“ಸಿಲಿಕಾನ್ ಸುಂದರಿ ಬೆಂಗಳೂರು”… “ಗಾರ್ಡನ್ ಸಿಟಿ ಬೆಂಗಳೂರು”… “ಐಟಿ ಕಿಂಗ್ಡಂ ಬೆಂಗಳೂರು”.. ಅಂತ ಸನಾದಿ ಊದಿದ್ದೇ ಊದಿದ್ದು!

ಉತ್ತರ ಕರ್ನಾಟಕದ ದಡ್ಡನಾದ ನನಗೆ ಇತ್ತೀಚೆಗೆ ಗೊತ್ತಾದ ಬೆಂಗಳೂರಿನ ಮಹಾ ಮಹಿಮೆ ಎಂದರೆ… “ಸಕ್ಕರೆ ರೋಗದ ಅಕ್ಕರೆಯ ರಾಜಧಾನಿ ಬೆಂಗಳೂರು…” “ಬ್ಲಡ್ ಪ್ರೆಶರಿನ ಫ್ಲಡ್ಡು ಬೆಂಗಳೂರು…” ಇತ್ಯಾದಿ… ಇತ್ಯಾದಿ! ಅಸಲಿ ಬೆಂಗಳೂರಿನವರ ಬಗ್ಗೆ… “ಬೆಲ್ಲದಂಗ ಸೀ ಮಾತಾಡಿ ಕಹಿ ಕಾಫಿ ಕೊಡುವ ಚುರುಕು ಮಂದಿ” ಅಂತ ನಮ್ಮವರು ಧೀಡ ಧಿಮಾಕಿನ ಮಾತು!

“ರಾಗಿ ಉಂಡರೆ ರೋಗ ಇಲ್ಲ”… “ಅಕ್ಕಿ ಉಂಡವ ಹಕ್ಕಿ”.. “ಜ್ವಾಲಾ ಉಂಡವ ತ್ವಾಳಾ…” …ಇದು ಕರ್ನಾಟಕದ ಜಾನಪದ ವಿಜ್ಞಾನಿಗಳು ಕಂಡುಕೊಂಡ ಚಾರಿತ್ರಿಕ ಸತ್ಯ.

ಅಕ್ಕಿ ಉಂಡವ ಹಕ್ಕಿ… ಅಂದರೆ ಬಹುಶಃ ಆತ ಹಕ್ಕಿಯಂತೆ ಹಗುರವಾಗಿ ಹಾರಿ ಹೋಗುತ್ತಾನೆ… ಹರನ ಲೋಕಕ್ಕೆ! ನಾನು ಸಣ್ಣವನಿದ್ದಾಗ ಕುಟ್ಟಿದ ಅಕ್ಕಿ, ಇಲ್ಲವೆ ವನಿಕೆಯಿಂದ ಥಳಿಸಿದ ಕೆಂಪು ಅಕ್ಕಿ ಉಣ್ಣುತ್ತಿದ್ದವು. ಅದೂ ಕೂಡ ಅಕ್ಕಿಯ ಊಟ ಹುಣ್ಣಿಮೆ ಅಮವಾಸಿ ಹಬ್ಬದ ದಿನ ಮಾತ್ರ! ಕರ್ನಾಟಕದ ಒಳಗೆ ಹೊರಗೆ ಹುಚ ನಾಯಿಗಳಂತೆ ನೀರಾವರಿ ಡ್ಯಾಮುಗಳು ಆದನಂತರ ಕರ್ನಾಟಕದ ಜನತೆ ತಮ್ಮ ಬಹುಕಾಲದ ಆಹಾರ ಪದ್ಧತಿಯಾದ…ರಾಗಿ… ನವಣೆ… ಸಜ್ಜಿ… ಬರಗದ ಅನ್ನ… ಶ್ಯಾವಿ ಅನ್ನ… ಇವುಗಳನ್ನು ಬಿಟ್ಟುಕೊಟ್ಟು, ಕೋಮಲ ಸುಂದರಿಯಾದ ಥಳ ಥಳ ಥಳಿಸಿದ ರೈಸ್ ಗೆ ಗಂಟುಬಿದ್ದರು. ಇಂಥ ಪಾಲಿಶ್ ಮಾಡಿದ ಅಕ್ಕಿಗೆ ಪರಿಸರ ವಿಜ್ಞಾನಿಗಳು ವ್ಹಾಯಿಟ್ ಪಾಯಿಜನ್ ಬಿಳಿ ವಿಷ… ಅಂತ ಹೆಸರಿಟ್ಟರು ಬಿಡುವವರಾರು? ಜೊತೆ ಜೊತೆಗೆ ಮಾದಕ ಸುಂದರಿ ಯಾದ ಮೈದಾದೇವಿ ಪುರಿ ರೂಪದಿಂದ ನಮ್ಮ ಕಿಚನ್ನು ಪ್ರವೇಶಿಸಿದಳು. ನಾವು ಉಣ್ಣುತ್ತಿದ್ದ… ಬಯಲು ಸೀಮೆಯ ಬಡವನ ತುಪ್ಪವಾದ… ಕುಸುಬಿ ಎಣ್ಣೆಯನ್ನು ಕಾಲಕಸ ಮಾಡಿ, ಪಾಮ್ ಆಯಿಲ್, ಸನ್‍ಫ್ಲವರ್ ಆಯಿಲ್ ಸನ್‍ಸೆಟ್ ಆಯಿಲ್ಲುಗಳು ಬಿಡಾಡಿ ದನಗಳಂತೆ ಬಂದುಬಿಟ್ಟವು!

ಬೆಂಗಳೂರಿನ ಒಬ್ಬ ಆಗರ್ಭ ಶ್ರೀಮಂತರು ನನ್ನನ್ನು ಹಬ್ಬದ ಊಟಕ್ಕೆ ಅತ್ಯಂತ ಪ್ರೀತಿಯಿಂದ ಆಮಂತ್ರಿಸಿದರು. ನಮ್ಮಲ್ಲಿ ಹಬ್ಬದ ಊಟ ಅಂದರೆ ಗೋಧಿ ಹುಗ್ಗಿ, ವಾಡಿ, ಹೋಳಿಗೆ, ಕರಿಗಡಬು, ಇಂಥವು ಇರಲೇಬೇಕು. ಅದಕ್ಕಾಗಿ ಪೂರ್ವಸಿದ್ದತೆ ಯೆಂದು ಹಿಂದಿನ ರಾತ್ರಿಯ ಉಪವಾಸ ಮಾಡಿ… (ಹೆಚ್ಚು ಕೂಳು ತಿನ್ನುವ ತಾಯಾರಿ)… ಅವರ ಮನೆಗೆ ಊಟಕ್ಕೆ ಹೋದೆ. ಮೊದಲು ಅವರು ಅನ್ನ ಮೊಸರು ನೀಡಿದರು. ಉಂಡೆ. ನಂತರ ಅನ್ನ ಮಜ್ಜಿಗೆ ಸಾರು ನೀಡಿದರು. ಉಂಡೆ. ನಂತರ… ಮುಸುರಿ ಆನ್ನ. ಅಲ್ಲಲ್ಲ ಕಲಸನ್ನ…. ಅಂದರೆ ಘೀರೈಸ್ ಹಾಕಿದರು. ಗಬಗಬ ತಿಂದೆ. ಆನಂತರ ಅನ್ನ ಸಾಂಬಾರು ಹಾಕಿದರು. ಅದನ್ನೂ ಉಂಡೆ, ಇದು ಉಂಡಮೇಲಾದರೂ ಹೋಳಿಗೆ, ಕಡುಬು, ಮಾದ್ಲಿ ಗೋಧಿ ಹುಗ್ಗಿ ಬರುತ್ತದೆಯೋ ಎಂದು ಕಾಗಿಯಂತೆ ವಕಾವಕಾ ಬಾಯಿಬಿಟ್ಟು ನೋಡಿದೆ. ಮತ್ತೆ ಅದೆಂಥದೋ ರಾಡಿ ಅನ್ನ….. ಬಿಸಿಬೇಳೆ ಬಾತ್…. ಹಾಕಿದರು. ಬಕ್ಕರಿಸಿದೆ. ಅದರ ನಂತರ ಬಂದದ್ದು, ಅಂಗಡಿಯಿಂದ ತಂದ ಪಾಕೆಟ್ ಸಾವಿಗೆ ಪಾಯಸ… ಒಂದು ತೊಲಿ ಭಾರದ ಸಣ್ಣ ಬಟ್ಟಲಲ್ಲಿ ತಂದು ಇಟ್ಟರು. ಅದರಲ್ಲಿ ಒಂದು ಚಮಚ ಇಟ್ಟಿದ್ದರು! ಅಯ್ಯಯ್ಯೋ.. ಅಂದೆ!

ನಮ್ಮಲ್ಲಾದರೆ ಮನೆಯಲ್ಲಿಯೇ ಹೊಸೆದ ಜವಾರಿ ಗೋದಿ ಶಾವಿಗೆ ಹುಗ್ಗಿ ಉಂಡ ನನಗೆ ಇದು ಯಾವ ಲೆಕ್ಕ? ಸ್ಯಾವಿಗೆ ಹುಗ್ಗಿ… ಗೋಧಿ ಹುಗ್ಗಿ…. ಉಣ್ಣುವ ಮೆಥಡ್ ನಮ್ಮಲ್ಲಿ ಹೀಗಲ್ಲ. ಗಂಗಾಳ ತುಂಬಾ ಹುಗ್ಗಿ ಹಾಕಿ… ಅದರಲ್ಲಿ ಅಂಗೈದಪ್ಪ ಕೆನೆಹಾಲು… ಗಮಗಮಾ ತುಪ್ಪ ಸುರವಿ.. ಕೈ ಸುಟ್ಟರೂ ಪರವಾಗಿಲ್ಲ ಕೈಯಿಂದಲೇ ಕಲಸಿ… ಗಟಗಟ ಪಟಾಯಿಸುವುದು ನಮ್ಮ ಊಟ ಪದ್ಧತಿ. ನಮ್ಮವರಿಗೆ ಚಮಚ ಇಟ್ಟು ಪಾಯಸ ಕೊಟ್ಟರೆ.. ಕೋಪದಿಂದ.. ಆ ಚಮಚೆಯನ್ನೇ ತಿಂದುಬಿಟ್ಟಾರು!

ನನ್ನ ತಾಯಿಗೆ ತೊಂಬತ್ತು ವರ್ಷ. ಈಗಲೂ ಹೊಲಕ್ಕೆ ಹೋಗುತ್ತಾಳೆ, ನನ್ನ ಮಾವ ಶರೀರ ಬಿಟ್ಟಾಗ ನೂರ ಐದು ವರ್ಷದ! ಕೊನೆ ತನಕ ದಿನಕ್ಕೆ ಎರಡು ಹೊತ್ತು ಗಡದ್ದಾಗಿ ಊಟ ಮಾಡಿದ. ಅವನ ಕಣ್ಣು ಕೊಡಲಿಲ್ಲ. ಚಾಳೀಸು ಬರಲಿಲ್ಲ. ಕಿವಿ ಕೆಡಲಿಲ್ಲ. ಒಂದೇ ಒಂದುಪುಡಿಕಾಸು ಜಡ್ಡು ಅವನಿಗಿರಲಿಲ್ಲ. ಬ್ಲಡ್ ಪ್ರೆಶರ್… ಸಕ್ಕರಿ ರೋಗ… ಅವನ ಹಳ್ಳಿ ಸುತ್ತಮುತ್ತ ಹತ್ತು ಹರದಾರಿ ಸಮೀಪ ಸುಳಿಯಲಿಲ್ಲ.

ಆತನ ಒಂದು ಶತಮಾನದ ಊಟದ ಪದ್ದತಿ ಎಂದರೆ…. ಬಿಸಿ ಬಿಸಿ ಜೋಳದ ಕೈ ರೊಟ್ಟಿ… ಪುಂಡಿ ಪಲ್ಲೆ… ಮಂಡಕ್ಕಿ ಉಸುಳಿ… ಕಡ್ಲಿಕಾಳ ಪಲ್ಲೆ… ಹುಳ್ಳಿಗುಗ್ಗರಿ… ಹೊಲದಿಂದ ತಾಜಾ ತಂದ ಬದನೆಕಾಯಿ, ಬೆಂಡೆಕಾಯಿ, ಚವಳಿಕಾಯಿ, ಮೆಕ್ಕೀಕಾಯಿ, ಕಾರ್‍ಚಿಕಾಯಿ ಪಲ್ಲೆ, ಚಪ್ಪರ ಕಾಯಿ ಚಟ್ನಿ, ಕೆಂಪುಖಾರದ ಬಳ್ಳೂಳ್ಳಿ ಹಿಂಡಿ, ಮೇಲೆ ಬಾಯಾಡಿಸಲು ಹಕ್ಕರಕಿ ತೊಪ್ಪಲುಳ್ಳಾಗಡ್ಡಿ, ಮೆಂತೆ, ಮೂಲಂಗಿ, ಗಜ್ರಿ, ಎಳೆಸವುತೆ ಕಾಯಿ, ಊಟದ ಕಡೇಝಡತಿಯಾಗಿ ಜೋಳದ ನುಚ್ಚಿನ ಅನ್ನ.. ಇಡಿಗಿಚಡಿ!

ಉಡುಪಿ ಹೋಟೆಲುಗಳ ಪ್ರದೇಶದೊಂದಿಗೆ ನಮ್ಮ ಬಾಳಿಗೆ ಇಡ್ಲಿ ದೋಸೆಗಳ ಪ್ರಪ್ರಥಮ ರಾಕ್ಷಸಿಯರ ಪ್ರವೇಶವಾಯಿತು. ಕನ್ನಂಬಾಡಿ ಅಣೆಕಟ್ಟು ಬಂದನಂತರ ಈ ಭಾಗ ಜಿಲ್ಲೆಯವರು ಮೆಲ್ಲನೇ ರಾಗಿಮುದ್ದೆಯ ಕರೇಪೆದ್ದಿಗೆ ಕೈಕೊಟ್ಟು, ಕಣ್ಣು ಕುಕ್ಕುವ ಅಕ್ಕಿ ಅನ್ನದ ಬಿಳೇ ಹೆಣ್ಣಿನ ಕೈ ಹಿಡಿದರು. ವೆಸ್ಟರ್ನ್ ಸಿಸ್ಟಂ ಹೋಟಲ ಭೂತಗಳು ಮೊದಲು ಮುಂಬೈಗೆ ಬಂದು ನಂತರ ಬೆಂಗಳೂರಿನಲ್ಲಿ ಟಿಕಾಣೆ ಹೂಡಿದ ನಂತರ… ಆಧುನಿಕ ಪ್ಯಾಕ್ಟರಿ ಎಣ್ಣೆ, ಪ್ಯಾಕೆಟ್ ಹಿಟ್ಟು ಪ್ಯಾಕ್ಡ್‍ಫುಡ್ಡು ಕಮರ್ಷಿಯಲ್ ಈಟೇಬಲ್ಲುಗಳು ಬೇಕರಿ ಫುಡ್ಡುಗಳು ಮಾರುಕಟ್ಟೆಗೆ ನುಗ್ಗಿ ಬಂದವು. ಈ ಹಂತದಲ್ಲಿ ನವೋತ್ಕೃಷ್ಟ ಹೈಬ್ರಿಡ್ ಸೋಗಲಾಡಿಯರ ಸರ್ಧಾತ್ಮಕ ಸೋಬಾನ ಕೇಳಿಬಂತು. ಈ ಎಲ್ಲಾ ನವನವೀನ ಆಹಾರ ಪದಾರ್ಥಗಳಿಗೆ ಹಾಗೂ ತಿಂಡಿಗಳಿಗೆ ಕನ್ನಡದ ಹೆಸರು ಇಲ್ಲ. ಕನ್ನಡ ಅಂದರೆ ಕಡಿಮೆ ರೇಟು! ತಂಬಿಟ್ಟುಂಡಿ, ಕರದಂಟು, ಕಾಯಿ ಸ್ಯಾಂಡಿಗಿ, ಹರಕ ಹುಗ್ಗಿ, ಹುರಕ್ಕಿ ಹೋಳ್ಗಿ, ಹುಚ್ಚೆಳ್ಳ ಹಿಂಡಿ, ಸವತೀ ಬೀಜದ ಹುಗ್ಗಿ ತರಹ! ಹಿಂದಿ ಹೆಸರು ಇಂಗ್ಲೀಷ ಹೆಸರು ಹೊತ್ತ ಈ ಪರದೇಶ ಸುಂದರಿಯರ ಪ್ರವೇಶದಿಂದ ನಮ್ಮ ಆಹಾರ ಪದ್ಧತಿ ತಳಭ್ರಷ್ಟವಾಯಿತು. ಜೊತೆಗೆ ನಮ್ಮ ಮಾರುಕಟ್ಟೆಯ ಮಾಯಾವಿಗಳು ನಿತ್ಯ ಹೊಸ ಹೊಸ ಬಗೆಯ ಮಸಾಲೆ ಪುಡಿಗಳನ್ನು ಹಾಗೂ ಅಸಂಖ್ಯ ಪ್ಯಾಕ್ಡ್ ಫುಡ್ಡುಗಳ ಬಣ್ಣ ಬಣ್ಣದ ರಟ್ಟಿನ ಡಬ್ಬಿಗಳನ್ನು ತಂದು, ನಮ್ಮ ಹೊಟ್ಟೆಯಲ್ಲಿ ತುರುಕತೊಡಗಿದರು. ಈ ಪಂಚತಾರಾ ಸಂಸ್ಕೃತಿಯ ಘಮಘಮಾಯಿಸುವ ಊಟವೆಂದರೆ ಮಿಸ್ ಯುನಿವರ್ಸಳ ಕೂಡ ಲವ್ ಮಾಡಿದಂತೆ. ಇಲ್ಲಿ ಸಂಭೋಗಕ್ಕಿಂತ ಸೋಗಲಾಡಿತನವೇ ಹೆಚ್ಚು. ಪ್ರೇಮಕ್ಕಿಂತ ಲವ್ವಿನ ನಾಟಕವೇ ಹೆಚ್ಚು.

ಈ ಇಲಾಯತಿ ತಿನಿಸುಗಳ ಕೋಟಿ ಕೋಟಿ ಬಣ್ಣ ಬೆಡಗು ರುಚಿಗಳ ಜೊತೆಗೆ, ಆ ಹೋಟೆಲ್ಲುಗಳಲ್ಲಿ ಆ ಸುಂದರ ಟೇಬಲ್ಲುಗಳು, ಆ ಪ್ಲೇಟುಗಳು, ಆ ಸರ್‍ವರ್‍ಗಳು, ಆ ಬೆಳಕು, ಆ ಕ್ಯಾಸೆಟ್‍ನಾದ, ನಮ್ಮ ಅಕ್ಕಪಕ್ಕದಲ್ಲಿ ಕುರ್ಚಿಗೆ ಕುಂಡಿಯೊತ್ತಿ ಕೂಡುವ ಆ ಟನ್‍ಗಾತ್ರದ ಟೊಂಕವುಳ್ಳ ನಾರಿಯರು.. ಆಹಾ… ಆಹಾ… ಇಂಥವರ ಮಧ್ಯದಲ್ಲಿ ಆ ಹಳೆ ಕಾಲದ ರೊಟ್ಟಿಯನ್ನು ನೆನಪು ಮಾಡಿದರೂ ನಾವು ಬ್ಯಾಕ್ವರ್ಡ್ ಲೋಕ್ಲಾಸ್ ಆನ್ ಸಿವ್ಹಿಲಾಯಿಜ್ಡ… ಹಳ್ಳಿಗುಗ್ಗೂ ಆಗಿಬಿಡುತ್ತೇವೆ!

ನೀವು ಮಾಂಸದ ಪರ್ವತಗಳನ್ನು ಪ್ರತ್ಯಕ್ಷ ದರ್ಶನ ಮಾಡಬೇಕೆಂದರೆ ಬೃಹನ್ಮಹಾನಗರಗಳ ಐಷಾರಾಮಿ ಹೋಟುಗಳಲ್ಲಿ ಕೂಳು ಬಕ್ಕರಿಸುವ ಸೊಗಸಿನ ಸುಂದರಿಯನ್ನು ನೋಡಬೇಕು! ಜೀವನ ಪಾವನ! ಇವರಿಗೆ ನಿರುದ್ಯೋಗವೇ ಉದ್ಯೋಗ. ನಿರಂತರ ಅಪರಿಶ್ರಮವೇ ಶ್ರಮ, ಯಾರದೋ ಬೆವರು… ಯಾರದೋ ಕವರು. ಈ ಮಾಂಸ ಪರ್ವತಗಳ ಒಳಗೆ ಎಷ್ಟು ರೋಗ ಸರೋವರಗಳಿವೆಯೋ ಯಾರು ಬಲ್ಲರು?

ನನ್ನ ಹೇಂತಿಯ ಹೆಣ್ಣಮ್ಮ ನೂರಾಐದು ವರ್ಷಕ್ಕೆ ಸತ್ತರೂ ಅವಳ ಕೂದಲು ಇನ್ನೂ ಕರೇಹಂಚಾಗಿದ್ದವು. ಅವಳ ಹುಟ್ಟಾ ಎಣ್ಣೆ ಹಚ್ಚಲಿಲ್ಲ. ಚಳಿ, ಮಳೆ, ಗಾಳಿ ಬಿಸಿಲುಗಳಲ್ಲಿ ಹೊಲದಲ್ಲಿ ಹಗಲು ಪಿಶಾಚಿಯಾಗಿ ದುಡಿದಳು. ಸತ್ತಾಗಲೂ ಅವಳ ಹತ್ತಿರ ಜಡ್ಡು ಸುಳಿಯಲಿಲ್ಲ. ಮಾತಾಡುತ್ತಲೇ ಮೇಲಕ್ಕೆ ವಾಕಿಂಗ್ ಹೋದಂತೆ ಹೋಗಿಬಿಟ್ಟಳು.

ಆ ನಮ್ಮ ಕಾಲ… ಗರಡಿ ಮನೆಯ ಗಂಡು ಕರಡಿಗಳ ಕಾಲ..! ಇಂದಿನ ಕಾಲ… ಕ್ರಿಕೆಟ್ ವೀರರ ಮ್ಯಾಚ್ ಫಿಕ್ಸಿಂಗ್ ಚಾಂಪಿಯನ್ನರ ಕಾಲ!!

ಅಯ್ಯೋ… ಆ ನಮ್ಮ ಪ್ರೀತಿಯ ತಂಗಳ ರೊಟ್ಟಿ… ಹುಳಪಲ್ಲೆ… ಖಡಗಾಯಿ… ಚಕ್ಕುಂಡಿ… ಖಿಚಡಿ… ಚಪ್ರಕಾಯಿ ಚಟ್ನಿ… ಬದ್ನೀಕಾಯಿ ಭರತಾ… ಜುಣುಕಾ… ಕೆಂಪಿಂಡಿ… ಕರಿಂಡಿ… ಹುಳ್ಳಾನುಚ್ಚು, ಕಾರಬ್ಯಾಳಿ… ನುಚಗೋಳಿ ಸಾರು… ಕುಸುಬಿ ಪಲ್ಲೆ… ಅನ್ನಿಪಲ್ಲೆ… ಹರೀಪಲ್ಲೆ…. ಬೆಂಡಿಕಾಯಿಲೊಡಗಾ… ಹುಂಚಿ ಟಕ್ಕು… ಹರಕ ಹುಗ್ಗಿ… ಗುಳ್ಳಡಕಿ ಉಂಡೆ… ಗದುಗಿನ ಹುಗ್ಗಿ… ರೊಟ್ಟಿ ಸ್ಯಾಂಡಿಗಿ… ಕವಳಿ ಕಾಯಿ, ಉಪ್ಪಿನಕಾಯಿ…ಎತ್ತ ಹೋದವು?

ಬೆಂಗಳೂರಿನ ಈ ಭುವನಸುಂದರಿ… ವಿಶ್ವಸುಂದರಿ ಫ್ರೆಂಡಶಿಪ್ ಆದ ಮೇಲೆ ಆ ಹಳೆ ದುಗ್ಗಾಣಿ ಹಳ್ಳಿಯ ಹುಡುಗಿಯರು ನನಗೇಕೆ ಬೇಕು? ಬ್ಲಡ್ ಪ್ರೆಶರ್ ಇದ್ದರೂ ಇರಲಿ… ಸಕ್ಕರೆ ರೋಗ ಬಂದರೂ ಬರಲಿ… ಶಿವನೇ…. ನನಗಿರಲಿ ಬೆಂಗ್ಳೂರ ಹುಡುಗಿ!
*****