ಕಾಲೇಜು ಚುನಾವಣಾ ಪ್ರಕರಣ

ಕಾಲೇಜು ಚುನಾವಣಾ ಪ್ರಕರಣ

ತುರ್‍ತು ಪರಿಸ್ಥಿತಿಯ ಅಂತ್ಯದೊಂದಿಗೆ ನಮ್ಮ ಕಾಲೇಜಿನಲ್ಲಿಯ ವಿದ್ಯಾರ್ಥಿಗಳ ರಾಜಕೀಯ ಪ್ರಜ್ಞೆ ಹೆಚ್ಚಿದೆ.

‘ಚುನಾವಣೆ ನಡೆಯಬೇಕು ಸಾರ್’ ಎಂದರು ವಿದ್ಯಾರ್ಥಿಮುಖಂಡರು ಪ್ರಿನ್ಸಿಪಾಲರನ್ನು ಅವರ ಚೇ‌ಂಬರಿನಲ್ಲಿ ಕಂಡು.

‘ಈಗ ಬೇಡ; ಇನ್ನೂ ಎಡ್ಮಿಶನ್ನುಗಳು ನಡೆದಿವೆ’- ಎಂದರು ಪ್ರಿನ್ಸಿಪಾಲರು ನಿಷ್ಟುರವಾದ ದ್ದನಿಯಲ್ಲಿ.

‘ಡೌನ್ ವಿಥ್ ದ ಪ್ರಿನ್ಸಿಪಾಲ್’ ಎಂದು ಕಾಲೇಜಿನಲ್ಲಿ ಹೊರಾಂಗಳದಲ್ಲಿ ವಿದ್ಯಾರ್‍ಥಿ ಸಮೂಹ ಜೋರಾಗಿ ಚೀರಹತ್ತಿತು.

ಶಾಂತಿಪ್ರಿಯರಾದ ನಮ್ಮ ಪ್ರಿನ್ಸಿಪಾಲರ ಎದೆ ಒಡೆಯಿತು.

‘ಅವರೇನು ಅನ್ನುತ್ತಿದ್ದಾರೆ ಕೇಳಿರಿ’ ಎಂದು ಪ್ರಿನ್ಸಿಪಾಲರು ಅಂಗಲಾಚಿ ಬೇಡಿಕೊಂಡರು. ತಮ್ಮ ಬಲಗೈಯಂತಿರುವ ನಂಬಿಗಸ್ಥ ಪ್ರಾದ್ಯಾಪಕರಿಗೆ.

ಈ ಪ್ರಾಧ್ಯಾಪಕರೆಂದರೆ ಸಾಮನ್ಯರೇ? ತಾವು ಕಲಿಯುತ್ತಿದ್ದಾಗ ಯುನಿವರ್‍ಸಿಟಿಯ ವೈಸ್‌ಚಾನ್ಸಲರರಿಗೇನೇ ನೀರುಕುಡಿಸಿದವರು. ಈಗ ಪ್ರಾಧ್ಯಾಪಕರಾಗಿ ವಿಧ್ಯಾರ್‍ಥಿಗಳ ಪರಮ ಮಿತ್ರರಂತೆ ಅವರ ಹೆಗಲ ಮೇಲೆ ಕೈಹಾಕಿ ನಡೆಯುತ್ತಾರೆ. ಪಠ್ಯಪುಸ್ತಕಗಳನ್ನು ಓದಿಸದಿದ್ದರೂ ವಿದ್ಯಾರ್ಥಿಗಳೊಂದಿಗೆ ಚುಟ್ಟಾ ಸಿಗರೇಟು ಸೇದಿ ಚಹಾ ಕಾಫೀ ಕುಡಿದು ಸಹಬಾಳ್ವೆ ನಡೆಸುತ್ತಿದ್ದಾರೆ.

‘ಏನ್ರೀ ಕಲ್ಲಣ್ಣನವರೇ, ಯಾಕೆ ಗದ್ದಲಾ ಮಾಡ್ತೀರಿ. ಮುಂದಿನ ತಿಂಗಳು ೧ಂನೇ ತಾರೀಖಿಗೆ ಇಲೆಕ್ಷನ್ ಮಾಡಿಸ್ತಾರ ಸಾಹೇಬರು’ ವಿದ್ಯಾರ್‍ಥಿ ಮುಖಂಡನೂಡನೆ ಆಪ್ತಾಲೋಚನೆ ನಡೆಸಿದರು, ಪ್ರಿನ್ಸಿಪಾಲರ ಬಲಗೈಯವರು.

‘ಹಾಗಂತ ಅವನು, (ಅಂದರೆ ಪ್ರಿನ್ಸಿಪಾಲರು) ಬರೆದುಕೊಡಲಿ ನಮಗೇನು?’ ಎಂದಿತು ವಿದಾರ್‍ಥಿ ಸಮೂಹ.

‘ನೀವ್ಯಾಕ ಸಿಗ್ತೀರಿ ಸಾರ್ ಇವನ ಬಲೆಯಾಗ, ಬೇಕಾದ್ರ ಅವಾ ಬರೆದುಕೊಡಲಿ… ಇಲ್ಲ. ನಾಳೆಯಿಂದ ನಮ್ಮ ಸ್ಟ್ರೈಕ್ ಪ್ರಾರಂಭ.’

ಪ್ರಿನ್ಸಿಪಾಲರ ಬಲಗೈ ಅರ್‍ಥಾತ್ ವಿದ್ಯಾರ್‍ಥಿಮಿತ್ರ ಪ್ರಾಧ್ಯಾಪಕರು ಪ್ರಿನ್ಸಿಪಾಲರ ಚೆಙಂಬರಿನೊಳಗೆ ನುಗ್ಗಿದರು. ಒಳಗೆ ತಾಸುಗಟ್ಟ್ಲೆ ಏನೋ ಗುಜುಗುಜು ನಡೆಯಿತು. ಬೇಂಬರಿನ ಎದುರು ವಿದ್ಯಾರ್‍ಥಿ ಸೈನ್ಯ ಕಾದು ನಿಂತಿತ್ತು. ಪ್ರಿನ್ಸಿಪಾಲರ ಅಟೆಂಡರು ಕೋಟೆಯಂತೆ ನಿಂತು ಚೇಂಬರಿನೊಳಕ್ಕೆ ಯಾರನ್ನೂ ಒಳಬಿಡಲಿಲ್ಲ. ಸರಿಯಾಗಿ ಎರಡು ಗಂಟೆಯ ನಂತರ ಬಲಗೈ ಹೊರಬಂದರು. ಲಿಖತಬರಹದೊಂದಿಗೆ ಪ್ರಿನ್ಸಿಪಾಲರಿಗೂ ವಿದ್ಯಾರ್ಥಿಮುಖಂಡರಿಗೂ ರಾಜಿಯಾಯ್ತು. ಎಲ್ಲ ಬಲಗೈಯವರ ಜಾಣಾಕ್ಷತನ.

ತುರ್‍ತುಪರಿಸ್ಥಿತಿಯಲ್ಲಿ ಅಡಗಿಹೋದ ಚುನಾವಣೆ ಮಹಾಪಿಡುಗಿನಂತೆ ಈಗ ಬಂದೇಬಿಟ್ಟಿತು.

ಊರ ಗೋಡೆಗಳ ಮೇಲೆಲ್ಲ ಸುಣ್ಣಗಳ ಘೋಷಣೆ, ಕಹಳೆಕೊಂಬುಗಳ ಮೊಳಗು. ಸಾರ್‍ವಜನಿಕ ರೋಡಿನಲ್ಲೆಲ್ಲ ಇಲೆಕ್ಷನ್ ಪ್ರಚಾರ. ಬೆಳಗಿನಿಂದ ಸಂಜೆಯವರೆಗೆ ವಿದ್ಯಾರ್‍ಥಿಗಳ ಚೀರಾಟ, ಕೂಗಾಟ, ನೆಗೆದಾಟ. ವಿದ್ಯಾರ್‍ಥಿಗಳ ಸಾಹಿತ್ಯವೆಲ್ಲ ಊರ ಗಲ್ಲಿ ಮೊಹಲ್ಲಾಗಳಲ್ಲೆಲ್ಲ ವಿಜೃಂಭಿಸಿತು.

ಕ್ಲಾಸುಗಳಲ್ಲೆಲ್ಲ ಚುನಾವಣಾ ಸಂದೇಶ ಪಸರಿಸಿತು. ಉಮೇದುವಾರರು ತಮ್ಮ ತಮ್ಮ ಬೆಂಬಲಿಗರೊಂದಿಗೆ ಬಾಗಿಲಲ್ಲಿ ಕಾಲಿಡುತ್ತಲೇ ಪ್ರಾಧ್ಯಾಪಕರು ವರ್ಗದಿಂದ ತಮ್ಮ ಕೋಣೆಗೆ ಪಲಾಯನ ಹೇಳುತ್ತಿದ್ದರು. ಯಾಕೆಂದರೆ ಆ ಕ್ಲಾಸಿನಲ್ಲಿ ಚುನಾವಣಾ ಪ್ರಚಾರ ನಡೆಯಬೇಕಲ್ಲವೇ ?

‘ನಾನು ಈ ರೀತಿ ಕ್ಲಾಸು ಬಿಡಲಾರೆ’ ಎಂದರು ಓರ್ವ ಕನ್ನಡದ ಕಟ್ಟಾಪ್ರಾಧ್ಯಾಪಕರು.

‘ಕನ್ನಡದ ಪ್ರಾಧ್ಯಾಪಕರಿಗೆ’ ಎಂದು ಒಂದು ಚೀರುಧ್ವನಿ ಚೀರಿದರೆ ‘ಧಿಕ್ಕಾರವಿರಲಿ’ ಎಂದು ನೂರು ಜನ ವಿದ್ಯಾರ್‍ಥಿ ಸಮೂಹ ಚೀರಿತು. ಕನ್ನಡದ ಹುಲಿ ಕಟ್ಟಾ ಬ್ರಹ್ಮಾಚಾರಿ ಪ್ರಾಧ್ಯಾಪಕರ ಗಂಡೆದೆ ಕರಗಿ ನೀರಾಯ್ತು. ಅವರು ವಿವ್ಯಾರ್‍ಥಿ ಸೈನ್ಯದ ಎದುರು ಶರಣಾಗತರಾದರು.

ಮಹಾಚನಾವಣೆಗಳಲ್ಲಿ ನಡೆಯದ ಕುಟಿಲ ಕಾರಸ್ಥಾನಗಳು, ಗುಪ್ತ ಸಭೆಗಳು, ಪರಸ್ಪರ ದೋಷಾರೋಪಣೆಗಳು, ಕರಪತ್ರಗಳ ಪ್ರಕಟಣೆಗಳು ನಡೆದವು. ಅವರ ಚುನಾವಣಾ ಪ್ರಚಾರದ ವ್ಯಖರಿಗಳು ಈ ರೀತಿ ನಡೆದಿದ್ದವು.

‘ಕಾಲೇಜು ಪ್ರಾರಂಭವಾಗಿ ಇಷ್ಟು ವರ್‍ಷಗಳಾದವು. ಒಬ್ಬನಾದರೂ ವಿಜ್ಞಾನ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿಸಂಘದ ಕಾರ್ಯದರ್‍ಶಿ ಯಾಗಿದ್ದಾನೆಯೇ? ಈ ಸಾರೆ ವಿಚಾರಿಸಿರಿ ಮತ್ತು ವೋಟು ಕೂಡಿರಿ.’

‘ಇವರು ಹುಟ್ಟಾ ದಲಿತರು. ಇವರ ತಾತ ಮುತ್ತಾತರೆಲ್ಲ ಕಡುಬಡವರು. ಇಂಥ ಕಡುಬಡತನದ ಕೆಸರಿನಲ್ಲಿ ಬೆಳೆದು ನಿಂತ ಇವರು ಬಡವರ ಕೈವಾರಿಗಳು. (ಇವರು ಕಾರಿನಲ್ಲಿ ಹೇಗೆ ತಿರುಗುತ್ತಾರೆ ನಮಗೆ ಹೇಳಿರಿ ಎಂದು ಕೂಗು ಕೇಳಿಸಿತು) ಆ ಕಾರು ಬಾಡಿಗೆಯದು. ಸ್ವಂತದ್ದಲ್ಲ. ಹಣವನ್ನು ಪಾವತಿ ಮಾಡಿಲ್ಲ. ಒಂದು ವೇಳೆ ಆರಿಸಿ ಬಂದದ್ದೇ ಅದರೆ ಹಣ ಕೊಡುವೆವು. ಇಲ್ಲವಾದರೆ ದೇವರಾಣೆಗೂ ಈ ಕಾರಿನ ಬಾಡಿಗೆ ಕೊಡುವುದಿಲ್ಲ. ನಮ್ಮ ಮಾನ ಉಳಿಸುವುದಕ್ಕಾಗಿ ಇವರಿಗೆ ವೋಟು ಕೊಡಿರಿ.’ ನಮ್ಮದು ಬಡಿಗೆಯ ಪಕ್ಷ; ನಾವು ಚುನಾವಣೆಯಲ್ಲಿ ಗೆದ್ದು ಬಂದದ್ದೇ ಆದರೆ ಏನು ಮಾಡುವೆ ನೋಡುತ್ತಿರಿ. ವರ್ಷದುದ್ದಕ್ಕೂ ಆಟದ ಬಯಲಿನಲ್ಲಿ ವಿದ್ಯಾರ್ಥಿಗಳಿಗೆ ಆಟವಾಡಲು ಪ್ರೋತ್ಸಾಹ ಕೊಡುವೆವು. ಕೆಲಸಕ್ಕೆ ಬಾರದ ವಿದ್ಯಾರ್ಥಿಗಳು, ಸುಕೋಮಲೆಯರಾದ ವಿದ್ಯಾರ್ಥಿನಿಯರು ಕ್ಲಾಸ್ ರೂಂನಲ್ಲಿ ಕೂಡಲಿ, ಬೇಡವೆನ್ನುವುದಿಲ್ಲ. ಆಡಳಿತದಲ್ಲಿ ಅಡ್ಡಬಂದ ಪ್ರಾಧ್ಯಾಪಕರಿಗಾಗಲಿ ಪ್ರಿನ್ಸಿಪಾಲರಿಗಾಗಲಿ ಬೂಟಿನ ಏಟುಗಳು ಬೀಳಬಹುದು. ಅದಕ್ಕೆ ನಾವು ಜವಾಬ್ದಾರರಲ್ಲ. ಪರೀಕ್ಷಾಮಂದಿರಗಳಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಜಾರಿಯಲ್ಲಿ ತರುವುದಲ್ಲದೆ ಆಯಾ ವಿಷಯಗಳ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ತಮ್ಮ ವಿಷಯಗಳಲ್ಲಿ ಕಾಪಿ ಒದಗಿಸುವಂತೆ ಕಾನೂನು ಮಾಡುವೆವು. ನಿಮಗೆ ವಿದ್ಯಾರ್ಥಿ ಪ್ರಭುತ್ವ ಬೇಕೋ ಹಳೆಯ ಕಾಲದ ಪ್ರಾಧ್ಯಾಪಕರ ಪ್ರಭುತ್ವ ಬೇಕೋ’ ಎಂದು ಮಗುದೊಂದು ಪಕ್ಷದ ಗುಡುಗು.

ಊರಲ್ಲೆಲ್ಲ ಗಡಿಬಿಡಿಯೇ ಗಡಿಬಿಡಿ, ಸಾರ್ವಜನಿಕ ಸ್ಥಳಗಳಲ್ಲೆಲ್ಲ ಭಾಷಣಗಳು, ಪಾನವಿಹಾರಗಳು, ಸಿನೆಮಾ ದೇಖಾವೆಗಳು ನಡೆದವು. ಸ್ಕೂಟರುಗಳು ಬುರ್ರೆಂದು ಓಡಿಯೇ ಓಡಿದವು. ಟಾಯರುಗಳು ಸವೆಯದೆ ರಸ್ತೆ ಸವೆಯಿತು. ಪ್ರವಾಸಿ ಬಂಗಲೆಗಳೆಲ್ಲ ಇಲೆಕ್ಷನ್ ಪ್ರಚಾರದ ಆಫೀಸುಗಳಾಗಿ ಪರಿವರ್ತನೆಗೊಂಡವು. ಪೆಟ್ರೋಲ್ ಪಂಪುಗಳು ಖಾಲಿಯಾದವು. ಲೌಡ್ ಸ್ಪೀಕರ್‌ಗಳು ಒದರಾಡಿದವು. ಸ್ಥಾನಿಕ ಪತ್ರಿಕೆಗಳು ಪ್ರಚಾರ ಅಪಪ್ರಚಾರಗಳನ್ನು ಮಾಡಿದವು. ಅಂತೂ ಇಲೆಕ್ಷನ್ ಗಾಳಿ ಜೋರಾಗಿ ಬೀಸಿತು, ಇಲೆಕ್ಷನ್ ದಿನ ಬಂದೇಬಿಟ್ಟಿತು.

ನಮ್ಮ ಕಾಲೇಜಿನಲ್ಲಿ ಅಂದು ಅಸೆಂಬ್ಲಿ ಲೋಕಸಭೆಗಳ ಚುನಾವಣಾ ವಾತಾವರಣ. ಎಂದೂ ಕಾಣದ ವಿದ್ಯಾರ್ಥಿಸಮೂಹ ಕಂಡು ನಮ್ಮಲ್ಲಿ ಇಷ್ಟು ವಿದ್ಯಾರ್ಥಿಗಳಿದ್ದಾರೆಯೇ ಎಂದು ನನಗೆ ವಿಸ್ಮಯ, ಟೆಂಡರುವೋಟು ಚಾಲೇಂಜ್ ವೋಟುಗಳು ನಡೆದವು. ವಿದ್ಯಾರ್ಥಿ ಗುಂಪುಗಳಲ್ಲಿ ಹೊಡೆದಾಟ, ಕಲ್ಲುಗಳು ತೂರಾಟ ಸಾಗಿದವು. ಅಂತೂ ಇಲೆಕ್ಷನ್ ಮುಗಿಯಿತು.

ಇನ್ನು ಮತಗಳ ಎಣಿಕೆ ಪ್ರಾರಂಭ. ನಮ್ಮ ಕಾಲೇಜು ಅಂದು ರಾಯಬರೇಲಿಯಾಯ್ತು.

ರಿಟರ್ನಿಂಗ್ ಆಫೀಸರು ಮತಪತ್ರಿಕೆಯನ್ನು ತಕ್ಕೊಂಡು, ಮತ ಪಡೆದ ಹೆಸರು ಕೂಗಿದರೆ ‘ಹೊಯ್’ ಎಂದು ಚೀರಲು ಪ್ರಾರಂಭಿಸಿದರು. ಅಂತೂ ಎರಡೇ ಎರಡು ವೋಟುಗಳ ಅಂತರದಿಂದ ಕಲ್ಲಣ್ಣವರ ಆರಿಸಿಬಂದರು. ಮತ್ತೆ ಗದ್ದಲ ಪ್ರಾರಂಭವಾಯ್ತು. ಪ್ರಿನ್ಸಿಪಾಲರು ಹಣೆಗೆ ಕೈ ಹಚ್ಚಿ ಕುಳಿತರು.

‘ರಿಕೌಂಟು ಆಗಬೇಕು ಸಾರ್’ ಎಂದು ಸೋತ ಪಾಟೀಲರ ಗುಂಪು; ‘ಆಗ ಕೂಡದು’ ಎಂದು ಗೆದ್ದ ಕಲ್ಲಣ್ಣವರ ಗುಂಪೂ ಚೀರತೊಡಗಿದವು. ರಿಕೌಂಟು ಮಾಡಿದರೆ ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದಿತು ಗೆದ್ದ ಕಲ್ಲಣ್ಣವರ ಗುಂಪು ಹೆಚ್ಚು ಉತ್ಸಾಹದಿಂದ.

ಪ್ರಿನ್ಸಿಪಾಲರು ಅಡಕೊತ್ತಿನಲ್ಲಿ ಸಿಕ್ಕ ಅಡಿಕೆಯಾದರು. ಚೇಂಬರಿನಲ್ಲಿ ಉನ್ನತ ಮಟ್ಟದ ಮಾತುಕತೆಗಳು ನಡೆದವು. ಇನ್ನೆರಡು ದಿನಕ್ಕೆ ನಿರ್ಣಯ ತೆಗೆದುಕೊಳ್ಳುವೆವು ಎಂಬ ಸಂದೇಶ ಬಂತು ಪ್ರಿನ್ಸಿಪಾಲ ಚೇಂಬರಿನಿಂದ. ಎರಡು ದಿನಗಳೂ ಉರುಳಿದವು. ಸ್ಕೂಟರುಗಳು ಓಡಾಡಿದವು. ಸೈಕಲ್ಲು ಮೋಟರುಗಳು ಸಪ್ಪಳ ಮಾಡಿದವು. ನ್ಯಾಯಬೇಕು ನಮಗೆ ನ್ಯಾಯ ಎಂದು ವಿದ್ಯಾರ್ಥಿ ಗುಂಪುಗಳು ಚೀರಿದವು. ವರ್ಗಗಳ ಬಾಗಿಲುಗಳನ್ನು ಮುರಿಯಲಾಯ್ತು. ನೋಟೀಸು ಬೋರ್ಡುಗಳ ಗ್ಲಾಸುಗಳನ್ನು ಒಡೆಯಲಾಯ್ತು. ಕಾಲೇಜಿನ ಕೈದೋಟವನ್ನು ಧ್ವಂಸಗೊಳಿಸಲಾಯ್ತು.

ಪ್ರಿನ್ಸಿಪಾಲರ ಚೇಂಬರಿನಿಂದ ಮತಗಳ ಮರು ಎಣಿಕೆಯ ಬಗ್ಗೆ ನಿರ್ಣಯ ಬರಲೇ ಇಲ್ಲ. ಅಧಿಕೃತ ವಕ್ತಾರರು ಮೀಟಿಂಗು ಮುಂದುವರಿದಿದೆ ಎಂದರು.

ವಿದ್ಯಾರ್ಥಿಗಳು ಕಾಲೇಜಿನ ಅಂಗಳದಲ್ಲಿ ಜಿಗಿದರು. ಕುಣಿದರು ಮತ್ತು ಓಡಿದರು. ಬೇಸತ್ತು ತಮ್ಮ ತಮ್ಮ ಮನೆಗಳನ್ನು ತಲುಪಿದರು.

ಮರುದಿನ ಎಂದಿನಂತೆ ವರ್ಗಗಳು ನಡೆದವು. ಮತಗಳ ಮರು‌ಎಣಿಕೆ ನಡೆಯಲೇ ಇಲ್ಲ. ಇಬ್ಬರು ಸ್ಪರ್ಧಿಗಳಲ್ಲಿ ಒಪ್ಪಂದವಾಗಿದೆಯೆಂಬ ಸುದ್ದಿ ದಟ್ಟವಾಗಿ ಹಬ್ಬಿತು.

ಮುಂದೆ ವಿದ್ಯಾರ್ಥಿಸಂಘದ ಉದ್ಘಾಟನಾ ಸಮಾರಂಭ ಎರಡೇ ದಿನಗಳಲ್ಲಿ ಜರುಗಿತು. ವೇದಿಕೆಯ ಮೇಲೆ ಅತಿಥಿಗಳೊಂದಿಗೆ ಗೆದ್ದ ಕಲ್ಲಣ್ಣವರ ಸೋತ ಪಾಟೀಲ – ಇಬ್ಬರೂ ವಿರಾಜಮಾನರಾಗಿದ್ದಾರೆ. ಹಾವು ಮುಂಗಲಿಗಳೆರಡೂ ಒಂದೇ ಕಡೆ ಹೇಗೆ ಕುಳಿತಿವೆ ಎಂದು ನನಗೆ ಆಶ್ಚರ್ಯ, ವಿದ್ಯಾರ್ಥಿಸಂಘದ ಅಧ್ಯಕ್ಷನಾಗಿ ಕಲ್ಲಣ್ಣವರ ಪುಷ್ಪಮಾಲೆಯನ್ನು ಅತಿಥಿಗಳಿಗೆ ಹಾಕಿದರೆ, ಎನ್.ಎಸ್.ಎಸ್. ಗುಂಪಿನ ಮುಖ್ಯಸ್ಥನೆಂದು ಅದಕ್ಕಿಂತಲೂ ದೊಡ್ಡದಾದ ಪಾಟೀಲ ಯಾವಾಗ ಅದರ ಮುಖ್ಯಸ್ಥನಾದ ಎಂದು ಅಂದುಕೊಂಡೆ. ಇಲೆಕ್ಷನ್ನಿನಲ್ಲಿ ಸೋತ, ರಿಕೌಂಟಿಗಾಗಿ ಗದ್ದಲವೆಬ್ಬಿಸಿದ ಪಾಟೀಲನನ್ನು ಒಮ್ಮೆಲೆ ಎನ್.ಎಸ್.ಎಸ್. ಗುಂಪಿನ ಮುಖ್ಯಸ್ಥನನ್ನಾಗಿ ಮಾಡಿ ವೇದಿಕೆಯ ಮೇಲೆ ಕೂಡಿಸಿಬಿಟ್ಟಿದ್ದರಿಂದ ಸಭೆಯಲ್ಲಿ ನಡೆಯಬಹುದಾದ ಗದ್ದಲ ನಡೆಯಲಿಲ್ಲ.

ಪ್ರಿನ್ಸಿಪಾಲರ ಜಾಣ್ಮಗೆ ಮನದಲ್ಲಿಯೇ ಅಭಿನಂದಿಸಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎನ್ನ ಮೊರೆ
Next post ಆಟದ ಗೊಂಬೆ ನಾನಲ್ಲ

ಸಣ್ಣ ಕತೆ

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys