ಪ್ರತಿಯೊಂದು ಕವಿತೆಯೂ ಕವಿತೆಯ ಬಗ್ಗೆಯೇ ಎಂದವನು ಅಮೇರಿಕದ ಕವಿ ವಾಲೆಸ್ ಸ್ಟೀವನ್ಸ್, ಎಝ್ರಾ ಪೌಂಡ್, ಟಿ. ಎಸ್. ಎಲಿಯೆಟ್, ರಾಬರ್ಟ್ ಫ್ರಾಸ್ಟ್ ಮುಂತಾದವರು ಬರೆಯುತ್ತಿದ್ದ ಕಾಲದಲ್ಲೇ ಇವರಿಗಿಂತ ಭಿನ್ನವಾಗಿ ಕವಿತೆ ರಚಿಸಿ ಪ್ರಸಿದ್ಧನಾದವನು. ಪೌಂಡ್ ಮತ್ತು ಎಲಿಯೆಟ್‌ಗೆ ಹೋಲಿಸಿದರೆ, ಸ್ಪೀವನ್ಸ್‌ನ್ನ ಸಾಹಿತ್ಯ ಸಿದ್ಧಾಂತಿಯೆಂದು ಕರೆಯುವಂತಿಲ್ಲ. ಕಾವ್ಯದ ಬಗ್ಗೆ, ಸಾಹಿತ್ಯದ ಬಗ್ಗೆ ಅವನು ಬರೆದ ಲೇಖನಗಳು ಕಡಿಮೆ. ಆದರೂ ಸ್ಪೀವನ್ಸ್‌ನ್ನ ಕೆಲವು ಮಾತುಗಳು ಕಾವ್ಯದ ಅಥವಾ ಸಾಹಿತ್ಯದ ರೀತಿಯನ್ನು ಅರಿತುಕೊಳ್ಳುವುದಕ್ಕೆ ಸಹಕಾರಿಯಾಗುತ್ತವೆ. ಪ್ರತಿಯೊಂದು ಕವಿತೆಯೂ ಕವಿತೆಯ ಬಗ್ಗೆಯೇ ಎಂದರೆ ಏನರ್ಥ ಎಂದು ನಾವು ಕೇಳಬಹುದು. ಒಂದೊಂದು ಕವಿತೆಗೂ ಒಂದೊಂದು ವಸ್ತುವಿರುತ್ತದೆ; ಕೆಲವೊಮ್ಮೆ ವಸ್ತು ಕವಿತೆಯೂ ಇರಬಹುದು. ಅಂಥ ಕಡೆ ಕವಿತೆಯು ಕವಿತೆಯ ಬಗ್ಗೆಯೇ ಇದೆಯೆಂದು ಹೇಳುವುದರಲ್ಲಿ ಅರ್ಥವಿದೆ; ಕವಿತೆ ಮಾಗಿಯ ಕುರಿತೋ ಮಂಜಿನ ಕುರಿತೋ ಆಗಿದ್ದಾಗ ಅಂಥ ಕವಿತೆಯೂ ಕವಿತೆಯ ಬಗ್ಗೆಯೇ ಎಂದರೆ ಅದು ಯಾವ ಅರ್ಥದಲ್ಲಿ ಎಂದು ಕೇಳಬೇಕಾಗುತ್ತದೆ.

೧೯೩೭ರ ಸುಮಾರಿಗೆ ಸ್ಟೀವನ್ಸ್ ನೀಡಿದ ಭಾಷಣವೊಂದಿದೆ; ಅದರ ಶೀರ್ಷಿಕೆ The Irrational Element in Poetry ‘ಕವಿತೆಯಲ್ಲಿನ ಅತಾರ್ಕಿಕ ಅಂಶ’. ಹೊರ ನೋಟಕ್ಕೆ ಈ ಭಾಷಣದ ಮುಖ್ಯ ಭೂಮಿಕೆಯಲ್ಲಿ ಅಂಥ ವಿಶೇಷವಾದ್ದೇನೂ ಕಾಣಿಸದು: ಕವಿತೆ ತರ್ಕದ ಬಲವಂತದಿಂದ ಬರುವ ಸಂಗತಿಯಲ್ಲ, ಅದು ಕಾವ್ಯಸಂವೇದನೆಯಿರುವ ಕವಿ ವಾಸ್ತವ ಜಗತ್ತಿಗೆ ತೆರೆದುಕೊಂಡಾಗ ತಾನಾಗಿ ಸಂಭವಿಸುವಂಥದು ಎನ್ನುವ ಸರ್ವಸಾಧಾರಣ ಸ್ವೀಕೃತ ವಿಷಯವನ್ನೇ ಸ್ಟೀವನ್ಸ್ ಕೂಡಾ ಇಲ್ಲಿ ಪ್ರತಿಪಾದಿಸುತ್ತಾನೆ. ಆದರೆ ಸ್ಟೀವನ್ಸ್ ಇದನ್ನು ಪ್ರತಿಪಾದಿಸುತ್ತ ಇನ್ನೂ ಮುಂದಕ್ಕೆ ಹೋಗುತ್ತಾನೆ. ಭಾವನೆ (Imagination) ಮತ್ತು ವಾಸ್ತವ ಜಗತ್ತಿನ ಸಂಬಂಧಕ್ಕೆ ಮಾತು ಕೊಡಲು ಪಯತ್ನಿಸಿದ ಕೆಲವೇ ಕವಿಗಳಲ್ಲಿ ಮುಖ್ಯನಾದ ಈತ ತನ್ನ ಭಾಷಣದ ಉದ್ದಕ್ಕೂ ವಿಶ್ಲೇಷಿಸುವುದು ಈ ಸಂಬಂಧದ ಎಳೆಗಳನ್ನೇ.

ಕವಿತೆಯ ವಸ್ತುವಾಗಲಿ, ಅದು ಬೆಳೆಯುವ ರೀತಿಯಾಗಲಿ ಪೂರ್ವನಿರ್ಣಯಕ್ಕೆ ಸಿಗುವುದಲ್ಲ ಎನ್ನುವುದು ಈ ‘ಅತಾರ್ಕಿಕತೆ’ಯ ಒಂದು ನೆಲೆ. ಪೂರ್ವನಿರ್ಣಯಕ್ಕೆ ಸಿಗುವಂಥದೇ ತಾರ್ಕಿಕವಾದದ್ದು. ಅದು ವಿಜ್ಞಾನದ ಮಾರ್ಗ. ಯಾಕೆಂದರೆ ವಿಜ್ಞಾನ ಇಡೀ ಜಗತ್ತಿನ ವಿದ್ಯಮಾನಗಳನ್ನು, ಭೂತ ವರ್ತಮಾನ ಭವಿಷ್ಯಗಳ ಸಮೇತ, ತರ್ಕಬದ್ಧವಾಗಿ ವಿವರಿಸಲು ಯತ್ನಿಸುತ್ತದೆ. ಕವಿತೆ ಇದನ್ನು ಮೀರಿದ ರೀತಿ; ತರ್ಕಕ್ಕೆ ಸಿಗದ ಆಕಸ್ಮಿಕಗಳಿಂದ ಅದು ಆರಂಭವಾಗುತ್ತದೆ ಹಾಗೂ ಬೆಳೆಯುತ್ತದೆ.

‘ಕವಿತೆಯಲ್ಲಿ ನಾವು ಯಾವಾಗಲೂ ಏಕ ಕಾಲಕ್ಕೆ ಎರಡು ವಿಷಯಗಳ ಕುರಿತು ಬರೆಯುತ್ತೇವೆ ಮತ್ತು ಕವಿತೆಗೆ ಸಹಜವಾದ ಸೆಳೆತವನ್ನು (tension) ಉಂಟುಮಾಡುವುದು ಇದೇ. ಒಂದು ನಿಜವಾದ ವಸ್ತು ಮತ್ತು ಇನ್ನೊಂದು ಆ ವಸ್ತುವಿನ ಕವಿತೆ. ನಮ್ಮ ಮನಸ್ಸಿನಲ್ಲಿ ಅತಿ ಮುಖ್ಯವಾಗಿರುವುದು ವಸ್ತುವಿನ ಕವಿತೆಯಾಗಿರುತ್ತ, ವಸ್ತುವಿಗೆ ಅಂಟಿಕೊಳ್ಳುವಲ್ಲಿನ ಕಷ್ಟ ಹೇಳಿದ ಮಾತ್ರಕ್ಕೆ ಗೊತ್ತಾಗುವಂಥದು. ನಿಜವಾದ ವಸ್ತು ಅತಿ ಮುಖ್ಯವಾಗಿದ್ದು, ಅದನ್ನು ಕೇವಲ ಸಿಂಗರಿಸುವ ಕವಿಯಲ್ಲಿ ವಸ್ತು ಒಂದೇಯೂ, ಅದರ ಬೆಳವಣಿಗೆ ಕ್ರಮಬದ್ಧವೂ ಆಗಿರುತ್ತದೆ. ವಸ್ತುವಿನ ಕವಿತೆ ಅತಿ ಮುಖ್ಯವಾದರೆ, ನಿಜವಾದ ವಸ್ತು ಒಂದೇ ಆಗಿಯಾಗಲಿ ಅಥವಾ ಅದರ ಬೆಳವಣಿಗೆ ಕ್ರಮಬದ್ಧವಾಗಿಯಾಗಲಿ ಇರುವುದಿಲ್ಲ ಎನ್ನುತ್ತಾನೆ ಸ್ಟೀವನ್ಸ್. ಇದಕ್ಕೆ ಆತ ಆಧುನಿಕ ಗದ್ಯದಿಂದ (ಯಾಕೆಂದರೆ ಇಲ್ಲಿ ಗದ್ಯ ಪದ್ಯಗಳ ಭಿನ್ನತೆ ಮುಖ್ಯವೇ ಅಲ್ಲ) ಉದಾಹರಣೆಯಾಗಿ ಕೊಡುವುದು ಪ್ರೊಸ್ಟ್ ಮತ್ತು ಜಾಯ್ಸ್‌ನ ಬರವಣಿಗೆಗಳನ್ನು. ಈ ಇಬ್ಬರು ಲೇಖಕರೂ ಬೆನ್ನುಹತ್ತಿದುದು ವಸ್ತುವನ್ನಲ್ಲ, ವಸ್ತುವಿನ ಕುರಿತಾದ ಕವಿತೆಯನ್ನು. ಹೀಗೆ ಮಾಡಿದಾಗ ವಸ್ತು ಬಿಟ್ಟುಹೋಗುವುದು ಸಾಧ್ಯವಿಲ್ಲವೇ ಎಂದರೆ ಆ ಕುರಿತು ಸ್ಟೀವನ್ಸ್ ನಮ್ಮನ್ನು ಈಗಾಗಲೇ ಎಚ್ಚರಿಸಿರುವುದನ್ನು ನೆನಪಿಟ್ಪುಕೊಳ್ಳಬೇಕು. ಕವಿತೆ ಅಥವಾ ವಿಸ್ತೃತ ಅರ್ಥದಲ್ಲಿ ಸಾಹಿತ್ಯ ಎರಡನ್ನೂ ಒಟ್ಟಿಗೇ ನಿಭಾಯಿಸತಕ್ಕದ್ದು. ಆದ್ದರಿಂದಲೇ ಸ್ಟೀವನ್ಸ್ ಇಲ್ಲಿ ವಸ್ತು ಮತ್ತು ವಸ್ತುವಿನ ಕವಿತೆಯ ನಡುವಣ ‘ಸೆಳೆತ’ದ ಕುರಿತಾಗಿ ಮಾತಾಡುವುದು. ಇದೇನೂ ಸುಲಭದ ಕೆಲಸವಲ್ಲ, ಪೂರ್ವಭಾವಿ ನಿರ್ಣಯಕ್ಕೆ ಒಳಪಡುವಂಥದಂತೂ ಅಲ್ಲವೇ ಅಲ್ಲ.

ಕವಿತೆಗೆ ಕಾಯಬಾರದು, ಕವಿತೆಯನ್ನು ಆಗುಮಾಡಬೇಕು ಎಂದವನೂ ಸ್ಟೀವನ್ಸೇ. ಕವಿತೆಯನ್ನು ಆಗುಮಾಡುವುದೆಂದರೇನು? ಕವಿತೆಯನ್ನು ಆಗು ಮಾಡುವುದೆಂದರೆ ತಾರ್ಕಿಕತೆಯತ್ತ ಹೊರಳಿದಂತೆಯೇ ಅಲ್ಲವೇ? ಕವಿತೆಗೆ ಕಾಯುವುದೇ ಅತಾರ್ಕಿಕವಲ್ಲವೇ ಮುಂತಾಗಿ ನಾವು ಕೇಳಬಹುದು. ಈ ರೀತಿ ಯೋಚಿಸಿದರೆ, ಸ್ಟೀವನ್ಸ್‌ನ ಮಾತುಗಳಲ್ಲಿ ವೈರುಧ್ಯವಿದೆ ಎಂದಾಯಿತು. ಆದರೆ ನಿಜಕ್ಕೂ ವೈರುಧ್ಯವೇನೂ ಇಲ್ಲ. ಯಾಕೆಂದರೆ ಕವಿತೆಗೆ ಕಾಯುವುದೆಂದರೆ ಕವಿತೆಯ ಕುರಿತಾಗಿ ನಾವು ಪೂರ್ವಭಾವಿ ಕಲ್ಪನೆಗಳನ್ನು ಅಥವಾ ನಿರ್ಣಯಗಳನ್ನು ಇರಿಸಿಕೊಂಡು ಕುಳಿತಂತೆ; ಅದೇ ತಾರ್ಕಿಕತೆ. ಅರ್ಥಾತ್, ಕವಿತೆಗೆ-ಸರಿಯಾದ ವಸ್ತು ಮತ್ತು ರೀತಿಗೆ ಅದು ಎದುರಾದಾಗ ಓಹೋ ಇದೇ ಕವಿತೆ ಎನ್ನುವಂತೆ. ಅದೆಂದೂ ಎದುರಾಗುವುದಿಲ್ಲವೆನ್ನುವುದು ಬೇರೆ ಮಾತು! ಇದಕ್ಕೆ ಪ್ರತಿಯಾಗಿ, ಸಿಕ್ಕಿದ ವಸ್ತುವಿನಿಂದಲೇ ಕವಿತೆಯನ್ನು ಮನಸ್ವೀ ಬೆಳೆಸುವುದು ಇನ್ನೊಂದು ವಿಧ. ಇದೇ ಕವಿತೆಯ ಅತಾರ್ಕಿಕ ಗುಣ. ಆದ್ದರಿಂದ ಕವಿತೆಯನ್ನು ಆಗುಮಾಡುವುದೆಂದರೆ, ವಸ್ತು ಮತ್ತು ಬೆಳವಣಿಗೆಯ ಅಕಸ್ಮಿಕಗಳಿಗೆ ತೆರೆದುಕೊಳ್ಳುವುದು ಎಂದು ಅರ್ಥ.

ಸ್ಟೀವನ್ಸ್‌ನದೊಂದು ಕವಿತೆಯಿದೆ. ಹೆಸರು ‘ಕಬ್ದಕ್ಕಿಯನ್ನು ನೋಡುವ ಹದಿಮೂರು ಬಗೆ’ (Thirteen Ways of Looking at a Blackbird). ಕೆಲವೇ ಸಾಲುಗಳ ಹದಿಮೂರು ವೃತ್ತಗಳ ಕವಿತೆ ಇದು. ಯಾಕೆ ಕಬ್ಬಕ್ಕಿ, ಯಾಕೆ ಬೆಳ್ಳಕ್ಕಿ ಅಥವಾ ಗುಬ್ಬಕ್ಕಿ ಆಗಬಾರದು ಎಂದರೆ ಅದಕ್ಕೆ ಇಲ್ಲಿ ಉತ್ತರವಿಲ್ಲ; ಅದೇ ರೀತಿ, ಯಾಕೆ ಹದಿಮೂರು ಬಗೆ, ಹನ್ನೆರಡೋ ಹದಿನಾಲ್ಕೋ ಯಾಕಾಗಬಾರದು ಎಂದರೆ ಅದಕ್ಕೂ ಉತ್ತರವಿಲ್ಲ. ಮುಖ್ಯವಾಗಿ ಅಂಥ ಪ್ರಶ್ನೆಗಳನ್ನೇ ಕವಿತೆ ಅರ್ಥಹೀನವಾಗಿ ಮಾಡುತ್ತದೆ. ಕಾರಣ ಇದು ಕವಿತೆಯ ವಸ್ತುವಿನ ಆಯ್ಕೆಯಿಂದಲೇ ಅತಾರ್ಕಿಕವಾಗಿರುವುದು.

ಇಪ್ಪತ್ತು ಹಿಮಾಚ್ಛಾದಿತ ಪರ್ವತಗಳ ನಡುವೆ,
ಚಲಿಸದ ಒಂದೇ ವಸ್ತು
ಕಬ್ಬಕ್ಕಿಯ ಕಣ್ಣು

ನನ್ನ ಮನಸ್ಸು ಮೂರಾಬಟ್ಟೆಯಾಗಿತ್ತು,
ಮೂರು ಕಬ್ಬಕ್ಕಿಗಳಿರುವ
ಒಂದು ಮರದ ಹಾಗೆ

ಗ್ರೀಷ್ಮದ ಗಾಳಿಯಲ್ಲಿ ಕಬ್ಬಕ್ಕಿ ಫಕ್ಕನೆ ಹಾರಿತು,
ಮೂಕನಾಟಕದ ಸಣ್ಣ ಭಾಗವಾಗಿತ್ತು ಅದು

ಒಬ್ಬ ಗಂಡಸು ಮತ್ತು ಒಬ್ಬಳು ಹೆಂಗಸು
ಒಂದೇ.
ಒಬ್ಬ ಗಂಡಸು ಒಬ್ಬಳು ಹೆಂಗಸು ಮತ್ತು ಒಂದು ಕಬ್ಬಕ್ಕಿ
ಒಂದೇ.

ನನಗೆ ತಿಳಿಯದು ಯಾವುದು ನನಗಿಷ್ಟ,
ಪ್ರತ್ಯಯಗಳ ಚೆಲುವೇ
ಅಥವಾ ವಕ್ರೋಕ್ತಿಗಳ ಚೆಲುವೆ,
ಸಿಳ್ಳಿಡುತ್ತಿರುವ ಕಬ್ಬಕ್ಕಿಯೆ
ಅಥವ ಮರುಕ್ಷಣವೆ

ಹೀಗೆ ಸಣ್ಣ ಸಣ್ಣ ವೃತ್ತಗಳಿಂದ ಆರಂಭವಾಗುವ ಕವಿತೆ ತನ್ನದೇ ದಾರಿ ಹಿಡಿದಂತೆ ಮುಂದರಿಯುತ್ತದೆ; ಕವಿತೆಯ ಅಂತಿಮ ಚರಣ ಇದು:

ಇಡೀ ಅಪರಾಹ್ನ ಸಾಯಂಕಾಲವಾಗಿತ್ತು
ಮಂಜು ಬೀಳುತ್ತಿತ್ತು
ಮತ್ತು ಬೀಳುವುದಿತ್ತು.
ಕಬ್ಬಕ್ಕಿ ಕೂತಿತ್ತು ಸಿಡಾರ್-ಕೊಂಬೆಗಳಲ್ಲಿ.

The Snow Man(ಹಿಮ ಮಾನವ) ಎನ್ನುವುದು ಸ್ಟೀವನ್ಸ್‌ನ ಇನ್ನೊಂದು ಪ್ರಸಿದ್ಧ ಕವಿತೆ. ‘ಮಾಗಿಯ ಮನಸ್ಸು ಬೇಕು ಮಂಜು ನೋಡುವುದಕ್ಕೆ’ ಎನ್ನುವ ಕವಿಯ ಪ್ರಖ್ಯಾತ ಸಾಲು ಬರುವುದು ಇದೇ ಕವಿತೆಯಲ್ಲಿ:

ಮಾಗಿಯ ಮನಸ್ಸು ಬೇಕು ಮಂಜು
ನೋಡುವುದಕ್ಕೆ ಮತ್ತು ಹೆಪ್ಪುಗಟ್ಟಿದ ಹಿಮ
ಹೊದ್ದುತೂಗುವ ಪೈನ್ ವೃಕ್ಷಗಳ ನೋಡುವುದಕ್ಕೆ.

ಎಂಬ ಈ ಕವಿತೆಯೂ ಸ್ಟೀವನ್ಸ್ ಕವಿತೆಯನ್ನು ಆಗುಮಾಡುವ ರೀತಿಗೆ ಸಾಕ್ಷಿ. ಕವಿತೆಯ ಕೊನೆಯೂ ಅತಾರ್ಕಿಕವಾಗಿ ಮೂಡುವಂಥದು:

ಯಾಕೆಂದರೆ ಹಿಮದಲ್ಲಿ ಆಲಿಸುವ ಮನುಷ್ಯ,
ತಾನು ಏನಿಲ್ಲದೆ, ಅಲ್ಲಿರದ ಏನನ್ನೂ ನೋಡುವುದಿಲ್ಲ
ಮತ್ತು ಅಲ್ಲಿರುವ ಏನನ್ನೂ.

ಆದರೆ ಸ್ಟೀವನ್ಸ್ ಕೇವಲ ಭಾವನಾಲೋಕದಲ್ಲಿ ವಿಹರಿಸುವ ಕವಿಯೂ ಅಲ್ಲ; ಭಾವನೆ ಮತ್ತು ವಸ್ತುಜಗತ್ತನ್ನು ಒಟ್ಟೊಟ್ಟಿಗೇ ಸವಾರಿಮಾಡಲು ಬಯಸುವ ಕವಿ. ಭಾವನೆಯ ವಿಹಾರಕ್ಕೆ ವಾಸ್ತವದ ಕಡಿವಾಣ ಯಾತಕ್ಕೆ ಬೇಕು ಎನ್ನುವುದರ ಬಗ್ಗೆ ಆತ ಬರೆದಿದ್ದಾನೆ. ಯಾತಕ್ಕೆಂದರೆ, ಈ ವಾಸ್ತವದ ಗುರುತ್ವಾಕರ್ಷ ಇಲ್ಲದೆ ಇದ್ದರೆ ಭಾವನೆಗೆ ಶಕ್ತಿಯೇ ಇರುವುದಿಲ್ಲ, ಅದು ಕುಸಿಯುತ್ತದೆ. ಕವಿತೆಯ ಕ್ರಿಯೆಯೆಂದರೆ ಒಂದು ಗಾಳಿಪಟದ ಹಾಗೆ: ದಾರದ ಸಂಬಂಧ ಇದ್ದಾಗಲೇ ಅದು ಹಾರುವುದು; ಆ ಸಂಬಂಧ ಇಲ್ಲದ ಪೂರ್ಣಮುಕ್ತತೆಯಲ್ಲಿ ಅದು ಹಾರಲಾರದು; ಅದೇ ರೀತಿ ಆಕಾಶದ ಹರವೂ ಅದಕ್ಕೆ ಅಗತ್ಯ.

ಕಲೆಗಾಗಿ ಕಲೆ ಎಂಬ ವಾದ ಈಗ ಇಲ್ಲ; ಅದರ ಅತಿರೇಕವೇ ಅದರ ನಾಶಕ್ಕೆ ಕಾರಣವಾಯಿತು. ಆದರೆ ಸಮಾಜದ ಉದ್ಧಾರಕ್ಕಾಗಿ ಕಲೆ ಎಂಬ ವಾದ ಈಗ ಪ್ರಚಲಿತವಿದೆ; ಮಾತ್ರವಲ್ಲ, ವ್ಯಕ್ತವಾಗಿ ಹೀಗೆ ತೋರದ ಕಲೆಯೆಲ್ಲವೂ ಕಲೆಗಾಗಿ ಕಲೆ ಎಂಬ ನಿಲುವಿಗೆ ಸೇರಿದ್ದು, ಆದ್ದರಿಂದ ತಿರಸ್ಕಾರಾರ್ಹ ಎಂಬ ಭಾವನೆಯೂ ಇದೆ. ಇದು ಇನ್ನೊಂದು ಅತಿರೇಕವೆಂದು ಹೇಳಬಹುದು. ಸದ್ಯದ ಕನ್ನಡ ಸಾಹಿತ್ಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಈ ಸಂದರ್ಭದಲ್ಲಿ ಸ್ಟೀವನ್‌ನ ಮಾತುಗಳು ಮನನೀಯ. ಕಲೆಗಾಗಿ ಕಲೆ ಎಂಬ ಈಗಿಲ್ಲದ ವಾದದ ಜತೆ ನೆರಳುಗುದ್ದಾಟ ಆಡುತ್ತ ಅದರ ವಿರುದ್ಧದ ಅಂಚಿಗೆ ಹೋಗುವ ಬದಲು ಭಾವನೆ ಮತ್ತು ವಾಸ್ತವತೆಯ ಸೂಕ್ಷ್ಮ ಸಂಬಂಧವನ್ನು ಮಾನ್ಯಮಾಡಲು ಸ್ಟೀವನ್ಸ್ ನಮ್ಮನ್ನು ಪ್ರೇರೇಪಿಸುತ್ತಾನೆ. ಕವಿತೆಯ ‘ಬದ್ಧತೆ’ ಮತ್ತು ‘ಸ್ವಾಯತ್ತತೆ’ ಎರಡೂ ಇರುವುದು ಈ ಸಂಬಂಧದಲ್ಲೇ. ಇವೆರಡೂ ಮೇಲ್ನೋಟಕ್ಕೆ ಪರಸ್ಪರ ವಿರೋಧಿಗಳೆಂದು ನಮಗೆ ಅನಿಸಿದರೂ, ಸ್ಟೀವನ್ಸ್ ಹೇಳುವ ವಸ್ತು ಮತ್ತು ವಸ್ತುವಿನ ಕುರಿತಾದ ಕವಿತೆ ಎಂದರೆ ಈ ಶಕ್ತಿಗಳೇ; ಇವುಗಳ ವಿಕರ್ಷಣೆಯಿಂದಲೇ ಕವಿತೆಗೆ ಅಗತ್ಯವಾದ ‘ಸೆಳೆತ’ ದೊರಕುವುದು. ಗೌತಮ ಬುದ್ಧ ಆಹಾರ ನಿದ್ರೆಯಿಲ್ಲದೆ ಕೂತಿದ್ದಾಗ ಕೇಳಿದ ಹಾಡಿನ ಅರ್ಥವೂ ಇದೇ: ತಂತಿಯನ್ನು ಬಿಗಿಯದೆ ಇದ್ದರೆ ಅದರಿಂದ ನಾದ ಹೊರಡದು; ಆದರೆ ಹೆಚ್ಚು ಬಿಗಿದರೆ ಅದು ಕಡಿದುಹೋಗುತ್ತದೆ.
*****