ಹಡೆದ ತಾಯಿ ಒಡಲುಂಡ ನೋವೆಷ್ಟೊ?
ಈ ಪುಣ್ಯಫಲವನ್ನಿಲ್ಲಿ ಬಿಟ್ಟು ಎಲ್ಲಿ ಹೋದಳೊ?
ಚೆಂದದ ಕಂದನ ನೋಡಿ ಅಬ್ಬ ಆಹಾ ಎಂದು ಕೆಲ ಮಂದಿ
ಸುತ್ತಮುತ್ತಿ ಅದನ್ನು ಪೋಷಿಸುವ ಪಣತೊಟ್ಟರು
ಒಡವೆ ವಸ್ತ್ರಗಳಿಂದಲಂಕರಿಸಿದರು ಕುತ್ತಿಗೆ ಮಟ ಉಸಿರು ಕಟ್ಟುವವರೆಗೆ
ತಿಂಡಿತಿನಿಸುಗಳ ಎಡೆಮಾಡಿಕೊಂಡು ಮೆರೆಸಿದರು ಅದನುಪವಾಸ
ಅದಕಾಗಿ ಮನೆಯೆಂದು ಕಲ್ಲಿಗೆ ಕಲ್ಲೇರಿಸಿ ಕಟ್ಟಿ
ಭದ್ರವಾಗಿರಲೆಂದು ಬೀಗ ಜಡಿದು ಕೂಡಿಟ್ಟರು
ಆ ಕೂಸಿನ ಗೋತ್ರೇತಿಹಾಸವ ಬಣ್ಣ ಬಣ್ಣ ಮಸಿಗಳಿಂದ
ಹೆಬ್ಬೊತ್ತಿಗೆಗಳಲಿ ಬರೆದು ಹಳೆಸಂದೂಕಗಳಲಿಟ್ಟು
ಪಾವಿತ್ರ್ಯತೆಯ ಸರ್ಪಗಾವಲು ಹಾಕಿದರು
ಅದರ ಹೆಸರಲ್ಲಿ ವರುಷವರುಷವೂ ಪರಿಷೆ ನಡೆಯುತ್ತದೆ
ಆಗ ಅದರ ಸಿದಿಗೆಯ ಕಟ್ಟಿ ಕೂಡಿಸಿ ಕುಣಿದಾಡುತ್ತಾರೆ
ಅಸಲಿಲ್ಲದೀ ಬಡ್ಡಿ ಮಕ್ಕಳು, ಬೆಂಕಿಯಿಲ್ಲದೆಡೆಯೂದಿ ಹೊಗೆ ಹಾಕುತ್ತಾರೆ
ತಾಯಿ, ಮರಳಿ ಬಂದು ತನ್ನ ಕಂದಮ್ಮನನ್ನು ನೋಡಿದರೆ???
ಸಮಾಧಿಯಡಿ ದೀರ್ಘನಿದ್ರೆಯಲ್ಲಿದೆ ಪಾಪ
*****