ಮಗುವನ್ನು ಹುಡುಕಿಕೊಡಿ

ಮಗುವನ್ನು ಹುಡುಕಿಕೊಡಿ

ನನ್ನನ್ನು ಅನೇಕ ಸಾರಿ ಕಾಡುವ ಪ್ರಶ್ನೆಯೆಂದರೆ- ಈ ಮನುಷ್ಯ ಮನಸ್ಸಿಗೆ ಏನಾಗುತ್ತಿದೆ – ಎಂಬುದು. ಪರಿಸರ ಮಾಲಿನ್ಯದ ಬಗ್ಗೆ ಸಾಕಷ್ಟು ಮಾತನಾಡುತ್ತಿರುವ ಇಂದಿನ ದಿನಗಳಲ್ಲಿ ಮಾನಸಿಕ ಮಾಲಿನ್ಯವು ಮುಖ್ಯ ಪ್ರಶ್ನೆಯಾಗಿ ಕಾಡಿಸಬೇಕೆಂದು ನಾನು ಬಯಸುತ್ತೇನೆ. ಮಲಿನ ಮನಸ್ಸುಗಳಲ್ಲಿ ಬಿಸಿಗುಡುವ ವಿಷಯ ವಯ್ಯಾರಕ್ಕೆ ಬೆರಗಾಗುವವರು ಹೆಚ್ಚಿದಂತೆಲ್ಲ ಈ ಪ್ರಶ್ನೆಯ ಗಾಢತೆಯೂ ಹೆಚ್ಚುತ್ತದೆ. ಸಣ್ಣತನದ ಪರಮಾವಧಿಯಲ್ಲಿ ಪುರುಷಾರ್ಥ ಸಾಧಿಸುವ ಸಾಮಾಜಿಕ ಪರಿಸರವನ್ನು ರೂಪಿಸುವ ವ್ಯಕ್ತಿಗಳು ಬಲವಾದಂತೆಲ್ಲ ಮನುಷ್ಯ ಮನಸ್ಸಿಗೆ ಗರ ಬಡಿಯುತ್ತದೆ. ಸುತ್ತಮುತ್ತ ನೋಡಿದರೆ ಒಮ್ಮೊಮ್ಮೆ ಸಣ್ಣತನದ ಶೃಂಗಗಳು ಇನ್ನೂ ಅಂತಃಕರಣದ ಆವರಣಗಳು ಕಾಣಿಸುತ್ತವೆ. ಈ ಆವರಣದಲ್ಲಿ ಕೂತವರ ಕತ್ತು ನೋಯುವಷ್ಟು ಎತ್ತರದಲ್ಲಿ ಶೃಂಗದ ಸಂಚುಗಳು ಸಡ್ಡು ಹೊಡೆದಾಗ ಮನುಷ್ಯತ್ವ ಎಲ್ಲಿದೆ ಎಂದು ಆತಂಕವಾಗುತ್ತದೆ. ನಡೆ-ನುಡಿಯಲ್ಲಿ ಮನುಷ್ಯರಾಗಬೇಕಾದವರು ಆಕಾರದಲ್ಲಿ ಮಾತ್ರ ಆದಾಗ ಅಂತಃಕರಣ ನಾಪತ್ತೆಯಾಗುವುದು ಸ್ವಾಭಾವಿಕ. ಅಂತಃಕರಣವೇ ನಾಪತ್ತೆಯಾದ ಮೇಲೆ ಮನಸ್ಸಿನಲ್ಲಿ ಹೊಂಡಗಳು ಹುಟ್ಟುತ್ತವೆ. ರಾಡಿ ತುಂಬಿಕೊಂಡು ರಾರಾಜಿಸುತ್ತವೆ. ಅಸಹನೆಯ ಮತ್ತು ಅಮಾನವೀಯತೆಗಳು ಮೀಸೆ ತಿರುವಿ ಅಟ್ಟಹಾಸ ಮಾಡುತ್ತವೆ. ವಿವೇಕವು ವಂಚನೆಯ ರೂಪ ತಾಳುತ್ತದೆ, ವಿಕಾರವೇ ವಿಚಾರವಾಗುತ್ತದೆ. ಇದೆಲ್ಲವೂ ನ್ಯಾಯದ ನೆಪದಲ್ಲಿ ನಡೆಯುತ್ತಿದೆ. ಇಂಥ ಹುನ್ನಾರಗಳು ಎಲ್ಲ ಕ್ಷೇತ್ರಕ್ಕೂ ವ್ಯಾಪಿಸಿ ಜನಸಾಮಾನ್ಯರಲ್ಲಿ ಮಾತ್ರ ಸರಳ ನೇರ ಮನಸ್ಸು ಉಳಿದಿದೆಯೆಂಬ ಅಭಿಪ್ರಾಯಕ್ಕೆ ನಾನು ಬರುತ್ತಿದ್ದೇನೆ. ಜನ ಸಾಮಾನ್ಯರಾದವರೆಲ್ಲರೂ ಸಾರಾಸಗಟು ಸಣ್ಣತನದ ಸಾಕಾರ ರೂಪಗಳೆಂದು ನಾನು ತೀರ್‍ಪು ನೀಡುತ್ತಿಲ್ಲ. ಆದರೆ ವಿವೇಕಿಗಳು ವಿದ್ಯಾವಂತರೂ ಎನ್ನಿಸಿ ಕೊಂಡ ಮನುಷ್ಯರೂಪಿಗಳಲ್ಲಿ ಬಹುಪಾಲು ಮಂದಿ ಬುದ್ಧಿಗೆ ಭಾವದ ಬಲಿ ಕೊಡುತ್ತಿದ್ದಾರೆನ್ನಿಸಿ ಆತಂಕವಾಗುತ್ತಿದೆ.

ಬುದ್ಧಿಯೊಳಗೆ ಭಾವದ ಸೆಲೆ ಇಲ್ಲವಾಗಿ ಬೌದ್ದಿಕತೆಯೇ ಲೋಲುಪತೆ ಯಾದಾಗ ಕಣ್ಣಿನ ಒಳ ಬೆಳಕಿನ ಬತ್ತಿ ಸತ್ತುಹೋಗದೆ ಇದ್ದೀತೇ? ಒಳಗೆಲ್ಲ ಆವರಿಸಿದ ಕತ್ತಲೆಯನ್ನೇ ಬೆಳಕೆಂದು ಭ್ರಮಿಸಿ ಬಾಯಿತುಂಬ ಉಪದೇಶ ಮಾಡ ಹೊರಟರೆ ಮನುಷ್ಯನ ಸಂಬಂಧಗಳಿಗೆ ಬೆಲೆ ಬಂದೀತೆ ? ನಾನು ಮೊದಲಿನಿಂದಲೂ ಮನುಷ್ಯ ಸಂಬಂಧಗಳಲ್ಲಿ ನಂಬಿಕೆಯುಳ್ಳವನು; ನಿಷ್ಠೆಯುಳ್ಳವನು. ನನ್ನ ನಿಲುವುಗಳನ್ನು ಮನುಷ್ಯ ಸಂಬಂಧಗಳ ಶುದ್ಧ ಸಂವೇದನೆಯಲ್ಲಿ ಅದ್ದಿ ತೆಗೆದು ಅಭಿವ್ಯಕ್ತಪಡಿಸುವ ಬಯಕೆಯುಳ್ಳವನು. ಆದರೆ ಇಂದು ಮನುಷ್ಯ ಸಂಬಂಧಗಳಿಗೆ ಕೊಳ್ಳಿ ಬಿದ್ದ ಅನುಭವವಾಗುತ್ತಿದೆ. ನಂಬಿಕೆಯ ನೆಲದಲ್ಲಿ ಭೂಕಂಪ ಸಂಭವಿಸುತ್ತಿದೆ. ಸಂಚುಗಳ ಸಾಮ್ರಾಜ್ಯದಲ್ಲಿ ಸಜ್ಜನಿಕೆ ತತ್ತರಿಸುತ್ತಿದೆ. ಆದರೆ ಈ ಅನುಭವ ಮತ್ತು ಅಭಿಪ್ರಾಯ ಅಂತಿಮವಲ್ಲ ಎಂಬುದನ್ನು ಜ್ಞಾಪಿಸುವಂತೆ ಸ್ನೇಹ ಸಂಬಂಧದ ಸಣ್ಣಪುಟ್ಟ ಉದಾಹರಣೆಗಳೂ ಕಾಣಿಸುತ್ತಿವೆ. ಇದಕ್ಕೆ ನನ್ನದೇ ಒಂದು ಉದಾಹರಣೆ ಕೊಡಬಯಸುತ್ತೇನೆ.

ಕೆಲವು ತಿಂಗಳ ಹಿಂದೆ ನನ್ನ ಚಿಕ್ಕ ಮಗ ಸ್ಪೂರ್ತಿಗೆ ಪಾರ್ಶ್ವವಾಯು ಬಡಿಯಿತು. ಅದು ನಮಗೆಲ್ಲ ಬಡಿದಂಥ ಕ್ರೂರ ಅನುಭವ ಕೊಟ್ಟಿತು. ಜಂಘಾಬಲ ಉಡುಗಿತು ಎಂಬ ಮಾತು ಕ್ಲೀಷೆಯಲ್ಲ ಎಂದು ತಿಳಿಯಲು ಆ ದಿನದ ನನ್ನ ಮತ್ತು ನನ್ನ ಕುಟುಂಬದ ಪರಿಸ್ಥಿತಿಯನ್ನು ನೋಡಬೇಕಿತ್ತು. ಸಾಕಷ್ಟು ಸಾಲ ಸಂಕಷ್ಟಗಳಲ್ಲಿ ಸಿಕ್ಕಿರುವ ನನಗೆ ಅಂದು ಒದಗಿದ ಆರ್ಥಿಕ ಸಹಾಯ ಮತ್ತು ನೈತಿಕ ಬೆಂಬಲವನ್ನು ಜ್ಞಾಪಿಸಿಕೊಂಡು ನನಗೆ ಈಗಲೂ ಹೆಮ್ಮೆಯೆನಿಸುತ್ತದೆ; ಈ ಸಮಾಜದಲ್ಲಿ ಇನ್ನಷ್ಟು ದಿನ ಬದುಕುವ ಆಸೆ ಬಲವಾಗುತ್ತದೆ. ನನ್ನ ಮಗನ ಸ್ಥಿತಿ ತಿಳಿದವರೆಲ್ಲ ಮಕ್ಕಳ ಮನಸ್ಸು ಹೊತ್ತು ಆಸ್ಪತ್ರೆಗೆ ಬಂದರು. ನನ್ನ ಮಗ ನನ್ನಷ್ಟೇ ಅಲ್ಲ, ನನ್ನನ್ನು ನನ್ನ ಕುಟುಂಬವನ್ನೂ ಮಕ್ಕಳಂತೆ ಕಂಡರು. ಇಡೀ ವಾತಾವರಣ ಮಗುವಾಗತೊಡಗಿತು; ಮುಗ್ಧವಾಗತೊಡಗಿತು. ಕೆಲವರ ಕಣ್ಣಲ್ಲಿ ಹನಿಗಳು ಅರ್ಥ ಬರೆದವು. ಇನ್ನು ಕೆಲವರು ಕೈಯಲ್ಲಿ ಹಣ ಇಡುತ್ತ ಅರ್ಥ ತುಂಬಿದರು; ಮತ್ತೆ ಕೆಲವರು ಸಾಂತ್ವನದಲ್ಲಿ ಸಂಬಂಧದ ಸೂಕ್ಷ್ಮವನ್ನು ಸ್ಥಾಪಿಸಿದರು. ಹೀಗೆ ನೂರಾರು ಜನರ ಸದಾಶಯಗಳೇ ನಮಗೆ ಸ್ಥೈರ್‍ಯ ಕೊಟ್ಟವು. ಅಂದು ಹಾಸಿಗೆ ಹಿಡಿದಿದ್ದ ನನ್ನ ಮಗ ಇಂದು ಆನಂದವಾಗಿದ್ದಾನೆ. ಸಂಪೂರ್ಣ ಚೇತರಿಸಿಕೊಂಡಿರುವ ಆತನ ಕ್ರಿಯಾಶೀಲತೆಯನ್ನು ಕಂಡಾಗಲೆಲ್ಲ ಸ್ನೇಹಿತರು ತೋರಿದ ಮನುಷ್ಯ ಸಂಬಂಧದ ಮಗುತನ ನೆನಪಿಗೆ ಬಂದು ನಾನೂ ಮಗುವಾಗುತ್ತೇನೆ. ಕಣ್ಣಲ್ಲಿ ತೇವ ತುಂಬಿಕೊಳ್ಳುತ್ತೇನೆ.

