ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು
ದೂರಮಾಡಿದೆ ಎಂದು, ತಪ್ಟೊಪ್ಪಿಕೊಳ್ಳುವೆನು;
ನನ್ನ ನ್ಯೂನತೆ ತಿಳಿಸು, ಅದರ ವಿರುದ್ಧ ಏನೂ
ರಕ್ಷಣೆಗೆ ವಾದ ಹೂಡದೆ ತಿದ್ದಿಕೊಳ್ಳುವೆನು.
ನನ್ನ ಬದಲಾವಣೆಯ ಬಯಸಿ ದೂರಲು ನೀನು
ಮುಖಭಂಗವೇನಿಲ್ಲ ನನಗೆ, ನನ್ನನು ನಾನೆ
ಕೆಳಗಿಳಿಸಿಕೊಳ್ಳುವೆನು. ತಿಳಿದು ನಿನ್ನಿಚ್ಚೆಯನು
ತೊರೆಯುವೆನು ನಮ್ಮ ನಡುವಿನ ಸಲಿಗೆ ವ್ಯವಹಾರ;
ಅಪರಿಚಿತನೆಂಬಂತೆ ದೂರದಲಿ ನಿಲ್ಲುವೆನು,
ನನ್ನೊಲವ ಸವಿ ಹೆಸರ ಮತ್ತೆಂದೂ ಹೇಳೆನು,
ಹೇಳಿ ಮೈಲಿಗೆಯಾಗಿ ತೊಂದರೆಯೆ ಆದೀತು
ಹಳೆಯ ಸಂಬಂಧ ಅದರಿಂದ ಹೊರಬಂದೀತು.
ನಿನ್ನ ದ್ವೇಷಿಸುವವನ ನಾನೆಲ್ಲಿ ಪ್ರೀತಿಸುವೆ ?
ಅದಕೇ ನನ್ನೆದುರು ನಾನೇ ನಿಂತು ವಾದಿಸುವೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 89
Say that thou didst forsake me for some fault