ಎಡವೂರ ತಳದಲ್ಲಿ ಏನೇನ ಶಡಗರ
ಎಡಕ ನಂದೀಕೋಲ ಬಲಕ ಪಲ್ಲಕಿ ಪಂಕ
ಶಡಗರದ ಛತ್ತರಕಿ ಎಡಬಲ ಬತಾಗೀರಿ
ಹಾರೂವ ಹೂಬಾಣ ಹೊಬತ್ತಿ ಕಂಡಿಽರಿ
ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ
ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿನಮಂಗಳ ||೧||
ಹಣಿಯ ಮ್ಯಾಲಿನ ಗಂಧ ಗಿಣಿರಾಮ ಕುಂತಂಗ
ಕರಿಯ ಕುಂದಲದ್ಹರಳ ಕಿವಿಯಾಗ ಇಟ್ಟಾನ
ಏಸೊಂದು ಶೃಂಗಾರ ಎಡಗೈಲಿ ಹಿಡದಾನ
ಪರವೂತ ಗಿರಿಗುಡ್ಡ ಬಲಗೈಲಿ ಹಿಡದಾನ
ಚಳ್ಳುಂಗ್ರ ಚಿಮ್ಮೂತ ಕ್ವಾರ್‍ಮೀಸಿ ತಿದ್ದೂತ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿವಮಂಗಳ ||೨||
ಬಿಳಿಯಂಗಿ ತೊಟ್ಟಾನ ಬಿಗದುಟ್ಟು ನಿಂತಾನ
ಸರಗಂಟಿ ಸರಮಾಲಿ ಕೊರಳೀಗಿ ಹಾಕ್ಯಾನ
ಏಸೊಂದು ರುದ್ರಾಕ್ಷಿ ಸ್ವಾಮಿ ತಾ ಧರಸ್ಯಾನ
ಪಡವಽಲ ದಿಕ್ಕಿಽಗಿ ಒಡೆಯ ತಾ ನೆನೆದಾನ
ತುಂಗಬದ್ರಿ ಕಾಳಿ ಬಾಗಿಽಲ ತೆರೆಯಂದ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿನಮಂಗಳ ||೩||
ಮಂಗಳಾರಽ ದಿನ ವೀರ ನಿನ್ನೋಲಗೆ
ಚಿಟ್ಟಿ ಚಿಣಗೀ ಹೂವ ದುಂಡಮಲ್ಲಿಗಿ ಹೂವ
ಕೊಂಡಾಡೊ ದಾಸ್ಯಾಳ ಮಂಡ್ಲೇಸೂರದ್ಹೂವ
ಏಳ ಸಮದುರದಾನ ಪಾರಿಽಜಾತದ ಹೂವ
ಕಂಚಿಽಯ ಈ ಮಗ್ಗಿ ಕಮಳದ ಈ ಮಗ್ಗಿ
ಖ್ಯಾದಿಽಗಿ ಹೊಡಿ ನೂರು ಖ್ಯಾದಿಽಗಿ ಗರಿ ನೂರು
ಎಲ್ಲಽಕ ಹೆಚ್ಚಿಂದು ಬೆಲ್ಲಪತ್ತುರಿ ನೂರು
ಕರಕಿಽಯ ಪತ್ತೂಽರಿ ಕರಿಯ ತುಂಬೀ ಹೂವ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮುಂಗಳಽ ನಿತ್ಯ ಶಿನಮಂಗಳ ||೪||
ಹೆಗ್ಗಾಳಿ ಚಿನಕಾಳಿ ದೊಡ್ಡ ರಂಗಿನ ಕಾಳಿ
ಊದುಽಸು ನೆಽಪೇರಿ ಬಾರಿಸು ನಗಾರಿ
ಆಡು ಪಾತರ ಮ್ಯಾಳ ಗುಡಿಮುಂದ ಕಂಡಿಽರಿ
ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ
ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿವಮಂಗಳ ||೫||
*****