ಮಗುತನವೆನ್ನುವುದು ಮುಗ್ಧತೆ ಮಾತ್ರವಲ್ಲ. ಕಪಟತನವಿಲ್ಲದ, ಅಹಂಕಾರ-ಅಟ್ಟಹಾಸಗಳಿಲ್ಲದ ಸರಳ-ನೇರ ನಡೆನುಡಿಯ ನೆಲೆಯೇ ಮಗುತನವಾಗಿ ನನ್ನ ಕಣ್ಮುಂದೆ ನಿಲ್ಲುತ್ತದೆ. ಇಂಥ ಮಗುತನದಲ್ಲಿ ಕಾಣಿಸಿಕೊಳ್ಳುವ ಕೀಟಲೆಯಂತೆ ಕುತಂತ್ರವಾಗುವುದಿಲ್ಲ; ಸಂಭ್ರಮದ ಸುಡುಹನಿಯಾಗುತ್ತದೆ. ಹೀಗೆ ಬರೆಯುವಾಗ ನನ್ನ ಮಕ್ಕಳದೇ ಮತ್ತೊಂದು ಪ್ರಸಂಗ ನೆನಪಿಗೆ ಬರುತ್ತಿದೆ.

ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿ ನಾಮಕರಣ ಗೊಳ್ಳಲಿರುವ ಸುದ್ಧಿ ಪ್ರಕಟವಾದ ದಿನ; ಅಂದು ಬೆಳ್ಳಂಬೆಳಗ್ಗೆಯೇ ಜಡಿಮಳೆ ಹಿಡಿದಿತ್ತು. ಎಂಟು ಗಂಟೆಯಾದರೂ ದಿನಪತ್ರಿಕೆ ಬಂದಿರಲಿಲ್ಲ. ನಾನು ಕೊಡೆ ಹಿಡಿದುಕೊಂಡು ಅಂಗಡಿಯಿಂದ ದಿನಪತ್ರಿಕೆ ತರಲು ಹೋದೆ. ಪತ್ರಿಕೆ ಸಮೇತ ವಾಪಸ್ ಬರುವ ವೇಳೆಗೆ ಮನೆಗೆ ಪತ್ರಿಕೆ ಬಂದಿತ್ತು. ಮುಖಪುಟದಲ್ಲೇ ಸುದ್ದಿ ಪ್ರಕಟವಾಗಿತ್ತು. ‘ಸಾಹಿತ್ಯಕ್ಕೆ ಬರಗೂರು- ಲಲಿತಕಲೆಗೆ ತಿಪ್ಪೇಸ್ವಾಮಿ’ ಎಂದು ದೊಡ್ಡದಾಗಿ ಶೀರ್ಷಿಕೆ ಕೊಡಲಾಗಿತ್ತು. ಇದನ್ನು ಓದಿಕೊಂಡು ನಾನು ಮನೆಯ ಮೆಟ್ಟಿಲು ಹತ್ತುತ್ತಿರುವಾಗಲೇ ನನ್ನ ಇಬ್ಬರು ಪುತ್ರರಾದ ಮೈತ್ರಿ ಮತ್ತು ಸ್ಫೂರ್ತಿ ಮುಸಿ ಮುಸಿ ನಗುತ್ತ ನಿಂತಿದ್ದಾರೆ. ಪತ್ನಿ ರಾಜಲಕ್ಷ್ಮಿ ನಗು ನುಂಗುತ್ತಾ ನಿಂತಿದ್ದು ಕಂಡು ಕುತೂಹಲದಿಂದ ಗೋಡೆಯ ಕಡೆ ನೋಡಿದೆ. ನನ್ನ ಮಕ್ಕಳು ದಿನಪತ್ರಿಕೆಯ ಶೀರ್ಷಿಕೆ ಯಲ್ಲಿದ್ದ ನನ್ನ ಮತ್ತು ತಿಪ್ಪೇಸ್ವಾಮಿ ಗಳ ಹೆಸರಿನಲ್ಲಿ ಅನುಕ್ರಮವಾಗಿ ‘ಗೂರು’ ಮತ್ತು ‘ಸ್ವಾಮಿ’ ಎಂಬುದನ್ನು ತೆಗೆದು ಉಳಿದದ್ದನ್ನು ಹಾಗೆಯೇ ಗೋಡೆಯ ಮೇಲೆ ಬರೆದಿದ್ದರು. ಅವರ ಇದ್ದಿಲು ಬರಹವನ್ನು ಓದಿದೆ: ‘ಸಾಹಿತ್ಯಕ್ಕೆ ಬರ-ಲಲಿತ ಕಲೆಗೆ ತಿಪ್ಪೆ’. ಎಂಥ ಹಾಸ್ಯ ಅಥವಾ ವಿಡಂಬನೆ ಎನ್ನಿಸಿತು! ಅವರ ಮಗುತನದಲ್ಲಿ ಹುಟ್ಟಿದ ಈ ಕೀಟಲೆ ಖಂಡಿತ ಕುತಂತ್ರದ್ದಾಗಿರಲು ಸಾಧ್ಯವಿಲ್ಲ. ಅವರ ನಗುವಿನಲ್ಲಿ ನಾನೂ ಸೇರಿಕೊಂಡೆ. ಆದರೆ ಅವರ ಗೋಡೆಯ ಬರಹವನ್ನು ಮನಸ್ಸಿನ ತುಂಬಾ ತುಂಬಿಕೊಂಡೆ. ಅಕಾಡೆಮಿಯಲ್ಲೂ ಸಾಹಿತ್ಯಕ್ಕೆ ಬರ ಬರಬಾರದು; ನನ್ನಲ್ಲಿ ಸಾಹಿತ್ಯದ ಬರ ಕಾಣಬಾರದು ಎಂದು ನಿಶ್ಚಯಿಸಿದೆ. ಅದರಂತೆ ಕ್ರಿಯಾಶೀಲನಾದೆ.

ಹೀಗೆ ಕ್ರಿಯಾಶೀಲಗೊಳಿಸುವ ಮಗುತನದ ಕೀಟಲೆ ನಮಗೆ ಬೇಕೆ ಹೊರತು ಕುತಂತ್ರದ ಕೀಟಲೆಯಲ್ಲ. ಹಾಗೆ ನೋಡಿದರೆ ಮಗುತನದಲ್ಲಿ ಕಾಣಿಸಿಕೊಳ್ಳುವ ಕೀಟಲೆ ಪೂರ್ಣಾರ್ಥದಲ್ಲಿ ಕೀಟಲೆ ಅಲ್ಲ. ಯಾಕೆಂದರೆ ಅದು ನಮ್ಮನ್ನು ನೋಯಿಸುವುದಿಲ್ಲ. ಸಂಚುಗಳ ಮೂಲಕ ನುಂಗಿ ನೀರು ಕುಡಿಯುವುದಿಲ್ಲ. ಅಧಃಪಾತಾಳಕ್ಕೆ ತಳ್ಳಿ ಆನಂದ ಪಡುವುದಿಲ್ಲ. ಆದರೆ ದೊಡ್ಡವರೆನಿಸಿಕೊಂಡವರು ಮಾಡುವ ಕೀಟಲೆಗಳಿಗೆ ಕತ್ತು ಕೊಯ್ಯುವ ಕ್ರೌರ್ಯ ಇರಲು ಸಾಧ್ಯ; ಆಗದವರ ಅವನತಿಯಲ್ಲಿ ಅವರು ಆನಂದಪಡಲು ಸಾಧ್ಯ.

ಈ ಮಾತುಗಳನ್ನು ಬರೆಯುತ್ತಿರುವಾಗ ನನಗೆ ನಿಜಕ್ಕೂ ಸಂಕಟವಾಗುತ್ತದೆ. ಮನುಷ್ಯರಲ್ಲಿರುವ ‘ಮಗು’ ಕಳೆದುಹೋಗುತ್ತಲೇ ಇದ್ದರೆ ಮಗುವಾಗಿರಬಯಸುವ ನನ್ನಂಥ ಜನರು ಬದುಕುಳಿಯಲು ಸಾಧ್ಯವೆ ಎಂದು ನಡುಕ ಹುಟ್ಟುತ್ತದೆ; ಸುತ್ತೆಲ್ಲ ಹಬ್ಬಿರುವ ಸಮಾಜದಲ್ಲಿ ಮಗು ಕಳೆದು ಹೋಗುತ್ತಿರುವ ಕಳವಳ ಕಾಡುತ್ತದೆ. ಆದರೆ ನಿರಾಶೆಯನ್ನು ಹತಾಶೆ ಯಾಗಿಸಿಕೊಳ್ಳದೆ ಕಂಡ ಕಂಡವರನ್ನೆಲ್ಲ ಕೇಳಬಯಸುತ್ತೇನೆ :

‘ದಯವಿಟ್ಟು ಮಗುವನ್ನು ಹುಡುಕಿಕೊಡಿ.’

ಯಾರಾದರೂ ಮನುಷ್ಯರು ಮಗುವನ್ನು ಹುಡುಕಿ ಕೊಡಬಲ್ಲಿರಾ? ಅಥವಾ ಹುಡುಕಿಕೊಳ್ಳಬಲ್ಲಿರಾ?
*****
೦೪-೦೯-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಜಾವದಲ್ಲಿ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩

ಸಣ್ಣ ಕತೆ

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys