣೆಯನ್ನು ಕಳಿಸಿ ಕೊಡುವೆನು. ಶಿವದಾಸರೇ, ಈ ನಮ್ಮ ತಂಗಿಯನ್ನು ಕಳಿಸಿ ಕೊಡಲಿಕ್ಕೆ ಅನು ಕೂಲವಾಗಬಹುದೊ?”

“ಇದೆಂಥ ವಿಲಕ್ಷಣ ಪ್ರಶ್ನೆ ಮಾಡುತ್ತೀರಿ ಜಹಗೀರದಾರರೇ? ಇವಳನ್ನು ನಿಮ್ಮಲ್ಲಿಗೆ ಕರೆದೊಯ್ಯುವದಕ್ಕಾಗಿ ನನ್ನ ಅನುಮತಿಯೇತಕ್ಕೆ? ಕರೆದೊಯ್ಯಬೇಕೆಂದು ಅನಿಸಿದಾಗೆಲ್ಲ ತಾವು ಇವಳನ್ನು ಕರೆದೊಯ್ಯಬಹುದು. ನನಗೆ ಹೇಗೆ ಇವಳು ಮೊಮ್ಮಗಳೋ, ಹಾಗೆಯೇ ನಿಮಗೂ ಇವಳು ಮೊಮ್ಮಗಳಲ್ಲವೆ? ಯಾಕಂದರೆ ನೀವು ನನ್ನ ಬೆನ್ನಿಲೆ ಬಿದ್ದ ಬಂಧುಗಳಂತಿರುವಿರೆಂಬದನ್ನು ಬೇರೆ ಹೇಳಬೇಕೆ?”

“ತಾವು ಅನುಗ್ರಹಪೂರ್ವಕವಾಗಿ ನನ್ನನ್ನು ತಮ್ಮ ಬಂಧುಗಳೆಂದು ತಿಳಿಯುತ್ತಿರುವದು ತಮ್ಮಂಥ ವಿದ್ವಾನ್ ಬ್ರಾಹ್ಮಣರಿಗೆ ಯೋಗ್ಯವೇ ಸರಿ.”

“ಇದರಲ್ಲಿ ನನ್ನ ಅನುಗ್ರಹವೇತರದು? ಅನುಗ್ರಹಕರ್ತರು ತಾವೇ ಆಗಿರುತ್ತೀರಿ. ಆಗುತ್ತಿದ್ದರೆ, ನನ್ನ ನಿಗ್ರಹವು ಮಾತ್ರ ನಿಮಗಾಗುತ್ತಿರಬಹುದಾಗಿದೆ.”

“ಬ್ರಾಹ್ಮಣೋತ್ತಮಾ, ಬ್ರಾಹ್ಮಣರ ವಾಕ್ ಪಾಂಡಿತ್ಯದ ಹುಟ್ಟಗುಣವು ನಿನ್ನಿಂದ ಹೇಗೆ ತೊಲಗಬೇಕು? ಹುಟ್ಟಗುಣ ಹುಗಿದರೂ ಹೋಗೆಬಲ್ಲದೆ? ತಂಗೀ, ನಮ್ಮ ಬೀಬೀಸಾಹೇಬರ ಭೇಟಿಗೆ ಬರುವಾಗ ನೀನೇನು ನಜರಾಣೆ ತರುವೆ, ಹೇಳು ನೋಡುವಾ?”

“ದಿನಾಲು ನಜರಾಣೆ ತರಲಿಕ್ಕೆ ನಾವೇನು ಜಹಗೀರದಾರರೇ?” ಎಂದು ಮಾಯೆಯು ಸ್ಮಿತವದನದಿಂದ ನುಡಿಯಲು,

“ನಜರಾಣೆ ತರದಿದ್ದರೆ ನಿನಗೆ ಬೀಬೀಸಾಹೇಬರ ಭೇಟಿ ಹೇಗಾದೀತು?”

“ಮಾಯಾ, ಮೊನ್ನೆ ಹೊಸದಾಗಿ ಕಲಿತಿರುವ ಆ ಶಿವಸ್ತೋತ್ರವನ್ನು ನಮ್ಮ ಜಹಗೀರದಾರರಿಗೆ ಅಂದು ತೋರಿಸಬಾರದೆ? ಅದು ಇವರಿಗೆ ರುಚಿಸಿದರೆ, ಅದನ್ನೇ ನೀನು ನಾಳೆ ಇವರ ಬೀಬೀಸಾಹೇಬರೆದುರಿಗೆ ನಜರಾಣೆಯೆಂದು ಅಂದು ತೋರಿಸಿದರಾಯಿತು. ಈ ಸ್ತೋತ್ರ- ಪದ್ಯಗಳೇ ನಮ್ಮ ಭಟ-ಭಿಕ್ಷುಕ ಬ್ರಾಹ್ಮಣರಿಂದ ಮಾನ್ಯರಿಗೆ ಕೈಸಡಿಲುಬಿಟ್ಟು ಅರ್ಪಿಸುವ ನಜರಾಣೆಗಳಾಗಿರುತ್ತವೆ.”

ಮಾಯೆಯು ತಾಂಬೂಲ ಕರಂಡಕವನ್ನು ಕೆಳಗಿಟ್ಟು, ದೇವಿಯ ಕಡೆಗೆ ಮೋರೆಮಾಡಿ ಕೈ ಜೋಡಿಸಿ, ಕಣ್ಣು ಮುಚ್ಚಿ, ಸುಂದರ ಸುಲಲಿತ ಸ್ವರದಿಂದ ಆ ಶಿವಸ್ತೋತ್ರವನ್ನು ಅನ್ನಲಾರಂಭಿಸಿದಳು.

ಆ ಸ್ತೋತ್ರವನ್ನು ಕೇಳಿ ಗುಲಾಮ ಆಲೀಸಾಹೇಬನ ಅಂತಃಕರಣವು ಪ್ರೇಮಭರಿತವಾಯಿತು. ಆಗ ಅವನ ಕಣ್ಣೊಳಗಿಂದ ಪ್ರೇಮಾಶ್ರುಗಳು ಒಂದೇಸವನೆ ಸುರಿಯಹತ್ತಿದವು. ನಂತರ ಗದ್ಗದವಾಣಿಯಿಂದ ಅವನು:- “ಅಹಹ! ಎಂಥ ಸುಲಲಿತ ಸ್ತೋತ್ರವಿದು!! ಈ ದೇಶದ ಕವಿಗಳು ದೇವರ ಸ್ತೋತ್ರಗಳನ್ನು ಎಷ್ಟು ಮಾರ್ಮಿಕವಾಗಿ ರಚಿಸುತ್ತಿರುವರಲ್ಲ! ಇಂಥ ಈ ಸುಂದರ ಸ್ತೋತ್ರಗಳು ಈ ಸುಕುಮಾರ ಬಾಲಿಕೆಯ ಬಾಯಿಂದ ಕೇಳಿದರಂತೂ ಕೇಳುವವನು ಒಮ್ಮೆಲೆ ತಲ್ಲೀನತೆಯನ್ನೇ ಹೊಂದಿಬಿಡುವನು!”

ಜಹಗೀರದಾರರೇ, ನೀವೀ ಸ್ತೋತ್ರವನ್ನು ಕೇಳಿ ಕೇವಲ ಹಿಂದುಗಳೇ ಆಗಿಹೋದಿರಲ್ಲ? ಎಂಬ ಮಾಯೆಯ ಪ್ರಶ್ನೆಗೆ,

“ಯಾವನು ದೇವರಲ್ಲಿ ನಿಜವಾದ ಭಕ್ತಿಯುಳ್ಳವನಿರುವನೋ ಅವನು ಹಿಂದೂ-ಮುಸಲ್ಮಾನಗಳೆಂಬ ದ್ವಂದ್ವಗಳಲ್ಲಿ ಎಂದೂ ಸಿಕ್ಕಲಾರನು. ಅವನು ಎಲ್ಲ ಧರ್ಮಿಗಳಿಗೂ ಸಮಾನನೇ ಆಗಿರುತ್ತಾನೆ.”

“ಒಬ್ಬನೇ ಎಲ್ಲ ಧರ್ಮಗಳಿಗೂ ಸಮಾನನಾಗುವದು ಶಕ್ಯವಾದರೂ ಉಂಟೆ?”

“ತಂಗಿ, ಹಾಗೆ ತಿಳಿಯಬೇಡ. ಆಂತರಿಕ ಸಮಾನತ್ವವು-ಶ್ರೇಷ್ಠತ್ವವು ಬಹಿರಂಗದಲ್ಲಿ ಹೇಗೆ ತಿಳಿದು ಬಂದೀತು? ಬಹಿರಂಗ ವ್ಯಾಪಾರದಲ್ಲಿ ಅಡಿ ಗಡಿಗೆ ಭೇದಭಾವಗಳಿರುತ್ತವೆ; ಆದರೆ ಅಂತರಂಗದ ಶುದ್ದ ವ್ಯಾಪಾರಕ್ಕೆ ಯಾವ ಭೇದ-ಭಾವಗಳೂ ಸೋಂಕಲಾರವು.”

ಈ ಪ್ರಕಾರ ಅವರ ಸಂಭಾಷಣವು ನಡೆದಿರಲು, ಒಬ್ಬ ದೂತನು ಬಂದು ಜಹಗೀರದಾರನಿಗೆ ನವಾಬ ಸಾಹೇಬನ ಮಹತ್ವದ ಆದೇಶವನ್ನು ತಿಳಿಸಿದನು. ಕೂಡಲೆ ಗುಲಾಮ ಆಲಿಯು ಎದ್ದು ನಿಂತು :- “ತಂಗೀ, ಮಾಯಾ ನಾನೀಗ ಹೊರಡುವೆನು. ಬಹಳ ದಿವಸಗಳಿಂದ ನಿನ್ನ ಭೇಟಿಗೆ ಯಾಕೆ ಬಂದಿರಲಿಲ್ಲೆಂದು ನೀನು ಆಗಲೆ ಸಿಟ್ಟಾಗಿದೆಯಲ್ಲವೆ? ಇಗೋ, ನೋಡು, ನನಗೆಷ್ಟು ಅವಸರದ ಕೆಲಸಗಳಿರುತ್ತವೆಂಬುದನ್ನು? ಶಿವದಾಸರೇ, ಬರಲಿಯಾ ಇನ್ನು?” ಎಂದಂದು ಚಾರರನನ್ನನುಸರಿಸಿ ನಡೆದನು.

ಆಗ್ಗೆ ಮುಜೀದ ಖಾ ಎಂಬವನು ಬಂಗಾಲದ ನವಾಬನಾಗಿದ್ದನು. ಅಕಬರನು ದಿಲ್ಲಿಯ ಬಾದಶಹ, ಆಗಿನ ಆ ಬಾದಶಾಹೀ ಅಮಲಿನಲ್ಲಿ ನಮ್ಮ ಗುಲಾಮ ಅಲಿ ಅಲೀಬಾಗ ಸಂಸ್ಥಾನದ ಜಹಗೀರದಾರನಾಗಿದ್ದ.

ಅಕಬರನು ಹಿಂದೂ-ಮುಸಲ್ಮಾನರನ್ನು ಸಮಾನವಾಗಿ ನಡೆಸಿಕೊಳ್ಳುತಿದ್ದನೆಂದು ಖ್ಯಾತಿಯಿದೆ; ಆದರೆ ಅಕಬರ ಬಾದಶಹನಿಗಿಂತ ಪೂರ್‍ವದಿಂದಲೇ ಬಾದಶಾಹೀ ರಾಜಧಾನಿಯಿಂದ ಬಹು ದೂರದಲ್ಲಿ ಸ್ಥಿರವಾಗಿ ವಾಸಿಸುತ್ತಿದ್ದ ಮುಸಲ್ಮಾನ ಅಮಲದಾರರೂ ಜಹಗೀರದಾರರೂ ಅಲ್ಲಿಯ ಹಿಂದೂ ಪ್ರಜೆಗಳೊಡನೆ ಉದಾರತನದಿಂದ ನಡೆಕೊಳ್ಳುತ್ತಿದ್ದರು; ಮತ್ತು ಹಿಂದು ಜನರಾದರೂ ಮುಸಲ್ಮಾನರ ಆ ಸೌಜನ್ಯಕ್ಕೆ ಸರಿಯಾಗಿಯೇ ನಡೆಯುತ್ತಿದ್ದರು. ಆಗಿನ ಸಮಾಜದಲ್ಲಿ ಜಾತಿಭೇದಗಳಿಂದ ವೈಷಮ್ಯಕ್ಕೆ ವಿಶೇಷ ಆಸ್ಪದವಿರಲಿಲ್ಲ. ಧರ್ಮದಿಂದ ಎಂಥ ನಿಷ್ಟುರರಾಗಿದ್ದರೂ ದೂರ ದೂರ ಪ್ರದೇಶಗಳಲ್ಲಿ ಮುಸಲ್ಮಾನರ ಪ್ರಸಾರವು ವಿಶೇಷವಾಗಿದ್ದರಿಂದ, ಅವರ ಆ ನಿಷ್ಟುರತೆಯು ತಾನಾಗಿಯೇ ಕುಗ್ಗುತ್ತಿತ್ತು. ಅನುಯಾಯಿಗಳ ಬೆಂಬಲವಿರದ್ದರಿಂದ, ಆಗಿನ ಮುಸಲ್ಮಾನ ಜನರು ತಮ್ಮ ಸುತ್ತಮುತ್ತಲಿನ ಹಿಂದುಗಳೊಡನೆಯೇ ಸಹಕಾರತೆಯಿಂದ ನಡೆಯಬೇಕಾದುದು ಸ್ವಾಭಾವಿಕವಾಗಿತ್ತು. ವ.ಸಲ್ಮಾನರು ಹಿಂದುಸ್ತಾನದಲ್ಲಿ ಬಹಳ ದಿವಸಗಳವರೆಗೆ ಇರಹತ್ತಿದ್ದರಿಂದ, ಅವರಲ್ಲಿ ದೇಶಾಭಿಮಾನವು ಬೆಳೆಯಿತು. ಸಹವಾಸಯೋಗದಿಂದ ಪರಸ್ಪರರಿಗೆ ಪರಸ್ಪರರ ಧರ್ಮದ ಮರ್ಮಗಳೆಲ್ಲ ಚೆನ್ನಾಗಿ ತಿಳಿದು, ಎಲ್ಲರೂ ಸ್ವ-ಸ್ವಧರ್ಮ ದಿಂದ ನಡೆಯಲು ಅನುಕೂಲವಾಗಿತ್ತು. ಧಾರ್ಮಿಕ ಬಾಬಿನಲ್ಲಿ ಯಾರೂ ಪರರಿಗೆ ತೊಂದರೆ ಕೊಡದಂತಾದರು. ಪ್ರಜೆಗಳ ಈ ತರದ ಸ್ವಧರ್ಮಾನುರಾಗಕ್ಕೆ ಆಗಿನ ಉದಾರಮತವಾದಿಗಳಾದ ಮುಸಲ್ಮಾನ ಭೂಸ್ವಾಮಿಗಳೇ ಹೆಚ್ಚಾಗಿ ಕಾರಣರಾಗಿದ್ದರು. ಅವರಲ್ಲಿ ಅಲೀಬಾಗದ ಜಹಾಗೀರದಾರನಾದ ನಮ್ಮ ಗುಲಾಮ ಆಲಿ ಅಗ್ರಗಣ್ಯನಾಗಿದ್ದ.

ಸರಳ, ಸಹೃದಯ ಹಾಗು ಧರ್ಮಪ್ರಾಣನಾದ ಗುಲಾಮ ಆಲಿ ಈಶ್ವರೀ ನಿಷ್ಠೆಯಿಂದಲೂ, ಪ್ರಜಾ ವಾತ್ಸಲ್ಯದಿಂದಲೂ ಲೌಕಿಕ ವಿಚಾರದಿಂದ ಎಷ್ಟು ಮಾನನೀಯನಾಗಿದ್ದನೋ, ಅದಕ್ಕಿಂತಲೂ ತನ್ನ ಅಂತರಂಗ ದಲ್ಲಿಯ ಹಿಂದು-ಮುಸಲ್ಮಾನರ ಐಕ್ಯದ ಲಾಲಸೆಯಿಂದ ಅವನು ಹೆಚು ಲೋಕಮಾನ್ಯನಾಗಿದ್ದ.

ಪೂರ್ವವಯಸ್ಸಿನಿಂದಲೂ ಶಿವದಾಸನ ಕೂಡ ಗುಲಾಮ ಆಲಿಯ ಸಖ್ಯ ವಿಶೇಷವಾಗಿತ್ತು. ಶಿವದಾಸನಾದರೂ ಪಂಡಿತನೂ ಧಾರ್ಮಿಕ ಇದ್ದಂತ ಪರಧರ್ಮ ಸಹಿಷ್ಣುತೆಯುಳ್ಳ ಉದಾರ ಸ್ವಭಾವದವನಿದ್ದ. ಮಹಾನುಭಾವದವನಾದ ಗುಲಾಮ ಆಲಿಯನ್ನು ಮ್ಲೇಂಛ ಜಾತಿಯವನೆಂದು ಅವನೊಡನೆ ಶಿವದಾಸನು ಕೊಂಚವೂ ತಿರಸ್ಕಾರದಿಂದ ನಡೆಯುತ್ತಿರಲಿಲ್ಲ. ಅವರೀರ್ವರಲ್ಲಿಯ ಬಾಲ್ಯ ಸಖ್ಯವು ಪರಿಣತ ವಯಸ್ಸಿನಲ್ಲೂ ಕ್ರಮವಾಗಿ ವೃದ್ಧಿಂಗತವಾಗುತಲಿತ್ತು. ಲೌಕಿಕಾಚಾರದ ಸಲುವಾಗಿ ಅವರು ತಮ್ಮ ತಮ್ಮ ಜಾತಿಯಂತೆ ಊಟ-ಉಡಿಗೆಗಳ ವ್ಯವಹಾರಗಳನ್ನಷ್ಟು ಬೇರೆ ಬೇರೆ ಮಾಡುತ್ತಿದ್ದರೇ ವಿನಃ, ಅವರೀರ್ವರಲ್ಲಿ ಮಿಕ್ಕ ಭೇದಭಾವವು ಸ್ವಲ್ಪವೂ ಇರಲಿಲ್ಲ. ಸಹೃದಯನಾದ ಗುಲಾಮ ಆಲಿಯು ಬರಿಯ ಶಿವದಾಸನ ಕೂಡವೇ ಹೀಗೆ ನಡೆಯುತ್ತಿದ್ದನೆಂತಲ್ಲ; ಹಿಂದೂ ಮುಸಲ್ಮಾನ ಜಾತಿಯ ತನ್ನ ಎಲ್ಲ ಪ್ರಜಾಗಣಗಳೊಡನೆಯೂ ತೀರ ಆತ್ಮೀಯ ಭಾವದಿಂದ ನಡೆಕೊಳ್ಳುತ್ತಿದ್ದನು. “ತಾನು ಶ್ರೀಮಂತನಾದ ಜಹಗೀರದಾರ; ಪ್ರಜೆಗಳೊಡನೆ ಕೂಡಿ ನಡೆಯುವದರಿಂದ ತನ್ನ ಮರ್ಯಾದೆ ಕಡಿಮೆಯಾಗುವದು” ಎಂಬ ದುರಹಂಕಾರ ಅವನನ್ನು ಕೊಂಚವೂ ಸೋಂಕಿದ್ದಿಲ್ಲ ಅದರಿಂದ ಆ ಪ್ರಜಾವತ್ಸಲನು ಪ್ರಜೆಗಳ ಮನೆಯ ಸರ್ವಸಾಧಾರಣ ಶುಭಕಾರ್ಯಗಳಲ್ಲಿಯ ಸಾವು-ಕೇಡುಗಳಂಥ ಕಠಿಣ ಪ್ರಸಂಗಗಳಲ್ಲಿಯೂ ಅವರ ಮನೆ ಮುಟ್ಟಿ ಹೋಗಿ, ಅವರನ್ನು ಸಮಾಧಾನ ಪಡಿಸುತ್ತಿದ್ದನು.

ಶಿವದಾಸನು ಹಿಂದೂ ಧರ್ಮಶಾಸ್ತ್ರಾದಿಗಳಲ್ಲಿ ಪಾರಂಗತನಾಗಿದ್ದಂತೆ, ಗುಲಾಮು ಅಲಿಸಾಹೇಬನು ಮುಸಲ್ಮಾನೀ ಧರ್‍ಮಶಾಸ್ತ್ರಗಳನ್ನು ತಿಳಿದವನಾಗಿದ್ದ. ಈ ಉಭಯ ವಿದ್ವಾಂಸರು ಪರಸ್ಪರರ ನಿಕಟ ಸಹವಾಸದಿಂದ ಪರಸ್ಪರರ ಧರ್ಮಗಳ ಮರ್ಮವನ್ನು ಚನ್ನಾಗಿ ಅರಿತುಕೊಂಡಿದ್ದರು. ಉಭಯ ಧರ್ಮಗಳ ಇಂಗಿತವು ಮನದಟ್ಟಾದದ್ದರಿಂದ, ಅವರೀರ್ವರೂ ಉಭಯ ಧರ್ಮಗಳಲ್ಲಿ ಒಳ್ಳೆ ಶ್ರದ್ಧಾವಂತರಾಗಿದ್ದರು. ಅವರಲ್ಲಿಯ ಆ ಶ್ರದ್ದೆ ಹಿಂದೂ ಮುಸಲ್ಮಾನರ ಐಕ್ಯಕ್ಕೆ ಕಾರಣವಾಗಿತ್ತೆಂದು ಬೇರೆ ಹೇಳ ಬೇಕಾಗಿರುವದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗದಂಬೆ
Next post ಸಿದ್ಧತೆ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…