ಕಲಿಯುಗಾ ಬಂತು

ಕಲಿಯುಗಾ ಬಂತು

(ಪೇನಶನ್‌ ಪಡೆದ ಮಾಮುಲೇದಾರ ಕಚೇರಿಯ – ಕಾರಕೂನರು) ರಾಯರ ಕೂಡ ಮಾತನಾಡುತ್ತ ಮನೆಯಲ್ಲಿ ಕುಳಿತಿದ್ದಾರೆ. ಕಾರಕೂನ ರಾಯರಿಗೆ ತಿರಸ್ಕಾರ ಕ್ರೋಧ ಹೆಮ್ಮೆಗಳ ಮೂಲಕ ಆವೇಶ ತುಂಬಿದಂತಾಗಿದೆ. ಹಾವ ಭಾವದೊಂದಿಗೆ ಜೊತೆಯಲ್ಲಿ ಕುಳಿತಿದ್ದ ರಾಯರಿಗೆ ಕೂಗಿ ಕೂಗಿ ಹೇಳುತ್ತಲಿದ್ದಾರೆ.)

ನಾ ಏನ್ ಹೇಳಿದೆ ನಿಮಗ..! ಈ ಲಂಡ… ಮಕ್ಕಳಿಗೆ ಮಡೀ ಇಲ್ಲಾ… ಮೈಲಿಗಿ ಇಲ್ಲಾ! ದಶಮೀ ಕಟಿಗೊಂಡು ಫಿರತೀಮ್ಯಾಲೆ ಹೋಗೂ ಮಾಮಲೇದಾರನ್ನ ಎಂದಽರೇ ನೋಡಿದ್ದೀರಾ? ಏನ್‌ ಹೇಳ್ಳಿ…!

ಈಗಿನ್ನೂ ಎಲ್ಲಾ ದಶಮಿ ಕಟಿಗೊಂಡು ಹೋಗುತಾವಂತ….; ದುಡ್ಡಿನ ಹಾಲು ದುಡ್ಡಿನ ಮಸರು ತರಿಸಿ ಚ್ಯಾವಡಿ ಕಟ್ಟೇಮ್ಯಾಲೆ ದಶಮೀ ಗಂಟು ಬಿಚ್ಚಿ, ತಿಂದು ಬರತಾವಂತ…. ವಾಲೀಕಾರರ ಹಾಂಗ! ಇವರು ಮಾಮಲೇದಾರರಽ ಇವರು..!

“ಹೋಗಬೇಕು ಹೋದರ ಫಿರತೀಮ್ಯಾಲೆ…. ನಮ್ಮ ಗೋವಿಂದ ರಾಯರಗೂಡಾ! ಅವರ ಮಡೀ ಏನೂ, ಮೈಲಿಗಿ ಏನೂ, ಎಲ್ಲಾ-ವಿಲಕ್ಷಣ ನೋಡ್ರಿ! ನರಸಿಂಹ ಸಾಲಿಗ್ರಾಮ ಇರತಿತ್ತು…. ಅವರ ಪೆಟ್ಟಿಗ್ಯಾಗ; ನಿತ್ಯ ಅದರ ಅಭಿಷೇಕ ಆಗದ ಹೊರತು ಊಟಾನೆ ಇಲ್ಲಾ! ನಾಕು ಸೇರು ಹಾಲು ಬೇಕಾಗತಿದ್ದೂ ಅಭಿಷೇಕಕ್ಕ! ಇಷ್ಟ ಹಾಲು ಹ್ಯಾಂಗ ಸಿಗತದ್ದೂವಽ….? ಹಳ್ಳಿ ಗೌಡ ಕುಲಕರ್ಣ್ಯಾರ ತಾಯಿ ಏನ ಹಡೆದ್ದು ಹಾಲು ಇಲ್ಲಾಽಂತ ಹೇಳಲಿಕ್ಕೆ!”

“ನಿಮಗೊಂದು ಮೋಜು ಹೇಳತೀನಿ ರಾಯರಽ! ಒಮ್ಮೆ ಚೈತ್ರ ಮಾಸ, ತಿಮ್ಮಾಪೂರದಾಗ ಮುಕ್ಕಾಂ ಇತ್ತು! ರಣಾ ರಣಾ ಬ್ಯಾಸಗಿ; ಬಿಸಲಾಗ ತಿರಿಗಿ ತಿರಿಗಿ ಬ್ಯಾಸತ್ತು ಹೋಗಿತ್ತು ಕಚೇರಿ….! ಒಂದು ದಿನಾ ಶ್ರೀಖಂಡ ಅರೇ ತಿಂದರ ಥಣ್ಣಗಽ ಅನಿಸೀತೂ ಅಂತಾ ವಿಚಾರ ಬಂತು. ನಸೀಕಲೇ ಎದ್ದವರೇ ಮಸರಗಡಗೀ ತರಿಸಲಿಕ್ಕೆ ಹೇಳಿದಿವಿ ಗ್ರಾಮಸ್ತರಿಗೆ! ಐದಾರು ಮಸರಗಡಗೀ ತಂದರು…! ನೋಡತೀವಽ ಮಸರಿನಮ್ಯಾಲ ಕೆನೀನೇ ಇಲ್ಲಾ! ಇಂಥಾ ಲುಚ್ಚಾ ಆಗೇದ ಜನಾ! ಒಂದರ ಬೆನ್ನ ಹಿಂದ ಒಂದರಂತೇ ಯಾವ ಗಡಗೀ ನೋಡಿದರೂ ಅದೇ ಹಣೇಬಾರ! ನಮ್ಮ ಸಿರಸ್ತಾರರ ಸಿಟ್‌ ಏನ್‌ ಕೇಳತೀರಿ… ಗಡಗೀ ತೊಗೊಂಡು ಬಿಸಾಟೆ ಬಿಟ್ಟರ, ಕುದರೀ ಕಾಲಾಗ ಹೋಗಿ ಬಿತ್ತು ಗಡಗಿ! ಧರ್ಮಸಾಲಿ ಮುಂದೆಲ್ಲ ಗೋಪಾಳ ಕಾವಲಿ ಅದ್ಹಾಂಗ ಆಯ್ತು! ಮತ್ತೇನದ…! ಗೌಡಾ ಕುಲಕರ್ಣಿ ಬಂದರು….; ನಮೋ ನಮೋ ಅನಿಸಿ ಬಿಟ್ಟೆ ಅವರ ಕಡಿಂದ! ಮುಂದೇನ್ ಕೇಳತೀರಿ, ಆ ಮುಕ್ಕಾಮಿನೊಳಗ ಇರೂ ತನಕ ಒಂದು ದಿನಾ ಶ್ರೀಖಂಡ… ಒಂದು ದಿನಾ ಬಾಸುಂದೀ….! ಅಮಲಂದರ ಹೀಂಗ ಕೂಡಿಸಬೇಕಾಗತದಽ ರಾಯರಽ! ಇಂಥಾ ಕೆಲಸ ದುಡ್ಡಿನ ಹಾಲು ಮಸರು ತೊಗೊಳ್ಳುವರ ಕಡಿಽಂದ ಆಗತದಽ ಎಲ್ಯಾರೆ?

“ಅಲ್ರಿ… ಇವರ ನಸೀಬಕ್ಕ ಅಡಗೀಯವರು ಸಿಗಬಾರದಽ? ತಾಲೂಕಿಗೆ ದೀಡನೂರ ಹಳ್ಳಿ; ಒಬ್ಬಿಲ್ಲಾ ಒಬ್ಬ ಕುಲಕರ್ಣೇರು ನೇಮಣೂಕಿ ಕೆಲಸ ಇದ್ದೇ ಇರತದ! ಊರಿದ್ದಲ್ಲೆ ಹೊಲಗೇರಿ ಅಂತ, ಎಲ್ಲಾಕಡೆ ಅದಾವ-ತೀನೂ ಇದ್ದೇ ಇರತಾವ! ಯಾರದಾದರೂ ಒಂದು ಅರ್ಜಿ ತಗೊಂಡು ಚೌಕಶೀಗೆ ಹಾಕ್ಕೋಽತ, ನಡದರಾತ್ರೆಪಾ….? ಕುಲಕರ್ಣಿ ಕ್ಯಾಂಪಿನ ಬೆನ್ನು ಹತ್ತೆ ಹತ್ತತಾನ…! ಅಲ್ಲಿಂದೇನು ಅಡಗೀ ಆಗತಽದ – ನೀರು ಆಗತಽದ- ಎಲ್ಲಾ ಆಗತಽದ! ನಮ್ಮ ರಾವಸಾಹೇಬರ ಕಡೆ ಇದ್ದನಲ್ಲಾ ನಾರಾಯಣಪ್ಪ! ಅವನದೊಂದು ಮೋಜಿನ ಕತೀನ. ಆತ; ಬಾಯೀಯವರ ಕೈತೆಳಗಿದ್ದು ಅಡಗೀ ಕಲಿತ ನಾರಾಯಣಪ್ಪ ‘ಇನ್ನೇನು ಕುಲಕರ್ಣಕಿ ಬ್ಯಾಡ, ಅಡಗೀನಽ ಮಾಡಿಕೊಂಡಿರೂದು ನೆಟ್ಟಿಗ! ಅಂದ. ಈಗ ನೋಡ್ರಿ ನಾನೂರು-ಐನೂರು ಜನರ ಪ್ರಸ್ತದ ಅಡಿಗಿ ಅಂದರೂನೂ ಹೊಡದು ಚೆಲ್ಲತಾನ ನಾನಾಯಣಪ್ಪ!

“ಇದೆಲ್ಲಾ ಅಮಲ್ದಾರರ ಕರ್ತಬ ಗಾರೀ ಮಾತು ಅದ ಏನ್ರೆವಾ! ಇವೇನ್ರಿ ಗಳಗಳಾ ಗಳಗಳಾ ಅಳತಾವ! ಸ್ನಾನ ಇಲ್ಲದಽನ, ಮೂರು ಮೂರು ದಿವಸ ತಂಗಳ ದಶೀಮೀ ತಿಂತಾವ! ಅದಕಽ ಕಲಿಯುಗಾ ಬಂತೂ ಅಂದೆ! ಏನು ಮಾಡೂದದಽ! ಆ ಕಾಲ ಹೋತು ಆ ಮಾತು ಹೋತು! ನಡೀರಿ ಪುರಾಣದ ಹೊತ್ತಾತು…. ಆಚಾರ್ರು ಬಂದಿದ್ದಾರು!”

(ಕಾರಕೂನರ ಮಾತನ್ನ ಕೇಳಿದ ರಾಯರ ‘ಈ ಕಲಿಯುಗದಲ್ಲಿ ಜೀವಿಸಿರುವದೇ ಬೇಡ!’ ಎಂದು ಪ್ರತಿಜ್ಞೆ ಮಾಡುತ್ತಲೇ ಪುರಾಣಕ್ಕೆ ಹೊರಟರು.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇಹ ಆತ್ಮ ಭಾವ
Next post ತಪ್ಪಾಯ್ತು ನನದೂ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…