ಸುವ್ವಿಗೆಯ್ಯುವೆ ನಿನ್ನ ಬಾ! ಬಾ! ಪರಂಜ್ಯೋತಿ
ಇಂತು ಹವ್ವಗೆ ಬಂದೆ ತಮಸಿನೆದೆಯೊಳಗಿಂದ.
ನಿನ್ನ ಮೋರೆಯಲಿಹುದು ಚಕ್ರಪಾಣಿಯ ಚಂದ
ಅಲ್ಲದಲೆ ನಿನ್ನದಿದೆ ಲೋಕೈಕ ವಿಖ್ಯಾತಿ!
ನಿನ್ನೊಳೊಗುಮಿಗುತಿರುವ ತೇಜದೊಂದು ದಿಧೀತಿ
ತರಿದು ಪರಿಪರಿಯಾಗಿ ಮಾಡುವದು ನೋವುಗಳ,
ಮಾಲೆಯಾಗಿಸಿ ಧರಿಸಿ ಸಾವುಗಳ ಹೂವುಗಳ !
ಕಲ್ಲೆದೆಯ ಮಲ್ಲಿಗೆಯನಾಗಿಸುವದೀ ರೀತಿ.
ಹೃದಯಕಾಸಾರದೆಡೆ ನೀಲೋತ್ಪಲ ಪ್ರಸರ-
ಸಮವಿರುವ ನಲುಮೆಯಂತಃಪುರದಿ ಮಿನುಗುತಿಹ
ಚೆಲುವ ನಂದಾದೀಪ! ಈ ಹಿರಿಮೆ ನನಗೆಂದು ?
ಅನುದಿನವು ಕಾಯುವೆವು ಒಳಗಿನಿಂದಿದು ಪ್ರಖರ-
ವಾಗಿ ಬಂದೀತೆಂದು. ಅಂತು ಬರೆ ಕೊರಗುತಿಹ
ಮಾನವನ ಬಾಳುವೆಯು ಬಾಳ್ವುದಿಲ್ಲದೆ ಕುಂದು.
*****



















