ವೈದ್ಯರ ಒಗ್ಗರಣೆ

ವೈದ್ಯರ ಒಗ್ಗರಣೆ

ವಲ್ಲಭಾಚಾರ್ಯರು ೧೮೬೨ರಲ್ಲ ಕಮಲಪುರದ ಅಮಲ್ದಾರರಾಗಿದ್ದರು. ಆ ಕಾಲದಲ್ಲಿ ಜನಗಳಿಗೆ ಕುಂಪಣಿ ಸರಕಾರದಲ್ಲಿ ಹುದ್ದೆ ದೊರಕುವುದಕ್ಕೆ ಅಷ್ಟೊಂದು ತೊಂದರ ಇರಲಿಲ್ಲ. ಜನಗಳಲ್ಲಿ ಸಾಕಷ್ಟು ಅನುಕೂಲತೆ ಇದ್ದಿತ್ತು; ಹೊಟ್ಟೆ ತುಂಬಾ ಉಂಡು ಕೂತುಕೊಳ್ಳಬಹುದಾದಷ್ಟು ಇದ್ದಿತ್ತು. ಸರಕಾರಿ ಹುದ್ದಗಳಿಗೋಸ್ಕರ ಮೇಲಾಟ ಇರಲಿಲ್ಲ. ಪೇಚಾಟ ಇರಲಿಲ್ಲ. ಇಂದಿನಂತೆ ಅನೇಕ ಪರೀಕ್ಷೆಗಳೂ ಇರಲಿಲ್ಲ. ಒಂದು ಬಹಿರಂಗ ಪರೀಕ್ಷೆ; ಒಂದು ಅಂತರಂಗ ಪರೀಕ್ಷೆ- ಇಷ್ಟೆ. ವಲ್ಲಭಾಚಾರ್ಯರು ಬಹಿರಂಗ ಪರೀಕ್ಷೆಯನ್ನು ತೇಲಿದ್ದರು. ಕಲೆಕ್ಟರ್ ರೋರಿಂಗ್ ದೂರಗಳು ಇವರ ಅಂಗವನ್ನು ತಾನೇ ಸ್ವತಃ ನೋಡಿದ್ದರು. ಇವರ ಸ್ಥೂಲ ದೇಹ: ಗೋಷ್ಪದ ಕೇಶ, ದೀರ್ಘ ನಾಮ, ಕರ್ಣ ತುಳಸಿ, ಗಂಧಲೇಪನ, ಲಂಬೋದರ – ಇವೇ ಅಮಲ್ದಾರ್ ಹುದ್ದೆಯ ಮುಖ್ಯ ಲಕ್ಷಣಗಳಾಗಿದ್ದುವು. ರೋರಿಂಗ್ ದೊರೆಗಳು ಸಂಸ್ಕೃತ ಭಾಷಾಪ್ರಿಯರು, ದೇಶೀಯರ ಪ್ರಸನ್ನರು. ವಲ್ಲಭಾಚಾರ್ಯರು ಸಂಸ್ಕೃತ ಭಾಷಾಭಿಜ್ಞರೆಂದು ಕಲೆಕ್ಟರ್ ದೊರೆಗಳ ತಿಳುವಳಿಕೆಗೆ ಹೇಗೋ ಬಂದಿತ್ತು. ಆಚಾರ್ಯರು ಚತುರ್ವೇದಗಳ ಸಂಗ್ರಹ ಮಾಡಿ ಇಟ್ಟಿದ್ದರು. ಭಾರತರಾಮಾಯಣಗಳ ಕಥಾಭಾಗವನ್ನು ಬಾಲ್ಯದಲ್ಲಿಯೇ ಕೇಳಿದ್ದರು. ಹಾಗೂ ಸಂಸ್ಕೃತ ಸಂಧ್ಯಾವಂದನೆಯ ಪುಸ್ತಕ ಪಾಠವು ಅವರಿಗೆ ನಿರಂತರವು ಇದ್ದಿತ್ತು. ಕಮಲಹಪುರದ ಅಮಲ್ದಾರರಲ್ಲಿ ಇವರಷು ಮಹಾಕೀರ್ತಿಯನ್ನು ಯಾರೂ ಪಡೆದಿರಲಿಲ್ಲ. ಅವರಿಗೆ ಇಂಗ್ಲೀಸು ಭಾಷಾ ಜ್ಞಾನವೂ ಇತ್ತೋ ಇಲ್ಲವೋ ನಾವು ಅರಿಯೆವು. ಇಂಗ್ಲೀಸು ಮಾತನಾಡಲು ತಿಳಿದಿತ್ತು ಎಂದು ನಮ್ಮ ಮನೆ ಅಜ್ಜಿಯೊಂದು ಈಗಲೂ ಹೇಳುತಿರುವಳು. ಇವರ ‘ಜಜ್‍ಮೆಂಟು’ಗಳು ಬಹಳ ನೂತನವಾಗಿದ್ದವೆಂದು ಬಾಜಾರಿನಲ್ಲಿ ಈಗಲೂ ವರ್ತಮಾನವಿದೆ. ವಲ್ಲಭಾಚಾರ್ಯರು ‘ಪೀನಲ್ ಕೋಡನ್ನು’ ಅಷ್ಟು ಚೆನ್ನಾಗಿ ಮನ್ನಿಸುತ್ತಿರಲಿಲ್ಲ. ಅ ಕೋಡು ಬಿಳೇ ಜನರ ತಲೆಯ ಮೇಲೆ ಚೆನ್ನಾಗಿ ತೋರುವುದಲ್ಲದೆ, ನಾವು ಅದನ್ನು ಧರಿಸುವುದಕ್ಕೆ ಎತ್ತುಗಳಲ್ಲವೆಂದು ಅವರ ಅಭಿಪ್ರಾಯವಿತ್ತು. ‘ಜಜ್‍ಮೆಂಟು’ಗಳಲ್ಲಿ ಭಾರತರಾಮಾಯಣದಿಂದಲೇ ಬೇಕಾದಷ್ಟು ಆಧಾರಗಳನ್ನು ಕೊಟ್ಟು ‘ಕೇಸುಗಳನ್ನು’ (Cases) ತೀರಿಸುತ್ತಿದ್ದರು. ಅವರು ನಿರಪರಾಧಿಗಳಿಗೆ ಆಧಾರರಾಗಿದ್ದರು. ದಂಪತಿಗಳ ವಾದವಿವಾದಗಳು ಕಚೇರಿಗೆ ಬಂದರೆ, ಅವರ ಮನಸ್ಸು ಇಂದಿನ ಸಮಾಜ ಸುಧಾರಕರ ಮನಸ್ಸಿನಂತೆ ಹೆಂಗಸಿನ ಪಕ್ಷವಾಗಿ ವಾಲುತ್ತಿರುವುದು. ಹೆಂಗಸರು ಸಾಕ್ಷಿಗಾರರಾಗಿದ್ದರೆ ಅವರನ್ನು ದಯಾದೃಷ್ಟಿಯಿಂದ ನೋಡಿ, ಅದರ ಆಧಾರದಿಂದಲೇ ಕಕ್ಷಿಗಳಿಗೆ ಗುಣ ಮಾಡುತಿದ್ದರು. ಅಮಲ್ದಾರರಿಗೆ ತಿಂಗಳಿಗೆ ಒಂದು ಬಾರಿ ‘ಸರ್ಕಿಟ್’ ತಿರುಗುವ ಸಂಪ್ರದಾಯವಿತ್ತು. ಈ ‘ಸರ್ಕಿಟಿಗೆ’ ಸುಖಭೋಗದಲ್ಲಿ ಅಮಲ್ದಾರರ ‘ಹೆಡ್ ಮುನಿಶಿ’ ವೈಕುಂಠ ವ್ಯಾಸಾಚಾರ್ಯರಿಗೂ ಪಾಲಿತ್ತು. ‘ಸರ್ಕಿಟಿಗೆ’ ಸರಕಾರಿ ಉದ್ಯೋಗಸ್ಥರೂ ಅವರ ಆಪ್ತ ಮಿತ್ರರೂ – ಯಮನ ಮದುವೆಯ ದಿಬ್ಬಣದಂತೆ – ಏಕತ್ರವಾಗಿ ಹೋಗುತ್ತಿದ್ದರು. ಅಂದು ಸರಕಾರದ ಉದ್ಯೋಗಸ್ಥರಿಗೆ ಸಂಬಳ ಕಡಿಮೆ; ‘ಸರ್ಕಿಟ್ ಹೆಚ್ಚು. ಅದು ಕಾರಣದಿಂದ, ಉದರ ನಿರ್ವಾಹವು ಒಟ್ಟಾರೆ ಸರಿ ಹೋಗುತ್ತಲಿತ್ತು. ಗುಮಾಸ್ತ ಶ್ರೀರಂಗ ಸೂರಿಯವರು ಮಗಳ ಮದುವೆಯನ್ನು ನಿಶ್ಚಯಿಸಿ, ಅಮಲ್ದಾರರೊಡನೆ ‘ಜಮಾಬಂದಿ’ಯ ಸರ್ಕಿಟಿಗೆ ಹೋಗಬೇಕೆಂದಿದ್ದರು. ‘ಮುನಿಶಿ’ ಹಯವದನರ ತಂದೆಯವರು ಬಿದ್ದುಹೋದ ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಆಲೋಚಿಸಿ, ಈ ವರ್ಷ ಸಪ್ತಗ್ರಾಮದಲ್ಲಿ ನಡೆಯುವ ‘ಜಮಾಬಂದಿಯ’ ಮಹೋತ್ಸವಕ್ಕೆ ಮಗನೊಡನೆ ಹೂರಡಲಿದ್ದರು. ಆದರೆ ಈ ವರ್ಷ ಅಮಲ್ದಾರರು ಯಾರನ್ನು ಬರಲೀಸದೆ ತನ್ನ ‘ಹೆಡ್ ಮುನಿಶಿ’ ವೈಕುಂಠ ವ್ಯಾಸಾಚಾರ್ಯರ ಸಮೇತರಾಗಿ ‘ಸರ್‍ಕೀಟಿಕೆ’ ತರಳಿದರು. ಸಪ್ತಗ್ರಾಮವು ಕಮಲಪುರದಿಂದ ೪೦ ಮೈಲು ದೂರ. ಈಗ ಸಪ್ತಗ್ರಾಮಕ್ಕೆ ಹೋಗಲು ರಾಜಮಾರ್ಗವಿದೆ. ೩೦ ವರ್ಷಗಳ ಹಿಂದೆ ಸಪ್ತಗ್ರಾಮಕ್ಷೆ ಹೋಗುವವರು ಮೊದಲು ದೋಣಿ ಹತ್ತಿ, ವೀರಪುರದಲ್ಲಿ ಇಳಿಯಬೇಕಿತ್ತು. ರೋರಿಂಗ್ ದೊರೆಗಳು ಕುದುರೆಯನ್ನು ಏರಿ ವೀರಪುರಕ್ಕೆ ಹೋದರು. ವೀರಪುರದವರು ದೊರೆಗಳನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಕಳುಹಿಸಿದರು. ದೊರೆಗಳು ಮಹಾ ವಾದ್ಯ ಘೋಷದೊಡನೆ ಸಪ್ತಗ್ರಾಮಕ್ಕೆ ಬಂದರು. ಊರಲ್ಲೆಲ್ಲಾ ತೋರಣಗಳ ಶೃಂಗಾರ; ಜೈನರ ಬಸ್ತಿಗಳಲ್ಲೆಲ್ಲಾ ಧ್ವಜಗಳ ಅಲಂಕಾರ. ‘ಜಮಾಬಂದಿ’ಗೆ ಬಂದಿದ್ದ ಕಲಕ್ಟರ್ ದೊರೆಗಳು ನೋಡಬೇಕಾದ ಶಿಲ್ಪ ಚಿತ್ರಗಳನ್ನೆಲ್ಲಾ ನೋಡಿದರು. ಅವಶ್ಯವಿದ್ದ ಶಾಸನಗಳ ಪ್ರತಿಗಳನ್ನು ಸಂಪಾದಿಸಿದರು. ಬಸ್ತಿಯ ಭಂಡಾರದಲ್ಲಿದ್ದ ಪುಸ್ತಕಗಳನ್ನು ಕುರಿತು ಪ್ರಸ್ತಾಪ ಬಂತು. ಜಿನರ ಮುದಿ ಗುರುಗಳು ಅವನ್ನು ಹೂರಕೊಡುವುದಕ್ಕೆ ಒಪಲಿಲ್ಲ. ದೊರೆಗಳು ಪುಸ್ತಕಗಳ ಆಶೆಯನ್ನು ಬಿಟ್ಟು ‘ಜಮಾಬಂದಿ’ಯನ್ನು ಮುಗಿಸಿದರು.

‘ಜಮಾಬಂದ್’ ಎಂಬುದು ಹಿಂದುಸ್ಥಾನಿ ಭಾಷೆಯ ಪದವು. ಸರಕಾರಕ್ಕೆ ವರ್ಷಂಪ್ರತಿ ಬರುವ ಭೂಮಿಯ ತೀರ್‍ವೆಯ ಜಮೆಯನ್ನು ‘ಬಂದ್’ ಮಾಡುವುದು (ಮುಗಿಸುವುದು) ಎಂಬ ಅರ್ಥವನ್ನು ಕೆಲವರು ಕಲ್ಪಸಿರುವರು. ಇದು ಶುದ್ಧ ತಪ್ಪು. ‘ಜಬಾನ್ ಬಂದ್’ ಎಂದರೆ ನಾಲಗೆಯನ್ನು ಕಟ್ಟುವುದು; ಇದುವೆ ಅಪಭ್ರಂಶವಾಗಿ ‘ಜಮಾಬಂದ್’ ಎಂದಾಯಿತು. ಜನಗಳ ‘ಹಾಲ್‍ಹವಾಲೆಯನ್ನು’ ಹೇಳುವ ನಾಲಗೆಯನ್ನು ಕಟ್ಟುವುದು ಎಂಬ ಅರ್ಥ. ಈ ಅರ್ಥಕ್ಕೆ ಸರಿಯಾಗಿ ಮುಂಚಿನವರು ಕುಳುವಾರುಗಳ ಸ್ಥಿತಿಗತಿಗಳನ್ನು ಮೊರೆ, ಗೋಳನ್ನೂ ಕೇಳಿ, ದವಸ ತುಟ್ಟಿಯಾದ ಕಾಲದಲ್ಲಿ ತೀರ್ವೆಯಲ್ಲಿ ಬೇಕಾದಷ್ಟನ್ನು ಅವರ ಬಾಯನ್ನೂ ಕೂಗನ್ನೂ ತಡೆಸುತ್ತಿದ್ದರು.

ಅಮಲ್ದಾರರು ಸರ್ಕಿಟಿಗೆ ಬರುವ ಹಾಗಿದ್ದರೆ. ಅವರಿಗೋಸ್ಕರ ಅಡಿಗೆಯವರನ್ನು ಒದಗಿಸುವುದು ಪಟೇಲನ ಕಷ್ಟತರದ ಕೆಲಸವಾಗಿತ್ತು. ವಲ್ಲಭಾಚಾರ್ಯರು ಸ್ತ್ರೀಪಾಕ ನಿಯಮಿಷ್ಟರು; ಅವರಿಗೆ ಹೆಂಗಸರ ಅಡಿಗೆ ಮೆಚ್ಚುತ್ತಿತಲ್ಲದೆ, ಗಂಡಸರ ಅಡಿಗೆಯು ರುಚಿಸುತ್ತಿರಲಿಲ್ಲ. ಅದು ಕಾರಣದಿಂದ ಆಚಾರ್ಯರು ಹೋಗುವ ಸ್ಥಳಗಳೆಲ್ಲ ಅವರ ಬಗ್ಗೆ ಅಡಿಗೆಯ ಹೆಂಗಸರನ್ನು ಪಟೇಲರು ಗೊತ್ತುಹಚ್ಚುತಿದ್ದರು. ಅದರೆ ಒಂದೆರಡು ದಿನಗಳ ‘ಚಾಕ್ರಿಗೆ’ ಹೆಂಗಸರು ನಿಲ್ಲುವುದಕ್ಕೆ ಈಚೀಚೆಗೆ ಒಪ್ಪುತ್ತಿರಲಿಲ್ಲ. ಒಂದೊಂದು ಪ್ರಸಂಗದಲ್ಲಿ – ವಲ್ಲಭಾಚಾರ್ಯರಿಗೆ ಅಡಿಗೆಮಾಡಲು ಹೋದ ಹೆಂಗಸನ್ನು ಗಂಡನು ವಿನಾಕಾರಣವಾಗಿ ಬಿಟ್ಟು ಬಿಡುತಿದ್ದನು. ಒಂದೊಂದು ಪ್ರಸಕ್ತಿಯಲ್ಲಿ ಅಂಥಾ ಹೆಂಗಸನ್ನು ಬಹಿಷ್ಕಾರ ಪ್ರಕರಣಕ್ಕೆ ಜಾತಿಗೃಹಸ್ಥರು ಒಳಗಾಗಿಸುತ್ತಿದ್ದರು. ಅದೂ ಅಲ್ಲದೆ ಸಪ್ತ ಗ್ರಾಮದಲ್ಲಿ ಬ್ರಾಹ್ಮಣರು ಕಡಿಮೆ, ಪಟೇಲನು ಎಷ್ಟು ಪ್ರಯತ್ನ ಮಾಡಿದರೂ ಅಡಿಗೆಯವಳು ಒಬ್ಬಳಾದರೂ ಸಿಕ್ಕದೆ ಹೋದಳು. ಹೂತ್ತು ಏರಿ ಬಂದಿತು. ಅಮಲ್ದಾರರು ಕಚೇರಿಯಲ್ಲಿ ಹಾಡು ಹಾಡಲು ತೊಡಗಿದರು. ಅಮಲ್ದಾರರು ಕಚೇರಿಯಿಂದ ಕೆಲಸ ಮುಗಿಸಿ ಬರುವ ಮೊದಲು ಸಂತೋಷಚಿತ್ತರಾಗಿ ಹಾಡುವ ಅಭ್ಯಾಸವಿತ್ತು. ಹೊರಗಿದ್ದ ಪಟೇಲನಿಗೆ ಹಾಡು ಕೇಳಿಸುತ್ತಿತು-

ತರಬೇಕು ತರುಣಿಯಳ – ಕಾಮನ ಮುಂಗೈ
ಅರಗಿಣಿಯಂತಿಹಳ ||
ಸ್ಯರನ ಸಿಂಗಾಡಿ ಪುರ್ಬಿನ, ನೀರೆ, ಮಲ್ಲಿಗೆ
ಪರಿಮಳಿಸುವ ಮೈಯ್ಯ ವರ ಕರಿಗಮೆನಯ ||

ಹೀಗೆ ಹಾಡುತ್ತ ಕಟ್ಟಿಟ್ಟ ದಪ್ತರದ ಮೇಲೆ ಕೈ ಬಡಿದು ತಾಳ ಹಾಕುತ್ತಲಿದ್ದರು.

ಅಮಲ್ದಾರರು ಮನೆಗೆ ಬರುವ ಹೊತ್ತಾಯಿತೆಂದು ಪಟೇಲನು ಅರಿತನು. ಆದರೆ ಅಡಿಗೆಯು ಏನೂ ಸಿದ್ಧವಾಗಲಿಲ್ಲ. ಪಟೇಲನು ಜಾತಿಯಲ್ಲಿ ಜೈನ, ತಾನೇ ಅಡಿಗೆ ಮಾಡುವುದಕ್ಕೆ ಉಪಾಯವಿಲ್ಲ. ಅಮಲ್ದಾರರು ಮಾರ್ಗಕ್ಕೆ ಇಳಿದರು. ಪಟೇಲನು ಎರಡೂ ಕೈಗಳನ್ನು ಸರಿಯಾಗಿ ಜೋಡಿಸಿ ದೊಡ್ಡ ನಮಸ್ಕಾರ ಮಾಡಿದನು. ನಮಸ್ಕಾರ ಮಾಡಿದಪಷ್ಟಕ್ಕೆ ಅಮಲ್ದಾರರ ಸಿಟ್ಟು ಇಳಿಯುವುದೆಂದು ಪಟೇಲನು ತಿಳಿದಿದ್ದನು. ಅಮಲ್ದಾರರು ಪಟೇಲರನ್ನು ನೋಡಿ “ಪದ್ದರಾಜಾ! ಈವತ್ತು ಅಡಿಗೆಗೆ ಯಾರು?” ಎಂದು ಕೇಳಿದರು.

ಪಟೇಲನು ಮತ್ತೊಂದು ನಮಸ್ಕಾರವನ್ನು ಸಮರ್ಪಿಸಿ. “ಬುದ್ಧಿ! ಇಂದು ಎಲ್ಲೆಲ್ಲಿ ಹುಡುಕಿದ್ರೂ ಯಾರೂ ಸಿಕ್ಲಿಲ್ಲಾ” ಎಂದು ಹೇಳಿ ಪುನಃ ಕೈಮುಗಿದನು.

ಅಮಲ್ದಾರ:- “ಅದೇನು ಸಂಗ್ತಿ? ಈಗ ಹೊತ್ತೇರಿತು. ಅನ್ನವಿಲ್ಲದೆ ಉಪವಾಸ ಬೀಳುವದೇನೂ?”

ಪಟೇಲ:- “ಅಪ್ಣೆಯಾದಂತೆ ನಡಕೊಳ್ಳುತ್ತೇನೆ. ಇಲ್ಲಿ ಬ್ರಾಹ್ಮಣರು ಯಾರೂ ಇಲ್ಲ ಬುದ್ಧಿ! ಎಲ್ಲರೂ ಶ್ರೀಕಾಂತ ಜಾತ್ರೆಗೆ ನಡದುಬಿಟ್ಟದ್ದಾರೆ ಬುದ್ಧಿ” ಎಂದು ಹೇಳಿ, ಕೈಜೋಡಿಸಿ, ಮತ್ತೆ ತನ್ನ ಮಣಿಗಂಟನ್ನು ಸವರುತ್ತಾ ನಿಂತಿದ್ದನು.

ಅಮಲ್ದಾರ:- “ಈಗ ಯಾರನ್ನಾದ್ರೂ ಹಿಡಿಯದಿದ್ರೆ ಉಪಾಯವಿಲ್ಲವಷ್ಟೆ. ಯಾರನ್ನಾದ್ರೂ ಬಿಟ್ಟಿಗೆ ಹಿಡಿದ್ರೆ ಸರಿ.”

ಪಟೇಲ: “ಹಣ ಕೊಟ್ರೆ ಆಳು ಸಿಕ್ಕೋಲ್ಲ. ಇಲ್ಲಿ ಬಿಟ್ಟಿಗೆ ಯಾರು ಬರ್‍ತಾರೆ?”

ಪಟೀಲನು ಈ ಸಲ ನಮಸ್ಕಾರ ಮಾಡಲಿಲ್ಲ. ಅಮಲ್ದಾರರು ಸಿಟ್ಟಿಗೆದ್ದರು. ಪಟೇಲನ ಮಾತುಗಳಲ್ಲಿ ‘ಬುದ್ಧಿ; ಖಾವಂದ್ರೆ’ ಎಂಬ ನುಡಿಗಳೂ ಇರಲಿಲ್ಲ. ಅಮಲ್ದಾರರು – “ಎಲಾ! ಯಾರಿಗಾದ್ರೂ ಬಿಟ್ಟಿಗೆ ಹಿಡಿದು ತಂದ್ರೆ ಸರಿ! ಇಲ್ಲದ್ರೆ ನಿನ್ನ ಕೆಲ್ಸಕ್ಕೆ ರಾಜೀನಾಮೆ ಕೊಡು, ನಡಿ!” ಎಂದು ಗದರಿಸಿದರು.

ಅಮಲ್ದಾರರಿಗೂ ಪಟೇಲನಿಗೂ ಈ ರೀತಿ ಮಾತು ನಡೆಯುತಲಿರುವುದನ್ನು ದಾರಿಗನೊಬ್ಬನು ನೋಡಿ, ಅಲ್ಲಿಯೇ ತಳುವಿದನು. ಅವನು ಶ್ರೀಕಾಂತ ಜಾತ್ರೆಗೆ ಹೋಗುವವನು. ಅವನ ವಿಷಯವಾಗಿ ಸವಿಸ್ತಾರವಾಗಿ ಮತೆ ಹೇಳುವೆವು. ಅವನು ಅಮಲ್ದಾರರನ್ನು ನೋಡಿದನು. ನೋಡಿ ಕೈ ಮುಗಿಯದೆ ಏನೋ ಕಾರಣದಿಂದ ನಗುತ್ತ ಹೋಗುತ್ತಿದ್ದನು. ಅವನ ನಗುವಿನಿಂದ ಅಮಲ್ದಾರರ ಹಸಿದ ಹೊಟ್ಟೆಗೆ ಬಿಸಿ ಕೆಂಡವಿಟ್ಟಂತಾಯಿತು. ಅಮಲ್ದಾರರು ಪಟೀಲನೂಡನೆ “ಇಕೋ! ಪದ್ಮರಾಜಾ! ಅತ್ತ ಹೋಗುವವನನ್ನು ಬಿಟ್ಟಗೆ ಹಿಡಿ!” ಎಂದು ಕಟ್ಟಾಜ್ಞೆ ಮಾಡಿದನು.

ಆ ಕಾಲದಲ್ಲಿ ಪಟೇಲನಿಗೆ ಸರಕಾರದಿಂದ ಪೇದೆ ಸಿಕ್ಕುತ್ತಿರಲಿಲ್ಲ. ‘ಪೇದೆಯ ಚಾಕ್ರಿಯನ್ನು’ ಪಟೇಲನೇ ಮಾಡಬೇಕಾಗಿತ್ತು. ಪ್ರತಿಯಾಗಿ ವರ್ಷಕ್ಕೆ ಒಂದು ವರಹ ಸಂಬಳ ಹೆಚ್ಚು ಸಿಕ್ಕುತ್ತಿತ್ತು. ಪಟೇಲನು ದಾರಿಗನನ್ನು ಮುಂದರಿಸಲೀಸದೆ ತಡೆದನು.

ದಾರಿಗ:- “ಇದೇನಯ್ಯಾ? ನನ್ನನ್ನು ಹೋಗಬಿಡೋದಿಲ್ಲ?”
ಪಟೇಲ:- “ಹೆಚ್ಚು ಮಾತು ಬೇಡ! ಹೇಳಿದ ಹಾಗೆ ಕೇಳಿದ್ರೆ ಸರಿ!”
ದಾರಿಗ:- “ಯಾರು ಹೇಳಿದ ಹಾಗೆ ಕೇಳಬೇಕು? ಹಾಗೆ ಹೇಳಲಿಕ್ಕೆ ನಾನು ನಿಮ್ಮ ಅಡಿಗೆ ಭಟ್ಟನೇ?”
ಪಟೇಲ:- “ಯಾರಾದ್ರೆ ನಮಗೇನು? ಈಗ ನೀನು ಅಡಿಗೆ ಭಟ್ಟನಾಗಲೇ ಬೇಕು.”
ದಾರಿಗ:- “ನಾನು ಅಡಿಗೆಯವನಲ್ಲಯ್ಯಾ! ನಾನು ವೈದ್ಯ. ನಾನು ಮದ್ದು ಕೊಡುವೆ; ಅಡಿಗೆ ಮಾಡಲಾರೆ! ನನ್ನನ್ನು ಬಿಡಿ, ಅಯ್ಯಾ! ನನಗೆ ಶ್ರೀಕಾಂತ ಜಾತ್ರೆಗೆ ಇಂದು ಹೋಗದೆ ನಿರ್ವಾಹವಿಲ್ಲ.”
ಪಟೇಲ:- “ನಿರ್ವಾಹವಿಲ್ಲ! ಬಾಯ್ಮುಚ್ಚು! ಕಳ್ಳ! ವೈದ್ಯ ನೀನು ಎಂಥಾ ವೈದ್ಯ? ಸುಮ್ಮನೆ ನನ್ನ ಹಿಂದೆ ಬಂದ್ರೆ ಸರಿ. ಇಲ್ವಾದ್ರೆ ಕೈಗೆ ಕೋಳಾ ಹಾಕಿಸುವೆ.”

ವೈದ್ಯರು ಸುಮ್ಮನಾದರು; ಗುದ್ದು ಕೊಟ್ಟರೆ ಮದ್ದು ಇಲ್ಲವೆಂದು ಸುಮ್ಮನಾದರು. ಸರಕಾರದ ಹುದ್ದೆದಾರರೊಡನೆ ದಂಡೋಪಾಯ ನಡಸಿದರೆ ಪ್ರಯೋಜನವಿಲ್ಲವೆಂದು ತಿಳಿದು, ವೈದ್ಯರು ಪಟೇಲನ ಆಜ್ಞೆಗೆ ಒಳಗಾದರು. ವೈದ್ಯರು ಅಮಲ್ದಾರರಿಗೆ ಅಡಿಗೆ ಮಾಡಲು ಒದಗಿಸಿದ ಮನೆಗೆ ಉಸಿರೆತ್ತದೆ ನಡೆದರು.

ವೈದ್ಯರ ಹಸರು ಕೃಷ್ಣ. ಕೃಷ್ಣವೈದ್ಯ ಎಂದು ವಾಡಿಕೆಗೆ ಕರೆಯುತ್ತಿದ್ದರು. ಕೃಷ್ಣವೈದ್ಯರು ಸ್ವತಃ ಆಯುರ್ವೇದವನ್ನು ಓದಿರಲಿಲ್ಲ. ಇವನ ಮುತ್ತಜ್ಜನು ಮಾತ್ರ ಹಾವಿನ ವಿಷಕ್ಕೆ ಔಷಧ ಬಲ್ಲವನೆಂದು ಖ್ಯಾತಿಗೊಂಡಿದ್ದನು. ಅದು ಕಾರಣದಿಂದಲೇ ಜನಗಳಿಗೆ ಕೃಷ್ಣವೈದ್ಯರ ಮೇಲೆ ಅಭಿಮಾನವಿದ್ದಿತು. ಅದಲ್ಲದೆ ಕೃಷ್ಣವೈದ್ಯರು ಬಾಲ್ಯದಲ್ಲಿ ಕಮಲಪುರದ ಅನಂತವೈದ್ಯರ ಕಾಲಬುಡದಲ್ಲಿ ಕೆಲವು ಕಾಲ ಶಿಕ್ಷಣವನ್ನು ಹೊಂದಿದ್ದರು. ವೈದ್ಯ ಶಾಸ್ತ್ರವನ್ನು ಕಲಿಯುವ ಮೊದಲು ಸೂಪಶಾಸ್ತ್ರದ ಅನುಭವವು ಅಗತ್ಯವೆಂದು ಗುರುಗಳು ಹೇಳಿದುದರಿಂದ, ಸುಮಾರು ೫ ವರ್ಷಗಳ ವರೆಗೆ ಅನಂತವೈದ್ಯರ ಮನೆಯಲ್ಲಿ ಸ್ವಯಂಪಾಕ ವಿಧಿವಿಧಾನಗಳನ್ನು ಕಲಿಯಬೇಕಾಯಿತು. ಅಷ್ಟು ಶೀಘ್ರಕಾಲದಲ್ಲಿಯೇ ವೈದ್ಯರು ಸೂಪಶಾಸ್ತ್ರವನ್ನೂ ವೈದ್ಯ ಶಾಸ್ತ್ರವನ್ನೂ ಕರತಲಾಮಲಕವಾಗಿ ಮಾಡಿದರು. ಪ್ರಕೃತದಲ್ಲಿಯೇ ವೈದ್ಯರು ಅನೇಕರಿಗೆ ಪ್ರಯೋಜನಕ್ಕೆ ಬೀಳುತ್ತಿದ್ದರು. ಮದುವೆಯಾಗದವರು, ಗಂಡಸತ್ತವರು, ಧನಿಕರು, ಮಠಾಧೀಶರು ಮೊದಲಾದವರಲ್ಲಿ ಕೆಲವರ ಆಶ್ರಯದಿಂದ ವೈದ್ಯರ ಉದರ ನಿರ್ವಾಹವು ನಡೆಯುತ್ತಲಿತ್ತು. ಕ್ಷೇತ್ರದ ಲಿಂಗರಾಜ ಹೆಗ್ಡೆಯವರು ಕೃಷ್ಣವೈದ್ಯರನ್ನು ಚಿರಕಾಲ ತನ್ನ ಬಳಿಯಲ್ಲರಿಸಿದರು. ಹೆಗ್ಡೆಯವರಿಗೆ ಗುಣಾಂಶ ಸಿಕ್ಕಿತೋ ಇಲ್ಲವೋ ನಾವು ಅರಿಯೆವು. “ಇನ್ನೂ ತನಗೆ ವೈದ್ಯರ ಹಂಗೇನು?” ಎನ್ನುತ್ತಿದ್ದರು ಹೆಗ್ಡೆಯವರು. ಸಾಧಾರಣ ಜನಗಳ ಅನುಭವಕ್ಕೆ ನೋಡ ಸಿಕ್ಕದ ರೋಗಗಳಿಗೆ ಕೃಷ್ಣವೈದ್ಯರು ಚಿಕಿತ್ಸೆಯನ್ನು ಮಾಡಬಲ್ಲರೆಂದು ಸಮಾಚಾರವಿದ್ದುದರಿಂದ, ಶ್ರೀಕಾಂತ ದೇವಸ್ಥಾನದ ಪಾರುಪತ್ಯಗಾರರು ಇವರನ್ನು ಬರಮಾಡಿದ್ದರು.

“ಕೃಷ್ಣವೈದ್ಯರನ್ನು ಬಲಾತ್ಕಾರದಿಂದ ಅಡಿಗೆ ಮಾಡುವುದಕ್ಕೆ ಹಿಡಿದುದು ನಮ್ಮ ತಪ್ಪಾಗಬಹುದೇ?” ಎಂದು ‘ಹಡ್‍ಮುನಿಶಿ’ ವೈಕುಂಠ ವ್ಯಾಸಾಚಾರ್ಯರು ಅಮಲ್ದಾರ ರೊಡನೆ ಚರ್ಚಿಸಿದರು. ಅದು ತಪಲ್ಲವೆಂದು ಅಮಲ್ದಾರರು ಆಧಾರ ಕೊಟ್ಟು ಹೇಳಿದರು. “ವಿರಾಟ ರಾಯನು ಭೀಮಸೇನನನ್ನು ಅಡಿಗೆಗೆ ನಿಲ್ಲಸಿರಲಿಲ್ಲವೇ? ನಳ ಚಕ್ರವರ್ತಿ ಸ್ವಯಂಪಾಕ ಮಾಡಲಿಲ್ಲವೇ? ಶ್ರೀಕೃಷ್ಣ ದೇವರು ಮೋಹಿನಿ ರೂಪದಿಂದ ದೇವಾಸುರರಿಗೆ ಅಮೃತವನ್ನು ಬಡಿಸಿರಲಿಲ್ಲವೇ?” ಎಂದು ಅಮಲ್ದಾರರು ತಮ್ಮ ‘ಪೀನಲ್ ಕೋಡಿ’ನಿಂದ ಆಧಾರಗಳನ್ನು ಕೊಟ್ಟು, ತಮ್ಮ ಕಾರ್ಯವನ್ನು ಭದ್ರಪಡಿಸಿದರು. ಇತ್ತ ಕೃಷ್ಣವೈದ್ಯರು ಉಪಾಯವಿಲ್ಲದೆ ಅಡಿಗೆ ಮಾಡತೊಡಗಿದರು. ಜಾತ್ರೆ ಹೋಗಿ, ಪಾತ್ರೆ ಎತ್ತಬೇಕಾಯಿತು. ಹೇಗೂ ಹೊತ್ತು ಮುಗಿಯುವುದರೊಳಗೆ ಅಡಿಗೆ ಸಿದ್ಧವಾಗದೆ ಹೋಗಲಿಲ್ಲ. ಅಮಲ್ದಾರರು ಸ್ನಾನ ಮಾಡಿ ಊಟಕ್ಕೆ ಕೂತುಕೊಳ್ಳುವುದಕ್ಕೆ ಬಂದರು. ಊಟಕ್ಕೆ ಬರುವ ಮೊದಲು ಉಲ್ಲಾಸದಿಂದ-

“ಮಡದಿ ತಾ ಚೆಲುವಾಗಿ ಆಡಿಗೆ ಮಾಡುವಳು”

ಎಂದು ನಿತ್ಯವೂ ದಾಸರ ಪದದ ಸೊಲ್ಲು ಹಾಡುವ ಅಭ್ಯಾಸ. ಅದರಂತೆ ಈ ಹೊತ್ತೂ ಅದನ್ನೇ ಹಾಡಿದರು. ಒಡನೆ ಅಡಿಗೆಯವನ ಮುಖವನ್ನು ನೋಡಿ, ತನ್ನ ಹಾಡು ಈ ಹೊತ್ತು ಅನುಚಿತವಾಯಿತೆಂದು ವ್ಯಸನರಾದರು.

ಎರಡು ದಿನಗಳು ನಿಲ್ಲದೆಯೇ ಕಳೆದುವು. ವಲ್ಲಭಾಚಾರ್ಯರ ‘ಜಮಾಬಂದಿಯ’ ಕೆಲಸವೇನೂ ಮುಗಿಯಲಿಲ್ಲ. ಪಟೇಲ ಪದ್ಮರಾಜನಿಗೆ ಮತ್ತೊಬ್ಬ ಅಡಿಗೆಯವನು ಇನ್ನೂ ಸಿಕ್ಕಲಿಲ್ಲ. ಅದು ಕಾರಣದಿಂದ ಹುದ್ದೇದಾರರು ಇದ್ದಷ್ಟು ದಿನ ವೈದ್ಯರು ಒಲೆಯ ಬಳಿ ಹಂಗಸಿನಂತೆ ಬೇಯಬೇಕಾಯಿತು. ಮೂರನೆಯ ದಿನ ಮಧ್ಯಾಹ್ನದಲ್ಲಿ ಕೃಷ್ಣವೈದ್ಯರು ಯಾವುದನ್ನೋ ನೆನೆಸುತ್ತ ಕುಳಿತಿದ್ದರು. ಅಮಲ್ದಾರರು ಮನೆಯ ಇನ್ನೊಂದು ಕೊಟಡಿಯಲ್ಲಿ ಇದ್ದರು. ವೈದ್ಯರು ತುಟಿಯೊಳಗೆ ನಗುತ್ತಿದ್ದರು. ಬಲೆಯನ್ನು ಬೀಸಿ ಮೀನನ್ನು ಎದುರು ನೋಡುತ್ತಿದ್ದ ಅಂಬಿಗನ ಮೋರೆಯಲ್ಲಿ ತೋರುವ ನಗುವು ವೈದ್ಯರ ಮುಖದಲ್ಲಿ ಮೊನೆಯೂರಿತ್ತು. ವೈದ್ಯರು ಏನೋ ಉಪಾಯವನ್ನು ಕಂಡು ಹಿಡಿದು ಜಾತ್ರೆಗೆ ತೆರಳಬೇಕೆಂದು ಉಕ್ಕುತ್ತಿದ್ದರು. ಹಗೆಯವನು ವೈದ್ಯನೊಡನೆ ಮದ್ದು ಕೇಳಲು ಬಂದರೆ, ವೈದ್ಯನು ಮನಸ್ಸಿನಲ್ಲಿ ಯಾವ ಪ್ರಕಾರ ಉಲ್ಲಾಸಗೊಳ್ಳುವನೋ, ಆ ಪ್ರಕಾರದಲ್ಲಿ ಕೃಷ್ಣವೈದ್ಯರು ಮನಸಿನಲ್ಲಿ ತುಳುಕುತ್ತಿದ್ದರು.

ಅಷ್ಟರಲ್ಲಿ ಯಾರೋ ಒಬ್ಬನು ಬಂದು “ಎಲಾ! ಬಾ! ಬಾ, ಬಾ! ಏಳೇಳು!” ಎಂದು ಗಾಬರಿಗೊಳ್ಳುವಂತೆ ಹೇಳಿದನು. ಕೃಷ್ಣವೈದ್ಯರು ಸಾವಧಾನ ಚಿತ್ತಾರಾಗಿ, “ಏನು ಸಂಗ್ತಿ? ಅವಸರ ಮಾಡ್ತಿ ಯಾಕೆ?” ಎಂದು ಪ್ರಶ್ನೆ ಮಾಡಿದರು.

ಬಂದವ:- “ಅಯ್ಯೋ! ಬೇಗ ಏಳು! ಅಮಲ್ದಾರರು! ಅಯ್ಯೋ ಅಮಲ್ದಾರರು…”
ವೈದ್ಯ:- “ಏನು ಸತ್ತರೇ?”
ಬಂದವ:- “ಪ್ರಾಣಾಂತಿಕ, ನೀನು ಬಾರದೆ ಆಗದು.”
ವೈದ್ಯರು ಸ್ವಲ್ಪ ಅಸಮಾಧಾನಗೊಂಡು, “ನಾನು ಕಾಯಂ ಅಡಿಗೆಯ ಭಟ್ಟ, ನಾನು ಹೆಣ ಹೂರಲಾರೆ” ಎಂದು ಹೇಳಿಬಿಟ್ಟರು.
ಬಂದವ:- “ಏನು ಹರಟುವೆ ನೀನು? ಅಮಲ್ದಾರರು ನಿನ್ನನ್ನು ಕರಕೊಂಡು ಬರಬೇಕೆಂದು ಹೇಳಿದ್ದಾರೆ. ಬಾ! ಬಾ!

ಬಂದವನ ಆಶೆಯ ಪ್ರಕಾರ ಕೃಷ್ಣವೈದ್ಯರು ಕೊಟಡಿಗೆ ಹೋದರು. ವಲ್ಲಭಾಚಾರ್ಯರು ನೆಲದ ಮೇಲೆ ಹೂರಳಾಡುತ್ತಿದ್ದರು. ಮೋರೆಯು ನೋವಿನಿಂದ ತಿರುಪಿದಂತಿತ್ತು. ಅಮಲ್ದಾರರು ವೈದ್ಯರನ್ನು ನೋಡಿ “ಅಯ್ಯೋ! ಸತ್ತೇ! ಏದೇವ್ರೆ! ಸತ್ತೇ!” ಎಂದು ಗೋಳಿಡುತ್ತಿದ್ದರು.

ವೈದ್ಯರು:- “ರಾಯ್ರೇ! ಏನ್ ಬೇಕು! ಬಳಗಿನ ಕೇಶಾರನ್ನ ಇಷ್ಟು ತರಲೇ?” ಎಂದು ಕೈಮುಗಿದು ಬಿನ್ನವಿಸಿದರು.

ಅಮಲ್ದಾರರು:- “ಕೇಶರಾನ್ನ? ಕೇಶರಾನ್ನ ಸುಡು ನನಗೆ ಒಂದು ಔಷಧ ಕೊಡು, ಮಹಾರಾಯ”! ಎಂದು ಹೇಳುತ್ತ, “ಹೊಟ್ಟೆನೋವು – ಅಯ್ಯಯ್ಯೋ! ಉದರ ಶೂಲೆ – ಏನೂ ತಾಳಲಾರೆ” ಎಂದು ತನ್ನ ಅವಸ್ಥೆಯನ್ನು ಒಪ್ಪಿಸಿದರು.

ವೈದ್ಯ:- ನಾನು ವೈದ್ಯನಲ್ಲ, ಮಹಾಸ್ವಾಮಿ! ನಾನು ಅಡಿಗೆಯವ, ಖಾವಂದರಿಗೆ ವೇದ್ಯವಾಗಿದೆ. ಅಮಲ್ದಾರರು ಹೂರಳುತ್ತ ತೆವಳುತ್ತ “ನೀನು ಮದ್ದು ಕೊಡದಿದ್ರೆ, ಈಗ ಕೋಳಾ ಹಾಕಿಸುವೆ.” ವೈದ್ಯರು ತಲೆಯಲ್ಲಾಡಿಸಿದರು. “ನನ್ನನ್ನು ಅಡಿಗೆಯವನೆಂದು ಇಲ್ಲಿ ಹಿಡಿದಿದ್ದಾರೆ!” ಎಂದು ಮೆಲ್ಲನೆ ಹೇಳಿದರು.

“ಅಯ್ಯಯ್ಯೋ! ನಾನು ಸಾಯ್ತೇನೆ! ಏನಾದ್ರೂ ಮದ್ದು ಕೊಡು! ಒಂದು ಔಷಧ ಕೊಡು” ಎಂದು ಅಮಲ್ದಾರರು ಹೂರಳಾಡಿದರು.

ವೈದ್ಯ: “ನನ್ನ ಬಳಿ ಒಂದು ಮದ್ದುಂಟು. ಖರ್ಚು ಹೆಚ್ಚು ಬೀಳುತ್ತೆ. ಹಣ ಕೊಡದೆ ಮಾತ್ರ ಸಿಕ್ಕಲಾರದು?”

ಅಮಲ್ದಾರ: “ಇಕೋ! ೨೫ ರೂಪಾಯ್ ಕೊಡ್ತೇನೆ. ಬೇಗ ಮದ್ದು ಕೊಡು. ಅಯ್ಯಯ್ಯೋ! ಓ! ವೈಕುಂಠವಾಸ! ವೈಕುಂಠವಾಸ!

ಕೃಷ್ಣವೈದ್ಯರು ಸಮೀಪಕ್ಕೆ ಬಂದು “ಮದ್ದು ಪ್ರಾರಂಭಿಸುವ ವೇಳೆಯಲ್ಲಿ ರೋಗಿಗಳು ವೈಕುಂಠವಾಸದ ನೆನಪನ್ನು ಮಾಡಬಾರದು” ಎಂದು ಮೆಲ್ಲನೆ ಸೂಚಿಸಿದರು.

ಅಮಲ್ದಾರರು ವೈಕುಂಠವ್ಯಾಸಾಚಾರ್ಯರನ್ನು ಕೂಗಿ ಕರೆದಿದ್ದರು. ವ್ಯಾಸಾಚಾರ್ಯರು ಸಮೀಪದಲ್ಲಿ ಇದ್ದಿರಲಿಲ್ಲ.

ವೈದ್ಯ:- “ರಾಯರೇ! ನನ್ನ ಔಷಧ ಕಹಿ ಎಂದು ಬೇಸರ ಮಾಡಬಾರದು. ಈ ಒಂದು ಮಾತ್ರೆ ಕೊಟ್ಟು ನಾಳೆಗೆನೇ ಶ್ರೀಕಾಂತ ಜಾತ್ರೆಗೆ ಹೋಗುವ ಹಾಗೆ ಮಾಡುವೆ – ಬಲ್ರೋ?”

ಅಮಲ್ದಾರರಿಗೆ ಈ ಮಾತು ತಾನೇ ರುಚಿಸಲಿಲ್ಲ.

ವೈದ್ಯರು ತಮ್ಮ ಕಂತೆಯೊಳಗಿಂದ ಔಷಧವನ್ನು ತೆಗೆದು ರೋಗಿಯ ನಾಡಿಯನ್ನು ಹಿಡಿದು “ಈ ರೋಗವು ಮೇಹೋದರ ಶೂಲೆ” ಎಂದರು.

ಅಮಲ್ದಾರರು ನಿರಾಶೆಯಿಂದ ‘ಮೇಹೋದರವೋ? ಮಹೋದರವೋ? ಇದರಲ್ಲಿ ಜನಗಳು ಬದುಕುತಾರೋ?” ಎಂದು ಕೇಳಿದರು.

ವೈದ್ಯ:- ಅಪಾಯವುಂಟು, ಶೇಕಡಾ ಒಂದ್ರಂತೆ ಬದುಕುತ್ತಾರೆ. ಇದು ಮೇಹೋದರವೇ.
ಅಮಲ್ದಾರ:- “ವೈದ್ಯರೇ! ಇದು ಯಾವದ್ರಿಂದ ಉಂಟಾಯಿತು?”
ವೈದ್ಯ:- “ಕಾಯಿ ಕಿಚಡಿ ತಿಂದ್ರೆ, ಉಂಟಾಗುತ್ತೆ. ದುಡ್ಡು ತಿಂದ್ರೆ ಜೀರ್ಣಕ್ಕೆ ಬಾರದೆ ಉಂಟಾಗುತ್ತೆ” ಎಂದು ತನ್ನೊಳಗೇನೆ ಹೇಳಿದರು.

ಅಮಲ್ದಾರರು ಈ ವಿಧವಾಗಿ ಅವಸ್ಥೆ ಪಡುತ್ತಿರುವಾಗ ಪಟೇಲನು ಬಂದು “ಬೇಗ ಬನ್ನಿ! ಏಳಿ! ಏಳಿ! ವೈಕುಂಠ ವ್ಯಾಸಾಚಾರ್ಯರಿಗೆ ಕಾಹಿಲೆ; ಪ್ರಾಣಾಂತಿಕ ಕಾಹಿಲೆ” ಎಂದು ಅವಸರಗೊಂಡನು.

ಕೃಷ್ಣವೈದ್ಯರು ವ್ಯಾಸಾಚಾರ್ಯರ ಹತ್ತಿರಕ್ಕೆ ಬಂದು ‘ಏನಯ್ಯಾ! ನಮಗೆ ಯಾಕೆ ತೊಂದರೆ ಕೊಡುತ್ತೀರಿ? ಎಂದರು.

ವ್ಯಾಸಾಚಾರ್ಯರು ಚಾಪೆಯ ಮೇಲೆ ಹೊರಳಾಡುತ್ತಿದ್ದರು. ಅವರು ವೈದ್ಯರನ್ನು ನೋಡಿ “ಒಂದಿಷ್ಟು, ಮದ್ದು ಕೊಡಿ! ಸಾಯ್ತೇನೆ” ಎಂದರು.

ವೈದ್ಯ:- “ಹಾಗಾದ್ರೆ ಔಷಧ ಯಾಕೆ? ಕೆಡುವ ಕಾಲಕ್ಕೆ ಬುದ್ಧಿ ಇಲ್ಲ. ಮರಣ ಕಾಲಕ್ಕೆ ಮದ್ದು ಇಲ್ಲ-ಎಂದು ಗೊತಿಲ್ಲವೆ?”

ವ್ಯಾಸಾಚಾರ್ಯ:- “ಅಕಟಾ! ನಿಮ್ಮ ಮಾತು ಬೇಡ! ಒಂದು ಔಷಧ ಕೊಡಿ.”

ವೈದ್ಯ- “ಇದ್ದದ್ದು ಹೋಯಿತು, ಮದ್ದಿನ ಗುಣ ಎಂದಾದೀತು. ನಿಮಗೆ ಮಗ್ಗಿ ಬರುವುದೆ?”

ವ್ಯಾಸಾಚಾರ್ಯ:- “ಇಲ್ಲಪ್ಪಾ ಇಲ್ಲಾ!”

ವೈದ್ಯ:- “ಮಗ್ಗಿ ಬಾರದವನಿಗೆ ನುಗ್ಗೇಕಾಯಿ ಮದ್ದೇ? ಎಂಬ ಗಾದೆಯುಂಟು. ನುಗ್ಗೆಕಾಯಿ ಆಗೋದಿಲ್ಲ. ನಿಮ್ಮ ನಾಡಿ ನೋಡ್ತೇನೆ. ನಾಡಿ ನೋಡದೆ ಮದ್ದು ಕೊಟ್ಟರು, ಕಾಡು ರೋಗ ಬರುವುದೆಂದು ಗಾದ ಇದೆ.”
ವ್ಯಾಸಾಚಾರ್ಯ:- “ನಿಮ್ಮ ಗಾದೆ ಸಾಕುಮಾಡಿ!”

ವೈದ್ಯರು “ಮದ್ದು ಕೊಟ್ಟರೆ ಎದ್ದು ನಿಲ್ಲಬೇಕು” ಎಂದು ಹೇಳಿ ಕಂತೆಯಿಂದ ಔಷಧ ಕೊಟ್ಟರು.

ಎರಡು ದಿನಗಳವರೆಗೆ ಅಮಲ್ದಾರರೂ ವ್ಯಾಸಾಚಾರ್ಯರೂ ಕಾಹಿಲೆಯಿಂದ ಬಹಳ ಬೇಸತ್ತರು. ವೈದ್ಯರ ಕಹಿಮದ್ದಿನಿಂದಲೂ ಗಂಜಿನೀರಿನಿಂದಲೂ ಇಬ್ಬರ ನಾಲಿಗೆಯೂ ರುಚಿ ಕೆಟ್ಟುಹೋಯಿತು. ನಡುನಡುವೆ ವೈದ್ಯರು ಇಬ್ಬರ ಹಾಸಿಗೆಯ ಬಳಿಗೆ ಬಂದು, “ಜನಗಳನ್ನು ಬಿಟ್ಟಗೆ ಹಿಡಿದರೆ ಉಂಟಾಗುವ ಫಲವನ್ನು ಕುರಿತು” ಸಣ್ಣ ಕತೆಗಳನ್ನು ಹೇಳಿ ಉಲ್ಲಾಸಗೊಳಿಸುತ್ತಿದ್ದರು. ನಾಲ್ಕನೆಯ ದಿನ ಇಬ್ಬರೂ ಪೂರ್ಣ ಗುಣ ಹೂಂದಿದರು.

ಕೃಷ್ಣವೈದ್ಯರು ಇಬ್ಬರ ಅಪ್ಪಣೆಯನ್ನು ಹೊಂದಿ. ಶ್ರೀಕಾಂತ ಜಾತ್ರೆಗೆ ಹೊರಟರು. ಹಾದಿಯಲ್ಲಿ ಪಟೇಲ ಪದ್ಮರಾಜನು ಅವರ ಬಳಿಗೆ ಬಂದು “ಹುದ್ದೇದಾರರಿಗೆ ಈ ಅವಸ್ಥೆ ಆಗಲಿಕ್ಕೆ ಕಾರಣವೇನು?” ಎಂದು ಕೇಳಿದನು.

ವೈದ್ಯ:- “ಔಷಧಕಾರರನ್ನು ಅಡಿಗೆಗೆ ಹಿಡಿದಿದ್ದರಿಂದ.”

ಪಟೇಲ:- “ಅದು ಹ್ಯಾಗೆ?”

ವೈದ್ಯ:- “ನನಗೆ ಅಡಿಗೆಯ ಅನುಭವ ಅಷ್ಟಿಲ್ಲ. ಹಿಂಗಿನ ಒಗ್ಗರಣೆ ಹಾಕಲಿಕ್ಕೆ ಮರೆತು, ಮಣಿಮಂತ ಚೂರ್ಣವನ್ನು ಬರೆಸಿಬಿಟ್ಟೆ.” ಹೀಗೆಂದು ಹೇಳಿ ಕೃಷ್ಣವೈದ್ಯರು ಶ್ರೀಕಾಂತ ಜಾತ್ರೆಯ ಹಾದಿ ಹಿಡಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಶಮಗ್ರಹ
Next post ಕನ್ನಡ ನಾಡು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…