ಈ ಪೇಟೆಗೊಂದು ಒಳಚರಂಡಿ
ವ್ಯವಸ್ಥೆ ಬೇಕೆ ಬೇಡವೆ ಹೇಳಿ, ಹೋಟೆಲು
ಕಸಾಯಿಖಾನೆಗಳಿಂದ ಹರಿಯುವ ಕೊಚ್ಚೆ
ರೋಡಿನ ಮೇಲೆ ಹಪ್ಪುಗಟ್ಟುತ್ತದೆ.
ಜರಿಯಬೇಕೆ ಇಲ್ಲಿ, ಸಂಜೆಗೆ ಹಾಯಾಗಿ
ವಾಯು ಸೇವನೆಗೆ ಅಡ್ಡಾಡುವ ನಮ್ಮ ಮಂಡಿ?

ಹಾಗೇನೆ ಒಂದು ಸಾರ್ವಜನಿಕ ಮೂತ್ರ ದೊಡ್ಡಿ
ಇಲ್ಲದೆ ಬರುವ ಕಷ್ಟ ಎಲ್ಲರಿಗೂ ಗೊತ್ತು
ಈಗಿರುವ ಮರಗಿಡಗಳೆಷ್ಟು ಜನಕ್ಕೆ ಸಾಕು?
ಮುರಿದ ಗೋಡೆಗಳು ಬರುತ್ತವೆಷ್ಟು ದಿನಕ್ಕೆ?
ಒದ್ದೆಯಾಗಬೇಕೆ ಹೀಗೆ ಕ್ಷಣವೂ ಪುರುಸೊತ್ತಿಲ್ಲದ
ಆಧುನಿಕ ಮನುಷ್ಯನ ಚಡ್ಡಿ?

ಬೇಕು ಮುಂದರಿದ ಮಹಿಳೆಯರಿಗೊಂದು ಕ್ಲಬ್ಬು
ಒಂದು ಬ್ಯೂಟಿ ಸೆಲೂನು ಎಲ್ಲರಿಗೂ
ಒಂದು ಈಜುಕೊಳ.  ಹೊಸ ಆಶಯಗಳನ್ನು
ಒಳಗೊಳ್ಳುವುದಕ್ಕೆ, ಈ ಪೇಟೆಯ
ಸೌಂದರ್ಯಗಳನ್ನು ಹೆಚ್ಚಿಸುವುದಕ್ಕೆ, ಇದ್ದವರಿಗೆ
ಕರಗಿಸುವುದಕ್ಕೆ ತೊಡೆಗಳ ಕೊಬ್ಬು

ಬೇಡವೇ ಚಿಕ್ಕ ದೊಡ್ಡ ಪಾರ್ಕುಗಳು ಅಲ್ಲಲ್ಲಿ?
ಉದಾ: ಮುನಿಸಿಪಾಲಿಟಿ, ತಾಲೂಕಾಫೀಸು,
ತಲೆತಲಾಂತರಗಳ ಕುಟುಂಬಸ್ಥರ ಮನೆ
ಮುಂದೆ, ಎಲ್ಲರಿಗೂ ಕಾಣಿಸುವಂತೆ.  ಇಲ್ಲದಿದ್ದರೆ
ಈ ಸ್ಥಳೀಯ ಶ್ರೇಷ್ಠರ ಪ್ರತಿಮೆಗಳನ್ನು
ನಿಲ್ಲಿಸಬೇಕು ಯಾರು ಎಲ್ಲಿ?

ಕೊಡಬೇಕು ದೊಡ್ಡವರಿಗೆ ದೊಡ್ಡವರ ಸ್ಥಾನ
ಮುಂದಾಳುಗಳನ್ನು, ಮನೆತನ ಉಳ್ಳವರನ್ನು
ಗೌರವಿಸಬೇಕು, ಈ ನೆಲದ ದರಿದ್ರ ಧೂಳು
ಸೋಂಕದಂತೆ.  ಬರಿಗಾಲಲ್ಲಿ ನಡೆಯದವರನ್ನು
ಎಲ್ಲರೊಂದಿಗೆ ಮಲಗಿಸುವುದೆಂದರೇನು!
ಬೇಕು ಈ ಪೇಟೆಗೊಂದು ಸ್ಪೆಶಲ್ ಶ್ಮಶಾನ
*****