ಹಗಮಲ್ಲಿ ದಿಗಮಲ್ಲಿ

ಅಜ್ಜಿಗೆ ಮೊಮ್ಮಗಳೊಬ್ಬಳ ಹೊರತು ಇನ್ನಾರೂ ಇರಲಿಲ್ಲ. ಮೊಮ್ಮಗಳು ದೊಡ್ಡವಳಾದಳೆಂದು ತಕ್ಕವರನಿಗೆ ಕೊಟ್ಟು ಲಗ್ನಮಾಡಿದ್ದಳು. ಒಳ್ಳೆಯದಿನ ನೋಡಿ ಮೊಮ್ಮಗಳನ್ನು ಕರೆಯಲಿಕ್ಕೆ ಆಕೆಯ ಗಂಡನು ಬಂದನು. ಅಜ್ಜಿ ಬಲು ಹಿಗ್ಗಿನಿಂದ ಮೊಮ್ಮಗಳನ್ನು ಎರಡು ದಿವಸ ಇಟ್ಟುಕೊಂಡು, ಹೋಳಿಗೆ ಹುಗ್ಗಿ ಮಾಡಿ ಉಣ್ಣಿಸಿದಳು. ಮೂರನೇದಿವಸ ಮೊಮ್ಮಗಳಿಗೆ ತನ್ನ ಗಂಡನ ಕೂಡ ಹೊರಡುವುದಕ್ಕೆ ಸಿದ್ಧತೆ ಮಾಡಿಕೊಟ್ಟಳು. ಮೊಮ್ಮಗಳನ್ನು ಆಗಲುವಾಗ ಅದೆಷ್ಟು ತಳಮಳಿಸಿದರೂ, ಆಕೆಯು ಗಂಡನ ಮನೆಗೆ ಹೋಗುವ ಸಡಗರವನ್ನು ನೋಡಿ ಮುದುಕಿಗೆ ಹಿಡಿಸಲಾರದಷ್ಟು ಹಿಗ್ಗಾಯಿತು – “ಹೋಗಿ ಬಾ ನನ್ನ ಹಗಮಲ್ಲೀ, ದಿಗಮಲ್ಲೀ; ಸುಖದಿಂದ- ಹೋಗಿ ಬಾ” ಎಂದು ಸೂಸುವ ಹಿಗ್ಗಿನಲ್ಲಿ ನುಡಿದು ಬೀಳ್ಕೊಟ್ಟಳು.

ಎತ್ತಿನ ಮೇಲೆ ಹೆಂಡತಿಯನ್ನು ಕುಳ್ಳಿರಿಸಿ ಗ೦ಡನು ಅದನ್ನು ಬೆಂಬಳಿಸಿ ತನ್ನೂರ ಹಾದಿ ಹಿಡಿದನು. ಒಂದೆರಡು ಹರದಾರಿ ದಾರಿ ಸಾಗಿದ ಬಳಿಕ ಗಂಡನು ಕೇಳಿದನು ಹೆಂಡತಿಗೆ “ನಿಮ್ಮ ಅಜ್ಜಿ ಹಾಗೇಕೆಂದಳು ಹಗಮಲ್ಲಿ ದಿಗಮಲ್ಲಿ ಎಂದು ? ಏನದರ ಅರ್ಥ?” “ಅದು ಆಕೆ ಪ್ರೀತಿಯಿಂದ-ಆಡಿದ ಮಾತು. ಅದರರ್ಥ ಬರುವದಿಲ್ಲ. ಬೇಕೆಂದರೆ ಮಾಡಿಯೇ ತೋರಿಸುತ್ತೇನೆ” ಎಂದಳು ಹೆಂಡತಿ.

ಮುಂದಿನೂರ ದಾಟುತ್ತಲೆ ಗಂಡನು ಒಂದು ಗಿಡದ ಕೆಳಗೆ ಎತ್ತು ಬಿಟ್ಟು ಕುಳಿತುಕೊಂಡನು. ಹೆಂಡತಿ ಅಲ್ಲಿಂದ ಊರಮುಂದಿನ ಹಳ್ಳದ ಕಡೆಗೆ ಸಾಗಿದಳು. ಹಳ್ಳದ ಬದಿಹಿಡಿದು ಬರುತ್ತಿರುವ ನಾಲ್ವರನ್ನು ಕಂಡು, ಅವರು ಒಂದು ಕೂಸಿನ ಅಂತ್ಯಕ್ರಿಯೆ ಮಾಡಿಬಂದರೆಂದು ತಿಳಕೊಂಡು ಗೋರಿ ಮರಡಿಗೆ ನಡೆದಳು. ಗೋರಿಯನ್ನಗಿದು ಕೂಸಿನ ಶವವನ್ನೆತ್ತಿ ಅರಿವೆಯಲ್ಲಿ ಸುತ್ತಿಕೊಂಡು, ಊರಲ್ಲಿ ಹೊಕ್ಕು ಭಿಕ್ಷುಕಳಂತೆ ಮನೆಮನೆಯಲ್ಲಿ ಭಿಕ್ಷೆ ಬೇಡತೊಡಗಿದಳು.

ಒಂದು ದೊಡ್ಡ ಮನೆಯ ಮುಂದೆ ನಿಂತು, ಭಿಕ್ಷೆ ಹಾಕಿರೆಂದು ಕೀಸರಿಡುವಂತೆ ಕೂಗಹತ್ತಲು ಮನೆಯವನು ಬೇಸರಗೊಂಡು ಬಂದವನೇ ಆಕೆಯನ್ನು ನುಗಿಸಿದನು. ಅಷ್ಟೇ ನೆವವಾಯಿತು. ಭಿಕ್ಷುಕಿ ಒತ್ತಟ್ಟಿಗೆ, ಆಕೆಯ ಕೈಯೊಳಗಿನ ಕೂಸು ಒತ್ತಟ್ಟಗೆ ಬೀಳಲು, ಆತನೇ ಆಕೆಯನ್ನ ಹಿಡಿದೆತ್ತಿ ಆಕೆಯ ಕೂಸನ್ನು ಆಕೆಯ ಕೈಗೆ ಕೊಟ್ಟನು. ಕೂಸು ಪಟ್ಟು ಬಡಿದು ಸತ್ತಿತೆಂದು ಬೋರಾಡಿ ಅಳತೊಡಗಲು ಮನೆಯವನು ಹೆದರಿಕೆಯಿಂದ ಆಕೆಯ ಕೈಯಲ್ಲಿ ಮುಚ್ಚಿ ನೂರು ರೂಪಾಯಿಗಳನ್ನು ಇಟ್ಟನು. ಆಕೆ ಮೆಲ್ಲನೆ ಅಲ್ಲಿಂದ ಕಾಲ್ತೆಗೆದು ಗಂಡನು ಕುಳಿತಲ್ಲಿಗೆ ಹೋಗಿ ಆತನಿಗೆ ಆ ನೂರು ರೂಪಾಯಿಗಳನ್ನು ಎಣಿಸಿಕೊಡುತ್ತ ಹೇಳಿದಳು – “ಇದೇ ಹಗಮಲ್ಲಿತನ. ಇನ್ನು ದಿಗಮಲ್ಲಿತನವನ್ನು ತೋರಿಸುವೆ.”

ಅದೇ ಊರಿನ ಆಚೆಯ ಓಣೆಯಲ್ಲಿ ಒಬ್ಬ ನಿಪುತ್ರಿಕ ಶ್ರೀಮಂತನು ಸತ್ತಿದ್ದನು. ಆತನ ಮೂವರು ಹೆಂಡರು ಬಡಬಡಕೊಂಡು ಅಳುತ್ತಿದ್ದರು. ಆ ಸಂದರ್ಭವನ್ನು ಲಕ್ಷ್ಯಿಸಿ, ಆ ಹೆಣ್ಣು ಮಗಳು ಎದೆ‌ಎದೆ ಬಡಕೊಂಡು, ಕೈ ಹಿಡಿದವನು ಅಗಲಿ ಹೋದನೆಂದು ಹಾಡಿಹಾಡಿಕೊ೦ಡು ಅಳತೊಡಗಿದಳು. ನೆರೆದವರಿಗೆಲ್ಲ ಅನಿಸಿತು – ಈಕೆಯೂ ಒಬ್ಬ ಹೆಂಡತಿಯಿರಬೇಕು ಶ್ರೀಮಂತನಿಗೆ. ಮಕ್ಕಳ ಸಲುವಾಗಿ ಒಟ್ಟಿಗೆ ನಾಲ್ಕು ಜನ ಹೆಂಡಿರನ್ನು ಮಾಡಿಕೊಂಡಿದ್ದನೆಂದು ಲೆಕ್ಕ ಹಾಕಿದರು-

ಅಂತ್ಯವಿಧಿ ಮುಗಿಯಿತು.

ಶ್ರೀಮಂತನ ಆಸ್ತಿಯನ್ನೆಲ್ಲ ಆತನ ನಾಲ್ವರು ಹೆಂಡರಿಗೆ ಹಂಚಿಕೊಟ್ಟರು ಸಾಮಾಜಿಕರು. ಆತನಿಗೆ ಮಕ್ಕಳೇ ಇಲ್ಲವೆಂದಾಗ ಆತನ ಆಸ್ತಿಗೆ ಹೆಂಡಂದಿರೇ
ಹಕ್ಕುದಾರರಲ್ಲವೇ ?

ತನ್ನ ಪಾಲಿಗೆ ಬಂದ ದ್ರವ್ಯವನ್ನೆಲ್ಲ ಗಂಟುಕಟ್ಟಿದಳು. ಆ ಮೇಲೆ ಅದನ್ನು ಹೊತ್ತುಕೊಂಡು ಗಂಡನು ಇಳಿದುಕೊಂಡ ಸ್ಥಳಕ್ಕೆ ಹೋದಳು. “ಇದೇನು ತಂದೆ” ಎಂದು ಕೇಳಿದನು ಗಂಡ. “ನೋಡಿಕೋ” ಎಂದು ನುಡಿದು ಹೆಂಡತಿಯು ಬೆಳ್ಳಿ ಬಂಗಾರ, ಮುತ್ತು ರತ್ನ, ರೂಪಾಯಿ ಎಲ್ಲವನ್ನು ತೋರಿಸಿದಳು. “ಇದನ್ನೆಲ್ಲ ಹೇಗೆ ದೊರಕಿಸಿದೆ” ಎಂದು ಗಂಡನು ಕೇಳಿದನು.
“ಅದರ ಕಥೆಯನ್ನೆಲ್ಲ ಹಿಂದಿನಿಂದ ಹೇಳುವೆ. ಈಗ, ಇದಕ್ಕೇ ದಿಗಮಲ್ಲಿ ತನವೆನ್ನುವರೆಂದು ಹೇಳಿದೆರೆ ಸಾಕು” ಎಂದಳು. ಮರುದಿನ ನಸುಕಿನಲ್ಲಿ ಎದ್ದು ಗಂಡ-ಹೆಂಡಿರಿಬ್ಬರು ತಮ್ಮೂರ ಹಾದಿ ಹಿಡಿದರು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೧೧
Next post ಏನೆಂದು ಹಾಡಲಿ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys