ಮರೆವಿನ ಮೋಹದಲ್ಲಿ

ಮರೆವಿನ ಮೋಹದಲ್ಲಿ

ಮರೆವಿಗೂ ನನಗೂ ಬಹು ಹಿಂದಿನಿಂದ ನಂಟು ಅಂಟಿಕೊಂಡು ಬಂದಿದೆ. ಮರೆವು ಅಂದರೆ ಇಲ್ಲಿ ಅರವತ್ತರ ಅರಳು ಮರಳೂ ಅಲ್ಲ; ನಿಜದ ನೆನಹನ್ನು ಮರೆತು, ನಿಂತ ಪಾರಮಾರ್ಥಿಕ ಮರೆವೂ ಅಲ್ಲ. ಜೀವನವನ್ನು ಎದುರಿಸುಲಿಕ್ಕಾಗದೆ, ಮರೆವಿನ ವಿಶಾಲ ಬಾಹುವಿನಲ್ಲಿ ಆಶ್ರಯ ಪಡೆಯಲೆತ್ತಿಸುವ ಪಲಾಯನವಾದಿಯ ಮರೆವಂತೂ ಮೊದಲೇ ಅಲ್ಲ. ದಿನದಿನವೂ ತಪ್ಪದೆ ತೀಡುತ್ತಿರುವ ಅಕ್ಷರಗಳವು. ಆ ಶಬ್ದದ ಲಾವಣ್ಯಕ್ಕೆ ನಯ ನಾಜೊಕಿಗೆ ನಾನು ಮರುಳಾಗಿಬಿಟ್ಟಿದ್ದೇನೆ. ಕೆಲ ಶಬ್ಧಗಳು ತಮ್ಮ ಕರ್ಕಶತೆಯಿಂದ ನನ್ನನ್ನು ಘಾಸಿಗೊಳಿಸಿದರೆ, ಇನ್ನುಳಿದ ಕೆಲವು ತಮ್ಮ ಮಾಧುರ್ಯದಿಂದ ನನ್ನ ಆತ್ಮದ ಗಾಯವನ್ನು ಮಾಯಿಸಿಯೂಬಿಟ್ಟವೆ. ಅಂಥ ಶಬ್ದಗಳಲ್ಲಿ ಮರೆವು ನನ್ನನ್ನು ತನ್ನ ಮಂತ್ರ ಮೋಡಿಯಿಂದ ಮಾಯಾ ಪ್ರಪಂಚಕ್ಕೆ ಸಾಗಿಸಿಬಿಟ್ಟದೆ. ತನ್ನ ನಿಲುವಿಗೆ ತಾನೇ ನಾಚಿಕೊಂಡು ನಿಂತ ವಧುವಿನಂತಿದೆ ಅ ಮಾತಿನ ರೀತಿ.

ಮರೆವಿನಷ್ಟು ಸುಲಭ ಮತ್ತು ಸುಂದರವಾದ ವಸ್ತು ಈ ಜಗತ್ತಿನಲ್ಲಿ ಮತ್ತೊಂದು ಇರಲಿಕ್ಕಿಲ್ಲವೆಂದು ನನ್ನ ಅನಿಸಿಕೆ. ಅದು ಮನುಷ್ಯನ ಉಸಿರಾಟದಷ್ಟು ಸುಲಭ. ಉಸಿರುಗಟ್ಟುವ ವಾತಾವರಣದಲ್ಲಿಯೂ ಪ್ರಯಾಸದಿಂದ ಉಸಿರಾಡಿಸಿ ಬದುಕಬಲ್ಲ ಶಕ್ತಿಯನ್ನು ಪಡೆದಿರುವಂತೆ, ಅರುವಿನ ಅವಕಾಶವಿದ್ದಾಗಲೂ ಮರೆವಿನ ಮಾಯೆಯಲ್ಲಿಯೇ ಮರೆಯಾಗಿ ಬಿಡುತ್ತಾನೆ. ಅರುವಿನ ಸಾಮಾನ್ಯತೆ ವರ್ಣವಿಹೀನತೆಗಳ ವಿರುದ್ಧ ಬಣ್ಣ ಬಣ್ಣದ ಮರೆವು ಹೋರಾಟಕ್ಕೆ ನಿಂತ ಕಥೆಯೇ ಜೀವನ. ಮರೆವಿನ ಪಾಸ್ ಪೋರ್ಟನ್ನು ಪಡೆದು ಭೂವಲಯದ ಪ್ರವಾಸ ಕೈಕೊಂಡ ಮನುಷ್ಯರು ದಾಟುವ ಮೈಲುಗಲ್ಲುಗಳೆಂದರೆ ಅಜ್ಞಾನ, ಅವಿವೇಕ, ಅಹಂಕಾರ, ಅವಿಚಾರಗಳೇ ಆಗಿವೆ. ತಾನೆಲ್ಲಿಂದ ಬಂದೆ, ಎಲ್ಲಿಗೆ ಹೊರಟಿದ್ದೇನೆ. ಎನ್ನುವ ಮಾತು ಅವನಿಗೆ ತಿಳಿಯದು. ಹಿಂದಿನ ಮರೆಯುವಿಕೆ ಮುಂದಿನ ಅಜ್ಞಾನಗಳ ನಡುವಿನ ಕತ್ತಲೆಯೇ ವರ್ತಮಾನ ಕಾಲ.

ಒಂದು ಕ್ಷಣ ಮರೆವಿನ ಮಂಜಿನಿಂದ ಸರಿದು ಈ ಕಡೆ ಕಣ್ಣು ಹೊರಳಿಸಿ ನೋಡಿ; ಮರೆವಿನ ಧ್ವಜವನ್ನೇ ಪತಾಕೆಯನ್ನೇ ಹಚ್ಚಿಕೊಂಡು ಮಾನವ ಈ ಲೋಕವನ್ನು ಪ್ರವೇಶಿಸುತ್ತಾನೆ. ಮಗುವಿನ ಮೊಗದಲ್ಲಿ ಅರಳಿದ ನಗು ಮಲ್ಲಿಗೆಯಲ್ಲಿ ಮರುವಿನ ಪರಿಮಳ ಸೂಸಿದೆ. ದಿವ್ಯ ಲೋಕದಿಂದ ಅವತರಿಸಿ ಬಂದ ಶಿಶು ಅರುವಿನ ಒಂದೊಂದೇ ವಸ್ತುವನ್ನು ಕಳಚಿ ಮರೆವಿನ ಸಮವಸ್ತ್ರವನ್ನು ಈ ಲೋಕದ ರೂಢಿಗನುಸಾರವಾಗಿ ಧರಿಸುತ್ತಾನೆ. ತನ್ನ ದಿವ್ಯತ್ವದ ಹಿನ್ನೆಲೆಯನ್ನಾಗಲಿ, ಭವ್ಯನಾಡಿನ ನಾಗರಿಕತೆಯನ್ನಾಗಲಿ ಸಂಪೂರ್ಣ ಮರೆತು, ಅವಕ್ಕೆ ದೀರ್ಘಕಾಲದ ವಿದಾಯ ತಕ್ಕೊಂಡು ಹೊಸನಾಡಿಗೆ ಬಂದ ಈ ವಿಶ್ವಪ್ರವಾಸಿ ಇಲ್ಲಿಯ ನಡೆ-ನುಡಿ ಆಚಾರ-ವಿಚಾರಗಳನ್ನೆಲ್ಲ ಅಳವಡಿಸಿಕೊಳ್ಳುತ್ತಾನೆ.

ಮರೆವು ಮಾನವನ ಅಭೀಷ್ಟ, ದೇವನ ವರಪ್ರದಾನ. ಮಾನವನು ತನ್ನ ಉಗಮಸಾನವನ್ನು ಮರೆತಿದ್ದು ತಾನು ಪ್ರವೇಶಿಸಿದ ನಾಡಿನ ಭೂವಲಯದಲ್ಲಿ ಚೆನ್ನಾದ ಬಾಳನ್ನು ಬಾಳಬೇಕೆಂದು ದೇವರು ಭೂವಲಯವನ್ನು ಸುಂದರ ವಸ್ತುಗಳಿಂದ ತುಂಬಿದ್ದಾನೆಂದು ವರ್ಡ್ಸ್ ವರ್ತ್ ನು ಹೇಳಿಕೊಂಡಿದ್ದಾನೆ. ಆದ್ಯಂತಗಳಿಲ್ಲದ ನಿರಭ್ರ ಆಕಾಶಪಿತ, ಫಲ ಪುಷ್ಪಗಳನ್ನು ಧರಿಸಿದ ಭೂಮಾತೆ, ಇವರ ಪುತ್ರನೆ ಮಹಾ ಮಹಿಮಾಶಾಲಿಯಾದ ಮಾನವ. ಅವನ ಮಹಿಮೆಯಲಿ ಬಹುಪಾಲಿನಷ್ಟು ಭಾಗ ಮರೆವಿನಿಂದಲೇ ಬಂದದ್ದು. ಗಂಗೋತ್ರಿಯಲ್ಲಿ ಉಗಮಗೊಂಡು ಗಂಗೆ ಬೆಟ್ಟ ಕೊಳ್ಳಗಳನ್ನು ದಾಟಿ ಹಿಮಾಲಯದ ದಕ್ಷಿಣಕ್ಕಿರುವ ವಿಶಾಲ ಭಾಗವನ್ನು ಫಲವತ್ತಾಗಿ ಮಾಡುವಂತೆ ದಿವ್ಯ ಉಗಮದಿಂದ ಪ್ಲಾವಿತಗೊಂಡು ಬಂದ ಮರೆವು ಮಾನವನ ಜೀವನವನ್ನು ಬಣ್ಣಗಾರಿಕೆಯಿಂದ ಅದ್ದಿ ತೆಗೆಯುತ್ತದೆ. ಅವರವರ ಪುಣ್ಯದ ಅಳತೆಗನುಸಾರವಾಗಿ ಮರೆವಿನ ಕೃಪೆಗೆ ಪಾತ್ರರಾದರವಲ್ಲಿ ನಾನೂ ಒಬ್ಬ.

ಬೆಳೆಯುವ ಮೊಳಕೆಗೆ ಮುಂದಿನ ಫಲದ ಭವಿಷ್ಯವನ್ನು ಹೇಳಲು ಸಾಧ್ಯವಿರುವಂತೆ, ನನ್ನ ಬಾಲ್ಯವು ವ್ಯಕ್ತಿತ್ವದ ತಳಪಾಯವನ್ನು ಹಾಕಿದೆ. ನಾನು ಮಾಡಿದ ಕೃಷ್ಣನ ಬಾಲಲೀಲೆಗೇನೂ ಕೊರತೆಯಿಲ್ಲ. ನನ್ನ ಬಾಲ್ಯವೊಂದು ಮರೆವಿನ ಜೊತೆ ಆಡಿದ ಕಣ್ಣುಮುಚ್ಚಾಲೆ. ಅವ್ವನ ಮೊಲೆಹಾಲನ್ನು ಕುಡಿಯುತ್ತಿರುವಾಗ ಚೇಷ್ಟೆಗೆಂದು ಯಾರಾದರೂ “ನಿಮ್ಮ ಅವ್ವ ಊರಿಗೆ ಹೋದಳಲ್ಲೋ ನಿನ್ನ ಬಿಟ್ಟು” ಎಂದಾಗ ಅವ್ವನ ತೊಡೆಯ ಮೇಲೆಯೇ ಹಾಯಾಗಿ ಕುಳಿತೇ ಅವಳಿಗಾಗಿ ಶಂಖಕುಟ್ಟಿ ಗುಡುಗು ಸಿಡಿಲುಗಳ ಮಳೆಗರೆದ ದಿನಗಳೂ ಇದ್ದವು. ಊಟಕ್ಕೆ ಕುಳಿತು ಏನನ್ನೋ ದಿಟ್ಟಿಸಿ ನೋಡುತ್ತಿದ್ದಾಗ ನನ್ನ ಎದುರಿನ ಊಟದ ತಟ್ಟೆಯನ್ನೆ ಎತ್ತಿ ಇಟ್ಟು ನಾನು ಅಳುತ್ತಿರುವದನ್ನು ಕಂಡಂತೆಲ್ಲ ನಗುವಿನಲ್ಲಿ ಮರೆತುಬಿಡುತ್ತಿದ್ದರು.ನನ್ನ ಸೋದರ ಮಾವಂದಿರು, ಈಗಲಾದರೂ ಊಟದ ತಟ್ಟೆಯಲ್ಲಿ ಬಾಯಾಡಿಸಿಕೊಳ್ಳಲು ಇಟ್ಟ ಹಪ್ಪಳ, ಸಂಡಿಗೆ ಉಪಿನಕಾಯಿ ಇವು ಇದ್ದ ಸ್ಥಿತಿಯಲ್ಲಿಯೇ ಉಳಿದುಬಿಡುತ್ತವೆ. ಹೀಗೆಂದು ಊಟದ ಬಗ್ಗೆ, ತಿಂಡಿ ತಿನಿಸುಗಳ ಬಗ್ಗೆ ನಿರ್ಲಿಪ್ತತೆಯಿದೆಯೆಂದು ನನಗೇನೂ ಅನಿಸಿಲ್ಲ. ಊಟದ ಬಗ್ಗೆ ನನಗಿರುವ ವ್ಯಾಮೋಹ ಯಾವ ಬಕಾಸುರನಿಗೂ ಇರಲಿಕ್ಕಿಲ್ಲ. ಒಂದು ಊಟದ ಮುಕ್ತಾಯ, ಇನ್ನೊಂದು ಊಟದ ಪ್ರಾರಂಭ, ಇವೆರಡರ ನಡುವಿನ ಆವಧಿಯಲ್ಲಿ ಊಟದ ತಟ್ಟೆಯ ಮೇಲೆಯೇ ಮನಸ್ಸು ಸುಳಿದಾಡುತ್ತಿರುತ್ತದೆ. ಇಲ್ಲಿ ಸ್ಪಷ್ಟವಾಗಿ ಕಂಡುಬರುವುದೇನೆಂದರೆ, ಮರೆವು ನನ್ನ ವ್ಯಕ್ತಿತ್ವವನ್ನೆಲ್ಲ ವ್ಯಾಪಿಸಿ ಈ ರೀತಿಯ ಪರಿಣಾಮ ಮಾಡುತ್ತದೆ.

ನಿಜ ಹೇಳಬೇಕೆಂದರೆ ನಾನು ಇಟ್ಟ ಸಾಮಾನು ಅದೇ ಕ್ಷಣದಲ್ಲಿ ನೆನಪಿರುವುದಿಲ್ಲ. ಅದೆಲ್ಲವನ್ನು ಅಸ್ತವ್ಯಸ್ತಗೊಳಿಸಿ ಚಿಂದಿ ಚೂರು ಪಾಲು ಮಾಡಿದಾಗ ನಾನು ಹುಡುಕುತ್ತಿರುವ ವಸ್ತು, ‘ಅರಸುತಿಹ ಲತೆ ಕಾಲ್ತೊಡಕುವಂತೆ’ ಸಿಗುತ್ತದೆ, ಮುಗಳ್ನಗೆ ಬೀರುತ್ತದೆ. ಬಾಗಿಲು ಸಂದಿನಲ್ಲಿ ಇಟ್ಟ ಬೀಗದ ಕೈಯನ್ನು ಇಡಿಯ ದಿನ ಹುಡುಕಿ ಬಾಗಿಲನ್ನು ಮುರಿದಾಗ ಸಿಕ್ಕಿತು! ಟೂಥ್ ಬ್ರಷ್ ನ್ನು ಹೊಸದಾಗಿ ಖರೀದಿ ಮಾಡಿದ ಹೊಸ ಹುಮ್ಮಸ್ಸಿನಲ್ಲಿ ಜೋರಾಗಿ ಹಲ್ಲಿನಿಂದ ರಕ್ತ ಬರುವಂತೆ ತಿಕ್ಕುತ್ತಿದ್ದ ನಾನು ಅದನ್ನು ಕಳೆದುಕೊಂಡೆ. ಎಂಥ ಹಾನಿಯದು! ನನ್ನ ಮರೆವುಗೇಡಿತನಕ್ಕೆ ನಾನೆ ಶಪಿಸಿಕೊಳ್ಳುತ್ತಿರುವಾಗ ಬಾವಿಯ ಮೇಲೆ ವಿಶಾಲವಾಗಿ ಹಬ್ಬಿದ ಗಿಡದ ಟೊಂಗೆಗೆ ದಿವ್ಯಹಸ್ತದಂತೆ ಚಾಚಿಕೊಂಡಿತು. ಹೀಗೆ ಮರೆವಿನ ಜೊತೆ ನನ್ನ ಸಂಬಂಧ ಅನೂಚಾನವಾಗಿ ಬಂದಿದೆ.

ಮರೆವಿನ ಶಿಶುವೋ ಎಂಬಂತಿರುವ, ಸಂದರ್ಭೋಚಿತವಾಗಿ ಉತ್ತರ ಕೊಡಬಲ್ಲ. ಪ್ರಸಂಗೋಚಿತ ಮಾತಿನ ಅಭಾವ ನನ್ನಲ್ಲಿದೆ. ನಾನು ಮರೆಗುಳಿ ಎಂದು ಹೇಳಿಕೊಳ್ಳುವಲ್ಲಿ ಯಾವ ಆತ್ಮ-ಅನುಕಂಪವೂ ಇಲ್ಲದಿದ್ದರೂ ನನ್ನ ಮಂದಬುದ್ದಿಯ ದ್ಯೋತಕವೋ ಎನ್ನುವಂತಿರುವ ಸಂದರ್ಭೋಚಿತ ಮಾತಿಗೆ ಪ್ರತ್ಯುತ್ತರ ಕೊಡಲು ಅಸಮರ್ಥನಾಗಿ ನಾನೆಷ್ಟೋ ಸಲ ಸೋತಿದ್ದೇನೆ. ಗೋಮುಖವ್ಯಾಘ್ರರ ಬಾಯಲ್ಲಿ ಹಿತವನ್ನು ಬಯಸಿ ಕೃತಿಯಲ್ಲಿ ಬೇರೊಂದನ್ನು ಮಾಡುವ ಜನರ ಕೂರ್ಬಾಣಗಳಿಗೆ ಸರಿದೂಗುವ ಕವಚವನ್ನು, ಶಿರಸ್ತ್ರಾಣವನ್ನು ಧರಿಸಿಲ್ಲ ನಾನು. “ಹೊತ್ತಿಗೊದಗಿದ ಮಾತು ಸತ್ತವನು ಎದ್ದಂತೆ” ಎಂದ ಸರ್ವಜ್ಞ ನನ್ನಂಥವರಿಗೆ ಅಣಕು ಮಾಡಲೋಸುಗವೇ ಬರೆದಂತೆ ಕಾಣುತ್ತದೆ. ಚುರುಕಾದ ನುಡಿ, ವ್ಯಂಗ್ಯ ಕುಹಕ ಶಬ್ದ, ಗೂಳಿಯಂತೆ ಮೈಮೇಲೆ ಏರಿಬಂದು ಮನದ ಸುಂದರ ಹೂದೋಟವನ್ನೆಲ್ಲ ತುಳಿದಾಡಿಬಿಡುವ ಹುಂಬ ಮಾತು, ಅಣಕು ನುಡಿಗಳಿಗೆಲ್ಲ ಸರಿಯಾದ ಉತ್ತರ ಕೊಡಲರಿಯದೆ ಮೌನ ಧರಿಸುತ್ತೇನೆ; ನೋವನ್ನು ಅನುಭವಿಸುತ್ತೇನೆ. ಕ್ಷಣ ದಾಟಿದಾಗ ಹೊಳೆಯುತ್ತದೆ. ಆಗ ಎಲ್ಲವೂ ಬರಿದೋ ಬರಿದು-ತೆರವೋ ತೆರವು.

ಹದಿನೆಂಟನೆಯ ಶತಮಾನದ ಇಂಗ್ಲಂಡಿನಲ್ಲಿ ಮಾತುಗಾರಿಕೆಗೆ, ಸಂಭಾಷಣಾ ಬಾತುರ್ಯಕ್ಕೆ ಹೆಚ್ಚಿನ ಗೌರವ ಸಿಕ್ಕಿತ್ತು. ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಅಂಚಿನಲಿ ಕುಳಿತು ನಾನು ಅಂಥ ಗುಣಗಳಿಲ್ಲವೆಂದು ಕಳವಳಗೊಳ್ಳುತ್ತಿದ್ದೇನೆ. “Willing to wound but afraid to strike” ಎನ್ನುವ ಸ್ಥಿತಿಯೇ ನನಗೊದಗಿದೆ.

ಮರವು ಅಶಕ್ತಿಯ, ಮೆದುಳಿನ ತೂಕ ತಪ್ಪುವಿಕೆಯ, ವ್ಯಕ್ತಿಯ ಅವಸಾನ ಚಿಹ್ನೆಯ ಗುರುತು ಎಂದೇನೂ ನಾನು ಭಾವಿಸಿಲ್ಲ. ಮರೆವು ಲಂಗುಲಗಾಮು ಇಲ್ಲದ ಒಂದೇ ವಿಷಯದ ಮೇಲೆ ಕೇಂದ್ರೀಕೃತಗೊಳ್ಳದೆ ಬಿಡಾಡಿ ಮನದ, ಚಂಚಲ ಗುರಿಗೆಟ್ಟ ಸಾರಾಸಾರವಿಲ್ಲದೆ ಅಲೆಯುವ ಮನದ, ವಿಭಜನೆಗೊಂಡ ಹೃದಯದ, ದಾರಿದೀಪವಿಲ್ಲದ ಕುರುಡು ಜೀವನದ ದ್ಯೋತಕವೆಂದು ಮಾತ್ರ ಇಟ್ಟುಕೊಳ್ಳಬಹುದು. ಮನುಷ್ಯನು ಎಷ್ಟೇ ಮರೆಗುಳಿಯಾದರೂ ತನ್ನ ಹೆಸರನ್ನು ಎಂದಾದರೂ ಮರೆಯುವ ಸಂಭವವಿದೆಯೇ ? ಕಾರಣವೇನೆಂದರೆ-ಮನುಷ್ಯನು ತನ್ನನ್ನು ತಾನು ಪ್ರೀತಿಸುವಷ್ಟು ಇನ್ನಾರನ್ನೂ ಪ್ರೀತಿಸಲಾರ. ಪ್ರೀತಿಗೆ ಪಾತ್ರವಾದ ವಸ್ತುವು ಚಂಚಲ ಮನಸ್ಸನ್ನು ಈಲುಗೊಳಿಸಿ ತನ್ನೆಡೆಗೆ ಬಲವಾಗಿ ಎಳೆದುಕೊಳ್ಳುತ್ತದೆ. ಹೀಗೆಂದು ಮರೆವು ಎಂದರೆ ಚಂಚಲಮನದ ಶಿಶುವಲ್ಲದೆ ಮತ್ತೇನೂ ಅಲ್ಲ.

ಇಂಥ ಮರೆವು ನೆನಪಿನ, ಅರಿವಿನ ವೈರಿಯಾಗಿ ನಿಲ್ಲುತ್ತದೆ. ಮರೆವು ತನ್ನ ಇರುವಿನ ಬಗೆಗೇನೇ ನಾಚಿ ತಲೆತಗ್ಗಿಸಿದರೆ ಅರಿವು-ಅಹಂಕಾರದ ಔದ್ಧತ್ಯದಲ್ಲಿ ತನ್ನನ್ನು ತಾನು ಇಂದ್ರ, ಚಂದ್ರನೆಂದು ಭಾವಿಸುತ್ತಿದೆ. ಒಂದು ಚಂದ್ರನ ಬೆಳಕಿನಂತೆ ಆಹ್ಲಾದಕರ; ಇನ್ನೊಂದು ಸೂರ್ಯಪ್ರಕಾಶದಂತೆ ತೀಕ್ಷ್ಣ, ಕ್ರೂರ, ಮರೆವು ಇದ್ದ ಮನುಷ್ಯ ಅರಿವಿನ ವ್ಯಕ್ತಿಯೊಡನೆ ಗೆಳೆತನ ಇಟ್ಟುಕೊಳ್ಳಲಾರ. ಎಂದು ಭೇದಭಾವ ಪ್ರವೇಶಿಸುವದೋ ಅಂದು ಗೆಳೆತನ ಪಲಾಯನ ಹೇಳುತ್ತದೆ. ಮರೆವು ಇದ್ದ ವ್ಯಕ್ತಿ ಒಳ್ಳೆಯ ಸುಖ, ಗೆಳೆಯ ನಂಬಿಗಸ್ತ ವ್ಯಕ್ತಿಯಾಗುತ್ತಾನೆ. ಅವನಿಗೆ ತನ್ನ ಕೊರತೆಗಳ ಬಗ್ಗೆ ಪೂರ್ತಿ ಅರಿವು ಇರುತ್ತದೆ. ಎರಡನೆಯವರ ಕುಂದುಕೊರತೆಗಳ ಮೇಲೆ ಹಾರಿಬೀಳುವ ರಾಕ್ಷಸೀಗುಣವು ಅವನಲ್ಲಿ ಇರುವುದಿಲ್ಲ. ಯಾರಾದರೂ ನುಡಿದ ಮಾತುಗಳನ್ನಾಗಲಿ, ಮಾಡಿದ ಕೃತಿಗಳನ್ನಾಗಲಿ-ಈ ಕಿವಿಯಿಂದ ಆ ಕಿವಿಗೆ ಹಾರಿಸಿ, ಕಂಡೂಕಾಣದಂತೆ ನಿಶ್ಚಿಂತೆಯ ಉಸಿರುಬಿಡುತ್ತಾನೆ. ಜೀವನವೆಂದರೆ ಅವನಿಗೆ ವಿಶ್ರಾಮದ ಅವಧಿ. ಸದ್ದಿಲ್ಲ ಗದ್ದಲವಿಲ್ಲ; ಭೋರಾಟ ಚೀರಾಟಗಳಿಲ್ಲ. ತುಂಬಿ ಹರಿಯುವ ನದಿಯಂತೆ ಅವನ ಜೀವನ ನಿರಂತರವಾದ ನೆರಳಿನಲ್ಲಿ ಪ್ರಾರಂಭವಾಗಿ ಅದರಲ್ಲಿಯೇ ಮುಕ್ತಾಯಗೊಳ್ಳುತ್ತದೆ. ಭೂತಕಾಲದ ಭೂತ ಅವನ ಆತ್ಮದ ಮೇಲೆ ಮುತ್ತಿಗೆಯನ್ನು ಹಾಕುವುದಿಲ್ಲ. ಭವಿಷ್ಯತ್ತು ಆತನನ್ನು ನಕ್ಷತ್ರಗಳ ಮಾಧ್ಯ ನಿಲ್ಲಿಸುವುದಿಲ್ಲ. ಆತನ ಕಾಲ ಭದ್ರವಾಗಿ ನೆಲದ ಮೇಲೆಯೇ ಊರಿಕೊಂಡಿರುತ್ತದೆ.

ಇನ್ನು ಅರಿವಿದೆಯಂಬ ಹುಮ್ಮಸ್ಸಿನಲ್ಲಿರುವ ವ್ಯಕ್ತಿಯು ಅಹಂಕಾರದ ಕಳ್ಳನ್ನು ಕುಡಿದಿರುತ್ತಾನೆ. ಮಾತು ಮಾತಿಗೂ ಸತ್ತು ಸ್ವರ್ಗವನ್ನು ಸೇರಿದ ಲೇಖಕರ ನುಡಿಗಳನ್ನು ಉದ್ಧೃತಗೊಳಿಸುತ್ತಾನೆ. ಕೇಳುವವರ ಅಭಿರುಚಿಯನ್ನು ಅರಿಯದೆ, ಭಾಷಣ ಕಟ್ಟುವ ಜನಾಂಗಕ್ಕೆ ಸೇರಿದವನೀತ. ಯಾರಾದರೂ ನುಡಿದ ಅಣುಕು ಗುಣಗಳನ್ನು ಮನಸಿನಲ್ಲಿಟ್ಟುಕೊಂಡು ಅವರ ಮೇಲೆ ದಾಳಿಮಾಡುವ ಶೂರನೀತ! ಇಂಥವರಿಗೆ ಸಾಮಾನ್ಯರನ್ನು ಕಂಡರೆ ಆಗದು. ಏನು ರೂಪ ಪಾಂಡಿತ್ಯ? ಕಣ್ಣ ಮೇಲೆ ಕನ್ನಡಕ, ಮನಸ್ಸಿನ ಮೇಲೆ ಹುಡಿ, ಆತ್ಮದ ಗೈರುಹಾಜರಿ, ತಲೆಗೂದಲಿನ ನಾಮಾವಶೇಷ. ಇಂಥವರ ಸಂಗ, ಹಾವಿನ ಸಂಗ ಒಂದೇ. ತಾವು ಸುಖದಲ್ಲಿರರು, ತಮ್ಮ ಸುತ್ತಮುತ್ತಲಿನವರನ್ನೂ ಸುಖದಲ್ಲಿಡದ ವ್ಯಕ್ತಿಗಳು ಇವರೇ. ಇವರ ಜೀವನ ನಾಲ್ಕು ಗೋಡೆಗಳ ನಡುವೆ ಪ್ರಾರಂಭವಾಗಿ, ಪುಸ್ತಕದ ಪ್ರಪಂಚದಲ್ಲಿಯೇ ಮುಂದುವರಿದು ಅಲ್ಲೇ ಮುಕ್ತಾಯಗೊಳ್ಳುತ್ತದೆ. ಅವರ ಮೆದುಳೊಂದು ಸ್ಟೋರು ರೂಮು. ಬುದ್ದಿ ಒಡಕಲು ಗಡಿಗೆ. ಮನಸ್ಸು ಹೊರಗಿನ ಗಾಳಿಯಾಡದ ಕತ್ತಲು ಕೋಣೆ.

ಜೀವನ ರೋಸಿ ಹೋದಾಗ, ಭಾವನೆಯು ಭಣಗುಟ್ಟುವಾಗ ಮರೆವಿನ ಮನುಷ್ಯನ ಭೆಟ್ಟಿಯು ಮನಸ್ಸಿಗೆ ತಂಪನ್ನೆರೆಯುತ್ತದೆ. ಸುಜ್ಞಾನಿಯೆಂದು ತಿಳಿದುಕೊಂಡ ವ್ಯಕ್ತಿಯ ಭೆಟ್ಟಿಯು ಮನಸ್ಸಿನ ಗಾಯದ ಮೇಲೆ ಉದುರಿಸಿದ ಕಾರದ ಪುಡಿಯಂತೆ ಉರುಪನ್ನು ಅಧಿಕಗೊಳಿಸುತ್ತದೆ.

ಮರೆವು ರಾಜಗಾಂಭೀರ್ಯದ ಗುಣಗಳಲ್ಲಿ ಒಂದಾಗಿದೆ. ಮರೆವು, ಆಲಸ್ಯ, ಉಪೇಕ್ಷೆ, ಮೈಗಳ್ಳತನ-ಇವೆಲ್ಲ ಒಂದು ರಾಜಕುಟುಂಬಕ್ಕೆ ಸೇರಿದ ಅಣ್ಣ-ತಮ್ಮಂದಿರಂತೆ ಸಖ್ಯದಿಂದಿರುತ್ತವೆ. ತನ್ನ ಸುತ್ತಲೂ ಬಲೆಯೊಂದನ್ನು ನೇದುಕೊಂಡು ಅವು ಇನ್ನಾರೂ ಸಮೀಪ ಸುಳಿಯದಂತೆ ಮಾಡುವ ಗುಣವಿಶೇಷಗಳು. ಬಂದ ಪತ್ರಕ್ಕೆ ಉತ್ತರ ಬರೆಯುವುದು, ಕೈಕೊಂಡಿರುವ ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸುವುದು, ವೇಳೆಗೆ ಸರಿಯಾಗಿ ಊಟಕ್ಕೆ ಕುಳಿತು, ತೂಕಮಾಡಿ ತುತ್ತು ಹಾಕುತ್ತ ಇಂತಿಷ್ಟೇ ಸಲ ಜಗಿಯುವದೆಂದು ಮೊದಲೇ ನಿರ್ಧರಿಸಿಬಿಟ್ಟಿರುವುದು, ಪ್ರತಿಯೊಂದನ್ನು ತೂಕ, ಅಳತೆ, ವೇಳೆ, ಮಾಪಕಗಳಿಂದ ಅಳೆಯುವುದು, ಭೆಟ್ಟಿಯಾದವರ ಹೆಸರು ದೆಸೆ ಕುಲಗೋತ್ರಗಳನ್ನು ನೆನಪಿನಲ್ಲಿಡುವುದು, ಶಿಸ್ತುನಿಯಮಿತತನಗಳ ಸಿಪಾಯಿಯಾಗಿರುವುದು-ಇಂಥ ಏಕತಾನತೆಯಲ್ಲಿ ಜೀವನದ ಯಶಸ್ಸಿನ ಗುಟ್ಟಿರಬಹುದು. ಅದರೆ ನಾವೀನ್ಯವಿಲ್ಲ ಬಣ್ಣಗಾರಿಕೆಯಿಲ್ಲ. ಅದೇ ಮರೆವಿನ ಮನುಷ್ಯನನ್ನು ನೋಡಿ, ಪತ್ರ ಬರೆಯಲು ಪೋಸ್ಟ ಆಫೀಸಿಗೆ ಹೋಗುತ್ತಾನೆ. ಅವನ ದುರ್ದೈವಕ್ಕೋ ಪೋಸ್ಟ್ ಆಫೀಸಿನ ದುರ್ದೈವಕ್ಕೋ ಅವನು ಹೋಗಿದ್ದ ದಿನ ರವಿವಾರ. ಮುಂದೆ ಕೆಲವೊಂದು ದಿನಗಳಾದ ಬಳಿಕ ಪತ್ರವನ್ನೇನೋ ತರುತ್ತಾನೆ. ನಾಳೆ ಬರೆದರಾಯ್ತು ಅಂದುಕೊಳ್ಳುತ್ತಾನೆ. ಆ ನಾಳೆಗಳು ನೂರ್ಕೋಟಿ ನಿನ್ನೆಗಳ ಜತೆ ಒಂದಾಗಿ ಹೋದಾಗ, ಒಂದು ಪ್ರಭಾತದಲ್ಲಿ ಒಂದು ಸುಪ್ರಭಾತದಲ್ಲಿ ಪತ್ರವನ್ನೇನೋ ಬರೆಯುತ್ತಾನೆ; ಪೋಸ್ಟ ಮಾಡುತ್ತಾನೆ. ನೆನಪಿನ ಕೂದಲನ್ನೆಲ್ಲಾ ಕೆದಕಿ ಕೆದಕಿ, ತಿಣಿಕಿ ತಿಣಿಕಿ ಜ್ಞಾಪಿಸಿಕೊಂಡಾಗ-ಅಡ್ರೆಸ್ಸು ಬರೆಯದೆ ಹಾಗೆಯೇ ಪತ್ರವನ್ನು ಪೋಸ್ಪ ಮಾಡಿದ್ದನ್ನು ಜ್ಞಾಪಿಸಿಕೊಳ್ಳುತ್ತಾನೆ. ಪೋಸ್ಟ್ ಆಫೀಸಿನವರ ಚಾಣಾಕ್ಷತನಕ್ಕೆ ಆಹ್ವಾನವೋ ಎನ್ನುವಂತಹ ಆತನ ಪತ್ರ ಮರೆವುಗೇಡಿತನದ ಪ್ರತ್ಯಕ್ಷ ಉದಾಹರಣೆಯಿರಬಹುದು. ಅದರೆ ತನ್ನ ವಿಚಾರವೇ ಸರಿ-ಎಂದು ಹೇಳುವ ಆತ್ಮವಿಶ್ವಾಸವಿದೆ. ರಾಜಗಾಂಭೀರ್ಯವಿದೆ ಆತನಲ್ಲಿ.

ಅದರಂತೆ ಪರೀಕ್ಷಾ ಮಂದಿರದ ಕಡೆಗೆ ಹೊರಟ ವಿದ್ಯಾರ್ಥಿಯು ಸಿನೇಮಾ ಪೋಸ್ಟರನ್ನು ನೋಡಿ, ತನ್ನ ನೆಚ್ಚಿನ ನಾಯಕಮಣಿಯ ಅಪೂರ್ವ ಅಭಿನಯಚಾತುರ್ಯವನ್ನು ಮನಸಾರೆ ಅಭಿನಂದಿಸಲು ಥಿಯೆಟರ್ ಮುಂದೆ ಕ್ಯೂ ನಿಲ್ಲುತ್ತಾನೆ. ಕಾಯಿಪಲ್ಲೆ ತರಲೆಂದು ಮನೆಯಿಂದ ಹೊರಟು ಕ್ರಿಕೆಟ್ ಕಾಮೆಂಟರಿ ಕೇಳಿ, ಇದ್ದ ಬಿಡಿಕಾಸುನ್ನೆಲ್ಲ ಕಾಫೀಗಾಗಿ ಖರ್ಚು ಮಾಡಿ ತಾನೂ ಕುಡಿದು ಮಿತ್ರವೃಂದಕ್ಕೂ ಕುಡಿಸಿ ಹೊತ್ತುಮುಳುಗಿ ಕತ್ತಲಾದಾಗ ಮನೆಯ ಗೂಡು ಸೇರಿ, ಗೃಹದೇವತೆಯ ಬಿರುನುಡಿಗಳನ್ನು ತಾಳ್ಮೆಯಿಂದ ಸಹಿಸುವ ಸದ್ಗೃಹಸ್ಥರನ್ನು ನಾವು ದಿನಾಲು ಕಾಣುತ್ತೇವೆ. ಎಲ್ಲಿಗೆ ಹೊರಟಿದ್ದೇವೆ-ಎನ್ನುವ ಜ್ಞಾಪಕವಿಲ್ಲದೆ ಹಳ್ಳಿಯ ಸಂದಿಗೊಂದಿಗಳನ್ನೆಲ್ಲ ತಿರುಗುವ ಚಪಲ ಸಂಚಾರಿಗಳು, ಗೋಡೆ ಒಂದು ಅಡ್ಡ ನಿಂತಾಗಲೊಮ್ಮೆ ಹೊರಳುತ್ತಾರೆ. ಇವರೂ ಇದೇ ವರ್ಗಕ್ಕೆ ಸೇರಿದವರು.

ಮರೆವು ಇಲ್ಲದ ಜೀವನವೇ ಇಲ್ಲ, ಕತ್ತಲೆಯಿಂದ ಬೆಳಕಿಲ್ಲದಿರುವಂತೆ ಮರೆವು ಜೀವನದಲ್ಲಿ ಬೆರಕೆಯಾದಾಗ ಮಾತ್ರ ಚಿನ್ನಕ್ಕೆ ಹಿತ್ತಾಳೆ ಕೂಡಿ ಚಲಾವಣೆ ನಾಣ್ಯವಾಗುವಂತೆ, ಜೀವನ ಸಹ್ಯವಾಗುತ್ತದೆ. ಮರೆವು ಇಲ್ಲದ ಜೀವನ ಜೀವನವೇನು? ಅಲ್ಲ ಅದು ನಿಸ್ಸಾರ, ನೀರಸ, ನಿಸ್ಸತ್ವ. ಜೀವನವೆಂದರೆ ಮೊದಲಿನಿಂದ ಕೊನೆಯವರೆಗೆ ನಡೆದ ಘಟನೆಗಳ, ಸನ್ನಿವೇಶಗಳ ಫೋಟೋ ಸೇರಿಸಿಟ್ಟ ಆಲ್ಬಮ್ಮು ಅಲ್ಲ. ದಿನದಿನದ ತಾಜಾ ಸುದಿಯನ್ನು ಒದಗಿಸಿ ಕೊಡುವ ದಿನಪತ್ರಿಕೆಯೂ ಅಲ್ಲ. ಜೀವನದುದ್ದಕ್ಕೂ ಅರಿತು, ಆತ್ಮಸಾತ್ ಮಾಡಿಕೊಂಡು, ಅನುಭವದ ಸಂಗತಿಗಳನ್ನೆಲ್ಲ ಹೀರಿ ಇಡುವ ಮೆದಳಿನ ಬಾಟ್ಲಿಂಗ ಪೇಪರೂ ಅಲ್ಲ. ನೆನಪಿನ ಗೋರಿಗಳನ್ನೆಲ್ಲ ಕೆದರಿ ಕೆದರಿ ನೋವಿನ, ತಾಪದ ಸಂಕಷ್ಟಗಳ ಮಾಲೆಯ ಅವಶೇಷಗಳನ್ನು, ಎಲುಬಿನ ಹಂದರಗಳನ್ನು ಕೆದಕಿ ತೆಗೆಯುವ ಭೂತಚೇಷ್ಟೆಯೂ ಅಲ್ಲ ಜೀವನ. ಜೀವನದುದ್ದಕ್ಕೂ ಅರಿತ, ಓದಿ ತಿಳಿದುಕೊಂಡು ಇಟ್ಟ ಮೊದಲ ಪುಟದಿಂದ ಕೊನೆಯ ಪುಟದವರೆಗಿನ ಸಾರವನ್ನೆಲ್ಲ ಶೇಖರಿಸಿಟ್ಟ ಪುಸ್ತಕಗಳ ಧೂಳು ರಾಶಿಯೇ ಜೀವನ? ವ್ಯವಸ್ಥಿತವಾಗಿ ಅಳತೆ ಮಾಡಿತ್ತ ರೇಶನಿಂಗ್ ಕಾಳೇ ಜೀವನ?

ಮರೆವಿನ ಕಲಬೆರಕೆಯಿಂದ ಜೀವನ ಸಹ್ಯವಾಗುವುದು; ಬಣ್ಣವೇರುವುದು; ಕಳೆ ಹೆಚ್ಚುವುದು. ನೆನಪಿನ ಊರುಗೋಲಿನಿಂದಲೇ ನೋವುಗಳನ್ನು ಮರೆತು ಮುಗುಳ್ನಗೆಯ ಮೊಗವನ್ನು ಧರಿಸಲು ಅನುಕೂಲವಾಗುತ್ತದೆ. ತಾನು ಅರಿತ, ಅನುಭವಿಸಿದ, ಆತ್ಮಸಾತ್ ಮಾಡಿಕೊಂಡ ಜ್ಞಾನ, ಅರಣ್ಯವನ್ನು ಚೆನ್ನಾಗಿ ಹದಗೊಳಿಸಿ ಪಾರ್ಕಿನ (Chastened Beauty) ಸೌಂದರ್ಯವನ್ನು ನೆನಪಿಗೆ ತರುವ ಮನೋಶ್ರೀಮಂತಿಕೆಯನ್ನು ಮರೆವು ಬಳುವಳಿಯಾಗಿ ಕೊಡುತ್ತದೆ. ಸುಖವು ಜೀವನದ ನಾಟಕದಲ್ಲಿ ಒಂದು ಸಣ್ಣ ಘಟನೆಯೆಂದು ಹೇಳುವ ಹಾರ್ಡಿಯ ಮಾತನ್ನು ವಿಚಾರವಂತರೆಲ್ಲರೂ ನಂಬಬೇಕು. ಹಾಗಿರಲು ಹಿಂದಿನ ನೋವನ್ನು ನೆನೆದು ಕುಳಿತು ಅಳುವದಾಗಲಿ, ಮುಂದಿನ ನೋವಿಗಾಗಿ ನರಳುವದಾಗಲಿ ಸಲ್ಲದು.

ಹೀಗೆ ಸಾಮಾನ್ಯರ ಜೀವನವನ್ನು ಸಹ್ಯ ಮಾಡುವ ಮರೆಹು-ಕವಿಗಳ, ತತ್ವಜ್ಞಾನಿಗಳ, ಪ್ರೊಫೆಸರರ ಊಳಿಗದಾಳಾಗಿದೆ. ತನ್ನ ಮನೆಗೇ ಬಂದು, ಮನೆಯ ಬೋರ್ಡ್ ಮೇಲೆ ‘……….’ ಎಂದು ಬರೆದಿದೆಯೆಂದು ಕಾದು ಕಾದು ಹೋಗಿರುವ ತತ್ವಜ್ಞಾನಿಯ ಕಥೆ ನಮಗೆಲ್ಲ ಹಳೆಯದು. ಪ್ರೊಫೆಸರರು ಹೋಗುವ ಗಡಿಬಿಡಿಯಲಿ ಹೆಂಡತಿಗೆ ಜೋರಾಗಿ ಬಡಿದು ಬಾಗಿಲಿಗೆ ಮುತ್ತು ಕೊಟ್ಟ ಕಥೆಯು ಹೊಸದೇನಲ್ಲ. ಇವರೇ ಆ ಮರೆವಿನ ಮಹಾರಾಜ್ಯಕ್ಕೆ ಸೇರಿದ ಮಹನೀಯರು. ಇನ್ನು ಕವಿಯಾದರೋ-ಆತನ ರಾಜ್ಯವೇ ಬೇರೆ. ತಾನು ಇದ್ದ ಪರಿಸರ, ತನ್ನ ಸುತ್ತುಮುತ್ತಲಿನ ಜನ ಎಂದೂ ಇವನಿಗೆ ಒಪ್ಪುವುದಿಲ್ಲ. ತನ್ನ ಆತ್ಮದ ಬೆಳಕಿನಲ್ಲಿಯೇ ಮುಂದೆ ಸಾಗುತ್ತಾನೆ. ಕವಿತೆಯ ಉಗಮ ಕವಿಯ ಸ್ಪೂರ್ತಿಯಲ್ಲಿ ಎಂದು ಅಸ್ಪಷ್ಟವಾಗಿ ಗುರುತಿಸಬಹುದು; ಕವಿತೆಯಂದರೆ ಕವಿಯ ನೈತಿಕ ಸಿಟ್ಟಿನ ಜ್ವಾಲೆಯಲ್ಲಿ ಅದ್ದಿ ತೆಗೆದ ಬೆಂಕಿ ಬರಹವೆಂದು ಅಂದುಕೊಳ್ಳಬಹುದು. ಅದಕ್ಕಿಂತಲೂ ಹೆಚ್ಚಾಗಿ ಈ ನೀರಸ ಜೀವನವನ್ನು ಮರೆತು ಮರೆವಿನ ಮಾಯೆಯ ಪ್ರಭಾವದಲ್ಲಿ ನೂರಾರು ಕನಸುಗಳ ಭವ್ಯ ರಾಜ್ಯವನ್ನು ಕವಿಯು ಕಟ್ಟುತ್ತಾನೆ. ಆ ಭವ್ಯ ರಾಜ್ಯವೇ-ಕವಿತಾ ಸಾಮ್ರಾಜ್ಯ. ತನ್ನ ಆತ್ಮದಲ್ಲಿ ರಭಸದಿಂದ ಕೊಚ್ಚಿಕೊಂಡು ಪ್ರವಹಿಸುತ್ತಿರುವ ಭಾವದ ಪ್ರಭಾವಕ್ಕೆ ಅಣೆಕಟ್ಟನ್ನು ಕಟ್ಟಿ ತಾನು ಕಂಡುಂಡು ಅನುಭವಿಸಿದ ನೋವಿನ ಬೆಂಕಿಯಲ್ಲಿ ಸುಟ್ಟು ಕರಕುಲು ಆದ ಆತ್ಮಕ್ಕೆ ಮರವಿನ ಸುಗಂಧ ಲೇಪನಮಾಡಿ ಕವಿತಾ ರೂಪದಲ್ಲಿ ಹಂಚುತ್ತಾನೆ. ಹೀಗೆಂದು-ಉತ್ಕಟ ಭಾವನೆಗಳ ಅಲ್ಲೋಲಕಲ್ಲೋಲಗಳಲ್ಲಿ ಇಲ್ಲ ಕವಿತೆಯ ಉಗಮ; ಅವುಗಳ ಮರೆವಿನಲ್ಲಿ ಇದೆ.

ಇನ್ನು ಕವಿಯ ಪಾತ್ರಗಳೆಲ್ಲ ಮರೆವಿನ ಬಣ್ಣದಲ್ಲಿಯೇ ಅದ್ದಿ ತೆಗೆಯಲ್ಪಟ್ಟವರು. ನಾರದ ದೇವರ್ಷಿ ತನ್ನ ಕೆಲಸವನ್ನು ಮರೆತು ಸ್ತ್ರೀ ವೇಷಧಾರಿ ವಿಷ್ಣುವಿಗೆ ಮೋಹಗೊಂಡು-ಒಂದು ಮಹಾಸಂಸಾರದ ತಂದೆಯಾಗಿ ಬಹುಕಾಲದ ಮೇಲೆ ನೆನೆಯುತ್ತಾನೆ, ತಾನೇನಿದ್ದೆ, ಏನಾಯಿತು-ಎಂದು. ಪುರೂರವ ಊರ್ವಶಿಗೆ ಕೊಟ್ಟ ವಚನವನ್ನು ಮರೆತು ಚಿರವಿರಹಿಯಾಗಿ ನಿಲ್ಲಬೇಕಾಯಿತು. ಶಾಕುಂತಲ ನಾಟಕ ದುಷ್ಯಂತರ ಮರೆವಿನ ಮೇಲೆಯೇ ನಿಂತಿದೆ. ಹ್ಯಾಮ್ಲೆಟನ ತಾಯಿ ಅದೆಷ್ಟು ಬೇಗ ಹೈಪಿರಿಯನನಂತಿದ್ದ ಮಹಾರಾಜನನ್ನು ಮರೆತು ಕ್ರಾಗಷ್ಟಡನನ್ನು ಮದುವೆಯಾದಳು! ಇದೇ ಘಟನೆ ಹ್ಯಾಮ್ಲೆಟನ ಜೀವನಕ್ಕೆ ಆಹ್ವಾನವಾಯಿತು. ಅವನ ಮನವು ನಿರಂತರ ರಣರಂಗವಾಯಿತು. ಟಂಪೆಸ್ಟಿನ ಸುಂದರ ಮಂದಿರ ಪ್ರಾಸ್ಟೆರೋನ ಉದಾತ್ತ ಮರೆವು ಕ್ಷಮೆಗಳ ಮೇಲೆ ಕಟ್ಟಲಾಗಿದೆ. ಹೀಗೆ ವಿಶ್ವದ ಉನ್ನತ ಕೃತಿಗಳೆಲ್ಲ ಮಾನವ ಸಹಜವಾದ ಮರೆವಿನ ಮೇಲೇಯ ನಿಂತಿದೆಯೆಂದರೆ ತಪ್ಪಾಗದು.

ಮರೆವು ಮಾನವ ಸಹಜವಾದ ಗುಣ. ಇದು ಮಳೆಯ ಹನಿಯಂತೆ ತನ್ನಷ್ಟಕ್ಕೆ ತಾನೆ ಅವತರಿಸುವ ವಿಧಾನ. “It falls like gentle rain” ಮರೆವು-ಜೀವನವನ್ನು ಸಹ್ಯಮಾಡುವ ರೀತಿ, ಜೀವನಕ್ಕೆ ಬಣ್ಣವನ್ನು ಬೆಳಕನ್ನು ಕೊಡುವ ವಿಶೇಷತೆ, ಮಹಾಜನರ ಸಹವಾಸಿ,.- ಗೆಳತಿ, ಜೀವನದ ನೋವಿಗೆ ಹಚ್ಚಿದ ಮುಲಾಮು, ಮನುಷ್ಯನನ್ನು ಜೀವನರಂಗಕ್ಕೆ ಅಣಿಗೊಳಿಸುವ ಸಂಜೀವಿನಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನುಡಿಯಬೇಕು ಮದ್ದಲೆ
Next post ಜಗದ್ಗುರು

ಸಣ್ಣ ಕತೆ

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…