ಇಂದರ ಹೂ ಚಂದರ ಹೂ
ಚೆಂದ ಚೆಂದದ ಹೂ
ತಂದು ಇಟ್ಟೇನೀಗ
ನಿನಗಂತ, ಸುಂದರಿ.

ಕಣ್ಣು ಸೋತ್ಯು ಹಾದೀ ನೋಡಿ;
ಮನ ಸೋತ್ಯು ಚಿಂತೀಮಾಡಿ;
ನಾಲ್ಗಿ ಸೋತ್ಯು ಹಾಡಿಹಾಡಿ;
ನಿನ ಹಾಡು, ಸುಂದರಿ

ಚಿಗರಿ ಸಂಗಾತ ಆಟ
ಎಡಕ ಬಲಕ್ಕ ನೋಟ
ಬರಬ್ಯಾಡ ಮಾಡುತ ಬ್ಯಾಟಾ
ಬೇಗ ಬಾರ, ಸುಂದರಿ.

ಗಾಳಿ ಸಂಗಾತ ಮಾತು
ಕಳಿಸ ಕೇಳ್ತೇನಿ ಕೂತು
ಮನದಾಗಂತೇನಿ ‘ಆತು
ಹುಸಿ ಜನುಮಾ’ ಸುಂದರಿ.

ಬಂತು ಸಂಜಿಯ ಹೊತ್ತು
ಬೆಳದಿಂಗಳು ಜೀವದ ಕುತ್ತು
ಮಾಡಬ್ಯಾಡ ಸಾವಿನ ತುತ್ತು
ನನಗಿಂದ, ಸುಂದರಿ.
*****