ನನ್ನ ಕೂಸು ಗಿಣಿಯ ಕೂಸು
ಹಸಿದು ಅಬ್ಬಾ ಎನುವದು
ಸಂತಿ ಪ್ಯಾಟಿಗೆ ಹೊಂಟ ನನ್ನೆಡೆ
ಅಂಬೆಗಾಲಿಲೆ ಬರುವದು

ಅಂಗಿ ಟೊಪ್ಪಿಗಿ ಮುತ್ತು ಗೊಂಬಿ
ಕೊಂಡು ಕೂಸನೆ ಮರೆತೆನು
ಊರ ಮನೆಯಾ ಕೂಸು ಕಾಣುತ
ನನ್ನ ಕೂಸೆ ಎಂದೆನು

ಮನೆಯ ಕೂಸು ಮನೆಯಲುಳಿಯಿತು
ಓಣಿ ಓಣಿಯು ತಿರುಗಿದೆ.
ಕಂಡ ಕಂಡಾ ಕೂಸು ಕುನ್ನಿಯ
ನನ್ನ ಕೂಸಾ ಎಂದನು

ಚಿತ್ರದಂಗಡಿ ಗೊಂಬಿ ಕೂಸಾ
ನನ್ನದೆಂದೆ ಕೊಂಡೆನು
ಕಲ್ಲು ಕೂಸಾ ಹುಲ್ಲು ಕೂಸಾ
ಎಲ್ಲ ಕೂಸಾ ತಂದೆನು

ನನ್ನ ಕೂಸು ನನ್ನ ಹುಚ್ಚಿಗೆ
ಹಸಿದು ಚೀರುತ ಅತ್ತಿತು
ಎಂಥ ತಾಯಿಯ ಪಡೆದು ಬಂದೆ
ಎಂದು ವಿಸ್ಮಯಗೊಂಡಿತು

ನನ್ನ ಎದಿಯಾ ಮೊಲೆಯ ಹಾಲು
ಚಿಮ್ಮಿ ಚಿಲ್ಲನೆ ಸಿಡಿಯಿತು
ಸೋತ ಕೂಸಿನ ಹಸಿದ ತುಟಿಯಲಿ
ಸುರಿದು ಕೂಸನು ಉಳಿಸಿತು

ನನ್ನ ಎದಿಯಾ ಸವಿಯ ಹಾಲು
ಯಾರಿಗೆಂದು ತಿಳಿದೆನು
ನಾಯಿಗಲ್ಲಾ ಕುನ್ನಿಗಲ್ಲಾ
ಶಿವನ ಕೂಸಿಗೆ ಎಂದೆನು
*****