ಏನೆಂದು ಹಾಡಲಿ

ಏನೆಂದು ಹಾಡಲೀ ಏನನ್ನು ಹಾಡಲೀ ನಿಮ್ಮ ಮುಂದೆ ನಿಂತು
ಒಡೆದ ಗಂಟಲಿಂದಾ ಬಿರಿದ ಒಣಾ ನಾಲಿಗಿಂದ ||ಪ||

ಕಣ್ಣು ಕಣ್ಣುಗಳ ಚಿಕ್ಕೆ ಕಾಂತಿಗಳು ನಂದಿ ನರಳುತಿರಲು
ಬಾನ ಚಿಕ್ಕೆಗಳ ಬೆಣ್ಣೆ ಚಂದ್ರಮನ ತೋರಿ ಹಾಡಲೇನು
ಮಣ್ಣ ಜೀವಗಳ ಬಳ್ಳಿ ಗಿಡಗಳಿಗೆ ಮುಳ್ಳುಹೋದರು ಮುಚ್ಚಿ
ಚುಚ್ಚುತಿರಲು ಆ ಸಗ್ಗ ನಂದನವ ಕೊಂಡು ಕೊನರಲೇನು ||೧||

ಎಲುಬು ಗೂಡುಗಳ ಹರಿದ ಚಿಂದಿಗಳ ಬಿಟ್ಟು ಸುತ್ತ ಮುತ್ತ
ಗುಲಾಬಿಯ ಕೆನ್ನೆ ತೊಂಡೆಗುಟಿ ಕನ್ಯೆ ಎಂದು ಕನವರಿಸಲೆ
ಕೊಳಚೆ ಕೊಂಪೆಗಳ ಮುರುಕು ಗೂಡುಗಳ ನೋಡೀ ನೋಡದಂತೆ
ಭವ್ಯ ಬಂಗಲೆಯ ದಿವ್ಯ ಗೋಪುರವ ಹಾಡಿ ಹೊಗಳುತಿರಲೆ ||೨||

ತುತ್ತನ್ನಕ್ಕಾಗಿ ಬೇಡಿ ಕಾಡುವ ಪುಟ್ಟ ತಿರುಪ ಕೈಯಿ
ಹೆಜ್ಜೆ ಹೆಜ್ಜೆಗೂ ಕಾಲ ತೊಡರಿರಲು ಹಾಡಲೆಲ್ಲಿ ಬಾಯಿ
ಅಂದದುಡಿಗೆಗಳ ಸೇಬುಗಲ್ಲಗಳ ಮಮ್ಮಿ ಡ್ಯಾಡಿ ಎನುವ
ದುಂಡು ದುಂಡಗಿನ ಧನಿಕ ಮಕ್ಕಳನು ಮೆಚ್ಚಿ ಹಾಡಲೇನು ||೩||

ನೂರು ಸಾವಿರದ ದೇವರುಗಳು ಕಚ್ಚಾಡಿ ಮೆರೆಯುವಿಲ್ಲಿ
ದೇವರುಗಳ ಸೃಷ್ಟಿಸಿದ ಮಾನವನ ಮರೆತ ನರಕದಲ್ಲಿ
ಸುತ್ತ ಜಗಕೆ ಕಿವಿ ಕಣ್ಣು ಮುಚ್ಚಿ ತೇಲ್ಗಣ್ಣ ಭಾವದಲ್ಲಿ
ದೇವ ಭಜನೆಯನು ನಾಮ ಕೀರ್ತನೆಯ ಕಟ್ಟಿ ಹಾಡಲೇನು ||೪||

ದುಡಿದು ದಣಿವ ಮೈ ರಕ್ತ ಬೆವರುಗಳ ಧಾರೆ ಧಾರೆಯಿಂದ
ಭಟ್ಟಿ ಉಳಿದ ಸೆರೆ ತುಂಬಿ ಕುಡಿಯುತಿಹ ದಣಿಯ ಹೊಗಳಲೇನು
ಮರುಳು ಕುರಿಗಳನು ಸವರಿ ನೇಯ್ದ ಕಂಬಳಿಯ ಗದ್ದುಗೆಯಲಿ
ಮೆರೆಯುತಿರುವ ನರಭಕ್ಷಕರನು ನಾ ಹೊಗಳಿ ಹಾಡಲೇನು ||೫||

ಸುತ್ತ ಮುತ್ತಿರಲು ಅಂಧಕಾರತೆಯು ಕತ್ತಲಲ್ಲಿ ಕುಳಿತು
ಎಲ್ಲ ಬೆಳ್ಳಗಿದೆ ಇದೇ ಬೆಳಕು ಎನ್ನುತ್ತ ಹಾಡಲೇನು
ಎಲ್ಲ ತೋಟಗದ್ದೆಗಳ ಚೆಲುವ ಹಲ ಹದ್ದು ಮುಕ್ಕುತಿರಲು
ಎಲ್ಲ ಅಂದ ಸುಂದರವು ಎಂದು ನಾ ಬಣ್ಣಿಸಿ ಹಾಡಲೇನು ||೬||

ಕೋಟೆ ಅರಮನೆಯ ಶಿಲ್ಪ ಸಿರಿಗಳನು ಕಟ್ಟಿದವರ ಮರೆತು
ಲೂಟಿ ಮಾಡಿ ಮೆರೆದಂಥ ರಾಜರುಗಳ ಚರಿತೆ ಹೊಗಳಲೇನು
ಕ್ರೌರ್ಯ ಹಿಂಸೆಗಳ ಬಾಯ್ಗಳಲ್ಲಿ ಜನ ಜೀವ ಮಿಡುಕುತಿರಲು
ದಯೆಯೆ ಧರ್ಮಕ್ಕೆ ಮೂಲವೆಂದು ಒಣ ಶಾಂತಿ ಪಠಿಸಲೇನು ||೭||

ಜಾತಿ ಭಾಷೆ ಕುಲ ಧರ್ಮ ದೈವಗಳ ಛಿದ್ರ ಛಿದ್ರ ನೆಲವ
ಭವ್ಯ ದಿವ್ಯ ಭಾರತವೆ ಎಂದು ಎದೆ ತುಂಬಿ ಹಾಡಲೇನು
ತಲೆತಲಾಂತರದ ಮೌಢ್ಯಬಳುವಳಿಯ ಕೊಳೆತು ನಿಂತ ಕೊಳವ
ಗಂಗೆ ತುಂಗೆಯರ ಪುಣ್ಯರಂಗೆಂದು ಹಾಡಿ ಹರಸಲೇನು ||೮||

ಬೆನ್ನಿಗಂಟಿರುವ ಬರಿಯ ಹೊಟ್ಟೆಗಳು ಬಿಕ್ಕಿ ಬಿಕ್ಕುತಿರಲು
ಬೊಜ್ಜು ಹೊಟ್ಟೆಗಳ ಕಮರು ಡೇಗು ಹಾಡುಗಳ ತೇಗಲೇನು
ಹಳ್ಳಿಪಾಡು ಹಾಡುವಾ ಹಕ್ಕಿ ಕುತ್ತಿಗೆಯ ಹಿಚುಕುತಿರಲು
ಡಿಳ್ಳಿದರಬಾರು ಮೋಡಿ ಮೆರಗುಗಳ ಹಾಡು ಕಿರುಚಲೇನು ||೯||

ಸತ್ಯ ಹೇಳಿದರೆ ಕುತ್ತು ಹೊರಿಸುವರು ಕತ್ತಿಯೊತ್ತಿ ಶಿರಕೆ
ಅದಕೆ ಹೆದರಿ ಬರಿ ಸುಳ್ಳು ಗೊಳ್ಳು ಶಬ್ದಗಳ ಬುರುಗು ಬಿಡಲೆ
ಹೇಳುವುದು ಒಂದು ಮಾಡುವುದು ಒಂದು ನಮ್ಮ ಧರ್ಮ ನೀತಿ
ಎಂದಿನಿಂದಲೋ ಬಂದ ರೀತಿ ಅದರಂತೆ ಬುರುಡೆ ಬಿಡಲೆ ||೧೦||

ಜನತೆ ಗಂಡ ಜನನೀತಿ ಹೆಂಡತಿಯು ಗಂಡನೆದುರೆ ಅವಳ
ಸೀರೆ ಹರಿದು ವ್ಯಭಿಚಾರ ಮಾಡಿದರು ಗಂಡ ಸುಮ್ಮನಿರಲು
ಜನರ ತಾಯಿಯನು ಕಿತ್ತಿತಿನುವ ತಾಯ್ಗಂಡರಾಳುತಿರಲು
ನಮ್ಮದೇಶ ಜನತಂತ್ರದೇಶ ಎನ್ನುತ್ತ ಹಾಡಲೇನು ||೧೧||

ಹಾಡು ಬೇಡ ಹಣ ಹೆಂಡ ತಿಂಡಿಕೊಡು ಓಟು ಹಾಕುತೀವಿ
ಓಟು ಹಾಕಿ ನೆಲ ಗೋರಿ ಗೋರಿ ಮುಲುಗುತ್ತ ಮಲಗುತೀವಿ
ಬಹಳ ಹಳೆಯ ಹುಳಿ ಹೆಂಡ ಧರ್ಮವಿದೆ ನಿಶೆಯಲ್ಲಿ ಬಾಳುತೀವಿ
ನಮ್ಮ ನಡೆಸಲಿಕೆ ಗುರುವು ಮಠವು ದೇವರುಗಳಿರುವರಲ್ಲ ||೧೨||

ಆಗಾಗ ಅವನು ಅವತರಿಸಿ ಬರುವ ನಮಗೇಕೆ ಚಿಂತೆಯೆಲ್ಲ
ಎನುತ ಮಲಗಿ ಸತ್ತಿಲ್ಲದಿರುವ ಈ ಜನರ ಮುಂದೆ ನಾನು
ಏನು ಹಾಡಲೀ ಎಂತು ಹಾಡಲೀ ಒಡೆದ ಗಂಟಲಿಂದ
ಬಿರಿದಾ ಒಣಾ ನಾಲಿಗಿಂದ ||೧೩||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಗಮಲ್ಲಿ ದಿಗಮಲ್ಲಿ
Next post ರಸದೊಳಗೆ ಕಸ

ಸಣ್ಣ ಕತೆ

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…