ವಿದ್ಯಾರ್ಥಿ ಹಾಗೂ ವಿಶ್ವದ ನಡುವೆ

ವಿದ್ಯಾರ್ಥಿ ಹಾಗೂ ವಿಶ್ವದ ನಡುವೆ

ಚಿತ್ರ: ಸಿಂಡಿ ಪಾರ್ಕ್ಸ

ನಾನು ವಿದ್ಯಾರ್ಥಿಗಳನ್ನು ಹೆಚ್ಚಾಗಿ ಪ್ರೀತಿಸುತ್ತೇನೆ, ಅವರೊಂದಿಗೆ ನಾಲ್ಕು ಕಾಲ ಇರಲು ಇಚ್ಛಿಸುತ್ತೇನೆ. ಏಕೆಂದರೆ, ಅವರ ಕಣ್ಣುಗಳಲ್ಲಿ ಹೊಳೆವ ಕುತೂಹಲಕ್ಕಾಗಿ, ಹೊಸದನ್ನು ಹಂಬಲಿಸುವ ಅವರ ಕಾತುರಕ್ಕಾಗಿ, ಅವರ ಕಳಂಕರಹಿತ ನಿರ್ಮಲ ನೋಟಕ್ಕಾಗಿ, ಬದುಕಬೇಕೆನ್ನುವ ಅವರ ಅದಮ್ಯ ಉತ್ಸಾಹಕ್ಕಾಗಿ, ಹೊಸ ದಿಗಂತದ ಕಡೆಗೆ ಚಿಮ್ಮುವ ಅವರ ಚೈತನ್ಯಕ್ಕಾಗಿ. ಆದರೆ ಪ್ರೀತಿಸುವಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ನಾನು ವಿಷಾದಿಸುತ್ತೇನೆ. ಏಕೆಂದರೆ ಮೂವತ್ತು ವರ್ಷಗಳ ಸ್ವಾತಂತ್ರ್ಯದ ನಂತರವೂ ಈ ವಿದ್ಯಾರ್ಥಿಗಳ ಚೈತನ್ಯವನ್ನು ದಮನ ಮಾಡುವ ನಿರ್ವೀರ್ಯರನ್ನಾಗಿಸುವ ಸಮಾಜದ ನಮ್ಮ ರೀತಿ ನೀತಿಗಳಿಗಾಗಿ.

ತಾಯಿಯ ತೊಡೆಯಿಂದ ಜಿಗಿದು ಅಂಗಳಕ್ಕೆ ಹಾರಿ ಮಂಗಳದ ಕಡೆಗೆ ಮೊಗಮಾಡಿ ನೋಡುವ ವಿದ್ಯಾರ್ಥಿಯ ಮನಕ್ಕೆ ವಿಶ್ವವೆಂಬುದು ಭೂಮಿ, ಗ್ರಹ ತಾರೆಗಳಾಚೆಗೂ ವಿಸ್ತರಿಸಿಕೊಂಡು ನಿಂತಿರುವ ಒಂದು ಆಶ್ಚರ್ಯ ! ಪರಿಶುದ್ಧ ಚೇತನಕ್ಕೆ ಒಂದು ಬಗೆಯ ಸ್ಫೂರ್ತಿಯ ಚಿಲುಮೆಯಾಗಿ ಚಿಮ್ಮುವ ಈ ವಿಶ್ವ ವಿದ್ಯಾರ್ಥಿಗೆ ಒಂದು ಒಗಟಾಗಿ, ಅರಿತಷ್ಟೂ ಆಳವಾಗುತ್ತಾ ತನ್ನ ವಿಸ್ತಾರದ ಹರವನ್ನು ಹರಡುತ್ತಾ ಹೋಗುತ್ತದೆ. ಈ ಅನಂತ ವಿಶ್ವದಲ್ಲಿ ಭೂಮಿಯಿಂದ ವ್ಯೋಮದವರೆಗೆ ವ್ಯಾಪಿಸಬಲ್ಲ ಚೈತನ್ಯದ ಚಿಲುಮೆಗಳೆ ವಿದ್ಯಾರ್ಥಿಗಳು. ಈ ಅನಂತವಾದ ವಿಶ್ವದಲ್ಲಿ ನಾವು ಗರ್ಭದಿಂದ ಬಂದಂದಿನಿಂದ ಗೋರಿಯ ಒಳ ಹೋಗುವವರೆಗೆ ಏನನ್ನು ಕಂಡು ಅನುಭವಿಸುತ್ತೇವೆಯೋ ಅದಷ್ಟೆ ನಮ್ಮ ವಿಶ್ವವಾಗುತ್ತದೆ. ನೋಡುವ ದೃಷ್ಟಿ ಯಾವ ಪೂರ್ವಾಗ್ರಹಗಳಿಗೂ ಒಳಗಾಗದೆ ಪರಿಶುದ್ಧವಾಗಿದ್ದಾಗ ಮಾತ್ರ ಸೃಷ್ಟಿಯ ಸೂಕ್ಷ್ಮಾತಿ ಸೂಕ್ಷ್ಮವನ್ನು ಅರಿಯಲು, ಅರಿತು ಅನುಭವಿಸಲು ಸಾಧ್ಯ.

ವಿಶ್ವದ ಕೋಟ್ಯಾಂತರ ಜೀವ ಜಂತುಗಳಲ್ಲಿ ಮಾನವರಾದ ನಾವೂ ಸಹ ಒಂದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ವಿಕಾಸ ಚಕ್ರದಲ್ಲಿ ತಿರುಗುತ್ತಾ ಬಂದು, ಹಾಗೇ ತಿರುಗುತ್ತಾ ನಿಂದಿರುವವರು, ಮುಂದೆಯೂ ತಿರುಗುತ್ತಾ ಹೋಗುವವರು. ಈ ವಿಕಾಸ ಚಕ್ರದ ಮಿತಿಯ ಒಳಗೆ ನಾವು ನಮ್ಮೆಲ್ಲ ವಿಶ್ವವನ್ನು ಕಂಡುಕೊಂಡು ಬಂದಿದ್ದೇವೆ. ಮೊದಲಿಗಿದ್ದ ನಮ್ಮ ಪೂರ್ವಜರ ರೀತಿನೀತಿಗಳು ಈಗ ಇರದಿದ್ದರೂ ಮಾನಸಿಕವಾಗಿ ಅವರಂತೆಯೆ ಉಳಿದಿರುವ ಸಾಧ್ಯತೆಯಿದೆ ಎಂದರೆ ಆಶ್ಚರ್ಯವಾಗುವುದಿಲ್ಲ. ಅವರು ಏನನ್ನು ಕಂಡು ಭಯಗೊಂಡು ಮೌಢ್ಯತೆಗೆ ಬಲಿಯಾಗಿದ್ದರೋ ಅದೇ ಮೌಢ್ಯ ಈಗಲೂ ನಮ್ಮನ್ನು ಕಾಡುತ್ತಿರುವ ಸಾಧ್ಯತೆಯಲ್ಲಿಯೇ ನಮ್ಮ ಬದುಕು ಸಂಕುಚಿತವಾಗುತ್ತಿದೆ. ವ್ಯೋಮಮನಸ್ಸು ಭೂಮಿಗಿಳಿದು ಅಂಗಳದಲ್ಲಿ ಅಡಗಿ ಕುಳಿತುಕೊಳ್ಳುವಂತಾಗಿದೆ. ಇದಕ್ಕೆ ಮುಖ್ಯವಾದ ಮೂರು ಕಾರಣಗಳೆಂದರೆ ಜಾತಿ, ಮತ ಹಾಗೂ ಸಂಪ್ರದಾಯ.

ಜಾತಿ ಎಂದರೆ ಏನು ? ಇದಕ್ಕೆ ಅರ್ಥವೇ ಇಲ್ಲ. ಆದರೂ ಇದನ್ನು ಕುರಿತು ಆಳವಾಗಿ ಅರ್ಥೈಸುತ್ತಾ, ವ್ಯಾಖ್ಯಾನಿಸುತ್ತ ಶಕ್ತಿಯನ್ನು ವ್ಯಯಮಾಡುತ್ತಾ ಬಂದಿದ್ದೇವೆ. ಇದರ ಹುಟ್ಟಿನ ಗುಟ್ಟು ರಹಸ್ಯವಾಗಿಯೇ ಉಳಿದಿದೆ. ಮೊಳೆತು ಮರವಾಗಿಕೊಂಬೆರೆಂಬೆಗಳಾಗಿ ಎಣಿಕೆಗೆಟುಕದಷ್ಣು ಜಾತಿಗಳ ಜಾಲದಲ್ಲಿ ಸ್ತ್ರೀ ಹಾಗೂ ಪುರುಷ ಎಂಬುವ ಚೈತನ್ಯಗಳೂ ಜಾತಿಗಳಾಗಿ ಹೋಗಿರುವ ದುರಂತವನ್ನು ಕಾಣುತ್ತಿದ್ದೇವೆ. ಕಪ್ಪು, ಬಿಳಿಪು, ಕುರೂಪ, ಸೌಂದರ್ಯಗಳೂ ಜಾತಿಯ ಸಂಕೇತಗಳಾಗಿ ಬಿಡುವ ಅಪಾಯದ ಹಂತದಲ್ಲಿ ಸಮಾಜ ಧಾವಿಸುತ್ತಿದೆ. ವಿನಾಶದತ್ತ ನಮ್ಮ ಅಜ್ಞಾನ ಅದೆಷ್ಟು ತೀವ್ರವಾಗಿ ಧಾವಿಸುತ್ತಿದೆ ಎಂದು ನೆನೆದರೆ ಮೈ ಜುಂ ಎನ್ನುತ್ತದೆ.

ಈ ಅನಿಷ್ಟ ಜಾತಿ ಮನೆ ಮನೆಯಲ್ಲೂ ಮನಮನದಲ್ಲೂ ಅದೆಷ್ಟು ಸೂಕ್ಷ್ಮವಾಗಿ ತನ್ನ ಪ್ರಭಾವವನ್ನು ಬೀರುತ್ತಾ ಮಾನವ ಕುಲವನ್ನು ತನ್ನ ಜಾಲದಲ್ಲಿ ಬಿಗಿದು ಸಮರ್ಥನೆನ್ನುವ ಮಾನವನ ಮೇಲೆ ತನ್ನ ಅಸಮಾನ್ಯ ಪ್ರಭುತ್ವವನ್ನು ಪ್ರತಿಷ್ಠಾಪಿಸಿಕೊಂಡು ನಮ್ಮ ನಾಶದ ಹೇತುವಾಗಿದೆ ಎಂಬುದನ್ನು ನಾವು ಎಚ್ಚೆತ್ತು ಅರಿತುಕೊಳ್ಳಬೇಕು. ಈ ಜಾತಿ ನಾವು ತಾಯಿಯ ಗರ್ಭದಲ್ಲಿ ಅಂಕುರಿಸಿದ ಕ್ಷಣಮಾತ್ರದಲ್ಲಿಯೇ ನಮ್ಮನ್ನು ಕಬಳಿಸುವಷ್ಟು ಸೂಕ್ಷ್ಮವಾಗಿದೆ. ಇದಕ್ಕೆ ಇಷ್ಟೊಂದು ಶಕ್ತಿಯನ್ನು ಕೊಟ್ಟ ನಮ್ಮ ಅಜ್ಞಾ ದತ್ತ ಈಗ ನಾವು ತೀವ್ರವಾಗಿ ಎಚ್ಚೆತ್ತುಕೊಳ್ಳಬೇಕು. ಆ ಎಚ್ಚರ ಮತ್ತೊಂದು ಮೌಢ್ಯವಾಗದೆ ಮಾನವತೆಯ ಪ್ರತೀಕವಾಗಿ ಆಗಬೇಕು. ಇಲ್ಲದಿದ್ದರೆ ನಾವು ಬದುಕುತ್ತಿದ್ದೇವೆ ಎಂಬುದಕ್ಕೆ ಅರ್ಥವೆಲ್ಲಿ ?

ಇನ್ನು ಈ ಮತ ಎನ್ನುವುದು ನಮ್ಮ ಮೌಢ್ಯದ ಹೇತುವಾಗಿ ನಮ್ಮ ಒಳಿತಿಗೆಂದು ಹುಟ್ಟಿಕೊಂಡು ನಮ್ಮ ಹುಟ್ಟನ್ನೇ ಅಡಗಿಸಿದೆ. ಗುಡುಗಿನ ಘರ್ಜನೆಗೋ, ಬಿರುಗಾಳಿಯ ಬಡಿತಕ್ಕೋ ಇಲ್ಲ ಭೂಕಂಪದ ಕಂಪನಕ್ಕೋ ಕಂಪಿಸಿದ ಸದ್ದು ಪೂರ್ವಜರ ಮನದಿಂದ ಮೂಡಿದ ಈ ಮತಗಳು, ದೈವಗಳು ಹುಟ್ಟಿದಂದಿನಿಂದ ಇಂದಿನವರೆಗೂ ನಮ್ಮನ್ನು ಕಾಡುತ್ತಾ ಬಂದಿವೆ. ನಾವು ನಾವಾಗದಂತೆ ನಮ್ಮೊಳಗೆ ತಮ್ಮ ತಾವನ್ನು ಹಿಡಿದಿಟ್ಟುಕೊಂಡು ಬಂದಿವೆ.

ಈ ಮತಗಳು ಬೋಧಿಸಿದ್ದಾದರೂ ಏನು ?

ನಮ್ಮಲ್ಲಿರುವ ಅಸಂಖ್ಯಾತ ಮತಗಳಾವುವೂ ದ್ವೇಷಗಳನ್ನು ಬೋಧಿಸಿಲ್ಲ ನಿಜ. ಆದರೆ ನಮಗರಿವಿಲ್ಲದಂತೆಯೇ ಪರಸ್ಪರ ಪ್ರತ್ಯೇಕಿಸಿವೆ. ಮಾನವ ಕುಲೋದ್ಧಾರಕ್ಕೆಂದು ಹುಟ್ಟಿಕೊಂಡೆವೆಂದು ಹೇಳಿಕೊಂಡಿರುವ ಮತಾಚಾರ್ಯರೆಲ್ಲರೂ ತಮ್ಮ ಕಾಲಾನಂತರ ಒಂದೊಂದು ಮತದ ಮೊಳಕೆ ಮೂಡಲು ಕಾರಣವಾಗಿ ದೈವದ ಮತ್ತೊಂದು ಮೊಗವಾಡವಾಗಿದ್ದಾರೆ. ಅವರ ಹಿಂದೆ ಅಜ್ಞಾನದ ತೇರು ತನ್ನ ವಿಜೃಂಭಿತ ಮೆರವಣಿಗೆಯಲ್ಲಿ ಮೆರೆದಿದೆ. ಬಿದ್ದಿದ್ದ ಕಲ್ಲುಗಳು ಪೂಜೆಗೆದ್ದು ನಿಂತಿವೆ ನಿಲ್ಲುತ್ತಿವೆ. ಹಿಂದಿನ ಮಸಣದ ತಾಣ ಇಂದಿನ ಗುಡಿಯಾಗಿ ಮುಂದೆ ಮತ್ತೆ ಮಸಣವಾಗುವ ಇತಿಹಾಸದ ಈ ಪುನರಾವರ್ತನೆಯ ವಾಸ್ತವ್ಯದ ಅರಿವಿನಿಂದ ನಮ್ಮ ಜಾಗೃತಿಯಾಗಬೇಕಾಗಿದೆ. ಧರ್ಮಗ್ರಂಥಗಳನ್ನ, ಗುರುಪೀಠಗಳನ್ನ, ಮಠಾಧೀಶ್ವರರನ್ನ, ಬೂದಿ ಕೊಡುವವರನ್ನ ಸರಿಯಾಗಿ ಅರ್ಥಮಾಡಿಕೊಳ್ಳುವುದರ ಮೂಲಕ ಪೂರ್ಣ ಚೈತನ್ಯ ಸ್ವರೂಪಿಯಾದ ಏಕಲವ್ಯನ ರೀತಿ, ನಮ್ಮ ಬೆಳಕಿನ ಹಾದಿಯನ್ನು ನಾವೇ ಕಂಡುಕೊಳ್ಳಬೇಕಾಗಿದೆ. ಯಾರದೋ ಅಸೂಯೆ ಏಕಲವ್ಯನನ್ನೂ ತಟ್ಟಿದಂತೆ ನಮ್ಮ ಸಮಾಜದ ಅಜ್ಞಾನದ ಕಾವು ನಮ್ಮ ಚೈತನ್ಯವನ್ನು ದಮನಮಾಡಲು ಹವಣಿಸುತ್ತಿದೆ. ಅದಕ್ಕೆ ಅವಕಾಶಕೊಡದಂತೆ ನಮ್ಮಲ್ಲಿ ಜಾಗೃತಿಯಾಗಬೇಕು.

ಇನ್ನು ಈ ಸಂಪ್ರದಾಯವೆಂಬುದು ಸೋಮಾರಿಗೆ ಸೋಪಾನವಿದ್ದಂತೆ. ಯಾವುದೋ ಕಾಲದಲ್ಲಿ ಯಾರೋ ಏತಕ್ಕಾಗಿಯೋ ಮಾಡಿಕೊಂಡದ್ದನ್ನು ಈಗಲೂ ಅಗತ್ಯವಿರಲಿ ಇಲ್ಲದಿರಲಿ ಆಕಳಿಸುತ್ತ ಅನುಸರಿಸುವ ಅಂಟು ಜಾಡ್ಯವಾಗಿದೆ.

ನಾವು ಆಚರಿಸುವ ಆಚರಣೆಗಳ ಅರ್ಥ, ಮೌಲ್ಯಗಳನ್ನು ತಿಳಿಯದೆ ಅನುಸರಿಸುವುದರಿಂದ ಅದು ನಮ್ಮನ್ನು ಮೃಗಗಳಿಗಿಂತಲೂ ಕೀಳಾಗಿಸುತ್ತದೆ. ಹೀಗೆ ಪಶು ಸ್ವಭಾವಕ್ಕಿಳಿಸುವ ಈ ಸಂಪ್ರದಾಯದ ಜಾಡು ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಂಡು ಕಡೆಗೆ ಒಂದು ವರ್ಗದ ಜನರು ತಲೆಯ ಮೇಲೆ ಮಲವನ್ನು ಹೊರಬೇಕೆಂಬುದು, ಕಪ್ಪು ಜನರು ಬಿಳಿಯರ ಗುಲಾಮರಾಗಿರಬೇಕೆಂಬುದು, ಬಲಿತ ಜನ ದಲಿತರನ್ನು ಸುಲಿದು ತಿನ್ನುವುದು ಸಹಜ ಸಂಪ್ರದಾಯವಾಗಿ ಬಿಡುತ್ತದೆ. ಹೀಗಾಗಿ,

ಖಂಡಕ್ಕೆ ಕಟುಕ, ಹೆಂಡಕ್ಕೆ ಹೊಲೆಯ
ದಂಡಕ್ಕೆ ಕೃಷಿಕ, ಹಾರುವನು ತಂದು ತಾ
ಪಿಂಡಕ್ಕೆ ಇಡುವ- ಸರ್ವಜ್ಞ

