ದೇವದಾಸಿಗೆ ಸ್ಪಂದಿಸಿದ ಕಲಾಕೃದಯಗಳು

ದೇವದಾಸಿಗೆ ಸ್ಪಂದಿಸಿದ ಕಲಾಕೃದಯಗಳು

ಧರ್ಮ ಹಾಗೂ ದೇವರು ಹಿಂಸೆ ಮತ್ತು ಹಾದರದ ಸಂಕೇತ ಎಂದು ಸಾಧಿಸುವಲ್ಲಿ ನಾವು ಭಾರತೀಯರು ಸಂಪೂರ್ಣ ಯಶಸ್ವಿಯಾಗಿದ್ದೇವೆ ಎಂಬುದಕ್ಕೆ ಇತ್ತೀಚಿನ ಅಯೋಧ್ಯೆಯ ಘಟನೆ ಹಾಗೂ ಇಂದಿಗೂ ನಾಗರಿಕ ಜಗತ್ತು ತಲೆ ತಗ್ಗಿಸುವಂತೆ ಉಳಿದುಕೊಂಡು ಬಂದಿರುವ ದೇವದಾಸಿ ಪದ್ಧತಿಯೇ ಸಾಕ್ಷಿ.

ಜಗತ್ತು ಆಧುನಿಕತೆಯತ್ತ ಮುಖ ಮಾಡಿದರೆ, ಭಾರತ ದೇಶ ಮಾತ್ರ ಹಿಂಸೆ, ಹಾದರದ ಮಡುವಾಗಿ ಕೊಳೆಯಲಾರಂಭಿಸಿದೆ. ಅದನ್ನು ತಿಳಿಗೊಳಿಸಿ ಮುಕ್ತಿ ನೀಡುವ ನಿಟ್ಟಿನಲ್ಲಿ ಕೈಬೆರಳ ಮೇಲೆ ಎಣಿಸುವಷ್ಟು ಪ್ರಜ್ಞಾವಂತ ಜನರು ತಮ್ಮದೇ ಆದ ರೀತಿಯಲ್ಲಿ ಹತ್ತು ಹಲವು ಬಗೆಯಿಂದ ಪ್ರಯತ್ನ ನಡೆಸಿದ್ದಾರೆ. ಅಂತಹವರಲ್ಲಿ ದೂರದರ್ಶನ ‘ಅಲಗ್’ ಧಾರವಾಹಿಯ ಖ್ಯಾತಿಯ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಜಗದೀಶ ಬ್ಯಾನರ್ಜಿ ಮತ್ತು ಉಮಾ ಬ್ಯಾನರ್ಜಿ.

ಮಾನವೀಯ ವಿಚಾರಗಳ ನೆಲೆವೀಡಾದ ಪಶ್ಚಿಮ ಬಂಗಾಲದ ಈ ಬ್ಯಾನರ್ಜಿ ದಂಪತಿಗಳು ಮನುಕುಲದ ಅನಿಷ್ಟಗಳ ವಿರುದ್ಧ ಸಮರ ಸಾರಿ, ತಮ್ಮ ಗೆಲುವಿಗಾಗಿ ಪ್ರಜ್ಞಾವಂತ ಜನರನ್ನು ಹುಟ್ಟುಹಾಕುವ ಪ್ರಯತ್ನವನ್ನು ಅತ್ಯಂತ ಪರಿಣಾಮಕಾರಿಯಾದ ದೂರದರ್ಶನ ಚಿತ್ರಮಾಲಿಕೆಗಳ ಮೂಲಕ ನಡೆಸಿದ್ದಾರೆ. ‘ಅಲಗ್’ ತಲೆ ಬರಹದಡಿ ನಮಕ್, ಥ್ಯಾಂಕ್ಯೂ, ಸ್ಕೂಲ್ ಟೀಚರ್ ಮುಂತಾದ ಹದಿಮೂರು ಧಾರವಾಹಿಗಳ ಮೂಲಕ ಭಾರತೀಯ ಸಾಮಾಜಿಕ ಅನಿಷ್ಟಗಳ ಮೇಲೆ ಬೆಳಕು ಚೆಲ್ಲುವದಲ್ಲದೇ ರಚನಾತ್ಮಕ ಪರಿಹಾರವನ್ನು ಸೂಚಿಸುವ ಪ್ರಾಮಾಣಿಕ ಪ್ರಯತ್ನ ಕೂಡಾ ಮಾಡಿದ್ದಾರೆ.

ಮುಜಫರ ನಗರದಲ್ಲಿನ ಹತ್ತುಸಾವಿರ ವೇಶೈಯರ ಬದುಕು, ದಿಲ್ಲಿಯ ಕೊಳಚೆ ಪ್ರದೇಶದಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸಿದ ಸಾಹಸಿ ಶಿಕ್ಷಕನ ಕುರಿತು, ಅಹಿಂಸೆಯ ಪ್ರವಾದಿ ಮಹಾತ್ಮಾಗಾಂಧೀಜಿಯ ಜನ್ಮಭೂಮಿ ಗುಜರಾತ್‌ನಲ್ಲಿ ಬಾಲಕಿಯರ ಶೋಷಣೆ ಕುರಿತು ವಾಸ್ತವ ನೆಲೆಗಟ್ಟಿನ ಮೇಲೆ ಚಿತ್ರ ನಿರ್ಮಿಸಿದ್ದಾರೆ. ಇವೆಲ್ಲವೂ ಈಗಾಗಲೇ ದಿಲ್ಲಿ ದೂರದರ್ಶನದ ಮೂಲಕ ಪ್ರಸಾರವಾಗಿ ಜನ ಮೆಚ್ಚುಗೆ ಪಡೆದಿವೆ. ‘ದಿಲ್ಲಿ’ ಎಂಬ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ನೀಡಲಾಯಿತು.

ಬ್ಯಾನರ್ಜಿ ದಂಪತಿಗಳು ಹೀಗೆ ಸಾಮಾಜಿಕ ಅನಿಷ್ಟಗಳ ಬೇರು ಶೋದಿಸುತ್ತ ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡ ತಲುಪಿದರು. ಅನಾಗರಿಕತೆಯನ್ನು ಕಂಡ ಬ್ಯಾನರ್ಜಿ ದಂಪತಿಗಳ ಹೃದಯ ಚೇತ್ಕರಿಸಿತು. ನಿದ್ದೆಗೆಟ್ಟ ದಂಪತಿಗಳು ಪರಿಹಾರಕ್ಕೆ ತಡಕಾಡಿ, ವಾಸ್ತವ ಘಟನೆಯನ್ನು ಆಧರಿಸಿ ಪದ್ಧತಿ ಮೇಲೆಯೇ ಚಿತ್ರ ನಿರ್ಮಿಸದೇ ಆದರಿಂದ ಮುಕ್ತಿ ಪಡೆಯಲು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲೇ ಸಾಧ್ಯತೆ ಏನು ಎಂದು ಶೋಧಿಸಿ, ಹಿಂದಿಭಾಷೆಯಲ್ಲಿ ದಿಲ್ಲಿ ದೂರದರ್ಶನಕ್ಕಾಗಿ ‘ಶಕ್ತಿ’ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಿಸಿದ್ದಾರೆ.

ದೇವದಾಸಿಯ ಮಗಳು ಸರೋಜಾಳಿಗೆ ತಾನು ಶಿಕ್ಷಣ ಪಡೆದು ಸಮಾಜದ ಸ್ವತಂತ್ರವಾಗಿ ಮತ್ತು ಗೌರವಾನ್ವಿತ ಬದುಕು ನಡೆಸಬೇಕೆಂಬ ಛಲ, ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಶೋಧನೆ, ಪೂಜಾರಿಗಳ ಕಿರುಕುಳ, ತಂದೆಯ ಮನೆಯಲ್ಲೇ ಮನೆಗೆಲಸದವಳಾಗಿ ದುಡಿಯುತ್ತ, ಕಾನೂನು ಪದವಿ ಶಿಕ್ಷಣ ಮುಂದುವರೆಸುವಳು. ಸರೋಜಾಳ ತಂದೆಯ ಅಧಿಕೃತ ಮಗಳನ್ನು ನೋಡಲು ಬಂದ ವರ ಸರೋಜಾಳ ಸೌಂದರ್ಯಕ್ಕೆ ಮಾರುಹೋಗುತ್ತಾನೆ. ತನ್ನ ಮನದಿಂಗಿತವನ್ನು ಅವಳಿಗೆ ತಿಳಿಸುತ್ತಾನೆ. ಅವಳೊಬ್ಬ ಕಾನೂನು ಪದವಿ ವಿದ್ಯಾರ್ಥಿನಿ ಎಂದು ತಿಳಿದು ಇನ್ನಷ್ಟು ಆಶ್ಚರ್ಯಪಡುತ್ತಾನ. “ನಿನ್ನಂತಹ ವಿದ್ಯಾವಂತಳು ಮನೆಗೆಲಸದವಳಾಗಿ ಕೆಲಸ ಮಾಡುವದು ಸರಿ ಅಲ್ಲ. ನೀನು ನನ್ನನ್ನು ಮದುವೆಯಾಗುವುದು ಬಿಡುವದು ನಿನ್ನ ಆಯ್ಕೆಗೆ ಸಂಬಂಧಿಸಿದ್ದು, ಮೊದಲು ನೀನು ಹಾಸ್ಟೆಲಿನಲ್ಲಿ ಇರುವ ಮನಸ್ಸು ಮಾಡು. ನಾನು ಅದಕ್ಕೆ ವ್ಯವಸ್ಥೆ ಮಾಡುತ್ತೇನೆ. ಉದ್ಯೋಗ ಪಡೆ” ಎಂದು ಹೇಳಿ ಹೊರಟುಹೋಗುತ್ತಾನೆ. ಅವಳು ಆತನ ಮಾತುಗಳಿಗೆ ಮನಸೋತು ಹಾಸ್ಟೆಲಿನಲ್ಲಿ ವಾಸಿಸುವ ನಿರ್ಧಾರ ಮಾಡಿ, ತನ್ನ ಪುಸ್ತಕಗಳು ಮತ್ತು ಪ್ರೀತಿಯ ಸಿತಾರವನ್ನು ಕಂಕುಳಲ್ಲಿ ಇಟ್ಟುಕೊಂಡು ತಂದೆಯ ಮನೆಯಿಂದ ಹೊರಬೀಳುತ್ತಾಳೆ. ಅಲ್ಲಿಂದ ಹೊರಬಂದು ಕೈಯಲ್ಲಿ ಪುಸ್ತಕ ಮೇಲೆತ್ತಿ ಹಿಡಿದು “ಇಗೋ ಈ ಪುಸ್ತಕವನ್ನು ಯಾರು ಬೇಕಾದರೂ ಓದಬಹುದು ಎಂದು ಸಾಂಕೇತಿಕವಾಗಿ ಎಲ್ಲರೂ ಶಿಕ್ಷಣ ಪಡೆಯಿರಿ. ಸಾಮಾಜಿಕ ಅನಿಷ್ಟಗಳಿಗೆ ಬಲಿಯಾಗಬೇಡಿರಿ ಎಂದು ಹೇಳುತ್ತಾಳೆ. ಅಲ್ಲಿಗೆ ಅದು ಮುಕ್ತಾಯ. ಈ ಚಿತ್ರಕ್ಕೆ ಸಂಗೀತವನ್ನು ಸಲೀಲ್ ಚೌದರಿ ಒದಗಿಸಿದ್ದಾರೆ.

“ಇದೊಂದು ಸತ್ಯ ಘಟನೆ. ಬೆಳಗಾವಿ ನಗರದಲ್ಲಿ ದೇವದಾಸಿ ಮಗಳೊಬ್ಬರು ತಾಯಿಯ ಮಾರ್ಗವನ್ನೇ ಅನುಸರಿಸದೇ ಶಿಕ್ಷಣ ಪಡೆದು ಗೌರವಾನ್ವಿತಳಾಗಿ ಜೀವನ ನಡೆಸುತಿದ್ದಾಳೆ. ಸಿತಾರ ಪ್ರವೀಣಳು. ಇದು ಉಳಿದ ದೇವದಾಸಿಯರ ಮಕ್ಕಳಿಗೆ ಮಾದರಿ. ಬದುಕಿನಲ್ಲಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂದು ಆತ್ಮವಿಶ್ವಾಸ ಮೂಡಿಸಲು ಈ ಚಿತ್ರವನ್ನು ತಯಾರಿಸಿದ್ದೇವೆ” ಎಂದು ಚಿತ್ರನಿರ್ದೆಶಕ ಜಗದೀಶ ಬ್ಯಾನರ್ಜಿ ಮತ್ತು ಚಿತ್ರ ಕಥೆ ಬರೆದಿರುವ ಶ್ರೀಮತಿ ಉಮಾ ಬ್ಯಾನರ್ಜಿ ಗೆಲುವಿನ ಭಾವನೆಯಿಂದ ಹೇಳಿದರು.

ಹಿಂದಿ ಚಿತ್ರರಂಗದ ಸುಪ್ರಸಿದ್ಧ ನಿರ್ದೇಶಕ ವಿಮಲ್ ರಾಯ್ ಅವರ ಸಹಾಯಕರಾಗಿ ಸೇವೆ ಸಲ್ಲಿಸಿದ ಬ್ಯಾನರ್ಜಿ ಫಿಲ್ಮ್ ಜಾಥಾ ಮತ್ತು ಚಿಲ್ಡ್ರನ್ ಫಿಲ್ಮ್ ಸೊಸಾಯಿಟಿಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ ಅನುಭವ ಉಳ್ಳವರು. ಇವರು ನಟರು, ಲೇಖಕರು ಮತ್ತು ನಿರ್ದೇಶಕರಾಗಿ ಈವರೆಗೆ ಸಮರ್ಥ ರೀತಿಯಲ್ಲಿ ಕೆಲಸ ಮಾಡಿ ಚಿತ್ರರಂಗದಲ್ಲಿ ತಮ್ಮದೇ ಆದ ಕ್ರಿಯಾಶೀಲತೆ ಬೆಳೆಸಿಕೊಂಡವರು.

ಬಂಗಾಲಿ ಭಾಷೆಯಲ್ಲಿ ‘ಛೇಹರ’ ಹಿಂದಿಯಲ್ಲಿ ‘ಅಸಂಭವ’ ಮತ್ತು ‘ಸಂಕೇತ’ ಎಂದು ಕಲಾತ್ಮಕ ಚಿತ್ರ ನಿರ್ಮಿಸಿ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಹೆಮ್ಮೆ ಅವರದು.

“ದೇವದಾಸಿಯರಿಗೆ ಮದುವೆ ಮಾಡುವದರಿಂದ ದೇವದಾಸಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಸಮಸ್ಯೆಯ ಮೂಲ ಬೇರುಗಳನ್ನು ಕಿತ್ತು ಹಾಕುವ ಯತ್ನ ಮಾಡಬೇಕು” ದೇವದಾಸಿಯ ಮಕ್ಕಳಲ್ಲಿ ಕೆಲವರು ಕೇಂದ್ರ ಮತ್ತು ರಾಜ್ಯಗಳಲ್ಲಿ ಸಚಿವರಾಗಿದ್ದರೂ ದೇವದಾಸಿ ಪದ್ಧತಿ ನಿರ್ಮೂಲನೆಗೆ ಶಾಶ್ವತ ಪರಿಹಾರ ರೂಪಿಸುವ ಪ್ರಯತ್ನ ಮಾಡದೇ ಇರುವುದು ದುರದೃಷ್ಟಕರ ಸಂಗತಿ ಎಂದು ಬ್ಯಾನರ್ಜಿಯವರು ಅಭಿಪ್ರಾಯಪಡುತ್ತಾರೆ.

“ಚಲನಚಿತ್ರ ನಿರ್ಮಾಣ ಕಾರ್ಯ ವೈದ್ಯನ ಕೆಲಸವಿದ್ದಂತೆ, ರೋಗಿಯ ರೋಗದ ಮೂಲ ಕಾರಣ ಅರಿತು ಚಿಕಿತ್ಸೆ ನೀಡಬೇಕು. ಸಾಧ್ಯವಾಗದಿದ್ದರೆ ಜಾಗೃತಿಯಿಂದ ಶಸ್ತ್ರಕ್ರಿಯೆ ಮಾಡಬೇಕಾಗುತ್ತದೆ. ಚಿತ್ರ ನಿರ್ದೇಶಕ ಮತ್ತು ಚಿತ್ರ ಕಥೆಗಾರರು ವೈದ್ಯರಾಗಿ ಕೆಲಸ ಮಾಡಬೇಕಾಗುತ್ತದೆ” ಎಂದು ಬ್ಯಾನರ್ಜಿಯವರು ಹೇಳುತ್ತಾರೆ.

“ಈಗಿನ ನಮ್ಮ ಕೆಲಸ ಇನ್ನೂ ತೃಪ್ತಿ ನೀಡಿಲ್ಲ. ನಮ್ಮ ಕೆಲಸದಿಂದ ಕೆಲವರಿಗಾದರೂ ವಿಚಾರಕ್ಕೆ ಪ್ರಚೋದನೆ ಮಾಡಿದರೆ ಸಾರ್ಥಕವೆನಿಸುತ್ತದೆ. ಕಾಲ್ಪನಿಕ ಕಥೆ ಆಧರಿಸಿ ಚಿತ್ರ ನಿರ್ಮಿಸುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ನಮ್ಮ ಸುತ್ತಮುತ್ತ ನಾಗರಿಕ ಜಗತ್ತನ್ನು ನಾಚಿಸುವಂತ ಘನ ಸಮಸ್ಯೆಗಳು ಇರುತ್ತವೆ. ಅವುಗಳನ್ನೇ ಆಧರಿಸಿ ಚಿತ್ರ ನಿರ್ಮಿಸಿ ಪರಿಹಾರಕ್ಕೆ ಮಾರ್ಗದರ್ಶನ ಮಾಡುವ ಕೆಲಸ ನಡೆಯಬೇಕು”-ಎಂಬುದು ಬ್ಯಾನರ್ಜಿ ದಂಪತಿಗಳ ಅಭಿಪ್ರಾಯವಾಗಿದೆ.

ಈ ಟೆಲಿಫಿಲ್ಮ್ ದಲ್ಲಿ ಬೆಳಗಾವಿಯ ಹಲವಾರು ಜನ ಕಲಾವಿದರು ಭಾಗವಹಿಸಿದರು. ನಾಯಕಿ ಪಾತ್ರದಲ್ಲಿ ಮೇಧಾ ಆಪ್ಟೆ, ನಾಯಕನಾಗಿ ತುರಮುರಿ ಗ್ರಾಮದ ಬಿ.ಸಿ. ಪಾಟೀಲ ಮತ್ತು ರವಿ ಕೋಟಾರಗಸ್ತಿ, ಶ್ರೀಮತಿ ಮುತಗೇಕರ ಮತ್ತು ರೂಪಾ ಮುತಗೇಕರ, ಸುಬ್ರಹ್ಮಣ್ಯ ಭಟ್ಟ, ಸಯ್ಯದ್ ಉಲ್ ಹಸನ್, ಕುಮಾರಿ ಸಂಸ್ಕೃತಿ, ಕಾಟ್ರರ್, ದಾಕ್ಷಾಯಣಿ ಪಾಟೀಲ ಮತ್ತು ಮಾಲತಿ ಸರೋಜಾ ಅಭಿನಯಿಸಿದ್ದಾರೆ. ಈ
ಚಿತ್ರವು ಬೆಲಗಾವಿಯ ಕೋಟೆ ಪ್ರದೇಶ, ಕಣಬರ್ಗಿಯ ಸಿದ್ದೇಶ್ವರ ದೇವಸ್ಥಾನ, ಹಲಸಿಯ ಪುರಾತನ ದೇವಸ್ಥಾನ, ತುರಮುರಿ ಗ್ರಾಮದ ದೇಸಾಯರ ವಾಡೆಯಲ್ಲಿ ಹಾಗೂ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಪರಿಸರದಲ್ಲಿ ಚಿತ್ರೀಕರಣ
ನಡೆಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗನಿಗೊಂದು ಪತ್ರ
Next post ತವರೂರು

ಸಣ್ಣ ಕತೆ

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys