ಮೈಸೂರಿಗೆ ಪಶ್ಚಿಮಕ್ಕೆ ಕೊಡಗಿನ ಕಡೆಗೆ ಪಿರಿಯ ಪಟ್ಟಣ ವೆಂಬಲ್ಲಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಕೆಲವರು ದೊರೆಗಳು ಆಳುತ್ತಿದ್ದರು. ಪಿರಿಯರಾಜನೆಂಬಾತನೇ ಪೂರ್ವದಲ್ಲಿ ಮಣ್ಣಿನಿಂದಲೇ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಕಟ್ಟಿಸಿ ಪೇಟೆಯನ್ನು ಸ್ಥಾಪಿಸಿದನು. ಆ ಕಾರಣದಿಂದ ಅದಕ್ಕೆ ಪಿರಿಯಪಟ್ಟಣವೆಂದು ಹೆಸರು.
ಕಂಠೀರವ ಒಡೆಯರ ಕಾಲದಲ್ಲಿ ಅಲ್ಲಿ ವೀರರಾಜನೆಂಬಾತನು ಆಳುತ್ತಿದ್ದನು. ಆತನನ್ನು ಗೆಲ್ಲಲು ಮೊದಲು ದಳವಾಯಿಗಳು ಹೋಗಿದ್ದು, ಆತನು ಬಹಳವಾದ ತೊಂದರೆ ಕೊಡಲು ಹಿಂತಿರುಗಿ ಬಂದು ರಾಜರಿಗೆ ಅರಿಕೆ ಮಾಡಿದರು. ಕಂಠೀರವ ಒಡೆಯರೇ ಸ್ವಂತವಾಗಿ ಮುತ್ತಿಗೆಯನ್ನು ನಡೆಸಲು ಹೊರಟರು. ಛಲದಿಂದ ಮುತ್ತಿಗೆಯನ್ನು ಮುಂದುವರಿಸಿದರು. ವೀರರಾಜನು ಬಹಳ ಶೌರ್ಯದಿಂದ ಕಾದಿದರೂ ಶತ್ರುಗಳು ಲಗ್ಗೆ ಹತ್ತುವುದನ್ನು ನಿಲ್ಲಿಸಿಲಾಗದೆ ಹೋಯಿತು. ಆಗ ವೀರರಾಜನು ವೀರಸಂಕಲ್ಪವನ್ನು ಮಾಡಿ ಅರಮನೆಗೆ ಹೋಗಿ ತನ್ನ ಹೆಂಡಿರು ಮಕ್ಕಳನ್ನು ತನ್ನ ಕೈಯಿಂದಲೇ ಸಂಹರಿಸಿ ತರುವಾಯ ತಾನು ಹುಚ್ಚನಂತೆ ಕೋಟೆಯ ಹೊರವಳಯದಲ್ಲಿ ಸುಗ್ಗಿ ಕಾದಾಡುತ್ತ ಮಡಿದನು.
ಅನಂತರ ಕೋಟೆಯು ಕಂಠೀರವ ಒಡೆಯರಿಗೆ ಸುಲಭವಾಗಿ ಹಸ್ತಗತವಾಯಿತು.
*****
[ವಂಶರತ್ನಾಕರ ಪುಟ ೭೦; ವಂಶಾವಳಿ ಪುಟ ೭೧ ಹೊಸ ಗೆಜಟಿಯರ್ ಸಂ. ೫, ಪುಟ ೮೦೦]


















