ಮುಳ್ಳುಗಳ ಮಧ್ಯದಲ್ಲಿಯೇ ಗುಲಾಬಿ ಹುಟ್ಟುತ್ತದೆ ನಿಜ.
ಪ್ರೀತಿ ಹೂ ಅರಳುವ ಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ ನೋಡು.
ಅಮವಾಸ್ಯೆ ಕತ್ತಲಲ್ಲಿ ಏಕಾಕಿ ಕಾಡಿನಲ್ಲಿ ಪಯಣಿಸುತ್ತೇನೆ ನಿಜ,
ರಾತ್ರಿ ಕಳೆದುಹೋದ ಸೂರ್ಯ ಮತ್ತೇ ಹುಟ್ಟುತ್ತಲೇ ಇರುತ್ತಾನೆ ನೋಡು.
ಕಬ್ಬಿಗೆ ಬೆಂಕಿ ಹಚ್ಚಿ ಸುಟ್ಟು ಹುಗಿದರೂ ಮತ್ತೆ ಚಿಗುರುತ್ತದೆ ನಿಜ,
ಬೆಂಕಿಯಲ್ಲಿ ಸುಟ್ಟು ಬೂದಿಯಾದರೂ ಫೀನಿಕ್ಸ್ ಮತ್ತೆ ಹುಟ್ಟುತ್ತಲೇ ಇರುತ್ತದೆ ನೋಡು.
ಸುಡುವುದೇ ಬೆಂಕಿಯ ಗುಣ ಉರಿದುರಿದು ಕೊನೆಗೆ ಬೂದಿಯಾಯ್ತು ನಿಜ,
ಬಿರುಗಾಳಿ ಬೀಸಿ ಬೂದಿಯನ್ನು ಎತ್ತಲೋ ಹೊತ್ತುಯ್ಯುತ್ತಲೇ ಇರುತ್ತದೆ ನೋಡು.
ಬದುಕ ಸಂಜೆಯಲಿ ಬೆಂಕಿ ಬೂದಿಗಳ ಚಿಂತೆಯೇಕೆ `ಕೇಶ’,
ಉದುರಿದರೂ ಚಿಗುರುವಾ ಮರದೆಲೆ ಆಸೆ ಹುಟ್ಟಿಸುತ್ತಲೇ ಇರುತ್ತದೆ ನೋಡು!
*****