ವಿರಾಮ ಕುರ್ಚಿಯಲ್ಲಿ ಮನೆಯ ಯಜಮಾನ ವಿರಮಿಸುತಿದ್ದ. ಮನವು ಎಲ್ಲೋ ತೇಲುತ್ತಿರುವಂತೆ ಅವನ ಕಣ್ಣುಗಳು ಕಿಡಿಕಿ ಬಾಗಿಲನ್ನು ದೃಷ್ಟಿಸುತ್ತಿದ್ದವು. ಕಿವಿಗೆ ಅದೇನೊ
ಮಾತು ಕತೆ ಕೇಳಿಸಿತು.
ಕಿಡಿಕಿ ಬಾಗಿಲಿಗೆ ಹೇಳಿತು- “ನಾನೆಷ್ಟು ಧನ್ಯ- ಗೋಡೆಯಂತೆ ಬೆಳಕನ್ನು ಕಾಣದವಳು ನಾನಲ್ಲ. ಕಂಬಿಯ ಕಣ್ಣುಗಳಿಂದ ನಾ ಕತ್ತಲೆಗೆ ತೆರೆದುಕೊಂಡು ಬೆಳಕಲ್ಲಿ ನಗುತ್ತಿರುವೆ.” ಎಂದಿತು.
“ಹೌದು, ಕಿಡಿಕಿ ತಂಗಿ! ನೀನು ಸದಾ ತಾಜಾ ಗಾಳಿಯನ್ನು ಬರಮಾಡಿಕೊಳ್ಳುವೆ. ಬೆಳಕಿನ ಆರಾಧನೆ ಮಾಡುವೆ. ನಿನ್ನ ಅಣ್ಣ ನಾನು ಬಾಗಿಲು, ನಾನೂ ಅಷ್ಟೇ ಧನ್ಯ, ಭಾಗ್ಯವಂತ, ನಾನು ಮನೆಗೆ ಶೋಭೆ. ಮನೆಯ ಹೃದಯ. ನಾನು ಬೆಳಕನ್ನು, ಗಾಳಿಯನ್ನು, ಹೃದಯಗಳನ್ನು ಬರಮಾಡಿಕೊಳ್ಳುವೆ. ಮನೆಯ ಕಾಯುವೆ. ನನ್ನ ಸೌಭಾಗ್ಯಕ್ಕೆ ಎಣೆಯೇನು? ಹೊಸಿಲಲ್ಲಿ ನನ್ನ ಪಾದದ ಪೂಜೆ. ಮೇಲೆ ನನ್ನ ಶಿರಕ್ಕೆ ತೋರಣ, ಸಾಲದ ನನ್ನ ಬಾಳ್ವೆಯ ವೈಭವಕ್ಕೆ?” ಎಂದಿತು ಬಾಗಿಲು.
ಇದು ಕೇಳಿಸಿ ಕೊಂಡ ಯಜಮಾನನ ಕಣ್ಣಿನ ಕಿಡಿಕಿ ಬೆಳಿಕೆಗೆ ತೆರೆದುಕೊಂಡಿತು. ಹೃದಯದ ಬಾಗಿಲು ಪ್ರೀತಿಯ ಬೆಳಿಕೆಗೆ ತೆರೆದುಕೊಂಡಿತು. “ಮನೆಗೆ ಒಂದೇ ಏಕೆ ಮನಕ್ಕೂ ಕಣ್ಣಿನ ಕಿಡಿಕಿ ಮತ್ತು ಹೃದಯದ ಬಾಗಿಲು” ಎಂದು ಅರಿತುಕೊಂಡ.
*****