ನಿನ್ನೆ ರಾತ್ರಿ
ನಿನ್ನ ಮೇಲೆ ಸಿಟ್ಟು ಬಂದು
ರಾತ್ರಿಯನ್ನೆಲ್ಲ ಬಳಿದು
ಸವರಿ ಒಂದು ಶೀಷೆಗೆ ಹಾಕಿಟ್ಟಿದ್ದೇನೆ.
ಇನ್ನು ಮೇಲೆ ಸದಾ ಬರೀ ಬೆಳಕೇ ಇರುತ್ತೆ,
ನೀನು ಬಚ್ಚಿಟ್ಟುಕೊಳ್ಳುವುದಕ್ಕೆ ಕೂಡಾ
ಒಂದು ಚೂರೂ ಕತ್ತಲು ಸಿಗಲ್ಲ.
ನೀನು ತತ್ತರಿಸಬೇಕು,
ಹೆದರಿಕೊಂಡು ನನ್ನ ಕೋಣೆಗೆ ಬಂದು
ನನ್ನ ಕ್ಷಮೆ ಕೇಳಬೇಕು.
ಆಮೇಲೆ ರಾತ್ರಿಯನ್ನು ನಾನು ಹೊರಕ್ಕೆ
ಕೊಡವಿ ಬಿಟ್ಟಾಗ
ಅದನ್ನು ನೀನು ನನ್ನ ಜೊತೆಯಲ್ಲಿ ಕಳೆದು
ಮತ್ತೆ ಮಾಮೂಲಾಗಬೇಕು.
*****