ಅಂಬೇಡ್ಕರ್ ದೃಷ್ಟಿಯಲ್ಲಿ ಮಾರ್ಕ್ಸ್

ಅಂಬೇಡ್ಕರ್ ದೃಷ್ಟಿಯಲ್ಲಿ ಮಾರ್ಕ್ಸ್

ಪ್ರತಿವರ್ಷದಂತೆ ಏಪ್ರಿಲ್ ಹದಿನಾಲ್ಕು ಬಂದು ಹೋಯಿತು. ಅಂಬೇಡ್ಕರ್ ಒಂದು ಆಚರಣೆಯಾಗಿ ಹದಿನಾಲ್ಕರಂದು ಕಾಣಿಸಿಕೊಂಡು ಕಣ್ಮರೆಯಾದರು!

ಅಂಬೇಡ್ಕರ್ ಆತ್ಮವಿಶ್ವಾಸ ಮತ್ತು ಪ್ರತಿಭಟನೆಯ ಒಂದು ಪ್ರತೀಕ. ಸಾಮಾಜಿಕ ಹೋರಾಟದ ಒಂದು ದಿಕ್ಸೂಚಿ. ಅಧ್ಯಯನ ಮತ್ತು ಹೋರಾಟಗಳನ್ನು ಒಟ್ಟಿಗೇ ಅಂತರ್ಗತ ಮಾಡಿಕೊಂಡಿದ್ದ ಅಂಬೇಡ್ಕರ್‌ ಯಾವತ್ತೂ ನಮಗೆ ಅರಿವಿನ ಒಂದು ಮಾಧ್ಯಮವಾಗಬೇಕು; ಅಮಲಿನ ಅಸ್ತ್ರವಾಗಬಾರದು.

ಅಂಬೇಡ್ಕರ್ ಕನಸಿನ ನಮ್ಮ ಸಮಾಜದ ಸ್ವರೂಪವನ್ನು ಅವರ ರಾಜಕೀಯ ಚಿಂತನೆಗಳ ಮೂಲಕ ನಾವು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಒಬ್ಬ ಮಹಾಪುರುಷರನ್ನು, ಒಂದು ಅದ್ಭುತ ಸಿದ್ಧಾಂತವನ್ನು ಒಪ್ಪುವ ಬಹು ಪಾಲು ಜನರು ಆತನ ಅಥವಾ ಆ ವಾದದ ಸಮರ್ಥನೆಗಾಗಿ ಅನ್ಯ ವ್ಯಕ್ತಿ ಅಥವಾ ಅನ್ಯವಾದದ ಅವಹೇಳನ ಮಾಡುವುದನ್ನು ಕರಗತ ಮಾಡಿಕೊಂಡಿರುವ ಬುದ್ಧಿವಂತರ ಈ ನಾಡಿನಲ್ಲಿ ಅಂಬೇಡ್ಕರ್ ಸಹ ಇದಕ್ಕೆ ಹೊರತಾಗಿಲ್ಲ. ಅಂಬೇಡ್ಕರ್ ಚಿಂತನೆಗಳು ನಮ್ಮ ಜಾತಿ ವ್ಯವಸ್ಥೆಯನ್ನು ಸಮರ್ಥವಾಗಿ ವ್ಯಾಖ್ಯಾನಿಸುವ ಕಾರಣಕ್ಕಾಗಿ ಅವರನ್ನು ಬಸವಣ್ಣ ಮತ್ತು ಲೋಹಿಯಾ ಚಿಂತನೆಗಳ ಮೂಲಕ ಸಮರ್ಥಿಸುವುದು. ಬೌದ್ಧ ಧರ್ಮಿಯರಾಗಿದ್ದಕ್ಕಾಗಿ ಬಸವನ ಜೊತೆಗೆ ಬುದ್ಧನನ್ನೂ ಸೇರಿಸುವುದು ನಮ್ಮ ಸಾಮಾಜಿಕ ವ್ಯಾಖ್ಯಾನದ ವ್ಯಾಪ್ತಿ ಮತ್ತು ಮಿತಿಗಳಿಗೆ ಒಂದು ಉದಾಹರಣೆ. ನನ್ನ ತಿಳಿವಳಿಕೆಯ ಮಿತಿಯಲ್ಲಿ ಹೇಳುವುದುದಾದರೆ ಅಂಬೇಡ್ಕರ್ ಅವರನ್ನು ಹೆಚ್ಚು ಕಾಡಿದವರು ಬುದ್ಧ ಮತ್ತು ಮಾರ್ಕ್ಸ್. ಬುದ್ದನು ಅಂಬೇಡ್ಕರ್‌ ಅಂತರಂಗಕ್ಕೆ ಸೇರಿದರೆ, ಕಾರ್ಲ್‌ಮಾರ್ಕ್ಸ್ ಬಹಿರಂಗದಿಂದ ಅಂತರಂಗವನ್ನು ಕೆಣಕುವ ಸೂಜಿಗಲ್ಲಾಗಿದ್ದ. ಈ ಕಾರಣದಿಂದಲೇ ಅವರು ಬುದ್ಧ ಮತ್ತು ಮಾರ್ಕ್ಸ್ನನ್ನು ತೌಲನಿಕವಾಗಿ ವ್ಯಾಖ್ಯಾನಸಿದರು. ಬುದ್ಧ ಚಿಂತನೆಯಲ್ಲಿ ಮಾರ್ಕ್ಸ್ ಚಿಂತನೆಯ ನೆಲೆಗಳನ್ನು ಗುರುತಿಸಿ ಬುದ್ಧನ ಮಹತ್ವವನ್ನು ದಾಖಲಿಸಿದ್ದರು. ಆದರೆ ಅವರು ಮಾರ್ಕ್ಸ್ ವಾದವನ್ನು ಎಂದೂ ಸಂಪೂರ್ಣವಾಗಿ ನಿರಾಕರಿಸಲಿಲ್ಲ. ಹೀಗೆಂದು ಹೇಳಿದರೆ ಕೆಲವು ಅಂಬೇಡ್ಕರ್ ಮಠಾಧಿಪತಿಗಳಿಗೆ ಇಷ್ಟವಾಗದಿರಬಹುದು. ಏಕೆಂದರೆ ಅಂಬೇಡ್ಕರ್ ಅವರು ಮಾರ್ಕ್ಸ್‌ವಾದಕ್ಕೆ ಸಂಪೂರ್ಣ ವಿರುದ್ದವಾಗಿರಲಿಲ್ಲವೆಂದು ಭಾವಿಸುತ್ತ ಹೋದಂತೆ ಮಾರ್ಕ್ಸ್‌ವಾದಿಗಳ ಸಂಖ್ಯೆ ಹೆಚ್ಚಿಬಿಟ್ಟರೆ ಗತಿಯೇನು ಎಂಬ ಆತಂಕವೂ ಇಂಥವರಿಗಿದ್ದೀತು! ಆದರೆ ಅಂಬೇಡ್ಕರ್‌ಗೆ ಇಂಥ ಆತಂಕ ಇರಲಿಲ್ಲ. ಆದ್ದರಿಂದಲೇ ಅವರು ಮಾರ್ಕ್ಸ್‌ವಾದವನ್ನು ಟೀಕಾತ್ಮಕವಾಗಿ ವಿಶ್ಲೇಷಿಸಿದರು. ಬುದ್ಧ ಚಿಂತನೆಗಳೊಂದಿಗೆ ಹೋಲಿಸುವಷ್ಟು ಗೌರವ, ಘನತೆಗಳನ್ನು ಮಾರ್ಕ್ಸ್ ಚಿಂತನೆಗಳಿಗೆ ಕೊಟ್ಟರು.

ಮಾರ್ಕ್ಸ್‌ವಾದಿ ವಿಚಾರಗಳ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಆಸಕ್ತಿಗೆ ಅವರಲ್ಲೇ ಕಾರಣಗಳಿವೆ. ಅವರು ಆಧ್ಯಾತ್ಮಿಕವಾಗಿ ಬುದ್ಧನನ್ನು ಸ್ವೀಕರಿಸಿದ್ದರೂ ಆರ್ಥಿಕವಾಗಿ ಅತ್ಯಂತ ಪ್ರಬಲವಾದ ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದರು. ಅವರ ಅಭಿಪ್ರಾಯಗಳ ಸೈದ್ಧಾಂತಿಕ ಸಾರ ಮಾರ್ಕ್ಸ್ ಚಿಂತನೆಗಳಲ್ಲಿ ಇದ್ದುದರಿಂದ ಮಾರ್ಕ್ಸ್‌ವಾದದ ಆರ್ಥಿಕ ಆಶಯಗಳು ಇವರಿಗೆ ಇಷ್ಟವಾದವು. ಆದರೆ ಮಾರ್ಕ್ಸ್‌ವಾದದಲ್ಲಿ ಇಂದು ಜೀವಂತವಾಗಿರುವ ಅಂಶಗಳು ಬುದ್ಧ ಚಿಂತನೆಯಲ್ಲಿ ಬೇರೆ ರೀತಿಯಲ್ಲಿ ಇದ್ದವೆಂದು ಹೇಳುವುದರಲ್ಲಿ ಅಂಬೇಡ್ಕರ್‌ಗೆ ಅತೀವ ಉತ್ಸಾಹ; ಹೀಗಾಗಿ ಬುದ್ದ ಚಿಂತನೆಯಲ್ಲಿ ಅವರಿಗೆ ಆದರಾಭಿಮಾನಗಳಿದ್ದರೆ ಮಾರ್ಕ್ಸ್ ಚಿಂತನೆಯಲ್ಲಿ ಆಸಕ್ತಿಯಿದೆ.

ಬುದ್ದ ಮತ್ತು ಮಾರ್ಕ್ಸ್ ಚಿಂತನೆಗಳನ್ನು ಅಂಬೇಡ್ಕರ್‌ ವ್ಯಾಖ್ಯಾನಿಸಿದ ವಿಚಾರಕ್ಕೆ ವಿವರವಾಗಿ ಪ್ರವೇಶ ಮಾಡುವುದಕ್ಕೆ ಮುಂಚೆ ಅವರು ಬ್ರಿಟಿಷರು ಕರೆದ ದುಂಡು ಮೇಜಿನ ಪರಿಷತ್ತಿನಲ್ಲಿ ಆಡಿದ ಆರ್ಥಿಕ ವಿಚಾರಗಳನ್ನು ಗಮನಿಸೋಣ : “ಇಂಡಿಯಾದಲ್ಲಿ ಬಂಡವಾಳಶಾಹಿಗಳು ಕಾರ್ಮಿಕ ವರ್ಗವನ್ನು ಶೋಷಿಸುತ್ತಿದ್ದಾರೆ. ಭೂ ಮಾಲೀಕರು ಬಡ ಕೃಷಿ ಕಾರ್ಮಿಕರನ್ನು ಹಿಂಡುತ್ತಿದ್ದಾರೆ. ಉತ್ತಮ ವರ್ಗದವರು ದಲಿತರನ್ನು ಅಸಹನೀಯವಾಗಿ ಹಿಂಸಿಸುತ್ತಿದ್ದಾರೆ…. ನಮಗೆ ಎಲ್ಲ ಹಕ್ಕುಗಳನ್ನು ರಕ್ಷಿಸುವ ಸರ್ಕಾರ ಬೇಕು”.

-ಅಂಬೇಡ್ಕರ್ ಅವರ ಈ ವಿಚಾರದಲ್ಲಿ ಇಂಡಿಯಾದ ಆರ್ಥಿಕ ಸಾಮಾಜಿಕ ಅಸಮಾನತೆ ಚಿತ್ರಣವಿದೆ. ಅಸ್ಪೃಶ್ಯರ ಪರವಾಗಿಯಷ್ಟೇ ಅಲ್ಲ, ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರ ಪರವಾಗಿ ಅಂಬೇಡ್ಕರ್ ಅವರು ಮಾತನಾಡುವುದನ್ನು ಇಲ್ಲಿ ಗಮನಿಸಬಹುದು. ಅವರು ಸ್ತ್ರೀ ಸಮಾನತೆಯ ಬಗ್ಗೆಯೂ ಬರೆದಿರುವುದುಂಟು. ಭೂ ರಾಷ್ಟ್ರೀಕರಣ ಆಗಬೇಕೆಂದು ಪ್ರತಿಪಾದಿಸಿರುವುದುಂಟು. ಅಂಬೇಡ್ಕರ್‌ ವಿಚಾರಗಳಿಗೆ ಇಂಥ ವ್ಯಾಪ್ತಿ ಇರುವುದರಿಂದಲೇ ಅವರು ಮಾರ್ಕ್ಸ್‌ವಾದವನ್ನು ಸಂಪೂರ್ಣ ನಿರಾಕರಿಸಲಿಲ್ಲ. ‘ಮಾರ್ಕ್ಸ್‌ವಾದವೊಂದೇ ನಮಗೆ ಮದ್ದು. ಆದರೆ ಮಾರ್ಕ್ಸ್ ವಾದ ನಮಗೆ ಮಾರ್ಗದರ್ಶಕವಾಗಬೇಕು ಹೊರತು ಉಲ್ಲಂಘಿಸಲಾಗದ ವೇದ ವಾಗಬಾರದು. ಸಂಸದೀಯ ಪ್ರಜಾಪ್ರಭುತ್ವ ಮೂಲಕವೇ ಸಮಾಜವಾದೀ ಸಮಾಜ ಸ್ಥಾಪನೆಯಾಗಬೇಕು’ ಇದು ಒಮ್ಮೆ ಅಂಬೇಡ್ಕರ್ ಅವರ ಆಶಯವಾಗಿತ್ತು. ಈ ಆಶಯ ಸಂಪೂರ್ಣ ಬದಲಾಗದಿದ್ದೂ ಮಾರ್ಕ್ಸ್‌ವಾದ ಮತ್ತು ಕಮ್ಯುನಿಸ್ಟ್ ಆಡಳಿತದ ‘ದೋಷಗಳನ್ನು’ ಅವರು ಪಟ್ಟಿ ಮಾಡಿದರು. ‘ಕಮ್ಯುನಿಸ್ಟ್ ತತ್ವ ಕೂಡ ಮನುಷ್ಯರು ಹಂದಿಗಳಿಗಿಂತ ಹೆಚ್ಚಲ್ಲ ಎಂದು ಮನುಷ್ಯರನ್ನು ಹಂದಿಗಳಂತೆ ಕೊಬ್ಬಿಸುವುದೇ ಆಗಿದೆ’ ಎಂದು ಟೀಕಿಸಿದರು. ಈ ಟೀಕೆಯು ಇಡೀ ಕಮ್ಯುನಿಸ್ಟ್ ಸಿದ್ಧಾಂತದ ನಿರಾಕರಣೆಯಲ್ಲ. ರಾಜಕೀಯ ಅರ್ಥಶಾಸ್ತ್ರವನ್ನು ಹಂದಿ ಸಿದ್ಧಾಂತವೆಂದು ಕಾರ್ಲೆಲ್ ಕರೆದಿರುವ ಬಗ್ಗೆ ಬರೆಯುತ್ತ ಕಮ್ಯುನಿಸ್ಟ್ ಸಿದ್ಧಾಂತದ ಮನುಷ್ಯನ ಭೌತಿಕ ಅಪೇಕ್ಷೆಗಳು ಅತಿಗಮನ ಕೊಟ್ಟಿದೆಯೆಂದು ವ್ಯಾಖ್ಯಾನಿಸುವ ನಿಮಿತ್ತವಾಗಿ ಈ ಟೀಕೆ ಬಂದಿದೆ. ಅಂದರೆ ಆಧ್ಯಾತ್ಮಿಕ ನೆಲೆಗಳನ್ನು ನಿರಾಕರಿಸುವುದು ಮಾರ್ಕ್ಸ್ ವಾದದ ಮಿತಿ ಮತ್ತು ದೋಷ ಎನ್ನುವುದು ಅಂಬೇಡ್ಕರ್ ಅವರ ಅಭಿಪ್ರಾಯ. ಅವರು ಮಾರ್ಕ್ಸ್‌ವಾದವನ್ನು ಎಷ್ಟು ಪ್ರೀತಿಯಿಂದ ಕಂಡರೆಂದರೆ ತಮ್ಮ ಆರ್ಥಿಕ ಚಿಂತನೆಗಳು ಅದರಲ್ಲಿ ನೆಲೆಸಿರುವುದನ್ನು ಗುರುತಿಸಿದರು. ತಾವು ಆದರಿಸುವ ಬುದ್ಧನಲ್ಲೂ ಮಾರ್ಕ್ಸ್ ಚಿಂತನೆಗಳಿವೆಯೆಂದು ವಾದ ಮಂಡಿಸುತ್ತಲೇ ಮಾರ್ಕ್ಸ್‌ನ ಮುಖ್ಯ ವಿಚಾರಗಳಿಗೆ ಮನ್ನಣೆ ನೀಡಿದರು.

ಆಂಬೇಡ್ಕರ್ ಪ್ರಕಾರ ಆರ್ಥಿಕ ವ್ಯಾಖ್ಯಾನವೇ ಇತಿಹಾಸ ಏಕೈಕ ವಿವರಣೆಯಲ್ಲ. ಮಾರ್ಕ್ಸ್‌ನ ಚಿಂತನೆ ಈ ವಿವರಣೆಯೊಂದನ್ನೇ ವಿಜೃಂಭಿಸಿದೆಯೆಂಬ ಗ್ರಹಿಕೆ ಅವರದು. ಸಮಾಜವಾದ ಅನಿವಾರ್ಯವೆಂಬ ‘ಮಾರ್ಕ್ಸ್‌ನ ಮಾತು ಸುಳ್ಳಾಗಿರುವ ಮಾತು ಒತ್ತಟ್ಟಿಗಿರಲಿ’ ಎಂದು ಹೇಳುತ್ತಲೇ, ಅದು ಉಸಿರಿನಲ್ಲಿ ಈಗಲೂ ಜೀವಂತವಾಗಿರುವ ಮಾರ್ಕ್ಸ್ ಚಿಂತನೆಯ ನಾಲ್ಕು ಕ್ರೋಢೀಕೃತ ಅಂಶಗಳನ್ನು ಪಟ್ಟಿಮಾಡಿ, ಬುದ್ಧಿ ಚಿಂತನೆಯಲ್ಲಿ ಹುಡುಕುವ ಉತ್ಸಾಹವೇ ಅಂಬೇಡ್ಕರ್ ಅವರ ಅಪೇಕ್ಷೆಗಳನ್ನು ಅನಾವರಣಗೊಳಿಸುತ್ತದೆ. ಅವರ ಪ್ರಕಾರ ಮಾರ್ಕ್ಸ್ ಹೇಳುವ ‘ವರ್ಗ-ವರ್ಗಗಳ ನಡುವೆ ಹಿತಾಸಕ್ತಿ ಸಂಘರ್ಷ’ದ ಮಾತು ಸತ್ಯ. ‘ತತ್ವಜ್ಞಾನದ ಕೆಲಸ ಕೇವಲ ವಿಶ್ವದ ವಿವರಣೆ ನೀಡಿ ಕಾಲಹರಣ ಮಾಡುವುದು. ವಿಶ್ವವನ್ನೇ ಪುನರಚಿಸುವುದು ತತ್ವಜ್ಞಾನದ ಕೆಲಸ’ ಎಂಬ ಮಾರ್ಕ್ಸ್ ಮಾತು ಅಂಬೇಡ್ಕರ್ ದೃಷ್ಟಿಯಲ್ಲಿ ಜೀವಂತ ಸತ್ಯ. ಆಸ್ತಿ ಖಾಸಗಿ ಒಡೆತನ ಒಂದು ವರ್ಗಕ್ಕೆ ಅಧಿಕಾರವನ್ನೂ ಇನ್ನೊಂದು ವರ್ಗಕ್ಕೆ ದುಃಖವನ್ನು ತರುತ್ತದೆಯೆಂಬ ಮಾರ್ಕ್ಸ್ ಚಿಂತನೆಯನ್ನು ಜೀವಂತ ಅಂಶವೆಂದು ಒಪ್ಪಿಸುವ ಅಂಬೇಡ್ಕರ್ ‘ಖಾಸಗಿ ಆಸ್ತಿ ಒಡೆತನವನ್ನು ತೊಡೆದುಹಾಕಬೇಕು’ ಎಂಬ ವಾದವನ್ನು ಒಪ್ಪುತ್ತಾರೆ. ಈ ಅಂಶವು ಅಂಬೇಡ್ಕರ್ ಅವರನ್ನು ಎಷ್ಟು ಕಾಡಿಸಿದೆಯೆಂದರೆ ಬೌದ್ಧ ಭಿಕ್ಷುವು ಮೂರು ಬಟ್ಟೆ, ಉಡುದಾರ, ಭಿಕ್ಷಾಪಾತ್ರೆ, ಕತ್ತಿ, ಸೂಜಿ, ನೀರು ಸೋಸುವ ಬಟ್ಟಲು- ಹೀಗೆ ಎಂಟು ವಸ್ತುಗಳನ್ನು ಮಾತ್ರ ಖಾಸಗಿಯಾಗಿ ಹೊಂದಿರದ ಬೇಕೆಂಬ ಬುದ್ಧನ ವಿಚಾರವನ್ನು ಉಲ್ಲೇಖಿಸಿ ಈ ನಿಯಮಗಳು ರಷ್ಯಾದ ಕಮ್ಯೂನಿಸಂ ನಲ್ಲಿರುವ ನಿಯಮಗಳಿಗಿಂತಲೂ ಹೆಚ್ಚು ಕಠಿಣವಾಗಿವೆ’ ಎಂದು ಪ್ರಶಂಸಿಸುತ್ತಾರೆ. ಬುದ್ಧನು ತತ್ವಜ್ಞಾನದ ಮೂಲಕ ವಿಶ್ವ ಪರಿವರ್ತನೆಗೆ ಪ್ರಯತ್ನಿಸಿದ್ದನ್ನು ವಿವರವಾಗಿ ದಾಖಲಿಸಿ ಮಾರ್ಕ್ಸ್ ಮಾತುಗಳು ಬುದ್ಧನಲ್ಲಿ ಮೊದಲೇ ಅನುಷ್ಠಾನಕ್ಕೆ ಬಂದಿವೆಯೆಂದು ಸಂತೋಷಿಸುತ್ತಾರೆ. ಮಾರ್ಕ್ಸ್‌ನ ವರ್ಗ ಸಂಘರ್ಷದ ವಿಷಯವನ್ನು ಬುದ್ಧನಲ್ಲಿ ಗುರುತಿಸುತ್ತ “ವರ್ಗ ಸಂಘರ್ಷದ ಬಗ್ಗೆ ಬುದ್ದನ ವೈಯಕ್ತಿಕ ಧೋರಣೆ ಏನೆಂದರೆ, ಅವರ ಅಷ್ಟಾಂಗ ಮಾರ್ಗತತ್ವವು ವರ್ಗ ಸಂಘರ್ಷ ಇದೆ ಎಂದೂ ಆ ವರ್ಗ ಸಂಘರ್ಷದ ದುಃಖದ ಮೂಲ ಎಂದು ಗುರುತಿಸುತ್ತದೆ’ ಎಂಬುದಾಗಿ ಬರೆದಿದ್ದಾರೆ. ಅಂಬೇಡ್ಕರ್ ಅವರಿಗೆ ಮಾರ್ಕ್ಸ್‌ವಾದವು ಬುದ್ಧನನ್ನು ಅರ್ಥ ಮಾಡಿಕೊಳ್ಳುವ ಸಾಧನಗಳಲ್ಲೊಂದಾಗಿ ಕೆಲಸ ಮಾಡುವುದನ್ನು ನಾವಿಲ್ಲಿ ಗುರುತಿಸಬಹುದು. “ಬುದ್ದನು ಕಮ್ಯುನಿಸಂನ್ನು ಸರ್ವಾಧಿಕಾರವಿಲ್ಲದೆ ಸ್ಥಾಪಿಸಿದ ನೆಂದು ಹೇಳುವ ಅಂಬೇಡ್ಕರ್ ‘ಅದು ಅಲ್ಪ ಪ್ರಮಾಣದ ಕಮ್ಯುನಿಸಂ ಆಗಿದ್ದಿರಬಹುದು. ಆದರೆ ಅದು ಸರ್ವಾಧಿಕಾರವಿಲ್ಲದ ಕಮ್ಯುನಿಸಂ ಆಗಿತ್ತು. ಈ ಪವಾಡವನ್ನು ಲೆನಿನ್ ಮಾಡಲಾಗಲಿಲ್ಲ” ಎಂದು ಅಭಿಪ್ರಾಯ ಪಡುತ್ತಾರೆ. ಹೀಗೆಂದ ಕೂಡಲೇ ಅಂಬೇಡ್ಕರ್ ಸಂಪೂರ್ಣವಾಗಿ ಕಮ್ಯೂನಿಸಂ ಸಿದ್ಧಾಂತವನ್ನು ನಿರಾಕರಿಸಲಿಲ್ಲ. ಲೆನಿನ್ ಮಾಡಿದ ಸಾಧನೆಗಳನ್ನು ಗೌಣ ಮಾಡಲಿಲ್ಲ. ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ: “ರಷ್ಯದಲ್ಲಿ ಕಮ್ಯುನಿಸ್ಟ್ ಸರ್ವಾಧಿಕಾರಿ ಅದ್ಭುತ ಸಾಧನೆ ಅನ್ನು ಮಾಡಿದೆಯೆಂದು ಹೇಳುತ್ತಾರೆ. ಅದಕ್ಕೆ ಯಾವ ನಿರಾಕರಣೆ ಇಲ್ಲ. ಆದ್ದರಿಂದ ನಾನು ಎಲ್ಲ ಹಿಂದುಳಿದ ದೇಶಗಳು ರಷ್ಯಾ ಮಾದರಿ ಸರ್ವಾಧಿಕಾರಿ ಒಳ್ಳೆಯದೆಂದು ಹೇಳುತ್ತಿರುವುದು. ಆದರೆ ಇದು ನಿರಂತರ ಸರ್ವಾಧಿಕಾರದ ಪರವಾಗಿರುವ ವಾದವಲ್ಲ… ನಿರಂತರ ಸರ್ವಾಧಿಕಾರ ಆಧ್ಯಾತ್ಮಿಕ ಮೌಲ್ಯಗಳಿಗೆ ಯಾವ ಗಮನವನ್ನು ನೀಡಿಲ್ಲ”.

ಕಡೆಗೆ ಅಂಬೇಡ್ಕರ್ ಹೇಳುತ್ತಾರೆ : “ಸಮಾನತೆಯನ್ನು ತರಲು ರಷ್ಯಾದ ಕ್ರಾಂತಿ ಉದ್ದೇಶಿಸಿರುವುದರಿಂದ ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ ಸೋದರತ್ವ ಅಥವಾ ಸ್ವಾತಂತ್ರ್ಯ ಇಲ್ಲದಿದ್ದರೆ ಸಮಾನತೆಗೆ ಬೆಲೆಯಿಲ್ಲ. ಬುದ್ಧನ ಮಾರ್ಗವನ್ನು ಅನುಸರಿಸುವುದರಿಂದ ಮಾತ್ರ ಈ ಮೂರೂ ತತ್ವಗಳು ಜೊತೆಯಾಗಿ ಬಾಳಬಲ್ಲವು. ಕಮ್ಯುನಿಸಂ ಯಾವುದಾದರೂ ಒಂದನ್ನು ಕೊಡುತ್ತದೆ. ಎಲ್ಲದಕ್ಕೂ ಎಲ್ಲ”.

ಒಟ್ಟಿನಲ್ಲಿ ಅಂಬೇಡ್ಕರ್ ಕಮ್ಯೂನಿಸಂ ಅಪೂರ್ಣವಾಗಿದೆಯೆಂದು ಪ್ರತಿಪಾದಿಸಿದರು ; ಆದರೆ ಸಂಪೂರ್ಣ ನಿರಾಕರಿಸಲಿಲ್ಲ. ಬುದ್ಧ ಚಿಂತನೆ ಅವರಿಗೆ ಪರಿಪೂರ್ಣವೆನ್ನಿಸಿತು. ಆದರೆ ಮಾರ್ಕ್ಸ್ ಮರೆಯಾಗಿಲ್ಲ. ಹೀಗೆ ಅಂತರಂಗ-ಬಹಿರಂಗಗಳನ್ನು ಕಾಡಿಸಿದ ಬುದ್ಧ ಮತ್ತು ಮಾರ್ಕ್ಸ್ ನನ್ನು ಮನಸ್ಸು ಮತ್ತು ಮೆದುಳಾಗಿಸಿಕೊಂಡಿದ್ದ ಅಂಬೇಡ್ಕರ್ ಅವರನ್ನು ಮತ್ತಷ್ಟು ಅಧ್ಯಯನ ದೊಂದಿಗೆ, ಮರುಚಿಂತನೆ ಯೊಂದಿಗೆ ನಾನು ಅರ್ಥಮಾಡಿಕೊಳ್ಳಬೇಕಾಗಿದೆ. ನಮ್ಮ ಕೆಲವು ಗೆಳೆಯರು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರನ್ನು ಪರಸ್ಪರ ಪೂರಕವಾಗಿ ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಅಧ್ಯಯನ ಮತ್ತು ಮರುಚಿಂತನೆಯ ಅಗತ್ಯ ಕಾಣುತ್ತಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಪೂರಕವಾಗಿ ಗ್ರಹಿಸುವ ಕ್ರಮ ಒಂದು ಸಾಮಾಜಿಕ ‘ಕಾರ್ಯತಂತ್ರವಾಗಿ’ ಕೆಲವರಿಗೆ ಸೂಕ್ತವೆನ್ನಿಸಬಹುದಾದರೂ ಮಾರ್ಕ್ಸ್, ಅಂಬೇಡ್ಕರ್ ಮತ್ತು ಲೋಹಿಯಾ ಅವರನ್ನು ಒಟ್ಟಿಗೆ ಚರ್ಚಿಸಿವುದು, ಪೂರಕ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದು, ಒಂದು ಗಂಭೀರ ರಾಜಕೀಯ ವಾಸ್ತವವಾದೀತೆಂದು ನನ್ನ ಅನಿಸಿಕೆ.
*****
೨೩-೪-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಪ್ಪು
Next post ಜನ ನಾಯಕ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys