ಮೂರನೇ ಮದಿವಿ ಮಹಾಸಂಕಟ

ಮೂರನೇ ಮದಿವಿ ಮಹಾಸಂಕಟ

(ಮುಂದಿನ ಸಲ ಮದುವೆಯಾಗಲು ಸಿದ್ಧನಾದ ಮುದಿ ಮದುಮಗನೊಬ್ಬನು ತನ್ನ ಜೊತೆಯ ರಾಯರಾಡಿದ ಮಾತಿಗೆ ಉತ್ತರರೂಪವಾಗಿ ಮಾತನಾಡುವನು.)

….ನೀವೀಗೇನ್‌ ಮಾತಾಡಿದಿರ ರಾಯರಽ ಬರಾಬ್ಬರೀ ನೋಡಿರಿ…! ನಾನೂ ನಿಮ್ಮ ಮತದಂವನಽ ಏನ್ರೆಪಾ! ಇಷ್ಟು ವಯಸ್ಸಾದ ಮ್ಯಾಲ ಲಗ್ನ ಆಗೂದಂದರ ನಗ್ಗೇಡ ಕೆಲಸಽ! ಅದಕ್ಕಂತ ನಾನೂ-ಹೆಂಡತಿ ಸತ್ತು ಎರಡು ತಿಂಗಳಾಗಿ ಹೋದರೂ ಇನ್ನೂ ಲಗ್ನದ ಮಾತು ತಗದಿದ್ದೇ ಇಲ್ಲ…! ನನಗೂ-ದೇವರ ದಯದಿಂದ ಭಂಗಾರದಂಥ ಐದು ಹುಡುಗೋರು ಅವಽ! ದೇವರು ಹೊಟ್ಟೀ ಪೂರ್‌ತೆ ನಾಕು ಕೂರಿಗಿ ಭೂಮಿನೂ ಕೊಟ್ಟಾನ! ಎಲ್ಲಾ ನೆಟ್ಟಗಽ ಅದಽ ಆನ್ರಿ….! ಆದರ ನೋಡ್ರಿ, ಹೊರಗಿಂದ ಬಂದು ಮನಿವಳಗ ಕಾಲಿಟ್ಟ ಕೂಡಲೇ ಎದಿ ‘ಧಸ್’ ಅಂತ್ಽದ!! ಮನಿ ಭಣಾಭಣಾ ಸುರೀತಽದ! ಎದ್ದ ಬಡೀಲಿಕ್ಕೆ ಬಂದ್ಹಾಂಗ ಆಗತಽದ…! ಮನಿವೊಳಗ ಯಾರಾದರೂ ಬಂದರ ಎದ್ದು ಒಂದು ತಂಬಿಗಿ ನೀರು ಕೊಡಲಿಕ್ಕೆ ಸುದ್ದಾ ಯಾರೂ ಇಲ್ಲದ್ಹಾಂಗ ಆತಲಾ ಅಂತ ಅನಸತಽದ….

“ಹುಡುಗೂರಾರೆ ದೊಡ್ಡ್ವ ಆಗ್ಯಾವ ಅಂತೀರೇನು! ಹಾಂಗೂ ಇಲ್ಲ… ಕಚೇರಿಂದಽ ಬರೂದರೊಳಗ ಒಂದು ಮಣಕಾಲ ಒಡದಕೊಂಡಿರತದಽ ಒಂದು ತಲೀಗೇ ಪೆಟ್ಟು ಹಚ್ಚಿಕೊಂಡಿರತಽದ… ನೋಡ್ರಿ ಮನೀಗೆ ಬರೂದರೊಳಗ ಸರ್‍ಯೊಮರ್‍ಯೊ ನಡದಿರತಽದ ಹಾಂಗಽ ದಿನಾ! ಪಾಪ ಅಕ್ಕ ಮುದಿಕಿ; ಆಕಿ ಕಡಿಂದಽ ಈ ಹುಡಗರನ್ನ ಸಂಭಾಳಸೂದು ಆಗೂದಿಲ್ಲ. ಈ ಹುಡಗೋರಕಿಂತಾ ಆಕೀ ತಾಪಽ ನನಗ ಹೆಚ್ಚಾಗೇದ. ಈ ಹುಡಗೋರ ತಾಪಕ್ಕಾಗಿ ಬ್ಯಾಸತ್ತು ತಮ್ಮ ಊರಿಗ್ಹೋಗತೀನಂತ ದಿನಕ್ಕೊಮ್ಮೆ ಹೊಂಟ ನಿಂದರತಾಳ! ಪರದೇಶಿ ಹುಡಗೋರು, ಬಿಟ್ಟು ಹೋಗಬ್ಯಾಡ…’ ಅಂತ ಮತ್ತ ಆಕಿ ಕೈಕಾಲು ಹಿಡಕೊಂಡು, ಸಮಾಧಾನ ಮಾಡಿ ಇರಿಸಿಕೂಳ್ಳೂಪ್ರಸಂಗ ಬರತಽದ ನನಗ! ಮತ್ತ ನಮ್ಮ ಅಕ್ಕನ ಬಾಯಂದ್ರ ನಿಮಗ ಗೊತ್ತಿಲ್ಲೇನು! ಒಮ್ಮೆ ಸುರು ಮಾಡಿದಳಂದರ ಮುಗಸೂ ಮಾತಽ ಇಲ್ಲ!

“ನಮ್ಮಕ್ಕ ಏನಂಶಾಳ ಗೊತ್ತದಽ ಏನು? ’ಅಲ್ಲಪಾ, ಮದಿವಿ ಬಿಡಲಿಕ್ಕೆ ನೀಯೇನು ಮುದಕಽ ತದಕಽ… ಒಳ್ಳೇ ನನಕಿಂತ ಮೂರು ವರ್ಷಕ್ಕ’ ಸಣ್ಣಾವಾ! ಐವತ್ತು ವರ್ಷಕ್ಕ ಯಾರೂ ಲಗ್ನಾನ, ಮಾಡಿಕೊಳ್ಳೂಽದಿಲ್ಲ? ದೊಡ್ಡ ಕಾಕಾ ಅವರ ನಾಕನೇ ಮದಿವಿ ಐವತ್ತುಮೂರು ವರ್ಷಕ್ಕ ಆಗಿತ್ತು. ಮುಂದ ನಾಕು ಮಕ್ಕಳನ್ನ ಹಡೆದು ಕಕ್ಕೀನ ಮೊದಲು ತೀರಿಕೂಂಡರು. ಈಗಂತೂ ಹೆಣ್ಣು ಬೇಕಾದಷ್ಟು ದೊಡ್ಡ್ವೂ ಸಿಗತಾವ… ಆಗಿನ್ಹಾಂಗೇನು ಎಂಟು ಹತ್ತು ವರ್ಷದ ಕನ್ಯಾಽ ಇರತಾವಽ? ಈಽಗ ನಿ ಮದಿವೀ ಮಾಡಿ ಕೊಳ್ಳಲಿಕ್ಕೆ ತಯಾರಾಗು ಹೆಣ್ಣಿಗೇನು ಕಡಿಮಿ! ವರದಕ್ಷಿಣೀ ಕೊಟ್ಟು ಹೆಣ್ಣು ಕೊಡತಾರ ಬೇಕ್ಕಾದವರು-! ನಾ ಮುದುಕಿ ದುಡದು ದುಡದು ಸಾಯಬೇಕಂತೀನಿ… ಅದೇನಿಲ್ಲ… ನೀ ಲಗ್ನಾ ಮಾಡಿಕೂಂಡರ ಇಲ್ಲಿ ಇರತೀನಿ; ಇಲ್ಲದಿದ್ದರೆ ನಾ ಹೋಗತೀನಿ!’ ಅಂತ ನೋಟೀಸ ಕೊಟ್ಟಾಂಗ ಮಾಡ್ಯಾಳ ಅಕ್ಕ.

“ನನಗೂ ಪಂಚೇತೇ ಬಿದ್ದಽದ ಏನ್ರೆಪಾ! ಲಗ್ನ ಬ್ಯಾಡಽ ಬ್ಯಾಡಾ- ಅಂತ ನಿಶ್ಚಯ ಮಾಡಿದ್ದೆ; ಅದರ ಅಕ್ಕನ ಕಿರಿ ಕಿರ ತಾಳಲಾರದಷ್ಟು-ಆಗೇದ. ವರದಕ್ಷಿಣೀ ಅಂತೂ ತಗೊಳ್ಳೂ ಹಾಂಗಿಲ್ಲಾ ಅಗ; ಅಕ್ಕಗ ಹೇಳಿ-ಬಿಟ್ಟೇನಿ! ಯಾರಾದಾದರೂ ಬಡವರದು ಹೆಣ್ಣು ಮಾಡಿಕೊಂಡರ ಅವರಿಗೂ ಒಂದು ರೀತಿಂದಽ ಸಹಾಯ ಮಾಡಿದ್ಹಾಂಗ ಆಗತದ; ಅಕ್ಕನ ಕಿಟಿ ಕಿಟೀನೂ ತಪ್ಪತಽದ; ಹುಡಗೂರ ತಾಪಾದರೂ ಕಡಿಮಿ ಆದೀತು, ಅಂತ ಆಶಾ! ಮುಂದ ದೇವರು ಏನ ಮಾಡಸತಾನ ನೋಡಬೇಕು! ವಯಸ್ಸೂ ಹೆಚ್ಚೂ ಕಡಿಮೆ ಆಗ್ತಾವಾಽ ಈ ಮಾತೇನೋ ಖರೆ ಅನ್ರಿ! ದೊಡ್ಡ ಕನ್ಯಾನಽ ನೋಡಿ ಮಾಡಿಕೊಬೇಕು! ಆದರ ನಮ್ಮ ಎರಡನೇ ಕುಟುಂಬ ಮುತ್ತಯಿದಿ ತನದಿಂದಽನಽ ತೀರಿಕೊಳ್ಳಲಿಲ್ಲೇನು? ಅದೆಲ್ಲಾ ದೇವರ ಕೈಯಾಗಿನ ಮಾತೇನ್ರೆಪಾ; ನಾವು ಎಷ್ಟರವರು? ಹರೀ! ನಮ್ಮಪ್ಪಾ, ಎಲ್ಲಾ ನಿನ್ನ ಇಚ್ಛಾ! ಹೌದಲ್ಲೋ ರಾಯರಽ ನಿವಽ ಹೇಳ್ರಿ!

(ರಾಯರ ಬಾಯಿ ಒಣಗಿ ಹೋಗಿದ್ದಿತು. ನಾಲಗೆಯೆ ಏಳದಂತಾಗಿದ್ದಿತು. ಮದುವಣಿಗನನ್ನು ಬರೀ ಗುರುಗುಟ್ಟಿ ನೋಡತೊಡಗಿದ್ದರು.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೀಗಿರಲಿ ಭಕ್ತಿ
Next post ಎಲ್ಲಿ ಕಾರ್ಮುಗಿಲಿರುವುದೋ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys