ಸೋದರಿಯರೆ, ಮಡದಿ ಮತ್ತು ಮನದನ್ನೆ ಅರ್ಥಾತ್ ಪ್ರೇಯಸಿ ಇವರಿಬ್ಬರೂ ಗಂಡಿನ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತ ಬಂದಿದ್ದಾರೆ. ಗಂಡಿನ ಏಳುಬೀಳುಗಳಿಗೆ ಸುಖಾಂತ ದುಃಖಾಂತ ಮಾನಾಪಮಾನ ಕ್ಲೇಷಕ್ಲಿಷೆಗಳಿಗೆ ಕಾರಣವಾಗುತ್ತಾ ಪುರಾಣ ಕಾಲದಿಂದಲೂ ಇಂದಿನ ಹೈಟೆಕ್ ಯುಗದವರೆಗೆ ಹೆಣ್ಣು ಪುರುಷನ ಪಾಲಿಗೊಂದು ಸಮಸ್ಯೆಯಾಗಿಯೇ ಮುಂದುವರೆದಿದ್ದಾಳೆ ಅಲ್ಲವೇ? ನಮ್ಮ ಸುಪ್ರೀಂ ದೇವರುಗಳೆಲ್ಲಾ ಏಕಪತ್ನಿ ವ್ರತ್ರಸ್ಥರೇನಲ್ಲ ಬಿಡಿ. ಅವರಿಗೂ ಮನದನ್ನೆಯರಿದ್ದರು. ಪರಶಿವನನ್ನೇ ತೆಗೆದುಕೊಳ್ಳಿ. ಗೌರಿ, ಗಂಗೆ ಹೀಗೆ ತೊಡೆಯ ಮೇಲೊಬ್ಬಳು ತಲೆಯ ಮೇಲೊಬ್ಬಳಿಗೆ ಸ್ಥಾನ ಕೊಟ್ಟ ಭೂಪ. ಇವರಲ್ಲಿ ಮನದನ್ನೆಯರು? ಹೇಳೋದು ಕಷ್ಟ, ಕೈಲಾಸದ ಸೆಟ್ ನಲ್ಲಿ ಸದಾ ಪಕ್ಕದಲ್ಲಿ ಪಾರ್ವತಿಯನ್ನು ಮಾತ್ರ ಕಾಣುತ್ತೇವೆ. ಹಿರಿಯ ಸ್ಥಾನ ಆಕೆಯದಿರಬಹುದು. ಮತ್ತೊಬ್ಬ ಏಳುಕೊಂಡಲವಾಡ ವೆಂಕಟರಮಣ. ಆತನಿಗೂ ಲಕ್ಷ್ಮಿ, ಪದ್ಮಾವತಿಯರುಂಟು. ಯಾರನ್ನ ಪತ್ನಿ, ಉಪಪತ್ನಿ ಅಂದರೂ ಭಕ್ತರು ರಾಂಗ್ ಆಗುತ್ತಾರೆ. ಆದರೆ ಆದಿಶೇಷನ ಮೇಲೆ ಆತ ವಿಷ್ಣು ಸ್ವರೂಪದಲ್ಲಿ ವಿರಮಿಸಿದಾಗ ಸದಾಕಾಲ ಬುಡದಲ್ಲಿ ಕಾಣೋಳು ಲಕ್ಷ್ಮಿಯಷ್ಟೆ. ಈತ ಕೂಡ ಪತ್ನಿಯರಿಗೆ ವಕ್ಷ ಸ್ಥಳದಲ್ಲೇ ಸಿಟ್ ರಿಸರ್ವ್ ಮಾಡಿದ ಭೂಪ. ಷಣ್ಣುಖನಿಗೂ ಅಕ್ಕ ಪಕ್ಕ ಹೆಂಡಂದಿರಿದ್ದಾರೆ. ಶ್ರೀಕೃಷ್ಣ ಪರಮಾತ್ಮನ ಸುದ್ದಿಗೆ ಬಂದರಂತೂ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರ ಮನದೊಡೆಯ ಅನ್ನುತ್ತದೆ ಪುರಾಣ. ಅವರಲ್ಲಿ ರುಕ್ಮಿಣಿ ಸತ್ಯಭಾಮೆಯರ ಗೊಡವೆ ಗೊಂದಲಗಳೇ ಜಾಸ್ತಿ. ಭಾಮೆಯನ್ನು ಮನದನ್ನೆ ಅಂದಿದ್ದಾನೆ ಶ್ರೀಕೃಷ್ಣ. ದೇವೇಂದ್ರನಿಗೆ ರಂಭೆ ಊರ್ವಶಿ ಮೇನಕೆ ತಿಲೋತ್ತಮೆಯರ ಸಂಗ ಸಹವಾಸ ಬೇರೆ. ಹೀಗೆ ಮನದನ್ನೆಯರ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ.

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತೆ ಇವರೆಲ್ಲರ ಕೆಟ್ಟ ಚಾಳಿ ಮಂದಿನ ಪೀಳಿಗೆಗೂ ಟ್ರಾನ್ಸ್‍ಫರ್ ಆಗಿದೆ. ಪುರುಷ ಸಿಂಹಗಳು ಪತ್ನಿ ಉಪಪತ್ನಿಯರ ಪಟ್ಟವನ್ನು ಸಾಂಗೋಪಾಂಗವಾಗಿ ನಡೆಸಿಕೊಂಡು ಬಂದಿದ್ದಾರೆ. ರಾಜಮಹಾರಾಜರು, ಪಾಳೇಗಾರರು ಪಟ್ಟದರಸಿಯರ ಜೊತೆಗೆ ಅಂತಃಪುರದ ಸ್ತ್ರೀಯರು, ಬಂಗಾರದ ಸ್ತ್ರೀಯರು (ವೇಶ್ಯೆಯರು ಅಥವಾ ದೇವದಾಸಿಯರು ಅನ್ನೋಣ) ಎಂದು ಇಟ್ಟುಕೊಳ್ಳುತ್ತಿದ್ದ ಕಾಮಲೀಲೆಯ ಕಾಲ ಒಂದಿತ್ತು. ನಂತರ ಬಂದದ್ದು ಜಮೀನ್ದಾರಿಕೆ, ಗೌಡಿಕೆ, ಗತ್ತುಗಳ ಕಾಲ. ಮೀಸೆ ಹೊತ್ತ ಗಂಡು ಎಷ್ಟು ಮಂದಿ ಹೆಣ್ಣುಗಳನ್ನು ಇಟ್ಟುಕೊಂಡವನೆ ಅನ್ನೋದೇ ಪೌರುಷತನದ ಸಂಕೇತವಾಗಿ ಪ್ರಚಾರ ಪಡೆಯಿತು.

ಧರ್ಮಪತ್ನಿ, ಮನೆ, ಗಂಡ, ಮಕ್ಕಳ ಹೊಣೆ ಹೊತ್ತು ಮನೆ ಒಡತಿಯಾದಳೇ ಹೊರತು ಮನದನ್ನೆಯಾಗುವಲ್ಲಿ ವಿಫಲಳಾದಳು. ಆದರೆ ಹೊಸ್ತಿಲು ದಾಟಿದ ಹೆಣ್ಮಣಿಗಳು ತಮ್ಮ ಥಳಕು ಬಳುಕಿನಿಂದಲೇ ಪುರುಷನ ಮನಗೆಲ್ಲುವ ಸಲುವಾಗಿ ತನ್ನ ಸೌಂದರ್ಯವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಳು. ಘರಾನಾಗಳು, ಅಡ್ಡೆಗಳು ಹುಟ್ಟಿಕೊಂಡವು, ಕಲೆಯ ಹೆಸರಿನಲ್ಲಿ ಕುಣಿವ ನಾಚ್ ವಾಲಿಗಳು ನಾಚ್ ನಂತರ ಸೆಕ್ಸ್ ಮ್ಯಾಚ್‍ಗೂ ಸಿದ್ದವಾದರು. ರೆಡ್ ಲೈಟ್ ಏರಿಯಾಗಳು ತಲೆ ಎತ್ತಿದವು. ಅತಿ ಮಡಿವಂತಿಕೆ, ನೇಮನಿಷ್ಟೆ, ಲಜ್ಜೆ, ಅರಸಿಕತೆ, ಗಂಡನ ಸೇವೆ, ಅತ್ತೆ ಮಾವಂದಿರ ಶುಶ್ರೂಷೆ, ಮಕ್ಕಳ ಆರೈಕೆ, ಮನೆ ಜವಾಬ್ದಾರಿ ಹೊತ್ತ ಪಾಪದ ಪತ್ನಿಯರು ಶೃಂಗಾರವನ್ನು ಮರೆತು ಮನು ಹೇಳಿದಂತೆ ಚರಣದಾಸಿಯರಾದರು.

ಹೀಗಾಗಿ ಸೋದರಿಯರೆ, ಕೆಲವು ಜಾತಿ ಗಂಡಸರು ದೇಹತೃಷೆ ಹಿಂಗಿಸಿಕೊಳ್ಳಲು ಹೊಸ್ತಿಲಾಚೆಗೆ ಇಳಿಯಬೇಕಾದದ್ದು ಅನಿವಾರ್ಯವಾಯಿತೇನೋ. ಪರ ಹೆಂಗಸಿನ ಸಂಗದಿಂದಾಗಿ ತಮ್ಮ ಅಡವು ಆಸ್ತಿ ಸಿರಿ ಸಂಪತ್ತುಗಳನ್ನಲ್ಲದೆ ಆರೋಗ್ಯವನ್ನೂ ಕಳೆದುಕೊಂಡು ಬೀದಿಗೂ ಬಿದ್ದರು ಬೀಳುತ್ತಲೂ ಇದ್ದಾರೆ. ಕೀಳು ನಡತೆಯ ಹೆಂಗಸರೆಲ್ಲರೂ ಕೆಲವರು ಧರ್ಮಪತ್ನಿಯರಷ್ಟೇ ನಿಷ್ಟೆ ಪ್ರೀತಿ ತೋರಿ ತನ್ನನ್ನರಸಿ ಬಂದವನ ಸೇವೆಗೆ ಹೆಚ್ಚು ಆದ್ಯತೆ ನೀಡಿದವರೂ ಉಂಟು. ಅಂಥವಳು ದೊರಕಿದಾಗ ‘ಹೆಂಡತಿ ಎಂದಿಗೂ ಮನ್ನದನ್ನೆಯಾಗಳು’ ಎಂದು ಗಂಡನ ಅಹಂಗೆ ಅನ್ನಿಸಿರಬೇಕು. ಏನೇ ಅಂದರೂ ಮಡದಿ ಮನದನ್ನೆಯಾಗಳು ಎಂಬ ಮಾತಿನಲ್ಲೇ ಅನೈತಿಕ ವಾಸನೆ ಇದೆಯಲ್ಲವೆ. ಇಷ್ಟಾದರೂ ಈ ಮಾತು ಚಾಲನೆಗೆ ಬರಲು ಕಾರಣವಿದೆ. ಸಮಾನ ಅಭಿರುಚಿ ಸಂಸ್ಕೃತಿ ಸಂಸಾರ ಸರಿಸಮನಾದ ವೃತ್ತಿ ಪ್ರವೃತ್ತಿಯನ್ನು ಹೊಂದಿರುವ ಗಂಡು ಹೆಣ್ಣುಗಳು ಒಂದೆಡೆ ದುಡಿಯುವಾಗ, ಪದೇ ಪದೇ ಭೇಟಿಯಾಗುವಂತಹ ಸಂದರ್ಭ ಸನ್ನಿವೇಶಗಳಲ್ಲಿ ದಿನಗಳೆದಂತೆ ಒಬ್ಬರಿಗೊಬ್ಬರು ತೀವ್ರ ಆಕರ್ಷಣೆಗೆ ಒಳಗಾಗಿ ಬಿಡುವ ಸಾಧ್ಯತೆಯೇ ಹೆಚ್ಚು.

ಕಲಾವಿದರಲ್ಲಿ ಇಂತಹ ಸಂಬಂಧಗಳ ಒಡನಾಟ ಬಹುಬೇಗನೆ ಕುದುರಿಬಿಡುತ್ತವೆ. ಸಿನೆಮಾದವರು, ನಾಟಕದ ಕಂಪನಿಯವರು ತಮ್ಮ ಸಂಸಾರವನ್ನು ಬಿಟ್ಟು ದೂರದ ಊರುಗಳಲ್ಲಿ ಕ್ಯಾಂಪ್ ಮಾಡುವ, ಅಂತೆಯೇ ಸಿನಿಮಾ ಷೂಟಿಂಗ್ ನಡೆಸುವುದರ ಅನಿವಾರ್ಯ ಕಾಯಕ ಕೂಡ ಒಡನಾಟ ಒಲವಿಗೆ ನಾಂದಿ ಹಾಡಿ ಬಿಡುತ್ತದೆ. ನಾಟಕ ಸಿನಿಮಾಗಳಲ್ಲಿ ಜೋಡಿಯಾದ ಹಲವರು ಬಾಳಲ್ಲೂ ಜೋಡಿಯಾಗಿ ಬಿಡುತ್ತಾರೆ. ಕಳ್ಳತನದಲ್ಲಿ ಆರಂಭವಾದ ಇಂತಹ ಸಂಬಂಧ ಬಹಿರಂಗವಾದಾಗಲೂ ‘ಕೇರ್’ ಮಾಡದಷ್ಟು ಶಕ್ತವಾಗಿ ಬೇರು ಬಿಟ್ಟುಕೊಳ್ಳುತ್ತದೆ. ಸುದ್ದಿ ತಿಳಿದ ಪತ್ನಿ ಮೊದಲು ಗಾಸಿಪ್ ಅಂದುಕೊಂಡು ನಿರ್ಲಕ್ಷಿಸುತ್ತಾಳೆ. ಪುರಾವೆ ಸಮೇತ ಸಿಕ್ಕಿಬಿದ್ದಾಗ ಕಣ್ಣೀರಾಕುತ್ತಾಳೆ. ಹಿಡಿ ಶಾಪ ಹಾಕುತ್ತಾ ನಿಟ್ಟುಸಿರಾಗುತ್ತಾಳೆ. ತನ್ನನ್ನು ಮಾತ್ರ ಈಗಲೂ ತಿದ್ದಿಕೊಳ್ಳದೆ ಗಂಡನನ್ನು ಹೆಚ್ಚು ದ್ವೇಷಿಸುತ್ತಾ ಮತ್ತಷ್ಟು ದೂರವಾಗುತ್ತಾಳೆ – ದಡ್ಡಿ.

ಇಂತಹ ಸಂಬಂಧಗಳು ಸಿನಿಮಾ ನಾಟಕದವರಿಗಷ್ಟೇ ಸೀಮಿತವಾಗಿ ಇಂದು ಉಳಿದಿಲ್ಲ. ಸೋದರಿಯರೆ. ಒಂದೇ ಅಭಿರುಚಿಯಿರುವ ಎರಡು ಜೀವಗಳು ಸನಿಹವಾದಾಗಲೆಲ್ಲಾ ಇಂತಹ ಆಕರ್ಷಣೆಗೆ ಒಳಗಾಗುವುದು ಸರ್ವೆ ಸಾಮಾನ್ಯ.

ದುಡಿದು ದಣಿದು ಮನೆಗೆ ಬರುವ ಗಂಡಿಗೆ ರುಚಿಯಾದ ಅಡಿಗೆ ಮಾಡಿ ಬಡಿಸೋದು ದೈಹಿಕವಾಗಿ ಸುಖ ನೀಡುವುದಷ್ಟೆ ಕರ್ತವ್ಯವೆಂದು ಭಾವಿಸುವ ಹೆಂಡತಿ; ಮಕ್ಕಳಾಗಿ ಬಿಟ್ಟರಂತೂ ಮೊದಲು ಮಕ್ಕಳ ಧ್ಯಾನ ನಂತರ ಗಂಡನ ಕಡೆಗೆ ಜ್ಞಾನ. ಅವನ ನೋವುಗಳಲ್ಲಿ ಭಾಗಿಯಾದ ಅವನ ವಿಚಾರಗಳಿಗೆ ಸ್ಪಂದಿಸುವ ಕನಿಷ್ಟ ಮಾತುಗಳನ್ನೂ ಆಲಿಸದಷ್ಟು ಅನಾಸಕ್ತಳಾದ ಹೆಂಡತಿ ಮನೆಗೆಲಸದಲ್ಲೇ ಮುಳುಗಿ ಹೋಗಿ ಗಂಡನ ಪಾಲಿಗೆ ಇದ್ದೂ ಇಲ್ಲದಂತಾಗಿ ಬಿಡುತ್ತಾಳೆ. ಗಂಡಿನ ದಾಹವನ್ನು ನೀಗಿಸಲು ತುದಿಗಾಲಲ್ಲಿ ನಿಂತಿರುವ ಅವಿವಾಹಿತ / ವಿವಾಹಿತ ಹೆಣ್ಣುಗಳು ಆಧುನಿಕ ಸಮಾಜದಲ್ಲುಂಟು.

ವಿಶ್ವಾಮಿತ್ರನಂತಹ ಮಹಾಮುನಿಯೇ ಹೆಣ್ಣಿಗೆ ಸೋತು ತಪಃಶಕ್ತಿಯನ್ನು ಕಳೆದುಕೊಂಡ. ಹರಿಹರ ಬ್ರಹಾದಿಗಳೇ ಹೆಣ್ಣಿನ ವಾಮೋಹದಿಂದ ಬಚಾವಾಗಲಿಲ್ಲವೆಂದ ಮೇಲೆ ತತ್ರಾಪಿ ಗಂಡುಗಳು ಯಾವ ಲೆಕ್ಕನಮ್ಮಾ? ‘ಇಟ್ಕೊಂಡೋಳು ಇರೋವರ್ಗೆ ಅಂದ ಹಳಸಲು ಮಾತಿಗೆ ನೀವು ನೇತು ಬೀಳದೆ ಒಂದಿಷ್ಟು ಆಧುನಿಕರಾಗಿ – ಅಲೋಚಿಸುವುದರಲ್ಲೂ ಅಷ್ಟೆ. ಏಕೆಂದರೆ ‘ಏಡ್ಸ್’ ಮಾರಿ ಬೇರೆ ಬೆನ್ನು ಹತ್ತಿದೆ – ಹುಷಾರು. ನಿಮ್ಮ ಗಂಡಂದಿರನ್ನು ನಿಮ್ಮ ಸೆರಗಿನೊಳಗೆ ಮುಚ್ಚಿಟ್ಟು ಕಾಯುವಂತಹ ಕಾಲವಿದು. ಇಸ್ಪೀಟ್ ಆಡಿಯೋ, ಕುಡಿದೋ ಲೇಟಾಗಿ ಮನೆಗೆ ಬರುವ ಗಂಡನೊಡನೆ ಕುಸ್ತಿಗಿಳಿಯದೆ ಕಛೇರಿ ನಂತರ ನೇರ ಮನೆಗೆ ಬರುವಂತಹ ಆಸಕ್ತಿಯನ್ನು ಅವನಲ್ಲುಂಟು ಮಾಡುವ ಕಲೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ಸೋದರಿಯರೆ, ನೀವು ಮನಸ್ಸು ಮಾಡಿದರೆ ಯಾವುದು ತಾನೆ ಅಸಾಧ್ಯ? ಸದಾ ಸೋಫಾದಲ್ಲಿ ಮಲಗಿ ಟೀವಿ ನೋಡುವುದನ್ನು ಕಡಿಮೆ ಮಾಡಿ ಗಂಡನತ್ತಲೂ ಕಣ್ಣು ಹೊರಳಿಸಿರಿ. ಅಯ್ಯೋ! ಮದುವೆಯಾಗಿ ಹತ್ತು ವರ್ಷವಾಗೋಯು ಬಿಡ್ರಿ ಅಂತ ಮೂಗು ಮುರಿಯದಿರಿ. ಹತ್ತು ವರ್ಷದ ನಂತರವೆ ದಾಂಪತ್ಯಕ್ಕೆ ಹೆಚ್ಚು ಸೆಕ್ಯುರಿಟಿಯ ಅಗತ್ಯವಿರೋದು. ಹಳೆದಾಯಿತು ಅಂತ ನೀವಂದುಕೊಳ್ಳುವಾಗಲೆ ಹೊಸದರತ್ತ ಅನ್ವೇಷಣೆಗೆ ತೊಡಗುವುದು ಗಂಡಿನ ಜಾಯಮಾನ ಸಿಸ್ಟರ್ – ಬಿ ಕೇರ್‍ಫುಲ್, ಮಕ್ಕಳನಷ್ಟೇ ಅಲ್ಲ ಗಂಡನನ್ನು ಅಂಕೆಯಲ್ಲಿಟ್ಟುಕೊಳ್ಳುವ ಜಾಣೆಯರಾಗಿ.
*****