ಮೂಲ: ನರೇಶ್ ಗುಹಾ
ಅಯ್ಯೊ ಎಲ್ಲೆಲ್ಲೂ ಮರದ ಎಲೆಗಳ ಕೆಳಗೆ
ರಾತ್ರಿ ಹಗಲೂ ಜಾರಿ ಉದುರುತ್ತಿವೆ.
ಒಂದೆ ಬಿರುಗಾಳಿಯೂ ಇಲ್ಲಿ ಕಾಡುಗಳಲ್ಲಿ
ಒಣಮರದ ಕಂಬಗಳು ಸುಯ್ಯುತ್ತಿವೆ.
ಎಷ್ಟೊಂದು ಭೂತ ಕಾಡಲ್ಲಿ ಕುಣಿಯುತ್ತಿವೆ
ಅಸ್ಥಿಪಂಜರ ಹಲ್ಲು ಕಿಸಿಯುತ್ತಿವೆ;
ಕಣ್ಣೂಳಗೆ ಹಾವು ಹರಿದಿವೆ, ಚಂದ್ರಕಾಂತಿಯೂ
ಏನೋ ಗೋಳಿನ ಕಥೆಯ ಮುಲಕುತ್ತಿದೆ.
ಕಾಡೊಳಗೆ ಕಾಲಿಟ್ಟ ಕಣವೆ ದೇವತೆಗಳೂ
ಪಿಶಾಚಿಯಾಗುತ್ತಿರುವರೇಕೆ ಹೀಗೆ?
ಹುಲಿ ಜಿಂಕೆಗಳು ಸತ್ತು, ವನದೇವತೆಗಳೂ
ಹಿಂದಿರುಗಿ ಮರದ ಫಲ ಕೊಳೆಯುತ್ತಿವೆ.
ಬಿರುಗಾಳಿ ಸೂಚನೆಯೇ ಇಲ್ಲ, ಒಂದಾದರೂ
ಕಪ್ಪು ಮುಗಿಲಿಲ್ಲ ಬಾನಿನಲ್ಲಿ;
ವನದ ದನಿ ಇಂಗುತಿದೆ, ವನದೇವತೆಯ ಕಾಯ
ಹೂತಿದೆ ತರಗೆಲೆಯ ರಾಶಿಯಲ್ಲಿ
ವನವಾಸ ಮುಗಿದರೂ ಅಜ್ಞಾತ ಉಳಿದಿದೆ,
ದೊರೆ ವಿರಾಟನ ಮನೆಯ ದೀನಸೇವೆ.
ಎಲ್ಲಿ ಇಡುವುದು ನಮ್ಮ ಶಸ್ತ್ರಾಸ್ತ್ರ? ಮರೆಯಿಲ್ಲ
ಬೋಳುಮರ ದಿಕ್ಕೆಟ್ಟು ಚೀರುತ್ತಿವೆ.
*****
















