ಗನ್ನು ನಿಮ್ಮದು ಪೆನ್ನು ನಮ್ಮದು
ನಡೆದಿದೆ ಹೋರಾಟ
ಮುಖವಿರುವವರ ಮುಖವಿರದವರ
ನಡುವಿನ ಹೋರಾಟ //ಪ//

ಬುಲೆಟ್ಟು ನಿಮ್ಮದು ಬ್ಯಾಲೆಟ್ಟು ನಮ್ಮದು
ನಡೆದಿದೆ ಹೋರಾಟ
ಕತ್ತಲೆ ಮುಖಗಳ ಬೆಳಕಿನ ಕುಡಿಗಳ
ನಡುವಿನ ಹೋರಾಟ

ಭ್ರಾಂತಿ ನಿಮ್ಮದು ಕ್ರಾಂತಿ ನಮ್ಮದು
ನಡೆದಿದೆ ಹೋರಾಟ
ನೆತ್ತರ ಕೈಗಳ ಅಕ್ಷರ ಕೈಗಳ
ನಡುವಿನ ಹೋರಾಟ

ಮೌನ ನಿಮ್ಮದು ಮಾತು ನಮ್ಮದು
ನಡೆದಿದೆ ಹೋರಾಟ
ಗುಂಡಿಗೆ ಇರುವ ಅದು ಇರದವರ
ನಡುವಿನ ಹೋರಾಟ

ದಮನ ನಿಮ್ಮದು ಕದನ ನಮ್ಮದು
ನಡೆದಿದೆ ಹೋರಾಟ
ವಿಳಾಸದವರ ವಿಲಾಸದವರ
ನಡುವಿನ ಹೋರಾಟ
*****