ಎಲೆ ಪ್ರಾಚೀನವೇ, ನನ್ನ ಮನತುಂಬುವಂತೆ ನಿನ್ನ ನಿನಾದ ಹೀರಿದ್ದೇನೆ.
ಮೇಲೆ, ಮತ್ತೂ ಮೇಲಕ್ಕೆದ್ದು ಕೆಳಗೆ ಬೀಳುತ್ತ, ಮತ್ತೆ ಹಿಂದಕ್ಕೆ
ಹೊರಳುವ ಹಸಿರು ನಾಲಗೆಯ ಮೊಳಗು ಕೇಳಿದ್ದೇನೆ ಸಹಸ್ರ ಜಿಹ್ವ.
ದೂರ ವಸಂತದ ನನ್ನ ಮನೆ ನಿನ್ನ ತಡಿಯಲ್ಲಿತ್ತು, ಅಲ್ಲಿ –
ಹಗಲು ಬಿಸಿಲು ಕುದಿಯುವಲ್ಲಿ, ಇರುಳು ಸೊಳ್ಳೆಗಳು ಮೋಡವಾಗಿ ಕವಿಯುವಲ್ಲಿ,
ಇಂದೂ ಅಂದಿನಂತೆ ನಿನ್ನಿದಿರು ಶಿಲೆಯಾಗುವ ನಾನು, ಎಲೆ, ಸಮುದ್ರವೇ,
ನಿನ್ನುಸಿರ ಗಂಭೀರ ಎಚ್ಚರ ಕೇಳುವುದಕ್ಕೆ. ಅಂದಿನ ಯೋಗ್ಯತೆ ಇಂದಿಲ್ಲ.
ನನ್ನೆದೆಯ ಆ ಲಯ ನಿನ್ನ ಲಯಕ್ಕಿಂತ ಬೇರೆಯಲ್ಲ ಎಂದೆ.
ನಿನ್ನ ಅದೇ ಭಯಂಕರ ನಿಯಮ ನನ್ನ ಅಂತರಾಳದಲ್ಲೂ ಇದೆ-
ವಿಸ್ತಾರವಾಗಿ, ಭಿನ್ನವಾಗಿ, ಆದರೂ ಸದಾ ಒಂದೇ ಆಗಿ ಇರುವುದು.
ದಡಕ್ಕೊಮ್ಮೆ ಅಪ್ಪಳಿಸಿದಾಗ ನೀನು ಜೊಂಡು, ನಕ್ಷತ್ರ ಮೀನುಗಳೊಡನೆ
ನಿನ್ನೊಳಗಿನ ಮಹಾಶೂನ್ಯದ ನಿರುಪಯುಕ್ತ ಕೊಳಚೆ ಬಿಸಾಕುವಂತೆ
ನಾನೂ ನನ್ನೊಳಗಿನ ಎಲ್ಲ ಕೆಡುಕನ್ನೂ ಬಸಿದುಕೊಳ್ಳುವುದು.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale