ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಕ.ಸಾ.ಪ.ದಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ಮಡಿಕೇರಿಯಲ್ಲಿ ಕಾದಂಬರಿಕಾರ ಭಾರತೀಸುತರ ಸಂಸ್ಮರಣ ಕಾರ್ಯಕ್ರಮವನ್ನು ೨೦೦೯ರ ಅಕ್ಟಟೋಬರ್‌ ೧೫ ರಂದು ಇರಿಸಿಕೊಂಡಿದ್ದರು. ಅದರಲ್ಲಿ ಭಾರತೀ ಸುತರ ಕಾದಂಬರಿಗಳು ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ನಾನು ಭಾರತೀಸುತರು ಕಂಡ ಪಣಿಯರ ಜಗತ್ತು ಎಂಬ ಪ್ರಬಂಧ ಮಂಡಿಸಬೇಕಿತ್ತು.

ನಾನು ಭಾರತೀ ಸುತರ ಕಾದಂಬರಿಗಳೆಲ್ಲವನ್ನೂ ಓದಿದವನು. ದಲಿತರ ಮತ್ತು ಕೆಳವರ್ಗದವರ ಬದುಕು ಅವರ ಬಹುತೇಕ ಕಾದಂಬರಿಗಳ ವಸ್ತು. ಅವರು ವೈನಾಡಿನಲ್ಲಿ ಕಾಫಿ ಎಸ್ಟೇಟು ಒಂದರ ರೈಟರಾಗಿದ್ದ ಕಾಲದಲ್ಲಿ ದಲಿತ ವರ್ಗಕ್ಕೆ ಸೇರಿದ ಪಣಿಯರ ಜೀವನವನ್ನು ತೀರಾ ಹತ್ತಿರದಿಂದ ಕಂಡವರು. ನಿರಂಜನರಂತೆ ಭಾರತೀಸುತರೂ ಒಬ್ಬ ಪ್ರಗತಿಪರ ಬರಹಗಾರ. ವಿಚಾರ ಸಂಕಿರಣದ ಸಲುವಾಗಿ ನಾನು ಮತ್ತೊಮ್ಮೆ ಭಾರತೀ ಸುತರ ಕಾದಂಬರಿಗಳನ್ನು ಓದಬೇಕಾಯಿತು. ಅವುಗಳಲ್ಲಿ ಗಿರಿಕನ್ಯೆ, ಎಡಕಲ್ಲು ಗುಡ್ಡದ ಮೇಲೆ ಮತ್ತು ಹುಲಿಯ ಹಾಲಿನ ಮೇವು ಚಲನಚಿತ್ರಗಳಾಗಿ ಜನಪ್ರಿಯತೆ ಪಡೆದಿದ್ದವು.

ಕಾರ್ಯಕ್ರಮ ಸಂಯೋಜಿಸಿದ ಕೊಡಗು ಕ.ಸಾ.ಪ. ಅಧ್ಯಕ್ಷ ಟಿ.ಪಿ. ರಮೇಶ್‌ ಪುತ್ತೂರಿನ ಶ್ರೀಧರ್‌ರ ಸಂಪಾದಕತ್ವದಲ್ಲಿ ಎಲ್ಲಾ ಪ್ರಬಂಧಗಳು ಸಂಕಲನ ರೂಪದಲ್ಲಿ ಹೊರಬರಲಿವೆ. ಅದರ ಹೊಣೆ ಸಾಹಿತ್ಯ ಅಕಾಡೆಮಿಯದ್ದು ಎಂದು ಎಚ್ಚರಿಸಿದ್ದರು. ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶ್ರೀಧರ್‌ ನನ್ನಲ್ಲಿಲ್ಲದ ಪುಸ್ತಕಗಳನ್ನು ಕಳುಹಿಸಿ ಕೊಟ್ಟು ಲೇಖನ ಚೆನ್ನಾಗಿರಬೇಕು ಎಂದಿದ್ದರು. ಆಮಂತ್ರಣ ಪತ್ರಿಕೆ ಸಿದ್ಧವಾಗಿ ನನ್ನ ವಿಳಾಸಕ್ಕೆ ಬಂತು. ನನ್ನ ಪ್ರಬಂಧವೂ ಸಿದ್ಧಗೊಂಡು ಟಿ.ಪಿ. ರಮೇಶ್‌ ಕೈ ಸೇರಿತು. ಕಾರ್ಯಕ್ರಮಕ್ಕೆ ಮೂರು ದಿನ ಇದೆಯೆನ್ನುವಾಗ ನನ್ನ ಕಾಲು ತುಂಡಾಯಿತು. ನನ್ನ ಪ್ರಬಂಧ ವನ್ನು ಪತ್ರಕರ್ತ ಸಂಶುದ್ದೀನ್‌ ಕಾರ್ಯಕ್ರಮದಂದು ಓದಿದರು. ಏನೇ ಆದರೂ ನೀವು ಬಾರದೆ ಕಾರ್ಯಕ್ರಮ ಕಳೆ ಕಟ್ಟಲಿಲ್ಲ ಎಂದು ಟಿ.ಪಿ. ರಮೇಶ್‌ ಪೇಚಾಡಿಕೊಂಡರು.

ಹಾಗೆ ಪೇಚಾಡಿಕೊಂಡ ಇನ್ನೊಬ್ಬರು ಉಡುಪಿಯ ರಮೇಶ್‌ ಭಟ್.  ಅವರು ಕಾಪುವಿನಲ್ಲಿ ಜೂನಿಯರ್‌ ಕಾಲೇಜೊಂದರಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರು. ೨೦೦೫ ರ ಪಿಯುಸಿ ಅರ್ಥಶಾಸ್ತ್ರ ಪಠ್ಯಕ್ರಮ ರೂಪೀಕರಣ ಸಮಿತಿಯ ಸದಸ್ಯರಾಗಿ ನಮ್ಮ ಪರಿಚಯ. ಅದು ಸ್ನೇಹಕ್ಕೆ ತಿರುಗಿ ನೀವು ಉಡುಪಿ ಜಿಲ್ಲಾ ಕಿರಿಯ ಮಹಾವಿದ್ಯಾಲಯಗಳ ಅರ್ಥಶಾಸ್ತ್ರ ಪ್ರಾಧ್ಯಾಪಕರಿಗಾಗಿ ಲೇಟೆಸ್ಟ್ ವಿಷಯದ ಬಗ್ಗೆ ಎರಡು ಗಂಟೆ ಉಪನ್ಯಾಸ ನೀಡಬೇಕು ಎಂದರು. ಅರ್ಥಶಾಸ್ತ್ರದ ಸಂಶೋಧನಾ ವಿಧಾನಗಳು ಎಂಬ ಬಗ್ಗೆ ನಾನೊಂದು ಸಿಡಿ ತಯಾರಿಸಿ ಸನ್ನದ್ಧನಾದೆ.  ಆ ಕಾರ್ಯಕ್ರಮ ಅಕ್ಟೋಬರ್ ೨೦ ಕ್ಕೆಂದು ನಿಗದಿಯಾಗಿತ್ತು. ನನ್ನ ಕಾಲು ತುಂಡಾದ ರಾತ್ರಿ ರಮೇಶ ಭಟ್ಟರ ಕಾರ್ಯಕ್ರಮದ ನೆನಪಾಗಿ ಅವರಿಗೆ ವಿಷಯ ತಿಳಿಸಿದೆ. ಅವರು ಬೇರೆ ಯಾರನ್ನೋ ಕರೆಸಿ ಕಾರ್ಯಕ್ರಮ ನಡೆಸಿದರು. ಮರುದಿನ ನನ್ನನ್ನು ನೋಡಬಂದರು. ಕಂಠ ಗದ್ಗದಿತವಾಗಿ ಅವರಿಗೆ ಮಾತಾಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನೊಮ್ಮೆ ಬಂದೇ ಬರುತ್ತೇನೆ ಎಂದಾಗ ಅವರ ಮುಖದಲ್ಲಿ ಸ್ವಲ್ಪ ನಗು ಕಾಣಿಸಿಕೊಂಡಿತು. ನನ್ನ ನಾಲ್ಕು ಕೃತಿಗಳನ್ನು ಕೊಂಡು ಮುಖಬೆಲೆ ನೀಡಿ ಇದು ನಾನು ನಿಮಗೆ ಈ ಕಷ್ಟ ಕಾಲದಲ್ಲಿ ಮಾಡಬಹುದಾದ ಸಹಾಯ. ನಿಮ್ಮ ದೇಶ ಯಾವುದಾದರೇನು ಕೃತಿಯನ್ನು ನಾನು ಐದೋ ಆರೋ ಬಾರಿಯೋ ಓದಿದ್ದೇನೆ. ಅದು ನಿಜಕ್ಕೂ ಅದ್ಭುತ ಕೃತಿ ಎಂದರು.

