ತೊಳೆದ ಮುತ್ತು

ತೊಳೆದ ಮುತ್ತು

ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ ತೆಗೆದುಕೊಂಡಿದ್ದರಿಂದ ನಮ್ಮಲ್ಲಿ ಐವತ್ತು-ಅರವತ್ತು ಸಾವಿರ ರೂಪಾಯದ ಗಂಟಿರಬಹುದೆಂದು ಜನರ ತರ್ಕ, ಜನರ ತರ್ಕವಾದರೂ ತಪ್ಪಾದದ್ದಲ್ಲ.
ನಮ್ಮ ತಂದೆತಾಯಿಗಳಿಗೆ ನಾವು ಮೂರು ಮಂದಿ ಮಕ್ಕಳು, ಹಿರಿಯಳಾದ ಸತ್ಯಭಾಮೆಯನ್ನು (ನಾವು ಭಾಮಕ್ಕನೆನ್ನುತ್ತೇವೆ) ಶಹಾಪುರದಲ್ಲಿ ಲಕ್ಷಾಧೀಶರಾದ ತಮ್ಮಣ್ಣನಾಯಕರ ಮಕ್ಕಳಾದ ಶೇಷಗಿರಿನಾಯಕರಿಗೆ ಕೊಟ್ಟಿದೆ. ನಡುವಿನವನು ನಾನು. ದೊಡ್ಡವರ ಮಗನಾದ ನನ್ನ ಮದುವೆಯು ಬೇಗನೆ ಆಯಿತು. “ವೆಂಕಟರಾಯರ ಬುದ್ದಿ ಬಹಳ ಚುರುಕು; ಈ ಸಾರೆ ಅವರು ಮ್ಯಾಟ್ರಿಕ್ಯೂಲೇಶನ್ನದಲ್ಲಿ ಹೇಗೆ ‘ನಾಪಾಸ’ ಆದರೋ ತಿಳಿಯಲಿಲ್ಲ.” ಎಂದು ನನ್ನ ತಂದೆಯವರ ಸ್ತುತಿಪಾಠಕರು ಹಳಹಳಿಸಿದರು. ಈ ಮೊದಲೆಯೇ ನಾನು ಎರಡು ಸಾರೆ ‘ನಾಪಾಸ’ ಆಗಿದ್ದೆನು. “ಏನು ದೊಡ್ಡ ಮಾತು? ಪಾಸಾಗದಿದ್ದರೆ ಇಲ್ಲ. ಪರೀಕ್ಷೆ ಪಾಸಾದರೆಯೇ ವೆಂಕಟೇಶನ ಹೊಟ್ಟೆ ತುಂಬುತ್ತದೆ ಅಂತಲ್ಲ!” ಎಂದು ಪುತ್ರ ವತ್ಸಲರಾದ ನನ್ನ ತಂದೆಯವರು ಹೇಳಿದರು. ತಂದೆ ತಾಯಿಗಳು ನನ್ನ ಮೇಲೆ ಹೆಚ್ಚಾದ ಮಮತೆ ಮಾಡುತ್ತಿರುವದರಿಂದಲೂ ನಾನು ಗೃಹಸ್ಥಾಶ್ರಮಿಯಾಗಿ ೩-೪ ವರ್ಷಗಳಾಗಿರುವದರಿಂದಲೂ ನಾನು ಮೂರು ಸಾರೆ ಮಾಟ್ರಕುಲೇಶನ್ ದಲ್ಲಿ ನಾಪಾಸ ಆದೆನು. ಮುಂದಿನ ವರ್ಷ ನಾನೂ ನನಗಿಂತ ನಾಲ್ಕು ವರ್ಷ ಚಿಕ್ಕವನಾದ ನನ್ನ ತಮ್ಮ ಮಾಧವನೂ ಕೂಡಿಯೇ ಆ ಪರೀಕ್ಷೆಯಲ್ಲಿ  ತೇರ್ಗಡೆ ಹೊಂದಿದೆವು. ಮಾಧವನು ತೇರ್ಗಡೆ ಹೊಂದಿದವರಲ್ಲಿ ಮೊದಲನೆಯವನು; ಶಂಕರಸೇಟ್ ಸ್ಕಾಲರನೂ ಆದ್ದರಿಂದ ಅವನ ಪ್ರಶಂಸೆಗೆ ಅಳತೆಯಿರಲಿಲ್ಲ. ಆಗಲಿ! ನಿಂದಕರನ್ನು ನೋಡಿರಿ. ಅವರು ಮಾಧವನ ಸ್ತುತಿ ಮಾಡಬೇಕಾದರೆ ನನ್ನನ್ನು ಹಳಿಯಬೇಕೆ? ನಾನಾದರೂ ‘ಪಾಸ್’ ಆದವರಲ್ಲಿ ಒಂಬತ್ತನೆಯವನು.
ಕಾಂತಾಸಹವಾಸದ ವ್ಯಾಮೋಹಕ್ಕಾಗಿಯೂ ಸ್ನೇಹಿತರೊಡನೆ ವಿನೋದದ ಹರಟೆ ಕೊಟ್ಟಿದ್ದಕ್ಕಾಗಿ ನನ್ನ ಅವಸ್ಥೆ ಹೀಗಾಯಿತೆಂಬ ವ್ಯಸನದಿಂದ ನಾನಾದರೂ ಮುಂಬಯಿಯಲ್ಲಿ ನಿಂತು ಒಳ್ಳೆ ಮನಸ್ಸು ಕೊಟ್ಟು ವಕೀಲೀ ಪರೀಕ್ಷೆಯ ಅಭ್ಯಾಸ ಮಾಡಿದ್ದರಿಂದ ವರುಷ ತಿರುಗುವದರೊಳಗಾಗಿಯೇ ನಾನು ವಕೀಲನಾದೆನು. ಕೇಳುವದೇನು! ಮಾಧವನು ಪೀ. ಈ, ಪರೀಕ್ಷೆಯಲ್ಲಿ ಅಗ್ರ ಸ್ಥಾನವನ್ನು ಹೊಂದಿದರೂ ಅವನು ವಿದ್ಯಾರ್ಥಿಯೇ! ನಾನು ತಿಂಗಳೊಂದಕ್ಕೆ ನೂರು ನೂರೈವತ್ತು ರೂಪಾಯಿ ಗಳಿಸುವ ವಕೀಲನು.  ಹೀಗೆ ನಮ್ಮ ಮನೆಯಲ್ಲಿ ಸುಖವೂ ಆನಂದವೂ ನೆಲೆಗೊಂಡವು.
ನಾವು ಕರ್ನಾಟಕದ ದೇಶಸ್ಥರು; ಮನೆಯಿಂದ ನೆಟ್ಟಗಿದ್ದವರು; ಇಂಥವರ ಮನೆಯಲ್ಲಿದ್ದ ನಮ್ಮ ಮಾಧವನು ಅವಿವಾಹಿತನಾಗಿ ಉಳಿಯುವದು ಹೇಗೆ? ಇಷ್ಟು ದಿವಸ ಮಾಧವನ ಮದುವೆಯಾಗದೆ ಉಳಿದದ್ದೇ ಹೆಚ್ಚಿನ ಮಾತು. ಹೈದರಾಬಾದದಲ್ಲಿ ಕರೋಡಗಿರಿಯ ಮೋಹತಮೀಮರಾದ ಸುಬ್ಬರಾಯರು ನಮ್ಮ ತಂದೆಯವರ ಬಾಲ್ಯದ ಸ್ನೇಹಿತರು. ತಮ್ಮ ಮಗಳನ್ನು ಮಾಧವನಿಗಾಗಿ ಸ್ವೀಕರಿಸಬೇಕೆಂದು ಸುಬ್ಬರಾಯರು ನಾವಿದ್ದಲ್ಲಿಗೆ ಬಂದು
ಬಹುಪರಿಯಾಗಿ ಹೇಳಿಕೊಂಡು ಐದು ಸಾವಿರ ರೂಪಾಯಿ ವರದಕ್ಷಿಣೆಯಾಗಿ ಕೊಡಲೊಪ್ಪಿದ್ದರಿಂದ ನಮ್ಮ ತಂದೆಯವರು ಒಪ್ಪಿಕೊಂಡರು. ನಮ್ಮ ತಾಯಿಯವರು ಇನ್ನೂ ಕೆಲವು ‘ಬಾಬು’ಗಳನ್ನು ಹೆಚ್ಚಾಗಿ ಬೇಡಿದರೂ ಅವುಗಳನ್ನು ಸುಬ್ಬರಾಯರು ಕೊಡಲೊಪ್ಪಿದ್ದರಿಂದ ಮಾಧವನ ಮದುವೆಯ ನಿಶ್ಚಯವೇ ಆಗಿಹೋಯಿತು.
ಕಥೆ-ಕಾದಂಬರಿ, ನಾಟಕಾದಿಗಳನ್ನು ಓದಿದವನಾದ ಮಾಧವನು “ಇಂಗ್ಲಂಡದಲ್ಲಿ ತರುಣರು ಇಪ್ಪತ್ತೆಂಟು ಮೂವತ್ತು ವರ್ಷದ ಪ್ರಾಯದವರಾಗುವವರೆಗೆ ಲಗ್ನ ಮಾಡಿಕೊಳ್ಳುವದಿಲ್ಲ. ಅವರು ತಮ್ಮ ಇಚ್ಛೆಗೆ ಬಂದ ವಧುವನ್ನೇ ಮದುವೆ ಮಾಡಿಕೊಳ್ಳುತ್ತಾರೆ. ಹೀಗೆ ಬಂಧಿಸಿ ನನ್ನ ಮದುವೆ ಮಾಡುವದು ಸರ್ವಥಾ ಅನ್ಯಾಯವಾದದ್ದು” ಎಂದು ನನಗೂ ತಂದೆಯವರಿಗೂ ಕೂಡಿಯೇ ಬರಕೊಂಡನು. ನಮ್ಮ ತಂದೆಯವರು ತಾವು ಮಾಡಿದ ನಿಶ್ಚಯವನ್ನು ಮುರಿಯುವರೆ? ಕನ್ನೆಯು ಶ್ರೇಷ್ಟಳಾಗಿರುವಳೆಂದೂ ಸುಬ್ಬರಾಯರಂಥ ಮನೆತನಸ್ಥರೊಡನೆ ಸಂಬಂಧ ಮಾಡುವದು ಶ್ಲಾಘ್ಯವಾದದ್ದೆಂದೂ ಬರೆದದ್ದಲ್ಲದೆ ತಮ್ಮ ಆಜ್ಞೆಯನ್ನು ಉಲ್ಲಂಘಿಸಿದ್ದಾದರೆ ಕಾಲೇಜ ಬಿಟ್ಟು ಮನೆಗೆ ಬರಬೇಕಾದೀತೆಂದು ತಂದೆಯವರು ಮಾಧವನಿಗೆ ನಿಷ್ಟುರವಾಗಿ ಬರೆದದ್ದೆರಿಂದ ಅವನು ಅನಿರ್ವಾಹಕ್ಕಾಗಿ ಸುಮ್ಮನಾದನು.
ಮನೆಯಲ್ಲಿ ಮಾಧವನ ಮದುವೆಯ ಸಮಾರಂಭವು ಅಟ್ಟಹಾಸದಿಂದ ನಡೆದಿತ್ತು. ಬುದ್ದಿಶಾಲಿಯೂ, ದೃಢಾಂಗನೂ, ಸುಂದರನೂ ಆದ ವರನನ್ನು ಕಂಡು, ವಧುಪಕ್ಷದವರಿಗೆ ಅತಿಶಯವಾದ ಸಂತೋಷವಾಗಿತ್ತು. ನಮ್ಮ ತಾಯಿಗೂ ಭಾಮಕ್ಕನಿಗೂ ದಾಸಾನುದಾಸರಾಗಿ ನಡಕೊಳ್ಳುತ್ತಿದ್ದರು. ಕಳಸಗಿತ್ತಿಯಾದ ಭಾಮಕ್ಕನ ಜಂಬವನ್ನು ಹಿಡಿಯಬೇಕಾದರೆ, ಸುಬ್ಬ ರಾಯರಿಗೂ ಅವರ ಪತ್ನಿಗೂ ಸಾಕುಬೇಕಾಗಿ ಹೋಯಿತು, ಈ ಲಗ್ನ ಸಮಾರಂಭದಲ್ಲಿ ಎಲ್ಲರ ಮನಸ್ಸಿನಲ್ಲಿಯೂ ಉಲ್ಲಾಸ, ಎಲ್ಲರಿಗೂ ಆನಂದವಾಗಿರುವಾಗ ಮಾಧವನೊಬ್ಬನೇ ಚಿಂತಾಕ್ರಾಂತನಾಗಿ ಕಂಡನು.
ಕನ್ನೆಯ ರೂಪವು ಹೇಗಿರುವದೋ ಎಂದು ನೋಡುವನೆಂದರೆ ಆ ಹುಡುಗಿಯು ಕೆಳಗೆ ಮೋರೆ ಹಾಕಿದವಳು ಅದನ್ನು ಮೇಲಕ್ಕೆ ಎತ್ತಿದ್ದಿಲ್ಲ. ಮೊದಲನೆಯ ದಿವಸ ವಧುವು ಮಾಧವನ ಮುಖವನ್ನು ನಿರೀಕ್ಷಿಸಿ ನೋಡುತ್ತಿದ್ದಳಂತೆ! ಆಗ ಊಟಕ್ಕೆ ಬಂದ ಪುರೋಹಿತಗಿತ್ತಿಯಾದ ಭಾಗಮ್ಮನು ಅದನ್ನು ಕಂಡು, “ಆಯ್ಯೆ! ಏನು ಹುಡುಗೆ ಇದು? ಈಗಲೆ ಗಂಡನ ಮೋರೆಯನ್ನು ಹುಳುಹುಳು ನೋಡುತ್ತಾಳೆ ” ಎಂದು ಆ೦ದಳಂತೆ. ಆ ಮಾತು ಕೇಳಿದಾಗಿನಿಂದ ಮದುಮಗಳು ತಿರುಗಿ ಮೇಲಕ್ಕೆ ಮೋರೆಯನ್ನೆತ್ತಿದಿಲ್ಲ. ಸಿಕ್ಕಸಿಕ್ಕವರು ಎರೆದದ್ದರಿಂದ ಮದುವುಗಳ ತಲೆಯಲ್ಲಿ ತಪತಪ ಎಣ್ಣೆ ಬಸಿಯುತ್ತಿತ್ತು. ಮೈಯೆಲ್ಲ ಎಣ್ಣೆ ಆರಿಸಿನಗಳ ಜಿಗಿಯು. ಅಷ್ಟಪತ್ರಿಯು ಪುರೋಹಿತನಿಗೆ ಹೋಗಬೇಕಾದ್ದರಿಂದ ಒಂದೂ ಮುಕ್ಕಾಲು ರೂಪಾಯಿಯ ಬೆಲೆಯುಳ್ಳ ಅರಿಸಿನ ಬಣ್ಣದ್ದೊಂದು ವಸ್ತ್ರವನ್ನು ಆ ಕನ್ನೆಗೆ ಉಡಿಸಿದ್ದರು. ಇಷ್ಟು ಸೌಭಾಗ್ಯದ ಮೇಲೆ ವಧುವಿನ ಹೆಸರು ಗುಂಡಕ್ಕನು.
ಸಾರಾಂಶ, ಹೆಂಡತಿಯು ಮಾಧವನ ಮನಸ್ಸಿಗೆ ಎಳ್ಳಷ್ಟಾದರೂ ಬರಲಿಲ್ಲ. ಭಾಮಕ್ಕನು ಆಗ್ರಹದಿಂದ ಜಗ್ಗಿಕೊಂಡು ಹೋದರೆ ಮಾತ್ರ ಊಟಣಿಗೆ ಹೋಗುವನು. ಗುಂಡಕ್ಕನು ತಪ್ಪು ತಡೆಯಾದ ಮರಾಠೀ ಒಗಟುಗಳನ್ನು ಹಾಕಿ ಗಂಧ ಹಚ್ಚಲಿಕ್ಕೆ ಬಂದರೆ ಅವನು ಕೈ ಕೊಡಲಿಲ್ಲ. “ಮಾಧವಾ, ನಿನ್ನ, ಮಾವನು ಕೊಟ್ಟ ಪೀತಾಂಬರವು ಚನ್ನಾಗಿದೆ ಅಲ್ಲವೆ? ನೋಡು ಬಾ!” ಎಂದು ನಮ್ಮ ತಾಯಿಯು ಕರೆದರೆ “ರಮಾಕಕ್ಕೀ, (ನಮ್ಮ ತಾಯಿಗೆ ನಾವು ರಮಾಕಕ್ಕಿ ಎಂದೆನ್ನುತ್ತೇವೆ) ರಮಾಕಕ್ಕಿ, ಈ ಸುದ್ದಿಯನ್ನು ನನ್ನ ಮುಂದೆ ತೆಗಿಯಬೇಡ, ಪೀತಾಂಬರವನ್ನು ಮದುವೆ ಮಾಡಿಕೊಳ್ಳುವದದೇನು?” ಅಂದನು.
ಹೀಗೆ ಮಾಧವನು ಮದುವೆ ಮುಗಿಯುವವರೆಗೆ ದುಮುದುಮು ಉರಿಯುತ್ತಿದ್ದನು. ಆಲ್ಪರೆದು ಹೇಳಿಕೊಂಡರೂ ತಂದೆಯವರು ತನ್ನ ವಿನಂತಿಯನ್ನು ಲಕ್ಷಿಸದೆ ತನಗೆ ಇಂಥದ್ದೊಂದು “ಕರಡೆ”ಯನ್ನು ಗಂಟು ಹಾಕಿದರೆ? ಒಳ್ಳೇದು, ಇದರ ಪ್ರಾಯಶ್ಚಿತ್ತವನ್ನು ಅವರಿಗೆ ಉಣ್ಣಿಸದಿದ್ದರೆ ನನ್ನ ಹೆಸರೇ ಮಾಧವನಲ್ಲ; ಆಗ್ರಹಿಯಾದ ತಂದೆಯ ಮಗನು ಆಗ್ರಹಿಯಾಗದಿದ್ದರೆ ಒಪ್ಪುವದುಂಟೆ ? ಎಂದು ನೆನಿಸಿ ಅವನು ಕಾಲೇಜಕ್ಕೆ ಹೊರಟುಹೋದನು.
ಮುಂದಿನ ‘ಮೇ’ ತಿಂಗಳಲ್ಲಿ ಮಾಧವನು ಊರಿಗೆ ಬರಲಿಲ್ಲ. ತಂದೆಯವರು ಆಗ್ರಹದಿಂದ ಬಾರೆಂದು ಬರೆದರೆ ‘ಅವನು ಊರಿಗೆ ಬಂದ ಮರು ದಿವಸವೇ ಮರಳಿ ಕಾಲೇಜಕ್ಕೆ ಹೋದನು. ಮಾಧವನು ಅಳಿಯತನಕ್ಕೆ ಅತ್ತೆ ಮನೆಗೆ ಹೋಗಲಿಲ್ಲ. ಹೆಂಡತಿ ಮೈನೆರೆದರೆ ಫಲಶೋಭನಕ್ಕೆ ಊರಿಗೆ ಬರಲಿಲ್ಲ. ತಂದೆಯವರು ಬೇರೊಂದು ಮುಹೂರ್ತ ತೆಗೆದು ಮಾಧವನಿಗೆ ಸಿಟ್ಟು ಮಾಡಿ ಬರಹೇಳಿ ಕಳಿಸಿದರೆ, “ನನಗೆ ಇನ್ನೊಂದು ಮದುವೆ ಮಾಡಿದರೆ
ಮಾಡಿರಿ; ಇಲ್ಲದಿದ್ದರೆ ನೀವು ಮಾಡುವ ಮಂಗಲಕಾರ್ಯಗಳು ನನಗೆ ಬೇಕಾಗಿಲ್ಲ” ಎಂದು ಪ್ರತ್ಯುತ್ತರ ಕೊಟ್ಟನು.
ತಂದೆಯವರಿಗೆ ಕೋಪ ಬಂದಿತು; ಆದರೆ ಮಗನನ್ನು ಒಗೆಯುವರು ಹೇಗೆ? ಇತ್ತ ಸುಬ್ಬರಾಯರ ಪತ್ರಗಳು ಮೇಲಿಂದ ಮೇಲೆ ಬರುತ್ತಿದ್ದವು; ಇತ್ತ ಮಗನು ಮಾತು ಕೇಳಲೊಲ್ಲನು. ಎಮ್. ಏ. ಆಗಿ ಪ್ರಬುದ್ಧನಾಗಿರುವ ಮಗನನ್ನು ಹೆಚ್ಚಿಗೆ ಕೆಣಕಿ ನೋಡಿ ಫಲವೇನು? ಸುಖಿಯಾಗಿದ್ದ ನಮ್ಮ ರಾಯರಿಗೆ ವೃದ್ಧಾಪ್ಯದಲ್ಲಿ ಇದೊಂದು ದೊಡ್ಡ ಚಿಂತೆಯಾಯಿತು. ಇದ್ದ ಸೊಸೆಯು ರೂಪವತಿಯೂ ಗುಣವತಿಯೂ ಆಗಿದ್ದಳು. ಇನ್ನೊಂದು ಮದುವೆ ಮಾಡುವದೆಂತು? ಒಬ್ಬರ ಮಗಳ ಗೋಳು ಕಟ್ಟಿಕೊಳ್ಳುವದಕ್ಕಿಂತಲೂ ಮಗನು ಹೆಂಡತಿಯಿಲ್ಲದೆ ಕುಳಿತರೂ ಚಿಂತೆಯಿಲ್ಲವೆಂದು ತಿಳಿದು ಅವರು ಮಾಧವನ ದ್ವಿತೀಯ ವಿವಾಹದ ಗೊಡವೆಗೆ ಹೋಗಲಿಲ್ಲ.
ತಂದೆಯವರ ಪ್ರಕೃತಿಯು ದಿನೇದಿನೇ ಅಸ್ವಸ್ಥನಾಗುತ್ತೆ ನಡೆದದ್ದರಿಂದ ನಾವು ಗ್ರಾಮಾಂತರಕ್ಕೆ ಹೋಗಿ ಇರಬೇಕೆಂದು ವೈದ್ಯರು ಹೇಳಿದರು. ಆಮೇರೆಗೆ ನಾವೆಲ್ಲರೂ ಬೆಂಗಳೂರಿಗೆ ಹೋದೆವು. ‘ಬಸವನಗುಡಿ’ ಎಂಬ ಹೊಸಪೇಟೆಯಲ್ಲಿ ನಮ್ಮ ಪ್ರಾಂತದ ಜನರ ವಸತಿ ಬಹಳವಾಗಿರುವದರಿಂದ ನಾವು ಅಲ್ಲಿಯೇ ಒಂದು ರಮ್ಯವಾದ ಮನೆ ಹಿಡುಕೊಂಡು ಇದ್ದೆವು. ಬೆಂಗಳೂರಿನ ನೀರು ಗಾಳಿಗಳು ಒಳ್ಳೆ ಹಿತಕರವಾಗಿರುವುದರಿಂದಲೂ, ಅಲ್ಲಿಯ ಶೋಭೆಯು ಒಳ್ಳೇ ರಮಣೀಯವಾಗಿರುವದರಿಂದಲೂ, ಅಲ್ಲಿರುವ ಬೇರೆ ಸುಖಸಾಧನಗಳು ಸಾಮೀಚೀನವಾಗಿರುವುದರಿಂದಲೂ ತಿಂಗಳು ಹದಿನೈದು ದಿವಸಗಳಲ್ಲಿಯೇ ತಂದೆಯವರ ಪ್ರಕೃತಿಯು ವಾಸಿಯಾಗುತ್ತೆ ಬಂದಿತು.
ನಾವು ಬೆಂಗಳೂರಿಗೆ ಬಂದ ವರ್ತಮಾನವನ್ನು ಕೇಳಿ ನಮ್ಮ ಭಗಿನೀ ಪತಿಗಳಾದ ಶೇಷಗಿರಿನಾಯಕರಿಗೂ ಅಲ್ಲಿಗೆ ಬರುವ ಇಚ್ಛೆಯಾಯಿತು. ಶೇಷಗಿರಿ ನಾಯಕರು ಮೂವತ್ತೈದು ವರುಷದ ಪ್ರಾಯದವರಾದ ತರುಣರು. ಅವರು ದೃಢಾಂಗರಾಗಿದ್ದು ಮೈ ಬಣ್ಣ ಸಾದಗಪ್ಪಿನದಾಗಿತ್ತು. ನಾಯಕರ ಮುಖದ ಮೇಲೆ ಲಕ್ಷ್ಮಿಯ ಕಳೆಯು ಉಕ್ಕುತ್ತಿತ್ತು. ಹಿರಿಯರು ವರುಷಾ ನಿರಾತಂಕ ಏಳೆಂಟು ಸಾವಿರ ರೂಪಾಯಿಗಳಿಸುವರು. ಹೊಟ್ಟೆಗಿಲ್ಲದವರು ವಿದ್ಯಾವ್ಯಾಸಂಗವನ್ನು ಮಾಡತಕ್ಕದ್ದೆಂದು ತಮ್ಮಣ್ಣನಾಯಕರ ಅಭಿಪ್ರಾಯವಾದದ್ದರಿಂದ ಶೇಷಗಿರಿ ನಾಯಕರನ್ನು ದೊಡ್ಡೂರ ಶಾಲೆಗೆ ಕಳಿಸಲಿಲ್ಲ. `ಅಂಕಿ ಮೊಗ್ಗೆ ಅಕ್ಷರ ಬರಹಗಳ ಪೂರ್ತೆ ಶೇಷಗಿರಿ ನಾಯಕರ ವಿದ್ಯಾಭ್ಯಾಸವಾಗಿತ್ತು. ಕನ್ನಡ ಮರಾಠಿ ಅಕ್ಷರಗಳನ್ನು ಅವರು ಮುಕ್ತಾಫಲದಂತೆ ಬರೆಯುತ್ತಿದ್ದರು. ವ್ಯಾಪಾರದ ಲೆಕ್ಕಗಳನ್ನು ಅವರು ತಪ್ಪಿಲ್ಲದೆ ಬಹು ಜಾಗ್ರತೆಯಾಗಿ ಮಾಡುತ್ತಿದ್ದರು. ಶೇಷಗಿರಿನಾಯಕರು ಒಳ್ಳೆ ತೀಕ್ಷ್ಮವಾದ ಬುದ್ಧಿಯುಳ್ಳವರಾಗಿದ್ದರಿಂದ ತಮಗೆ ಉಚ್ಚವಾದ ಶಿಕ್ಷಣವು ದೊರಕಲಿಲ್ಲವೆಂದು ಅವರು ಆಗಾಗ್ಗೆ ವಿಷಾದಪಡುತ್ತಿದ್ದರು. ಪದವೀಧರರಂತೆ ಪೋಷಾಕು ಮಾಡಿಕೊಳ್ಳುವದೂ ಆ ಜನರಂತೆ ವರ್ತಿಸುವದೂ ಅವರಿಗೆ ಸೇರುತ್ತಿತ್ತು. ಉತ್ತಮೋತ್ತಮವಾದ ಜರದ ರುಮಾಲಗಳನ್ನು ಅವರು ಸುತ್ತಿಕೊಳ್ಳುತ್ತಿದ್ದರು. ಬೆಲೆಯುಳ್ಳ ಕೋಟು ಪಾಟಲೂನುಗಳ ಜೊತೆಗಳು ಅವರಲ್ಲಿ, ಹತ್ತೆಂಟು ಇದ್ದವು. ಕಣ್ಣುಗಳು ಚನ್ನಾಗಿ ಕಾಣುತ್ತಿದ್ದರೂ ಆಲಂಕಾರಕ್ಕಾಗಿ ‘ಲಾರೆನ್ಸ ಎಂಡ ಮೇಯೊ’ ಕಂಪನಿಯಿಂದ ಐವತ್ತು ರೂಪಾಯದ ಉಪನೇತ್ರಗಳನ್ನು ತರಿಸಿದ್ದರು. ಅವರಿಗೆ ಗಡಿಯಾರದ ಅವಶ್ಯಕತೆ ಇಲ್ಲದಿದ್ದರೂ ಸುಶಿಕ್ಷಿತರು ಗಡಿಯಾರವಿಲ್ಲದೆ ಇರಕೂಡದಾದ್ದರಿಂದ ಅವರ ಕಿಶೆಯಲ್ಲಿ ಚಿನ್ನದ ಗಡಿಯಾರವೂ ಅದಕ್ಕೆ ರತ್ನಖಚಿತವಾದ ಬಂಗಾರದ ಅಂದವಾದ ಸರಪಣಿಯೂ ಇತ್ತು. ವಾಚ್-ಚೇನ ಮೀಟಂಗ-ಲೆಕ್‌ಚರ, ಲೇಡಿಜ-ಜೆಂಟ್ಲಮೆನ್, ಗುಡ್ ಮಾರ್ನಿ೦ಗ ಮುಂತಾದ ಅವಶ್ಯವಾದ ಅನೇಕ ಇಂಗ್ಲಿಷ ಶಬ್ದಗಳು ಅವರಿಗೆ ಬರುತ್ತಿದ್ದು ಅವುಗಳನ್ನು ಅವರು ಪ್ರಸಂಗಬಂದಾಗ ಉಪಯೋಗಿಸದಲೆ ಬಿಡುತ್ತಿದ್ದಿಲ್ಲ.
ಇರಲಿ, ಶೇಷಗಿರಿನಾಯಕರು ಜಾತ್ಯಾ ಚತುರರೂ, ವೆಚ್ಚ ಮಾಡುವದರಲ್ಲಿ ಸಡಿಲು ಕೈಯುಳ್ಳವರೂ ಆಪ್ತರಿಷ್ಟರೊಡನೆ ಪ್ರೇಮದಿಂದ ನಡಕೊಳ್ಳುವವರೂ ಆಗಿದ್ದರು. ಗಂಡ ಹೆಂಡರು ಪ್ರೇಮದಿಂದಿದ್ದು ಆದರದೊಂದಿಗೆ ವರ್ತಿಸುತ್ತಿದ್ದರು. ಅವರಿಗೆ ರಂಗಣ್ಣ ನೆಂಬ ನಾಲ್ಕೈದು ವರ್ಷದ ಬಾಲಕನಿದ್ದನು. ಹೀಗೆ ಸುಖಿಯಾಗಿದ್ದ ಶೇಷಗಿರಿನಾಯಕರು `ಸಪತ್ನೀಕರಾಗಿ ಬೆಂಗಳೂರಿನಲ್ಲಿ ಕೆಲವು ದಿವಸ ಆನಂದದಲ್ಲಿ ಕಳೆಯಬೇಕೆಂದು ಬಂದಿದ್ದರು. ಅವರಾದರೂ ನಮ್ಮ ಮನೆಯ ಸಮಾಸದಲ್ಲಿರುವದೊಂದು ಚಿಕ್ಕ ಬಂಗಲೆ ತೆಗೆದುಕೊಂಡು ಇರಲಾರಂಭಿಸಿದರು.
ಒಂದು ದಿವಸ ಪ್ರಾತಃಕಾಲದಲ್ಲಿ ನಾನೂ ನನ್ನ ತಮ್ಮನಾದ ಮಾಧವ ರಾಯನೂ (ಮಾಧವನು ಎಂ. ಎ. ಆದಬಳಿಕ ನಾವೆಲ್ಲರೂ ಅವನಿಗೆ ಮಾಧವರಾಯನೆನ್ನುತ್ತೇವೆ.) ಕೂಡಿ ಭಾಮಕ್ಕನ ಮನೆಗೆ ಉಪಹಾರಕ್ಕೆ ಹೋದೆವು. ಅಲ್ಲಿಯ ವ್ಯವಸ್ಥೆ ನೋಡಿರಿ : ಬಂಗಲೆಯ ಪ್ರಶಸ್ತವಾದ ಒಂದು ಭಾಗದಲ್ಲಿ ಒಂದು ವರ್ತುಲಾಕಾರದ ಮೇಜು ಇಟ್ಟಿದ್ದು ಅದರ ಸುತ್ತಲೂ ನಾಲ್ಕಾರು ಅಂದವಾದ ಕುರ್ಚಿಗಳನ್ನಿಟ್ಟಿದ್ದರು. ಚಿತ್ರಮಯವಾದ ಬನಾತವನ್ನು ಮೇಜಿನ ಮೇಲೆ ಹಾಸಿದ್ದು ಮಧ್ಯದಲ್ಲಿ ಪುನಗು ಕಸೂರಿಯ ಊದಿನ ಕಡ್ಡಿಗಳುಳ್ಳ ಬೆಳ್ಳಿಯ ಗಿಡವು ಸುಗಂಧಮಯವಾದ ಹೊಗೆಯನ್ನು ತೂರುತ್ತಿತ್ತು. ಬೆಳ್ಳಿಯ ಹೂಜಿಗಳಲ್ಲಿ ವಿವಿಧವರ್ಣದ ಪುಷ್ಪಗಳನ್ನಿರಿಸಿ ಅವುಗಳನ್ನು ಊದಿನ ಕಡ್ಡಿಯ ಗಿಡದ ಸುತ್ತಲೂ ಪರಿಷ್ಕಾರವಾಗಿ ಇಟ್ಟಿದ್ದರು. ನಾಲ್ಕು ಬೆಳ್ಳಿಯ ಹರಿವಾಣಗಳಲ್ಲಿ, ಕಂಡರೆ ಬಾಯಿಗೆ ನೀರು ಬರುವಂಥ ಉಪಹಾರದ ಪಕ್ವಾನ್ನಗಳು ಒಳಿತಾಗಿ ಶೋಭಿಸುತ್ತಿದ್ದವು. ಹೆಚ್ಚಿದ ಸೇಬುಗಳ ತುಂಡು ಗಳೂ, ಸುಲಿದ ಕಿತ್ತಳೆಗಳ ಪಳುಕುಗಳೂ, ದ್ರಾಕ್ಷದ ಗೊಂಚಲುಗಳೂ, ಮಾಣಿಕದ ಪ್ರಭೆಯನ್ನು ಹೀಯಾಳಿಸುವಂಥ ದಾಳಿಂಬದ ಬೀಜಗಳ
ಗೋಪುರಗಳೂ ಅನೇಕ ಪ್ರಕಾರದ ಪಾತ್ರೆಗಳಲ್ಲಿ ತುಂಬಿಕೊಂಡಿದ್ದವು.
ನಾನೂ, ಮಾಧವನೂ, ನಾಯಕರೂ, ಭಾಮಕ್ಕನೂ ಹೀಗೆ ನಾಲ್ಕೂ ಜನರು ಉಪಹಾರಕ್ಕೆ ಕುಳಿತೆವು.
“ನಾಯಕರ, ನಿಮ್ಮಲ್ಲಿಯ ವ್ಯವಸ್ಥೆ ಚನ್ನಾಗಿದೆ. ಆದರೂ ನಿಮಗಿನ್ನೂ ಯುರೋಪಿಯನ್ ವ್ಯವಸ್ಥೆಯು ಚನ್ನಾಗಿ ಸಾಧಿಸಿಲ್ಲ. ಪದಾರ್ಥಗಳನೆಲ್ಲ ಹೀಗೆ ಒಮ್ಮೆಲೇ ತಂದು ಒಟ್ಟತಕ್ಕದ್ದಲ್ಲ. ಬೆಳ್ಳಿ ಬಂಗಾರದ ಪಾತ್ರೆಗಳಿಗಿಂತ ಚೀನಾ ಭಾಂಡಗಳು ಪ್ರಶಸ್ತವಾದವುಗಳು, ಹೀಗೆ ಇನ್ನೂ ಅನೇಕ ಸೂಚನೆಗಳನ್ನು ಮಾಡಬಹುದು” ಎಂದು ಮಾಧವರಾಯನು ಹೇಳಿದನು.
“ಸೂಚನೆ ಮಾಡಲಿಕ್ಕೆ ಅಡ್ಡೀ ಇಲ್ಲ ಆದರೂ ಭಾಟವಡೇಕರ, ಕರಂದೀಕರ, ಆರೇಕರ, ಗೋಖಲೆ, ಜೋಗಳೇಕರ ಮುಂತಾದ ಪಾಶ್ಚಾತ್ಯ ಸುಧಾರಣಾಗ್ರಾಹಿಗಳ ಮನೆಯಲ್ಲಿ ಇಂಥದೇ ವ್ಯವಸ್ಥೆ ಇರುವದು?” ಎಂದು ನಾಯಕರು ಹೇಳಿದರು.
“ಯಾವದೇ ಮಾತಿನಲ್ಲಿಯಾಗಲಿ, ಪ್ರಗತಿಗೆ ಪ್ರತಿಕೂಲವಾದ ಮಾತುಗಳನ್ನು ತೆಗೆದುಹಾಕುವದೂ ಅದಕ್ಕೆ ಅನುಕೂಲವಾದವುಗಳನ್ನು ಸಂಗ್ರಹಿಸುವದೂ ಸುಧಾರಣೆಯೆಂದೆನಿಸುವದಷ್ಟೇ? ಈ ನಮ್ಮ ಉಪಹಾರದ ಉಪಕರಣಗಳಲ್ಲಿ ಸೌಕರ್ಯಕ್ಕೆ ಪ್ರತಿಕೂಲವಾದವುಗಳಾವವು ಹೇಳಬಾರದೆ, ಪಂಡಿತಜೀ?” ಎಂದು ನಾನು ಮಾಧವರಾಯನನ್ನು ಕುರಿತು ಪ್ರಶ್ನೆ ಮಾಡಿದನು.
ಮಾಧವನು ತುಸು ಚಕಿತನಾಗಿ “ಅಣ್ಣಾ, ಸುಧಾರಣೆಯ ಮಾತುಗಳು ಬೇರೆ, ಶಿಷ್ಟಾಚಾರದ ಮಾತುಗಳು ಬೇರೆ. ಬ್ರೆಕಫಸ್ಟ (ಉಪಹಾರ), ಟೀ (ಚಹ) ಮುಂತಾದ ಮಾತುಗಳಲ್ಲಿ ನಾವು ಯುರೋಪಿಯನ್ ಪದ್ದತಿಯನ್ನೇ ಅನುಕರಿಸಬೇಕು. ಅವರಲ್ಲಿಯ ಕೆಲವು ಆಚಾರಗಳು ಅಪದ್ಧವಾಗಿ ಕಂಡರೂ ಶಿಷ್ಟಾಚಾರವೆಂದು ನಾವಾದರೂ ಅವರಂತೆಯೇ ಮಾಡತಕ್ಕದ್ದು”
ಎಂದು ಹೇಳಿದನು.
“ಏನು? ಯುರೋಪಿಯನ್ನರೇ ಶಿಷ್ಟರು, ಅವರು ಮಾಡುವದೇ ಶಿಷ್ಟಾಚಾರವೆ? ನಾವೇಕೆ ಶಿಷ್ಟರಲ್ಲ? ನಮ್ಮ ಆಚಾರಗಳೇ ಶಿಷ್ಟಾಚಾರ ಎಂದು ಅವರು ಅನುಕರಿಸಲಿ! ಮಾಧವರಾಯ, ನೀನು ಯುರೋಪಿಯನ್ನರ ಪಂಗ್ತಿಗೆ ಹೋದಾಗ ಅವರ ಆಚಾರಗಳಂತೆ ನಡಕೊಳ್ಳು ಬೇಕಾದರೆ” ಎಂದು ಭಾಮಕ್ಕನು ನಗುತ್ತ ನುಡಿದಳು.
“ಯುರೋಪಿಯನ್ನರು ನಮ್ಮ ಮಾಧವರಾಯರನ್ನು ಪಂಗ್ತಿಗೆ ಕರ ಕೊಂಡಾಗ ಈ ಮಾತು,” ಎಂದು ನಾನು ಅಂದೆನು.
“ಅದಿರಲಿ, ನಾವು ನಮ್ಮ ಚಹಾ ‘ಪಾರ್ಟಿ’ಯಲ್ಲಿ ಸುಧಾರಣೆ ಮಾಡುವದು ಅವಶ್ಯವಿರುವದೇನು ಎಂಬುದನ್ನು ವಿಚಾರಿಸುವಾ. ಉತ್ತಮವಾದ ಪದಾರ್ಥಗಳನ್ನು ವ್ಯವಸ್ಥಿತವಾಗಿ ಮಂಡಿಸಿ ವಿನೋದದ ಮಾತುಗಳನ್ನಾಡುತ್ತೆ ತಿಂದರಾಯಿತು. ಹಣ್ಣು ತಿನ್ನುವವನು ಪೂರ್ವಾಭಿಮುಖನಾಗಿ ತಿನ್ನಬೇಕೆಂದು ಯುರೋಪಿಯನ್ನನು ಹೇಳಿದನೆಂದು ತಿಳಿಯಿರಿ. ಕೇಳುವವರಾರು?” ಎಂದು ಶೇಷಗಿರಿನಾಯಕರು ನುಡಿದರು. ಅಷ್ಟರಲ್ಲಿ ಅಪೂರ್ವಳಾದ ಸುಂದರಿಯೋರ್ವಳು ಮೆಲ್ಲನೆ ಬಾಗಿಲ ತೆರೆದು “ಅಕ್ಕಾ, ಈ ರಂಗಣ್ಣನನ್ನು ತುಸು ಕರಕೊಳ್ಳಿರಿ, ತ್ರಾಸ ಕೊಡುತ್ತಾನೆ, ಚಹ ಸೋಸಗೊಡಲೊಲ್ಲನು” ಎಂದು ರಂಗಣ್ಣನನ್ನು ಕೈಯಲ್ಲಿ ಹಿಡುಕೊಂಡು ಬಂದು ಮರಾಠಿ ಭಾಷೆಯಲ್ಲಿ ಬಲು ಮೆಲ್ಲಗೆ ಹೇಳಿದಳು.
ರಂಗನು ಸ್ಫೂರ್ತಿಯಿಂದ “ಬೇಂಡ್ ಬಾಜೆ”ಯನ್ನೂದುತ್ತೆ ತನ್ನ ತಾಯಿಯ ಬಳಿಯಲ್ಲಿ ಬಂದು ನಿಂತನು. ಆ ಸುಂದರಿಯು ಮತ್ತೆ ಒಳಗೆ ಹೋದಳು.
ಏನು ಸೌಂದರ್ಯವದು! ಇಂಥ ರೂಪವತಿಯನ್ನು ನಾನು ನೋಡಲೇ ಇಲ್ಲ. ಅವಳ ಗೌರವರ್ಣವೂ, ಪ್ರೌಢಿಮೆಯಿಂದ ಮೆರೆಯುವ ಅವಳ ಸುಂದರವಾದ ಮುಖವೂ, ಮಂಜುಲವಾದ ವಾಣಿಯ ಮನೋವೇಧಕವಾಗಿದ್ದವು. ಭೂಯಿಯ “ಪರಭೂ” ಸುಂದರಿಯರಂತೆ ಅವಳು ತನ್ನ ನೀಲಾಲಕವನ್ನು ಚನ್ನಾಗಿ ಬಾಚಿ ಚಮತ್ಕಾರವಾಗಿ ಕಾಣುವಂಥ ‘ಟುಚಡೆ’ಯನ್ನು ಇಟ್ಟಳು. ಬದನೀ ಬಣ್ಣದ ರೇಸಿಮೆಯು ಜರತಾರಿ ಸೀರೆಯು ಅವಳ ಪರಮವಾದ ಮೈ ಕಟ್ಟಿಗೆ ಒಳಿತಾಗಿ ಒಪ್ಪುತ್ತಿತ್ತು. ಅವಳ ಮುಂಗೈಲಿದ್ದ ಅನರ್ಘವಾದ ಹರಡ- ಕಂಕಣ ಗೋಟು ತೋಡೆಗಳಿಗೆ ಅವಳ ನುಣುಪಾದ ಹಸ್ತಗಳೇ ಅಲಂಕಾರವಾಗಿದ್ದವೋ ಆ ಹಸ್ತಗಳಿಗೆ ಆ ಜಡ ಗಗಳೇ ಅಲಂಕಾರವೂ ಹೇಳಲಾಗದು. ನಮ್ಮ ನಿರೀಕ್ಷಣಕ್ಕೆ ಈಡಾದ ಸುಂದರಿಯು ನಿಲ್ಲದೆ ಹೊರಟು ಹೋದದ್ದರಿಂದ ನಾನಾದರೂ ವರ್ಣನೆಯನ್ನು ಹೆಚ್ಚಿಗೆ ಮಾಡಲಾರೆನು.
“ಭಾಮಕ್ಕಾ ಈ ಪ್ರಾಣಿ ಯಾರು?” ಎಂದು ಮಾಧವರಾಯನು ಕೇಳಿದನು.
“ಇವಳೆ?” ಎಂದು ಉದ್ಗಾರ ತೆಗೆದು ಭಾಮಕ್ಕನು ತನ್ನ ಗಂಡನ ಕೈ ಮಾಡಿ “ಇವರ ಸೋದರ ಸೊಸೆಯು” ಎಂದು ನುಡಿದು ನಕ್ಕಳು. “ನಗಲಿಕ್ಕೇನಾಯಿತು?” ಎಂದು ನಾಯಕರು ಹೆಂಡತಿಯ ಮೇಲೆ ತುಷ್ಟರಾಗಿ ಕೇಳಿದರು.
ಭಾಮಕ್ಕನು ಗಂಡನ ಕೋಪವನ್ನು ಲೆಕ್ಕಿಸದೆ “ಊರೆಲ್ಲ ನಕ್ಕರೂ ನಗಕೂಡದು!” ಎಂದು ನುಡಿದು ಮತ್ತೆ ನಕ್ಕಳು.
ಚಮತ್ಕಾರವನ್ನು ಅರಿತುಕೊಳ್ಳುವ ಕುತೂಹಲದಿಂದ ನಾನು “ಭಾಮಾ, ಇವಳು ನಿನ್ನ ಸೊಸೆಯಾದರೆ ನಮ್ಮೊಡನೆ ಚಹ ಕೊಳ್ಳಲಿಕ್ಕೆ ಬರಲಿಲ್ಲವೇಕೆ?”
ಹೇಗೆ ಬಂದಾಳು ವೆಂಕಣ್ಣಾ! ದೊಡ್ಡ ಹೆಂಗಸಾಗಿದ್ದಾಳೆ, ಇನ್ನೂ ಲಗ್ನ ಇಲ್ಲ. ಪಾಪ, ನಾಚಿಕೊಂಡು ಒಳಗೇ ಇರುತ್ತಾಳೆ. ಹಡೆದ ತಂದೆ ತಾಯಿಗೆ ಊಟ ಹೇಗೆ ಸವಿಯಾಗುವದೊ ಕಾಣೆ!” ಎಂದು ಭಾಮ ಆತನನ್ನು ಓರೆಗಣ್ಣಿನಿಂದ ನೋಡಿ ನಕ್ಕಳು.
ಅವರ ತಂದೆತಾಯಿಗಳ ಪಾಪ ಪುಣ್ಯ ಅವರ ಸುತ್ತ. ಇಲ್ಲಿಯೇ ಸುಮ್ಮನಿದ್ದಾನೆ; ಹೆಂಡತಿಯನ್ನು ಬಿಟ್ಟು ಬಿಟ್ಟಿದ್ದಾನೆ. ನಿನಗೆ ಊಟ ಹತ್ತುತ್ತದೇನು?” ಎಂದು ನಾಯಕರು ಗಂಭೀರವಾದ ಮುದ್ರೆಯನ್ನು ತಳೆದು ಕೇಳಿದರು.
“ಬೇವಿನಕಾಯಿ ತಿಂದರೆ ಕಹಿ ಹತ್ತುತ್ತದೆ. ಸವಿಯೂಟ ಉಂಡು ಅನ್ನ ಲಿಯಾ?” ಎಂದು ನಾಯಕರ ಪ್ರೇಯಸಿಯು ನುಡಿದು ಮತ್ತೆ ನಕ್ಕಳು.
“ನಾಯಕರ ಗಂಭೀರವಾದ ಮುಖಮುದ್ರೆಯು ಆಡಗಿ ಅಲ್ಲಿ ಮಂದಹಾಸವು ತೋರಿತು. ಅವರು ತಮ್ಮ ಚಿನ್ನದ ಗಡಿಯಾರವನ್ನು ತೆಗೆದು ಓಹೋ, ಏಳುವರೆಯಾಯಿತು” ಎಂದು ಯಂತ್ರದ ಗಂಟೆ ಬಡಿದು ಮೇಲೆ ನಾರ್ಣಮ್ಮಾ, ಚಹ ಸಿದ್ದವಾಗಿದೆಯೋ ಇಲ್ಲವೊ?” ಎಂದು ಅಡಿಗೆಯವನನ್ನು ಕೂಗಿ ಕೇಳಿದರು.
ಆಗಲಿನ ವಾಗ್ದಾಣ ಬಡೆದು ತುಸು ಚಿಂತಾಕ್ರಾಂತನಾಗಿದ್ದ ಮಾಧವ ರಾಯನು ನಾಯಕರ ಕಡೆಗೆ ಮೋರೆ ತಿರುವಿ ನಾಯಕರೆ, ಯುರೋಪಿಯನ್ ಪದ್ಧತಿಯಂತೆ ನೀವು ಗಂಟೆ ಬಡಿದಿರಿ, ಸರಿಯಾಯಿತು; ಮೇಲೆ ನಾರ್ಣಮ್ಮನನ್ನು ಕೂಗಿದಿರೇಕೆ?” ಎಂದು ನುಡಿದು ಖೊಳ್ಳನೆ ನಕ್ಕನು.
ಶೇಷಗಿರಿನಾಯಕರ ಮುಖದಲ್ಲಿ ಹುಚ್ಚು ಕಳೆ ಇಡುಗಿತು. ಅವರಿಂದ
ಅಚಾತುರ್ಯವೇ ಆಗಿತ್ತು. ಅವರಂದದ್ದು : “ಗಂಟೆ ಬಾರಿಸಿದ ಕೂಡಲೆ ಬರಬೇಕೆಂದು ನಾವು ನಾರ್ಣಮ್ಮನಿಗೆ ಕಲಿಸದಿದ್ದರೆ ಬಾರಿಸಿದ ಕೂಡಲೆ ಅವಳು ಬರುವದು ಹೇಗೆ? ನಾನು ನಿನ್ನೆಯೇ ಈ ಗಂಟೆಯನ್ನು ಈ ಊರಲ್ಲಿ ಕೊಂಡೆನು.”  ಇದು ಹೊಸ ವಸ್ತುವಾದ್ದರಿಂದ ಹೇಗೆ ನುಡಿಯುತ್ತದೆಯೋ ನೋಡಿದೆನು.”
ಅಷ್ಟರಲ್ಲಿ ಚಹ ಬಂದಿತು. ಎಲ್ಲರು ‘ಸಾಸರ’ಗಳಲ್ಲಿ ಚಹ ಹಾಕಿ ಆರಿಸಿ ಕುಡಿಯಲಾರಂಭಿಸಿದರು. ಮಾಧವರಾಯನು ಚಹವನ್ನಾಸ್ವಾದಿಸಿ  “ಚಹ ಮಾತ್ರ ಸರ್ವೋತ್ಕೃಷ್ಟವಾಗಿದೆ” ಎಂದು ಗಟ್ಟಿಯಾಗಿ ಹೇಳಿದನು. ಭಾಮಕ್ಕನು ಅವನನ್ನು ದಿಟ್ಟಿಸಿ ನೋಡಿದಳು.
-೩-
ಮರುದಿವಸ ಶೇಷಗಿರಿನಾಯಕರು ನಮ್ಮ ಮನೆಗೆ ಬಂದಾಗ ನಾನು ಸೋದರಸೊಸೆಯಂದರೆ ಯಾರ ಮಗಳು? ಇಷ್ಟು ದಿವಸ ಅವಳು ಅವಿವಾಹಿತಳಾಗಿ ಉಳಿದದ್ದು ಹೇಗೆ? ಅವಳ ವಿದ್ಯಾವ್ಯಾಸಂಗಗಳೇನು? ಮುಂತಾದ ಪ್ರಶ್ನೆಗಳನ್ನು ಮಾಡಿದೆನು. ನಾಯಕರು ಇದ್ದ ಸಂಗತಿಯನ್ನೆಲ್ಲ ಸ್ವಲ್ಪದರಲ್ಲಿ ಹೇಳಿದರು. ಮಾಧವರಾಯನು ನನ್ನೆಲ್ಲ ಲಕ್ಷ ಕೊಟ್ಟು ಕೇಳುತ್ತಿದ್ದನು.
ಶೇಷಗಿರಿನಾಯಕರ ತಾಯಿಯು ಜೋಗಂಬೆಯ ಜಗೋಪಂತ ಕಾಥವಟೆಯವರ ಮಗಳು. ದೇಶಸ್ಥರಲ್ಲಿ ಇರುವ ರೂಢಿಗನುಸರಿಸಿ ತಮ್ಮಣ್ಣ ನಾಯಕರು ತಮ್ಮ ಮಗಳನ್ನು ಮತ್ತೆ ಜಗೋಪಂತರ ಮಗನಾದ ಮನೋಹರಪಂತನಿಗೆ ಕೊಟ್ಟಿದ್ದರು. ಆ ಮನೋಹರಪಂತರ ಮಗಳೇ ನಾವು ಮೇಲೆ ವಿವರಿಸಿದ ಅವಿವಾಹಿತಳಾದ ಸುಂದರಿಯು. ಅವಳ ಹೆಸರು ಚಂದ್ರಭಾಗಾ. ಜಗೋಪಂತರು ತೀರಿಕೊಂಡ ಬಳಿಕ ಮನೋಹರಪಂತನು ಪುಣೆಯಲ್ಲಿ ಮನೆ ಮಾಡಿಕೊಂಡಿದ್ದನು. ಅಲ್ಲಿ ಅವನು ಮಾಧವರಾವ ರಾನಡೆ, ವಿಷ್ಣು ಮೋರೇಶ್ವರ, ಅಗಸ್ತೀ ಮುಂತಾದ ಸುಧಾರಕಾಗ್ರಣಿಗಳ ಪಟ್ಟದ ಶಿಷ್ಯನಾಗಿದ್ದು, ಆ ಮಹಾತ್ಮರ ಪಶ್ಚಾತ್ ಮನೋಹರ ಪಂತನೇ ಪುಣೆಯಲ್ಲಿಯ ಸುಧಾರಕರ ಅಗ್ರಗಣಿಯೆಂದು ಎಲ್ಲರೂ ಮಾತಾಡುತ್ತಿದ್ದರು. ಮನೋಹರ ಪಂತನು ತನ್ನ ಮಗಳನ್ನು ಪುಣೆಯಲ್ಲಿ ಫೀಮೇಲ ಹಾಯಿಸ್ಕೂಲಿನಲ್ಲಿ ಅಭ್ಯಾಸಕ್ಕೆ ಇಟ್ಟಿದ್ದನು. ಅಲ್ಲಿ ಚಂದ್ರಭಾಗೆಯು ಇ೦ಗ್ಲೀಷ ಕಲಿತದ್ದಲ್ಲದೆ ಗಾನ, ಚಿತ್ರಕಲೆ, ಕಸೀದೆ ತೆಗೆಯುವುದು ಮುಂತಾದ ಅಭಿನವ ಕಲೆಗಳಲ್ಲಿಯಾದರೂ ನಿಷ್ಣಾತಳಾಗಿದ್ದಳು. ತನ್ನ ಮಗಳು ಹದಿನೆಂಟು ವರ್ಷದ ಪ್ರಾಯದವಳಾಗುವವರೆಗೆ ಅವಳ ವಿವಾಹವನ್ನು ಮಾಡುವದಿಲ್ಲೆಂದೂ ಅವಳ ಇಚ್ಛೆಗೆ ಬಂದ ವರನಿಗೆ ಮಾತ್ರ ಅವಳನ್ನು ಕೊಡುವೆನೆಂದೂ ಮನೋಹರ ಪಂತನು ನಿಶ್ಚಯಿಸಿದ್ದನು. ಅವನ ನಿಶ್ಚಯವೇ ಕೊನೆಗಾಣುವ ಹೊತ್ತು ಬಂದಿತು. ಯಾಕಂದರೆ ರಜಸ್ವಲೆಯಾದ ಚಂದ್ರಭಾಗೆಯನ್ನು ಹಳೆ ಸಾಂಪ್ರದಾಯದವರಂತೂ ಮಾಡಿಕೊಳ್ಳುವ ಮಾತೇ ದೂರಾಗಿ ಹೋಗಿತ್ತು. ಇನ್ನು ಸುಧಾರಕರ ಚಿಕ್ಕ ಮೇಳೆಯಲ್ಲಿ ಚಂದ್ರಭಾಗೆಗೆ ಅನುರೂಪನಾದ ಪತಿಯು ದೊರಕುವನೋ ಇಲ್ಲವೋ ಎಂಬ ಶಂಕೆಯಿತ್ತು.
ಅಕ್ಕನ ಮೇಲೆ ಭಕ್ತಿ ಹೆಚ್ಚಾಗಿ ಮಾಧವನು ದಿನಾಲು ಶೇಷಗಿರಿನಾಯಕರ ಮನೆಗೆ ಎಡತಾಕಲಾರಂಭಿಸಿದನು. “ಹಸಿವೆಯಾಗಿದೆ, ಅಕ್ಕಾ ಏನಾದರೂ ತಿನ್ನಲಿಕ್ಕೆ” ಕೊಡು ಎಂದು ನೆವಮಾಡಿಕೊಂಡು ಒಮ್ಮೆ ಹೋಗುವನು. ಮರೆತು ಬಂದ ಬಡಿಗೆಯನ್ನು ತರಲಿಕ್ಕೆ ಮತ್ತೊಮ್ಮೆ ಹೋಗುವನು. ಲಾಲಬಾಗಕ್ಕೆ ಬರುವಿರೇನೆಂದು ಶೇಷಗಿರಿನಾಯಕರನ್ನು ಕರೆಯಲಿಕ್ಕೆ ಒಂದಾವರ್ತಿ ಹೋಗುವನು. ಹೀಗೆ ಸಕಾರಣ ನಿಷ್ಕಾರಣವಾಗಿ ಮಾಧವನು ನಾಯಕರ
ಮನೆಗೆ ನಿತ್ಯದಲ್ಲಿಯೂ ಹೋಗಿ ಬರುತ್ತಿದ್ದನು.
ಭಾಮಕ್ಕನ ಮನೆಯಲ್ಲಿಯ ರುಚಿಕರವಾದ ಮಾವಿನಹಣ್ಣಿನ ಒಡೆಗಳನ್ನು ಯಾರು ಮಾಡಿದರೆಂದು ಮಾಧವನು ಕೇಳಿದರೆ ಅವುಗಳನ್ನು ಚಂದ್ರಭಾಗೆಯೇ ಮಾಡಿದಳೆಂಬ ಉತ್ತರ ಬಂದಿತು. ರಂಗಣ್ಣನ ತಲೆಯ ಮೇಲಿನ ಅಂದವಾದ ಟೊಪ್ಪಿಗೆಯನ್ನು ಹೆಣೆದವಳು ಚಂದಭಾಗೆಯೇ. ಆ ಹುಡುಗನಿಗೆ ಮನೆಯಲ್ಲಿ ಕಲಿಸುವವಳು ಅವಳೇ. ಒಳಗಿನ ಮನೆಯಲ್ಲಿ ಕುಳಿತು ಮೆಲ್ಲಗೆ ಬಹು ಮಂಜುಲನಾಗಿ ಚಂದ್ರಭಾಗೆಯು ಹಾಡುತ್ತಿದ್ದರೆ ಅವಳು ತಾಲಮಟ್ಟುಗಳನ್ನು ಬಿಟ್ಟಿರಲಿಲ್ಲ. ಪುಣೆಯಲ್ಲಿ ಇಂಗ್ಲಿಷ್ ಕಲಿತವಳಾಗಿದ್ದರೂ ಅವಳು ಅವಿನೀತೆಯಾಗಿ ಇದ್ದಿಲ್ಲ. ಒಂದು ದಿನ ಸತ್ಯಭಾಮೆಯು ಮೈ ತೊಳೆದುಕೊಳ್ಳಲಿಕ್ಕೆ ಬಚ್ಚಲಕ್ಕೆ ಹೋದದ್ದು ಮಾಧವನಿಗೆ ಗೊತ್ತಿದ್ದರೂ ಅವನು ಮೆಲ್ಲನೆ ಚಂದ್ರಭಾಗೆಯ ಸಮೀಪಕ್ಕೆ ಬಂದು “ಭಾಮಕ್ಕನೆಲ್ಲಿ?” ಎಂದು ಕೇಳಿದಾಗ ಆ ಲಲನೆಯು ಪರಿವೃತ್ತಾರ್ದಮುಖಿಯಾಗಿ ಎಳೆನಗೆ ತೋರುತ್ತ “ಮೈ ತೊಳೆಯುತ್ತಿರುವರು” ಎಂದು ಬಹು ಮಂಜುಲವಾಗಿ ಹೇಳಿದಳು. “ನಾನು ವರನು ನೀನು ಕನ್ನೆ ಏನು ಅನಹಿತ?” ಎಂದು
ಮನಸ್ಸಿನಲ್ಲಿಯೇ ಯೋಚಿಸುತ್ತ ಅವನು ಹೊರಟುಹೋದನು.
ಮಾಧವನಿಗೆ ಚಂದ್ರಭಾಗೆಯ ಹುಚ್ಚೇ ಹಿಡಿಯಿತು. ಕನಸುಮನಸಿನಲ್ಲಿ ಕೂಡಿಯೇ ಚಂದ್ರಭಾಗೆಯ ಹೊರತಾಗಿ ಇನ್ನೊಂದು ವಿಷಯವೇ ಇಲ್ಲ. ಕಡೆಗವನು ಒಂದು ದಿನ ಗಟ್ಟಿ ಧೈರ್ಯಮಾಡಿ ಅಕ್ಕನ ಬಳಿಗೆ ಬಂದು “ಅಕ್ಕಾ, ನಿನ್ನೊಡನೆ ಒಂದು ಆಲೋಚನೆ ಮಾಡಬೇಕಾಗಿದೆ” ಎಂದಂದನು.
“ಏನದು?” ಎಂದು ಸತ್ಯಭಾಮೆಯು ಮುಗುಳುನಗೆ ನಗುತ್ತ ಕೇಳಿದಳು. ಅವಳಿಗೆ ಮಾಧವನ ಮನಸ್ಸಿನೊಳಗಿನ ಮಾತು ತಿಳಿದೇ ಹೋಗಿತ್ತು.
“ಹೇಳೆಂದರೆ ಹೇಳುತ್ತೇನೆ” ಎಂದು ಮಾಧವನು ಲಜ್ಜಾಗ್ರಸ್ತನಾಗಿ ನುಡಿದನು.
“ಹೇಳು, ನನ್ನ ಮುಂದೆ ಯಾತರ ಸಂಕೋಚ?”
“ನಾನು ಎರಡನೆಯ ಲಗ್ನ ಮಾಡಿಕೊಳ್ಳುವದಂತೂ ನಿಶ್ಚಯವೇ, ಈ ಚಂದ್ರಭಾಗೆಯನ್ನು ನನಗೇಕೆ ಕೊಡಿಸಬಾರದು?”
ಈ ಮಾತು ಕೇಳಿ ಸತ್ಯಭಾಮೆಯು ಚಕಿತಳಾಗಿ ‘ಹುಚ್ಚನೇನು ನೀನು ಮಾಧವರಾಯಾ? ಆ ಹುಡುಗೆ ಮೈನೆರೆದು ಮೂರು ವರ್ಷಗಳಾಗಿವೆ ಅಂತೆ, ಹಿರಿಯರು ಕೇಳಿದರೆ ನನ್ನ ನಿನ್ನ ಕೂಡಿಯೇ ಬಡಿದಾರು!” ಎಂದು ಅಧಿಕ್ಷೇಪಿಸಿ ನುಡಿದಳು.
“ಹೀಗೆಯೇ ನಾನು ಸನ್ಯಾಸಿಯಂತೆ ಇರಬೇಕ೦ಬದು ನಿನ್ನ ಮನಸ್ಸೆ?”
“ಯಾಕೆ? ನಿನ್ನ ಹೆಂಡತಿಯನ್ನು ಕರಸಿಕೊ; ಸುಖದಿಂದ ಇರು. ಅವಳೇನು ಕುರುಡೆಯೇ ? ಕುಂಟಿಯೇ? ಏನಾಗಿದೆ? ಕಲಿತು ಪಂಡಿತನಾಗಿರುವೆನೆಂದು ಹೇಳುತ್ತೀ.”
“ಭಾಮಕ್ಕಾ, ನಿನಗಿಂತ ನನಗೆ ಚೆನ್ನಾಗಿ ತಿಳಿಯುತ್ತದೆ. ನಾನು ನಿನ್ನ ಉಪದೇಶ ಕೇಳಲಿಲ್ಲ. ಚಂದ್ರೆಯನ್ನು ಕೊಡಿಸುವಿಯೋ ಇಲ್ಲವೋ ನನಗೆ ಹೇಳಿಬಿಡು.”
“ಕೊಡಿಸುವದು ದೊಡ್ಡ ಮಾತಲ್ಲ ಮಾಧವಾ, ನಿನ್ನ೦ಥವನಿಗೆ ಮಾಲೆ ಹಾಕದೆ ಅವಳು ಮುತ್ತಿನಾರಿಗೆ ಹಾಕುವಳು? ಆದರೆ ಮೈನೆರೆದ ಹುಡುಯನ್ನು ನೀನು ಮದುವೆಯಾದರೆ ಜನರು ನಮ್ಮನ್ನು ಎತ್ತಿ ಇಟ್ಟಾರು; ಕಾಣದೆ?”
“ಏನು ಹೇಳುತ್ತಿ ಬಿಡು, ದುಷ್ಯಂತ, ನಳರಾಜ, ಪರಾಶರ, ಅರ್ಜುನ ಮುಂತಾದ ಮಹಾತ್ಮರು ಮೈನೆರೆದವರನ್ನೇ ಮದುವೆಯಾಗಲಿಲ್ಲೆ?”
“ವ್ಯಾಖ್ಯಾನ ಕಡುವಿರೇನು ಎಮ್. ಎ. ಪಂಡಿತರೆ? ಕೊಡುವದಾದರೆ ಚನ್ನಾಗಿ ಎದ್ದು ನಿಂತು ‘ಮಹಿಲೆಯರೆ, ಸಭ್ಯಗೃಹಸ್ಥರೆ,’ ಎಂದು ಉಪಕ್ರಮಿಸಿ ಗಳಿಗೆ ಎರಡುಗಳಿಗೆ ವ್ಯಾಖ್ಯಾನ ಕೊಡು, ನಿನ್ನ ಪರೀಕ್ಷೆಯಾಗಿ ಹೋಗಲಿ.”
“ಅಂತಃಕರಣದ ಅಕ್ಕನೆಂದು ನಿನ್ನ ಮುಂದೆ ಹೊಟ್ಟೆ ತೋಡಿಕೊಂಡರೆ ಭಾಮಕ್ಕಾ, ನೀನು ನಗೆಯಾಡುವಿಯಾ?” ಎಂದು ಮಾಧವನು ಹೀನಸತ್ವನಾಗಿ ನುಡಿದನು.
“ಅಪ್ಪಾ, ಈ ಮಾತಿನಲ್ಲಿ ನನಗೇನೂ ತಿಳಿಯದು, ಅವರಿಗೆ (ಅವರೆಂದರೆ ಗಂಡ), ಬೇಕಾದಂಥ ಕರ್ತಾಪುರುಷನಾದ ನಿಮ್ಮಣ್ಣನಿದ್ದಾನೆ. ನೀನಾದರೂ ದೊಡ್ಡ ಪರೀಕ್ಷೆ ಕೊಟ್ಟವನು. ಮೂರೂಮ೦ದಿ ಕಲೆತು ಬೇಕಾದನ್ನು ಮಾಡಿರಿ. ಕೊಡಿಸೆಂದರೆ ಕನ್ಯಾ ಕೊಡಿಸಲಿಕ್ಕೆ ನಾನು ಸಿದ್ದಳು.”
ಸಾಯಂಕಾಲಕ್ಕೆ ನಾನೂ ಮಾಧವರಾಯನೂ ಶೇಷಗಿರಿನಾಯಕರು ಕಲೆತು ಬಹಳೊತ್ತು ವಿಚಾರಮಾಡಿದೆವು. ಮಾಧವರಾಯನೆಷ್ಟು ಮಾಡಿದರೂ ತನ್ನ ಹಟ ಬಿಡಲಿಲ್ಲ. ಆಗ ನಾಯಕರು ಅಂದದ್ದು : “ನೋಡಿರಿ ಮಾಧವರಾಯರೆ, ನಿಮ್ಮ ಹಿರಿಯರನ್ನು ಹೇಗಾದರೂ ಮಾಡಿ ಒಡಂಬಡಿಸುವ. ಆದರೆ ಚಂದ್ರಭಾಗೆಯನ್ನು ನೀವು ಚನ್ನಾಗಿ ಇಟ್ಟು ಕೊಂಡು ಸಂಸಾರ ಮಾಡುವದು ನಿಶ್ಚಯವೇ? ಏನು ಮೂರನೆಯದೊಂದು ಹೆಣ್ಣು ಗಂಟುಹಾಕಿರೆಂದು ಹೇಳುವಿರೋ?”
“ನಾನು ಕೇವಲ ಮರ್ಖನೆಂದು ನೀವು ತಿಳಿದು ಹೀಗೆ ಮಾತಾಡುವಿರೇನು ನಾಯಕರೇ?”
“ಕನ್ಯಾ ಮನಸ್ಸಿಗೆ ಬಂದಿರುವದೇನು?”
“ಚಂದ್ರಭಾಗೆಯಂಥ ಸುಂದರಿಯು ಮನಸ್ಸಿಗೆ ಬಂದಳೇನೆಂದು” ಕೇಳ ಬೇಕೆ? ಅವಳಲ್ಲಿ ತೆಗೆಯುವಂಥದೇನೂ ಇಲ್ಲ, ತೊಳೆದ ಮುತ್ತು! ” ಎಂದು ಮಾಧವನು ಮೋರೆ ಹಿಗ್ಗಿಸಿ ಹೇಳಿದನು.
“ಇದಕ್ಕೂ ಇನ್ನೇನು ಹೇಳಬೇಕು ನಾಯಕರೆ? ನಿಮಗೆ ಸಮಾಧಾನವಾಯಿತಷ್ಟೆ?” ಎಂದು ನಾನು ಕೇಳಿದೆನು.
“ವೆಂಕಟರಾಯರೆ, ನೀವು ಕನ್ನೆಯನ್ನು ಚನ್ನಾಗಿ ನೋಡಿರುವಿರಷ್ಟೆ?” ಎಂದು ನಾಯಕರು ನನ್ನನ್ನು ಕೇಳಿದರು.
“ನೋಡಿದಂತಾಗಿದೆ. ಮುಖ್ಯ ಮಾಧವನ ಮನಸ್ಸಿಗೆ ಬಂದಮೇಲೆ ಆಗಿ ಹೋಯಿತು. ಆದರೂ ಕರಿಸಿರಿ, ಇನ್ನೊಮ್ಮೆ ನೋಡೋಣ.”
“ಯಾರು! ಗುಂಡಕ್ಕನನ್ನು ಹೀಗೆ ಕರೆದುಕೊಂಡು ಬರಬಾರದೆ! ಎಂದು ನಾಯಕರು ತಮ್ಮ ಹೆಂಡತಿಗೆ ಹೇಳಿದರು.
ಗುಂಡಕ್ಕನೆಂಬ ಹೆಸರು ಕೇಳಿದಾಕ್ಷಣವೇ ನಾನು ಚಕಿತನಾದೆನು. ಮಾಧವನ ಮೋತಿಯಂತೂ ಹುಚ್ಚಿಟ್ಟಿತು. “ಗುಂಡಕ್ಕನಾರು?” ಎಂದು ನಾನು ಕೇಳಿದೆನು.
“ಮತ್ತಾವ ಗುಂಡಕ್ಕ? ನಿಮ್ಮ ಅನುಜರ ಪ್ರೀತಿಯ ಹೆಂಡತಿಯೇ ಅವಳು. ಈಗ ವಿನೋದಕ್ಕಾಗಿ ಚಂದ್ರಭಾಗಾ ಎಂಬ ಹೆಸರಿಟ್ಟುಕೊಂಡಿದ್ದಾಳೆ,” ಎಂದು ನಾಯಕರು ಗಹಗಹಿಸಿ ನಗುತ್ತ ನುಡಿದರು.
ಭಾಮಕ್ಕನು ಗುಂಡಕ್ಕನನ್ನು (ನಮ್ಮ ಮನೆಯ ಹೆಸರು ಲಲಿತಾ) ಕರಕೊಂಡು ಬಂದು ನಮ್ಮೆಲ್ಲರಿಗೂ ನಮಸ್ಕಾರ ಮಾಡ ಹೇಳಿದಳು.
ಆ ದಿವಸ ನಮಗೆಲ್ಲರಿಗೂ ಮಿತಿಮೀರಿದ ಆನಂದವಾಯಿತು. ಹಿರಿಯರ ಎದೆಯ ಮೇಲಿದ್ದ ದೊಡ್ಡ ಕಲ್ಲು ಇಳಿದಂತಾಗಿ ಅವರು ಸಮಾಧಾನದ ಉಸುರ್ಗರೆದರು. ಬೆಂಗಳೂರಲ್ಲಿಯೇ ಫಲಶೋಭನದ ಪ್ರಸ್ತವಾಗತಕ್ಕದ್ದು. ಸುಬ್ಬರಾಯರಿಗೆ ತಾರು ಕಳಿಸಿದ್ದೇವೆ. ಮುಹೂರ್ತವು ಅನಾಯಸವಾಗಿ ನಾಳಿನ ಇ೦ಗ್ರಜೀ -‘ನ್ಯೂ ಇಯರ್ಸ ಡೇ’ ದ ದಿವಸ ಹೊರಟದೆ. ಸಂಪಾದಕರೆ, ಈ ಮಹೋತ್ಸವದ ದಿವಸವೇ ನೀವಾದರೂ ನಿಮ್ಮ ಡಿಸೆಂಬರದ ಸಂಚಿಕೆಯನ್ನು ಹೊರಡಿಸಿದರೆ ಬಹಳ ಒಳ್ಳೇದಾಗುವದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೨
Next post ಕಣ್ಣೋಟವೋ ಚೆಲ್ಲಾಟವೋ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys