ದೇವಾಲಯ ಸಂಸ್ಕೃತಿಯ ಬಹುಮುಖಿ ಆಯಾಮಗಳು

ದೇವಾಲಯ ಸಂಸ್ಕೃತಿಯ ಬಹುಮುಖಿ ಆಯಾಮಗಳು

ಭಕ್ತಿಯೆಂಬುದು ಅತ್ಯಂತ ಖಾಸಗಿ ಕಲ್ಪನೆ. ಇದು ದೈವದ ಬಗೆಗಿನ ಕಲ್ಪನೆ ಮಾತ್ರವಲ್ಲ; ವಿವಿಧ ವ್ಯಕ್ತಿಗಳ ನಡುವಿನ ಭಾವನೆಯ ಒಂದು ವಿಧವೂ ಹೌದು. ಆದರೆ ಇದನ್ನು ಪಾರಂಪರಿಕವಾಗಿ ಭಕ್ತ ಮತ್ತು ದೈವದ ನಡುವಿನ ಸಂಬಂಧದ ನೆಲೆಯಲ್ಲಿಯೇ ಸ್ಥಾಪಿಸುತ್ತಾ ಬರಲಾಗಿದೆ. ಆದ್ದರಿಂದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ವಿಕಾಸದಲ್ಲಿ ಇದು ತನ್ನ ಮಹತ್ತರ ಪಾತ್ರವನ್ನು ನಿರ್ವಹಿಸಿರುವುದು. ಅಂತಿಮವಾಗಿ ಇದು ಒಟ್ಟು ಮನುಷ್ಯ ಜಗತ್ತಿಗೂ ವಿಸ್ತರಿಸುವ ಮಾತೇ ಆಗುತ್ತಿದೆ.

ವಾಸ್ತವವಾಗಿ ಖಾಸಗಿ ನೆಲೆಯ ಭಕ್ತಿಯು ಮನುಷ್ಯನ ವೈಯಕ್ತಿಕ ನೆಲೆಯಲ್ಲಿ ಮನೋವೈಜ್ಞೆನಿಕ ಪರಿಣಾಮವನ್ನು ಬೀರುವುದು ಸತ್ಯ. ಇದು ವಿವಿಧ ವ್ಯಕ್ತಿಗಳ ಸಂಸ್ಕಾರ ವಿಶೇಷಗಳ ಹಿನ್ನೆಲೆಯಲ್ಲಿ ವೈವಿಧ್ಯಮಯವಾದ ಫಲಿತಗಳನ್ನು ನೀಡುತ್ತದೆ. ಆದರೆ ಇದೇ ಭಕ್ತಿ ವೈಯಕ್ತಿಕ ನೆಲೆಯನ್ನು ಮೀರಿ ಸಾಮೂಹಿಕ ನೆಲೆಗೆ ಹಬ್ಬಿದಾಗ ಸಾಂಸ್ಥಿಕ ರೂಪವನ್ನು ಪಡೆಯುತ್ತದೆ. ತೋರಿಕೆ, ಆಡಂಬರ, ಪ್ರತಿಷ್ಠೆ ಮೊದಲಾದ ಹಲವು ವಿಚಾರಗಳು ಆಗ ಉದ್ಭವಗೊಳ್ಳುತ್ತವೆ. ನಿಜವಾದ ಭಕ್ತಿ ಹಿಂದಕ್ಕೆ ಸರಿಯುತ್ತದೆ. ಆಗ ಸಮಾಜದ ಮೇಲೆ ದುಷ್ಪರಿಣಾಮವುಂಟಾಗಿ ಮತೀಯತೆ ಮೆರೆಯುತ್ತದೆ. ಇದರ ರೂವಾರಿಗಳಾಗಿ ಪುರೋಹಿತ ಶಾಹಿಯ ವಕ್ತಾರರು ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ. ಇಂತಹ ಅಧಿಕಾರ ಚಲಾವಣೆಯ ಆವಾಸಸ್ಥಾನಗಳಾಗಿ ಮಠ-ಮಂದಿರಗಳಂತಹ ಸ್ಥಾವರಗಳು ಭೂಮಿಯ ಮೇಲೇಳುತ್ತವೆ; ಜಂಗಮತ್ವರೂಪಿ ಭಕ್ತಿ ಸಮಾಧಿ ಸೇರುತ್ತದೆ. ಈ ನೆಲೆಯಲ್ಲಿಯೇ ಬಾಹ್ಯಾಭಿವ್ಯಕ್ತಿಗೆ ವಿದೂರವಾದ ಭಕ್ತಿ ಇಲ್ಲಿ ದೇವಾಲಯಗಳ ಮೂಲಕ ಅಸ್ಫೋಟನೆಗೊಳ್ಳುವುದು. ಆಗಲೇ ಅಖಂಡ ಸಂಸ್ಕೃತಿಯ ಭಾಗವಾದ ದೇವಾಲಯ ಸಂಸ್ಕೃತಿ ಹಲವು ಆಯಾಮಗಳನ್ನು ತೆರೆದುಕೊಳ್ಳುವುದು.

ಪ್ರತಿಷ್ಠೆಯ ಕೇಂದ್ರಗಳಾಗಿ ದೇವಾಲಯಗಳು

ದೇವಾಲಯಗಳನ್ನು ಪ್ರಸ್ತುತ ಅಧ್ಯಯನದ ದೃಷ್ಟಿಯಿಂದ ಎರಡು ಸ್ಥೂಲ ವರ್ಗಗಳಲ್ಲಿ ವಿಂಗಡಿಸಿಕೊಳ್ಳಬಹುದು. ಒಂದು-ನಗರ ಕೇಂದ್ರಿತ ದೇವಾಲಯಗಳು. ಮತ್ತೊಂದು-ಗ್ರಾಮೀಣ ಪ್ರದೇಶದ ದೇವಾಲಯಗಳು. ಆದರೆ ಇಲ್ಲಿ ನನ್ನ ವಿವಕ್ಷೆ ಹೆಚ್ಚಾಗಿ ನಗರ ಕೇಂದ್ರಿತ ದೇವಾಲಯಗಳ ಕಡೆಗಿದೆ. ಆದರೂ ಗ್ರಾಮೀಣ ಮೂಲದ ದೇವಾಲಯಗಳು ಸಹ ನಗರಗಳಲ್ಲಿಯೇ ಅಥವಾ ಹಲವು ಹಳ್ಳಿಗಳೇ ಇಲ್ಲಿ ನಗರೀಕರಣಗೊಂಡಿರುವುದರಿಂದ ಒಟ್ಟು ದೇವಾಲಯಗಳು ಇಲ್ಲಿ ಸಮಾವೇಶಗೊಂಡಿವೆ ಎಂಬುದನ್ನು ನೆನೆಯುತ್ತಾ ನಡೆಯುತ್ತೇನೆ.

ಇತ್ತೀಚಿನ ವರ್ಷಗಳಲ್ಲಿ ನಗರಗಳ ವಿವಿಧ ಬಡಾವಣೆಗಳಲ್ಲಿ ದೇವಾಲಯಗಳು ಸಂಪದ್ಯುಕ್ತವಾಗಿ ಮೇಲೇಳುತ್ತಿವೆ. ಫುಟ್‌ಪಾತ್‌ಗಳು ಸಹ ಇದಕ್ಕೆ ಬೇಡ ಅನ್ನುವಂತಿಲ್ಲ. ಇಂತಹ ದೇವಾಲಯಗಳ ನಿರ್ಮಾಪಕರುಗಳು ಕಪು ಹಣ ಗಭಿತ ವೈಟ್ ಕಾಲರ್‌ಗಳು ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ. ಆದ್ದರಿಂದ ಟ್ರಸ್ಟಿಗಳಾಗುವುದು ದೇವಾಲಯಗಳ ಕಾರ್ಯಕಲಾಪಗಳನ್ನು ತಮ್ಮ ಜೀವನದ ಅತಿಮುಖ್ಯ ಕಾರ್ಯಕ್ರಮಗಳಲ್ಲೊಂದನ್ನಾಗಿ ಮಾಡಿಕೊಳ್ಳುವುದು ನೋಡುವ ಕಣ್ಣುಗಳ ಎದುರಿನಲ್ಲಿ ಪ್ರತಿಷ್ಠೆಯ ವಿಚಾರಗಳನ್ನಾಗಿ ಮಾಡಿಕೊಂಡಿರುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಇವರಲ್ಲಿಯೇ ಕಾಣಿಸಿಕೊಳ್ಳುವ ಪೈಪೋಟಿಯಿಂದಾಗಿ ದೇವಾಲಯಗಳ ಭೌತಿಕ ಸ್ವರೂಪವೂ ವರ್ಣರಂಜಿತವಾಗಿ ಕಂಗೊಳಿಸತೊಡಗಿದೆ. ಪುರೋಹಿತರ ಆಯ್ಕೆಯಲ್ಲಿಯೂ ಶಾಸ್ತ್ರ ಮೂಲವಾದ ಮಾನದಂಡಗಳಿವೆ. ಆಯ್ಕೆಯಾದ ಪುರೋಹಿತರಿಗೂ ಕನಿಷ್ಠ ಕಾರ್ಯಕಲಾಪಗಳನ್ನು ನಿರ್ದಿಷ್ಟವಾಗಿ ನಡೆಯಿಸುವ ಜವಾಬ್ದಾರಿ ಇದೆ. ಇದರ ಪರಿಶೀಲನೆಯಿಂದಲೇ ಭಕ್ತಾದಿಗಳು ಬಸ್ಸುಗಳನ್ನೂ ಮೀರಿ, ಸ್ಕೂಟರು-ಕಾರುಗಳಲ್ಲಿ ಹೆಚ್ಚು ಹೆಚ್ಚಾಗಿ ಬರಲಾರಂಭಿಸುತ್ತಾರೆ. ಶಾಸ್ತ್ರ, ಭವಿಷ್ಯ, ನಕ್ಷತ್ರ, ಕೇಳುತ್ತಲೇ ಅನೇಕ ವೈದಿಕ ಮೂಲವಾದ ವ್ರತಗಳನ್ನು ತಮ್ಮ ಮನೆಗೆ ಕೊಂಡ್ಯೊಯ್ಯುತ್ತಾರೆ. ಇದರಿಂದ ತಾತ್ಕಾಲಿಕವಾಗಿಯಾದರೂ ತಾವು ‘ಬ್ರಾಹ್ಮಣ’ರಾಗುವ ವಿಫಲ ಯತ್ನ ಮಾಡುತ್ತಾ, ತಮ್ಮ ಜಾತಿ ಮೂಲವಾದ ಕೀಳರಿಮೆಯನ್ನು ಹೊರಗೆ ಪ್ರದರ್ಶಿಸುತ್ತಾರೆ. ಇಂತಹ ಎಡೆಗಳಲ್ಲಿ ಶ್ರಮವೂ ಕುಂಠಿತಗೊಳ್ಳುತ್ತದೆ; ಬೊಜ್ಜು ಬೆಳೆಯುತ್ತದೆ. ಆಗ ಶ್ರಮಕ್ಕೆ ದೂರವಾದ ಮಾರ್ಗಗಳಾದ ಭ್ರಷ್ಟಾಚಾರಗಳಿಂದ ಹಣದ ಸಂಪಾದನೆಗೆ ತೊಡಗಿ, ಪಾಪಪ್ರಜ್ಞೆ ಮತ್ತು ಅಪರಾಧಿ ಪ್ರಜ್ಞೆಗಳನ್ನು ಬೆಳೆಯಿಸಿಕೊಳ್ಳುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ‘ತಿರುಪತಿ’, ‘ಧರ್ಮಸ್ಥಳ’ಗಳು ಇನ್ನಷ್ಟು ಹತ್ತಿರವಾಗುತ್ತವೆ. ಆ ದೇವರುಗಳಿಗೆ ಕಾಣಿಕೆಯೂ ಹೆಚ್ಚುತ್ತದೆ.

ಇಂತಹ ಭಕ್ತಾದಿಗಳು ಸಣ್ಣಪುಟ್ಟ ಗುಡಿಗಳಿಗೆ ಹೋಗದಿರುವುದೇ ವಿಚಿತ್ರ ಮತ್ತು ವಿಶೇಷ. ಕಾರಣ, ಅಲ್ಲಿ ದೇವರಿಲ್ಲ ಎಂದಲ್ಲ; ಭಕ್ತಿಯಷ್ಟೇ ತಮ್ಮ ಅಪ್ರಜ್ಞೆಪೂರ್ವಕವಾದ ಪ್ರತಿಷ್ಠೆಯೂ ಮುಖ್ಯ ಎನ್ನಿಸುವುದರಿಂದ ಮಾರಮ್ಮ, ಪಟ್ಲದಮ್ಮ, ಹೊಸಮ್ಮ, ಕಾಟೇರಮ್ಮ ಅಂತಹ ಕ್ಷುದ್ರ ದೇವತೆಗಳ ಗುಡಿಗಳು ವರ್ಷಕ್ಕೊಮ್ಮೆಯಾದರೂ ಬಾಗಿಲು ತೆರೆಯುವುದು ದುಸ್ತರವಾಗುತ್ತದೆ. ಆದ್ದರಿಂದಲೇ ಇಂತಹ ಗುಡಿಗಳ ಪುರೋಹಿತರು ಅನ್ನಕ್ಕಾಗಿ ಇತರೆ ಮಾರ್ಗಗಳನ್ನು ಕಂಡುಕೊಂಡು, ಪೌರೋಹಿತ್ಯವನ್ನು ಕೇವಲ ಹವ್ಯಾಸವನ್ನಾಗಿ ಉಳಿಸಿಕೊಂಡಿರುವುದು.

ಹೀಗೆ ಸಮಾಜ ಒಪ್ಪಿರುವ ಸಾಂಸ್ಥಿಕ ಭಕ್ತಿ ಮತ್ತು ಶ್ರೇಣೀಕೃತ ಸಮಾಜದ ಒಳಗೆ ಹುಟ್ಟುವ ಪ್ರತಿಷ್ಠೆ-ಇವು ದೇವಾಲಯ ಸಂಸ್ಕೃತಿಯ ಒಳಗೆ ಸಮಾಗಮಗೊಳ್ಳುತ್ತವೆ.

ನಿರುದ್ಯೋಗ ನಿವಾರಣೆಯ ಕೇಂದ್ರಗಳು

ಬ್ರಾಹ್ಮಣರು ಬ್ರಾಹ್ಮಣಶಾಹಿಯ ವಕ್ತಾರರಾಗಿಯೇ ಉಳಿಯಲು ದೇವಾಲಯ ಸಂಸ್ಕೃತಿಯು ಸಹಾಯಕವಾಗಿದೆ. ಇದರಿಂದ ಜೀವನದ ಮುಖ್ಯ ಸಮಸ್ಯೆಗಳಲ್ಲೊಂದಾದ ನಿರುದ್ಯೋಗವು ಇಲ್ಲಿ ನಿವಾರಣೆಯಾಗುತ್ತದೆ. ಇದರ ಗಳಿಕೆಗೆ ಮೊದಲ ಹಾಗೂ ಕೊನೆಯ ಅರ್ಹತೆಯೇ ಬ್ರಾಹ್ಮಣ ಜನಾಂಗದಲ್ಲಿ ಹುಟ್ಟುವುದು. ಆದರೆ ಯಾವುದೇ ಜನಾಂಗದ ಒಳಗೆ ಹುಟ್ಟುವುದು ಎಂಬುದು ಆಕಸ್ಮಿಕ ಎಂಬುದಾಗಿರುವುದರಿಂದ ಆಯ್ಕೆಗೆ ಸ್ವಾತಂತ್ರ್ಯವಿಲ್ಲ. ಆದ್ದರಿಂದ ಇಲ್ಲಿ ಹುಟ್ಟಿದ ವ್ಯಕ್ತಿ ಸುಲಭವಾಗಿ ಇಂತಹ ದೇವಾಲಯಗಳಲ್ಲಿ ಪುರೋಹಿತನಾಗುವ ಮೂಲಕ ತನ್ನ ನಿರುದ್ಯೋಗವನ್ನು ನಿವಾರಿಸಿಕೊಳ್ಳಬಹುದು. ಟ್ರಸ್ಟಿಗಳು ಕೇಳುವ ಶಾಸ್ತ್ರೀಯ ಅರ್ಹತೆ ಇಲ್ಲದಿರುವಾಗಲೂ ಸಹಾಯಕರಾಗಿ ಸೇರಲು ಅಭ್ಯಂತರವಿಲ್ಲ. ಇದಕ್ಕಾಗಿ ದೇವಾಲಯಗಳು ಲಭ್ಯವಿಲ್ಲದಾಗ ಹೊಸ ದೇವಾಲಯಗಳು ನಿರೀಕ್ಷಿತವಾಗಿಯೇ ಮೇಲೇಳುತ್ತವೆ ಎಂಬುದು ಹುನ್ನಾರದ ಸತ್ಯ.

ಹೀಗೆ ಎಲ್ಲಾ ಸಾಮಾನ್ಯ ದೇವಸ್ಥಾನಗಳಲ್ಲಿಯೂ (ಕೆಲವು ವಿಶಿಷ್ಟ ದೇವಸ್ಥಾನಗಳನ್ನು ಹೊರತುಪಡಿಸಿ) ಶೇಕಡವಾರು ಮಟ್ಟದ ಎರಡರಷ್ಟು ಜನ ಉದ್ಯೋಗಗಳನ್ನು ಆಕ್ರಮಿಸಿದ್ದಾರೆ. ಆದ್ದರಿಂದ ಬ್ರಾಹ್ಮಣೇತರ ನೆಲೆಯಿಂದ ಇತ್ತೀಚಿಗೆ ಕೂಗುಗಳು ಕೇಳಿ ಬರುತ್ತಿವೆ. ಅವೆಂದರೆ ಪುರೋಹಿತ ಹುದ್ದೆಗಳಿಗೂ ರೋಸ್ಟರ್ ಪಾಲಿಸಬೇಕು; ಅದಕ್ಕಾಗಿ ಸರ್ಕಾರವು ನೀತಿಯೊಂದನ್ನು ರೂಪಿಸಬೇಕು ಎಂಬ ಅಹವಾಲುಗಳು.

ದೇವರುಗಳ ಸಂಸ್ಕೃತೀಕರಣ

ನಮ್ಮ ಸಂಸ್ಕೃತಿಯು ಎಲ್ಲಾ ಕಾಲದಲ್ಲಿಯೂ ಮೇಲ್ಮುಖವಾಗಿ ಚಿಂತಿಸುತ್ತಾ, ಮೇಲ್ಮುಖಿಯಾಗಿಯೇ ಚಲಿಸಿದೆ. ಕಾರಣ, ಇದು ಜಾತಿಯಾಧಾರಿತ ಶ್ರೇಣಿಕೃತ ಸಮಾಜ. ಇದರ ಮೇಲ್ನೆಲೆಯಲ್ಲಿ ನೆಲೆಸಿರುವವರು ಬ್ರಾಹ್ಮಣ ವರ್ಗ. ಆದ್ದರಿಂದ ಬ್ರಾಹ್ಮಣೀಕರಣದ ಪ್ರಕ್ರಿಯೆ ನಮ್ಮ ಸಂಸ್ಕೃತಿ-ಪರಂಪರೆಯಲ್ಲಿ ಮುಖ್ಯವಾದ ನೆಲೆಯಾಗಿದೆ. ಆದ್ದರಿಂದಲೇ ಅದರ ಭಾಗವಾದ ಕನ್ನಡ ಮತ್ತು ಅದರ ಚಿಂತಕರು ಸಹ ಸಂಸ್ಕೃತದ ಬಗೆಗೆ ಮೇಲರಿಮೆಯನ್ನು ಇಟ್ಟುಕೊಂಡು, ಅದರ ಮೂಲಕವಾಗಿಯೇ ಕನ್ನಡವನ್ನು ನೋಡುತ್ತಾ, ಬೆಳೆಯಿಸುತ್ತಾ ಬಂದದ್ದು. ಅಂತೆಯೇ ಜೈನ ಧರ್ಮವೂ ಮತ್ತೊಂದು ಪರ್ಯಾಯ ಬ್ರಾಹ್ಮಣ ಧರ್ಮವಾಗಿ ಮಾರ್ಪಟ್ಟದ್ದು.
ಈ ಪ್ರಜ್ಞೆ ಅಪ್ರಜ್ಞೆಪೂರ್ವಕವಾಗಿಯಾದರೂ ಜನರಲ್ಲಿ ನೆಲೆಸಿರುವುದರಿಂದ ಮಾರಮ್ಮ, ಮಾರಿಕಾಂಭ ಆಗುತ್ತಾಳೆ. ಅಂತೆಯೇ ಲಕ್ಕಮ್ಮ, ದುರ್ಗಮ್ಮ, ಹೊನ್ನಮ್ಮ, ಮೊದಲಾದವರು ಕ್ರಮವಾಗಿ ಲಕ್ಷ್ಮಿ, ದುರ್ಗಾಂಬಿಕಾ, ಹೊನ್ನಾದೇವಿಗಳಾಗಿ ಮಾರ್ಪಡುತ್ತಾರೆ. ಗಂಡು ದೇವರುಗಳಲ್ಲಿ ಆಂಜನೇಯನು ಮಾರುತಿಯೂ ಆಗಿ ಬಿಡುತ್ತಾನೆ.

ದೇವರುಗಳಿಗೆ ಕನ್ನಡ ಗೊತ್ತಿಲ್ಲ

ದೇವರುಗಳ ಭಾಷೆ ಸಂಸ್ಕೃತ ಮಾತ್ರ. ಆದರೆ ಭಕ್ತರುಗಳ ಭಾಷೆ ಜನ ಭಾಷೆಗಳೇ ಆಗಿರುತ್ತವೆ. ಆದ್ದರಿಂದಲೇ ಇಲ್ಲಿ ದೈವ ಮತ್ತು ಭಕ್ತನ ನಡುವೆ ಏಳುವ ಸಂವಹನದ ತೊಡಕಿನ ಉಪಶಮನಕ್ಕಾಗಿ ಮತ್ತು ಪರಸ್ಪರ ಭಕ್ತಿ ಮತ್ತು ಆಶೀರ್ವಾದಗಳ ಪೂರಕ ವಿನಿಮಯಕ್ಕಾಗಿ ಪೂಜಾರಿಯಿರುವುದು. ಇವರಿಗೆ ಸಂಸ್ಕೃತ ಗೊತ್ತಿದೆ. ಪೂರ್ಣ ಗೊತ್ತಿಲ್ಲದಿದ್ದಾಗಲೂ ಕೆಲವು ಮಂತ್ರಗಳನ್ನಾದರೂ ಸಾಮಾನ್ಯವಾಗಿ ಉಚಾಯಿಸುವಷ್ಟು ಗೊತ್ತಿರುತ್ತದೆ. ಇಷ್ಟರಿಂದಲೇ ಭಕ್ತರು ಪುರೋಹಿತರ ಶಾಸ್ತ್ರಜ್ಞೆನದ ಬಗ್ಗೆ ತೃಪ್ತರಾಗುತ್ತಾರೆ.

ಹೀಗೆ ಸಂಸ್ಕೃತ ಭಾಷೆಯ ಎದುರು ಜನಭಾಷೆಗಳು ಎರಡನೆಯ ದರ್ಜೆಯ ಭಾಷೆಗಳಾಗಿ ನಿಲ್ಲುವಂತೆಯೇ ಪುರೋಹಿತರ ಎದುರಿನಲ್ಲಿ ಜನರು ಸಹ ಎರಡನೆಯ ದರ್ಜೆಯವರೇ ಆಗಿ ಬಿಡುತ್ತಾರೆ.

ಕಾನೂನನ್ನು ಸುಲಭವಾಗಿ ಮುರಿವ ಪ್ರಬಲ ಅಸ್ತ್ರಗಳು

ದೇವಾಲಯಗಳು ಫುಟ್‌ಪಾತ್‌ಗಳ ಮೇಲೆಯೂ ಸುಲಭವಾಗಿ ಏಳುತ್ತವೆ. ಇದಕ್ಕೆ ಯಾವುದೇ ಕಾನೂನಿನ ತೊಡಕು ಇಲ್ಲ. ಇದು ಪ್ರಾಯೋಗಿಕ ಮತ್ತು ವಾಸ್ತವಿಕ ಸತ್ಯ. ಉದ್ಯೋಗ ವಂಚಿತ ಜನ, ಆರ್ಥಿಕವಾಗಿ ತಳಮುಟ್ಟಿದ ಜನ ಫುಟ್‌ಪಾತ್ ಮತ್ತು ಪಾರ್ಕುಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು, ಪ್ರಾಮಾಣಿಕವಾಗಿ ತಮ್ಮ ಶ್ರಮದಿಂದಲೇ ಹೊಟ್ಟೆ ಹೊರೆಯುವುದಕ್ಕೆ ಕಾನೂನಿನ ಬಲ ಪ್ರಹಾರದ ತಡೆ ಇದೆ. ಆದರೆ ನಾಜೂಕಾಗಿ ನೆಲೆ ಪಡೆಯುತ್ತಾ, ಹೊಟ್ಟೆಗೆ ವಿದೂರವಾದ ಚಟುವಟಿಕೆಗಳಿಗೆ ಆವಾಸಸ್ಥಾನವಾಗಿರುವ ದೇವಾಲಯಗಳು ಭಕ್ತಿಯ ಹೆಸರಿನಲ್ಲಿ ಕಂಗೊಳಿಸುತ್ತಾ ಬಂದಿರುವುದು ಮಾತ್ರ ಪ್ರಜಾಪ್ರಭುತ್ವವು ಸಂಭ್ರಮದಿಂದ ಅರ್ಧಶತಮಾನವನ್ನು ದಾಟಿದ ವ್ಯಂಗ್ಯಗಳಲ್ಲೊಂದಾಗಿದೆ.

ಆತ್ಮ ವಿಶ್ವಾಸವನ್ನು ಕುಗ್ಗಿಸುವ ಪರಿಣಾಮಕಾರಿ ಶಕ್ತಿಗಳು

ತನ್ನ ಶಕ್ತಿಯ ಬಗೆಗೆ ವಿಶ್ವಾಸ ಇಡದವನು ಮಾತ್ರ ಮತ್ತೊಂದು ಶಕ್ತಿಯನ್ನು ನೆಚ್ಚುತ್ತಾನೆ. ಆಗ ಭಯ ಮೂಲವಾದ ಭಕ್ತಿ ಮತ್ತು ಭಕ್ತಿ ಮೂಲವಾದ ದೈವ ಎದ್ದು ಬರುತ್ತದೆ. ತನ್ನ ಜುಟ್ಟು ಅದರ ಕೈ ಸೇರುತ್ತದೆ. ತಾನೇ ಆಡಿದರೂ ಅದೇ ಆಡಿಸಿದಂತೆ ಭಾಸವಾಗುತ್ತದೆ. ಇದು ಮನೋವೈಜ್ಞೆನಿಕ ನೆಲೆಯಲ್ಲಿಯೂ ಸತ್ಯ.

ಇಂತಹ ಶಕ್ತಿಗಳ ಕೇಂದ್ರ-ದೇವಾಲಯ.

ಮೌಢ್ಯವನ್ನು ಬೋಧಿಸುವ ಶೈಕ್ಷಣಿಕ ಕೇಂದ್ರಗಳು

ಕಾಕತಾಳೀಯ ನ್ಯಾಯಕ್ಕೂ, ದೇವಸ್ಥಾನ ಎಂಬ ನ್ಯಾಯಾಲಯಕ್ಕೂ ತುಂಬು ನಂಟು. ಆದ್ದರಿಂದಲೇ ‘ಹಣೆಬರಹ’ಕ್ಕೂ ಇಲ್ಲಿ ಸಮರ್ಥನೆ ಸಿಗುವುದು. ಈ ತಾತ್ವಿಕ ನೆಲೆಯಲ್ಲಿ ಭಕ್ತಿ, ದೈವ ಮತ್ತು ಪುರೋಹಿತರ ನಡುವೆ ನಡೆಯುವ ಅನುಸಂಧಾನದಿಂದ ಮೌಢ್ಯ ವಿಸ್ತರಿಸುತ್ತದೆ. ಸಮಾಜವನ್ನು ವ್ಯಾಪಿಸುತ್ತದೆ. ಆದ್ದರಿಂದಲೇ ಪೆರಿಯಾರ್‌ರವರು ಹೇಳಿದ್ದು-ದೇವಾಲಯಗಳ ನಾಶದಿಂದಲೇ ಭಾರದ ಪುನರುತ್ಥಾನ ಎಂದು.

ವಾಸ್ತವವಾಗಿ ನಾವು ಒಪ್ಪಿರುವ ಶೈಕ್ಷಣಿಕ ಕೇಂದ್ರಗಳ ಬೋಧನೆಗಳಿಗಿಂತ, ಮಠ-ಮಂದಿರಗಳ ಬೋಧನೆಗಳೇ ಜನರಿಗೆ ಹೆಚ್ಚು ನಾಟುವುದು. ಇದೇ ಶತಮಾನಗಳಿಂದಲೂ ಭಾರತದಲ್ಲಿ ಆಗುತ್ತಾ ಬಂದಿರುವುದು. ಆದ್ದರಿಂದಲೇ ವಿಜ್ಞೆನ ಮತ್ತು ತಂತ್ರಜ್ಞೆನಗಳು ನಮ್ಮಲ್ಲಿ ಎಷ್ಟೇ ಬೆಳೆದರೂ ವೈಜ್ಞೆನಿಕ ಮನೋಧರ್ಮದ ಕೊರತೆ ವಿಜ್ಞೆನದ ಫ್ರೊಫೆಸರ್‌ಗಳಲ್ಲಿಯೂ ಗಣನೀಯವಾಗಿ ಇರುವುದು. ಇನ್ನು ಸಾಮಾನ್ಯರ ಬಗ್ಗೆ ಹೇಳುವಂತಿಲ್ಲ.

ಈ ಹಿನ್ನೆಲೆಯಲ್ಲಿ ಜನರ ಮನಸ್ಸು ಶಾಲಾ, ಕಾಲೇಜು, ಯೂನಿವರ್ಸಿಟಿಗಳಿಂದ ರೂಪುಗೊಳ್ಳದೆ, ಮಠ-ಮಂದಿರಗಳಿಂದಲೇ ರೂಪುಗೊಳ್ಳುತ್ತಿದೆ ಎಂಬುದು ಸತ್ಯಕ್ಕೆ ಹೆಚ್ಚು ಹತ್ತಿರದ ಮಾತಾಗುತ್ತದೆ. ಮತ್ತು ಬಹುತೇಕ ಸದರಿ ಶಿಕ್ಷಣ ಸಂಸ್ಥೆಗಳೂ ಮಠಮಯವಾಗಿಯೇ ಅಪ್ರಜ್ಞೆಪೂರ್ವಕವಾಗಿ ಕಾರ್ಯ ಪ್ರವೃತ್ತವಾಗಿವೆ ಎಂಬುದು ಸಹ ನಿಜದ ಮಾತೇ ಆಗುತ್ತದೆ.

ಸಾಮಾಜಿಕ ಸಮಾನತೆಯ ತಾಣಗಳು

ಪರಿಚಿತ ಜನರ ನಡುವೆ ಇರುವ ದೇವಾಲಯಗಳಲ್ಲಿ (ಹಳ್ಳಿಗಳಲ್ಲಿ) ದಲಿತರಿಗೆ ಪ್ರವೇಶವನ್ನು ಭಾರತದ ‘ಕಾಲ’ಗಳು ನಿರಾಕರಿಸುತ್ತಾ ಬಂದಿವೆ. ಆದರೆ ಇದು ಆರ್ಥಿಕ ಉದಾರೀಕರಣದ ಕಾಲ! ಲಾಭ ಮುಖ್ಯ. ಇದನ್ನೂ ಒಳಗೊಂಡು ಮತ್ತು ಮೀರಿದ ಹಲವು ಕಾರಣಗಳಿಂದ ಎಲ್ಲಾ ಸಾಮಾಜಿಕ ವರ್ಗದ ಜನ ದೇವಾಲಯವನ್ನು ಪ್ರವೇಶಿಸಬಹುದಾಗಿದೆ; ಗರ್ಭ ಗುಡಿಯನ್ನು ಬಿಟ್ಟು.

ದಲಿತರು ದೇವಾಲಯವನ್ನು ಪ್ರವೇಶಿಸುವಷ್ಟು ನಮ್ಮ ಸಂಸ್ಕೃತಿ ಚಲಿಸಿದೆ. ಆದರೆ ಸುಖನಾಸಿ ಅಥವಾ ನವರಂಗ ಮಂಟಪದಲ್ಲಿ ಕಾಲದಿಂದಲೂ ಇದ್ದ ಜನ ಗರ್ಭಗೃಹವನ್ನು ಪ್ರವೇಶಿಸುವಷ್ಟು ಚಲಿಸಿಲ್ಲದಿರುವುದೇ ವಿರೋಧಾಭಾಸ. ಆದರೂ ಗರ್ಭಗೃಹವನ್ನುಳಿದಂತೆ ದೇವಾಲಯದ ಇತರೆ ಭಾಗಗಳಿಗೆ ದಲಿತರೂ ಅನ್ಯಧರ್ಮೀಯರೂ ಪ್ರವೇಶ ಪಡೆಯುವ ಮೂಲಕ ಸಾಮಾಜಿಕ ಸಮಾನತೆಯನ್ನು ಇಲ್ಲಿಯಾದರೂ ತಾತ್ಕಾಲಿಕವಾಗಿ ಪಡೆದುಕೊಂಡಿದ್ದಾರೆ ಎನ್ನಿಸುತ್ತದೆ.

ಒಟ್ಟಾರೆ ಸಂಸ್ಕೃತಿ ವಿಕಾಸದ ಒಂದು ಕಾಲಘಟ್ಟದಲ್ಲಿ ಕಾಣಿಸಿಕೊಂಡ ದೇವಾಲಯ ಎಂಬ ಸಾಂಸ್ಕೃತಿಕ ಘಟಕ ಕ್ರಮೇಣ ಆಕಾಶವನ್ನು ಮುಟ್ಟಲೆಳಸುತ್ತಾ, ಇಂದು ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆಯೂ ಚಾಚಿದೆ. ಆಧುನಿಕ ಸಂದರ್ಭದಲ್ಲಿಯೂ ವಿಜ್ಞೆನದೊಂದಿಗೆ ತೀವ್ರ ಸ್ಪರ್ಧೆಗಿಳಿದಿರುವ ಮೌಢ್ಯದ ಬೆನ್ನಿಗೆ ದೇವಾಲಯ ನಿಂತಿದೆ. ಆದರೂ ವಿಜ್ಞೆನ-ತಂತ್ರಜ್ಞೆನ ವಿಕಾಸವಾಗುತ್ತಿದೆ. ಇದರೊಂದಿಗೆ ದೇವಾಲಯವೂ ಜಡತೆಯ ನೆಲೆಗಳನ್ನು ಸಂಸ್ಕೃತಿಯಲ್ಲಿ ಬಲವತ್ತರವಾಗಿ ವಿಸ್ತರಿಸುತ್ತಿದೆ. ಇಂತಹ ವಿರೋಧಾಭಾಸಗಳ ಒಟ್ಟು ಪ್ರಕ್ರಿಯಾತ್ಮಕ ಮೊತ್ತವೇ ಎಲ್ಲಾ ಕಾಲಕ್ಕೂ ಸಂಸ್ಕೃತಿಯಾಗಿರುತ್ತದೆಯೇ ಎಂಬ ಪ್ರಶ್ನೆ ನನ್ನ ಮುಂದೆ ಇನ್ನೂ ಜೀವಂತವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗನ ನಾಯಿ ಮರಿ
Next post ನೆತ್ತರಲ್ಲಿ ನೆಂದ ಹೂವು

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys