ಜೀವನಾಂಶ ಮತ್ತು ಮುಸ್ಲಿಂ ಮಹಿಳೆ

ಜೀವನಾಂಶ ಮತ್ತು ಮುಸ್ಲಿಂ ಮಹಿಳೆ

ಚಿತ್ರ: ಗರ್ಡ್ ಆಲ್ಟ್‌ಮನ್
ಚಿತ್ರ: ಗರ್ಡ್ ಆಲ್ಟ್‌ಮನ್

ಒಂದು ರಾಷ್ಟ್ರ ಸ್ವತಂತ್ರವಾದಾಗ ಅದರ ಕಾನೂನಿನ ಬೇರುಗಳು ಸಮಾನತೆಯ ಆಧಾರದ ಮೇಲೆ ಬಲವಾಗಿರದೆ ಹೋದರೆ ಎಂಥ ಗೊಂದಲಗಳು ಹುಟ್ಟಿಕೊಳ್ಳಬಹುದು ಎಂಬುದಕ್ಕೆ ಭಾರತ ಪ್ರತ್ಯಕ್ಷ ಸಾಕ್ಷಿಯಾಗಿದೆ. ಭಾರತ ಒಂದುಕಡೆ ಸಂವಿಧಾನದ ಮೂಲಕ ಸಮಾನತೆಯನ್ನು ಹೇಳುತ್ತಾ ಮತ್ತೊಂದು ಕಡೆ ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿ ಇಂಥ ಗೊಂದಲಗಳ ಹುಟ್ಟಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲೇ ಸಂವಿಧಾನದ ವಿಧಿ-೪೪ ಎಲ್ಲ ಪ್ರಜೆಗಳಿಗೂ ಸಮಾನ ನಾಗರಿಕ ಸಂಹಿತೆ- ಎನ್ನುವುದು ಸ್ವಾತಂತ್ರ್ಯ ಬಂದು ೫೪ ವರ್ಷಗಳು ಸಂದರೂ ನಿರ್ಜೀವವಾಗಿ ಬಿದ್ದಿದೆ. ಈ ಕುರಿತು ಸಂದರ್ಭ ಬಂದಾಗಲೆಲ್ಲ ಸರ್ವೋಚ್ಛ ನ್ಯಾಯಾಲಯ ಅದನ್ನು ಜಾರಿಗೊಳಿಸುವ ಅಗತ್ಯವನ್ನು ಹೇಳುತ್ತಲೇ ಬಂದಿದೆ. ಸಂಸತ್ತಾಗಲಿ, ಸಮಾಜವಾಗಲಿ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ದಂಡ ಪ್ರಕ್ರಿಯಾ ಸಂಹಿತೆಯನ್ನು ರಚಿಸಿದ ಕರ್ತೃ ಪ್ರಕರಣ ೧೨೫ ಅನ್ನು ಕುರಿತು ಜೀವನಾಂಶವನ್ನು ಶೀಘ್ರವಾಗಿ ನೀಡಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡು ಮಾನವೀಯ ದೃಷ್ಟಿಯಿಂದ ಸೇರಿಸಿರುವುದಾಗಿ ಹೇಳಿದ್ದಾರೆ. ಈ ಪ್ರಕರಣದಡಿ ಕುಟುಂಬದ ಅಸಹಾಯಕರು ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.

ಮುಸ್ಲಿಂ ಜನಾಂಗದ ವೈಯಕ್ತಿಕ ಕಾನೂನಿನ ಹಿನ್ನೆಲೆಯಲ್ಲಿ ಈ ಪ್ರಕರಣ ವಿಚಿತ್ರ ತಿರುವುಗಳನ್ನು ಪಡೆಯುವುದು ಆ ಧರ್ಮದ ಹಿನ್ನೆಲೆಯಲ್ಲಿ ಸಹಜವಾಗಿದೆ. ಆದರೆ ಅದು ಸಂವಿಧಾನದ ಹಾಗೂ ಸಾಮಾಜಿಕ ದೃಷ್ಟಿಯಿಂದ ಸಮ್ಮತವಾದುದೆ ಎಂಬುದು ಚರ್ಚೆಗೆ ಒಳಗಾಗಿದೆ, ಇನ್ನೂ ವ್ಯಾಪಕವಾಗಿ ಒಳಗಾಗಬೇಕಾಗಿದೆ. ಏಕೆಂದರೆ ತಮ್ಮ ವೈಯಕ್ತಿಕ ಥಾರ್ಮಿಕ ನಂಬಿಕೆಗಳಿಗಿಂತ ರಾಷ್ಟ್ರ ಹಾಗೂ ಸಮಾನತಾ ಸಮಾಜ ನಿರ್ಮಾಣ ಮುಖ್ಯವಾದುದು. ಆಗ ಮಾತ್ರ ಪ್ರೀತಿ, ಸೌಹಾರ್ದತೆ, ಶಾಂತಿ ನೆಲೆಸಲು ಸಾಧ್ಯವಾಗುತ್ತದೆ.

ಈಗ ಬಹುಸಂಖ್ಯಾತ ಹಿಂದೂ ಹಾಗೂ ಮತ್ತಿತರ ಧರ್ಮೀಯರು ಏಕಪತ್ನಿ ಕಾನೂನಿನಡಿ ಬಂದರೆ ಬಹುಪತ್ನಿತ್ವವನ್ನು ಆಚರಿಸುವ ವೈಯಕ್ತಿಕ ಕಾನೂನನ್ನು ಅನುಸರಿಸಲು ಮುಸ್ಲಿಂ ಜನಾಂಗಕ್ಕೆ ಅವಕಾಶ ನೀಡಲಾಗಿದೆ. ಹಾಗೇ ಎಲ್ಲರೂ ನ್ಯಾಯಾಲಯದ ಮೂಲಕವೇ ವಿವಾಹ ವಿಚ್ಛೇದನ ಪಡೆಯುವ ಕಾನೂನಿಗೆ ಪ್ರತಿಯಾಗಿ ಮುಸ್ಲಿಂ ಜನಾಂಗಕ್ಕೆ ನ್ಯಾಯಾಲಯದ ಮೆಟ್ಟಿಲನ್ನು ಹತ್ತದೆಯೇ ಗಂಡ ಹೆಂಡತಿಗೆ “ತಲಾಕ್” ಕೊಡುವ ಅವಕಾಶವನ್ನು ನೀಡಲಾಗಿದೆ. ಇದು ಸಂವಿಧಾನದ ವಿಧಿ ೧೪- ಕಾನೂನಿನ ಮುಂದೆ ಸಮಾನತೆ, ೧೫-ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಹುಟ್ಟಿದ ಸ್ಥಳ ಇವುಗಳ ಆಧಾರದ ಮೇಲೆ ಭೇದಭಾವದ ನಿಷೇಧ, ವಿಧಿ-೨೧, ಜೀವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ಇವುಗಳಿಗೆ ವಿರುದ್ಧವಾದುದಾಗಿದೆ. ಈ ಒಂದು ಕಾರಣದಿಂದಲೇ ಭಾರತದಲ್ಲಿ ಹಿಂದೂ ಮತ್ತು ಮುಸಲ್ಮಾನರ ನಡುವೆ ಮಧುರ ಬಾಂಧವ್ಯಕ್ಕೆ ಬದಲು ಆಂತರಿಕವಾಗಿ ದೊಡ್ಡ ಬಿರುಕು ಬಿಟ್ಟಿದ್ದು ಈರ್ವರ ನಡುವೆ ಅಸಮಾಧಾನದ ಹೊಗೆ ಆಡುತ್ತಲೇ ಇದೆ. ಇದು ಹೀಗೆ ಮುಂದುವರೆಯಲು ಬಿಟ್ಟರೆ ಬೆಂಕಿ ಭುಗಿಲೇಳುವುದು, ಆ ತಾಪಕ್ಕೆ ದೇಶ ಒಳಗಾಗುವುದು ಅನಿವಾರ್ಯವಾಗುತ್ತದೆ.

ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಒಂದು ತೀರ್ಪು ಹೊರ ಬಂದಿದೆ. ಆ ತೀರ್ಪಿಗೆ ಕಾರಣವಾದ ಪ್ರಕರಣದ ಅಂಶಗಳು ಹೀಗಿವೆ: ಅರ್ಜಿದಾರಳಾದ ಜುಲೇಖಾಬಿ ತನ್ನ ೨೦ನೇ ವರ್ಷದಲ್ಲಿ ೧೯೮೯ರಲ್ಲಿ ಫಜಲ್ ಎಂಬಾತನನ್ನು ವಿವಾಹವಾದಳು. ೧೯೯೧ರಲ್ಲಿ ಆಕೆಯ ಪತಿ ಫಜಲ್ ಮತ್ತೊಬ್ಬ ಮಹಿಳೆಯನ್ನು ಮದುವೆಯಾದ ಆಗ ಜುಲೇಖಾಬಿ ಅವನೊಂದಿಗೆ ಇರಲು ನಿರಾಕರಿಸಿ ಮಧ್ಯ ಪ್ರದೇಶವ ನ್ಯಾಯಾಲಯದ ಮೊರೆಹೋದಳು. ತಲಾಖ್ ನೀಡಿದ ನಂತರ ಆಕೆಗೆ ಗಂಡ ತಿಂಗಳಿಗೆ ರೂ.೪೦೦/- ಗಳನ್ನು ಜೀವನಾಂಶವಾಗಿ ನೀಡುತ್ತಿದ್ದ. ಆತ ಅದನ್ನು ೧೯೯೩ರಲ್ಲಿ ನಿಲ್ಲಿಸಿದ. ತಲಾಖ್ ನಾಮ ಜಾರಿಯಾಗಿರುವುದರಿಂದ ತಾನು ಇನ್ನು ಜೀವನಾಂಶ ನೀಡಬೇಕಾಗಿಲ್ಲ ಎಂಬ ನಿಲುವು ತಾಳಿದ. ಅವನ ವಾದವನ್ನು ಒಪ್ಪಿದ ನ್ಯಾಯಾಲಯ ಜುಲೇಖಾಬಿಯ ಅರ್ಜಿಯನ್ನು ವಜಾ ಮಾಡಿತು.

ಆದರ ಮೇಲೆ ಜುಲೇಖಾಬಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಹಾಕಿದಳು. ನ್ಯಾಯಮೂರ್ತಿಗಳಾದ ಕೆ. ಟಿ. ಥಾಮಸ್, ಎಸ್. ಎನ್. ವಾ ವರಿಯಾ ಅವರಿದ್ದ ಪೀಠ ಕೇಂದ್ರ ಸರ್ಕಾರ ಮತ್ತು ಅಪೀಲುದಾರಳ ಪತಿ ಫಜಲ್‌ಗೆ ನೋಟೀಸು ಜಾರಿ ಮಾಡಿತು. ತನ್ನ ಗಂಡ ಮರು ಮದುವೆಯಾಗಿರುವುದು ಸಂವಿಧಾನದ ೧೪, ೧೫ ಮತ್ತು ೨೧ನೇ ವಿಧಿಗಳಿಗೆ ವಿರೋಧವಾಗಿರುವುದರಿಂದ ಮೇಲ್ಮನವಿಯನ್ನು ಪುರಸ್ಕರಿಸಬೇಕೆಂದು ಅರಿಕೆ ಮಾಡಿದಳು. ಆಕೆಯ ಮೇಲ್ಮನವಿಯನ್ನು ತಿರಸ್ಕರಿಸಿದ ಸರ್ವೋಚ್ಛ ನ್ಯಾಯಾಲಯ ಆಕೆಗೆ ಸಂಸತ್ತನ್ನು ಸಂಪರ್ಕಿಸಲು ಸೂಚನೆ ನೀಡಿದೆ.

ಶಾಹಬಾನೊ ಪ್ರಕರಣವೂ ಕೂಡ ಇಂಥದ್ದೇ. ಆಕೆ ದಂಡ ಪ್ರಕ್ರಿಯಾ ಸಂಹಿತ ಪ್ರಕರಣ ೧೨೫ ರ ಅಡಿಯಲ್ಲಿ ಜೀವನಾಂಶಕ್ಕೆ ಅರ್ಜಿ ಹಾಕಿದ್ದಳು. ಇಂದೋರ್ ನ್ಯಾಯಾಲಯ ತಿಂಗಳಿಗೆ ರೂ. ೨೫/- ಗಳ ಜೀವವಾಂಶ ಕೊಡುವಂತೆ ಆದೇಶಿಸಿತ್ತು. ಉಚ್ಛ ನ್ಯಾಯಾಲಯ ಅದನ್ನು ಆಕೆಯ ಗಂಡ ವಕೀಲನಾದ ಮೊಹಮ್ಮದ್ ಅಹಮದ್ ಖಾನ್ ತಾನು ಘೋಷಿಸಿಕೊಂಡ ಆದಾಯದ ಆಧಾರದ ಮೇಲೆ ರೂ. ೨೭೯.೨೦ಗಳಿಗೆ ಏರಿಸಿತ್ತು. ಈ ಪ್ರಕರಣ ದೇಶದಾದ್ಯಂತ ವಿವಾದವನ್ನು ಸೃಷ್ಟಿಸಿ ಸಂಸತ್‌ಆನ್ನು ಪ್ರವೇಶಿಸಿ “ಮುಸ್ಲಿಂ ಮಹಿಳೆಯರ (ವಿಚ್ಚೇದನಾ ರಕ್ಷಣಾ ಹಕ್ಕು) ಕಾಯ್ದೆ ೧೯೮೬”ನ್ನು ಜಾರಿಗೊಳಿಸಿತು. ಅದರ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಅನೇಕ ಅರ್ಜಿಗಳು ದಾಖಲಾದುವು. ಅವುಗಳ ತೀರ್ಪನ್ನು ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ನೀಡಿದೆ. ಅದನ್ನು ಪತ್ರಿಕೆಗಳು ವರದಿ ಮಾಡಿವೆ. ಸದರಿ ಪ್ರಕರಣ ೪. (೧)(ಡಬ್ಲ್ಯೂ)ನಲ್ಲಿರುವ ಇದ್ದತ್ ಕಾಲಾವಧಿಗೆ (ಅಂದರೆ ೩ ತಿಂಗಳು) ಜೀವನಾಂಶ ಕೊಡಬೇಕು ಎಂದಿದ್ದುದನ್ನು ಅದು ಆ ಅವಧಿಗೆ ಮಾತ್ರ ಸೀಮಿತವಾಗುವಂತಿಲ್ಲ, ಇದ್ದತ್ ಕಾಲಾವಧಿಯ ನಂತರವೂ ಕೊಡಬೇಕು ಎಂದು ತೀರ್ಪು ನೀಡಿದೆ.

ಇದ್ದತ್ ಕಾಯಿದೆಯ ನಂತರ ಮದುವೆಯಾಗದೆ ಇರುವ ಹಾಗೂ ತನ್ನ ಜೀವನಾಂಶವನ್ನು ಸಂಪಾದಿಸಿಕೊಳ್ಳಲಾಗದ ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಮೇಲ್ಕಂಡ “ಮುಸ್ಲಿಂ ಮಹಿಳೆಯರ (ವಿಚ್ಚೇದನಾ ರಕ್ಷಣಾ ಹಕ್ಕು) ಕಾಯ್ದೆ ೧೯೮೬”ರ ಪ್ರಕರಣ ೪ರಂತೆ ಆಕೆ ಸತ್ತ ನಂತರ ಆಕೆಯ ಆಸ್ತಿಗೆ ವಾರಸುದಾರರಾಗುವ ಮಕ್ಕಳು, ತಂದೆ ತಾಯಿಯೂ ಸೇರಿದಂತೆ ಸಂಬಂಧಿಕರ ಮೇಲೆ ಆಕೆಯ ಆಸ್ತಿಯ ಬೆಲೆಗೆ ಅನುಗುಣವಾಗಿ ಜೀವನಾಂಶವನ್ನು ಪಡೆಯಬಹುದು. ಹಾಗೆ ಆಕೆಯ ಸಂಬಂಧಿಕರು ಕೂಡ ಸ್ಥಿತಿಯಲ್ಲಿಲ್ಲದಿದ್ದರೆ ಮ್ಯಾಜಿಸ್ಟ್ರೇಟರು ಆ ಕಾಯ್ದೆಯಲ್ಲಿ ಅವಕಾಶವಿರುವಂತೆ ರಾಜ್ಯದ “ವಕ್ಫ್‌ ಮಂಡಲಿ”ಯನ್ನು ಪಾವತಿಸುವಂತೆ ನಿರ್ದೇಶಿಸಬಹುದು.

ಶಾಹಬಾನೊ ಕೇಸಿನಲ್ಲಿ ಸರ್ವೋಚ್ಚ ನ್ಯಾಯಾಲಯ ಗಂಡನ ಹೊಣೆಗಾರಿಕೆಯನ್ನು ಇದ್ದತ್ ವಾಯಿದೆಗೆ ಸೀಮಿತಗೊಳಿಸಿತ್ತು. ಆದರೆ ಪ್ರಕರಣ ೧೨೫ ರ ಸಂದರ್ಭದ ಹಿನ್ನೆಲೆಯಲ್ಲಿ ಅರ್ಥೈಸಿರಲಿಲ್ಲ. ಆದಕಾರಣ ಅಸಹಾಯಕ ಮುಸ್ಲಿಂ ಮಹಿಳೆಗೆ ಇದ್ದತ್ ಅವಧಿಯ ನಂತರ ಗಂಡನಾದವನು ಕೊಡಬೇಕಾದ ಹೊಣೆಗಾರಿಕೆ ಇಲ್ಲ ಎಂದು ಹೇಳುವುದು ಸರಿಯಲ್ಲ ಎನ್ನುವುದು ಸರ್ವೋಚ್ಛ ನ್ಯಾಯಾಲಯದ ದೃಷ್ಟಿಯಾಗಿದ್ದು ಈಗ ಇದ್ದತ್ ಅವಧಿಯ ನಂತರವೂ ಪಾವತಿಸಬೇಕೆಂದು ತೀರ್ಪು ನೀಡಿದೆ.

ದಂಡ ಪ್ರಕ್ರಿಯಾ ಸಂಹಿತೆ ಪ್ರಕರಣ ೧೨೫ ರಲ್ಲಿ ಪರಿಹಾರದ ಗರಿಷ್ಠ ಮಿತಿಯನ್ನು ಕೇವಲ ರೂ.೫೦೦/-ಗಳಿಗೆ ಸೀಮಿತಗೊಳಿಸಲಾಗಿದೆ. ಉತ್ತರ ಪ್ರದೇಶದ ಸರ್ಕಾರ ಅದನ್ನು ರೂ. ೫೦೦೦/- ಗಳಿಗೆ ಮಿತಿಗೊಳಿಸಿತ್ತು, ಈಗ ಕೇಂದ್ರ ಸರ್ಕಾರವೂ ಗರಿಷ್ಠ ಮಿತಿಯನ್ನು ತೆಗೆದುಹಾಕಿ ದಂಡಾಧಿಕಾರಿಯವರ ವಿವೇಚನೆಗೆ ಬಿಟ್ಟಿರುವ, ಅಲ್ಲದೆ ಅರ್ಜಿಯನ್ನು ನೋಟೀಸು ಜಾರಿಯಾದ ಅರವತ್ತು ದಿವಸಗಳಲ್ಲಿ ತಾತ್ಕಾಲಿಕ ಪರಿಹಾರ ಕೊಡಬೇಕೆಂಬ ತಿದ್ದುಪಡಿ ತಂದಿರುವುದನ್ನು ಪತ್ರಿಕೆಗಳು ವರದಿ ಮಾಡಿವೆ. ಇದೊಂದು ಸ್ವಾಗತಾರ್ಹ ಅಂಶವಾಗಿದೆ.

ವಿವಾಹ ವಿಚ್ಚೇದನಾ ಸ್ವಾತಂತ್ರ್ಯವನ್ನು ಹಾಗೂ ನಾಲ್ವರು ಪತ್ನಿಯರನ್ನು ಹೊಂದುವ ಅವಕಾಶವನ್ನು ಮುಸ್ಲಿಂ ಜನಾಂಗಕ್ಕೆ ಮಾತ್ರ ಅವರ ಧಾರ್ಮಿಕ ಹಿನ್ನೆಲೆ ಇದೆ ಎಂಬ ಕಾರಣಕ್ಕೆ ಅವಕಾಶ ಕೊಟ್ಟು ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರಗೆ ಉಳಿಸಿರುವುದು ಒಂದು ರಾಷ್ಟ್ರದ ಬೆಳವಣಿಗೆ ಹಾಗೂ ಸಮಾನತಾ ದೃಷ್ಟಿಯಿಂದ ಎಷ್ಟು ಸರಿ? ಇದರಿಂದ ಮುಸ್ಲಿಂ ಮಹಿಳೆಯರ ನ್ಯಾಯಯುತವಾದ ಹಾಗೂ ಸಂವಿಧಾನಾತ್ಮಕ ಹಕ್ಕಿಗೆ ಮತ್ತು ಗೌರವಾನ್ವಿತ ಬದುಕಿಗೆ ಧಕ್ಕೆಯುಂಟಾಗುತ್ತಿಲ್ಲವೆ? ಮುಸ್ಲಿಂ ಸಮುದಾಯದ ಪುರುಷ ಪ್ರಧಾನ ವ್ಯವಸ್ಥೆ ಮುಸ್ಲಿಂ ಮಹಿಳೆಯರನ್ನು ಕೇವಲ ಆಸ್ತಿಯಂತೆ, ಒಂದು ವಸ್ತುವಿನಂತೆ, ನಡೆಸಿಕೊಳ್ಳಲು ಅವಕಾಶ ನೀಡುವುದು ಒಂದು ರಾಷ್ಟ್ರದ ಒಟ್ಟು ಕಾನೂನು ದೃಷ್ಟಿಯಿಂದ ನ್ಯಾಯಸಮ್ಮತವಾದುದೆ? “ಯಾವ ಕಾರಣಕ್ಕೂ ಒಂದಕ್ಷರವನ್ನೂ ಬದಲಿಸಲು ಅವಕಾಶವಿರದ” ಮುಸಲ್ಮಾನರ ಧರ್ಮಗ್ರಂಥ “ಕುರಾನಿ”ನಲ್ಲಿ: “ನಿಮ್ಮ ಸ್ತ್ರೀಯರು ನಿಮಗೆ ಹೊಲವಾಗಿರುತ್ತಾರೆ, ಅಂತಲೇ ನಿಮ್ಮ ಹೊಲದಲ್ಲಿ ನೀವಿಚ್ಛಿಸುವಂತೆ ಪ್ರವೇಶಿಸಿರಿ. ನಿಮ್ಮ ಭವಿಷ್ಯಕ್ಕೆ ಸಂಗ್ರಹಿಸಿಕೊಳ್ಳಿ” (ಅಲ್ ಬಕ: ೨-೨೩೩): “ಸ್ತ್ರೀಯರು, ಮಕ್ಕಳು, ಬೆಳ್ಳಿ ಬಂಗಾರಗಳ ಸಂಗ್ರಹ ರಾಶಿ, ಉತ್ತಮ ಜಾತಿಯ ಕುದುರೆಗಳು, ಜಾನುವಾರುಗಳು, ಕೃಷಿ ಭೂಮಿ ಈ (ಎಲ್ಲಾ) ಸುಖೋಪಭೋಗ ಸಾಧನಗಳೊಂದಿಗಿರುವ ಪ್ರೇಮ ಜನರಿಗೆ ನಯನ ಮನೋಹರಗೊಳಿಸಲಾಗಿದೆ” (ಆಲ್ ಇಮ್ರಾನ್: ೩-೧೪) ಎಂದು ಹೇಳಿ ಸ್ತ್ರೀಯರನ್ನು ಆಸ್ತಿ ಮತ್ತು ವಸ್ತುಗಳೊಂದಿಗೆ ಸಮೀಕರಿಸಲಾಗಿದೆ.

ಅಲ್ಲದೆ “ತಬ್ಬಲಿಗಳ ಸಂಬಂಧ ನ್ಯಾಯಪಾಲಿಸಲಾರಿರೆಂದು ನೀವು ಭಯಪಟ್ಟರೆ, ನೀವಿಷ್ಟಪಡುವ ಸ್ತ್ರೀಯರನ್ನು ಈರ್ವರನ್ನೋ, ಮೂವರನ್ನೋ, ನಾಲ್ವರನ್ನೋ ವಿವಾಹ ಮಾಡಿಕೊಳ್ಳಿರಿ” (ಆನ್- ನಿಸಾ: ೪-೩) ಎನ್ನಲಾಗಿದೆ.

ಧರ್ಮಗ್ರಂಥದ ಈ ಅಂಶ ಅಂದಿನ ಕಾಲಕ್ಕೆ ಎಂದರೆ ಕುರಾನ್ ಅವತರಣಗೊಂಡ ಕಾಲಕ್ಕೆ ಅವಶ್ಯ ಇದ್ದಿರಬಹುದು. ಆದರೆ ಅದನ್ನು ಹಾಗೆಯೇ ಅನುಸರಿಸುವುದು ಇಂದಿನ ಕಾಲಕ್ಕೆ ಅವಶ್ಯಕತೆ ಇದೆಯೆ? ಟರ್ಕಿ ದೇಶದಲ್ಲಿ ಸುಧಾರಣೆ ತರಲು ಸಾಧ್ಯವಾಗಿದ್ದರೆ ಭಾರತದ ಮುಸ್ಲಿಮರು ಸುಧಾರಣೆ ಮಾಡಿಕೊಳ್ಳಲು ಇರುವ ಅಡ್ಡಿಯಾದರೂ ಯಾವುದು? ಭಾರತದ ಮುಸ್ಲಿಮರು ಏಕೆ ಮರು ಚಿಂತಿಸಬಾರದು?

ಶಾಹಬಾನೋ ಪ್ರಕರಣದಲ್ಲಿ “ಮುಸ್ಲಿಂ ಮಹಿಳೆಯರ (ವಿಚ್ಛೇದನಾ ರಕ್ಷಣಾ ಹಕ್ಕು) ಕಾಯ್ದೆ ೧೯೮೬” ಅನ್ನು ಸಂಸತ್ತು ಜಾರಿಗೊಳಿಸಿದ್ದರೂ ಅದರಿಂದ ಹೆಚ್ಚು ಪ್ರಯೋಜನವಾದಂತೆ ಕಂಡು ಬರುವುದಿಲ್ಲ. ಇನ್ನು ಜುಲೇಖಾಬಿ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ಜುಲೇಖಾಬಿಗೆ ಸಂಸತ್ತನ್ನು ಸಂಪರ್ಕಿಸುವಂತೆ ಸೂಚಿಸಿರುವುದರಿಂದ ಈ ವಿಷಯ ಶಾಸಕಾಂಗದ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂಬುದನ್ನು ಸೂಚಿಸುತ್ತದೆ.

ಸಂವಿಧಾನದ ವಿಧಿ ೪೪- ಏಕ ನಾಗರಿಕ ಸಂಹಿತೆ ಕೂಡ ಆಗೀಗ ಅಷ್ಟಿಷ್ಟು ಚರ್ಚಿಗೆ ಒಳಗಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಗಂಟೆ ಕಟ್ಟುವವರಿಗಾಗಿ ಕಾಯುತ್ತಲೇ ಕುಳಿತಿದೆ. ಈಗ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬುದೇ ದೇಶದ ಮುಂದಿರುವ ನೈಜ ಪ್ರಶ್ನೆ.
-೨೦೦೨
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಡು ಹೆಣ್ಣು
Next post ರಜ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys