ಬಾ ಮಗೂ ಅಲ್ಲೆ ನಿಲ್ಲದೆ ಮತ್ತೆ ಹಿಂದಕ್ಕೆ
ನಿನ್ನದೇನೆಲಕ್ಕೆ, ನಿನ್ನದೇ ಜಲಕ್ಕೆ
ನಿನ್ನ ಒಳಹೊರಗನ್ನು ಸ್ಟಷ್ಟಿಕೊಟ್ಟ ಸತ್ವಕ್ಕೆ,
ಹಿಂದು ಮುಂದುಗಳ ತಕ್ಕ ಛಂದದಲ್ಲಿಟ್ಟು ನಿನ್ನ
ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ,
ನಿನ್ನ ಬೆನ್ನಿಗೆ ನಿಂತ ಪುರಾಣ ಇತಿಹಾಸಗಳ
ಬಿಸಿಯುಸಿರು ಬಡಿಯುವೀ ವರ್ತಮಾನಕ್ಕೆ,
ಭೂರ್ಜಪತ್ರಕ್ಕೆ ಮಾತು ಬರುವ ಮುಂಚೆಯೆ ಬೋಧಿ
ತಿಳಿವ ಹರಿಸಿದ್ದ ಈ ಜ್ಞಾನಧಾಮಕ್ಕೆ
ಬಾ ಮಗೂ ಹಿಂದಕ್ಕೆ.

ದೂರ ಹಾರುವುದು ಸಹಜವೆ, ಸರಿಯೆ, ಮತ್ತೆ
ಗೂಡು ಸೇರುವ ಹಕ್ಕಿಗದು ತೀರ ಉಚಿತವೇ.
ಇನ್ನಷ್ಟು ಮತ್ತಷ್ಟು ಏರಬೇಕೆಂಬಾಸೆ
ರೆಕ್ಕೆಬಲವಿರುವಾಗ ಉಕ್ಕುಕ್ಕಿ ಬರುವುದೇ.
ನೀರಿನೊಳಗಿನ ಮೀನು ತನ್ನ ನೆಲೆಯಲ್ಲಿ ತಾನು
ತಪ್ಪದೇ ಇರಬೇಕು.
ಸಾಹಸಕ್ಕಾಗಿ ಸಂಪಾತಿ ಹಾರಿದರು ಸಹ
ಅನ್ಯಶಕ್ತಿಯ ಪರಿಧಿಯೊಳಗೆ ನುಗ್ಗುವುದಲ್ಲ,
ಹಿಗ್ಗುವುದು ತಪ್ಪಲ್ಲ, ಘಟ್ಟೆನ್ನುವಷ್ಟಲ್ಲ ಬಲೂನು,
ಬಗ್ಗುವುದು ಬೆತ್ತ ಮುರಿಯದಂತೆ ತನ್ನ ಕಮಾನು

ನೆಲದ ಅಂತರವೆ ಪ್ರಗತಿಯ ಮಾನವೇನಲ್ಲ,
ಹೊರಚಲನೆ ಪೂರ್ಣ ಉನ್ನತಿಯ ಮಾಪಕವಲ್ಲ,
ಒಂದೇ ಸಮನೆ ದುಂಡುಸುತ್ತಿ ಬಾಚಿದ ಕೈಗೆ
ಯಾವ ಅಂಕೆಯೂ ಸಿಗದ ಭ್ರಮಣದಲಿ ಹುರುಳಿಲ್ಲ

ಗಾಳಿಯಲ್ಲೇರಿ, ನೀರಲ್ಲೀಜಿ, ತಿದಿಯುಗಿದು
ಅರ್ಥಪ್ರಾಪ್ತಿಗೆ ಕುದಿವ ಮಿಡುಕಾಟ ಗೆಲುವೇನು?
ಹಿಂದನ್ನು ಸುಟ್ಟು ಮುಂದನ್ನು ಅಳಿಸುವ ಸ್ವಂತ-
ಸುಖದರಸು ಚತುರಂಗ ಬಲಕ್ಕೆ ಪತಿಯೇನು?
ತನ್ನಲ್ಲೆ ಮುಗಿವ ಚಲನೆಗೆ ಏನು ಬೆಲೆಯಿದೆ?
ಮುಗಿಲು ಮಳೆಯಾಗದೇ ನೆಲಕ್ಕೆ ಶುಭವೆಲ್ಲಿದೆ?

ಝಗಝಗಿಸಿ ಹೊಳೆದು ಥಟ್ಟನೆ ಸೆಳೆದು ತೆಕ್ಕೆಯಲಿ
ಬಿಗಿದಪ್ಪಿ ಸಂಭ್ರಾಂತಗೊಳಿಸಿ ದಿಕ್ಕೆಡಿಸೀತು
ಯಂತ್ರಮೋಹಿನಿಯ ಕುತಂತ್ರ, ನಿಜಮೂಲವನೆ
ಮರೆಸೀತು, ಉರಿಸೀತು ಅಂತಶ್ಚಲನೆಗಳನ್ನೆ
ಉಳಿಸೀತು ಉಪ್ಪರಿಗೆ ಸುಖದ ಗೀಳೊಂದನ್ನೆ,
ಬರಿ ಗೀಳು ಬಾಳ ಬೆಳೆಸೀತೆಂತು ಹೇಳು ?
ತನ್ನನ್ನೆ ಮಾರಿಕೊಳ್ಳುವ ಮೋಹಕ್ಕೆಳಸುವ
ಎಲ್ಲ ಏಳಿಗೆ ಬರೀ ಕೂಳಿಗೆ ನಡೆದ ಜೂಟಾಟ
ಕಟ್ಟದೇ ಬೆಳೆಯದೇ ಬೆಟ್ಟದ ತುದಿಯ ಆಸಾಮಿ
ದೂರದಿಂದಷ್ಟೆ ಕಂಡಂಥ ತೋಟದ ನೋಟ.

ನಿನ್ನ ಪೌರುಷದ ದೋರ್ದಂಡಕ್ಕೆ ನಾರಿಯನ್ನು
ಬಿಗಿದು ಕಳಿಸಿದ್ದೇವೆ. ಲಕ್ಷ್ಮಣವ್ರತಕ್ಕೆ ನಿಂತು
ಅವನ ನಿಜಗಳ ಕಾದುಕೊಟ್ಟ ಅಚ್ಯುತರಕ್ಷೆ
ಊರ್ಮಿಳೆ. ಹಾಗೆಯೇ ಈ ನಿನ್ನ ಶರ್ಮಿಳೆ.
ಪರದೇಶದುರಿಬಾಣಲೆಗೆ ಬಿದ್ದ ಸಖನನ್ನು
ನೆನಪ ನೆರಳಾಗಿ ಸಂತೈಸಿದ್ದೇನು ಕಡಮೆಯೇ?
ವರ್ಷಗಳೆ ನಿನಗೆ ತಪಿಸಿದ್ದು ಸಾಮಾನ್ಯವೇ?
ಪತಿಯ ಒಳಗಿನ ಸತ್ವ ಪುಟಗೊಳಿಸಿ ಹೊರತರಲು
ಜೊತೆ ಬರುತ್ತಿದ್ದಾಳೆ ಸಪ್ತಪದಿ ತುಳಿದು
ಈಗ ಕಡಲಾಚೆಗೂ ನಿನ್ನ ಕೈಹಿಡಿದು.

ನಿನ್ನ ಜೀವಿತದ ಭವನಕ್ಕೆ ಹೆಬ್ಬಾಗಿಲು;
ಶುಭಗಳಿಗೆ ತೆರೆದು ಅಶುಭಕ್ಕೆ ಕದಮುಚ್ಚಿ
ಅಂತರಂಗವ ನಿತ್ಯ ರಕ್ಷಿಸುವ ಕಾವಲು.
ಉರಿಯುವ ಸಮಿಧೆಯಾಗಿ, ಉರಿಸುವ ಆಜ್ಯವಾಗಿ
ಬರುತ್ತಿದ್ದಾಳೆ ತನ್ನ ತವರನ್ನೆ ತೊರೆದು
ನಿನ್ನೆಲ್ಲ ಕೃತಿಯ ಮಾರ್ಗಣ ಚಿಮ್ಮಿ ಬರಲು
ಬಿಲ್ಲದಂಡೆಗೆ ಸೆಳೆದು ಬಿಗಿದ ಹೆದೆಯಂತೆ,
ತಾನೆ ಬಿಡಿಯಾಗಿಯೂ ಅರ್ಧನಾರೀಶ್ವರನ
ಮೈಯಲ್ಲಿ ಕೂಡಿ ಇಡಿಯಾದ ಪ್ರಭೆಯಂತೆ.

ನಿಮ್ಮ ಪ್ರಭೆ ಕಡೆದ ಹೊಸ ಕಿರಣ ಸಲ್ಲಲಿ ತಾನು
ಸಲ್ಲಬೇಕಾವ ಕಡೆಗೆ, ನಿಜಾರ್ಥದೆಡೆಗೆ.
ತನ್ನದೇ ನೆಲ ನೀರು ಗಾಳಿಗೊಬ್ಬರ ಬೆಳಕು ಬೇಕು ಬಿತ್ತಕ್ಕೆ, ತುಡಿವ ಚಿತ್ತಕ್ಕೆ.
ಹುಸಿಮಣ್ಣಿನಲ್ಲಿ ಅಂತಸ್ಥ ಸೂಕ್ಷ್ಮಗಳೆಷ್ಟೋ ಅರಳದಿರಬಹುದು
ತನ್ನ ಸತ್ವದ ಪರಿಧಿ ತುದಿತನಕ ಬಿತ್ತ ಕೈ ಚಾಚದಿರಬಹುದು.
ಪದ್ಯಮಧ್ಯದ ಮಾತು ಪರಿಶಿಷ್ಟವೆನಿಸಿ ಲಕ್ಷ್ಯಗೆಡದಿರಲಿ
ಬಿತ್ತ ಬಿತ್ತದ ಜಿಗಿತ ಪೂರ್ಣ ಪ್ರಯಾಣಕ್ಕೆ ಅಗತ್ಯ ನೆನಪಿರಲಿ.
ಖಂಡಖಂಡಾಂತರವನಲೆವ ಸಹಸ್ರಮೈಲಿಯ ಹೊರಚಲನೆಯಲ್ಲ
ಷಟ್ಚಕ್ರ ಭೇದಿಸಿ ಸಹಸ್ರಾರಕ್ಕೇರುವ ಮೂರು ಗೇಣು ಮುಖ್ಯ
ವಿಶ್ವ ಸುತ್ತಿದ ಜಾಣ ಷಣ್ಣುಖನಿಗಿಂತಲೂ ವಿಶ್ವಾತ್ಮಗ್ರಾಹಿ ಗಣಪತಿಯೆ ಮುಖ್ಯ,

ಏನೋ ದುಸ್ವಪ್ನ ಮೊನ್ನೆ: ಅಜಗರದಂಥ ನಗರ, ಅಂಕುಡೊಂಕಾಗಿ
ಕೆಡೆದುಬಿದ್ದಿದೆ ಆಯತಪ್ಪಿ ಕುಡಿದವರಂತೆ ನಟ್ಟಿರುಳಿನಲ್ಲಿ
ಯಾರೋ ಸಂಭ್ರಾಂತ ಯುವಕ, ನಮ್ಮಂತೆ ಚಹರೆ
ಭಾರಿಸೌಧದ ಮೇಲುನೆತ್ತಿಯಲ್ಲಿ
ಸುತ್ತುತ್ತಾನೆ ಅತ್ತ ಇತ್ತ ಮಿಡುಕಾಡುತ್ತ ಒಂದೇ ಸಮನೆ.
ಚೀರುತ್ತಾನೆ. ಏನೋ ಹತ್ತಿಕ್ಕಲಾಗದ ನೋವು, ಕರುಳ ಬಾಧೆ.
ನಿಗಿನಿಗಿ ಕೆಂಡ ಕಣ್ಣು, ಆಕಾಶಕ್ಕೆತ್ತಿದ ತೋಳು, ಸಿಟ್ಟು ದುಃಖ
ಸೂಟು ತೊಟ್ಟಿದ್ದರೂ ಬೆತ್ತಲೆ ಇದ್ದವನಂತೆ ಚಳಿಗೆ ನಡುಗುತ್ತಾನೆ;
ತಲೆತಲಾಂತರದ ಆಸ್ತಿ ಕಳೆದುಕೊಂಡವನಂತೆ ಮಾತಿನುರಿಕಾರಿ
ಈಚೆದಡದಲ್ಲಿ ನಿಂತ ನಮ್ಮಿಬ್ಬರನ್ನೂ ಕೂಗಿ ಶಪಿಸುತ್ತಾನೆ.

ತನ್ನ ಹಿನ್ನೆಲೆಯಲ್ಲಿ ಹಬ್ಬುತ್ತಿರುವ ಮೂಲಶ್ರುತಿಗೆ ವ್ಯಕ್ತಿ
ಪಡಿಮಿಡಿಯಬೇಕು; ರಾಗದ ಸಾಧ್ಯಚಲನೆಗಳ
ಏಕಾಗ್ರಚಿತ್ತದ ಕಲ್ಪಕತೆಯಲ್ಲಿ ಸಾಗಿ
ಶೋಧಿಸಿ ಬೆಳೆಸಬೇಕು. ಕಾಣದ ಕತ್ತಲಲ್ಲಿ
ಬೇರಿಳಿಸಿ ಮರ ಕೆಳಗೆ ಹುಗಿದ ಅಜ್ಞಾತಗಳ ಬಗೆಯುತ್ತ ಹೊಂದಂತೆ,
ದಕ್ಕಿದ ಸಾರವನ್ನೆಲ್ಲ ಮತ್ತೆ ಮೇಲಕ್ಕೆ ಕಳಿಸಿ
ಮಿಡಿ ಕಾಯಿ ಹಣ್ಣಾಗಿ ಬಿತ್ತಗಳ ಪಡೆದಂತೆ
ತನ್ನ ಮೈಯನ್ನೆ ವೀಣೆ ಮಾಡಿ ತಂತಿಯ ಮಿಂಟಿ ನಾದವೆಬ್ಬಿಸಬೇಕು.
ಮೀಟು ಚಿಮ್ಮಿದ ನಾದ ಸುತ್ತಲೂ ತನ್ನ ಮಾಧುರ್ಯ ಹಬ್ಬಿಸಬೇಕು.

ಟಿಸಿಲು ದಾರಿಗಳ ತೆರೆಯುತ್ತ ಸಾಗುವ ಮಹಾಪಥವೇ ಪರಂಪರೆ
ಮಿಡಿಯ ಹಿಂದಿರುವ ಮರ; ಅಡಿಯಲ್ಲಿ ಮಂತ್ರೋಕ್ತ ನಿಂತ ಶ್ರೀಚಕ್ರ,
ಶಂಕರನ ಮಂತ್ರಸಂಕಲ್ಪಕ್ಕೆ ಒಲಿದಿಳಿದ ಯಂತ್ರರೂಪದ ದಿವ್ಯಶಕ್ತಿ.
ಪೀಠವ ಮೇಲೆ ಕಡೆದಿಟ್ಟ ಮೂರ್ತಿ ಬರೀ ಪೂಜಾಲಂಕಾರಕ್ಕೆ;
ಲೋಹದ್ದೊ ಶಿಲೆಯದೋ ಕಂತ್ರಿಮಾವಿನ ಮರದ ಕಾಂಡದಲಿ ಕಡೆದದ್ದೊ
ಎಷ್ಟೆ ಚೆಲುವಿರಲಿ, ಎಂಥ ಕಲೆಯೇ ಇರಲಿ
ಸಂತ ಋಷಿ ಚಕ್ರವರ್ತಿಗಳೆ ತಲೆಬಾಗಲಿ
ಮೂಲಬಲ ತೇಜಸ್ಸು ಅಡಿಗಿರುವ ಶಕ್ತಿ ಸ್ಪೂರ್ತಿಬಂಧ :
ವಿದ್ಯುತ್ತು ಹರಿದು ಗಾಜಿನ ಖಾಲಿ ಬುರುಡೆಯೂ
ಮನೆತುಂಬ ಬೆಳಕ ತುಳುಕುವ ಪ್ರಭಾಬಿಂಬ.
*****