ಅವರು ಹಾಗಂದಾಗ ನಮ್ಮೊಬ್ಬ ಕನ್ನಡ ಪ್ರಾಧ್ಯಾಪಕರ ವಿಚಿತ್ರ ಥಿಯರಿಯೊಂದು ನೆನಪಾಯಿತು. ಅವರು ಮನೆಗೆ ಬಂದಾಗಲೆಲ್ಲಾ ಶಿಶಿಲರು ಕನ್ನಡ ಎಂ.ಎ. ಮಾಡದ ಕಾರಣ ಅವರ ಕೃತಿಗಳು ಸರಿಯಿಲ್ಲ ಎಂದು ಶೈಲಿಯಲ್ಲಿ ಹೇಳುತ್ತಿದ್ದರು. ಕನ್ನಡ ಎಂ.ಎ. ಮಾಡಿಕೊಳ್ಳಬೇಕಾದದ್ದು ಸಾಹಿತ್ಯ ಸೃಷ್ಟಿಗೆ ಪ್ರಥಮ ಅರ್ಹತೆ ಎಂಬ ಅವರ ಥಿಯರಿಯನ್ನು ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಕನ್ನಡ ಎಂ.ಎ. ಮಾಡಿದವರೆಲ್ಲರೂ ಸಾಹಿತಿಗಳಾಗಿಲ್ಲ. ಆದರೆ ಅವರು ನನ್ನ ಕೃತಿಗಳ ಬಗ್ಗೆ ಬೇರೆಯವರಲ್ಲೂ ಹಾಗೆ ಹೇಳುತ್ತಿದ್ದರು. ಯುರೋಪಿನ ಎಂಟು ದೇಶಗಳ ಪ್ರವಾಸ ಕಥನ “ದೇಶ ಯಾವುದಾದರೇನು” ಪ್ರಕಟವಾದ ಬಳಿಕ ಅವರು ತರಗತಿಗಳಲ್ಲಿ ತಮ್ಮ ಥಿಯರಿಯನ್ನು ಮಂಡನೆ ಮಾಡಿ ಆ ಕೃತಿಯನ್ನು ಯದ್ವಾತದ್ವಾ ಬಯ್ಯತೊಡಗಿದರು. ಅದು ಗೊರೂರು ಪ್ರಶಸ್ತಿ ಗಳಿಸಿತು. ೧೯೯೦ ರ ದಶಕದ ಅತ್ಯುತ್ತಮ ಪ್ರವಾಸ ಕಥನವೆಂದು ವಿಶ್ವೇಶ್ವರಯ್ಯ ಪ್ರಶಸ್ತಿಗೆ ಪಾತ್ರವಾಯಿತು. ಅದರ ಒಂದು ಅಧ್ಯಾಯ ಕರ್ನಾಟಕ ವಿ.ವಿ.ಯ ದ್ವಿತೀಯ ಬಿ.ಎ. ಐಚ್ಚಿಕ ಕನ್ನಡದ ಕಡ್ಡಾಯ ಪಠ್ಯಕ್ಕೆ ಸೇರ್ಪಡೆ ಯಾಯಿತು. ಆಗಲೂ ಅವರ ಸಿದ್ಧಾಂತ ಬದಲಾಗಲಿಲ್ಲ. ಏಕೆಂದರೆ ಅವರು ಪುಸ್ತಕ ಕೊಂಡಿರಲೂ ಇಲ್ಲದೆ ಓದಿರಲೂ ಇಲ್ಲ.

ಆಸ್ಪತ್ರೆಯಲ್ಲಿದ್ದಾಗ ಉಜಿರೆಯಿಂದ ನನ್ನಗುರುಗಳು ಎಸ್‌. ಪ್ರಭಾಕರ್‌ ಫೋನು ಮಾಡಿದ್ದರು. ವಿಶ್ವ ತುಳು ಸಮ್ಮೇಳನದ ಯಕ್ಷಗಾನ ಗೋಷ್ಠಿಗೆ ನಿನ್ನನ್ನು ಕರೆಸಬೇಕೆಂದಿದ್ದೇವೆ. ಬಿಡುವು ಮಾಡಿಕೋ.

ಉಜಿರೆ ನಾನು ಹೈಸ್ಕೂಲು ಮತ್ತು ಕಾಲೇಜು ಶಿಕ್ಷಣ ಪಡೆದ ಊರು. ಸಿದ್ಧವನ ಗುರುಕುಲ ನನ್ನ ಬದುಕನ್ನು ರೂಪಿಸಿದ ಪುಣ್ಯಸ್ಥಳ. ಈಗ ಎಸ್‌. ಡಿ. ಎಂ. ವಿದ್ಯಾಸಂಸ್ಥೆಗಳ ಉಪಾಧ್ಯಕ್ಷರಾಗಿರುವ ಎಸ್‌. ಪ್ರಭಾಕರರು ನಮ್ಮ ಪ್ರಾಚಾರ್ಯರಾಗಿದ್ದರು. ಅವರು ನಮಗೆ ಇಂಟರ್‌ ನ್ಯಾಶನಲ್‌ ರಿಲೇಶನ್ಸ್ ಪಾಠ ಮಾಡುತ್ತಿದ್ದರು. ಬಿ. ಎ. ಯಲ್ಲಿ ನನಗೆ ರಾಜ್ಯಶಾಸ್ತ್ರದಲ್ಲಿ ಪ್ರಥಮ ಸ್ಥಾನದ ಗೋಲ್ಡ್ ಮೆಡಲ್ ಸಿಕ್ಕಿತು. ಗುರುಗಳಿಗೆ ಪರಮಾನಂದವಾಯಿತು. ನೀನು ಪೊಲಿಟಿಕಲ್‌ ಸಯನ್ಸ್‌ ಎಂ.ಎ. ಮಾಡಿದರೆ ಸಬ್ಜೆಕ್ಟ್‌ ಸ್ಕಾಲರ್ಶಿಪ್ಪು ಸಿಗುತ್ತೆ. ಅದನ್ನೇ ಮಾಡು ಎಂದರು. ಆದರೆ ನಾನು ಎಕನಾಮಿಕ್ಸ್ ಓದಿ ಪ್ರಾಧ್ಯಾಪಕನಾದೆ. ನನ್ನ ಅರ್ಥಶಾಸ್ತ್ರದ ಕೃತಿಗಳಲ್ಲಿ ಒಂದನ್ನು ಅವರಿಗೆ ಅರ್ಪಿಸಿದ್ದೆ. ಅದು ಉಜಿರೆ ಕಾಲೇಜಲ್ಲೊಂದು ವಿಶಿಷ್ಟ ಕಾರ್ಯಕ್ರಮವಾಯಿತು. ಕೃತಿಯನ್ನು ನೋಡಿದ ಗುರು ಎಸ್‌. ಪ್ರಭಾಕರರು ಕಾರ್ಯಕ್ರಮದ ಬಳಿಕ ನನ್ನನ್ನು ಡಾ. ವೀರೇಂದ್ರ ಹೆಗ್ಗಡೆಯವರ ಬಳಿಗೆ ಕರೆದೊಯ್ದು ಆ ಕೃತಿಯ ಪ್ರತಿ ಯೊಂದನ್ನು ಅವರಿಗೆ ನೀಡಿ ಹುಡುಗ ಸಿದ್ಧವನದ ಹೆಸರು ಉಳಿಸುತ್ತಾನೆ ಎಂದರು.

ನಾನು ಕಾಲು ತುಂಡಾದುದನ್ನು ತಿಳಿಸಿದಾಗ ಅವರು ಅಯ್ಯಯೋ ದೇವ್ರೆ. ಏನ್‌ ಗ್ರಾಚಾರ ಮಾರಾಯಾ.. ಎಂದು ಉದ್ಗರಿಸಿದರು.  ಮೂರು ತಿಂಗಳುಗಳಲ್ಲಿ ಸರಿಯಾದೀತು ಸರ್‌ ಎಂದು ನಾನು ಅವರ ಸಮಾಧಾನಕ್ಕೆ ಹೇಳಬೇಕಾಯಿತು.

ವಿಶ್ವ ತುಳು ಸಮ್ಮೇಳನದ ವೇದಿಕೆಯಿಂದ ನಾಲ್ಕು ಮಾತಾಡುವ ಅವಕಾಶ ತಪ್ಪಿ ಹೋದುದಕ್ಕೆ ನನಗೆ ತುಂಬಾ ವಿಷಾದವಾಯಿತು. ತುಳು ನನ್ನ ಇಷ್ಟದ ಭಾಷೆ. ಶಾಲಾ ಕಾಲೇಜು ದಿನಗಳಲ್ಲಿ ನಾವು ತುಳುವನ್ನು ತುಳುನಾಡಿನ ಇಂಟರ್‌ನ್ಯಾಶನಲ್‌ ಲ್ಯಾಂಗ್ವೇಜು ಎಂದು ಕರೆಯುತ್ತಿದ್ದೆವು. ನನ್ನೂರು ಶಿಶಿಲ ಅಪ್ಪಟ ತುಳುಭೂಮಿ. ಅಲ್ಲಿ ನಮ್ಮ ಕೂಡು ಕುಟುಂಬದ ಯಜಮಾನ ದೊಡ್ಡ ಮಾವನಿಗೆ ಹದಿನಾಲ್ಕು ಎಕರೆ ಭೂಮಿ ಇತ್ತು. ಮಳೆಗಾಲದ ಏಣೆಲು ಬೆಳೆ ಬೆಳೆಯುವ ಗದ್ದೆಗಳಿದ್ದವು. ಮನೆಯ ಹಿಂಬದಿಯ ತಿಂಗಾಣಿ ಗುಡ್ಡದಿಂದ ಹೊರಟ ಎರಡು ಝುರಿಗಳು ಹೊರಟು ಜಾಗದ ಮಧ್ಯದಲ್ಲಿ ಹರಿದು ಕಪಿಲಾ ನದಿಯನ್ನು ಸಂಗಮಿಸುತ್ತಿದ್ದವು. ಕಪಿಲೆ ಉಕ್ಕಿ ಹರಿದಂದು ಹೊಳೆಯಿಂದ ಮೀನುಗಳು ತೋಡುಗಳಿಗೇರಿ ಹಾದಿ ತಪ್ಪಿ ಗಲಿಬಿಲಿಯಿಂದ ಗದ್ದೆಗಿಳಿಯುತ್ತಿದ್ದವು. ರಾಶಿರಾಶಿ ಆಮೆಗಳು, ಏಡಿಗಳು ಚಿತ್ರವಿಚಿತ್ರವಾಗಿ ಚಲಿಸುತ್ತಿದ್ದವು. ಮಳೆಗಾಲದುದ್ದಕ್ಕೂ ಅಲ್ಲಲ್ಲಿ ಶುಭ್ರ ನೀರಿನ ಒರತೆ. ಮೊಲ, ಕಾಡುಕೋಳಿ, ಕಡವೆ, ಬರಿಂಕ, ಬೆರು, ಕಾಡ ಹಂದಿಗಳು ಗದ್ದೆಗೆ ಬಂದುಬಿಡುತ್ತಿದ್ದವು. ಆಗಾಗ ಆನೆಗಳ ಘೀಳಿಡುವಿಕೆ, ಹುಲಿಗಳ ಗರ್ಜನೆ ಕೇಳಿಸುತ್ತಿತ್ತು.

ಅಂತಹ ಪ್ರಕೃತಿಯ ಮಡಿಲಲ್ಲಿ ನೇಜಿ ನಾಟಿ, ಗದ್ದೆ ಕೋರಿ ಎಂದರೆ ಮಳೆಗಾಲದ ಮಹೋನ್ನತ ಸಂಭ್ರಮ. ಓ ಬೇಲೆ, ಗೋವಿಂದ ಬದನೆ, ರಾವು ಕೊರುಂಗು, ಮಂಜಟ್ಟಿ ಗೋಣ, ದೂಜಿ ಕೆಮ್ಮಯಿರ ಹಾಡುಗಳು, ಶಿಶಿಲ ಜಾತ್ರೆ ಸಂದರ್ಭದ ನೂರಾರು ಭೂತಗಳು, ಅರಸಿನ ಮಕ್ಕಿಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳು, ನಾವು ಆಚರಿಸುತ್ತಿದ್ದ ನಾಗರಪಂಚಮಿ, ಹೊಸಕ್ಕಿ ಊಟ, ಮನೆ ತುಂಬಿಸುವುದು, ಕೆಡ್ಡಸ, ಕಣಿ ಇಡುವುದು, ಹೊಳೆಯ ಆಚೆ ದಂಡೆಯಲ್ಲಿರುವ ಕೋಟೆ ಬಾಗಿಲಿನ ವಾರ್ಷಿಕ ಎರಡು ವಾರ ಪರಿಯಂತ ನಡೆಯುವ ಕೋಳಿಕಟ್ಟ, ಪ್ರತಿವರ್ಷದ ಮಾರಿದೇರುನೆ, ಪುರ್ಸೆರ್‌ ಕಟ್ಟುನೆ‌ ಇತ್ಯಾದಿಗಳು ಎಳವೆಯ ಬದುಕಿಗೆ ಸಂಸ್ಕೃತಿಯ ವೈವಿಧ್ಯವನ್ನು ಪರಿಚಯಿಸುತ್ತಿದ್ದವು.

ತುಳು ಸಂಸ್ಕೃತಿಯನ್ನು ಮೂಲದ್ರವ್ಯವಾಗಿಸಿ ನಾನು ಒಂದಷ್ಟು ಕತೆಗಳನ್ನು ಬರೆದಿದ್ದೆ. ನನ್ನ ಗಗ್ಗರ, ಬಾರಣೆ, ರಾವು ಕೊರುಂಗು, ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು, ಧನಿಗಳು ದೊಂಬಿಗೆ ಹೋಗಿದ್ದಾರೆ ಮುಂತಾದವುಗಳು ಅಪ್ಪಟ ತುಳು ದೇಸೀ ಕತೆಗಳು. ತುಳುವಲ್ಲಿ ಬಾರಣೆ ಎಂಬ ಕಥಾ ಸಂಕಲನವನ್ನು ಕೂಡಾ ನಾನು ಹೊರತಂದಿದ್ದೆ. ಮಂಗಳೂರು ಆಕಾಶವಾಣಿಯಲ್ಲಿ ತುಳು ಭಾಷಣಕಾರನಾಗಿಯೂ ಬಿತ್ತರಗೊಂಡಿದ್ದೆ.

ಉಜಿರೆಯ ವಿಶ್ವ ತುಳು ಸಮ್ಮೇಳನ ತಪ್ಪಿ ಹೋದಾಗ ಹೃದಯ ಭಾರವಾಯಿತು.

ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ಮೇಲೆ ಒಂದು ದಿನ ಡಾ|| ರಮಾನಂದ ಬನಾರಿಯವರ ಕರೆ ಬಂತು. ಅವರು ಯಕ್ಷಗುರು ಕೀರಿಕ್ಕಾಡು ವಿಷ್ಣು ಮಾಸ್ತರರ ಮಗ. ಮಂಜೇಶ್ವರದಲ್ಲಿ ಗಣರಾಜ ಕ್ಲಿನಿಕ್ ಇಟ್ಟುಕೊಂಡಿರುವ ಬನಾರಿಯವರು ಒಳ್ಳೆಯ ಯಕ್ಷಗಾನ ಅರ್ಥಧಾರಿ. ಓರ್ವ ಕವಿಯಾಗಿಯೂ ಹೆಸರು ಗಳಿಸಿದವರು. ಕಾಸರಗೋಡಿನ ನನ್ನ ಮಿತ್ರರೊಬ್ಬರು ಒಂದು ಕಥಾ ಸಂಕಲನ ಪ್ರಕಟಿಸಿದ್ದಾರೆ. ಬಿಡುಗಡೆಗೆ ಬರಲು ಸಾಧ್ಯವಾ ಎಂದು ಕೇಳಿದರು.

ಕಾಸರಗೋಡಿನ ಅನೇಕ ಬರಹಗಾರರೊಡನೆ ನನಗೆ ನಿಕಟ ಸಂಪರ್ಕವಿತ್ತು. ಖ್ಯಾತ ಕತೆಗಾರ ಎಂ. ವ್ಯಾಸ ನನ್ನ ಆತ್ಮೀಯರಾಗಿದ್ದರು. ಜನಾರ್ದನ ಎರ್ಪಕಟ್ಟೆಯವರ ಮೂರು ಸಂಕಲನಗಳನ್ನು ನಾವು ಸ್ವಂತಿಕಾ ಸಾಹಿತ್ಯ ಬಳಗದ ಮೂಲಕ ಹೊರತಂದಿದ್ದೆವು. ಕಾಸರ ಗೋಡು ಸರಕಾರೀ ಕಾಲೇಜಿನ ಎರಡು ಸಮಾರಂಭಗಳಲ್ಲಿ ನಾನು ಭಾಗವಹಿಸಿದ್ದೆ. ಅಪಾರ ಬುದ್ಧಿ ಮತ್ತೆ ಮತ್ತು ತರ್ಕಪಟುತ್ವದ ಮಹಾನ್‌ ಅರ್ಥಧಾರಿ ಶೇಣಿ ಗೋಪಾಲಕೃಷ್ಣ ಭಟ್ಟರು ಕಾಸರಗೋಡಿನವರು. ಒಂದು ಕಾಲದಲ್ಲಿ ಕಾಸರಗೋಡು ನಮ್ಮ ಜಿಲ್ಲೆಯ ಒಂದು ಭಾಗವೇ ಆಗಿತ್ತು.

ರಮಾನಂದ ಬನಾರಿಯವರಿಗೆ ನನ್ನ ಕಾಲು ಮುರಿದುದನ್ನು ತಿಳಿಸಿದೆ. ಅವರು ನನ್ನೆಲ್ಲಾ ಕತೆಗಳನ್ನು ಓದಿ ಅಭಿಪ್ರಾಯ ನೀಡುತ್ತಿದ್ದವರು. ನನ್ನ ನದಿ ಎರಡರ ನಡುವೆ ಕಾದಂಬರಿ ಓದಿ  ನೀವು ಸುಳ್ಯದ ಮಹಾನ್‌ ಪುತ್ರ ಎಂದು ಶ್ಲಾಘಿಸಿದ್ದರು. ನಿಮಗೂ ಹೀಗಾಯಿತೆ… ಎಂಬ ಅವರ ಪ್ರಶ್ನೆಯಲ್ಲಿ ಏನ್‌ ಗ್ರಾಚಾರ ಸಾ ಎಂಬ ದನಿಯಿತ್ತು. ಕೆಲವು ದಿನಗಳ ಮಟ್ಟಿಗೆ “ಕಾಲಾಯ ತಸ್ಮೈ ನಮಃ” ಬನಾರಿಗಳೇ ಎಂದೆ. ಅದು ಕಾಲನ್ನು ಉದ್ದೇಶಿಸಿ ನಾನು ಹೇಳಿದ್ದು. ಆಗ ನಗದಿರಲು ಅವರಿಂದ ಸಾಧ್ಯವಾಗಲಿಲ್ಲ.

ಅವರು ಫೋನ್‌ ಕೆಳಗಿಟ್ಟ ಮೇಲೆ ನನಗೆ ಭಾರತೀಸುತರ ವಿಚಾರ ಸಂಕಿರಣ, ಪಿಯು ಅಧ್ಯಾಪಕರ ಉಪನ್ಯಾಸ ಕಾರ್ಯಕ್ರಮ, ವಿಶ್ವ ತುಳು ಸಮ್ಮೇಳನ ತಪ್ಪಿ ಹೋದ ವಿಷಾದ ತೀವ್ರವಾಗಿ ಕಾಡಿತು. ಈಗ ಒಂದು ಪುಸ್ತಕದ ಬಿಡುಗಡೆಯ ಅವಕಾಶವೂ ತಪ್ಪಿತು.

ನಾನು ಮೌನವಾಗಿ ರೋದಿಸಿದೆ.
ಅದು ನನಗಿಂತಲೂ ಕಷ್ಟದಲ್ಲಿರುವ ಶೈಲಿಗೆ ಕೇಳಿಸಕೂಡದು.
ಗಾದೆಯೊಂದಿದೆ “ಅಳುವ ಗಂಡಸನ್ನು ನಂಬಬಾರದು”
ಮತ್ತೊಂದು ಗಾದೆಯಿದೆ “ವೇದ ಸುಳ್ಳಾದರೂ ಗಾದೆ ಸುಳ್ಳಾಗದು”

ಜನವರಿ ಬಂತು. ಐದು ವರ್ಷಗಳ ಹಿಂದಿನವರೆಗೂ ಕಾಲೇಜು ಮಕ್ಕಳು ಪೈಪೋಟಿ ಯಿಂದ ಫೋನು ಮಾಡಿ ಹೊಸ ವರ್ಷದ ಶುಭಾಶಯ ತಿಳಿಸುತ್ತಿದ್ದರು. ಒಂದು ಬಾರಿ ಮಕ್ಕಳು ಹಟಕ್ಕೆ ಬಿದ್ದವರಂತೆ ರಾತ್ರಿ ೧೨ ಆದ ಬಳಿಕ ಬೆಳಗ್ಗೆ ೮ ರ ವರೆಗೂ ಎಡೆ ಬಿಡದೆ ಫೋನು ಮಾಡಿ ನಿದ್ದೆ ಇಲ್ಲದಂತೆ ಮಾಡಿದ್ದರು. ಮರುವರ್ಷ ಫೋನು ಕನೆಕ್ಷನು ತೆಗೆದಿಟ್ಟೆ. ಐದು ಗಂಟೆಗೆ ಕನೆಕ್ಷನ್ನು ಜೋಡಿಸಿದಾಗ ಪುಂಖಾನು ಪುಂಖ ಕರೆಗಳು.

ಈಗಿನ ಮಕ್ಕಳಲ್ಲಿ ಮೊಬೈಲ್‌ ಇದೆ. ಗುರುಗಳಿಗೆ ಶುಭಾಶಯ ಹೇಳಿ ಯಾವ ಲಾಭವೂ ಇಲ್ಲ ಎಂಬ ಸತ್ಯವೂ ಗೊತ್ತಿದೆ. “ಕಾಲಾಯ ತಸ್ಮೈ ನಮಃ”

ಆಗಿನದ್ದು ಕಾಲಿಗೆ. ಈಗಿನದ್ದು ಕಾಲಕ್ಕೆ.

ಜನವರಿ ೧೦-೧೧ ಸುಳ್ಯದ ಜಾತ್ರೆ. ಅದೂ ಕೂಡಾ ಮೊದಲಿನ ಥ್ರಿಲ್ಲು ಮೂಡಿಸುತ್ತಿಲ್ಲ. ಮೂವತ್ತು ವರ್ಷಗಳ ಹಿಂದೆ ನಾನು ಸುಳ್ಯಕ್ಕೆ ಸೇರಿದಾಗ ದೇವಾಲಯ ಚಿಕ್ಕದಿತ್ತು.  ಆದರೆ ಜಾತ್ರೆ ಅಡ್ಕ ದೊಡ್ಡದಿತ್ತು. ಈಗ ದೇವಾಲಯ ಕುರುಂಜಿ ವೆಂಕಟ್ರಮಣ ಗೌಡರ ಪ್ರಯತ್ನ ಮತ್ತು ಉದಾರತೆಯಿಂದಾಗಿ ದೊಡ್ಡದಾಗಿದೆ. ಆದರೆ ಜಾತ್ರೆ ಅಡ್ಕವೇ ಇಲ್ಲದಾಗಿ ರಥ ಬೀದಿಯೊಂದು ಉಳಕೊಂಡಿದೆ. ಹಿಂದೆ ಹಳ್ಳಿಯವರು ಹಣ ಕೂಡಿಟ್ಟು ಜಾತ್ರೆಯಂದು ತಮಗೆ ಬೇಕಾದುದನ್ನು ತೆಗೆದುಕೊಳ್ಳುತ್ತಿದ್ದರು. ಈಗ ಜಾತ್ರೆಗೆ ಬರುವ ಸರಕುಗಳೆಲ್ಲ ದಿನನಿತ್ಯ ಸುಳ್ಯದಲ್ಲಿ ಸಿಗುತ್ತವೆ. ಈಗ ಜಾತ್ರೆಯಲ್ಲಿರುವ ಆಕರ್ಷಣೆ ಎಂದರೆ ಜಯಂಟ್ ವೀಲು ಮತ್ತು ಕೊಲಂಬಸ್‌ ನಾವೆ ಮಾತ್ರ.

ಈ ಬಾರಿ ಜಾತ್ರೆಗೆ ಹೋಗುವ ಹಾಗಿಲ್ಲ. ಪ್ರತಿವರ್ಷ ಜಾತ್ರೆಯಲ್ಲಿ ಒಂದಷ್ಟು ಹಳೆಯ ಮುಖಗಳು ಕಾಣಸಿಗುತ್ತವೆ. ಎಂದೆಂದೂ ಕಾಣಸಿಗದ ಹಳೆಯ ಮುಖಗಳು ನೆನಪಾಗುತ್ತವೆ. ಕೆಲವೊಮ್ಮೆ ಎಲ್ಲಿ ಹೋದವು ಆ ಹಳೆಯ ಮುಖಗಳು ಎಂಬ ಪ್ರಶ್ನೆ ಕೇಳಿಕೊಳ್ಳುತ್ತಿದ್ದುದಿತ್ತು. ಈ ಬಾರಿ ಅದಕ್ಕೂ ಆಸ್ಪದವಿಲ್ಲ.

ಕಾಲು ಮುರಿದುದಕ್ಕೆ ಇನ್ನೆರಡು ಕಾರ್ಯಕ್ರಮಗಳು ತಪ್ಪಿ ಹೋದವುತ್ “ಚಂದನಾ”ದಲ್ಲಿ ಸಂದರ್ಶನ ಮತ್ತು ಚೇತನಾಳ ಮದುವೆ.  ಚಂದನ ಟೀವಿಯವರು ಸೋಮವಾರ ಬೆಳಗ್ಗಿನ ಸುಪ್ರಭಾತ ಕಾರ್ಯಕ್ರಮಕ್ಕೆ ಎರಡು ಬಾರಿ ನನಗೆ ಕರೆ ಮಾಡಿ ದಿನ ನಿಗದಿ ಪಡಿಸಿದ್ದರು. ಅವರೆಡೂ ಬಾರಿ ನನಗೆ ಹೋಗಲಾಗಿರಲಿಲ್ಲ. ಮೂರನೆಯ ಬಾರಿ ಅವರ ಕರೆ ಬಂದಾಗ ನಾನು ಆಸ್ಪತ್ರೆಯಲ್ಲಿದ್ದೆ. ನಾಲ್ಕನೆ ಬಾರಿ ಕರೆ ಬಂದಾಗ ನಾನು ಬಹುಶಃ ಇನ್ನು ಕನಿಷ್ಠ ಒಂದು ವರ್ಷ ನನ್ನಿಂದ ಬರಲು ಸಾಧ್ಯವಿಲ್ಲ ಎಂದೆ. ಕಾರ್ಯಕ್ರಮ ತಪ್ಪಿಯೇ ಹೋಯಿತು.

ಚೇತನಾ ಎಕನಾಮಿಕ್ಸ್‌ ಎಂ.ಎ. ಮಾಡಿ ಫಿಲೋಮಿನಾದಲ್ಲಿ ಲೆಕ್ಚರರ್‌ ಆಗಿದ್ದಳು. ಆ ಬಳಿಕ ಮಂಗಳೂರಲ್ಲಿ ಒಂದು ವರ್ಷ ದುಡಿದು ಎಂ.ಫಿಲ್ಲ್‌ಗೆ ಹೆಸರು ನೋಂದಾಯಿಸಿದಳು. ಅವಳ ಕ್ಷೇತ್ರಾಧ್ಯಯನಕ್ಕೆ ನಾನು ಒಂದು ಚೌಕಟ್ಟು ಹಾಕಿಕೊಡಬೇಕಾಯಿತು. ಎಂ.ಫಿಲ್ಲ್‌ ಆಗುವ ಮೊದಲೇ ಮದುವೆ ಸಿದ್ಧತೆ ನಡೆಯಿತು. ಅವಳ ಎಂಗೇಜುಮೆಂಟು, ಮದುವೆ ಯಾವುದಕ್ಕೂ ಹೋಗಲು ನನ್ನ ಕಾಲಿನಿಂದಾಗಿ ಸಾಧ್ಯವಾಗಲಿಲ್ಲ. ಮದುವೆಯಾದ ಮರುದಿನ ಒಂದಷ್ಟು ಹೋಳಿಗೆ ಕಟ್ಟಿಸಿಕೊಂಡು ಗಂಡನೊಂದಿಗೆ ನಮ್ಮ ಮನೆಗೆ ಬಂದವಳು ಅವಳ ಜತೆಗೆ ಗಂಡನನ್ನೂ ನನ್ನ ಮುರಿದ ಕಾಲಿಗೆ ಅಡ್ಡ ಬೀಳಿಸಿದಳು.

ಆ ಬಳಿಕ ಇದ್ದಕ್ಕಿದ್ದಂತೆ ಒಂದು ದಿನ ಅವಳ ಫೋನು ಬಂತು.
ನಿಮಗೆ ಆಗದವರು ಯಾರಾದರೂ ಇದ್ದಾರಾ ಸರ್…
ನನಗೆ ಆಗದವರು ಯಾರೂ ಇಲ್ಲ. ನನ್ನನ್ನು ಆಗದವರು ಇರಲೂಬಹುದು. ಯಾಕೆ ಕೇಳಿದೆ…
ನಿಮಗೆ ಢಿಕ್ಕಿ ಕೊಡಬೇಕೆಂದೇ ಯಾರಾದರೂ ಹಾಗೆ ಮಾಡಿಸಿರಬಹುದಲ್ಲವೇ ಸರ್‌…
ಅದೇ ಉದ್ದೇಶವಾಗಿದ್ದರೆ ಢಿಕ್ಕಿ ಕೊಟ್ಟೇ ಬಿಡುತ್ತಿದ್ದರು. ನಾನು ಬಿದ್ದ ಮೇಲೆ ಅವರು ಬಂದು ಎಬ್ಬಿಸಲು ನೋಡುತ್ತಿರಲಿಲ್ಲ.
ನಿಮಗೇನಾದರೂ ಆದರೆ ಅದರಿಂದ ಯಾರಿಗಾದರೂ ಲಾಭ ಆಗುತ್ತದೆಂದಾದರೆ ಅಂಥವರು ಹಾಗೆ ಮಾಡಿಸುವ ಸಂಭವ ಇರುತ್ತದಲ್ಲವೇ ಸರ್‌…
ಸುಮ್ಮನಿರು ಚೇತನಾ ನೀನು. ನಿನ್ನ ಪತ್ತೇದಾರಿಕೆ ಬುದ್ಧಿ ಅತಿಯಾಯಿತು.

ನಾನು ಫೋನಿಟ್ಟೆ. ನಾನು ಸತ್ತು ಹೋದರೆ ಆ ದಿನ ಭಾನುವಾರ ಅಲ್ಲದಿದ್ದರೆ ಕಾಲೇಜು ಮಕ್ಕಳಿಗೆ ಒಂದು ರಜೆ ದೊರೆತೀತು ಅಷ್ಟೇ. ಬೇರೆ ಯಾರಿಗೂ ಯಾವ ಲಾಭವೂ ಇರಲು ಸಾಧ್ಯವಿಲ್ಲ.

ಮತ್ತೊಂದು ಬಾರಿ ಚೇತನಾ ಫೋನ್‌ ಮಾಡಿದಳು.
ನಿಮಗೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ. ಯಾರಲ್ಲಾದರೂ ನಿಮ್ಮ ಜಾತಕ ತೋರಿಸುವುದು ಒಳ್ಳೆಯದು. ಅಷ್ಟು ನಿಧಾನ ಸ್ಕೂಟರ್‌ ಬಿಡುವ ನಿಮಗೂ ಆಕ್ಸಿಡೆಂಟು ಆಗುತ್ತದೆಂದಾದರೆ ನಿಮಗಾಗದವರು ಯಾರೋ ಮಾಟವೋ ಮಂತ್ರವೋ ಮಾಡಿರಬೇಕು ಎನಿಸುತ್ತದೆ.

ನನಗೆ ಆ ನೋವಲ್ಲೂ ನಗು ಬಂತು. ಭಾರತದ ಆರ್ಥಿಕ ಹಿಂದುಳಿಕೆಗೆ ಮೂಢ ನಂಬಿಕೆಗಳೇ ಕಾರಣ ಎಂದು ಪಾಠ ಮಾಡುತ್ತಿದ್ದವಳು ಹೀಗೆ ಹೇಳುತ್ತಿದ್ದಾಳೆ.

ನನ್ನಲ್ಲಿ ಜಾತಕವಿರಲಿಲ್ಲ. ತಾಯಿಯ ಪ್ರಕಾರ ನಾನು ಹುಟ್ಟಿದ್ದು ಮೇ ೨೩ ರಂದು. ಅಜ್ಜ ಶಾಲೆಗೆ ಸೇರಿಸುವಾಗ ಕೊಟ್ಟ ದಿನಾಂಕ ಡಿಸೆಂಬರ್‌ ೨ ಇಬ್ಬರ ಪ್ರಕಾರವೂ ನಾನು ಹುಟ್ಟಿದ್ದು ಬುಧವಾರ. ಆದರೆ ೧೯೫೩ ರ ಕ್ಯಾಲೆಂಡರ್‌ ನೋಡಿದರೆ ಅವರೆಡೂ ದಿನಾಂಕಗಳು ಬುಧವಾರ ಅಲ್ಲ.

ಹಾಗಾಗಿ ಬಿ.ಕಾಂ. ತರಗತಿಯಲ್ಲಿ ಒಮ್ಮೆ ಹೇಳಿದೆ. ನನ್ನ ಜನನ ದಿನಾಂಕ ಖಚಿತವಾಗಿ ಗೊತ್ತಿಲ್ಲ. ಆದುದರಿಂದ ಪ್ರತಿದಿನವೂ ನನ್ನ ಹುಟ್ಟುಹಬ್ಬ ಎಂದೆ. ಮರುದಿನ ಮುಂಡೇವು ಒಂದಷ್ಟು ಮಂದಿ ಬೆಳಿಗ್ಗೆ ನನ್ನನ್ನು ಕಂಡಾಗ ಅರುಣ, ನವ್ಯ ಮತ್ತು ಚೈತ್ರ ಹ್ಯಾಪಿ ಬತ್ರ್‌ಡೇ ಸರ್‌ ಅನ್ನಬೇಕೆ…
ಹುಟ್ಟಿದ ದಿನವೇ ಖಚಿತವಿಲ್ಲದ ಮೇಲೆ ಜಾತಕ ಇರಲು ಸಾಧ್ಯವೆ…

ನನಲ್ಲಿ ಜಾತಕ ಇಲ್ಲ. ನನ್ನ ಭವಿಷ್ಯ ನನ್ನ ಕೈಯಲ್ಲಿದೆ. ಅದನ್ನು ಯಾರಿಗೋ ತೋರಿಸಿ ಅವಲಕ್ಷಣ ಹೇಳಿಸಿಕೊಳ್ಳೋ ಜರೂರತ್ತು ನನಗಿಲ್ಲ. ಯಾವ ಮಾಟವೂ, ಮಂತ್ರವೂ ನನನ್ನೇನೂ ಮಾಡಲಾಗದಷ್ಟು ನಾನು ಮಾನಸಿಕವಾಗಿ ಬಲಿಷ್ಠನಿದ್ದೇನೆ. ಇನ್ನು ನೀನು ಸುಮ್ಮೆ ಏನೇನೋ ಇಲ್ಲದ್ದು ಹೇಳಬೇಡ.

ಆದ್ರೂ ಗ್ರಾಚಾರ ಅಂತ ಒಂದಿರುತ್ತೆ ಸರ್‌.

ನೀನು ಆಕ್ಸಿಡೆಂಟು ಆದ ಜಾಗಾನ ನೋಡಿದೀಯಾ ಚೇತನಾ. ನಾನು ಬಿದ್ದಲ್ಲಿಂದ ಕೇವಲ ಒಂದಡಿ ದೂರದಲ್ಲಿ ಒಂದು ಫೋನ್‌ ಕಂಬ ಕಬ್ಬಿಣದ್ದು ಇದೆ. ಅದರ ಹತ್ತಿರದಲ್ಲೇ ಕಾಂಕ್ರೀಟಿನ ಎಲೆಕ್ಟ್ರಿಕ್್‌ ಕಂಬಾನೂ ಇದೆ. ಅದರಿಂದಾಚೆ ಮೂರು ಸೈಜುಗಲ್ಲುಗಳಿವೆ. ಮತ್ತೂ ಮುಂದೆ ಹೋದರೆ ಸೇತುವೆ ಕಂಭಾನೇ ಇದೆ. ಅಂದು ನಾನು ಹೆಲ್ಮೆಟ್್‌ ಹಾಕಿರಲಿಲ್ಲ. ಗ್ರಾಚಾರವೇ ಎಂದಾಗಿದ್ದರೆ ಯಾವುದಕ್ಕಾದರೂ ನನ್ನ ತಲೆ ಬಡಿದು ನೀನು ಸುದ್ದಿ ಬಿಡುಗಡೆಯಲ್ಲಿ ನನ್ನ ಫೋಟೋ ಹಾಕಿ ಶ್ರದ್ಧಾಂಜಲಿ ಅರ್ಪಿಸಬೇಕಿತ್ತು. ಮೂಢನಂಬಿಕೆಗಳೇ ಭಾರತದ ಅಭಿವೃದ್ಧಿಗೆ ಅಡ್ಡಿ ಅಂತ ಅರ್ಥಶಾಸ್ತ್ರದಲ್ಲಿ ಓದಿದವಳು ನೀನು. ನಿನ್ನ ಓದಿಗೆ ಏನು ಬೆಲೆ ಬಂತು ಚೇತನಾ…

ಆದ್ರೂ ಸರ್‌ ಶನಿ ಅಂತ ಒಂದಿರುತ್ತೆ.

ನೀನು ಹೇಳುವ ಶನಿ ಯಾವುದು… ಶನಿಗ್ರಹವೇ.. ನನ್ನಿಂದ ಎಷ್ಟೋ ದಶಲಕ್ಷ ಮೈಲುಗಳಾಚೆಗಿರುವ ಆ ಬೃಹತ್‌ ಗ್ರಹಕ್ಕೆ ಕೋಟಿಗಟ್ಟಲೆ ಜನರ ನಡುವೆ ನನ್ನನ್ನು ಪ್ರತ್ಯೇಕಿಸಿ ತಗಲಿಕೊಳ್ಳಲು ಸಾಧ್ಯವಿದೆಯೆ.. ನಮ್ಮ ಅಧ್ಯಕ್ಷರು ಡಾ. ಕುರುಂಜಿಯವರು ಒಂದು ಮಾತು ಹೇಳುತ್ತಿರುತ್ತಾರೆ. ಸದಾ ಓದುತ್ತಾ, ಬರೆಯುತ್ತಾ ಇರುವ ಗಣಪತಿಯನ್ನು ಹಿಡಿಯಲು ಶನಿಗೆ ಸಾಧ್ಯವೇ ಆಗಲಿಲ್ಲವಂತೆ.  ನಾನು ಸದಾ ಕೆಲಸ ಮಾಡುತ್ತಿರುವವನು. ನನ್ನನ್ನು ಯಾವ ಶನಿಯಿಂದಲೂ ಹಿಡಿಯಲು ಸಾಧ್ಯವಿಲ್ಲ.

ಮತ್ತೊಂದು ಬಾರಿ ಅವಳ ಕರೆ ಬಂತು.

ಸತ್ಯನಾರಾಯಣ ಪೂಜೆ ಮಾಡಿಸಿದರೆ ಎಲ್ಲವೂ ಸರಿಯಾಗುತ್ತದೆ ಸರ್‌. ನಮ್ಮ ಮನೆಯಲ್ಲಿ ಈ ವಾರ ಸತ್ಯನಾರಾಯಣ ಪೂಜೆ ಭರ್ಜರಿಯಾಗಿ ಮಾಡಿದ್ದೇವೆ.

ನಮ್ಮ ಯಾವ ಪುರಾಣದಲ್ಲೂ ಸತ್ಯನಾರಾಯಣನೆಂಬ ದೇವರೇ ಇಲ್ಲ. ಈ ಎಮ್ಮೆ ಓದಿದವಳಿಗೆ ಏನಾಗಿದೆ.. ಗ್ರಾಚಾರ ಯಾರದು..
ನೀನು ಇನ್ನು ಮುಂದೆ ನನಗೆ ಫೋನು ಮಾಡಬೇಡ ಎಂದು ಸಂಪರ್ಕ ಕಡಿದೆ.

ಒಂದು ದಿನ ಇದ್ದಕ್ಕಿದ್ದಂತೆ ಕಾಸರಗೋಡು ಚಿನ್ನಾ ಕರೆ ಮಾಡಿದಾತ ಸುಳ್ಯಕ್ಕೆ ಬರುತ್ತಿದ್ದೇನೆ. ನಿನ್ನ ಮುರಿದ ಕಾಲು ನೋಡಿಯೇ ನಾನು ಕಾಸರಗೋಡಿಗೆ ಹಿಂದಿರುಗುವುದು ಎಂದ.

ಅವನು ಥೇಟ್ ಪಾದರಸ.  ಮಾತು ಮಾತಿಗೆ ಹಾಸ್ಯ. ಯಕ್ಷಗಾನ ಮತ್ತು ನಾಟಕ ಬಿಟ್ಟರೆ ಅವನೊಡನೆ ನನಗೆ ಬೇರಾವ ಸಮಾನ ವ್ಯಸನವೂ ಇರಲಿಲ್ಲ. ನಮ್ಮ ಅಭಿನಯ ನಾಟಕ ತಂಡದ ದಶಮಾನೋತ್ಸವದವತ್ತು ಸುಳ್ಯ ಪೇಟೆಯಲ್ಲಿ ಒಂದು ಮೆರವಣಿಗೆ ನಡೆಸಿದೆವು. ಅದರಲ್ಲಿ ನಾನು, ಚಿನ್ನಾ ಮತ್ತು ಅಭಿನಯ ಚಂದ್ರು ಮುಖವಾಡ ಧರಿಸಿ ಬೀದಿ ಯುದ್ದಕ್ಕೂ ಕುಣಿದೆವು. ಚಿನ್ನಾ ಮುಖವಾಡ ಧರಿಸಬೇಕಿರಲಿಲ್ಲ. ಕಾಲೇಜು ಅಧ್ಯಾಪಕನಾದ ನಾನು ಸುಳ್ಯದಲ್ಲಿ ಮುಖವಾಡ ಧರಿಸದೆ ಹಾಗೆ ಬೀದಿಯುದ್ದಕ್ಕೆ ಕುಣಿಯುವಂತಿರಲಿಲ್ಲ.

ರಾತ್ರಿ ಎಂಟಾದರೂ ಚಿನ್ನ ನನ್ನನ್ನು ನೋಡಲು ಬರಲಿಲ್ಲ. ನಾನು ಕರೆ ಮಾಡಿದಾಗ ಅವನು ಕಾಸರಗೋಡಿಗೆ ಮುಟ್ಟಿಯಾಗಿತ್ತು. ನಾನು ನಿನ್ನನ್ನು ಬರಹೇಳಿದ್ದೇನಾ ಚಿನ್ನಾ… ನೀನಾಗಿಯೇ ಬರ್ತೀನಿ ಅಂದವನು.  ನನ್ನ ಕಾಲು ಮುರಿದು ಹೋದ ಈ ಕಾಲದಲ್ಲೂ ಅಪ್ರಾಮಾಣಿಕನಾಗಲು ನಿನಗೆ ಮನಸ್ಸು ಹೇಗೆ ಬಂತು…

ಚಿನ್ನಾ ಅಲ್ಲಿಂದಲೇ ಗಹಗಹಿಸಿ….

ಹೇಗೂ ನಿನ್ನ ಎಡಗಾಲಲ್ಲಿ ಪ್ಲೇಟು, ನೆಟ್ಟು, ಬೋಲ್ಟು ಎಲ್ಲವೂ ಇದೆ.  ಆಯುಧ ಪೂಜೆಯಂದು ಬಂದು ನಿನ್ನ ಎಡಗಾಲಿಗೆ ಆಯುಧಪೂಜೆ ಮಾಡುತ್ತೇನೆ.

ಜನವರಿ ೧೨ ರಂದು ಕಾಲೇಜು ಪುನರಾರಂಭವಾಯಿತು. ದೊಡ್ಡೇರಿಯ ಸುಬ್ರಹ್ಮಣ್ಯನ ರಿಕ್ಷಾವನ್ನು ನನ್ನ ಓಡಾಟಕ್ಕೆ ಗೊತ್ತು ಮಾಡಿದೆ. ಐವತ್ತು ಕೊಟ್ಟರೆ ಸಾಕು ಸರ್‌. ಕಾಲೇಜಿಗೆ ಒಯ್ದು ಕರಕೊಂಡು ಬರುತ್ತೇನೆ ಎಂದು ಅವನಾಗಿಯೇ ಹೇಳಿದ. ನಾನು ಗಂಭೀರ ಸ್ವರದಲ್ಲಿ ಅದು ಬೇಡ ಸುಬ್ರಹ್ಮಣ್ಯ. ನಾನು ಎಪ್ಪತ್ತು ಕೊಡುತ್ತೇನೆ ಎಂದೆ.  ರಿಕ್ಷಾ ಓಡಿಸಿಯೇ ಬದುಕು ಸಾಗಿಸುವ ಸುಬ್ರಹ್ಮಣ್ಯನ ಸಂತೋಷಕ್ಕೆ ಪಾರವೇ ಇರಲಿಲ್ಲ. ಸುಬ್ರಹ್ಮಣ್ಯ ಒಳ್ಳೆಯವನು. ಕಳೆದ ಹತ್ತು ತಿಂಗಳುಗಳಲ್ಲಿ ಅವನು ನಮ್ಮ ಮನೆಯವನಂತಾಗಿದ್ದಾನೆ. ಆಮೇಲೆ ಸುಳ್ಯದಲ್ಲಿ ಯಾವ ಕೆಲಸವಿದ್ದರೂ ನಾನು ಅವನನ್ನೇ ಬರಹೇಳುತ್ತಿದ್ದೆ. ಅವನು ಕೇಳಿದ್ದಕ್ಕಿಂತ ಹತ್ತೋ, ಇಪ್ಪತ್ತೋ ಹೆಚ್ಚೇ ಕೊಡುತ್ತಿದ್ದೆ. ಅವನು ನನ್ನನ್ನು ಸ್ಟಾಫ್‌ ರೂಮಿಗೇ ಮುಟ್ಟಿಸುತ್ತಿದ್ದ. ಸಂಜೆ ಸ್ಟಾಫ್‌ ರೂಮಿಗೆ ಬಂದು ನನ್ನನ್ನು ಕರಕೊಂಡು ಹೋಗುತ್ತಿದ್ದ. ಬೆಳಿಗ್ಗೆ ನಮ್ಮ ಪಕ್ಕದ ಮನೆಯ ಹುಡುಗಿ, ನಮ್ಮದೇ ಕಾಲೇಜಲ್ಲಿ ದ್ವಿತೀಯ ಬಿ.ಎಸ್ಸಿ. ಓದುವ ಶೃತಿ ನನ್ನ ಜತೆಗಿರುತ್ತಿದ್ದಳು.

ಕಾಲೇಜಲ್ಲಿ ನಾನು ಕುಳಿತೇ ಪಾಠ ಮಾಡಬೇಕಿತ್ತು. ಅದು ಸ್ವಾಮೀಜಿಗಳ ಪ್ರವಚನದಂತಾಗುತ್ತಿತ್ತು. ಮಕ್ಕಳಿಗೆ ಅರ್ಥವಾಗುತ್ತಿರಲಿಲ್ಲದ ನನಗೆ ತೃಪ್ತಿಯಾಗುತ್ತಿರಲಿಲ್ಲ. ಕುಳಿತಾಗ ಕಾಲು ಕೆಳಗೆ ಇಳಿಯಬಿಡಬೇಕಾಗುತ್ತಿದ್ದುದರಿಂದ ಮಂಡಿ, ಮೊಣಕಾಲು ಮತ್ತು ಪಾದ ಕೆಂಪನೆ ಊದಿಕೊಳ್ಳುತ್ತಿತ್ತು. ಮಧ್ಯಾಹ್ನದ ಬಳಿಕ ಕಾಲೇಜಲ್ಲಿ ನಿಲ್ಲಲು ಸಾಧ್ಯವೇ ಆಗುತ್ತಿರಲಿಲ್ಲ. ಪ್ರಾಚಾರ್ಯರಲ್ಲಿ ಕೇಳಿ ಮನೆಗೆ ಬಂದು ಮಲಗಿಕೊಳ್ಳುವುದು ಅನಿವಾರ್ಯವಾಗಿತ್ತು. ನೀವು ಪಾಠ ಮಾಡುವಾಗ ಯಕ್ಷಗಾನದ ನೆನಪಾಗುತ್ತದೆ ಸರ್‌ ಎಂದು ಮಕ್ಕಳು ಹೇಳುತ್ತಿದ್ದ ಕಾಲವೊಂದಿತ್ತು.

ಈಗ ಕಾಲಿನಿಂದಾಗಿ “ಕಾಲಾಯ ತಸ್ಮೈ ನಮಃ”

ಕಾಲು ವಿಪರೀತ ಬಾಧೆ ಕೊಟ್ಟಂದು ರಾಜು ಡಾಕ್ಟರರಲ್ಲಿಗೆ ಹೋಗುತ್ತಿದ್ದೆ. ಅವರು ಎಕ್ಸ್‌ರೇ ತೆಗೆಸಿ ಪರೀಕ್ಷಿಸುತ್ತಿದ್ದರು. ನಿಮ್ಮ ಕಾಲು ಸರಿ ಇದೆ. ಆದರೆ ಮೊದಲಿನಂತಾಗಲು ವರ್ಷ ಹಿಡಿಯುತ್ತದೆ. ನೀವು ಧೈರ್ಯದಿಂದಿರಬೇಕು ಎಂದಾಗ ಧೈರ್ಯ ತಾಳುತ್ತಿದ್ದೆ. ಆದರೆ ಒಮ್ಮೊಮ್ಮೆ ವಿಪರೀತ ನೋವಾದಾಗ ಖಿನ್ನತೆ ಮೂಡುತ್ತಿತ್ತು.

ಒಂದು ಮಂಗಳವಾರ ಒಂದು ಪಿರೇಡು ಮುಗಿಸಿ ಕಾಲಿನ ಯಮಯಾತನೆ ತಡೆಯಲಾಗದೆ ರಾಜು ಡಾಕ್ಟ್ರಿಗೆ ಕರೆ ಮಾಡಿದೆ. ಇಂದು ಬೇಡ ಶಿಶಿಲ. ನನಗೆ ವಿಪರೀತ ಜ್ವರ. ನಾಳೆ ಬನ್ನಿ ಎಂದರು. ಅವರ ಸ್ವರದಲ್ಲಿ ಕಂಪನವಿತ್ತು. ಮರುದಿನ ಅವರ ಜ್ವರ ತೀವ್ರವಾಗಿ ಮಣಿಪಾಲ ಆಸ್ಪತ್ರೆಗೆ ಅವರನ್ನು ಅಡ್ಮಿಟ್ಟು ಮಾಡಬೇಕಾಯಿತು.

ನನಗೀಗ ದಿಕ್ಕೇ ತೋಚಲಿಲ್ಲ. ನನ್ನ ಕಾಲು ಮೊದಲಿನಂತಾಗದ್ದನ್ನು ಕಂಡ ಸ್ನೇಹಿತರು ನಮ್ಮ ಡಾಕ್ಟರರು ಎಷ್ಟೇ ಒಳ್ಳೆಯವರಾದರೂ ಇಂತಹ ವಿಷಯದಲ್ಲಿ ಸೆಕೆಂಡ್‌ ಒಪೀನಿಯನ್ನ್ ತೆಗೆದುಕೊಳ್ಳಲೇಬೇಕು. ನೀನು ಮಂಗಳೂರಿಗೆ ಹೋಗಿ ನಿನ್ನ ಕಾಲನ್ನು ಡಾ. ಶಾಂತಾರಾಮ ಶೆಟ್ಟರಿಗೆ ತೋರಿಸು ಎನ್ನುತ್ತಿದ್ದರು. ರಾಜು ಡಾಕ್ಟರರ ಪರಿಸ್ಥತಿ ಏನೇನೂ ಚೆನ್ನಾಗಿಲ್ಲ ಎಂಬ ವಾರ್ತೆ ಹಬ್ಬಿದ ಮೇಲೆ ನನಗೆ ಬೇರೆ ಹಾದಿ ಇರಲಿಲ್ಲ.

ಆದರೆ ಶಾಂತಾರಾಮ ಶೆಟ್ಟರ ಅಪಾಯಿಂಟುಮೆಂಟು ಸಿಗುವುದು ಸುಲಭವಿರಲಿಲ್ಲ. ನಮ್ಮ ಗ್ರಂಥಾಧಿಕಾರಿ ಬೆಟ್ಟಯ್ಯ ಲಯನ್‌ ಸುಲೇಮಾನನ ನಂಬರು ಕೊಟ್ಟ. ಸುಲೇಮಾನ್‌ ಲಯನ್‌ ಗವರ್ನರ್‌ ಆಗಿದ್ದ ಕೃಪಾ ಆಳ್ವರನ್ನು ಸಂಪರ್ಕಿಸಿ ನನಗೆ ಅಪಾಯಿಂಟುಮೆಂಟು ದೊರಕಿಸಿಕೊಟ್ಟ. ಶಾಂತಾರಾಮ ಶೆಟ್ಟರು ಒಂದು ಕಾಲದ ಲಯನ್‌ ಗವರ್ನರು.

ನಿಗದಿತ ಸಮಯಕ್ಕೆ ಮನಮೋಹನ ಪುತ್ತಿಲರ ಕ್ವಾಲಿಸ್‌ನಲ್ಲಿ ಶೈಲಿಯೊಡನೆ ಮಂಗಳೂರಿಗೆ ಹೋದೆ. ವಾಸುದೇವ ಪುತ್ತಿಲ ಗಾಡಿ ಚಲಾಯಿಸಿದ. ಸುಧೀರ ಮತ್ತು ಜ್ಞಾನಾನಂದ ನನಗೆ ಬ್ಲಾಕ್ ಕ್ಯಾಟ್ ರಕ್ಷಣೆ ಒದಗಿಸಿದರು. ನನ್ನ ಕಾಲಿನ ಎಕ್ಸ್ರೇ ನೋಡಿದ ತಕ್ಷಣ ಶಾಂತಾರಾಮ ಶೆಟ್ಟರು ವೆರಿ ಅನ್‌ಫಾರ್ಚುನೇಟ್  ಬ್ಯಾಡ್‌ ಫ್ರಾಕ್ಚರ್‌ ಎಂದು ಐದು ನಿಮಿಷ ಪರೀಕ್ಷಿಸಿದರು. ನಿಮ್ಮ ಕೆ.ವಿ.ಜಿ.ಯಲ್ಲಿ ಮಾಡಿದ ಆಪರೇಶನ್ನು ಸರಿಯಾಗಿಯೇ ಇದೆ. ಇಂತಹ ಫ್ರಾಕ್ಚರು ಸರಿಯಾಗಲು ವರ್ಷಗಳೇ ಹಿಡಿಯುವುದುಂಟು. ನೀವು ತಿಂಗಳಿಗೊಮ್ಮೆ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗಬೇಕಾಗುತ್ತದೆ. ಒಂದಷ್ಟು ಮಾತ್ರೆ ಬರೆದುಕೊಡುತ್ತೇನೆ. ತಪ್ಪದೆ ತೆಗೆದುಕೊಳ್ಳಬೇಕು ಎಂದರು.

ಅವರಿಗೆ ನನ್ನ “ಪುಂಸ್ತ್ರೀ” ಮತ್ತು “ದೇಶ ಯಾವುದಾದರೇನು” ಕೃತಿಗಳನ್ನು ಕೊಟ್ಟೆ. ಅವರ ಮುಖ ಆನಂದದಿಂದ ಅರಳಿತು. ನನಗೆ ಪುರುಸತ್ತಿಲ್ಲ. ಆದರೆ ನನ್ನ ಹೆಂಡತಿ ಓದುತ್ತಾಳೆ ಎಂದರು. ಎಷ್ಟೇ ಹೇಳಿದರೂ ಕನ್‌ಸಲ್‌ಟೆನ್ಸಿ ಚಾರ್ಚು ತೆಗೆದುಕೊಳ್ಳಲು ಅವರು ಒಪ್ಪಲಿಲ್ಲ. ಆ ಬಳಿಕ ಅವರಲ್ಲಿಗೆ ಐದು ಬಾರಿ ಹೋಗಿ ಬಂದೆ. ಅವರ ಮುಖದಲ್ಲೊಂದು ಅವಧೂತನ ಕಳೆದ ಸ್ಪರ್ಶಕ್ಕೊಂದು ಮಾಂತ್ರಿಕ ಶಕ್ತಿ. ಕೈಗುಣ ಎಂದು ಹೇಳುವುದು ಇದನ್ನೇ ಇರಬಹುದು. ಮೊದಲು ವಾಕರ್‌ ಇಲ್ಲದೆ ನಡೆಯಲು ಸಾಧ್ಯವೇ ಇರಲಿಲ್ಲ. ಕಾಲಕ್ರಮೇಣ ಬಲಗೈಗೆ ಒಂದು ಆಧಾರ ಸಿಕ್ಕರೆ ಸಾಕು ಎಂಬ ಸ್ಥತಿಗೆ ತಲುಪಿತು ಏ.ಕೆ. ೪೭ ಆಕಾರದ ಊರುಗೋಲು ನನಗೆ ಆಧಾರವಾಯಿತು. ಪ್ರತಿ ಬಾರಿಯೂ ನಾನು ಅವರಿಗೊಂದು ಕೃತಿ ನೀಡುತ್ತಿದ್ದೆ. ಅವರು ಬೇಡವೆಂದರೂ ಕೌಂಟರಿನಲ್ಲಿ ಅವರ ಚಾರ್ಚು ಕಟ್ಟಿ ಬರುತ್ತಿದ್ದೆ. ಆದರೆ ಮನೆ ಸೇರುವಾಗ ಮಧ್ಯರಾತ್ರಿ ಹನ್ನೆರಡು ಆಗಿ ಬಿಡುತ್ತಿತ್ತು.
*****
ಪುಸ್ತಕ: ಏನ್‌ ಗ್ರಾಚಾರ ಸಾ