ಕರಡು ತಿದ್ದುವ ಕೆಲಸ

ಕರಡು ತಿದ್ದುವ ಕೆಲಸ

ನಿಮ್ಮದೊಂದು ಪುಸ್ತಕ ಪ್ರಕಟವಾಗುತ್ತಿದೆ. ಅದು ಕರಡು ತಿದ್ದಿ ಸರಿಪಡಿಸುವ ಹಂತ ದಾಟಿರುವಾಗ ಅದರಲ್ಲಿ ಹಲವಾರು ಅಕ್ಷರ ತಪ್ಪುಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ನೀವು ಏನು ಮಾಡುತ್ತೀರಿ? ತಪ್ಪು ಒಪ್ಪುಗಳ ಪಟ್ಟಿಯೊಂದನ್ನು ಮಾಡಿ ಪುಸ್ತಕದ ಮೊದಲಿಗೋ ಕೊನೆಗೋ ಸೇರಿಸುತ್ತೀರಿ. ಅಥವಾ ಪೆನ್ನಿನ ಸಹಾಯದಿಂದ ತಪ್ಪುಗಳನ್ನು ತಿದ್ದುತ್ತೀರಿ. ಇಲ್ಲವೇ ಏನೂ ಮಾಡದೆ ಅಲ್ಲಿಗೇ ಬಿಡುತ್ತೀರಿ. ಈ ಮೂರರಲ್ಲಿ ಏನೇ ಮಾಡಿದರೂ ಪುಸ್ತಕದ ಗುಣಮಟ್ಟಕ್ಕೆ ಆಘಾತವಾಗುತ್ತದೆ. ನೀವು ಇನ್ನೂ ಒಂದನ್ನು ಮಾಡಬಹುದು: ಅದೆಂದರೆ ಇಡೀ ಪುಸ್ತಕವನ್ನು ಕರಡು ತಿದ್ದಿ ಮತ್ತೆ ಆರಂಭದಿಂದ ಮುದ್ರಿಸುವುದು. ಹೀಗೆ ಮಾಡಿದರೆ ನಿಮಗೆ ಅಥವಾ ನಿಮ್ಮ ಪ್ರಕಾಶಕರಿಗೆ ತುಂಬಾ ನಷ್ಟವಾಗುತ್ತದೆ. ಈ ಕರಡು ತಿದ್ದುವ ಕೆಲಸವನ್ನು ಮೊದಲೇ ಸರಿಯಾಗಿ ಮಾಡುತ್ತಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲ.

ಈ ಕರಡು ತಿದ್ದುವ ಕೆಲಸ ಯಾರು ಮಾಡಬೇಕು? ಇನ್ನು ಯಾರಾದರೂ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವುದು ಪ್ರತಿಯೊಬ್ಬ ಲೇಖಕನ ಆಸೆ. ಯಾಕೆಂದರೆ ಕರಡು ತಿದ್ದುವುದೆಂದರೆ ಅದೊಂದು ಮನಸ್ಸಿಗೆ ಸಂತೋಷ ನೀಡುವ ವಿಚಾರವಲ್ಲ. ಅದರಲ್ಲೂ ಲೇಖಕರು ತಮ್ಮ ಬರಹಗಳನ್ನು ಮತ್ತೆ ಮತ್ತೆ ಓದಲು ಇಷ್ಟಪಡುವುದಿಲ್ಲ. ಭೈರಪ್ಪನವರು ತಮ್ಮ ಕಾದಂಬರಿಗಳ ಕರಡು ತಿದ್ದುವ ಕೆಲಸಕ್ಕೇ ಹೋಗುವುದಿಲ್ಲ ಎಂದು ಪತ್ರಿಕೆಯೊಂದು ವರದಿಮಾಡಿದೆ. ಅವರ ಕೃತಿಗಳ ಮೊಳೆ ಜೋಡಿಸುವವರು ಅಥವಾ ಡಿ.ಟಿ.ಪಿ. ನಿರ್ವಾಹಕರು ಯಾವ ತಪ್ಪುಗಳನ್ನೂ ಮಾಡುವುದಿಲ್ಲ ಎನ್ನೋಣವೇ? ಇದು ಅಸಂಭಾವ್ಯ. ಬಹುಶಃ ಅವರ ಪ್ರಕಾಶಕರು ಈ ಜವಾಬ್ದಾರಿಯನ್ನು ವಹಿಸುತ್ತಿರಬೇಕು. ಮೊಳೆ ಜೋಡಿಸುವವರೋ ಡಿ.ಟಿ.ಪಿ.ಯವರೋ ಅಥವಾ ಪ್ರಕಾಶಕರಿಂದ ನಿಯುಕ್ತರಾದ ಕರಡು ತಿದ್ದುವವರು ಈ ಕೆಲಸವನ್ನಂತೂ ಮಾಡುತ್ತಿರಲೇಬೇಕು. ಆದರೆ ಹೆಚ್ಚಿನ ಲೇಖಕರು ಭೈರಪ್ಟನವರಷ್ಟು ಭಾಗ್ಯವಂತರಲ್ಲ. ಅದು ಮಾತ್ರವೂ ಅಲ್ಲ, ಕೆಲವು ಲೇಖಕರು ತಮ್ಮ ಪುಸ್ತಕಗಳ ಕರಡನ್ನು ತಾವೇ ತಿದ್ದಲು ಬಯಸಲೂಬಹುದು. ಅದೇನೇ ಇದ್ದರೂ ಪುಸ್ತಕ ಮುದ್ರಿತವಾಗಿ ಅದರಲ್ಲಿ ತಪ್ಪುಗಳೇನಾದರೂ ಉಳಿದುಬಿಟ್ಟಿದ್ದರೆ ಅದರ ಹೊಣೆ ಅಂತಿಮವಾಗಿ ಲೇಖಕನ ಮೇಲೆಯೇ ಬರುತ್ತದೆಯಲ್ಲದೆ ಇನ್ನು ಯಾರ ಮೇಲೂ ಅಲ್ಲ. ಲೇಖಕರು ಉದಾಸೀನ ತೋರಿದರು ಎಂದು ಓದುಗರು ಅಂದುಕೊಳ್ಳುತ್ತಾರೆ. ಒಂದು ವೇಳೆ ಪುಸ್ತಕ ಮರಣೋತ್ತರವಾಗಿ ಪ್ರಕಟವಾಗುತ್ತಿದ್ದರೆ ಈ ಹೊಣೆ ಪ್ರಕಾಶಕರದು ಅಥವಾ ಸಂಪಾದಕರದು ಆಗಿರುತ್ತದೆ.

ಪುಸ್ತಕದ ತಪ್ಪು ಒಪ್ಪುಗಳಿಗೆ ಲೇಖಕನೇ ಅಂತಿಮವಾಗಿ ಹೊಣೆಗಾರನಾಗಿದ್ದರೂ ಸ್ವತಃ ಲೇಖಕನೇ ಕರಡು ತಿದ್ದಿದರೆ ಸಾಲದು. ಯಾಕೆಂದರೆ ಲೇಖಕನಿಗೆ ತಾನೇನು ಬರೆದಿದ್ದೇನೆ ಎನ್ನುವುದು ಗೊತ್ತಿರುವುದರಿಂದ ಎಷ್ಟೇ ಪ್ರಯತ್ನಿಸಿದರೂ ಆತನ ದೃಷ್ಯಿ ಅಕ್ಷರಗಳ ಮೇಲೆ ನಿಲ್ಲವುದೇ ಇಲ್ಲ. ಕಣ್ಣುಗಳು ಬೇಗ ಬೇಗನೆ ಮುಂದಕ್ಕೆ ಓಡುತ್ತಿರುತ್ತವೆ. ಆದ್ದರಿಂದ ಅಕ್ಷರತಪ್ಪುಗಳು ಕೆಲವಾದರೂ ಹಾಗೇ ಉಳಿದುಬಿಡುವ ಸಾಧ್ಯತೆಯಿದೆ. ಆದರ್ಶಸ್ಥಿತಿಯಲ್ಲಿ ಕರಡುಗಳನ್ನು ಲೇಖಕನೂ ಹಾಗೂ ಆಮೇಲೆಯೋ ಅದಕ್ಕೆ ಮುನ್ನವೋ ಇನ್ನು ಬೇರೆ ಯಾರಾದರೂ ಕೂಡಾ ಓದುವುದು ಅಗತ್ಯ. ಆದರೆ ಔದ್ಯೋಗಿಕವಾಗಿ ಕರಡು ತಿದ್ದುವ ವೃತ್ತಿ ಹಿಡಿದವರು ಯಾರಿದ್ದಾರೆ? ಯಾವುದಕ್ಕೂ ವೇಳೆಯೇ ಇಲ್ಲದ ಇಂಥ ಕಾಲದಲ್ಲಿ ಮಿತ್ರರನ್ನಾದರೂ ಹೇಗೆ ಕೇಳುವುದು?

ಲೇಖಕನೇ ಕರಡು ತಿದ್ದುವವನೂ ಆದಾಗ ಬರುವ ಇನ್ನೊಂದು ಸಮಸ್ಯೆಯಿದೆ. ಅದೆಂದರೆ ವಾಕ್ಯಗಳನ್ನು, ಪದಗಳನ್ನು ಇಡಿಯಾಗಿ ಬದಲಾಯಿಸಿಬಿಡುವ, ಕೆಲವು ಭಾಗಗಳನ್ನು ಹೊಡೆದು ಹಾಕಿ ಇನ್ನು ಕೆಲವನ್ನು ಸೇರಿಸುವ ಲೇಖಕರ ವಾಂಛೆ. ಇದು ಪಠ್ಯಕ್ಕೆ ಸಂಬಂಧಿಸಿದ ಬದಲಾವಣೆ. ಸಾಮಾನ್ಯವಾಗಿ ಕರಡು ನೋಡುವ ಎಲ್ಲಾ ಲೇಖಕರೂ ಇದನ್ನು ಬೇರೆ ಬೇರೆ ಪ್ರಮಾಣದಲ್ಲಿ ಮಾಡುತ್ತಾರೆ. ಯಾಕೆಂದರೆ ತಮ್ಮ ಬರಹ ಅತ್ಯುತ್ತಮವಾಗಿ ಬರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಪ್ರಖ್ಯಾತ ಕಾದಂಬರಿಕಾರರಾದ ಚಾರ್ಲ್ಸ್ ಡಿಕೆನ್ಸ್, ಜೇಮ್ಸ್ ಜಾಯ್ಸ್ ಮುಂತಾದವರೆಲ್ಲರೂ ಹೀಗೆ ಮಾಡಿದವರೇ. ಇದರಿಂದ ಮತ್ತೆ ಮತ್ತೆ ಕರಡು ನೋಡುವುದು ಅಗತ್ಯವಾಗಿಬಿಡುತ್ತದೆ. ಪುಸ್ತಕದ ಕೆಲಸವೂ ವಿಳಂಬವಾಗಿ ಪ್ರಕಾಶಕರಿಗೂ ಮೊಳೆಜೋಡಿಸುವವರಿಗೂ ಕಿರಿಕಿರಿಯಾಗುತ್ತದೆ. ಕೆಲವು ವಿದೇಶೀ ಪ್ರಕಟಣಾಲಯಗಳು, ಪತ್ರಿಕೆಗಳು ಲೇಖಕ ಹೀಗೆ ಮಾಡಿದರೆ ಆತನಿಂದ ಹಣ ವಸೂಲಿ ಮಾಡುತ್ತಾರೆ!

ಕರಡು ತಿದ್ದುವುದಕ್ಕೂ ಸ್ವಲ್ಪ ಅಭ್ಯಾಸ ಬೇಕು. ಕೆಲವು ವರ್ಷಗಳ ಹಿಂದೆ ನನ್ನದೊಂದು ಇಂಗ್ಲಿಷ್ ಲೇಖನ ಅಮೇರಿಕದ ಪತ್ರಿಕೆಯೊಂದರಲ್ಲಿ ಪರಕಟಣೆಗೆ ಸ್ವೀಕೃತವಾಯಿತು. ಅದರ ಮೊಳೆಜೋಡಿಸಿದ ಪ್ರತಿಯನ್ನು ನನಗೆ ಕರಡು ತಿದ್ದುವುದಕ್ಕೆಂದು ಕಳಿಸಿದ ಸಂಪಾದಕರು ನನಗೊಂದು ಸೂಚನೆಯನ್ನೂ ನೀಡಿದರು. ಅದೆಂದರೆ, ನಾನು ಪುಟದ ಕೆಳಗಿನ ಸಾಲಿನಿಂದ ಮೇಲಕ್ಕೆ ತಿದ್ದುತ್ತ ಬರಬೇಕು ಎಂದು. ಇದೊಂದು ಉತ್ತಮ ಸಲಹೆಯಾಗಿತ್ತು. ಯಾಕೆಂದರೆ ಆಗ ನಾವು ವಾಕ್ಯಗಳನ್ನು ಓದದೆ ಕೇವಲ ಪದಗಳನ್ನು ಅಕ್ಷರಗಳನ್ನು ಓದುತ್ತೇವೆ. ಇದು ಕರಡು ತಿದ್ದುವಲ್ಲಿ ಬಹಳ ಮುಖ್ಯ. ಹಾಗೂ ಕರಡು ತಿದ್ದಲೆಂದೇ ಆವಿಷ್ಕರಿಸಿದ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಕೆಲವು ಚಿಹ್ನೆಗಳೂ ಇವೆ. ಈ ಚಿಹ್ನೆಗಳನ್ನು ಹೇಗೆ ಹಾಕಬೇಕೆನ್ನುವುದು ಕರಡು ತಿದ್ದುವವರಿಗೂ ಅವುಗಳ ಅರ್ಥವೇನೆನ್ನುವುದು ತಿದ್ದಿದ್ದಮ್ನ ಅಳವಡಿಸುವವರಿಗೂ ಗೊತ್ತಿರಬೇಕು. ಈ ಕುರಿತಾಗಿ ತಿಳಿದವರಿಂದ ಅಕಾಡೆಮಿ, ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳು ಕಮ್ಮಟಗಳನ್ನು ಏರ್ಪಡಿಸಿದರೆ ಚೆನ್ನಾಗಿರುತ್ತದೆ. ಲೇಖಕರು, ಡಿ.ಟಿ.ಪಿ.ಯವರು, ಮುದ್ರಕರು ಮತ್ತು ಮಾರಾಟಗಾರರು ಓಂದೆಡೆ ಸೇರಿ ಇದನ್ನೆಲ್ಲ ಚರ್ಚಿಸುವುದು ಅಗತ್ಯ.

ಈಗ ಹೆಚ್ಚಿನ ಲಿಪೀಕರಣವೂ ಕಂಪ್ಯೂಟರ್ ಮೂಲಕ ನಡೆಯುವುದರಿಂದ ತಪ್ಪು ತಿದ್ದುವುದು ಸುಲಭವೇನೋ ಹೌದು. ಆದರೆ ಇದರ ಅರ್ಥ ಕರಡು ನೋಡುವ ಕಾರ್ಯವನ್ನು ಕೈಬಿಡಬಹುದೆಂದೇನೂ ಅಲ್ಲ. ಕಂಪ್ಯೂಟರಿಗೆ ಟೈಪ್ ಮಾಡುವುದು ಮನುಷ್ಯನ ಬೆರಳುಗಳೇ ಆದ್ದರಿಂದ ಇಲ್ಲಿಯೂ ಸಾಕಷ್ಟು ತಪ್ಪುಗಳಾಗುವ ಸಂಭವವಿದೆ. ಮಾತ್ರವಲ್ಲ, ಸುಲಭವಾಗಿ ತಿದ್ದಿಕೊಳ್ಳಬಹುದು ಎನ್ನುವುದೇ ಹೆಚ್ಚಿನ ಪ್ರಮಾಣದ ತಪ್ಪುಗಳಿಗೆ ಕಾರಣವೂ ಆಗಬಹುದು. ಕಂಪ್ಯೂಟರ್ ತಂತ್ರಜ್ಞಾನ ಈಗ ಸಾರ್ವತ್ರಿಕವಾಗುತ್ತಿರುವ ಸಂದರ್ಭದಲ್ಲಿ ಲೇಖಕರು ಕಾಗದ ಪೆನ್ನು ಹಿಡಿಯದೆ ನೇರವಾಗಿ ಕಂಪ್ಯೂಟರಿನಲ್ಲೇ ಬರೆಯಲೂಬಹುದು. ಆಗ ತಪ್ಪುಗಳಾಗುವ ಸಂಭವ ಕಡಿಮೆ ಎನ್ನಬಹುದು. ಆದರೂ ಲೇಖಕನ ಕಣ್ತಪ್ಪಿಯೂ ಅಕ್ಷರಸ್ಖಾಲಿತ್ಯಗಳು ತಲೆಹಾಕುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಆದ್ದರಿಂದ ಕಂಪ್ಯೂಟರಿನಲ್ಲಿ ಬರೆದುದನ್ನೂ ಲೇಖಕ ಒಮ್ಮೆಯಾದರೂ ಖುದ್ದಾಗಿ ಓದುವುದಲ್ಲದೆ, ಲೇಖನ ಸಾಕಷ್ಟು ದೀರ್ಘವಾಗಿದ್ದಲ್ಲಿ ಬೇರೆಯವರಿಂದ ಓದಿಸಿ ಕರಡು ತಿದ್ದಿಸಿಕೊಳ್ಳುವುದೂ ಅಗತ್ಯವಾಗುತ್ತದೆ. ಕಂಪ್ಲೂಟರ್ ತಂತ್ರಜ್ಞಾನ ಉಪಯೋಗಿಸಿ ಈಗ ಲಿಪ್ಯಂತರವೂ ಸಾಧ್ಯವಿರುವುದರಿಂದ ಡಿ.ಟಿ.ಪಿ.ಯವರು ಲೇಖಕ ಬರೆದದ್ದನ್ನು ಬೇರೆ ಲಿಪಿಗಳಿಗೆ ಮಾರ್ಪಡಿಸಿಕೊಳ್ಳುವಾಗ ಕೆಲವೊಮ್ಮೆ ಕೆಲವು ಅಕ್ಷರಗಳಲ್ಲಿ ಎಡವಟ್ಛಾಗುವ ಸಂಭವವಿದೆ; ಕೆಲವು ಅಕ್ಷರಗಳು ಇಡಿಯಾಗಿ ಬರದಿರಬಹುದು, ಅಥವಾ ಕೆಲವು ಒತ್ತುಗಳು ಮೂಡದೆ ಇರಬಹುದು -ಮುಖ್ಯವಾಗಿ ಸಂಯುಕ್ತಾಕ್ಷರಗಳ ಸಂಖ್ಯೆ ಜಾಸ್ತಿಯಾದಾಗ. ಉದಾಹರಣೆಗೆ, ವಿವೇಕ ಶಾನಭಾಗರ ‘ಇನ್ನೂ ಒಂದು’ ಎಂಬ ಕಾದಂಬರಿಯನ್ನು ಗಮನಿಸಿದರೆ ಅಲ್ಲಿ ‘ಸಂಸ್ಕೃತಿ” ಎಂಬ ಪದ ‘ಸಂಸ ತಿ’ ಎಂಬುದಾಗಿ ಮುದ್ರಿತವಾಗಿರುವುದನ್ನು ಕಾಣಬಹುದು. ಕೆಲವೊಮ್ಮೆ ಇದು ಮುದ್ರಣ ಯಂತ್ರದ ಕೈವಾಡವೂ ಆಗಿರುವ ಸಾಧ್ಯತೆಯಿದೆ! ಲಿಪ್ಯಂತರದ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಕನ್ನಡದ ಮಧ್ಯೆ ಬಳಸಿರಬಹುದಾದ ಇಂಗ್ಲಿಷ್ ಪದಗಳು ಏನಾಗಿವೆ ಎಂಬುದು. ಇಂಥ ಪದಗಳ ಕುರಿತು ಪ್ರತ್ಯೇಕವಾಗಿ ಗಮನ ಹರಿಸದಿದ್ದರೆ ಇವು ನಮಗೆ ಅರ್ಥವಾಗದ ಕಂಪ್ಯೂಟರ್ ಭಾಷೆಯ ಲಿಪಿಯಲ್ಲಿ ಕಾಣಿಸಿಕೊಳ್ಳಬಹುದು. ಕೇವಲ ಲಿಪ್ಯಂತರದಿಂದ ಮಾತ್ರವಲ್ಲ, ಬೇರೆ ಕಾರಣಗಳಿಂದಲೂ ಈ ಪರಿಣಾಮ ಉಂಟಾಗಬಹುದಾದ್ದರಿಂದ ಪುಟಗಳನ್ನು ಮುದ್ರಣಕ್ಕೆ ತಯಾರಿಸುವ ಸಂದರ್ಭದಲ್ಲಿ ಇದೆಲ್ಲವನ್ನೂ ಪ್ರತ್ಯೇಕವಾಗಿ ಗಮನಿಸುವುದು ಅಗತ್ಯ.

ಪದಸಂಸ್ಕರಣದಲ್ಲಿ ಪದಪರೀಕ್ಷಕ (spell check) ಎಂಬ ತಂತ್ರಾಂಶವೊಂದಿದೆ. ಇದಿನ್ನೂ ಕನ್ನಡದಲ್ಲಿ ಹೆಜ್ಜೆಯಿರಿಸುತ್ತಿದೆಯಷ್ಟೆ. ಈ ತಂತ್ರಾಂಶ ಕನ್ನಡ ಭಾಷೆಗೆ ಸೇರಿರದಂಥ ಪದಗಳನ್ನು ಅಡಿಗೆರೆ ಹಾಕುವ ಮೂಲಕ ಕಂಪ್ಯೂಟರ್ ಫಲಕದಲ್ಲಿ ತೋರಿಸಬಹುದು. ಇಂಗ್ಲಿಷ್ನಲ್ಲಿ ಇದು ಈಗಾಗಲೇ ವ್ಯಾಪಕವಾಗಿ ಪ್ರಚಾರದಲ್ಲಿದೆ. ಆದರೆ ಇಂಗ್ಲಿಷ್‌ನಲ್ಲಿ ಇದನ್ನು ಉಪಯೋಗಿಸಿ ಅನುಭವ ಇರುವವರಿಗೆ ಗೊತ್ತು: ಇದು ಕೇವಲ ಅಸಂಬದ್ಧ ಪದಗಳನ್ನು ಮಾತ್ರವೇ ಗುರುತುಹಿಡಿಯಬಲ್ಲುದು; ಪದವೊಂದು ಸುಸಂಬದ್ಧವಾಗಿದ್ದರೆ ಅದನ್ನು ಗುರುತಿಸಲಾರದು. ಉದಾಹರಣೆಗೆ, ನೀವು The boy saved the dogಎಂದು ಬರೆಯಲು ಉದ್ದೇಶಿಸಿದ್ದೀರಿ ಎಂದುಕೊಳ್ಳೋಣ. ಆದರೆ The boy seved the dog ಎಂದು ಟೈಪ್ ಮಾಡಿರುತ್ತೀರಿ; ಇಲ್ಲಿ saved ಎಂಬುದಕ್ಕೆ ಬದಲಾಗಿ ಇಂಗ್ಲಿಷ್ ಭಾಷೆಯಲ್ಲಿಲ್ಲದ seved ಎಂಬ ಪದ ಬಂದುಬಿಟ್ಟದೆ. ಎಂದರೆ, ಎಗೆ ಬದಲು ಇ ಟೈಪ್ ಮಾಡಿದ್ದೀರಿ. ಈ ತಪ್ಪನ್ನು ಪದಪರೀಕ್ಷಕ ತೋರಿಸಬಲ್ಲುದು. ಆದರೆ ಒಂದು ವೇಳೆ ನೀವು The boy shaved the dog ಎಂಬುದಾಗಿ (ತಪ್ಪಾಗಿಯೇ) ಟೈಪ್ ಮಾಡಿದ್ದರೆ ಪದಪರೀಕ್ಷಕ ಸುಮ್ಮನಿರುತ್ತದೆ! ಯಾಕೆಂದರೆ shaved ಎನ್ನುವುದು ಇಂಗ್ಲಿಷ್ ಭಾಷೆಯಲ್ಲಿರುವ ಸಂಬದ್ಧ ಪದವೇ. ಇಲ್ಲಿ ನೀವದನ್ನು ಉದ್ದೇಶಿಸಿಲ್ಲ ಎನ್ನುವುದು ಬೇರೆ ಮಾತು. ಕಂಪ್ಯೂಟರಿಗೆ ನಿಮ್ಮ ಮನಸ್ಸಿನಲ್ಲಿ ಏನಿತ್ತು ಎನ್ನುವುದು ತಿಳಿಯುವುದಿಲ್ಲ. ಆದ್ದರಿಂದ ಕನ್ನಡದಲ್ಲಿ ಪದಪರೀಕ್ಷಕ ಬಂದರೂ ಕರಡು ತಿದ್ದುವುದು ತಪ್ಪುವುದಿಲ್ಲ.

ಕನ್ನಡದ ಲಿಪೀಕರಣಕಾರರಿಗೆ ಇಂಗ್ಲಿಷ್ ಸಾಕಷ್ಟು ಗೊತ್ತಿಲ್ಲದಿರುವುದರಿಂದಲೋ ಏನೋ, ಕನ್ನಡ ಪಠ್ಯ ಮಧ್ಯದಲ್ಲಿ ಇಂಗ್ಲಿಷ್ ಪದಗಳೋ ವಾಕ್ಯಗಳೋ ಬಂದಾಗ ಎಡವಟ್ಟುಗಳು ಉಂಟಾಗುತ್ತಿರುವುದನ್ನು ಲೇಖಕರು ಮತ್ತು ಪ್ರಕಾಶಕರು ಗಮನಿಸಬೇಕು. ಇಂಗ್ಲಿಷ್‌ನಲ್ಲಿ ಏನಾದರೂ ಯಾರದ್ದೇನು ಹೋಯಿತು ಎಂಬ ರೀತಿಯಲ್ಲಿ ಅಕ್ಷರ ಸ್ಖಾಲಿತ್ಯಗಳು ಇಂಥ ಕಡೆ ಇರುತ್ತವೆ. ಕೀರ್ತಿನಾಥ ಕುರ್ತಕೋಟಿಯವರು ಕನ್ನಡದ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಆಯ್ದ ಸಂಗ್ರಹವೊಂದು ‘ಉರಿಯ ನಾಲಗೆ’ ಎಂಬ ಹೆಸರಿನಲ್ಲಿ ಪ್ರಸಿದ್ಧ ಪ್ರಕಾಶನವೊಂದರಿಂದ ಪ್ರಕಟವಾಗಿದೆ. ಕುರ್ತಕೋಟಿಯವರು ಕೆಲವು ಲೇಖನಗಳಲ್ಲಿ ಇಂಗ್ಲಿಷ್ ಲೇಖಕರ ಹೆಸರುಗಳನ್ನು ಮತ್ತು ಅವರ ಬರಹಗಳಿಂದ ಉದ್ಧರಣೆಗಳನ್ನು ಇಂಗ್ಲಿಷ್ನಲ್ಲೇ ನೀಡುತ್ತಾರೆ. ಆದರೆ ಇವಲ್ಲಿ ಹಲವು ಕಡೆ ತಪ್ಪುಗಳು ಬಂದಿವೆ. ಈ ತಪ್ಪುಗಳು ಇವನ್ನು ಮೊದಲು ಪ್ರಕಟಿಸಿದ ಪತ್ರಿಕೆಯಲ್ಲಿ ಉಂಟಾದುವೋ ಅಥವಾ ಈ ಪುಸ್ತಕಕ್ಕೆ ಲಿಪೀಕರಿಸುವಾಗ ಉಂಟಾದುವೋ ಎಂದು ಗೊತ್ತಿಲ್ಲ. ಏನಿದ್ದರೂ ಇದರ ಕರಡು ತಿದ್ದಿದವರು ತಮ್ಮ ಕೆಲಸವನ್ನು ಸರಿಯಾಗಿ ಮಾಡಿಲ್ಲವೆಂದೇ ಹೇಳಬೇಕಾಗುತ್ತದೆ. ಒಂದೆರಡು ಉದಾಹರಣೆಗಳನ್ನಷ್ಟೆ ಕೊಡುವುದಾದರೆ, the first revolution was a tragedy but the second one was a farce ಎಂಬ ಕಾರ್ಲ್ ಮಾರ್ಕ್ಸ್‌ ಮಾತು ತಪ್ಪು ತಪ್ಪಾಗಿ ಮುದ್ರಿತವಾಗಿದೆ; ಮುಖ್ಯವಾಗಿ, farce ಎನ್ನುವ ಪದ force ಎಂದಾಗಿದೆ! ಫಾರ್ಸ್ ಎಂದರೆ ಪ್ರಹಸನ. ಮಾರ್ಕ್ ಉದ್ದೇಶಿಸುವುದು ಪ್ರಹಸನವನ್ನಲ್ಲದೆ ಶಕ್ತಿಯನ್ನಲ್ಲ. ಇತಿಹಾಸದ ಮರುಕಳಿಕೆಯ ಬಗ್ಗೆ ಆತ ಈ ಮಾತು ಹೇಳುವುದು: ಇತಿಹಾಸ ಮೊದಲು ದುರಂತವಾಗಿ, ನಂತರ ಅದರ ಅಣಕವಾಗಿ ಮರುಕಳಿಸುತ್ತದೆ ಎಂಬ ಮಾತು. ಇದೇ ಪುಸ್ತಕದಲ್ಲಿ Gold- smith, Matthew Arnold ಮುಂತಾದ ಹೆಸರುಗಳು ಹೆಸರ ಮೊದಲ ದೊಡ್ಡ ಅಕ್ಷರಗಳಿಲ್ಲದೆ gold- smith, matthew arnoldಎಂದು ಮುಂತಾಗಿ ಮುದ್ರಿತವಾಗಿವೆ. ಎಮರ್ಸನ್ನ ಒಂದು ಉದ್ಧರಣೆ ಸರಿಯಾಗಿದ್ದರೆ ಇನ್ನೊಂದರಲ್ಲಿ ತಪ್ಪುಗಳಿವೆ. ಕನ್ನಡದಲ್ಲಿ ಇಷ್ಟೊಂದು ತಪ್ಪುಗಳಿಲ್ಲದಿದ್ದರೂ ಪುಸ್ತಕ ಕನ್ನಡದ ಅಕ್ಷರದೋಷಗಳಿಂದಲೂ ಮುಕ್ತವಾಗಿಲ್ಲ. (ಈ ತಪ್ಪುಗಳಿಗೂ ಕಂಪ್ಯೂಟರ್ನ ಸ್ಪೆಲ್ ಚೆಕ್ ಪ್ರೋಗ್ರಾಮಿಗೂ ಬಹುಶಃ ಸಂಬಂಧವಿರದು. ಯಾಕೆಂದರೆ ಇದು ಕಂಪ್ಯೂಟರ್ನಲ್ಲಿ ಅಕ್ಷರ ಜೋಡಿಸಿದ ಪುಸ್ತಕದಂತೆ ಇಲ್ಲ.)

ಇನ್ನು ಕನ್ನಡ ಪತ್ರಿಕೆಗಳೂ ಕಂಪ್ಯೂಟರೀಕರಣಗೊಂಡಿರುತ್ತ ಇಲ್ಲೂ ಕರಡು ತಿದ್ದುವ ಬಳಗ ಇಲ್ಲ. ಪತ್ರಿಕಾ ಕಛೇರಿಗಳಲ್ಲಿ ಕಂಪ್ಯೂಟರ್ ಬಳಸುವವರೇ ಕರಡು ತಿದ್ದುವವರೂ ಆಗಿರುತ್ತಾರೆ. ಕೆಲವು ಲೇಖಕರು ಈ-ಮೇಲ್ ಮೂಲಕ ಕಂಪ್ಯೂಟರೀಕೃತ ಬರಹಗಳನ್ನು ಪ್ರಕಟಣೆಗೋಸ್ಕರ ಕಳಿಸಿಕೊಡಬಹುದು. ಆಗ ತಪ್ಪುಗಳ ಅಂಶ ಕಡಿಮೆಯಾಗಿರುತ್ತದೆ. ಆದರೆ ಬರಹಗಳನ್ನು ಪತ್ರಿಕಾ ಕಛೇರಿಯಲ್ಲೇ ಕಂಪ್ಯೂಟರೀಕರಿಸಿದಾಗ ಉಂಟಾಗುವ ತಪ್ಪುಗಳನ್ನು ಯಾರು ತಿದ್ದುತ್ತಾರೆ? ಇಲ್ಲಿ ಘೋರವಾದ ತಪ್ಪುಗಳು ಹಾಗೆಯೇ ಓದುಗರ ಕೈಸೇರುವುದು ಸಾಧ್ಯ. ಈಚೆಗೆ ನಿಘಂಟು ಪಿತಾಮಹ ವೆಂಕಟಸುಬ್ಬಯ್ಯನವರ ಇಂಥದೊಂದು ಲೇಖನವನ್ನು ಪ್ರಸಿದ್ಧ ಕನ್ನಡ ಪತ್ರಿಕೆಯೊಂದರಲ್ಲಿ ನಾನು ನೋಡಿದೆ. ವೆಂಕಟಸುಬ್ಬಯ್ಯನವರು ಯಾರೋ ಕೇಳಿದರೆಂದು ಕುಮಾರವ್ಯಾಸ ಭಾರತದ ಪದ್ಯವೊಂದರ ಅರ್ಥ ವಿವರಿಸುವ ಸಂದರ್ಭ ಅದು. ಪದ್ಯ ನೋಡಿದಾಗಲೇ ನನಗೆ ತಿಳಿಯಿತು ಏನೋ ತಪ್ಪಾಗಿದೆ ಎಂದು. ಕಾರಣ ಅಲ್ಲಿ ಪ್ರಕಟವಾಗಿರುವಂತೆ ಅದು ಭಾಮಿನಿ ಷಟ್ಪದಿಯಲ್ಲಿರುವುದು ಸಾಧ್ಯವಿರಲಿಲ್ಲ. ಆಮೇಲೆ ಇಡೀ ಲೇಖನ ಓದಿದಾಗ ಇಂಥ ಹತ್ತಾರು ಪ್ರಮಾದಗಳು ಗೋಚರಿಸಿದುವು. ಮುಗ್ಧ ಓದುಗರು ವೆಂಕಟಸುಬ್ಬಯ್ಯ ಬರೆದದ್ದು ಎಂಬ ಕಾರಣಕ್ಕೆ ಅಲ್ಲಿ ಪ್ರಕಟವಾಗಿರುವ ತಪ್ಪುಗಳನ್ನು ಹಾಗೇ ಸ್ವೀಕರಿಸುವ ಸಾಧ್ಯತೆಯನ್ನು ಕಲ್ಪಿಸಿ ಗಾಬರಿಯಾಯಿತು.

ಇದೆಲ್ಲ ಯಾಕೆ ಹೀಗಾಗುತ್ತದೆ? ತಪ್ಪುಗಳ ಕುರಿತಾಗಿ ನಮಗಿರಬಹುದಾದ ಉದಾರ ಧೋರಣೆಯಿಂದಾಗಿಯೇ? ಅಷ್ಟು ಸಾಕು ಎಂಬ ತಾತ್ಸಾರದಿಂದಲೇ? ಆಧುನಿಕ ಪುಸ್ತಕ ಸಂಸ್ಕೃತಿಗೆ ನಾವಿನ್ನೂ ಸರಿಯಾಗಿ ಒಗ್ಗಿಕೊಂಡಿಲ್ಲವೆಂದೇ? ಕರಡು ತಿದ್ದುವುದರ ಕುರಿತಾದ ನಮ್ಮ ಕೀಳರಿಮೆಯಿಂದಲೇ? ಎಲ್ಲಾ ತಪ್ಪುಗಳನ್ನೂ ತೋರಿಸಿಕೊಟ್ಟರೂ ಕೊನೆಗೂ ಕೆಲವನ್ನು ಹಾಗೇ ಬಿಟ್ಟುಬಿಡುವ ಕೆಲವು ಡಿ.ಟಿ.ಪಿ.ಯವರ ಅಸಡ್ಡೆಯಿಂದಲೇ? ನಮ್ಮ ಪುಸ್ತಕಗಳು ಮತ್ತು ಪತ್ರಿಕೆಗಳು ಲಕ್ಷಣವಾಗಿಯೂ ತಪ್ಪುರಹಿತವಾಗಿಯೂ ಪ್ರಕಟವಾಗುವುದು ಯಾರಿಗೂ ಬೇಡವೇ?

ಟಿಪ್ಪಣಿ: ಈ ಮೇಲಿನ ಲೇಖನದ ಪ್ರೇರಣೆ ಅಕ್ಷರಸಾಹಿತ್ಯದ ಕುರಿತಾದ ಆಸಕ್ತಿಯಲ್ಲದೆ ಯಾರಲ್ಲೂ ತಪ್ಪು ಕಂಡುಹಿಡಿಯಬೇಕು ಎನ್ನುವುದಲ್ಲ. ಸ್ವತಃ ನನ್ನದೇ ಪ್ರಕಟಿತ ಕೃತಿಗಳಲ್ಲೂ ಕೆಲವೊಮ್ಮೆ ಕಣ್ತಪ್ಪಿ ಅಕ್ಷರಸ್ಖಾಲಿತ್ಯಗಳು ಬಂದಿವೆ. ಮಾತ್ರವಲ್ಲ, ಸುಪ್ರಸಿದ್ಧ ಇಂಗ್ಲೆಂಡ್ ಮತ್ತು ಅಮೇರಿಕದಂಥ ಮುಂದುವರಿದ ದೇಶಗಳ ಸುಪ್ರಸಿದ್ಧ ಪ್ರಕಾಶಕರು ಪ್ರಕಟಿಸಿದ ಪುಸ್ತಕಗಳಲ್ಲೂ ನಾನು ಕೆಲವೊಮ್ಮೆ ತಪ್ಪುಗಳನ್ನು ಕಂಡಿದ್ದೇನೆ. ಆದರೆ ಇವೆಲ್ಲವೂ ಕಣ್ಣಿಗೆ ಎಣ್ಣೆಹಚ್ಚಿದಂತೆ ನೋಡಿದ ಮೇಲೂ ಉಳಿದುಬಿಟ್ಟಂಥವು, ಆಲಸ್ಯದಿಂದ ಅಲ್ಲ. ಆದ್ದರಿಂದ ಕೇವಲ ಮಾನುಷಿಕ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಚೀನವೇ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೨

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…