ಇವುಗಳೆಲ್ಲಾ ಸಂಪ್ರದಾಯವಾಗಿ ಉಳಿದು ಕಾಲಕಳೆದಂತೆ ಸಂಸ್ಕಾರ ಎನ್ನುವ ಅಜ್ಞಾನದ ಹೆಸರಿಗೆ ತುತ್ತಾಗಿ ಸಮಾಜದ ಸುಲಿಗೆಗೆ, ಜೀವ ಜೀವಗಳ ಬಲಿಗೆ ಕಾರಣವಾಗಿ ದುರಂತಕ್ಕೆ ದಾರಿಮಾಡಿಕೊಟ್ಟಿರುವುದನ್ನು ಕಾಣುತ್ತೇವೆ. ಹೀಗೆ ಮೌಢ್ಯಕ್ಕೆ, ಅಂಧಕಾರಕ್ಕೆ, ಸೋಂಕಿಗೆ ಬಲಿಯಾದ ಸಮಾಜ ವಿದ್ಯಾರ್ಥಿಗಳು ಮುಕ್ತ ವಾತಾವರಣದಲ್ಲಿ ಬೆಳೆಯದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆರ್ಥಿಕ ಅಸಮತೆ, ಜಾತಿಭೇದ, ವರ್ಣಭೇದ, ಮತಭೇದ, ಭಾಷಾಭೇದ, ಪ್ರಾದೇಶಿಕ ಭೇದ, ಸ್ತ್ರೀಪುರುಷ ಭೇದ ಇತ್ಯಾದಿಗಳಿಂದ ಅವರ ಮನಸ್ಸನ್ನು ಛಿದ್ರಗೊಳಿಸಲಾಗಿದೆ. ಅವರ ಸುತ್ತ ಗುಡುಗುತ್ತಿರುವ ಪಕ್ಷಪಾತದ ಪಿಡುಗು ಅವರ ಸಾಮರ್ಥ್ಯಕ್ಕೆ ಕುಟ್ಟೆ ಹಿಡಿಯುವಂತೆ ಮಾಡಿದೆ. ವಾಸ್ತವತೆಯನ್ನು ಮರೆಮಾಡಿ ಬರಿಯ ಹೇಳಿಕೆಗಳಲ್ಲಿ, ಘೋಷಣೆಗಳಲ್ಲಿ, ರಂಗುರಂಗಿನ ಆಕರ್ಷಕ ಭಾಷಣಗಳಲ್ಲಿ, ಸರ್ಕಾರದ ಫೈಲುಗಳಲ್ಲಿ ಮಾಯಾಜಾಲವನ್ನು ಹೆಣೆಯಲಾಗುತ್ತಿದೆ. ಈ ರೀತಿಯ ವಂಚನೆಯ ಪರಿಣಾಮ ತನಗೆ ತಾನೇ ಮೃತ್ಯುವಾದ ಭಸ್ಮಾಸುರನ ಸ್ಥಿತಿ.

ಗಾಂಧಿಯಿಂದ ಹಿಡಿದು ಇಂದಿನ ಯಕಃಶ್ಚಿತ್ ರಾಜಕೀಯ ಪುಡಾರಿಯವರೆಗೂ ವಿದ್ಯಾರ್ಥಿ ಅವರ ರಾಜಕೀಯದ ಕೈಗೊಂಬೆಯಾಗಿರುವುದನ್ನು ಕಾಣುತ್ತಿದ್ದೇವೆ. ಅವನ ಅಧ್ಯಯನಕ್ಕಾಗಿ ಯಾರೂ ಚಿಂತಿಸುವುದಿಲ್ಲ. ಅವನ ವ್ಯಕ್ತಿತ್ವದ ಪೂರ್ಣ ಬೆಳವಣಿಗೆಗಾಗಿ ಯಾರೂ ಯೋಚಿಸುವುದಿಲ್ಲ. ಅದರ ಪರಿಣಾಮ ದೇಶದಗಲಕ್ಕೂ ಮೋಜಿನ ಸಿನಿಮಾ ಮಂದಿರಗಳು, ಬಾರ್, ಹೋಟೆಲ್‌ಗಳೂ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಅಣಬೆಯಂತೆ ಎದ್ದುನಿಲ್ಲುತ್ತಿದ್ದರೂ ವಿದ್ಯಾರ್ಥಿಗಳು ಮುರುಕಲು ಕಟ್ಟಡಗಳಲ್ಲಿ ಯಾವ ಸಲಕರಣೆಗಳೂ ಇಲ್ಲದೆ ವಿದ್ಯಾರ್ಜನೆ ಮಾಡಬೇಕಾಗಿ ಬಂದಿದೆ. ಇದಕ್ಕಿಂತ ಮಿಗಿಲಾದ ಸ್ವಾತಂತ್ರ್ಯದ ಶತ್ರು ಬೇರೊಬ್ಬನಿದ್ದಾನೆಯೆ?

ವಿದ್ಯಾರ್ಧಿಗಳೆ, ಜಾಗೃತರಾಗಿ. ಹತ್ತಾರು ಆಸೆ ಆಮಿಷಗಳಿಂದ ನಿಮ್ಮನ್ನು ಬಲಿಗೊಳ್ಳುವ ದುಷ್ಟಶಕ್ತಿಗಳ ಸಂಚುಕೂಟ ಪ್ರಬಲವಾಗಿ ಹೆಣೆದುಕೊಂಡಿದೆ. ನಿಮ್ಮಿಂದ ಮುಷ್ಕರ ಮಾಡಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವ ಈ ಮೂವತ್ತು ವರ್ಷಗಳ ಸ್ವಾತಂತ್ರ್ಯ ಪರಿಣತರಿದ್ದಾರೆ. ವಿದ್ಯೆಯೊಂದನ್ನು ಬಿಟ್ಟು ನಿಮಗೆ ಮಿಕ್ಕೆಲ್ಲವನ್ನೂ ಕೊಡುವ ಸಾಮರ್ಥ್ಯವನ್ನು ಅವರು ಪಡೆದುಕೊಂಡಿದ್ದಾರೆ. ಫಲವತ್ತಾದ ನಿಮ್ಮ ಮನಸ್ಸಿನ ಮೇಲೆ ಎಲ್ಲ ತರಹದ ವಿಷಬೀಜಗಳನ್ನು ಬಿತ್ತಲು ಕಾತುರರಾಗಿದ್ದಾರೆ. ನಿಮ್ಮನ್ನು ನೀವೇ ವಂಚಿಸಿಕೊಳ್ಳುವಂತಹ ಮಾರ್ಗಗಳನ್ನು ಸುಲಭವಾಗಿ ಅವರ ಅನುಭವದ ಹಾದಿಯಲ್ಲಿ ತೋರಿಸಿಕೊಡುವವರಿದ್ದಾರೆ. ಸ್ತ್ರೀ ಎಷ್ಟೇ ಬುದ್ದಿವಂತಳಾದರೂ ಕಾಲೇಜಿನ ಪದವಿ ಗಂಡನ ಆಯ್ಕೆಗೆ ಮೀಸಲಾದ ಪರವಾನಗಿಯಾಗಿ ಅವಳನ್ನು ಅಷ್ಟಕ್ಕೇ ಸೀಮಿತಗೊಳಿಸಿ ಮಾತಿನಲ್ಲಿ ಮಾತ್ರ ಅವಳ ವಿಮೋಚನೆಯ ಮಳೆಗರೆದಿದ್ದಾರೆ. ಈ ಎಲ್ಲ ದುಷ್ಟ ಶಕ್ತಿಗಳ ಪ್ರಬಲ ಪ್ರವಾಹದ ವಿರುದ್ಧ ನೀವು ಈಜುವ, ಈಜಿ ಜೈಸುವ ಶಕ್ತಿಯನ್ನು ರೂಢಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ಮಡುಗಟ್ಟಿರುವ ಕೊಳಚೆಯಲ್ಲಿ ನಿಮ್ಮ ಬದುಕು ಕಮರಿಹೋಗುತ್ತದೆ. ಅಲ್ಲದೆ ಸ್ವೇಚ್ಛೆಗೆ ತಿರಗುವ ಸ್ವಾತಂತ್ರ್ಯ ಸರ್ವನಾಶಕ್ಕೆ ದಾರಿ ಮಾಡುತ್ತದೆ. ನವ ಸಮಾಜದ ನಿರ್ಮಾಣ ಸಾಧ್ಯವಾಗದೆ ನಿರ್ನಾಮವಾಗುತ್ತದೆ. “ಯಾವ ವಿದ್ಯೆಯಿಂದ ನಾವು ಗುಣವಂತರಾಗಬಲ್ಲೆವೋ, ದೃಡಚಿತ್ತರಾಗಬಲ್ಲೆವೋ, ಬುದ್ಧಿಶಕ್ತಿ ವೃದ್ಧಿಯಾಗಬಲ್ಲುದೋ ಹಾಗೂ ಯಾವುದರಿಂದ ನಾವು ನಮ್ಮ ಕಾಲ ಮೇಲೆ ನಿಲ್ಲಬಲ್ಲವರಾಗುವೆವೋ ಅಂತಹ ವಿದ್ಯೆ ನಮಗೆ ಬೇಕು (We want that education by which character is formed, the strength of mind is increased, the intellect is expanded and by which one can stand on ones feet – Swami Vivekananda) ಎಂದು ವಿವೇಕಾನಂದರು ಆಗಬೇಕಾಗಿದ್ದ ಅತ್ಯಂತ ಅಗತ್ಯವನ್ನು ಕುರಿತು ಒತ್ತಿ ಹೇಳಿದರು. ಆದರೆ ನಮ್ಮ ಸ್ವತಂತ್ರ ಭಾರತ ತಯಾರು ಮಾಡಿದ, ಮಾಡುತ್ತಿರುವ ರೀತಿಯೇ ಬೇರೆ. ಗುಣವಂತರಾಗಲಾರದ, ದೃಢಚಿತ್ತತೆ ಸಾಧ್ಯವಿಲ್ಲದ, ಬುದ್ಧಿಶಕ್ತಿ ಸಂಕುಚಿತವಾಗುವ ಹಾಗೂ ಎಲ್ಲರೂ ಪರತಂತ್ರರಾಗುವ ವಿದ್ಯೆಯ ನೆಲೆಗಟ್ಟಿನ ಮೇಲೆ ತಯಾರು ಮಾಡಿತು. ಅದರ ಪರಿಣಾಮ; ಹೊರದೇಶದ ರೋಗರುಜಿನಗಳು ಕ್ಷಣ ಮಾತ್ರದಲ್ಲಿ ನಮ್ಮವುಗಳಾದವು. ನಾವು ಸ್ವಾತಂತ್ರ್ಯ ಪಡೆದರೂ ಮಾನಸಿಕ ದಾಸ್ಯದಿಂದ ಮುಕ್ತಿ ಪಡೆಯದಾದೆವು. ಹಾಸು ಹೊಕ್ಕಾಗಿರುವ ಲಂಚಗುಳಿತನ, ಭ್ರಷ್ಟಾಚಾರ, ಅನೈತಿಕತೆ, ಅನೈಕ್ಯತೆ, ಅಸೂಯೆ, ಹೊಣೆಗೇಡಿತನ, ನಿಷ್ಕ್ರಿಯಾತ್ಮಕ ಯೋಜನೆಗಳು, ನಿರುದ್ಯೋಗ, ಸೋಮಾರಿತನ ಬದುಕಿನ ಉದ್ದಗಲಕ್ಕೂ ಹರಡಿಕೊಂಡವು. ಮಾತಿನಲ್ಲಿ ಸತ್ಯ ಧರ್ಮದ ಹೊಳೆಹರಿಸಿ, ಹಣೆಯಲ್ಲಿ ನಂಬಿಕೆಯ ನಾಮ, ವಿಭೂತಿ, ಗಂಧ, ಮುದ್ರೆಗಳನ್ನು ಹಾಕಿಕೊಂಡು ಕಛೇರಿಯಲ್ಲಿ ಕಂಡ ಕಂಡವರಿಗೆಲ್ಲ ಹಲ್ಕಿರಿದು ಹಳಸಲು ಅನ್ನಕ್ಕಾಗಿ ಅಂಗಲಾಚಿದೆವು. ಭ್ರಷ್ಟಾಚಾರವನ್ನು ಬೆನ್ನಿಗೆ ಕಟ್ಟಿಕೊಂಡೆವು. ವಾಸ್ತವದಲ್ಲಿ ನಾವು ಹೀಗೆ ವಂಚಿತರಾಗಿದ್ದರೂ ಮೇಲೆ ಮೇಲೆ ವಿಧೇಯರಾಗಿ, ನಿಷ್ಠೆ, ನಿಸ್ಪೃಹತೆ, ನಂಬಿಕೆಯ ನಾಟಕ ಆಡುತ್ತ ಗುಟ್ಟಿನಲ್ಲಿ ಗುಳ್ಳೆನರಿಯಾಗಿಯೆ ಉಳಿದು ನಗಬಾರದಿದ್ದರೂ ನಗುತ್ತ, ಇಷ್ಟವಿಲ್ಲದಿದ್ದರೂ ಇದ್ದಂತೆ ನಟಿಸುತ್ತಿದ್ದೇವೆ. (We take greater pains to persuade others that we are happy than endeavouring to think to ourselves -CONFUSIUS ) ಸತ್ಯವನ್ನ, ಸರಿ ಎನಿಸಿದ್ದನ್ನು ಹೇಳುವ ಎದೆಗಾರಿಕೆ ಇಲ್ಲದೆ ಒಂದು ನಾಜೂಕಿನ ಕೃತಕ ವಾತಾವರಣದಲ್ಲಿ ಏನೂ ಮಾಡಲಾಗದ ಉಸಿರುಗಟ್ಟಿಸುವ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಮ್ಮನ್ನು ನಾವೇ ಬಂಧಿಸಿಕೊಂಡಿದ್ದೇವೆ.

ಹೀಗೆ ವಂಚನೆಗೆ ಬಲಿಯಾಗಿರುವ ನಮ್ಮ ಸಮಾಜದಲ್ಲಿ ಒಂದು ಕಡೆ ಹಸುಗೂಸುಗಳು ಅನ್ನವಿಲ್ಲದೆ ಅಲೆಯುವ, ಮತ್ತೊಂದು ಕಡೆ ಎಲ್ಲವೂ ಇದ್ದು ಅನಾಥರಾಗಿರುವ ಪರಿಸ್ಥಿತಿಯುಂಟಾಗಿ ಒಟ್ಟಾರೆ ಇಡೀ ಸಮಾಜ ಒಂದು ರೀತಿಯ ಜೀವನ್ಮೃತ ಪ್ರೇತಗಳ ಬೀಡಾಗಿದೆ. ಕ್ರಾಂತಿ ಮಾತಿನ, ದೊಗಲೆ ಪ್ಯಾಂಟಿನ ವೀರರು ಹಳಸಲು ಹರಿಕತೆಗೆ ಎದೆ ತೆರೆದು ನಿಂತು ಕಾಲಹಾಕುತ್ತಾರೆ. ಯಾವ ಹೊಸ ಬದಲಾವಣೆಗೂ ಮಿಡಿಯದ ಸ್ತ್ರೀಯರಮನ ಗಂಡ ತರುವ ಅನ್ಯಾಯದ ಹಣಕ್ಕೆ ಅವಕಾಶ ಕೊಟ್ಟುಕೊಂಡು ಹೋಗುತ್ತದೆ. ಹೀಗೆ ಸಮತೆಯ ಸಮಾಜ ತನ್ನ ಸ್ವರೂಪವನ್ನು ಬದಲಾಯಿಸುತ್ತಾ ಸುಲಿಗೆ ಮಾಡುತ್ತಲೇ ಹೋಗುತ್ತದೆ, ಶೋಷಣೆಗೆ ಒಳಗಾಗುತ್ತಲೇ ಇರುತ್ತದೆ. ಇಂಥ ಸಮಾಜದಲ್ಲಿ ಪಾರ್ಥೇನಿಯಂ ಪ್ರಭುಗಳಾಗಿ ಮೆರೆಯುತ್ತವೆ.

ವಿದ್ಯಾರ್ಥಿಗಳೇ, ನಿಮ್ಮ ಚಿಂತನೆ, ಬದುಕು ಬದಲಾಗಬೇಕು. ಸಂಪ್ರದಾಯಕ್ಕೆ ನೇತು ಹಾಕಿಕೊಂಡಿರುವವರಿಂದ ಏನನ್ನು ಬಯಸಬಲ್ಲಿರಿ? ನಿಮ್ಮ ಅಂತರಾಳದಲ್ಲಿ ತುಡಿಯುತ್ತಿರುವ, ಮನಸ್ಸಿನಾಳದಲ್ಲಿ ಮಿಡಿಯುತ್ತಿರುವ ಹತ್ತಾರು ಭಾವನೆಗಳನ್ನು ಬದುಕಿಗೆ ಹೇಗೆ ತರಬಲ್ಲಿರಿ? ಸಂಪ್ರದಾಯದಾಚೆಗೂ ವಿಸ್ತರಿಸಿಕೊಂಡಿರುವ ಸುಂದರ ವಿಶ್ವವನ್ನು ಕಂಡು ಹೇಗೆ ಅನುಭವಿಸಬಲ್ಲಿರಿ? ಹೊಸದನ್ನು ಬಯಸಿ ನಿಮ್ಮಡೆಗೆ ದೈನ್ಯದ ಮೊಗಮಾಡುವ ಮುಗ್ಧ ಮಕ್ಕಳಿಗೆ ಏನನ್ನು ಉಣಿಸುವಿರಿ? ಅಸಮಾನತೆಯನ್ನೇ? ಅನ್ಯಾಯವನ್ನೇ? ಹಳಸಲನ್ನೆ? ವಿದ್ಯಾರ್ಥಿಗಳೇ, ನಿರ್ಧರಿಸಿ. ನಿಮ್ಮ ಮುಂದೆ ವಿಶಾಲವಾಗಿ ತೆರೆದುಕೊಂಡಿರುವ ಈ ವಿಶ್ವದಲ್ಲಿ ನೀವು ಬದಲಾಗಬೇಕು. ನೀವು ನೀವಾಗಬೇಕು.

ಮಾನವತೆಯ ನೆಲಗಟ್ಟಿನ ಮೇಲೆ ನಿಲ್ಲುವಂತಾಗಬೇಕು. ಆ ತುಡಿತ ನಿಮ್ಮ ರಕ್ತದ ಕಣಕಣದಲ್ಲೂ ಮಿಡಿಯಬೇಕು. ಬದುಕಿನಲ್ಲಿ ಪರಿಶುದ್ಧತೆಯ ತೀವ್ರತೆ ನಿಮ್ಮ ಧಮನಿ ಧಮನಿಗಳಲ್ಲಿ ಧುಮ್ಮಿಕ್ಕಬೇಕು. ನಿಮ್ಮ ಜ್ಞಾನದ ದಾಹ ಹರಿತವಾಗಬೇಕು. ಅದು ಹರಿತವಾದಷ್ಟು ನಿಮ್ಮ ವಿಶ್ವ ವಿಸ್ತರಿಸುತ್ತಾ ಹೋಗುತ್ತದೆ. ನೀವು ವಿಶ್ವವಾಗುತ್ತೀರಿ; ವಿಶ್ವ ನಿಮ್ಮದಾಗುತ್ತದೆ. (ಎ. ವಿ. ಕಾಂತಮ್ಮ ಮಹಿಳಾ ಕಾಲೇಜಿನ ಕಲಾವಿಭಾಗದವರು ಏರ್ಪಡಿಸಿದ್ದ ಉಪನ್ಯಾಸ ಸಪ್ತಾಹದಲ್ಲಿ ಮಂಡಿಸಿದ ಲೇಖನ.)
ಮಾರ್ಚಿ ೧೯೭೮
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿ – ಹಗಲು
Next post ಈರುಳ್ಳಿ

ಸಣ್ಣ ಕತೆ

 • ಅವರು ನಮ್ಮವರಲ್ಲ

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys