ಸಾಹಿತ್ಯ ಮತ್ತು ಸರ್ವಾಧಿಕಾರ

ಸಾಹಿತ್ಯ ಮತ್ತು ಸರ್ವಾಧಿಕಾರ

ಕರ್ನಾಟಕದಲ್ಲಿ ನಕ್ಸಲ್ ಪಿಡುಗನ್ನು ನಿವಾರಿಸುವುದು ಜನ ತಿಳಿದುಕೊಂಡಷ್ಟು ಸುಲಭವಲ್ಲ. ಭಾರತದ ನಕ್ಸಲಿಸಮಿನ ಆರಂಭ ಏನೇ ಇರಲಿ, ಅದೀಗ ಅಂತರರಾಷ್ಟ್ರೀಯ ಮಾವೋಯಿಸಮಿನ ಒಂದು ಅಂಗ. ಸೋವಿಯೆಟ್ ರಶಿಯಾದ ಪತನ ಮತ್ತು ಚೈನಾದಲ್ಲಿ ಮಾವೋಯಿಸಮ್ ಬದಲಾದ ಇಂದಿನ ಸನ್ನಿವೇಶದಲ್ಲಿ ಮಾವೋಯಿಸಮ್ ಅಲ್ಲಲ್ಲಿ ಬೇರೆ ಬೇರೆ ಹೆಸರುಗಳಿಂದ ತಲೆಯೆತ್ತಿದೆ. ಅಂತರರಾಷ್ಟ್ರೀಯ ನೆಲೆಯಲ್ಲಿ ತೀವ್ರಗತಿಯ ಆರ್ಥಿಕ ಬದಲಾವಣೆಗಳು ಆಗುತ್ತಿರುವ ಈ ಸಂದರ್ಭ ಮಾವೋಯಿಸಮ್ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಆದ್ದರಿಂದ ಅದು ಎರಡು ರೀತಿಯ ತಂತ್ರಗಳನ್ನು ರೂಪಿಸಿಕೊಂಡಿದೆ: ಒಂದು ಚೇರ್ಮನ್ ಮಾವೋ ರೂಪಿಸಿದ ಗೆರಿಲ್ಲಾ ಯುದ್ಧ; ಇನ್ನೊಂದು ಚೈನೀಸ್ ಸಾಂಸ್ಕೃತಿಕ ಕ್ರಾಂತಿಯ ನೆರಳಿನಂತಿರುವ ಸದ್ದಿಲ್ಲದ ಸಾಂಸ್ಕೃತಿಕ ಬೌದ್ಧಿಕ ಹೋರಾಟ. ಮೊದಲನೆಯದಕ್ಕೆ ಅದು ಯುವಜನತೆಯನ್ನು ಉಪಯೋಗಿಸುತ್ತಿದ್ದರೆ, ಎರಡನೆಯದಕ್ಕೆ ಸಾಹಿತಿ-ಬುದ್ಧಿಜೀವಿಗಳನ್ನು ಬಳಸುತ್ತಿದೆ. ಈ ಎರಡೂ ಬಗೆಯ ನಕ್ಸಲೀಯರನ್ನು ಕಂಡರೆ ಅನುಕಂಪವೂ ಅಸಮಾಧಾನವೂ ಒಟ್ಟಿಗೇ ಉಂಟಾಗುತ್ತದೆ. ಅನುಕಂಪ ಯಾಕೆಂದರೆ, ಮಾವೋಯಿಸಮ್ ಕೂಡ ಇತಿಹಾಸದ ಪುರೋಗತಿಗೆ ತನ್ನ ಕಾಲದಲ್ಲಿ ಕಾರಣವಾದದ್ದು; ಆದರೆ ಆ ಕಾಲ ಈಗ ದಾಟಿಯಾಗಿದೆ ಎನ್ನುವುದನ್ನು ಅದರ ಹಿಂಬಾಲಕರು ಒಪ್ಪಲು ತಯಾರಿಲ್ಲ. ಅಸಮಾಧಾನ ಯಾಕೆಂದರೆ, ಮಾವೋಯಿಸಮ್ನ ಹಸ್ತಕ್ಷೇಪದಿಂದಾಗಿ ಪಜಾಪ್ರಭುತ್ವದ ಚಲನೆಗೆ ತೊಂದರೆಯುಂಟಾಗಿರುವುದು. ಆದರೆ ನಕ್ಸಲೀಯರು ಇದಕ್ಕೆ ಪ್ರತಿಯಾಗಿ ‘ಯಾರಿಗೆ ಬಂತು, ಯಾರಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ?. ಎಂದು ಕವಿವಾಣಿಯನ್ನು ಉದ್ಧರಿಸಬಹುದು. ಇದು ಕೇಳತಕ್ಕಂಥ ಪ್ರಶ್ನೆಯೇ. ವ್ಯತ್ಯಾಸವೆಂದರೆ, ಇಂದಿನ ನಮ್ಮ ಗಣತಂತ್ರವ್ಯವಸ್ಥೆಯಲ್ಲಿ, ಅದು ಎಷ್ಟೇ ಅಸಮರ್ಪಕವಾಗಿದ್ದರೂ, ಇಂಥದೊಂದು ಪ್ರಶ್ನೆಯನ್ನು ಯಾರು ಬೇಕಾದರೂ ಕೇಳಬಹುದಾಗಿದೆ. ಮಾವೋಯಿಸಮಿನಲ್ಲಿ ಇದು ಸಾಧ್ಯವಿಲ್ಲ. ತಿಯಾನನ್ಮನ್ ಚೌಕದಲ್ಲಿ ನಿರಾಯುಧ ವಿದ್ಯಾರ್ಥಿಗಳ ಮೇಲೆ ನಡೆದ ಹತ್ಯಾಕಾಂಡವನ್ನು ನೆನಪಿಸಿಕೊಳ್ಳಿ: ಅವರು ಮಾಡಿದ ಒಂದೇ ತಪ್ಪೆಂದರೆ ಮಾವೋಯಿಸಮಿನ ವಿರುದ್ಧ ಪ್ರತಿಭಟಿಸಿದ್ದು! ಸ್ವಾತಂತ್ರ್ಯ ಎಂದ ಕಲ್ಪನೆಯನ್ನೇ ಕೊಲ್ಲವ ಮಾವೋವಾದಕ್ಕೆ ಸ್ವಾತಂತ್ರ್ಯದ ಬಗ್ಗೆ ಮಾತಾಡುವ ನೈತಿಕ ಹಕ್ಕೇ ಇರುವುದಿಲ್ಲ.

ಇದರ ತಳದಲ್ಲೊಂದು ತಾತ್ವಿಕ ಸಂಘರ್ಷ ಅಡಗಿದೆ: ಮಾರ್ಕ್‌ಸಿಸಮ್ ಪ್ರಕಾರ ಇತಿಹಾಸದ ಅಂತಿಮ ಹಂತದ ರಾಜಕೀಯ ವ್ಯವಸ್ಥೆಯೆಂದರೆ dictatorship of proletariat ‘ಶ್ರಮಿಕವರ್ಗದ ಸರ್ವಾಧಿಕಾರ’. ಇಡೀ ಕಮ್ಯೂನಿಸ್ಟ್ ಚಳುವಳಿಯ ಉದ್ದೇಶವೇ ಈ ಸರ್ವಾಧಿಕಾರದ ಸ್ಥಾಪನೆ. ಗಣತಂತ್ರ ತತ್ವ ಯಾವುದೇ ಸರ್ವಾಧಿಕಾರವನ್ನು ಒಪ್ಪುವುದಿಲ್ಲ; ಇದರ ಪ್ರಕಾರ ಪ್ರಜಾಪ್ರಭುತ್ವವೇ ಅಂತಿಮವಾದ ರಾಜಕೀಯ ಸ್ಥಿತಿ. ಇದಕ್ಕಿಂತ ಉತ್ತಮವಾದ್ದು ಇನ್ನೊಂದು ಇಲ್ಲ. ಇದರ ಅರ್ಥ ಪ್ರಜಾಪ್ರಭುತ್ವ ವರ್ಗಸಮಾಜವನ್ನು ಒಪ್ಪುತ್ತದೆ ಎಂದಲ್ಲ; ಹಲವು ವರ್ಗಗಳಿದ್ದೂ ಪ್ರಜಾಪ್ರಭುತ್ವ ಒಂದು ರಾಜಕೀಯ ವ್ಯವಸ್ಥೆಯಾಗಿ ಪವರ್ತಿಸುವುದು ಸಾಧ್ಯ ಎನ್ನುವುದು. ಮಾರ್ಕ್‌ಸಿಸಮ್ (ಹಾಗೂ ಅದರ ಉಗ್ರರೂಪವಾದ ಮಾವೋಯಿಸಮ್) ವರ್ಗಸಮರದಲ್ಲಿ ನಂಬಿಕೆಯಿರಿಸುತ್ತದೆ; ಹಾಗೂ ಸಾಯುಧ ಕ್ರಾಂತಿಯನ್ನು ಪ್ರೋತ್ಸಾಹಿಸುತ್ತದೆ ಮಾತ್ರವಲ್ಲ; ಅದೊಂದೇ ದಾರಿ ಎನ್ನುತ್ತದೆ. ಪ್ರಜಾಪಭುತ್ವ ನಿಧಾನವಾದ, ಸರ್ವಸಮ್ಮತವಾದ ಬದಲಾವಣೆಯಲ್ಲಿ ವಿಶ್ವಾಸವಿರಿಸುತ್ತದೆ; ಹಾಗೂ ಪರಿವರ್ತನೆ ಶಾಂತಯುತವಾಗಿ ನಡೆಯಬೇಕೆಂದು ಬಯಸುತ್ತದೆ; ಪ್ರಜಾಪ್ರಭುತ್ವದಲ್ಲಿ ಸಾಯುಧಕ್ರಾಂತಿಗೆ ಸ್ಥಾನವಿಲ್ಲ. ಮಾರ್‍ಕ್‌ಸಿಸಮ್ ಏಕಪಕ್ಷೀಯವಾದುದು, ಅದು ಕಮ್ಯೂನಿಸ್ಟ್ ಪಾರ್ಟಿಯನ್ನಲ್ಲದೆ ಬೇರೆ ಯಾವ ರಾಜಕೀಯ ಪಕ್ಷವನ್ನೂ ಸಹಿಸದು. ಆದ್ದರಿಂದ ಅದು ಮೊದಲು ಕೊಲ್ಲುವುದು ಭಿನ್ನಾಭಿಪ್ರಾಯವನ್ನು. ಪ್ರಜಾಪ್ರಭುತ್ವವಾದರೆ, ಗಣತಂತ್ರವ್ಯವಸ್ಥೆಯನ್ನು ಒಪ್ಪುವ ಯಾವ ಪಕ್ಷವನ್ನಾದರೂ ಮನ್ನಿಸುತ್ತದೆ. ಭಿನ್ನಾಭಿಪ್ರಾಯವನ್ನು ಅದು ಪುರಸ್ಕರಿಸುತ್ತದೆ. ಆದ್ದರಿಂದ ಏಕಪಕ್ಷೀಯವಾದ ಸರ್ವಾಧಿಕಾರಕ್ಕೆ ಅದರಲ್ಲಿ ಸ್ಥಾನವಿಲ್ಲ. ಭಾರತದಲ್ಲಿ ಇಂದು ಹಲವಾರು ಕಮ್ಯೂನಿಸ್ಟ್ ಪಕ್ಷಗಳು ಕಾಣಿಸುತ್ತಿರುವುದಕ್ಕೆ ಕಾರಣ ಅವು ತಾತ್ಕಾಲಿಕವಾಗಿ ತಮ್ಮ ಕಟು ನಿಲುವನ್ನು ತಡೆದಿರಿಸಿರುವುದು. ಕಮ್ಯೂನಿಸಮ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಚಿಸುವುದರಿಂದ ಅದಕ್ಕೆ ತಾತ್ವಿಕವಾಗಿ ಯಾವುದೇ ರಾಷ್ಟ್ರೀಯ ನಿಷ್ಠೆಯೂ ಇಲ್ಲ; ಆದ್ದರಿಂದ ಅದು ಯುದ್ಧತಂತ್ರವಾಗಿ ಇತರ ಯಾವುದೇ ಉಗ್ರಗಾಮಿ ಸಂಘಟನೆಗಳ ಜತೆ ಕೈಜೋಡಿಸುವುದಕ್ಕೆ ಸಿದ್ಧವಿರುತ್ತದೆ. ಅದು ಗುಪ್ತವಾಗಿ ಕೆಲಸಮಾಡುವುದರಿಂದ ಇಂಥ ರಾಜಿಗಳು ಅದಕ್ಕೆ ಕಷ್ಟವಲ್ಲ. ಪ್ರಜಾಪ್ರಭುತ್ವ ರಾಷ್ಟ್ರೀಯತೆಯ ಕಲ್ಪನೆಯೊಳಗೇ ಕೆಲಸಮಾಡಬೇಕಾಗುತ್ತದೆ ಹಾಗೂ ಯಾವುದೇ ಕಾರಣಕ್ಕೆ ಅದು ತನ್ನ ಮೌಲ್ಯಗಳ ಕುರಿತಾಗಿ ರಾಜಿಮಾಡಿಕೊಳ್ಳುವುದಕ್ಕೆ ಸಾಧ್ಯವಾಗದು. ಪ್ರಜಾಪಭುತ್ವ ಪ್ರಕಟವಾಗಿಯೇ ಕೆಲಸಮಾಡುವ ವ್ಯವಸ್ಥೆ. ಅದರಲ್ಲಿ ರಹಸ್ಯ ಕಾರ್ಯಗಳಿಗೆ ಎಡೆಯಿಲ್ಲ. ಈ ಎರಡೂ ರಾಜಕೀಯ ತತ್ವಗಳ ಮಧ್ಯೆ ಇದೆಲ್ಲಕ್ಕೂ ಮುಖ್ಯವಾದ ಭಿನ್ನತೆಯೊಂದಿದೆ: ಅದೆಂದರೆ, ಮಾವೋಯಿಸಮ್ನಲ್ಲಿ ವ್ಯಕ್ತಿಸ್ವಾತಂತ್ರ್ಯ ನಗಣ್ಯ; ಆದ್ದರಿಂದಲೇ ನಕ್ಸಲೀಯರು ಕೊಲ್ಲಲು ತಯಾರಿರುವಂತೆ ಸಾಯಲೂ ತಯಾರಿರುವುದು. ಈ ಮಟ್ಟಿಗೆ ನಕ್ಸಲಿಸಮಿಗೂ ಧಾರ್ಮಿಕ ಉಗ್ರಗಾಮಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಇದಕ್ಕೆ ವಿರುದ್ಧವಾಗಿ, ಪ್ರಜಾಪಭುತ್ವದಲ್ಲಿ ವ್ಯಕ್ತಿಸ್ವಾತಂತ್ರ್ಯ ಬಹುಮುಖ್ಯವಾದಂಥ ಒಂದು ಮೌಲ್ಯ. ಸಾಹಿತ್ಯ ಕೂಡಾ ಸ್ವಾತಂತ್ರ್ಯವನ್ನು ಬಹುವಾಗಿ ಪ್ರೀತಿಸುವ ಕಾರಣ, ಅದು ಸರ್ವಾಧಿಕಾರವನ್ನು ಎಂದೂ ಪ್ರೋತ್ಲಾಹಿಸದು. ಸರ್ವಾಧಿಕಾರ ಕೂಡಾ ಸಾಹಿತ್ಯವನ್ನು ಸಹಿಸುವುದಿಲ್ಲ. ಮಾರ್ಕಿಸಮ್, ಲೆನಿನಿಸಮ್, ಸ್ಟಾಲಿನಿಸಮ್, ಮಾವೋಯಿಸಮ್ ಮುಂತಾದ ಇಸಮುಗಳ ಕೆಳಗೆ ಬರೇ ಪ್ರಚಾರಸಾಹಿತ್ಯವಷ್ಟೇ ಸಾಧ್ಯ. ಇಸಮಿಗೆ ಬದ್ಧವಾಗದ ಸಾಹಿತ್ಯ ದಮನಕ್ಕೆ ಒಳಗಾಗುತ್ತದೆ; ಅಂಥ ಸಾಹಿತಿಗಳನ್ನು ಒಂದೋ ದೇಶದ ಜೈಲುಗಳಲ್ಲಿ ಹಾಕಲಾಗುತ್ತದೆ, ಇಲ್ಲವೇ ಗಡೀಪಾರು ಮಾಡಲಾಗುತ್ತದೆ. ಈ ಏಕಾಧಿಪತ್ಯದಲ್ಲಿ ಆಂತರಿಕ ಸ್ವಾತಂತ್ರ್ಯ ಕೂಡಾ ಇಲ್ಲವೆನ್ನುವುದು ಇದರ ಇನ್ನೊಂದು ಕರಾಳ ಮುಖವನ್ನು ತೋರಿಸುತ್ತದೆ. ಇಲ್ಲಿ ಸದಾಕಾಲ ಪರಸ್ಪರ ಕುತ್ತಿಗೆ ಹಿಸುಕುವ ಅಧಿಕಾರ ಸ್ಪರ್ಧೆ ನಡೆಯುತ್ತಲೇ ಇರುತ್ತದೆ. ಸ್ಟಾಲಿನ್ ತನಗಾಗದ ಟ್ರಾಟ್‌ಸ್ಕಿಯನ್ನು ದೇಶದಿಂದ ಹೊರಹಾಕಿದ್ದು ಮಾತ್ರವಲ್ಲ, ಅಟ್ಟಿಸಿಕೊಂಡು ಹೋಗಿ ಕೊಂದುದು ಈಗ ಚರಿತ್ರೆ. ಕಮ್ಯೂನಿಸಮಿನ ಅತ್ಯಲ್ಪ ಕಾಲದ ಇತಿಹಾಸದಲ್ಲಿ ಇಂಥ ರಾಜಕೀಯ ಕೊಲೆಗಳಿಗೆ ಲೆಕ್ಕಮಿತಿಯಿಲ್ಲ. ಎಡಪಂಥೀಯ ಕನಸುಗಳು ಕಾಣುವುದಕ್ಕೆ ರಮ್ಯವಾಗಿರುತ್ತವೆ; ಆದರೆ ಅವುಗಳ ವಾಸ್ತವ ಬಲಪಂಥೀಯ ಕ್ರೌರ್ಯಕ್ಕಿಂತ ಕಡಿಮೆಯೇನಲ್ಲ. ಒಂದು ಕ್ರೌರ್ಯ ಇನ್ನೊಂದಕ್ಕೆ ಉತ್ತರವೂ ಆಗದು. ಇದೆಲ್ಲ ಇಂದು ಹಳೆಯ ಕತೆಯಾಗಿಯೂ ಅವಾಸ್ತವವಾಗಿಯೂ ಅನಿಸಬಹುದು. ಇಂದಿನ ನಮ್ಮ ‘ನಾಗರಿಕ ಸಮಾಜ’ದಲ್ಲಿ ಇದೆಲ್ಲ ಅಸಾಧ್ಯ ಎನ್ನಬಹುದು. ಈ ಭಾವನೆ ಬರುವುದು ನಿಜ. ಯಾಕೆಂದರೆ ಚರಿತ್ರೆಯ ಗಡಿಯಾರವನ್ನು ಹಿಂದಕ್ಕೆ ಹಾಕುವುದು ಸಾಧ್ಯವಿಲ್ಲ. ಆದರೂ ಮಾವೋವಾದಿಗಳು ಹಾಗೂ ಅವರನ್ನು ಪ್ರತಿನಿಧೀಕರಿಸುವ ನಕ್ಲಲೀಯರು ಇದಕ್ಕಾಗಿ ಪ್ರಯತ್ನಿಸುತ್ತಲೇ ಇದ್ದಾರೆ.

ಕಮ್ಯೂನಿಸ್ಟ್ ರಶಿಯಾ ಹಾಗೂ ಚೈನಾಗಳಲ್ಲಿ ಡಿನೌನ್ಸಿಂಗ್ ಎಂಬ ಒಂದು ಆಚರಣೆಯಿತ್ತು. ಇಡೀ ದೇಶವನ್ನು ಕಮ್ಯೂನಿಸ್ಟ್ ಪಾರ್ಟಿ ಆಳುತ್ತಿದ್ದ ಕಾರಣ, ಪಾರ್ಟಿಯ ಕಾರ್ಯಕರ್ತರು ಅಧಿಕಾರಮದದಿಂದ ಏನು ಬೇಕಾದರೂ ಮಾಡಬಹುದಾದಂಥ ಪರಿಸ್ಥಿತಿ ಅದು. ಆದ್ದರಿಂದ ಯಾವನೇ ಕಾರ್ಯಕರ್ತ ತನಗಾಗದವರ ಬಗ್ಗೆ ಪಾರ್ಟಿ ಕಮಿಟಿಗಳಲ್ಲಿ ಚಾಡಿಹೇಳಬಹುದಾಗಿತ್ತು. ಡಿನೌನ್ಲಿಂಗ್ ಎಂದರೆ ಇದೇ. ಪರಿಣಾಮವನ್ನು ಊಹಿಸಿಕೊಳ್ಳಬಹುದು. ಈ ರೀತಿ ಡಿನೌನ್ಸ್ ಮಾಡಲ್ಪಟ್ಟ ವ್ಯಕ್ತಿ ಜೈಲು ಸೇರುತ್ತಾನೆ; ಜನರಲ್ಲಿ ಕಾರ್ಯಕರ್ತರ ಬಗ್ಗೆ ಭಯಭೀತಿ ಜಾಸ್ತಿಯಾಗುತ್ತದೆ. ಹೀಗೆ ಕಮ್ಯೂನಿಸ್ಟ್ ಪಾರ್ಟಿಯ ಶಕ್ತಿ ವರ್ಧಿಸುತ್ತ ಇರುತ್ತದೆ. ಇದೆಲ್ಲ ನಡೆಯುವುದು ದೂರದ ದೇಶಗಳಲ್ಲಿ, ನಮ್ಮ ಭಾರತದಲ್ಲಿ ಅಲ್ಲ ಎಂದು ತಿಳಿದುಕೊಂಡ ಭಾರತೀಯರಿಗೆ ೧೯೭೫ರ ತುರ್ತುಪರಿಸ್ಥಿತಿ ಭ್ರಮನಿರಸನ ಮಾಡಿತು. ವಿರೋಧ ಪಕ್ಷದ ಅನೇಕರನ್ನು ಯಾವ ಕಾರಣವಾಗಲಿ, ವಿಚಾರಣೆಯಾಗಲಿ ಇಲ್ಲದೆ ರಾತ್ರೋರಾತ್ರಿ ಸೆರೆಮನೆಯಲ್ಲಿ ತಳ್ಳಲಾಯಿತು. ಜನ ಭಯದಿಂದ ತತ್ತರಿಸಿದರು. ಹಲವರು ಕಾಣೆಯಾದರು, ಪೊಲೀಸ್ ಮರ್ದನದಲ್ಲಿ ಅಸುನೀಗಿದರು. ನಾಗರಿಕ ಹಕ್ಕುಗಳನ್ನು ಕಸಿಯಲಾಯಿತು; ಎಲ್ಲಾ ಹಕ್ಕುಗಳಿದ್ದುದು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ. ಊರೂರುಗಳಲ್ಲಿ ಮರಿ ಕಾಂಗ್ರೆಸಿಗರಿಗೆ ಕೂಡಾ ಅಪಾರ ಶಕ್ತಿ ಬಂದುಬಿಟ್ಟಿತು. ಕಮ್ಯೂನಿಸ್ಟ್ ದೇಶಗಳಲ್ಲಿನ ಡಿನೌನ್ಸಿಂಗ್ ಇಲ್ಲೂ ಸುರುವಾಯಿತು. ತುರ್ತು ಪರಿಸ್ಥಿತಿಯ ಲಾಭ ಪಡೆದುಕೊಂಡು ಕಾಂಗ್ರೆಸಿಗರು ಎರಡು ವರ್ಷಗಳ ಕಾಲ ನಡೆಸಿದ ಅತ್ಕಾಚಾರಗಳಿಗೆ ಮಿತಿಯಿಲ್ಲ. ಪ್ರತಿಯೊಂದು ಪತ್ರಿಕೆಯೂ ಪ್ರಕಟಣಾಪೂರ್ವ ಸೆನ್ಸರಿಗೆ ಒಳಗಾಗುತ್ತಿತ್ತು ಎಂದರೆ ಈಗ ನಂಬುವುದು ಕಷ್ಟ. ಇದೆಲ್ಲ ಆಗಿ ಈಗ ಒಂದು ತಲೆಮಾರು ಕಳೆದಿದೆ. ನಕ್ಸಲೀಯರ ಬಗ್ಗೆ ಉದಾರವಾಗಿ ಮಾತಾಡುವಾಗ, ಇಷ್ಟು ಬೇಗನೆ ಜನ ಇದನ್ನೆಲ್ಲ ಮರೆತರೇ ಎಂದು ಆಶ್ಚರ್ಯವೂ, ಬೇಸರವೂ ಆಗುತ್ತದೆ.

ನಕ್ಸಲೀಯ ಕಾರಣಗಳಲ್ಲಿ ಅನುಕಂಪವಿದ್ದು, ಹಿಂಸಾವಿಧಾನವನ್ನು ಒಪ್ಪದಿರುವ ಸಾಹಿತಿಗಳ ದೊಡ್ಡ ಬಳಗವಿದೆ. ಇವರೆಲ್ಲರೂ ಸಮಾಜ ಜೀವನದಲ್ಲಿ ಬದಲಾವಣೆಯನ್ನು ಬಯಸುವವರೇ. ಹಾಗೂ ಅದೇ ಕಾಳಜಿಯಿಂದ ಬರೆಯುತ್ತಿರುವವರು. ಆದರೆ ಈಗ ನಕ್ಸಲೀಯರು ಅವರಿಂದ ಮಾತುಗಳನ್ನು ಕದ್ದುಕೊಂಡಿದ್ದಾರೆ. ಯಾಕೆಂದರೆ, ಬಂದೂಕು ಹಿಡಿದವನ ಮುಂದೆ ‘ಖಡ್ಗವಾಗಲಿ ಕಾವ್ಯ’ ಎಂಬ ಮಾತು ಅರ್ಥಹೀನವೂ, ಕೊಲ್ಲುವವನ ಮುಂದೆ ‘ಇಕ್ರಲಾ ವದೀರ್‍ಲಾ’ ಎಂಬ ಮಾತು ಅನಗತ್ಯವೂ ಆಗುತ್ತದೆ. ಸಾಹಿತ್ಯ ನಿಂತಿರುವುದೇ ರೂಪಕ ಶಕ್ತಿಯ ಮೇಲೆ. ಆದರೆ ಓದುಗ ‘ರೂಪಕ ಭ್ರಮೆ’ಗೆ ಒಳಗಾದಾಗ ಸಾಹಿತ್ಯ ಅಪ್ರಸ್ತುತವಾಗುತ್ತದೆ ಹಾಗೂ ಸಾಹಿತಿ ನಿರುತ್ತರನಾಗುತ್ತಾನೆ. ಯಾವುದೇ ಸಂದರ್ಭದಲ್ಲೂ ಸಾಹಿತ್ಯ ಮಾನಸಿಕ ಜಾಗರಣೆಯನ್ನು ಬಯಸುತ್ತದೆಯೇ ವಿನಾ ಉಗ್ರಗಾಮಿತ್ವವನ್ನಲ್ಲ. ಬಹುಳತ್ವದಲ್ಲಿ ಜನಿಸುವ ಮತ್ತು ಅದರಲ್ಲೇ ಉಸಿರಾಡುವ ಸಾಹಿತ್ಯಕ್ಕೆ ಉಗ್ರಗಾಮಿತ್ವ ಆಜನ್ಮ ವೈರಿ.

ಆದರೂ ಈ ಸಾಹಿತಿಗಳಿಗೂ ಎಲ್ಲಿ ತಮ್ಮ ಬರಹಗಳು ಉಗ್ರಗಾಮಿತ್ವಕ್ಕೆ ಕಾರಣವಾದುವೋ ಎಂದು ಆತಂಕ ಉಂಟಾದರೆ ಅದರಲ್ಲಿ ಆಶ್ಚರ್ಯವಿಲ್ಲ. ಅಯರ್‍ಲೆಂಡಿನಲ್ಲಿ ೧೯೧೬ರ ಈಸ್ಟರ್ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಮಾರಣಹೋಮವನ್ನು ಕಂಡು ಕವಿ ಯೇಟ್ಸ್‌ಗೆ ಹೀಗನಿಸಿದ್ದಿದೆ. ಅಯರ್‍ಲೆಂಡಿನ ಸಾಂಸ್ಕೃತಿಕ ಪುನರುತ್ಥಾನಕ್ಕೆ ಅಪಾರ ಕೊಡುಗೆ ನೀಡಿದ್ದ ಯೇಟ್ಸ್ ಆ ದೇಶದ ವಿಮೋಚನೆಯನ್ನು ಬಯಸಿದ್ದರೂ ಅದು ಮಾತುಕತೆಗಳ ಮೂಲಕ, ಶಾಂತಿಯುತವಾಗಿ ನಡೆಯಬೇಕೆಂದು ಅಪೇಕ್ಷಿಸಿದ್ದ. ಐರಿಶ್ ಸ್ವಾತಂತ್ರ್ಯ ಪ್ರೇಮಿಗಳು ಆಯುಧ ಹಿಡಿದು ಬ್ರಿಟಿಷರ ವಿರುದ್ಧ ಹೋರಾಡಿ ಕೊಲ್ಲುವುದಾಗಲಿ ಕೊಲ್ಲಿಸಿಕೊಳ್ಳುವುದಾಗಲಿ ಅವನಿಗೆ ಬೇಕಿರಲಿಲ್ಲ. ಈ ಈಸ್ಟರ್ ದಂಗೆಯಲ್ಲಿ ಆದದ್ದೂ ಅದೇ. ಈ ಹಿಂದೆ ನಾಟಕವೊಂದಲ್ಲಿ ಐರಿಶ್ ಮಾತೆಯ ಬಾಯಿಯಿಂದ ಉಗ್ರ ರಾಷ್ಟ್ರಪ್ರೇಮದ ಮಾತುಗಳನ್ನು ಯೇಟ್ಸ್ ಹೇಳಿಸಿದ್ದ. ಇದನ್ನು ನೆನಪಿಸಿಕೊಂಡು ಯೇಟ್ಸ್ ಮರುಗುತ್ತಾನೆ. ‘ಈಸ್ಟರ್ ೧೯೧೬’ ಎಂಬ ಕವಿತೆಯಲ್ಲಿ ನಾವು ಕಾಣುವ ಕವಿಯ ತಲ್ಲಣದ ಹಿನ್ನೆಲೆ ಇದು. ಆದರೆ ಈ ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮತೆ ಅನಗತ್ಯವಾಗಿದ್ದರೂ, ಪರಿಣಾಮವಾಗಿ A terrible beauty is born ‘ಘೋರ ಸೌಂದರ್ಯವೊಂದು ಜನಿಸಿದೆ’ ಎನ್ನುತ್ತಾನೆ ಕವಿ. ಈ ಐರಿಶ್ ಸ್ವಾತಂತ್ರ್ಯ ಹೋರಾಟಗಾರರ ಜತೆ ನಕ್ಸಲೀಯರನ್ನು ಹೋಲಿಸುವುದು ಆಭಾಸವಾಗುತ್ತದೆ. ಯಾಕೆಂದರೆ, ಐರಿಶ್ ಹೋರಾಟಗಾರರು ತಮ್ಮ ದೇಶದ ಬಿಡುಗಡೆಗಾಗಿ ಪ್ರಾಣ ತೆತ್ತವರು; ನಕ್ಸಲೀಯರು ತಮ್ಮದೇ ರಾಜ್ಯಸ್ಥಾಪನೆಗಾಗಿ ಹಿಂಸೆಗೆ ಇಳಿದಿದ್ದಾರೆ. ನಕ್ಸಲೀಯರಿಂದ ಮಾತ್ರ ಯಾವ ಸೌಂದರ್ಯವೂ ಹುಟ್ಟುವುದಿಲ್ಲ. ಇನ್ನಷ್ಟು ಘೋರತೆ ಮಾತ್ರ ಜನಿಸುತ್ತದೆ.

ಸಾಹಿತ್ಯ ಮತ್ತು ಪ್ರಜಾಪಭುತ್ವಕ್ಕೆ ಅವಿನಾ ಸಂಬಂಧ. ಎರಡೂ ಬಹುಳತ್ವವನ್ನು ಒಪಿಕೊಂಡಂಥವು; ಎರಡೂ ಸರ್ವಾಧಿಕಾರದ ವಿರೋಧಿಗಳು. ಕಟ್ಟಾ ಮಾರ್‍ಕ್‌ಸಿಸ್ಟ್ ಸಾಹಿತ್ಯವಲ್ಲದೆ, ಇನ್ನು ಯಾವ ಸಾಹಿತ್ಯವೂ ಏಕಪಕ್ಷೀಯತೆಯನ್ನಾಗಲಿ, ಸರ್ವಾಧಿಕಾರವನ್ನಾಗಲಿ ಪ್ರೋತ್ಸಾಹಿಸುವುದಿಲ್ಲ. ಒಂದು ಕತೆಯಾಗಲಿ ಕಾದಂಬರಿಯಾಗಲಿ ಆರಂಭದಿಂದಲೇ ಬಹುಳತ್ವಕ್ಕೆ ಎಡೆಮಾಡಿಕೊಡುವಂಥದು- ಕಥನದಲ್ಲಿ ಮಾತ್ರವಲ್ಲ, ಓದುಗ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಕೂಡಾ ಅರ್ಥಬಾಹುಳ್ಯವಿರುತ್ತದೆ. ಕಾದಂಬರಿಯೆಂದರೆ ಅದೊಂದು ಸಂತೆಯ ಹಾಗೆ, ವೈವಿಧ್ಯತೆಯ ಸಂಕೀರ್ಣ ಎನ್ನುತ್ತಾನೆ ಬಕ್ತೀನ್. ಇನ್ನು ಕವಿತೆಯಾದರೆ, ಅದು ಮನುಷ್ಯನ ಸೂಕ್ಷ್ಮ ಒಳಧ್ವನಿಯ ಪ್ರಕಟಣೆ. ಸಾಹಿತ್ಯದ ಎಲ್ಲಾ ಪ್ರಾಕಾರಗಳೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಅತ್ಯಗತ್ಯವಾದ ಸೂಕ್ಷ್ಮತೆಗಳನ್ನು ನೀಡುವಂಥವು. ಬಂದೂಕು ಹಾಗಲ್ಲ; ಅದು ಅತ್ಯಂತ ಒರಟಾದ ಖಂಡತುಂಡ ಹತ್ಯಾರ. ಸಾಹಿತ್ಯ ಅದನ್ನು ಯಾವ ಕಾರಣಕ್ಕೂ ಬೆಂಬಲಿಸದು.

ನಕ್ಸಲರನ್ನು ಬೆಂಬಲಿಸುವ ಬುದ್ಧಿಜೀವಿಗಳು ಅರಿತುಕೊಳ್ಳಬೇಕಾದ ವಿಷಯ: ಗಣತಂತ್ರ ಎಷ್ಟು ಕೆಟ್ಟಿದ್ದರೂ ಮಾವೋಯಿಸಮಿವನಷ್ಟು ಕೆಟ್ಟಿರುವುದಿಲ್ಲ. ಯಾಕೆಂದರೆ ಗಣತಂತ್ರದಲ್ಲಿ ಮಾತಿನ ಹಕ್ಕು ಇರುತ್ತದೆ; ಮಾವೋವ್ಯವಸ್ಥೆಯಲ್ಲಿ ಇರುವುದಿಲ್ಲ. ಆದ್ದರಿಂದ ಇತಿಹಾಸದ ಗತಿಯಲ್ಲಿ ಮಾವೋಯಿಸಮ್ ಒಂದು ಪಳೆಯುಳಿಕೆ. ನಕ್ಸಲೀಯರು ತಾವು ಪ್ರಜಾಪ್ರಭುತ್ವದ ವಿರೋಧಿಗಳಲ್ಲ ಎಂದು ಹೇಳಿಕೊಂಡರೂ ಆಯುಧ ಕೈಗೆತ್ತಿಕೊಂಡ ತಕ್ಷಣ ಅವರು ಪ್ರಜಾಪ್ರಭುತ್ವ ವಿರೋಧಿಗಳೇ ಆಗುತ್ತಾರೆ. ಪರಿಪೂರ್ಣ ಪ್ರಜಾಪಭುತ್ವಕ್ಕೆ ಇದೊಂದು ತಾತ್ಕಾಲಿಕವೂ ಅನಿವಾರ್ಯವೂ ಆದ ಹೆಜ್ಜೆ. ಆದರೆ ಎಲ್ಲಿ ಆಪಾದಕರೂ ನ್ಯಾಯಾಧೀಶರೂ ಒಬ್ಬರೇ ಆಗಿರುತ್ತಾರೋ ಅಲ್ಲಿ ಪಜಾಪ್ರಭುತ್ವ ಇರುವುದಿಲ್ಲ, ಸರ್ವಾಧಿಕಾರ ಮಾತ್ರ ಇರುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೭
Next post ಪರಿಚಿತ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…